ಅಂಕಣಗಳು

Subscribe


 

ಗುಣನಿರ್ಭರ, ಸುಕುಮಾರ ಮನೋಹರ ಸಲಕ್ಷಣ, ಪ್ರಸನ್ನ ಭರತನೃತ್ಯ : ಅಭಿಜ್ಞಾ ರಂಗಾರೋಹಣ

Posted On: Saturday, August 15th, 2015
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: -    ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

DSC_0018DSC_0073ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಜೆ ಎಸ್ ಎಸ್ ಸಭಾಂಗಣದಲ್ಲಿ ಕುಮಾರಿ ಅಭಿಜ್ಞಾ ಅವರ ರಂಗಾರೋಹಣ ಸಮನಿಸಿತು. ಕು.ಅಭಿಜ್ಞಾ ಡಾ. ಶೋಭಾ ಶಶಿಕುಮಾರ್ ಅವರ ಶಿಷ್ಯೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಆದ್ಯಂತ ಆಲೋಡನೆ ಮಾಡುತ್ತಲೇ ಇರುವ, ಸತ್ತ್ವಾಯತನದ ನಾಟ್ಯಾಭಿವ್ಯಕ್ತಿಯ ಪ್ರಯೋಗದಲ್ಲಿ ತಮ್ಮನ್ನು ನಿತಾಂತವಾಗಿ ತೊಡಗಿಸಿಕೊಂಡ ಡಾ.ಶೋಭಾ, ತಮ್ಮ ಶಿಷ್ಯೆಯರನ್ನು ಇದೇ ಅಚ್ಚಲ್ಲಿ ಗಚ್ಚಾಗಿ ಸಾಣೆ ಹಿಡಿದು ಕಡೆಯುತ್ತಿದ್ದಾರೆ. –ಎಂಬುದಕ್ಕೆ ಅಭಿಜ್ಞೆಯ ರಂಗಪ್ರವೇಶವೂ ಸಮರ್ಥೋದಾಹರಣವಾಗಿ ಮೆಯ್‌ದುಂಬಿ ಬಂತು. ನೃತ್ಯದ ಸೌಂದರ್ಯ, ಸೌಕುಮಾರ್ಯ, ಸೌಷ್ಠವ ಅಭಿವ್ಯಕ್ತವಾಗುವುದೇ ದೇಹಮಾಧ್ಯಮದಲ್ಲಿ ಎಂಬ ಸರಳಸತ್ಯವನ್ನು ಪ್ರಾತ್ಯಕ್ಷಿಕೆಯಾಗಿಸಿದ ಅಭಿಜ್ಞೆಯ ಪ್ರಯತ್ನ ಪರಿಶ್ರಮ ಸರ್ವಥಾ ಸ್ತುತ್ಯರ್ಹ.

DSC_0150

ರಂಗಪ್ರವೇಶ-ಕಲಾಪದ ಪ್ರತಿಕ್ರಿಯೆಯ ಮೊದಲ ಹೆಜ್ಜೆಯಿಂದಲೇ ದೇಹದ ಸ್ಥಿತಿ-ಗತಿಗಳ ನಮನೀಯತೆಯ ಮೇಲೆ ತನಗಿರುವ ಹಿಡಿತವನ್ನು ಆ ಪುಟ್ಟ ಹುಡುಗಿ ಪ್ರಕಟಿಸಿದ್ದೇ ಬೆರಗುಗೊಳಿಸುವಂತಿತ್ತು. ಅಗುಳನ್ನದಲ್ಲೇ ಪಕ್ವತೆಯು ತಿಳಿಯುವ ಹಾಗೆ, ಪುಷ್ಪಾಂಜಲಿಯೇ ಕಲಾವಿದೆಯ ಪುಷ್ಟಾಂಗಿಕದ ಮುನ್ನುಡಿಯಾಗಿ ಮೂಡಿಬಂದಿತು. ಸೂಚೀಖಚಿತವಾದ ಚಾರಿ ಹಾಗೂ ಲತಾನುಶೀಲವಾದ ರೇಚಿತಗಳ ಮೂಲಕ ಕಲಾವಿದೆ ‘ಮಗುವು ತಾನಹೆ, ತನ್ನ ಬಾಣಕೆ ಮಗುವುತನ ಬೇರಿಲ್ಲ’ ಎಂಬ ಅಭಿಮನ್ಯುವಿನ ಆತ್ಮಪ್ರತ್ಯಯವನ್ನು ನೃತ್ಯದಲ್ಲಿ ತೋರಿ ತನ್ನ ಹದಿಹರೆಯವನ್ನು ಮರೆಸಿ ಪ್ರೌಢತೆಯನ್ನು ಮೆರೆಸಿದಳು.DSC_0057

DSC_0319

ರಂಗಾಭಾಸವನ್ನು ಮಾಡುವ ಉಪದ್ವ್ಯಾಪಕ್ಕೆ ಹೋಗದೇ, ಬಾಲಬೋಧಕ್ಕೆ ಬಾಲಮೋದಕ್ಕೆ ಒಡನೆಯೇ ಆನುವ ಬಾಲಗೋಪಾಲನನ್ನೇ ಹಿಡಿಗಂಬವಾಗಿ ಮಾಡಿಕೊಂಡು ಬಹುತೇಕ ರಂಗಾರೋಹಣದ ನಾಟ್ಯಕೃತಿಗಳನ್ನು ನಿರ್ವಹಿಸಿದ್ದು ಪ್ರಶಂಸನೀಯ. ತತ್ರಾಪಿ, ಎರಡು ಬಾರಿ ಕಾಳಿಂಗಮರ್ದನದ ದೃಶ್ಯ ಬಂದರೂ, ಎರಡನ್ನೂ ಪರಸ್ಪರ ವಿಭಿನ್ನವಾಗಿ, ಮೊದಲು ಪ್ರಯೋಗಿಸಿದ ಯಾವ ಆಂಗಿಕ-ಕರಣಾದಿಗಳನ್ನೂ ಎರಡನೆಯದರಲ್ಲಿ ಪುನರಾವರ್ತಿಸದೆ, ಸ್ವತಂತ್ರವಾಗಿ ರಂಗರೇಖೆಗೆ ಅಳವಡಿಸಿದ್ದು ಡಾ.ಶೋಭಾ ಅವರ ಸೂಕ್ಷ್ಮೇಕ್ಷಣವನ್ನು ಸಾರುತ್ತಿತ್ತು.

DSC_0320

ಅಭಿಜ್ಞೆಯೂ ತನ್ನೆಲ್ಲಾ ಕಸುವು, ಕೌಶಲ, ಕಸುಬುದಾರಿಕೆಯನ್ನು ಬಸಿದು, ಪ್ರೇಕ್ಷಕ ನಿಬ್ಬೆರಗಾಗುವಂತೆ ಸುದೀರ್ಘವಾದ ವರ್ಣವನ್ನು ಸಾದರಪಡಿಸಿದ್ದು ಆಕೆಯ ಕಲಾಪ್ರತಿಭೆಯ ದ್ಯೋತಕವಾಗಿ ಸ್ಥಿರೀಕರಿಸಲ್ಪಟ್ಟಿತು. ಸುಮಾರು ಮುಕ್ಕಾಲು ಗಂಟೆ ಅವಧಿಯ ವರ್ಣ, ಎಲ್ಲೂ ಕೊರೆ ಬೀಳದೆ, ಕರೆಕರೆಯಾಗದೆ ಹೃದ್ಯವಾಗಿ ಸ್ವಾದ್ಯವಾಗಿ ಮೂಡಿಬಂತು. ವರ್ಣದಲ್ಲಿ ಕಡ್ಡಾಯವಾಗಿ ತೋರಬೇಕಾದ ಲಯಚಮತ್ಕ್ಕಾರದ ಜತಿ, ಸ್ವರಗಳಲ್ಲೂ ಸುಕೋಮಲ ಅಭಿನಯವನ್ನು ಸಮೀಕರಿಸಿ ಆದ್ಯಂತವಾಗಿ ಕಥೆಯನ್ನು ಎಲ್ಲೂ ಜಾಳುಗೆಡಹದೇ, ನಾಟ್ಯವನ್ನು ಜೀವಂತವಾಗಿ ಇಟ್ಟದ್ದು ರಸಿಕಚಿತ್ತಾಹ್ಲಾದಕರವಾಗಿತ್ತು.

DSC_0172

ಪುಷ್ಪಾಂಜಲಿಯಲ್ಲಿ ಇದ್ದಷ್ಟೇ ಊರ್ಜೆ, ಉತ್ಸಾಹಗಳನ್ನು ಕೊನೆಯ ತಿಲ್ಲಾನ (ಶತಾವಧಾನಿ ಡಾ.ಆರ್. ಗಣೇಶ್ ರಚನೆ) ದಲ್ಲೂ ಅಂಚುಗೆಡದಂತೆ ಉಳಿಸಿ ನಳನಳಿಸಿದ ಅಭಿಜ್ಞೆಯ ಸುಕುಮಾರ ಆಂಗಿಕಗಳಾಗಲೀ, ರಂಗದ ಸಹಜಗತಿಯೋ ಎಂಬಂತೆ ಹೆಕ್ಕಿಹೆಣೆದ ಕರಣಾವಳಿಗಳಾಗಲೀ, ಅಭಿನಯದ ಮೌಗ್ಧ್ಯವಾಗಲೀ, ಪದಗತಿಯ ಮೇಲಿರುವ ಸಂಯಮ-ಪ್ರಭುತ್ವವಾಗಲೀ ಸಹೃದಯಪ್ರೇಕ್ಷಕರಿಂದ ಮರೆಯಾಗುವಂತಿಲ್ಲ. ನಾಟ್ಯಮಾರ್ಗದಲ್ಲಿ ಯಶಃಕ್ರಮಣವನ್ನು ಮಾಡುವ ಎಲ್ಲ ಮೂಲಸತ್ತ್ವವನ್ನು ಮೆಯ್‌ಗೂಡಿಸಿಕೊಂಡಿರುವ ಕುಮಾರಿ ಅಭಿಜ್ಞಾ, ನೃತ್ಯಕ್ಷೇತ್ರದಲ್ಲಿ ತನ್ನ ಹೆಜ್ಜೆಯನ್ನು ಮುಂದುವರಿಸಿ ವಿಕ್ರಮಿಸಲಿ ಎಂಬುದೇ ಸುಹೃದರ ಹಾರೈಕೆ.

DSC_0213

ಅಭಿಜ್ಞೆಯ ಪದಪದದಲ್ಲೂ ತನ್ನ ನಿರ್ದುಷ್ಟವಾದ ಛಾಪಿನ ಮೂಲಕ ಉಪಬೃಂಹಿಸುತ್ತಿದ್ದ ಡಾ.ಶೋಭಾ ಶಶಿಕುಮಾರ್ ಅವರಿಗೆ ಹಾರ್ದ ಅಭಿನಂದನೆಗಳು. ಒಬ್ಬ ಶಿಷ್ಯನನ್ನು ತಿದ್ದಿ ತೀಡುವುದರಲ್ಲಿ ಕಲಾಭವಿಷ್ಯವೇ ಅಡಕಗೊಂಡಿರುತ್ತದೆ ಎಂಬುದನ್ನು ಸಾಬೀತುಪಡಿಸಿದ ಗುರುವಿಗೆ ವಂದನೆ.

DSC_0292

ಇಡೀ ಕಾರ್ಯಕ್ರಮದಲ್ಲಿ ಏನೇನೂ ಹೊಂದದೇ ಹೋದದ್ದು, ಪರಮಾಭಾಸ ಎನಿಸಿದ್ದು, ರಂಗದಲ್ಲಿ ಸ್ಥಾಯಿಯಾಗಿ ಪ್ರತಿಷ್ಠಿತವಾಗಿದ್ದ ಲಕ್ಷ್ಮೀನರಸಿಂಹನ ಕಲಾಕೃತಿ ಹಾಗೂ ಸಭಾಧ್ಯಕ್ಷರ ಅನೌಚಿತ್ಯದ/ಕಾಲಗಣನೆಯಿಲ್ಲದ ದೀರ್ಘ ಭಾಷಣಾಲಾಪ. ಒಂದನೇದು ಕಣ್ಣಿಗೆ (ನರಸಿಂಹ ವಿಗ್ರಹದ ಮೇಲೆ ಬೀಳುತ್ತಿದ್ದ ಪ್ರಖರ ಬೆಳಕು) ಎರಡನೇದು ಕಿವಿಗೆ ಹಿತಬಾಧಕವಾಗಿತ್ತು.

DSC_0157

ಅತ್ಯಂತ ಸೊಗಸಾದ, ಸೂಕ್ತವಾದ ಔಚಿತ್ಯಪೂರ್ಣವಾದ, ಮಧುರಮಂಜುಲವಾದ ಹಿಮ್ಮೇಳದಲ್ಲಿ, ಗಾನದಲ್ಲಿ ವಿ| ಬಾಲಸುಬ್ರಹ್ಮಣ್ಯ ಶರ್ಮ, ಕೊಳಲಿನಲ್ಲಿ ವಿ| ಎಚ್.ಎಸ್.ವೇಣುಗೋಪಾಲ್, ವೀಣೆಯಲ್ಲಿ ವಿ| ಶಂಕರ್ ರಾಮನ್, ಮೃದಂಗದಲ್ಲಿ ಶ್ರೀಹರಿ, ಖಂಜೀರ-ರಿದಂಪ್ಯಾಡ್-ಮೋರ್ಸಿಂಗ್‌ನಲ್ಲಿ ವಿ| ಪ್ರಸನ್ನಕುಮಾರ್, ನಟುವಾಂಗದಲ್ಲಿ ಡಾ.ಶೋಭಾ ಶಶಿಕುಮಾರ್ ಪಾಲುಗೊಂಡು ರಂಗಪ್ರವೇಶದ ಅಂತರಂಗದ ಚೆಲುವನ್ನು ಹೆಚ್ಚಿಸಿದರು.DSC_0001

(ಲೇಖಕರು ಕವಿ, ರಂಗನಿರ್ದೇಶಕ, ರೂಪಕ ನಿರ್ದೇಶಕರು, ಅವಧಾನ ಪೃಚ್ಛಕರು)

Leave a Reply

*

code