ಅಂಕಣಗಳು

Subscribe


 

ಪ್ರಯೋಗ ಪ್ರಾವಣ್ಯದ ರಂಗರೂಪಕ-ಸಮುದ್ರಮಥನ

Posted On: Thursday, October 12th, 2017
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ದಿನದಿನವೂ ಒಂದಲ್ಲ್ಲೊಂದು ಕಡೆ ರಂಗಪ್ರದರ್ಶನಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ನಾಟಕ-ಯಕ್ಷಗಾನ-ಭರತನಾಟ್ಯವೇ ಮುಂತಾದ ರಂಗಮಾಧ್ಯಮಗಳ ಮೂಲಕ ಅಸಂಖ್ಯ ಕತೆಗಳು ತೋರಿಕೊಳ್ಳುತ್ತಾವೆ. ಕಥಾವೈವಿಧ್ಯದಲ್ಲಿ ಬಹುಶಃ ಯಕ್ಷಗಾನ ಮುಂಚೂಣಿಯಲ್ಲಿದೆ. ಒಂದು ಎಳೆ ಸಿಕ್ಕರೆ ಸಾಕು, ಅದನ್ನು ಹಿಗ್ಗಿಸಿ ಹಿಗ್ಗಿಸಿ, ಯಕ್ಷಗಾನಕ್ಕೆ ಒಗ್ಗಿಸಿ ಪರಿಣಾಮರಮಣೀಯವಾಗಿ ರಂಗಕ್ಕೆ ಇಳಿಸುತ್ತಾರೆ ಅವರು. ಅದು ಪುರಾತನವಿರಲಿ ಅಧುನಾತನವೇ ಇರಲಿ, ನಮಗೆ ಭಾರತೀಯರಿಗೆ ಕತೆಗಳ ಕೊರತೆ ಇಲ್ಲವೇ ಇಲ್ಲ. ಒಮ್ಮೆ ಪುರಾಣಪ್ರಪಂಚಕ್ಕೆ ಇಣುಕಿದರೂ ಸಾಕು, ದಂಗಾಗುವಷ್ಟು ಕಂಗಾಲಾಗುವಷ್ಟು ಕಥಾಸರಿತ್ಸಾಗರ ತೆರೆದುಕೊಳ್ಳುತ್ತದೆ. ಪುರಾಣಾರಣ್ಯದ ಅಂಗುಲವನ್ನೂ ಬಿಡದೇ ಯಕ್ಷಗಾನ ಕವಿಗಳು ಬಹ್ವಂಶ ಕಥಾಫಲಗಳನ್ನು ಆಯ್ದು ಕೃತಿರಚಿಸಿ ಕೊಟ್ಟಿದ್ದಾರೆ. ಚತುರಭಿನಯಗಳ ಆನುಕೂಲ್ಯವೂ ಯಕ್ಷಗಾನಕ್ಕೆ ಇರುವುದರಿಂದ ಕಥಾಸ್ವಾರಸ್ಯವನ್ನು ಗರಿಷ್ಠಮಿತಿಯಲ್ಲಿ ಕಾಣಿಸುವ ಸಾಧ್ಯತೆ ಅಲ್ಲಿ ಹೆಚ್ಚು. ಆದ್ದರಿಂದಲೇ ಸಾವಿರಾರು ಪ್ರಸಂಗಗಳು ರಚಿತವಾಗಿದ್ದಾವೆ, ಪ್ರಕಟವಾಗದಿರುವವು ಎಷ್ಟೋ !

ಯಕ್ಷಗಾನದ ರಂಗಾಬಿವ್ಯಕ್ತಿಯ ಹರಹು ನಾಟಕಕ್ಕಾಗಲೀ ನೃತ್ಯಕ್ಷೇತ್ರಕ್ಕಾಗಲೀ ಇಲ್ಲ ಎಂಬುದು ದೌರ್ಬಲ್ಯವಲ್ಲ-ಅವುಗಳ ಮಿತಿ. ಪ್ರತಿಯೊಂದು ಕಲೆಯೂ ತನ ಆನುಪೂರ್ವಿಯನ್ನು ಉಳಿಸಿ ಮುಂದುವರೆಸಿಕೊಳ್ಳಲು ಬಯಸುವುದು ಸಹಜವೇ ತಾನೇ? ಅದರಿಂದಾಗಿ ಎಲ್ಲ ತರಹದ ಕತೆಗಳು ಅಲ್ಲಿ ಸಲ್ಲುವುದಿಲ್ಲ. ತನ್ನಲ್ಲಿರುವ ಸತ್ತ್ವವನ್ನು ಅನುಲಕ್ಷಿಸಿ, ಅದರ ಪರಿಧಿಯೊಳಗೆ ಏನೆಲ್ಲಾ ಮಾಡಬಹುದೋ, ಅಂತಹ ವಸ್ತು ವಿಷಯಗಳಷ್ಟೇ ರಂಗಕ್ಕೆ ತರುವುದು ಆಯಾ ಪ್ರಬೇಧದ ಅನಿವಾರ್ಯತೆ ಆಗುತ್ತದೆ. ಪರಿಣಾಮವಾಗಿ ನಾವು ಈಗಲೂ ಗಮನಿಸುವಂತೆ, ಬಹುತೇಕ ಐಟಮ್ಮುಗಳು ಸಾಧಾರಣೀಕರಣಕ್ಕೆ ಒಳಗಾಗಿ, ಆಯ್ದ ಹಲವೊಂದಿಷ್ಟು ಕಥಾರೇಖೆಗಳೇ ಮುಹುರ್ಮುಹುರಪಿ ಚಲಾವಣೆಯಲ್ಲಿ ಇರುತ್ತವೆ. ವಿಸ್ಮಯಲೋಕವನ್ನು, ಭಾವಲೋಕವನ್ನು ಅವುಚಿ ಆಧರಿಸಿ ನಿಂತ ಪೌರಾಣಿಕ ಕಥಾಜಗತ್ತನ್ನು ನಾಟಕರಂಗವು ಹೆಚ್ಚಾಗಿ ಇತ್ತೀಚಿನ ದಶಕಗಳಲ್ಲಿ ನೆಚ್ಚಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ಹಲವಾರು, ಅದಿಲ್ಲಿ ಚರ್ಚನೀಯವೂ ಅಲ್ಲ.

ಯಾವುದೇ ಭಾವೇತರ ವಲಯಕ್ಕೆ ಜಿಗಿಯದೇ, ಸಮೃಧರಸನಿರ್ಭರವಾದ ಪುರಾಣಕಥಾಶರೀರದಲ್ಲೇ ಸಾರ್ವಕಾಲಿಕವಾದ ಜೀವನಸತ್ಯವನ್ನು ನೋಡುವ ಹಾಗೂ ಕಲೆಯ ಮೂಲಕ ಅದನ್ನು ಕಾಣಿಸುವ ಕೌಶಲ ಯಾವ ಕಲಾಪ್ರಕಾರಗಳಿಗೆ ಇದೆಯೋ, ಅಂತಹವುಗಳು ಇವತ್ತಿಗೂ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾವೆ. ಹೆಚ್ಚಿನೆಲ್ಲಾ ರಾಮಾಯಣ-ಭಾರತ-ಭಾಗವತ-ಪುರಾಣದ ಕತೆಗಳು ಸಂಕೇತಗಳ ಮೂಲಕ ಭಾವಶೋಧಕ್ಕೆ ತೊಡಗುವುದರಿಂದ ಭಾವ ಎಂಬುದು ಚಿರಂತನವಾದ್ದರಿಂದ, ರಂಗವು ಭಾವಾಶ್ರಿತವಾದ್ದರಿಂದ, ರಂಗಕಲೆಯು ಯಾವತ್ತೂ ಔಟ್‌ಡೇಟ್ ಆಗುವುದೇ ಇಲ್ಲ. ಪ್ರಸ್ತುತಿಪಡಿಸುವ ಚಿಂತನೆ ಹಾಗೂ ಜಾಣ್ಮೆ ಇಲ್ಲಿ ಪರೀಕ್ಷ್ಯ -ಅಷ್ಟೇ. ಪ್ರಯತ್ನವಂತೂ ಜಾರಿಯಲ್ಲಿರಬೇಕು.

ಯಕ್ಷಗಾನವಿರಲಿ, ಭರತನಾಟ್ಯವಿರಲಿ, ನಾಟಕವಿರಲಿ, ಇನ್ನಾವುದೇ ರಂಗಪ್ರಕಾರವಿರಲಿ, ಕತೆಯೊಂದನ್ನು ರಂಗಕ್ಕಿಳಿಸಬೇಕಿದ್ದರೆ ಬೇಕಾಗುವುದು ಪಾಠ್ಯ ಅಥವಾ ಸಾಹಿತ್ಯ. ನನಗೆ ಪರಿಚಯವಿರುವ ಪ್ರಯೋಗಶೀ‌ಅರಾದ ಹಲವು ನೃತ್ಯಕ್ಷೇತ್ರೀಯರ ಹಳಹಳಿಕೆ-ಸಾಹಿತ್ಯದ ಕುರಿತೇ. ಆಕರವಿದೆ, ಕತೆ ಇದೆ, ಐಡಿಯಾ ಇದೆ, ಆದರೆ ಅದಕ್ಕೆ ಸಿದ್ಧಸಾಹಿತ್ಯವಿಲ್ಲ ಎಂಬ ಕೊರಗು. ವಿಶೇಷತಃ ನೃತ್ಯಲೋಕದಲ್ಲಿ ಪುರಾಣದ ಕಥಾವಿಸ್ಮಯಾವರಣ ಅಸಷ್ಟವಾಗಿಯೇ ಉಳಿದುಬಿಟ್ಟಿದೆ. ಅಂಗುಲೀಗಣ್ಯರಾದ ಕೆಲವೇ ನರ್ತನೋತ್ಸಾಹಿಗಳು ತಮ್ಮ ಸ್ವಂತ ಸತ್ತ್ವವನ್ನು ಪಣಕ್ಕಿಟ್ಟು, ಆಯಾ ಕಥಾಮೂಲದ ಶ್ಲೋಕವನ್ನೋ, ಲಬ್ಧವಾಗುವ ಹಳೆಯ ತುಂಡುಪದ್ಯಗಳನ್ನೋ ಇಟ್ಟುಕೊಂಡು, ಪ್ರಯೋಗವನ್ನು ಮಾಡಿ ಬಸಿದ ಬೆವರಲ್ಲಿ ಧನ್ಯತೆ ಕಂಡುಕೊಳ್ಳುತ್ತಾರೆ.

ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ಅನಾಯಾಸವಾಗಿ ಈ ರೀತಿಯ ಭಿನ್ನ ವಿಭಿನ್ನ ಕಥಾಗುಚ್ಛವನ್ನೊಳಗೊಂಡ ರಂಗಪ್ರದರ್ಶನದ ಅವಕಾಶ ಕೈಸೆಳೆದ ಸಂದರ್ಭವನ್ನು ಹಾಗೂ ಮುಮ್ಮುಂದಿನ ಪ್ರದರ್ಶನ ರೂಪುಗೊಂಡ ಬಗೆಯನ್ನು ಹೇಳಲಿಕ್ಕೆ. ಅದು ೨೦೧೨. ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿಗಳು ಅದಾಗಲೇ ಅವರ ಪರಿಕಲ್ಪನೆಯಲ್ಲಿ ಮೈದಳೆದ ‘ರಾಮಕಥೆ’ಯನ್ನು ಆರಂಭಿಸಿಯಾಗಿತ್ತು. ಆ ರಾಮಕಥೆ ಒಂಥರಾ ಸುಗ್ರಾಸ ಭೋಜನದಂತೆ. ಕಲೆಯ ನೆಲೆಯಲ್ಲಿ ಹೇಳುವುದಾದರೆ ಯಾವೊಂದು ಭಾವದ್ರವ್ಯವೂ ಸೋರಿಹೋಗದಂತೆ ಜಾರಿಹೋಗದಂತೆ ಕಲೆಯಲ್ಲಿ ಹಿಡಿದಿಟ್ಟು ಪ್ರೇಕ್ಷಕರಿಗೆ ಉಣಬಡಿಸುವ ಸಮಾರಾಧನೆ. ಕಥಾಕಥನ (ಶ್ರೀಗಳಿಂದ) ಗಾನ, ಚಿತ್ರ, ರೂಪಕ- ಹೀಗೆ ಕೇಳಲು ನೋಡಲು ಆಸ್ವಾದಿಸಲು ಅವಕಾಶವನ್ನು ಕಲ್ಪಿಸಿಕೊಂಡ ಕಲಾವಿಹಾರ. ಅಷ್ಟನ್ನೂ ಒಂದು ಅನುಕ್ರಮದಲ್ಲಿ ಸಂಯೋಜಿಸಿ, ಶ್ರೋತಾರರಿಗೆ ಸಮಗ್ರವಾಗಿ ಕಲಾನುಭೂತಿಯನ್ನು ತಂದುಕೊಡುವ ನಮ್ರ ಪ್ರಯತ್ನ. ಒಂದೊಂದು ಕಥಾಕೇಂದ್ರವನ್ನು ಆಧಾರವಾಗಿಟ್ಟು ಮೂರು-ಐದು-ಏಳು ದಿನಗಳ ಕಾಲ ನಡೆಯುವ ರಾಮಕಥೆ. ಯಾವಾವ ದಿನ ಪ್ರವಚನಮಾಧ್ಯಮದಲ್ಲಿ ಯಾವ ಕತೆ ಬರುತ್ತದೋ, ಅದರ ಸಾರರೂಪವನ್ನು ದೃಶ್ಯವಾಗಿ ರೂಪಕದಲ್ಲಿ ಅರ್ಧಗಂಟೆಯ (ಗರಿಷ್ಠ) ಮಿತಿಯಲ್ಲಿ ರಂಗಕ್ಕಿಳಿಸಬೇಕು. ಹೀಗೆ ಕೇಳಿ, ನೋಡಿ, ಪ್ರೇಕ್ಷಕರ ಮನದಲ್ಲಿ ಕಥಾಸತ್ತ್ವ ಅಚ್ಚೊತ್ತಬೇಕು. ಇದು ಒಟ್ಟು ರಾಮಕಥೆಯ ಆಶಯ.

ನಾನು ಈ ಕಲಾಸತ್ರಕ್ಕೆ ಸೇರಿಕೊಂಡ ಮೇಲೆ, ಅಂದಂದಿನ ಪ್ರಯುಜ್ಯಮಾನಕಥಾಪಂಕ್ತಿಗಳನ್ನು ಅನುಲಕ್ಷಿಸಿ ರೂಪಕದ ರೂಪರೇಖೆ ಸಿದ್ಧಪಡಿಸಿ ಪ್ರಸ್ತುತಿಸುವ ವಿಭಾಗಕ್ಕೆ ಸೇರ್ಪಡೆಯಾದೆ. ಆಯಾದಿನದ ಕತೆ, ಅಂದೇ ಬೆಳಗ್ಗೆಯೋ, ಮಧ್ಯಾಹ್ನವೋ ಪಹಿನಲೈಸ್ ಆಗುತ್ತಿದ್ದುದೇ ಹೆಚ್ಚಿನ ವಾಡಿಕೆ ರಾಮಕಥೆಯಲ್ಲಿ. ಇರುವ ನಾಲ್ಕಾರು ಬಣ್ಣಗಾರಿಕೆಯ ಕಲಾವಿದ್ರ ಸಹಯೋಗದಲ್ಲಿ ಅಂದಿನ ರೂಪಕವನ್ನು ವಿನ್ಯಾಸಗೊಳಿಸಬೇಕಿತ್ತು. ಈ ರೂಪಕದ ರಂಗವೈಭವಕ್ಕಾಗಿ ಸೆಟ್ವರ್ಕ್‌ನ ಟೀಮೇ ಇತ್ತು. ಹಾಗೇ ಮುಖವರ್ಣಿಕೆ ವಸ್ತ್ರಾಭರಣದ ವಿಭಾಗವೂ ಇತ್ತು. ಅಂದರೆ ಈ ಎಲ್ಲಾ ವಿಭಾಗದವರ ಕೈಕುಸುರಿಯನ್ನೂ ಗಮನದಲ್ಲಿಟ್ಟು ರಂಗರೂಪಕವನ್ನು ವಿನ್ಯಾಸಗೊಳಿಸಲೇಬೇಕಿತ್ತು. ಇಷ್ಟಾಗಿ ಕಾಲಮಿತಿ ೨೫-೩೦ ನಿಮಿಷ. ಶ್ರೀಗಳು ಅದಾಗಲೇ ವಿವರವಿವರವಾಗಿ ಕಣ್ಣಿಗೆ ಕಟ್ಟುವಂತೆ ವಾಚಿಕದಲ್ಲಿ ಕತೆಯನ್ನು ಕಟ್ಟಿಕೊಟ್ಟಿರುತ್ತಾರೆ. ಹಾಗಾಗಿ, ಪಾತ್ರಗಳ ಬಾಯಿಯಲ್ಲಿ ಯಾವುದೇ ಭಾಷಣ ಹೊಡೆಸಿದರೂ, ಅದು ಪೇಲವ ಅಷ್ಟೇ ಅಲ್ಲ ಅನುಚಿತ. ಇನ್ನು ಕುಣಿತ/ನೃತ್ಯವನ್ನು ಜೋಡಿಸಿಕೊಳ್ಳೋಣವೆಂದರೆ ರಂಗದ ಒಟ್ಟು ಆಹಾರ್ಯ ಹಾಗೂ ರಂಗಸ್ಥಳದ ಗಾತ್ರ ಹೊಂದುವಂತಹದ್ದಲ್ಲ. ಜೊತೆಗೆ ಸೆಟ್ವರ್ಕ್‌ಗಳ ಇಕ್ಕಟ್ಟಿನ ಯಾತಾಯಾತ. ಈಗಾಗಿ ನೃತ್ಯವೂ ಗಿಟ್ಟುವುದಿಲ್ಲ. ಇನ್ನುಳಿದುದು ಅಭಿನಯ ಒಂದೇ. ಇದನ್ನೆಲ್ಲಾ ಅಳೆದೂ ಸುರಿದೂ ಲೆಕ್ಕ ಹಾಕಿ, ಅಭಿನಯ ಒಂದನ್ನೇ ಆಯತನವನ್ನಾಗಿ ಮಾಡಿ ರಾಮಕಥಾರೂಪಕವನ್ನು ಫ್ರೇಮ್ ಮಾಡಿದುದಾಯ್ತು.

ಅಭಿನಯದ ನಿರ್ದೇಶನಕೆ ಪೋಷಣೆಗೆ ಪದ್ಯಸಾಹಿತ್ಯವೇ ಪಂಚಾಂಗ. ಅತ ಏವ, ರೂಪಕಕ್ಕಾಗಿ ಅಂದಿನ ರಂಗಸಾಧ್ಯತೆಗಳನ್ನು ಮಾನಿಸಿ ಪದ್ಯ ರಚಿಸುವುದಾಯ್ತು. ಇಷ್ಟೆಲ್ಲಾ ನಿರ್ಬಂಧ ಹಾಗೂ ಸಾಧ್ಯತಾವೈಪುಲ್ಯಗಳಲ್ಲಿ ಮೈದಾಳಿದ ರಂಗಪ್ರದರ್ಶನಕ್ಕೆ ಏನು ಹೆಸರಿಡುವುದು? ಯಕ್ಷಗಾನ/ನೃತ್ಯ/ಗೀತ? ನಾಟಕ? ರೂಪಕ?ಉಹುಂ ಇದ್ಯಾವುದರ ವರ್ಗಕ್ಕೂ ಸೇರದ ವಿಲಕ್ಷಣ ಕಿಚಡಿ. ಹಾಗಾಗಿ ನಾನು ಕೇವಲ ‘ರಂಗರೂಪಕ’ ಎಂತ ಮಾತ್ರ ನಾಮಕರಿಸಿದ್ದೇನೆ.

ಇದುವರೆಗೆ ನೂರಾರು ರೂಪಕಗಳಾಗಿದ್ದಾವೆ. ಪ್ರತಿಯೊಂದು ರೂಪಕವೂ ಒಂದು ಕಥಾಸನ್ನಿವೇಶವನ್ನು ಕಟ್ಟಿಕೊಡುವುದರಿಂದ ಇದರ ಸಾಹಿತ್ಯವು ಲಯಬದ್ಧವೂ ಆಗಿರುವುದರಿಂದ ಆಸಕ್ತರು ಪ್ರಯೋಗೋತ್ಸಾಹಿಗಳು ಇತ್ತ ಗಮನ ಹರಿಸಬಹುದು. ಏನಲ್ಲದಿದ್ದರೂ ರಂಗಪಾಠ್ಯದತ್ತ ಕಣ್ಣು ಹಾಯಿಸಬಹುದು. ಅದಕ್ಕಾಗಿ ಈ ರೂಪಕಾಂಕಣ. ಕಿಂಚಿದ್ವಿವರಣೆಯೊಂದಿಗೆ ರಂಗರೂಪಕಪಾಠ್ಯವನ್ನು ವಾಚಕರ ಮುಂದಿಡುತ್ತಿದ್ದೇನೆ.

ಇಲ್ಲಿ ರೂಪಕಸಾಹಿತ್ಯವು ಯಾವುದೇ ರಂಗಪ್ರದರ್ಶನಕ್ಕೆ ನಿಃಶರ್ತವಾಗಿ ಒದಗಿಬರುತ್ತಾವೆ. ಕೆಲವನ್ನು ಈಗಾಗಲೇ ಯಕ್ಶಗಾನದವರೂ, ಭರತನಾಟ್ಯದವರೂ ಬಳಸಿಕೊಂಡು ಪ್ರಯೋಗಿಸಿದ್ದಾರೆ. ಆದ್ದರಿಂದಲೇ ಶಿರೋನಾಮೆಯಲ್ಲಿ ಪ್ರಾವಣ್ಯ (ಈಟexibiಟiಣಥಿ)ಎಂಬ ಶಬ್ದವನ್ನು ಟಂಕಿಸಿದ್ದು. ಈ ಸಾಹಿತ್ಯ ರಾಮಕಥೆಯ ಇತಿಮಿತಿಗೆ ಒಳಪಟ್ಟದ್ದರಿಂದ ರಂಗಸಾಧ್ಯತೆಯ ಬೇರೆ ಬೇರೆ ಕಲಾಮಾಧ್ಯಮಕ್ಕೆ ವಿಭಿನ್ನವಾಗಿರಬಹುದು. ಪ್ರೇಕ್ಷಕರಾಕರ್ಷಣೆಯಲ್ಲಿ ಸೆಟ್ವರ್ಕೂ ಪ್ರಾಧಾನ್ಯ ವಹಿಸುತ್ತದೆ. ಇಲ್ಲಿಯ ಸಾಹಿತ್ಯದ ಇತರೇತರ ಪ್ರಯೋಗಕ್ಕೆ ಸೆಟ್ ಅನಿವಾರ್ಯವೇನೂ ಅಲ್ಲ. ಯಕ್ಷಗಾನದಲ್ಲಿ ಯಾವ ಸೆಟ್ ಇರುತ್ತದೆ? ಭರತನಾಟ್ಯಕ್ಕಾದರೂ ಅಷ್ಟೇ ! ರಂಗರೂಪಕದಲ್ಲಿ ಮಾಡಲಾಗದ ‘ವಾಕ್ಯಾರ್ಥಾಭಿನಯ’ವನ್ನು ಭರತನಾಟ್ಯದಂತಹ ಪ್ರಕಾರದಲ್ಲಿ ವಿಸ್ತಾರವಾಗಿ ಮಾಡಬಹುದು. ಪ್ರಯೋಗಸಾಧ್ಯತೆ ಅವರವರ ಆಯ್ಕೆಗೆ ಬಿಟ್ಟದ್ದು. ಒಟ್ಟಿನಲ್ಲಿ ಕುಂಟೋ, ಕುರುಡೋ ಪುತ್ರಸಂತಾನವಂತೂ ಇದೆ.

ಸಮುದ್ರಮಥನ

(ಸೂತ್ರಧಾರನು ಪ್ರವೇಶಿಸಿ ಕಥಾತತ್ತ್ವವನ್ನು ನಿರೂಪಿಸುವುದು)

(ಏಕತಾಳ) ಮಥನ…ಕಥನ… ಮಥನ…ಕಥನ…

ಹಾಲಿನ ಪದರದ ಮನಸಿನ ಮಥಾ

ತೇಲುವ ಜಾಣಿನ ಬುದ್ಧಿಯ ಮಥನ

ಭಾವಸಮುದ್ರದ ಮಥನದ ಕಥನ

ಮಥನ ಕಥನ ಮಥನ ||

ತಾನ ತನನ ತನ ತೋಂತನ ಧೀಂತನ

ತ್ತರನೋಂ ಧಿರನೋಂ ಮಥನs ಕಥನs

ಮಥನ ಕಥನ ಮಥನ ||

(ರೂಪಕತಾಳ) ಬೆಂಕಿಯ ಬೆಟ್ಟ ದುರ್ವಾಸನ ಶಾಪ

ಸ್ಫೋಟದ ಕಾವಿಗೆ ಸಿಡಿಸಿಡಿದು

ನಾಕದ ಸಂಪದ ವಸ್ತುಗಳೆಲ್ಲ

ತಳ ಕಂsಡವು ಹಾsಲ್ಗಡಲಿಳಿದು

ಶ್ರೀಹರಿ ಸೂಚಿಸಿದಂತೇs ಇಂದ್ರ

ದೈತ್ಯರ ಜೊತೆಗೈದ ಒಪ್ಪಂದ ( ಸೂತ್ರಧಾರ ನಿರ್ಗಮನ)

(ತೆರೆ ಸರಿದಾಗ ಮಂದರ-ವಾಸುಕಿ-ಸುರಾಸುರರು)

(ಏಕತಾಳ) ವಾಸುಕಿ ತಲೆಯನು ಹಿಡಿದರು ಅಸುರರು

ಬಾಲವ ಹಿಡಿದರು ಬರ್ದಿಲರು

ಕುಗ್ಗದೆ ಬಗ್ಗದೆ ಜಗ್ಗದ ಹಗ್ಗದಿ

ಕಡೆಕಡೆಕಡೆದರು ಕಡಲೊಳಲು

ಸರಭರ ಸರಭರ ರಭಸದ ದರಭರ

ನಿರ್ಜರ ಬರ್ಬರ ಕರ್ಬುರರಬ್ಬರ

ತಾನ ತನನ ತನ ತೋಂತದ ಧೀಂತದ

ತರಧಿಂ ಧಿರಧಿಂ ಕರದಿಂ ಭರದಿಂ

ಪ್ರಳಯಪಯೋಧರ ಮುಗಿಲೆದ್ದಿತೊ ಭುಗಿ|

ಲೆದ್ದಿತೊ ಹಾ ಹಾ ಹಾ ರವವು

ಕೋಲಾಹಲ ಹಿಮ್ಮೇಲಕೆ ಮೇಲಕೆ

ಬೊಬ್ಬುಳಿಸಿತು ಹಾಲಾಹಲವು (ವಿಷೋದ್ಭವ)

(ತ್ರ್ರಿಪುಟತಾಳ)ಮಂಜು ಬೆಟ್ಟದ ಮಂಜುನಾಥನು ನಂಜಿನಂಜಿಕೆ ನೀಗುತ

ಜೀವ ಹೀರುವ ವಿಷವ ಹೀರಿದ ಲೋಕಶಂಕರನಾಗುತ ( ಶಿವ ನಿರ್ಗಮನ)

(ಏಕತಾಳ ) ಸರಭರ ಸರಭರ……………. ಕರದಿಂ ಭರದಿಂ ||

ಬಂತು ಬಂತು ಮೇಲೆ ಬಂತು ಐರಾವತ

ಬಂತು ಬಂತು ಮೇಲೆ ಬಂತು ಉಚ್ಛೈಶ್ರವಸ್

ಬಂತು ಬಂತು ಮೇಲೆ ಬಂತು ಕಲ್ಪವೃಕ್ಷs

ಬಂತು ಬಂತು ಜಿಗಿದು ಬಂತು ಕಾಮಧೇನು

(ಇಲ್ಲಿ ಪ್ರಾತಿನಿಧಿಕವಾಗಿ ಕಾಮಧೇನುವಿನ ಪಾತ್ರ ತರಬಹುದು. ಇನ್ನೂ ಅನೇಕ ಸುವಸ್ತುಗಳನ್ನೂ ಕಲಾವಿದರು ಸೂಚಿಸಬಹುದು.)

(ತ್ರಿಪುಟತಾಳ) (ರಾಮಕಥೆ-ಗೋಕಥೆಗೆ ಕಾಮಧೇನುವಿನ ಪಾತ್ರ ಪೂರಕವಾದ್ದರಿಂದ ಹೆಚ್ಚಾಗಿ ಬೆಳೆಸಲಾಗಿದೆ.)

ಹಾಲುಗಡಲಿನ ಮೇಲೆ ಬಂದಳು

ಕೂಲದೆಡೆಗೇ ತೇಲಿ ಬಂದಳು

ಲೋಕಕೋಕವ ಪಾಲಿಸುವ ಪರಿ-

ಪಾಲಿಸುವ ವರ ಲೀಲೆಯ| ರಸ-ಶೀಲದ| ದೇ-ವಾಲಯ ||

ಬಂದಳೂ |ಕಾಮಧೇನು|

(ಏಕತಾಳ)ಕಾರುಣ್ಯವೆ ಮೈವೆತ್ತಂತೆ

ವಾತ್ಸಲ್ಯವೆ ರೂಪಾದಂತೆ

ಸಂಪ್ರೀತಿಯೆ ತಾನಾದಂತೆ

ಆತ್ಮೀಯತೆಯಾಕೃತಿಯಂತೆ ||ಬಂದಳು||

(ರೂಪಕತಾಳ)ಶರಧಿಜಾತೆ ಜೀವದಾತೆ

ನಿತ್ಯಪೂತೆ ವಿಶ್ವಮಾತೆ

(ಏಕ) ಸಂತರ ಶಾಂತರ ಪಂಕ್ತಿಯ ಪಂಥದಿ

ಕ್ಷೀರಾಮೃತವನು ಮೂಡಿಸಿ ಊಡಿಸಿ ||ಬಂದಳು||

(ಕಾಮಧೇನುವಿನ ನಿರ್ಗಮನ)

(ಮಹಾಲಕ್ಷ್ಮೀ ಉದಯ)

(ಝಂಪೆತಾಳ) ಜಗದಂಗಳದ ಮಂಗಳ ಮಾತೆ ಮಾಲಕ್ಷ್ಮಿ

ಮಾಲೆಗೈಯಲಿ ಮಂದಗಮನದಲ್ಲಿ

ಸುತ್ತುವರಿದೆಲ್ಲರನು ತುಸುಬಾಗಿ ನೋಡಿದಳು

ಮಾಲೆಗೊಪ್ಪುವ ಕೊರಳ ಹುಡುಕುಗಣ್ಣಲ್ಲಿ

(ತ್ರಿಪುಟತಾಳ)ಬ್ರಹ್ಮ ಮುದುಕನು, ಇಂದ್ರ ಹಮ್ಮಿಗ, ಚಂದ್ರ ದಿನದಿನ ಕರಗುವ

ಶಿವನು ಬೆತ್ತಲ, ಸೂರ್ಯ ಸುಡುವನು, ವಾಯು ನಿಲ್ಲದೆ ಅಲೆವನು

ಸಕಲಗುಣ ಸಂಪನ್ನ ಸಕಲಾಭರಣ ಪೀತಾಂಬರನನು

ವರಿಸುವೆನು ಶಿವಸತ್ಯಸುಂದರ ‘ತದ್ವಿಷ್ಣೋಃ ಪರಮಂಪದಂ’

(ರಾಮಕಥೆಯ ಕಥಾಸಂವಿಧಾನಕ್ಕನುಗುಣವಾಗಿ ಲಕ್ಷ್ಮೀವಿವಾಹದಲ್ಲಿ ಮುಕ್ತಾಯ)

Leave a Reply

*

code