ಅಂಕಣಗಳು

Subscribe


 

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ – ಭಾಗ 14

Posted On: Thursday, April 14th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಬಾಲಾ ಸರಸ್ವತಿ ಮತ್ತು ರುಕ್ಮಿಣಿ ಅವರ ನಡುವಿನಲ್ಲಿ ಸಾಕಷ್ಟು ಬೌದ್ಧಿಕ ಸಂಘರ್ಷಗಳಿತ್ತು ಎಂಬುದು ಜನಜನಿತ ಅನಿಸಿಕೆ. ಆದರೆ ರುಕ್ಮಿಣೀ ಎಂದಿಗೂ ಬಾಲಸರಸ್ವತಿ ಅವರನ್ನು ತೆಗಳುವ ಗೋಜಿಗೆ ಹೋಗಲೇ ಇಲ್ಲ. ಬದಲಾಗಿ ಅವರ ಮಾರ್ಗವನ್ನು ಪ್ರಶಂಸಿಸುತ್ತಲೇ ತಮಗೆ ಆ ಶೈಲಿ ಒಗ್ಗುವುದಿಲ್ಲ ಎಂದು ಒಪ್ಪಿಕೊಂಡಿದ್ದರು.

ರಂಗದ ಮೇಲೆ ಮತ್ತು ಜೀವನದಲ್ಲಿ ಪುರುಷ ಮತ್ತು ಸ್ತ್ರೀಯರು ಧರಿಸುವ ಬಟ್ಟೆಗಳಿಂದಲೇ ಅವರ ಕಲಾದೃಷ್ಟಿ, ಅಭಿರುಚಿಯನ್ನು ಅಳೆಯಬಹುದು ಎನ್ನುತ್ತಿದ್ದ ರುಕ್ಮಿಣಿಯವರ ಸರಳ ನಡೆನುಡಿಯ ದ್ಯೋತಕವಾಗಿ ಕಲಾಕ್ಷೇತ್ರ ಸೀರೆಗಳು ಅಭಿರುಚಿಯನ್ನು ವೃದ್ಧಿಸಿತು. ರೇಶ್ಮೆ ಮತ್ತು ಹತ್ತಿಯ ಬಟ್ಟೆಗಳನ್ನು ಖರೀದಿಸಿ ಗಾಢ, ಹೊಳೆಯುವ, ಕಣ್ಣು ಕುಕ್ಕುವ ಬಣ್ಣಗಳ ಉಪಯೋಗ ಮಾಡದೆ ಉತ್ತಮ ಗುಣಮಟ್ಟದಿಂದ ಸೀರೆ ತಯಾರಿಸುತ್ತಿದ್ದರು. ಒಂದಾನೊಂದು ಕಾಲದ ಸ್ತ್ರೀಯರ ಉತ್ತಮ ಅಭಿರುಚಿಗೆ ಸಾಕ್ಷಿಯಾದ ಈ ಸೀರೆಗಳನ್ನು ಇವತ್ತಿಗೂ ಕಾಪಿಡಲಾಗಿದೆ.

ಅಂತೆಯೇ ಆಭರಣವನ್ನು ಅವರೆಂದೂ ಕರಕೌಶಲ್ಯವೆಂದೋ, ಮುತ್ತು ರತ್ನಗಳ ಬೆಲೆಬಾಳುವ ವಸ್ತುವೆಂದೋ ನೋಡಲಿಲ್ಲ. ಬದಲಾಗಿ ಒಟ್ಟು ರಸಾನುಭವಕ್ಕೆ ಕೊಡುಗೆ ನೀಡುವ ಕಲೆಯಾಗಿ ಕಂಡರು. ಆಭರಣಗಳನ್ನೂ ಅಲ್ಲಿ ವಿನ್ಯಾಸ ಮಾಡಲಾಗುತ್ತಿತ್ತು. ಸೌಂದರ್ಯ ಮತ್ತು ಮೌಲ್ಯಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಅವರು ಸಂಗ್ರಹಿಸಿದ ಆಭರಣಗಳು ಅವರ ನಿಧನದ ನಂತರ ಉದಾಹರಣೆಗೂ ಸಿಕ್ಕದೆ ಕಣ್ಮರೆಯಾಗಿವೆ.

ಕೆಲವು ನಟ್ಟುವನ್ನಾರ್‌ಗಳನ್ನು ದೂರವಿಡುವ ಮೂಲಕ ಮಧ್ಯಮ ವರ್ಗೀಯ, ಶ್ರೀಮಂತ ವರ್ಗದ ಮಹಿಳೆಯರನ್ನು ನಟ್ಟುವನ್ನಾರ್‌ಗಳಾಗಿ, ಕಲಾವಿದರಾಗಿ ಬೆಳೆಸುವಲ್ಲಿ ಶ್ರಮಿಸಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಸುಮ್ಮನೆಯೇ? ಹಾಗೆಂದು ಇಂತಹ ನೃತ್ಯಾದಿ ಕಲೆಗಳನ್ನು ಕಲಿಯಲು ಕೆಲವೊಂದು ಜಾತಿ-ವರ್ಗದಲ್ಲೇ ಹುಟ್ಟಿರಬೇಕು ಎಂಬ ನಿಲುವನ್ನು ಖಂಡಿಸುತ್ತಾ ಸಾರ್ವಕಾಲಿಕ ಧೋರಣೆಯನ್ನು ತಂದರು. ಇದರಿಂದಾಗಿ ಹೇರಳವಾಗಿ ಕಲಾವಿದರು ನೃತ್ಯ ಕಲಿಯುವಂತಾಯಿತು. ಇಂತಹ ಪರಿಸ್ಥಿತಿಯಿಂದಾಗಿ ಶ್ರೀಲಂಕಾದ ತಮಿಳು ಮಹಿಳೆಯರು ಭರತನಾಟ್ಯದತ್ತ ಆಕರ್ಷಿತರಾದರು.

ಕೌಟುಂಬಿಕವಾಗಿ ಮಹಿಳೆಗೆ ಕೊಡಬೇಕಾದ ಗೌರವದ ಕಡೆಗೆ ರುಕ್ಮಿಣಿ ಅವರ ಗಮನವಿತ್ತು. ಹಾಗಾಗಿ ಸಾಂಪ್ರದಾಯಿಕ ಕೌಟುಂಬಿಕ ರೀತಿರಿವಾಜುಗಳ ತದ್ವಿರುದ್ಧವೆಂಬಂತೆ ತಮ್ಮ ಎಲ್ಲಾ ರೂಪಕಗಳಲ್ಲೂ ಅವರು ಸಾರ್ವಜನಿಕವಾಗಿ ಹೆಚ್ಚು ಪರಿಣಾಮಕಾರಿಯಾದ ಪಾತ್ರಗಳನ್ನೇ ಆಯ್ದುಕೊಂಡರು. ಇದು ರಾಷ್ಟೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಹೆಣ್ಣಿಗೂ ಜವಾಬ್ದಾರಿಯುತ ಸ್ಥಾನವಿದೆ ಎಂಬ ರಾಷ್ಟೀಯತೆಯ ಕಲ್ಪನೆಗೂ ಮಹಿಳೆಯ ಪಾತ್ರದ ಬಗ್ಗೆ ಸ್ಪಷ್ಟವಾಗುವಲ್ಲಿ ಸಹಾಯ ಮಾಡಿತ್ತು.

ಹಾಗಾಗಿ ಅದೆಷ್ಟೋ ಮಧ್ಯಮ ವರ್ಗದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಕಟ್ಟುಪಾಡು, ಕೌಟುಂಬಿಕ ಬದ್ಧತೆಯ ಜೊತೆಯಲ್ಲಿಯೇ ನೃತ್ಯವನ್ನೂ ಅತ್ಯಪೂರ್ಣ ಗೌರವದಿಂದ ಸ್ವೀಕರಿಸಿ ಕಲಿಯಲು ಪ್ರಾರಂಭಿಸಿ ತಮ್ಮ ಅಭಿವ್ಯಕ್ತಿಯ ಸಾಧನವಾಗಿಸಿಕೊಂಡರು. ಈ ಮೂಲಕ ರಾಷ್ಟೀಯ ಪ್ರತಿನಿಧಿಯೆಂಬಂತೆ ಪ್ರತಿನಿಧಿಗಳಾಗುತ್ತಾ ಬಂದರು. ಹೀಗೆ ತಮ್ಮ ಶಿಷ್ಯಂದಿರ ಪೈಕಿ ಮಹಿಳೆಯರಿಗೆ ನೃತ್ಯದ ಪಾತ್ರಗಳಲಷ್ಟೇ ಪ್ರಧಾನ ಪಾತ್ರ ನೀಡದೆ ಅವರ ಸ್ವ-ಪ್ರಾತಿನಿಧ್ಯಕ್ಕೂ, ಸ್ವಾವಲಂಬಿತನಕ್ಕೂ ಇಂಬು ಕೊಟ್ಟರು. ಅದಾಗಲೇ ಇಂತಹ ಮನೋಧರ್ಮ ದೇವದಾಸಿ ಪದ್ಧತಿಯಲ್ಲಿ ನಶಿಸಿಹೋಗಿತ್ತು. ಹಾಗಾಗಿ ಅವರ ಸ್ಪರ್ಶ ಶೈಕ್ಷಣಿಕವಾಗಿಯೂ, ಮಾಹಿತಿದಾಯಕವಾಗಿಯೂ, ಸದೃಢವಾಗಿಯೂ ಸ್ಥಾನವನ್ನು ಕೊಟ್ಟಿತ್ತು. ಅಂತೆಯೇ ಪುರುಷರನ್ನು ಸಮಾನವಾಗಿ ತರಬೇತಿಗೊಳಿಸುತ್ತಾ ಕೊರಿಯೋಗ್ರಫಿ, ಪ್ರದರ್ಶನ ಮತ್ತು ನಿರ್ದೇಶನ ನೀಡುವಲ್ಲಿ ಸಮೃದ್ಧರನ್ನಾಗಿಸಿದರು.

ತಮಿಳಿನ ಶ್ರೇಷ್ಠ ಪಂಡಿತರೆನಿಸಿದ್ದ ಮಹಾಮಹೋಪಾಧ್ಯಾಯ ಡಾ.ಯು.ವಿ. ಸ್ವಾಮಿನಾಥ ಅಯ್ಯರ್ ದಕ್ಷಿಣ ಭಾರತದಾದ್ಯಂತ ಪ್ರವಾಸ ಕೈಗೊಂಡ ಅಂದಿನ ಕಾಲದ ಬಹುದೊಡ್ಡ ವಾಗ್ಮಿ. ಸಂಗಮ ವಂಶದ ಕಾಲದಿಂದಲೂ ಹಲವು ದಾಖಲೆಗಳು ಅಯ್ಯರ್ ಅವರ ಬಳಿಯಿದ್ದವು. ಅದಾಗಲೇ ರುಕ್ಮಿಣಿಗೆ ಒಂದಷ್ಟು ತಮಿಳು ಗ್ರಂಥ, ಓಲೆಗರಿಗಳನ್ನು ಕಾಣಿಕೆಯಾಗಿ ಪಡೆದಿದ್ದರು. ಜೊತೆಗೆ ಅವುಗಳ ಪೈಕಿ ಕೆಲವೊಂದು ಸಾಹಿತ್ಯಗಳನ್ನು ಕಲಾಕ್ಷೇತ್ರದ ಶೈಕ್ಷಣಿಕ ಪ್ರಕಟಣೆಯ ಸಲುವಾಗಿ ಭಾಷಾಂತರಿಸಲು ಮತ್ತು ಮುದ್ರಿಸಲು ರುಕ್ಮಿಣಿ ಮೊದಲ್ಗೊಂಡರು. ಹಾಗಾಗಿ ೧೯೪೩ರಲ್ಲಿ ಗ್ರಂಥಾಲಯ ಜನ್ಮ ತಾಳಿದಾಗ ಅಯ್ಯರ್ ಅವರಿಂದ ಪಡೆದ ಅದೆಷ್ಟೋ ಗ್ರಂಥಗಳನ್ನು ರುಕ್ಮಿಣಿ ಈ ಗ್ರಂಥಾಲಯಕ್ಕೆ ಕೊಡುಗೆ ನೀಡಿ ಅಯ್ಯರ್ ಅವರ ಹೆಸರನ್ನೇ ಸ್ಮರಣಾರ್ಥವಾಗಿ ಇರಿಸಿದರು !

೧೯೪೪ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದೊಂದಿಗೆ ಕಲಾಕ್ಷೇತ್ರದ ಸಂಗೀತದ ಡಿಪ್ಲೋಮಾ ಕೋರ್ಸ್ ಅಫಿಲಿಯೇಟ್ ಆಯಿತು. ಮುಂದಿನ ೧ಂ ವರ್ಷಗಳ ಅವಧಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೂ ಸಂಗೀತ, ಚಿತ್ರಕಲೆ ಮತ್ತು ನೃತ್ಯದಲ್ಲಿ ಅರೆಕಾಲಿಕ ಕೋರ್ಸ್, ಪೋಸ್ಟ್ ಡಿಪ್ಲೋಮಾ ಕೋರ್ಸ್‌ಗಳು ಪ್ರಾರಂಭವಾದವು. ೧೯೫ಂರ ಹೊತ್ತಿಗೆ ಭಾರತದೆಲ್ಲೆಡೆಯಿಂದಷ್ಟೇ ಅಲ್ಲದೆ ; ಟಿಬೆಟ್, ನೇಪಾಳ, ಭೂತಾನ್, ಮಲೇಷ್ಯಾ, ಶ್ರೀಲಂಕಾ, ಸಿಂಗಾಪುರ್, ಇಂಡೋನೇಷ್ಯಾ, ಯೂರೋಪ್, ಆಸ್ಟ್ರೇಲಿಯಾ, ಅಮೆರಿಕಾದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅಪೇಕ್ಷಿಗಳಾಗಿ ಕಾಲಿಡಲು ಸಾಧ್ಯವಾಯಿತು. ನಾರಾಯಣ ಮೆನನ್ ಹೇಳುವಂತೆ ಎಲ್ಲಿ ಸಾಹಿತ್ಯ, ಕಲೆ, ತತ್ವಶಾಸ್ತ್ರ, ವಿಜ್ಞಾನ ಒಂದಕ್ಕೊಂದು ಸೇರಿಕೊಳ್ಳುವುದೋ ಅಲ್ಲಿ ಕಲೆಯ ಅರಳುವಿಕೆ ಸಾಧ್ಯ.

(ಸಶೇಷ..)

Leave a Reply

*

code