ಅಂಕಣಗಳು

Subscribe


 

ಅಷ್ಟನಾಯಕ ಚಿತ್ತವೃತ್ತಿ- ಪಾಂಥ ನಾಯಕ

Posted On: Friday, February 1st, 2013
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ಆರ್. ಗಣೇಶ್, ಬೆಂಗಳೂರು

ಅಷ್ಟನಾಯಿಕೆಯರ ಅವಸ್ಥೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅಷ್ಟನಾಯಕಾವಸ್ಥೆಯನ್ನು ರೂಪಿಸಬಹುದಾಗಿದ್ದರೂ ಯಾವ ಲಾಕ್ಷಣಿಕರೂ ಅಂತಹ ಅಭೂತಪೂರ್ವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಶತಾವಧಾನಿ ಡಾ. ಆರ್. ಗಣೇಶರು ನಾಯಕರ ಸಾಲಿಗೆ ಹೊಸ ಸಂವಿಧಾನವನ್ನೇ ನೀಡಿದ್ದು ; ನಾಯಕಭಾವಕ್ಕೆ ಲಕ್ಷಣಗಳನ್ನೂ, ಲಕ್ಷ್ಯಗೀತಗಳನ್ನೂ ರಾಗ-ತಾಳಬದ್ಧವಾಗಿ ರಚಿಸಿದ್ದಾರೆ. ಈಮೂಲಕ ಇದುವರೆವಿಗೂ ಲಕ್ಷಣಬದ್ಧವಾಗದ ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಕ್ರೋಢೀಕರಿಸಲಾಗಿದೆ. ರಾಗ-ತಾಳಗಳನ್ನೂ ಸ್ವತಃ ಶತಾವಧಾನಿ ಗಣೇಶರೇ ಸಂಯೋಜಿಸಿದ್ದು ; ನಾಯಕರ ಕುರಿತಾಗಿ ಕಾಡುತ್ತಿರುವ ಸಾಹಿತ್ಯದ ಕೊರತೆಯನ್ನು ತುಂಬಿಕೊಡುವಲ್ಲಿ ಇದು ನಿಜಕ್ಕೂ ಅಸಾಧಾರಣ ಪ್ರಯತ್ನವೇ ಸರಿ.

ಇದಕ್ಕೆ ಪೂರ್ವಭಾವಿಯಾಗಿ ಶತಾವಧಾನಿಗಳಿಂದ ರಚಿತ ನಾಯಕಭಾವದ ಗುಣಲಕ್ಷಣ ಸಾಹಿತ್ಯ ಅನುಕೂಲತೆಗಳ ಬಗೆಗಿನ ವಿಚಾರಸರಣಿಗಳನ್ನು ಕಳೆದೆರಡು ಸಂಚಿಕೆಗಳಲ್ಲಿ ನೀಡಿದ್ದೇವೆ. ಇದು ಸಾಂಸ್ಕೃತಿಕ ಪತ್ರಿಕಾಲೋಕದಲ್ಲಿ ಹಿಂದೆಂದೂ ಇಲ್ಲದಂತೆ ನೂಪುರಭ್ರಮರಿಯ ಪಾಲಿಗೆ ವಿಶೇಷವಾಗಿ ಒದಗಿದ್ದು ನಿಜಕ್ಕೂ ಒಂದು ಹೆಮ್ಮೆ ಮತ್ತು ಅಪೂರ್ವ ಅವಕಾಶ ನಮ್ಮ ಪ್ರಯತ್ನ ನಿಮ್ಮಿಂದ ಸದ್ವಿನಿಯೋಗವಾಗಲಿ…

ಪಾಂಥ 

ಪಾಂಥ  ಪಥಿಕನಾದ ನಾಯಕನಿವನು. ಈತನು ವ್ಯಾಪಾರಿಯೋ, ರಾಜದೂತನೋ.., ಹೀಗೆ ವೈಯಕ್ತಿಕ ಕಾರಣ ಅಥವಾ ಉದ್ಯೋಗನಿಮಿತ್ತ ಪ್ರವಾಸದಲ್ಲಿರುವ ಈ ನಾಯಕನು ಪ್ರೋಷಿತಭರ್ತೃಕೆಯ(ನಾಯಕನ ಪ್ರವಾಸದಿಂದ ಮ್ಲಾನವದನೆಯಾಗಿ ಅವನನ್ನೇ ನಿರೀಕ್ಷಿಸುತ್ತಿರುವವಳು) ಪ್ರಿಯ. ಊರೂರು ತಿರುಗುತ್ತಿರುವ ಈತನಿಗೆ ಕಾಂತೆಯ ಕುರಿತ ಚಿಂತೆ, ನೆನಪು ಕಾಡುತ್ತಿದೆ. ಆಕೆಯನ್ನು ಎಂದು ಕಾಣುವೆನೋ ಎಂದಾಗಿ ದಿನಗಣನೆ, ಆಕೆಯನ್ನು ಬಿಟ್ಟಿರಬೇಕಾದ ವೇದನೆ, ಆಲಸ್ಯ, ನಿದ್ರಾಹೀನತೆ, ಏನೂ ತೋಚದಂತಾಗಿರುವುದು, ತನ್ನ ಕೆಲಸಗಳನ್ನು ಬೇಕೂ ಬೇಡದಂತೆ ಮಾಡುವುದು, ಆಕೆಯನ್ನು ಮನೆಯಲ್ಲಿ ಒಂಟಿಯಾಗಿಸಿ ಬಂದ ದಿನದ ಮೆಲುಕು, ಚಡಪಡಿಕೆ, ಆತನ ಕಾರ್ಯಕ್ಕೆ ಒದಗುವ ಅಡ್ಡಿ, ಮಿತಿಗಳು ಮತ್ತು ಆ ಹಿನ್ನೆಲೆಯಲ್ಲಿ ತನ್ನ ಉದ್ಯೋಗ ಮತ್ತು ವಿಧಿಯಾಟದ ಮೇಲೆ ಪರಿತಾಪ ಈತನ ಅವಸ್ಥೆಗಳು. ಈ ವಸ್ತುವನ್ನು ಪ್ರಸ್ತುತ ಕಾಲಮಾನಕ್ಕೂ ಹೊಂದಿಸಿಕೊಂಡು ಭಾವಯಾನ ಮಾಡಿಸಬಹುದು.

ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಪ್ರವಾಸದ ಸಂದರ್ಭದಲ್ಲಿ ಬರುವ ಒಳಿತು-ಕೆಡುಕು, ಎಲ್ಲ ಋತು, ಬಣ್ಣದ ಸನ್ನಿವೇಶಗಳು ಉದ್ದೀಪನ ವಿಭಾವ. ಅಭಿಲಾಷೆ, ಚಿಂತನ, ಸ್ಮೃತಿ, ಗುಣಕಥನ, ಉದ್ವೇಗ, ಪ್ರಲಾಪ, ಉನ್ಮಾದ, ಜ್ವರ, ಜಡತೆ ಈತನಲ್ಲಿ ಕಂಡುಬರುವ ವ್ಯಭಿಚಾರಿಭಾವಗಳು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.

ರಾಗ : ಬಾಗೇಶ್ರೀ, ತಾಳ : ಆದಿ

ಕಾಂತೆಯ ಸಂಗದೆ ದೂರಂ

ಶ್ರಾಂತಂ ಕಾರ್ಯಾಂತರ ಪ್ರವಾಸಪ್ರಚುರಂ

ಚಿಂತಾಚಕಿತವಿಚಾರಂ

ಕಾಂತನಿವಂ ಪಾಂಥನೆಂಬ ನಾಯಕಪರಂ

ಏನೀ ಯಾನ-ವಿಯೋಗವಿಧಾನ

ಮಾನಸವೇದನ ಮಾನ

ಮರೆಯುವೆನೆಂತೀ ಪಯಣದಾದಿಯಲಿ

ಗುರುಜನಭೀತೆ, ವಿನೀತೆ

ಬಿರಿದ ಕಂಗಳಿಂ ವಿದಾಯಪಾಥೇ-

ಯರುಚಿಯ ರಚಿಸಿದ ಪರಿಯ

ಎಂತಿರುವಳೊ ಮೇಣೆಂತು ನವೆವಳೋ ?

ಚಿಂತಾಚಕಿತೆ  ಅಶಾಂತೆ

ಕಂತುಕಲಂಬಗಳಿಂತು ಪೀಡಿಸಿರೆ

ಸಂತರಣದ ವಿಧಿಯೆಂತೋ ?

ಬಾನಲಿ ಮುಗಿಲನು ಕಾಂಬ ಮುನ್ನವೇ

ಮಾನಿನಿಯನು ಮನೆಯಲಿ ಕಾಂಬೆನೇ ?

ಈ ನರಜನ್ಮದ ಪರಾಧೀನತೆಗೆ

ಏನಪ್ಪುದೊ ಕೊನೆ ? ಚಿರಚಿಂತನೆ !

Leave a Reply

*

code