ಅಂಕಣಗಳು

Subscribe


 

ವಿರಹೋತ್ಕಂಠಿತೆಯ ಉರಿಯಲ್ಲಿ ಭರತನಾಟ್ಯ !!

Posted On: Saturday, October 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

.. ಭರತನಾಟ್ಯ ಕಲಾವಿದರಿಗೆ ವಿರಹದುರಿ ಹೆಚ್ಚಾಗಿದೆಯೆನಿಸುತ್ತದೆ.. ಈ ಮಾತುಗಳನ್ನು ಕೇಳಿದಾಕ್ಷಣ ಬೆಚ್ಚಿಬಿದ್ದಿದ್ದೆ. ಸಾವರಿಸಿಕೊಂಡರೆ ನಿಜವೆನಿಸಿತು. ಬೇಕಾದರೆ ಗಮನಿಸಿ ನೋಡಿ.ಇಂದಿನ ವರ್ಣದ ನಾಯಿಕೆ ವಿರಹೋತ್ಕಂಠಿತೆ ಎಂಬ ನಿರೂಪಣೆಯ ಜಾಳನ್ನು ಕೇಳಿ, ಅದರ ಜಾಡನ್ನು ಹಿಡಿಯುವ ಹೊತ್ತಿಗೆ ಜಾಡ್ಯ ಹತ್ತಿ ತಲೆ ಚಿಟ್ಟು ಹಿಡಿಯುತ್ತಿರುವುದಂತೂ ಹೌದು. ಇಂದಿನ ಬಹುಪಾಲು ಭರತನಾಟ್ಯ ಕಾರ್ಯಕ್ರಮಗಳಲ್ಲಿ, ರಂಗಪ್ರವೇಶಗಳಲ್ಲಿ, ಪರೀಕ್ಷೆಗಳಲ್ಲಿ ವಿರಹದ ಪ್ರದರ್ಶನ ಯಾವ ಮಟ್ಟಿಗೆ ಮುಟ್ಟಿದೆಯೆಂದರೆ ಬೇರೆ ಯಾವ ವಸ್ತುಗಳನ್ನು ಆರಿಸಿದರೂ ಅದು ಅಪಚಾರ ಎಂಬಲ್ಲಿಯವರೆಗೆ. ಅಷ್ಟೇ ಏಕೆ, ಆಗ ತಾನೇ ಪ್ರಾಯಪ್ರಬುದ್ಧರಾಗುತ್ತಿರುವ, ಕಿಶೋರ ವಯಸ್ಸಿಗೆ ಕಾಲಿಡುವ ಹುಡುಗಿಯರೂ ವಿರಹವನ್ನು ತರಹೇವಾರಿಯಾಗಿ ಎತ್ತಿ ಆಡಿಸುವಷ್ಟು ಪ್ರಸಿದ್ಧ, ಪ್ರಚಲಿತ. ಯಾವ ವರ್ಣ, ಪದಗಳ ಅಭಿನಯದಲ್ಲೂ..ವಿರಹ, ವಿರಹ, ವಿರಹ. ಒಟ್ಟಿನಲ್ಲಿ ಕಲಾರಸಿಕರಿಗೆ ವಿರಹದುರಿ ಮೈಮನಸ್ಸಾದಿಯಾಗಿ ನೂರು ತರಹದಲ್ಲಿ ಬೆನ್ನಟ್ಟಿ ಬೆದರಿಸಲಾರಂಬಿಸಿದೆ. ವಿರಹದುರಿ ಹೆಚ್ಚಾಗಿದ್ದಕ್ಕೋ ಏನೋ ಪ್ರೋಷಿತ ಪತಿಕೆ, ಅಭಿಸಾರಿಕೆ, ವಿಪ್ರಲಬ್ಧೆ, ಖಂಡಿತೆ, ಸ್ವಾಧೀನಪತಿಕೆಯರು ಸೋಲೊಪ್ಪಿಕೊಂಡು ಪುಸ್ತಕ-ಪರೀಕ್ಷೆಗಳಲ್ಲಷ್ಟೇ ಜೀವಂತವಾಗಿ, ಹೇಳಹೆಸರಿಲ್ಲದಂತೆ ನರ್ತನದಲ್ಲಿ ಅವಸಾನ ಕಾಣುತ್ತಿದ್ದಾರೆ. ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ಮಾತು ಇವರನ್ನು ಕಂಡೇ ಹೇಳಿದ್ದಾರೇನೋ ಎಂದನ್ನಿಸದಿರದು.

ಇದೇಕೆ ಹೀಗೆ? ಈ ಪರಿಯ ಸೊಬಗಾವ ಬೇರೆ ನಾಯಿಕೆಯಲಿ ನಾಕಾಣೆ ಎಂದೋ? ಸವಕಲು ಸಂಚಾರಿ ಭಾವಗಳನ್ನೇ ಮತ್ತೆ ಮತ್ತೆ ಮಾಡಿಕೊಂಡು ಹೋಗಲು ಸುಲಭ ಎಂದೋ? ಅಥವಾ ನಮ್ಮ ಕಲಾವಿದರಲ್ಲಿ ಕಲ್ಪನೆಯ ಅಂಶಕ್ಕೆ ಅವಕಾಶವಿಲ್ಲವೆಂದೋ? ಇಲ್ಲವೇ ಹೊಸ ವಸ್ತುಗಳನ್ನು, ಸಂಚಾರಿಗಳನ್ನು ನಿಭಾಯಿಸಲು ಭಯವೇಂದೋ? ಅಶಕ್ತಿಯೇ? ಅಥವಾ ಅದೊಂದೇ ಕಲಾವಿದರೆನಿಸಿಕೊಂಡವರ ಬಂಡವಾಳವೇ?

ಅದರಲ್ಲೂ ವಿರಹೋತ್ಕಂಠಿತಾ ನಾಯಿಕೆಯೆಂದಾದರೆ ಕುಳಿತಲ್ಲಿಂದಲ್ಲೇ ಕಲಾವಿದರ ಭಾವಗಳ ಕಣಿ ಹೇಳಬಹುದು, ರಸಗಳ ಕಣಿ(ಹೊಂಡ) ತೋಡಲೂಬಹುದು. ಕಾರಣ ಇಷ್ಟೇ. ನಾಯಿಕೆಯ ಬೇಸರ, ವಿರಕ್ತಿ, ಹೂವು-ಬಳೆ-ಆಭರಣ ಕಿತ್ತೆಸೆಯುವುದು, ಆಹಾರಾದಿಗಳನ್ನು ವರ್ಜ್ಯಗೊಳಿಸಿ ನಾಯಕನ ಬರುವಿಕೆಗೆ ಕಾಯುತ್ತಾ ಖಿನ್ನಳಾಗುವುದು ಮಾಮೂಲಿ ಪರಿಪಾಠ. ಬಹುಷಃ ಉತ್ತರ- ಹಳಸಲು ಆಹಾರಕ್ಕೂ ಬೇಡಿಕೆ ಎಂದಿದ್ದರೆ ಅದು ಇಂದಿನ ಭರತನಾಟ್ಯ ನೃತ್ಯಕ್ರಮದಲ್ಲಿ ಎಂದು ಘಂಟಾಘೋಷವಾಗಿ ಹೇಳಲಿಕ್ಕಿರಬಹುದು.

ಇವುಗಳಿಗೆ ಅಪವಾದವೆನ್ನಿಸುವ ಪ್ರತಿಭಾವಂತ ಕಲಾವಿದರು ಇಲ್ಲವೆಂದಲ್ಲ. ಆದರೆ ವಿರಹದುರಿಯ ಕಲಾವಿದರ ಮುಂದೆ ಅವರದ್ದು ಹರದಾರಿ ದೂರದ ಬದುಕು. ಹಾಗಾಗಿ ಚ್ಯೂಯಿಂಗ್‌ಗಮ್‌ನಂತೆ ಎಳೆದೂ ಎಳೆದೂ ರಸವನ್ನೇ ಹಿಂಡಿ ಹಾಕುವವರಿಗಿದು ಕಾಲ ಎಂದೆನಿಸುವುದರಲ್ಲಿ ಅತಿಶಯವಿಲ್ಲ. ವಿದ್ವಾನ್, ವಿದುಷಿಯೆನಿಸಿಕೊಂಡ ಬಹಳ ಜನರದ್ದೂ ಇದೇ ಜಾಯಮಾನ. ಒಂದು ವೇಳೆ ಪ್ರಶ್ನೆ ಎಸೆದರೆ ಸಾಹಿತ್ಯವೇ ಹಾಗೆ. ಸಂಪ್ರದಾಯವೇ ಹಾಗಾಗಿದೆ ಎಂಬ ಹಾರಿಕೆಯ ಜಾಣ ಉತ್ತರ.

ಸರಿ, ಸಾಹಿತ್ಯದಲ್ಲೇ ಲೋಪವೆಂದಾದರೆ ಎಂದಿನ ತಮಿಳು ಸಾಹಿತ್ಯವೇ ಆಗಬೇಕೇ? ಅದರಲ್ಲಿ ವಿರಹದ ವಿನಃ ಆಯ್ಕೆಯೇ ಇಲ್ಲವೇ? ಕನ್ನಡ ಸಾಹಿತ್ಯಸಂಪತ್ತು ಬರಿದೇ? ದಾಸರ ಪದಗಳಿಂದ ಮೊದಲ್ಗೊಂಡು ಎಷ್ಟು ಸಾಹಿತ್ಯ ನಮ್ಮಲ್ಲಿಲ್ಲ ಹೇಳಿ? ಹಾಗೆ ನೋಡಿದರೆ ಚಿಕ್ಕಭೂಪಾಲನಿಂದ ಮೊದಲ್ಗೊಂಡು ಈ ವರೆಗೆ ಬಂದಿರುವ ಕನ್ನಡದ ಜಾವಳಿಗಳಲ್ಲೇ ಈ ಬಗೆಯ ಚರ್ವಿತಚರ್ವಣವಿಲ್ಲದಂತ ಸಂಪದ್ಭರಿತ ಸಾಲುಗಳಿವೆ. ಅವುಗಳಲ್ಲಿ ವರ್ಣಕ್ಕೆ ಅನುಸರಣಾರ್ಹ ಮನೋಧರ್ಮ ಕಾಣದೇ ಕಲಾವಿದರಿಗೆ?

ಖಂಡಿತಾ ಕಂಡೀತು. ಆದರೇನು ಮಾಡೋಣ? ಜಡ್ಡು ಹಿಡಿದ ಮನಸ್ಸುಗಳ ಫಲ ನೂರಾರು ಕಾರಣಗಳನ್ನು ಕೊಡುತ್ತದೆ. ಕಂದಿಹೋದ ಪ್ರತಿಭೆ ಅಸಂಬದ್ಧವನ್ನೆ ಮಾಡುತ್ತದೆ. ತತ್ಫಲವಾಗಿ ಅನ್ವೇಷಣೆ ಅಸಾಧ್ಯವಾಗುತ್ತದೆ;ಅಸಾಧುವೆನಿಸಿಕೊಳ್ಳುತ್ತದೆ. ಮನಸ್ಸಿದ್ದಂತೆ ಮಾರ್ಗ! ಈಗಂತೂ ಶಾಸ್ತ್ರ, ಸಂಪ್ರದಾಯದ ಮೇಲಿರುವ ಗೂಬೆಯಿಂದಾಗಿ ಬೆಳಕಿದ್ದರೂ ಕತ್ತಲಲ್ಲೇ ಕಣ್ಣುಬಿಡುವ ನಿಶಾಚರ ಪ್ರವೃತ್ತಿ ನಮ್ಮದು. ಹಾಗಾಗಿ ವಿಸ್ತಾರವಿಲ್ಲದ ಮಬ್ಬು ಮಬ್ಬು ಬಾವಿಯೊಳಗಿನ ಜಗತ್ತೇ ಬ್ರಹ್ಮಾಂಡವೆಂದುಕೊಳ್ಳುತ್ತೇವೆ. ರಸಾಸ್ವಾದನೆಗೆ ಬಂದ ಪ್ರೇಕ್ಷಕಮಹಾಪ್ರಭುಗಳನ್ನು ಮೂರ್ಖರೆಂದು ಬಗೆಯುತ್ತೇವೆ. ನಮ್ಮೊಳಗಿನ ನ್ಯೂನತೆಗಳು ನಮ್ಮನ್ನೇ ನಿಂತು ಅಣಕಿಸುವುದನ್ನು ತಿಳಿಯದ ಮುಗ್ಧರು ನಾವು ??!! ದುರಂತ…!!

ಅಂತೆಯೇ ಭಕ್ತಿಯೂ ಕೂಡಾ.. ಭಕ್ತಿ, ವಿರಹವನ್ನು ಕೊಂಡಾಡಿದಷ್ಟು ನಮ್ಮಲ್ಲಿ ಇತರೆ ರಸ-ಭಾವಗಳನ್ನು ಕಣ್ಬಿಟ್ಟೂ ನೋಡಿದವರು ಭಾರೀ ಅಪರೂಪ. ನವರಸಗಳೇನಿದ್ದರೂ ಪೋಷಕವೆಂಬಂತ ಧೋರಣೆಯಿಂದಾಗಿ ನೃತ್ಯದಲ್ಲಿ ಅಲ್ಲೊಂದು ಇಲ್ಲೊಂದು ನವರಸ ಪ್ರತಿಪಾದನೆಯಾದಲ್ಲಿಗೆ ಕತವ್ಯದಿಂದ ಕೈತೊಳೆದುಕೊಂಡ ನಿರಾಳ ಭಾವ. ಅದರಲ್ಲೂ ಅತ್ತ ಭಕ್ತಿಯನ್ನೂ, ಇತ್ತ ಪ್ರೇಮ-ಶೃಂಗಾರವನ್ನೂ ಅಭಿವ್ಯಕ್ತಿಸಲು ಬಾರದವರಿಗೆ ಮಧುರ ಭಕ್ತಿ ಎಂಬೆಲ್ಲಾ ನಾಮವಿಶೇಷಣಗಳ ಸಹಾಯಬಲ ನಿಜಕ್ಕೂ ಒಂದು ವರವೇ ಸರಿ ! ಹಾಗೆಂದು ಭಕ್ತಿಯನ್ನೂ ರಸದ ಪ್ರಕಾರವೆಂದು ಒಪ್ಪಿಕೊಂಡವರೂ ದಶಕಗಳಿಂದ ಇದ್ದಾರೆ, ಅಂತೆಯೇ ಹೀಗಳೆದವರೂ ಇದ್ದಾರೆ. ಮಧುರಭಕ್ತಿಯನ್ನು ಸುಂದರವಾಗಿ ಪ್ರಕಟಪಡಿಸಿದವರೂ ನಮ್ಮಲ್ಲಿ ಅನೇಕ. ಅಂತೆಯೇ ತಿಪ್ಪೆಯ ತೊಪ್ಪೆಯನ್ನಾಗಿಸಿದವರೂ ಇದ್ದಾರೆ. ಅದು ನಮ್ಮ ಚರ್ಚೆಯ ವಿಷಯವಲ್ಲ. ಆದರೆ ಭಕ್ತಿ-ವಿರಹದ ಪರಾಕಾಷ್ಠೆಯಲ್ಲಿ ಉಳಿದ ರಸ-ಭಾವಗಳು, ಪ್ರೇಕ್ಷಕನ ರಸದೃಷ್ಟಿ, ಪ್ರತಿಭಾವಂತರ ನೋಟ ಕಾಷ್ಠಕ್ಕೇರದಿದ್ದರೆ ಅದೇ ಒಂದು ಪುಣ್ಯ !!

ಬಹುಷಃ ನಮ್ಮ ನಾಡಿನ ನೃತ್ಯಪರಂಪರೆಯಲ್ಲಿ ಹಿಂದೆಂದೂ ಇಲ್ಲದ ಬರಗಾಲ ಇತ್ತೀಚಿನ ದಶಕಗಳಲ್ಲೇ ವ್ಯಾಪಕವಾಗುತ್ತಿದೆ. ಆದರೆ ಅದನ್ನೇ ಸಂಪತ್ತು, ಪ್ರತಿಭೆ ಎಂದು ಬಗೆಯುವ ಮುಗ್ಧ ಮಹಾತ್ಮರೂ, ನಿರ್ಲಜ್ಜ ನರ್ತಕರೂ ನಮ್ಮಲ್ಲಿ ಸಾಕಷ್ಟಿದ್ದಾರೆ. ವಿದ್ವತ್ತು ಎಂಬ ಪದಕ್ಕೇ ಅಪಚಾರವೆಸಗುತ್ತಿದ್ದಾರೆ. ಪರಿಣಾಮ ನಮ್ಮೊಳಗಿನ ಸತ್ತ್ವವನ್ನು ಅರ್ಥ ಮಾಡಿಕೊಳ್ಳದೆ ಉಳಿದವರಿಗೆ ಊಳಿಗದವರಾಗುವ ಸ್ಥಿತಿ. ನಾಚಿಕೆಗೇಡು..

ಕಳೆದ ಸೆಪ್ಟೆಂಬರ್‌ನಲ್ಲಿ ೯ ದಿನಗಳ ಆಸುಪಾಸಿನೊಳಗೆ ಕಲಾಪ್ರಪಂಚ ಈರ್ವರು ಹಿರಿಯ ವಿದ್ವನ್ಮಣಿಗಳನ್ನು ಕಳೆದುಕೊಂಡಿದೆ. ನೂಪುರ ಭ್ರಮರಿಯಿಂದ ಈ ಸಂಚಿಕೆಯನ್ನು ಅವರೀರ್ವರಿಗೂ ನುಡಿ-ನಮನ-ಅಂಜಲಿಯಾಗಿ ಅರ್ಪಿಸಲಾಗುತ್ತಿದೆ.

ಪ್ರೀತಿಯಿಂದ,

ಸಂಪಾದಕರು

Leave a Reply

*

code