ಅಂಕಣಗಳು

Subscribe


 

ದೇವರನಾಮ ನೃತ್ಯ ಸಂಯೋಜನೆಯ ಒಡತಿ : ‘ರೇವತಿ’ ನರಸಿಂಹನ್

Posted On: Saturday, December 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ಬೆಂಗಳೂರು

’ಕರ್ನಾಟಕ ಕಲಾಶ್ರೀ’, ’ರಾಜ್ಯೋತ್ಸವ ಪ್ರಶಸ್ತಿ’ಗಳಿಂದ ಸನ್ಮಾನಿತರಾದ, ಭರತನಾಟ್ಯದಲ್ಲಿ ತಮ್ಮದೇ ಛಾಪು ಮೂಡಿಸಿರುವ, ನೃತ್ಯಸಂಯೋಜನೆಯಲ್ಲಿ ವಿಶೇಷವಾದ ವ್ಯುತ್ಪತ್ತಿ ಹೊಂದಿದವರೆಂದು ಪ್ರಸಿದ್ಧರಾದ ಹಿರಿಯ ಗುರು ಶ್ರೀಮತಿ ರೇವತಿ ನರಸಿಂಹನ್ ತಮ್ಮ ನರ್ತನಶಾಲೆ ’ನಾಟ್ಯ ನಿಕೇತನ’ದ ಮೂಲಕ ಕಳೆದ ೩೫ ವರ್ಷಗಳಿಂದ ನೃತ್ಯಕ್ಷೇತ್ರಕ್ಕಾಗಿ ಅನವರತ ಶ್ರಮಿಸುತ್ತಿದ್ದಾರೆ. ಇವರ ನಾಯಕತ್ವದ ’ಶಿವಕಾಮಿ’ ತಂಡವು ಪ್ರತಿಷ್ಠಿತ ಉತ್ಸವಗಳಲ್ಲಿ ನೃತ್ಯ ರೂಪಕಗಳನ್ನು ಪ್ರದರ್ಶಿಸಿದ್ದು ;ಇವರ ಗರಡಿಯಲ್ಲಿ ಹಲವಾರು ಪ್ರಗತಿಪರ ಚಿಂತನೆಗಳನ್ನು ಹೊಂದಿದ ಉತ್ತಮ ಶಿಷ್ಯರು ರೂಪುಗೊಳ್ಳುತ್ತಲೇ ಇದ್ದಾರೆ. ರೇವತಿ ಅವರ ಸಂದರ್ಶನದ ಆಯ್ದ ತುಣುಕುಗಳು ಇಲ್ಲಿವೆ.

ತಮ್ಮ ನೃತ್ಯ ಕಲಿಕೆಯ ಹಿನ್ನೆಲೆ ಹೇಗಿತ್ತು? ಆಗಿನ ವಾತಾವರಣ, ಪ್ರೋತ್ಸಾಹ ಹೇಗಿದ್ದವು?

ಅಂದಿನ ದಿನಗಳಲ್ಲಿ ನೃತ್ಯ ಕಲಿಯುವುದು ಸುಲಭದ ಮಾತಾಗಿರಲಿಲ್ಲ. ಹಾಗಿದ್ದರೂ, ೬ ವರ್ಷದವಳಾಗಿದ್ದ ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ, ನನ್ನ ತಂದೆಯವರು ಶ್ರೀಮತಿ ಕೌಸಲ್ಯ ಅವರಲ್ಲಿ (ಈಕೆ ಪದ್ಮಶ್ರೀ ವಳವೂರ್ ರಾಮಯ್ಯ ಪಿಳ್ಳೈರವರ ನೇರ ಶಿಷ್ಯೆ) ನೃತ್ಯಾಭ್ಯಾಸಕ್ಕೆ ಕಳಿಸಿದರು.ಅಲ್ಲಿ ಗುರುಕುಲ ಪದ್ಧತಿಯಲ್ಲಿ ಕಲಿತದ್ದು.ಒಂಭತ್ತನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದ ನಂತರ ಅನೇಕ ಕಾರ್ಯಕ್ರಮಗಳಲ್ಲಿ, ಸಭೆಗಳಲ್ಲಿ ಭಾಗವಹಿಸಿದೆ.ಗುರುಗಳು ಕಲಿಸಿದ್ದನ್ನು ಯಥಾಪ್ರಕಾರ ಅಭ್ಯಾಸ ಮಾಡುವುದು, ಅದನ್ನೇ ಕಾರ್ಯಕ್ರಮದಲ್ಲಿ ಪ್ರದರ್ಶಿಸುವುದು ಇದೇ ಅಂದಿನ ಪರಿಪಾಠವಾಗಿತ್ತು.ಪ್ರಾಯೋಗಿಕ ನೆಲೆ ಬಿಟ್ಟು ಬೇರೆಡೆ ಗಮನ ಹರಿಸುತ್ತಿರಲಿಲ್ಲ. ಕಲಿತದ್ದನ್ನು ಪ್ರದರ್ಶಿಸಿದರೆ ಮುಗಿಯಿತು.ಈಗ ಹಾಗಿಲ್ಲ. ಕರ್ನಾಟಕ ಸರ್ಕಾರದ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಾಗಿ ಶಾಸ್ತ್ರ ಭಾಗ ತಿಳಿಸುವಂತೆ ಆಗಿದ್ದು ಉತ್ತಮ ಬೆಳವಣಿಗೆ.ಜೊತೆಗೆ ಶೈಕ್ಷಣಿಕವಾಗಿಯೂ ನೃತ್ಯದಲ್ಲಿ ಬಿ.ಎ., ಎಂ.ಎ.ಗಳು ಗುರುತಿಸಿಕೊಳ್ಳುತ್ತಿರುವುದರಿಂದ ಪ್ರಯೋಗದ ಹಿನ್ನೆಲೆಯಾಗಿ ಶಾಸ್ತ್ರವನ್ನು ಅರಿಯುವುದು ಮುಖ್ಯವಾಗಿದೆ.

ತಂದೆಯವರ ಪ್ರೋತ್ಸಾಹದಿಂದ ೧೬ ವರ್ಷಗಳ ಕಾಲ ಕಲಿತೆ.ಎಲ್ಲರಂತೆ, ಮದುವೆಯಾದ ಬಳಿಕ ಮುಂದುವರಿಸಲು ಸಾಧ್ಯವಿಲ್ಲ ಎಂದು ನಂಬಿದ್ದೆ.ಆದರೆ, ಪತಿಯವರ ಪ್ರೋತ್ಸಾಹದಿಂದ ಮತ್ತೊಮ್ಮೆ ಕ್ಷೇತ್ರದೊಳಗೆ ಕಾಲಿಡಲು ಸಾಧ್ಯವಾಯಿತು.

ಕಲಿಕೆಯಲ್ಲಿರುವಾಗಿನ ಜ್ಞಾನಕ್ಕೂ ಕಲಿಸುವ ಜ್ಞಾನಕ್ಕೂ ಸಾಕಷ್ಟು ಅಂತರ. ಹೇಗೆ ನಿಭಾಯಿಸಿದಿರಿ?

ಹೌದು. ಹಲವು ಹಂತಗಳಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಏನೇ ಕಲಿತರೂ ಅದು ಪ್ರಯೋಗದಲ್ಲಿ ಕಾಣಬೇಕು. ಏಕೆಂದರೆ ಇದು ದೃಶ್ಯ ಕಲೆ. ಮಿಕ್ಕಂತೆ, ಭರತನಾಟ್ಯದ ಮೂಲಭೂತ ರೂಪುರೇಷೆಗಳಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಅಡವುಗಳನ್ನು ಇಂದಿಗೂ ಹಾಗೆಯೇ ಕಲಿಸುತ್ತೇನೆ. ವಳವೂರು ಶೈಲಿಯಲ್ಲಿ ಲಾಸ್ಯವೇ ಪ್ರಧಾನ ಅಂಶ. ಆದರೆ, ತಾಳವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬಹುದು ಎಂಬ ಕಾರಣದಿಂದ ನೃತ್ತದಲ್ಲಿನ ಲಾಸ್ಯ ಭಾಗದಲ್ಲಿ ಸ್ವಲ್ಪ ಬಿಗಿತ ತಂದಿದ್ದೇನೆ.

ದೇವರನಾಮಗಳ ಕೊರಿಯೋಗ್ರಫಿಯಲ್ಲಿ ತಮ್ಮದು ಎತ್ತಿದ ಕೈ. ಹೀಗೆ ಸಂಯೋಜನೆ ಮಾಡುವಾಗ ಯಾವ ಅಂಶಗಳೆಡೆಗೆ ಗಮನ ಕೊಡುತ್ತೀರ?

ಮೊದಲು ಸಾಹಿತ್ಯವನ್ನು ತಾರ್ಕಿಕವಾಗಿ ಅಧ್ಯಯನ ಮಾಡುತ್ತೇನೆ. ಹಿಂದಿನ ಕಾಲದಲ್ಲಿ ಒಂದೇ ಸಾಲನ್ನು ಮೂರು ಮೂರು ಬಾರಿ ಮಾಡಿ ವಿಸ್ತರಿಸುವುದೇ ಸಾಮಾನ್ಯವಾಗಿತ್ತು.ಆದರೆ ನಾನು, ಸಾಹಿತ್ಯ ಮತ್ತು ಪಾತ್ರದ ಸ್ಥಾಯೀ ಭಾವ ಹಾಗೆಯೇ ಇಟ್ಟುಕೊಂಡು, ಅಭಿನಯಿಸುವಾಗ ವಿವಿಧ ರೀತಿಯಲ್ಲಿ ತೋರುವಂತೆ ಸಂಯೋಜಿಸುತ್ತೇನೆ. ಒಮ್ಮೊಮ್ಮೆ ಒಂದೇ ಪಾತ್ರ ಇತರ ಪಾತ್ರಗಳನ್ನೂ ಅಭಿನಯಿಸುವಂತೆ ಸಂಯೋಜಿಸಿದ್ದರೆ, ಮತ್ತೊಮ್ಮೆ ಅದೇ ಪಾತ್ರ ಉಳಿದ ಪಾತ್ರಗಳಿಗೆ ಪ್ರತಿಕ್ರಿಯೆ ನೀಡುವಂತೆ ಮಾಡುತ್ತೇನೆ. ಒಟ್ಟಿನಲ್ಲಿ ವೈವಿಧ್ಯತೆ ಇರಬೇಕು.ಹೆಚ್ಚು ಹೊತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು.ಸಾಹಿತ್ಯದಲ್ಲಿನ ಪದಗಳಿಗೆ ಹೊಂದುವಂತೆ ಆದರೆ ಅಭಿನಯಕ್ಕೆ ಭಂಗ ಬರದಂತೆ ನೃತ್ತವನ್ನೂ ಸೇರಿಸುತ್ತೇನೆ. ಆಗ ನೋಡಲು ಇನ್ನೂ ಆಕರ್ಷಕವಾಗಿ ಕಾಣುತ್ತದೆ.

ಉತ್ತಮ ನೃತ್ಯಪಟುಗಳನ್ನು ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದೀರ. ಈ ನಿಟ್ಟಿನಲ್ಲಿ ತಾವು ಕೊಡುವ ತರಬೇತಿ ವಿಧಾನ ಹೇಗಿರುತ್ತದೆ? ಶಿಷ್ಯರಲ್ಲಿ ತಮ್ಮ ಅಪೇಕ್ಷೆಯ ಗುಣ ಯಾವುದು?

ಎಷ್ಟೇ ಹಿರಿಯರಾಗಲಿ ನೃತ್ಯಪ್ರದರ್ಶನ ಕೊಡಬೇಕೆಂದರೆ, ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಬರುವುದು ಅತೀ ಮುಖ್ಯ.ಸತತ ಅಭ್ಯಾಸ ಮಾಡಲೇಬೇಕು.ಸಣ್ಣದಕ್ಕೆಲ್ಲಾ ತೃಪ್ತಿ ಹೊಂದಬಾರದು.ನಾನಂತೂ ಒಂದೊಂದು ಸಣ್ಣ ಅಂಶವನ್ನೂ ಸೂಕ್ಷ್ಮವಾಗಿ ಗಮನಿಸುವವಳು.ನಿರಂತರ ಪರಿಶ್ರಮ ಇರಲೇಬೇಕು.ಸಾಮಾನ್ಯವಾಗಿ ಅಭಿನಯದ ನೃತ್ಯಬಂಧಗಳನ್ನು ನಿಭಾಯಿಸಿಬಿಡುತ್ತಾರೆ.ಆದರೆ ನೃತ್ತಬಂಧಗಳಿಗೆ ದೇಹದಂಡನೆ ಮಾಡಲೇಬೇಕು.

ಇನ್ನು ಅಭಿನಯ ಅಥವಾ ನೃತ್ತಬಂಧವನ್ನು ಕಲಿಸುವಾಗ ನಿಧಾನಗತಿಯಲ್ಲಿ ಕಲಿಸುತ್ತೇನೆ. ನೃತ್ತದಲ್ಲಿ ಅಂಗಶುದ್ಧತೆ ಬರಲು ಮತ್ತು ಅಭಿನಯದಲ್ಲಿ ಮುಳುಗಿ ಅನುಭವಿಸಲು ಇದು ಅನುಕೂಲವಾಗುತ್ತದೆ.ಇಷ್ಟಲ್ಲದೆ, ಶಿಷ್ಯರಲ್ಲಿಯೂ ಆಸಕ್ತಿ, ಶ್ರದ್ಧೆ ಇದ್ದರೆ ಕಲಿಕೆ ಅರ್ಥಪೂರ್ಣವಾಗುತ್ತದೆ. ಹೇಳಿಕೊಟ್ಟಿದ್ದಷ್ಟನ್ನೇ ಒಪ್ಪಿಸದೆ ಸ್ವಂತಿಕೆಯನ್ನೂ ಹೊರಹಾಕುವಂತೆ ಪ್ರೇರೇಪಿಸುತ್ತೇನೆ. ಜೊತೆಗೆ, ಶಿಷ್ಯಂದಿರಿಗೆ ಬೇರೆ ಬೇರೆ ನರ್ತನ ಕಾರ್ಯಕ್ರಮಗಳನ್ನು ನೋಡುವಂತೆಯೂ ಹೇಳುತ್ತೇನೆ. ಒಳ್ಳೆಯ ಅಂಶಗಳಿದ್ದರೆ ಅಳವಡಿಸಿಕೊಳ್ಳಲೂ ಅನುಮತಿ ಕೊಡುತ್ತೇನೆ. ಆದರೆ ಚೌಕಟ್ಟು ಮೀರದಂತೆ ಎಚ್ಚರಿಸುತ್ತೇನೆ.

ಮುಂದಿನ ಪ್ರಶ್ನೆಗೆ ತಾವೇ ಮುನ್ನುಡಿ ಹಾಕಿದಂತಾಯ್ತು.. ಈ ಶೈಲಿ, ಸಂಪ್ರದಾಯ, ಶಾಸ್ತ್ರ, ನಿಯಮಗಳಿಗೆ ಎಷ್ಟರ ಮಟ್ಟಿಗೆ ಬದ್ಧರಾಗಿರಬೇಕು? ಹೊಸ ಪ್ರಯೋಗಗಳನ್ನು ಶಿಷ್ಯರು ಬಯಸಿದಾಗ ಯಾವ ರೀತಿ ಸ್ಪಂದಿಸುತ್ತೀರಿ?

ಹೊಸ ಪ್ರಯೋಗಗಳಿಗೆ ನನ್ನದೆಂದೂ ಅಭ್ಯಂತರವಿಲ್ಲ. ಹಲವರಿಗೆ ಹಲವು ತರಹದ ಶೈಲಿ ಹೊಂದುತ್ತದೆ. ಅವರಿಗೆ ಅದನ್ನೇ ರೂಢಿಸಿಕೊಳ್ಳುವಂತೆ ಹೇಳುತ್ತೇನೆ. ಹೊಸದನ್ನು ಕಲಿತರೂ ಅದನ್ನು ನಮ್ಮದನ್ನಾಗಿಸಿಕೊಂಡು ನಮ್ಮ ಚೌಕಟ್ಟಿನೊಳಗೆ ಸೇರಿಸಿಕೊಳ್ಳಬೇಕು.ಆಗಲೇ ಸಮತೋಲನ ಬರಲು ಸಾಧ್ಯ.ಹೊಸದೆಂದು ಏನೇನೋ ಮಾಡಲು ಹೊರಟರೆ ಹಾಸ್ಯಾಸ್ಪದವೆನಿಸಿಕೊಳ್ಳುತ್ತದೆ. ಹಾಗಾಗಿ ನನಗೊಮ್ಮೆ ತೋರಿಸಿಯೇ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದೇನೆ. ಚೆನ್ನಾಗಿ ಕಂಡದ್ದನ್ನು ಖಂಡಿತಾ ಒಪ್ಪಿಕೊಳ್ಳುತ್ತೇನೆ.

ಯುವಪೀಳಿಗೆಗೆ ಇಂದು ಆಕರ್ಷಣೆಗಳು ಅನೇಕ. ಹೀಗಿರುವಾಗ ನಮ್ಮ ಪಾರಂಪರಿಕ ನೃತ್ಯದೆಡೆ ಅವರ ಒಲವು ಮೂಡಲು ಯಾವ ಕ್ರಮ ಅನುಸರಿಸಬೇಕು?

ಅದು ಕಷ್ಟ. ನೃತ್ಯವನ್ನೇ ವೃತ್ತಿಯನ್ನಾಗಿ ಮುಂದುವರೆಸುವವರು ವಿರಳ.ಇದಕ್ಕೇನಿದ್ದರೂ ಎರಡನೇ ಸ್ಥಾನ. ಆಸಕ್ತಿ ಇದ್ದವರು ಕಷ್ಟಪಟ್ಟಾದರೂ ಸಮಯ ಹೊಂದಿಸಿ ಕಲಿಯಲು ಬರುತ್ತಾರೆ. ಇನ್ನು ನೃತ್ಯದಲ್ಲಿ ಬಿ.ಎ., ಎಂ.ಎ. ಮಾಡುವವರಿಗೆ ನನ್ನ ಪ್ರೋತ್ಸಾಹ ಇದ್ದೇ ಇದೆ.ಅಲ್ಲಿ ಶಾಸ್ತ್ರ ವಿಭಾಗದಲ್ಲಿ ಕಲಿತದ್ದನ್ನು ಅವರ ನರ್ತನದಲ್ಲಿ ಅಳವಡಿಸಿಕೊಂಡಾಗಲೇ ಪರಿಪೂರ್ಣತೆ ಬರುವುದು.ಇದನ್ನೇ ವೃತ್ತಿಯನ್ನಾಗಿಸಿಕೊಂಡರಂತೂ ಕಲಿಸುವಾಗ ಸಿಗುವ ಆನಂದದೊಡನೆ ಗಳಿಕೆಯೂ ಆಗುತ್ತದೆ.

ತಮ್ಮ ಸೇವೆಯನ್ನು ಗುರುತಿಸಿ ಸರ್ಕಾರವೂ, ಹಲವಾರು ಸಂಸ್ಥೆಗಳೂ ಪ್ರಶಸ್ತಿ, ಪುರಸ್ಕಾರಗಳನ್ನು ಕೊಟ್ಟಿರುವುದು ಬಹಳ ಸಂತೋಷದ ವಿಷಯ. ಮುಂದಿನ ತಮ್ಮ ಆಶಯ, ಗುರಿಗಳೇನು?

ಇನ್ನೂ ಸಾಧಿಸುವುದು ಬಹಳ ಇದೆ.ಅಧ್ಯಯನ ಮಾಡಬೇಕೆಂಬ ಹಂಬಲ ಇದೆ. ಹಾಗೇ ಇನ್ನೂ ಅನೇಕ ಪದ, ಜಾವಳಿಗಳಿಗೆ ನೃತ್ಯ ಸಂಯೋಜನೆ ಮಾಡಬೇಕೆಂಬ ಬಯಕೆಯೂ ಇದೆ. ಒಟ್ಟಿನಲ್ಲಿ ಕಡೆ ಉಸಿರಿರುವವೆಗೂ ಕಲಾಸೇವೆಯಲ್ಲೇ ತೊಡಗಿರಲು ಅವಕಾಶ ಮಾಡಿಕೊಡುವಂತೆ ಸದಾಕಾಲ ಆ ಭಗವಂತನಲ್ಲಿ ಪ್ರಾರ್ಥಿಸುತ್ತಿರುತ್ತೇನೆ.

ದೀರ್ಘ ಆಯಸ್ಸು ಮತ್ತು ಆರೋಗ್ಯವನ್ನೂ ಭಗವಂತನು ದಯಪಾಲಿಸಲಿ.ತಮ್ಮ ಸೇವೆಯಿಂದ ನೃತ್ಯ ಕ್ಷೇತ್ರವು ಮತ್ತಷ್ಟು ಸಮೃದ್ಧಗೊಳ್ಳಲಿ ಎಂದು ಹಾರೈಸುತ್ತೇವೆ.

(ಲೇಖಕರು ಸ್ತುತಿ ನಾಟ್ಯಶಾಲೆಯ ಗುರು, ಭರತನಾಟ್ಯ-ಕಥಕ್ ಕಲಾವಿದೆ)

 

Leave a Reply

*

code