ಅಂಕಣಗಳು

Subscribe


 

ನೃತ್ಯ ರಂಗದ ರಾಣಿ : ರುಕ್ಮಿಣಿ… ಹೆಜ್ಜೆ : 19

Posted On: Wednesday, August 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಯಾವುದೇ ಕಲೆಗಾದರೂ, ಕಲೆಯೆಡೆಗೆ ಸಾಗುವುದಿದ್ದರೂ ದೇಹವನ್ನು ಶುದ್ಧವಾಗಿಟ್ಟುಕೊಳ್ಳುವುದು ಅಗತ್ಯ, ಯಾರನ್ನೂ ಆಕರ್ಷಿಸುವ, ಕೆರಳಿಸುವ, ಗಮನ ಸೆಳೆಯುವ ಉದ್ದೇಶ ಇಲ್ಲದಿದ್ದರೂ ಆಕೆಯ ನೃತ್ಯ ಮಾದರಿಗಳು ಸದಭಿರುಚಿಯ ಆಕರ್ಷಣೆಯನ್ನು ಜನರಲ್ಲಿ ಉಂಟುಮಾಡುತ್ತಿದ್ದವು. ಹಾಗೆಂದು ಅವರು ಕಲ್ಪಿಸಿದ, ಸಂಯೋಜಿಸಿದ ಅದೆಷ್ಟೋ ನೃತ್ಯಬಂಧಗಳಲ್ಲಿ ವಿಶೇಷವಾದುದೇನೂ ಇರಲಿಲ್ಲ. ಹಾಗಾಗಿ ಆಕೆಯನ್ನು ನರ್ತಕಿ, ಕಲಾವಿದೆಯಾಗಿ ನೋಡುವುದಕ್ಕಿಂತ ವಿವಿಧ ಬಗೆಯ ಸಮಕಾಲೀನ ಪ್ರಯೋಗಗಳಿಗೆ ತೆರೆದುಕೊಂಡು ಭರತನಾಟ್ಯವನ್ನು ಹೊಸದೃಷ್ಟಿಯಿಂದ ನೋಡಲು ಅನುವು ಮಾಡಿದವರು ಎನ್ನುವುದೇ ಸೂಕ್ತ.

ಹಾಗಾಗಿ ಆಕೆಯ ಶಿಷ್ಯೆಯೊಬ್ಬರು ಹೀಗೆ ಹೇಳುತ್ತಾರೆ. ರುಕ್ಮಿಣಿಯ ಪ್ರತಿಪಾದನೆಗಳಲ್ಲಿ ಸಾಕ್ಷಿಭೂತವಾದ ಅಂಶಗಳು ಇರಬೇಕೆಂದೇನಿಲ್ಲ. ಹಾಗಂತ ಅವರು ಬ್ರಾಹ್ಮಣೀಕರಣ ಮಾಡಿದರು ಎಂಬುದು ತಪ್ಪು. ಅವರು ಬೈಬಲ್ ಅಥವಾ ಉಳಿದ ಪವಿತ್ರ ಗಂಥಗಳಿಂದಲೂ ಸಾಹಿತ್ಯವನ್ನು ಬಳಸುತ್ತಿದ್ದರು. ಎಲ್ಲಾ ಬಗೆಯ ಧರ್ಮದ ಪುರಾಣ ಸಾಹಿತ್ಯ ತಿಳಿಯುವಂತೆ ಮಾಡುತ್ತಿದ್ದರು. ದಿನನಿತ್ಯದ ಪ್ರಾರ್ಥನೆಗಳಲ್ಲೂ ವಿಶ್ವ, ಪ್ರಕೃತಿ, ಪಂಚಭೂತ ಎಂದೆಲ್ಲ ಎಲ್ಲ ಮಾದರಿಯ ಒಳಿತನ್ನುದ್ದೇಶಿದ ಸಾರ್ವಕಾಲಿಕ ನಿರೂಪಣೆಗಳೇ ಇರುತ್ತಿತ್ತು. ಹಾಗಾಗಿ ಸೀಮಿತ ಭಾವನೆ, ಯೋಚನೆಗಳು ಇರಲಿಲ್ಲ. ಅವರು ಭರತನಾಟ್ಯಕ್ಕೆ ಸಂಬಂಧಿಸಿದಂತೆ ತಮಿಳು, ತೆಲುಗು ತೀರಾ ಹತ್ತಿರವೆನಿಸಿದರೂ ಭಾಷಾಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದರೂ ಅವರ ಉಡುಗೆ ತೊಡುಗೆಗಳು ಭಾರತವನ್ನು ಪ್ರತಿನಿಧಿಸುತ್ತಿತ್ತೇ ವಿನಾ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ.

ಸಾಮಾನ್ಯವಾಗಿ ಶಿಕ್ಷಕರು ಶಿಸ್ತನ್ನು ತರಗತಿಯಲ್ಲಿ ಅಳವಡಿಸುವುದು ಮಾಮೂಲು. ಆದರೆ ಸ್ವಯಂ ಶಿಸ್ತು ಬೆಳೆಯುವಂತೆ ಮಾಡಿದ್ದು ರುಕ್ಮಿಣಿ ಅವರ ಹಿರಿಮೆ. ಒಪ್ಪ‌ಓರಣ, ಸ್ವಚ್ಛತೆ, ಬಟ್ಟೆಬರೆಗಳಲ್ಲಿ ಶಿಸ್ತು ಅವರಿಗೆ ಪ್ರಿಯ. ಇವುಗಳ ವಿರುದ್ಧ ವರ್ತನೆ ಯಾವಾಗಲೂ ಬೇಸರ ತರಿಸುತ್ತಿತ್ತು. ಎಷ್ಟೆಂದರೆ ಕಾಲ್ಗೆಜ್ಜೆಗಳ ದನಿಯಲ್ಲಿ ಅಪಸ್ವರ ಕೇಳಿದರೂ ಅವರಿಗೆ ಕೋಪ ಉಕ್ಕೇರುತ್ತಿತ್ತು. ಒಮ್ಮೆ ಶಾಂತಾ ಧನಂಜಯನ್ ಅವರ ಕಾಲ್ಗೆಜ್ಜೆಗಳು ಸಡಿಲಗೊಂಡು ನವಿರಾದ ಭಾವದಲ್ಲಿ ಅಪಸ್ವರ ಹೊರಡಿಸಿದ್ದನ್ನು ಅವರೆಂದೂ ಕ್ಷಮಿಸಿಲ್ಲವೆಂದು ನೆನಪಿಸಿಕೊಳ್ಳುತ್ತಾರೆ.

ಕಲಾವಿದೆಯರು ಸೀರೆ ಅಥವಾ ದಾವಣಿಯನ್ನು ಉಡಬೇಕೆಂದು ಅವರ ನಿಯಮ. ಹುಡುಗರಾದರೆ ಧೋತಿ ಅಥವಾ ಕುರ್ತಾ. ಪ್ರವಾಸದಲ್ಲೂ ಇದೇ ನಿಯಮ. ಬಣ್ಣಗಳ ಅಭಿರುಚಿ ಚೆನ್ನಾಗಿತ್ತು. ಜರಿ ಇರದ ಸೀರೆಗಳನ್ನು ಇಷ್ಟಪಡುತ್ತಿರಲಿಲ್ಲ. ಜರಿ ಇಲ್ಲದ ಸೀರೆಗಳನ್ನು ಉಡುವುದಕ್ಕಿಂತ ಪರದೆ ಮಾಡುವುದೇ ವಾಸಿ ಎಂಬುದು ಅವರ ಅನಿಸಿಕೆ. ಚೆನ್ನಾಗಿ ಕಾಣುವುದು ಅಂದರೆ ಅದ್ಧೂರಿಯಾಗಿಯೇ ಇರಬೇಕೆಂದಲ್ಲ. ಆಕರ್ಷಕರಾಗಿ, ಸರಳವಾಗಿರಲೂಬಹುದು. ಸರಿಯಾದ ರೀತಿಯಲ್ಲಿ ಸೀರೆಗಳನ್ನುಟ್ಟು, ಆಭರಣಗಳನ್ನು ತೊಟ್ಟವರಿಗೆ ಮೆಚ್ಚುಗೆಯೂ ಸಿಗುತ್ತಿತ್ತು. ಯಾವತ್ತ್ತಿಗೂ ಕಲಾವಿದರು ವಸ್ತ್ರಭೂಷಣಗಳಿಂದ ಅಲಂಕೃತರಾಗಬೇಕು. ಕೆಲವೊಮ್ಮೆ ತಮ್ಮ ಸೀರೆಗಳನ್ನು ಬೇರೆಯವರಿಗೆ ಉಡಲು ಕೊಡುವವರು. ಯಾರ ಬಳಿಯಾದರೂ ಯಾವುದೇ ವಸ್ತು ಹೆಚ್ಚಿಗೆ ಇದ್ದರೆ ಅದು ಹೊಟ್ಟೆಕಿಚ್ಚಿಗೆ ಕಾರಣವಾಗುತ್ತದೆ. ಹಾಗಾಗಿ ಹಂಚಿ ಬಾಳಬೇಕು ಎಂಬುದು ಅವರ ಅಭಿಪ್ರಾಯ. ಇಂದಿಗೂ ಇಂತಹುದೇ ಮಾದರಿಯ ವಸ್ತ್ರಗಳು ಕಲಾಕ್ಷೇತ್ರದ ಸಮವಸ್ತ್ರಗಳಾಗಿವೆ.

ಯಾವುದೇ ವಿದ್ಯಾರ್ಥಿಯನ್ನು ಅತಿಯೆನಿಸುವ ಹೊಗಳಿಕೆಗಳಿಂದ ಉತ್ತೇಜಿಸಲಿಲ್ಲ. ಕೀರ್ತಿಶನಿಯು ಒಮ್ಮೆಗೆ ಹೆಗಲೇರಿದನೆಂದರೆ ಇಳಿಯುವುದು ಕಷ್ಟ ಎಂಬುದು ಅವರಿಗೆ ಗೊತ್ತಿತ್ತು. ಹಾಗಾಗಿ ಒಂದುವೇಳೆ ಯಾವುದಾದರೂ ವಿಮರ್ಶೆ ಕಲಾವಿದರನ್ನು ಅಟ್ಟಕ್ಕೇರಿಸಿ ಬರೆದುದನ್ನು ಕಂಡರೆ ಅದವರಿಂದ ಬರುತ್ತಿದ್ದ ಪ್ರತಿಕ್ರಿಯೆ ಇನ್ನು ನೀನು ತಪ್ಪೇ ಮಾಡದಿರುವ ಹಂತಕ್ಕೆ ಏರಬೇಕಾಗಿದೆ . ವಿದ್ಯಾರ್ಥಿಯು ಸತತ ಶ್ರಮಕ್ಕೆ ಪೂರ್ಣವಿರಾಮ ಕೊಡಬಾರದೆಂದೂ, ಪರಿಪೂರ್ಣತೆಯೆಡೆಗಿನ ದಾರಿಗೆ ಕೊನೆಯಿಲ್ಲ ಎಂಬುದನ್ನು ಮನವರಿಕೆ ಮಾಡುತ್ತಿದ್ದರು.

ರುಕ್ಮಿಣೀ ಕಾಲಕ್ಕೆ ಸಮಾನತೆ ವ್ಯಾಪಕವಾಗಿ ಕಲಾಕ್ಷೇತ್ರವನ್ನು ಆವರಿಸಿತ್ತು. ಚೆಟ್ಟಿನಾಡಿನ ರಾಜಕುವರಿ ಪ್ರೀತಾ ಕಲಾಕ್ಷೇತ್ರದಲ್ಲಿ ಕಲಿಯುವಾಗ ಯಾವುದೇ ವಿಶೇಷ ಆದರಾತಿಥ್ಯಗಳಿರಲಿಲ್ಲ. ಎಲ್ಲೂ ಸ್ಥಾನಗಳ ವರ್ಗೀಕರಣವಿರಲಿಲ್ಲವಾದ್ದರಿಂದ ಎಲ್ಲರಂತೆ ಪ್ರೀತಾ ಅವರೂ ಕಲಿತರು. ಪ್ರವಾಸದಲ್ಲಿದ್ದಾಗಲೂ ಹಿರಿಯ ವಿದ್ಯಾರ್ಥಿಗಳು ಅಡುಗೆಯಂತಹ ಕೆಲಸಗಳಲ್ಲಿ ತೊಡಗಿ ಸರಳ ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಎಂದೂ ಬಾಯಲ್ಲಿ ಹೇಳದೆಯೇ ಜೀವನಶೈಲಿಯಲ್ಲಿ ಸರಳತೆ ಒಂದಾಗಿದ್ದ ಕಾಲವದು.

ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು ಎಂಬ ಸೇಡಿನ ಗುಣ ಅವರದ್ದಲ್ಲ. ಬದಲಾಗಿ ಯಾವುದೇ ಕಾರಣಕ್ಕೂ ಯಾರ ಮೇಲೂ ಮರುಹೋರಾಟ ಮಾಡುವ ಯೋಚನೆ ಮಾಡಿ ಮನಸ್ಸು ಕೆಡಿಸಿಕೊಳ್ಳಬೇಡಿ. ಅವರನ್ನು ಒಂಟಿಯಾಗಿ ಬಿಟ್ಟುಬಿಡಿ ಅಷ್ಟೇ ! ಸಮಯ ಕಳೆದಂತೆ ಅವರು ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡ ಗೌರವವೇ ಹೆಚ್ಚೆಂದು ಅರಿವಾಗುತ್ತದೆ ಎನ್ನುತ್ತಿದ್ದ ರುಕ್ಮಿಣೀ ತಾವಾಗೇ ಯಾರ ಗೌರವದ ಪ್ರಶ್ನೆಗೂ ತೊಡಕಾಗಿರಲಿಲ್ಲ. ರುಕ್ಮಿಣಿಯವರಿಗೆ ಅಡ್ಡಿ ಮಾಡಿದವರನ್ನೂ ಹೀಗೆಯೇ ನಡೆಸಿಕೊಳ್ಳುವವರು. ಹಿಡಿಸಲಿಲ್ಲವೆಂದರೆ ಕೇವಲ ತಣ್ಣಗಿನ ಪ್ರತಿಕ್ರಿಯೆ. ಎಷ್ಟೋ ಬಾರಿ ಸುತ್ತಮುತ್ತಲಿನವರು ಇದರಿಂದಲೇ ಪಾಠ ಕಲಿತು ಸುಧಾರಿಸಿದ್ದೂ ಉಂಟು.

ಅವರ ಸೇವೆ ಕಲೆಗೆ ಮಾತ್ರ ಸೀಮಿತವಾಗಿರಲಿಲ್ಲ. ಆಂತರಿಕವಾಗಿಯೂ ಶುದ್ಧತೆಯ ಪ್ರತಿರೂಪ ರುಕ್ಮಿಣೀದೇವಿ. ಮದುವೆಯಾದದ್ದು ವಿದೇಶಿಯನನ್ನೇ ಆದರೂ ಭಾರತೀಯತೆ ಕಣಕಣಗಳಲ್ಲೂ ಹಾಸುಹೊಕ್ಕಾಗಿತ್ತು. ಈ ನೆಲದ ಪ್ರತಿ ಅಣುವಿನಲ್ಲೂ ಆಧ್ಯಾತ್ಮದ, ಅವರ್ಣನೀಯ ಅನುಭವದ ಚಟುವಟಿಕೆಯಿದೆ. ಒಳ್ಳೆಯ ಗುಣಗಳಿದ್ದಲ್ಲಿ ಅದನ್ನು ಕಲಿಯಿರಿ. ಆದರೆ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಮಾತ್ರ ಕೈ ಬಿಡಬೇಡಿ ಎನ್ನುತ್ತಿದ್ದರು.

ಎಂಥದೇ ಒತ್ತಡಗಳಿದ್ದರೂ ೧೯೨೦ರಿಂದ ೧೯೮೬ರ ವರೆಗೂ ಥಿಯೋಸೋಫಿಕಲ್ ಸೊಸ್ಶೆಟಿಯಲ್ಲಿ ಅವರ ಸೇವೆ ಸ್ಮರಣೀಯ. ಅವರು ಥಿಯೋಸೋಫಿಕಲ್ ಸಂಸ್ಥೆಯಿಂದ ಬೇರಾದರೂ ನಿಜವಾದ ಅರ್ಥದಲ್ಲಿ ಥಿಯೋಸೊಫಿಸ್ಟ್. ವಿಪರ್ಯಾಸವೆಂದರೆ ಥಿಯೋಸೋಫಿಸ್ಟ್ ಎಂದಾಕ್ಷಣ ಈ ಪದವನ್ನು ಸೊಸೈಟಿಯೊಂದಿಗೆ ತಳುಕು ಹಾಕಲಾಗುತ್ತದೆ. ಥಿಯೋಸೊಫಿ ಎಂದರೆ ದಿವ್ಯಜ್ಞಾನ. ಹಾಗಾಗಿ ವ್ಯಕ್ತಿಯ ಜೀವತಾವಧಿಯ ಯಾತ್ರೆ ದಿವ್ಯಜ್ಞಾನದೆಡೆಗೆ ಸಾಗುವುದು ; ಪ್ರಭೆಗೆ ತಕ್ಕಂತೆ ಬದುಕುವುದು ಗುರಿ ಮತ್ತು ಅದರ ನೀತಿ ನಿಯಮ ಎನ್ನುತ್ತಾರೆ ರಾಧಾ ಬರ್ನೀಯರ್.

ಅವರಿಗೆ ಜೀವನದ ಪ್ರತೀ ಹಂತವನ್ನೂ ರಸಾನುಭವದಿಂದ, ತೃಪ್ತಿಯಿಂದ ಬದುಕುವುದು ಇಷ್ಟ. ಅದಕ್ಕೆ ಪೂರಕವಾಗಿ ಪ್ರಾಣಿ ದಯೆ ಅವರ ಪಾಲಿಗಿತ್ತು. ಥಿಯೋಸೋಫಿ, ಸಸ್ಯಹಾರಿ ಚಳುವಳಿ, ಕಲೆ ಮತ್ತು ಪ್ರಾಣಿದಯೆ ಅವರ ೪ ದಿಕ್ಕುಗಳು. ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷೆಯಾಗಿ ಚಳುವಳಿಗೆ ವೈಜ್ಞಾನಿಕ ಸ್ಪರ್ಶವನ್ನಿತ್ತವರು ರುಕ್ಮಿಣಿ. ಹಲವು ಪ್ರಾಣಿ ದಯೆಯುಳ್ಳ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ೧೯೫೫ರಿಂದ ೧೯೮೬ರ ತಮ್ಮ ಕೊನೆಗಾಲದ ವರೆಗೂ ಅಂದರೆ ಬರೋಬ್ಬರಿ ೩೧ ವರ್ಷಗಳ ಕಾಲ ತನು-ಮನ-ಧನ ದುಡಿದದ್ದು ಅವರು ಅಂತರ್ರಾಷ್ಟ್ರೀಯ ಸಸ್ಯಾಹಾರಿಗಳ ಕೂಟದ ಉಪಾಧ್ಯಕ್ಷೆಯಾಗಿ ! ಇದನ್ನರಿತ ಪ್ರಧಾನಿ ನೆಹರು ರಾಜ್ಯ ಸಭೆಗೆ ನಾಮಕರಣ ಮಾಡಿದರು. ೧೯೬೨ರಲ್ಲಿ ಪ್ರಾಣಿ ಸಂರಕ್ಷಣಾ ಸಮಿತಿಯ ಪ್ರಧಾನಾಧ್ಯಕ್ಷೆಯಾಗಿ ಆಯ್ಕೆಯಾದರು. ಜೊತೆಗೆ ೧೯೬೦ರಲ್ಲಿ ಜಾರಿಗೆ ಬಂದ ಪ್ರಾಣಿಹಿಂಸೆ ತಡೆ ಮಸೂದೆಯ ನೇತಾರರೂ ಇವರೇ !

(ಸಶೇಷ)


Leave a Reply

*

code