ಅಂಕಣಗಳು

Subscribe


 

ಶೇಣಿಯೆಂದರೆ ವಾಲಿಯ ಹಾಗೆ!

Posted On: Monday, June 8th, 2009
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

sheniಕ್ಷರಂಗದಲ್ಲಿ ಒಂದು ಸಂಚಲನ ಮೂಡಿಸುವ ಹೆಸರೆಂದರೆ ಅದು ಶೇಣಿ ಗೋಪಾಲಕೃಷ್ಣ ಭಟ್. ಶೇಣಿಯವರು ರಂಗದಲ್ಲಿದ್ದ ಕಾಲವನ್ನು ‘ಶೇಣಿ ಯುಗ’ವೆಂದೇ ಕರೆಯುವುದಿದೆ. ಆಗೆಲ್ಲಾ ಜನ ತಾಳಮದ್ದಳೆಗಳಿಗೆ ಹೋಗುತ್ತಿದ್ದುದೇ ಶೇಣಿಯವರ ಅರ್ಥವೈಭವಕ್ಕಾಗಿ. ಅಷ್ಟರಮಟ್ಟಿಗೆ ಶೇಣಿ ಯಕ್ಷರಂಗವನ್ನು ಆವರಿಸಿದ್ದರು. ಕಲಾಸಕ್ತರು ಅವರ ಅರ್ಥ ಕೇಳುವುದಕ್ಕಿಂತ ಹೆಚ್ಚಾಗಿ ಅನುಭವಿಸುತ್ತಿದ್ದರೆಂದರೆ ತಪ್ಪಲ್ಲ.
ಶೇಣಿಯವರ ವಿಶೇಷವೆಂದರೆ ಅವರ ಅರ್ಥಗಳಲ್ಲಿ ಒಂದು ಹೊಸ ನೋಟ ಜನರಿಗೆ ಸಿಗುತ್ತಿತ್ತು. ಒಂದು ಪಾತ್ರಕ್ಕೆ ಅದರಲ್ಲೂ ಮುಖ್ಯವಾಗಿ ಖಳಪಾತ್ರಕ್ಕೆ ಹೀಗೂ ಒಂದು ಆಯಾಮ ಕಲ್ಪಿಸಬಹುದು ಅಥವಾ ಈ ರೀತಿಯೂ ಆ ಪಾತ್ರವನ್ನು ಚಿತ್ರಿಸಬಹುದು ಅಂತ ಹೊಸ ರೀತಿಯಲ್ಲಿ ಆ ಪಾತ್ರವನ್ನು ರಂಗ ಸಾಕ್ಷಾತ್ಕಾರಗೊಳಿಸುತ್ತಿದ್ದರು ಶೇಣಿ. ಅವರಲ್ಲಿ ಅಗಾಧವಾದ ಓದು, ಅನುಭವಗಳೆರಡೂ ಇದ್ದವು. ಅವರು ಯಾವುದೇ ಪಾತ್ರಕ್ಕೆ ಕೂರಲಿ ಅಥವ ಕುಣಿಯಲಿ ಆ ಪಾತ್ರದ ಸಂಪೂರ್ಣ ಕಥೆ ಅವರಿಗೆ ಗೊತ್ತಿರುತ್ತಿತ್ತು. ವಿಶೇಷವೆಂದರೆ ಎದುರು ಪಾತ್ರದ ಸಂಪೂರ್ಣ ವಿಷಯವೂ ಅವರಿಗೆ ಗೊತ್ತಿರುತ್ತಿತ್ತು! ಆದ್ದರಿಂದಲೇ ಶೇಣಿ ಗತಿಸಿದಾಗ ‘ಯಕ್ಷರಂಗ ಬರಡಾಯಿತು’ ಎಂಬ ಉದ್ಘಾರ ಕೇಳಿಬಂದದ್ದು.
ಆ ದಿನಗಳಲ್ಲಿ ಶೇಣಿಯವರನ್ನು ಅರ್ಥಗಾರಿಕೆಯಲ್ಲಿ ಮಣಿಸುವುದು ಆಗದೇ ಇದ್ದ ಮಾತು. ಈಗಾಗಲೇ ಹೇಳಿದಂತೆ ತನ್ನ ಹಾಗೂ ಎದುರು ಪಾತ್ರಗಳೆರಡರ ವಿಚಾರಗಳೂ ಅವರಿಗೆ ಸಂಪೂರ್ಣವಾಗಿ ತಿಳಿದಿರುತ್ತಿದ್ದುದರಿಂದ ಯಾವುದಾದರೂ ಒಂದು ಎಳೆಯ ಮೂಲಕ ಅವರು ಎದುರಾಳಿಯನ್ನು ಕಟ್ಟಿ ಹಾಕುತ್ತಿದ್ದರು. ಆದ್ದರಿಂದಲೇ ಅವರ ಮುಂದೆ ಅರ್ಥಕ್ಕೆ ಕೂರಲು ಅನೇಕ ಮಂದಿ ಹಿಂದೆ ಸರಿಯುತ್ತಿದ್ದುದುಂಟು. ಶೇಣಿಯೆಂದರೆ ವಾಲಿಯ ಹಾಗೆ. ಅವರ ಎದುರು ಕೂತ ತಕ್ಷಣ ಎದುರು ಅರ್ಥಧಾರಿ ತನ್ನ ಅರ್ಧ ಬಲ ಕಳೆದುಕೊಳ್ಳುತ್ತಾನೆ ಅಂತ ಕೆಲವು ಯಕ್ಷಪ್ರೇಮಿಗಳು ತಮಾಷೆಯಾಗಿ ಹೇಳುವುದಿದೆ. ಅದು ವಾಸ್ತವವೂ ಆಗಿತ್ತು.
ಅವರ ಇನ್ನೊಂದು ವಿಶೇಷತೆಯೆಂದರೆ ಖಳ ಪಾತ್ರವನ್ನೂ ಉತ್ತಮ ರೀತಿಯಲ್ಲಿ ಚಿತ್ರಿಸುತ್ತಿದ್ದುದು. ಶೇಣಿಯವರು ರಾವಣನಾಗಿ ಅರ್ಥ ಹೇಳುತ್ತಿದ್ದರೆ ಜನ ‘ಹೌದು, ರಾವಣ ಅಂಥದ್ದೇನು ತಪ್ಪು ಮಾಡಿದ್ದಾನೆ?’ ಅಂತ ಮಾತಾಡಿಕೊಳ್ಳುತ್ತಿದ್ದರು. ಕೌರವ ಮಾಡಿದರೆ ‘ಅವ ಪಾಂಡವರಿಗೆ ರಾಜ್ಯ ಕೊಡದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ’ ಅಂತನ್ನುತ್ತಿದ್ದರು. ಇದೇ ಶೇಣಿ ರಾಮ ಮಾಡಿದರೆ ರಾವಣ ಅತ್ಯಂತ ಕೆಟ್ಟವ ಅನ್ನುವ ರೀತಿಯಲ್ಲಿ ಹೇಳಿ ಸಾಧಿಸುತ್ತಿದ್ದರು, ಭೀಮನಾಗಿ ಅರ್ಥ ಶುರುವಿಟ್ಟುಕೊಂಡರೆ ದುರ್ಯೋಧನನಷ್ಟು ಕೆಟ್ಟವನೇ ಈ ಜಗತ್ತಿನಲ್ಲಿಲ್ಲ ಅನ್ನುವ ಹಾಗೆ ಮಾಡಿಬಿಡುತ್ತಿದ್ದರು. ಇದು ಶೇಣಿಯವರ ತಾಕತ್ತೇ ಸರಿ. ಈ ಒಂದು ವಿಶಿಷ್ಟ ಕಲೆಯೇ ಅವರ ಹೆಚ್ಚುಗಾರಿಕೆಯಾಗಿತ್ತು. shenibhat
ಅವರ ಕೃಷ್ಣಸಂಧಾನದ ಕೌರವನ ಅರ್ಥ ಕೇಳಬೇಕು. ಅವರ ವಾದ ಸರಣಿ ಹೇಗಿರುತ್ತಿತ್ತೆಂದರೆ…
ಕೃಷ್ಣಾ ನೀನು ಭಗವಂತ ತಾನೇ?, ಅಣುರೇಣುತೃಣಕಾಷ್ಟಗಳಲ್ಲಿ ನೀನಿದ್ದಿ ಅಲ್ಲವೇ?, ನೀನು ಮನಸು ಮಾಡದೆ ಹುಲ್ಲುಕಡ್ಡಿಯೂ ಅಲುಗಾಡದಷ್ಟೇ? ಇದೆಲ್ಲಾ ಹೌದು ಅಂತಾದರೆ, ನೀನು ಭಗವಂತನೇ ಎಂಬುದು ನಿಜವಾದರೆ ಸಮರಕ್ಕೆ ಸಿದ್ಧವಾಗಿ ಕೂತ ನನ್ನ ಮನಸ್ಸನ್ನು ಸಂಗ್ರಾಮದಿಂದ ಸಂಧಾನದೆಡೆಗೆ ತಿರುಗಿಸು ನೋಡೋಣ? ಶೇಣಿ ಕೌರವ ಈ ರೀತಿ ಹೂಂಕರಿಸುತ್ತಿದ್ದರೆ ಬಡ ಭಗವಂತ ನೀರಾಗುತ್ತಿದ್ದ!
ಗದಾಯುದ್ಧದ ದುರ್ಯೋಧನ ಅವರ ಇಷ್ಟದ ಪಾತ್ರಗಳಲ್ಲೊಂದಾಗಿತ್ತು. ಅಲ್ಲಿಯ ಗಮ್ಮತ್ತು ಕೇಳಬೇಕು. ನೀರಿನಲ್ಲಿ ಮುಳುಗಿರುವ ಕೌರವನನ್ನುದ್ದೇಶಿಸಿ ಭೀಮ ಎಲಾ ಕುರುಕುಲ ಕುನ್ನಿಯೇ…. ಬಾ ಮೇಲೆ ಬಾ, ತಾಕತ್ತಿದ್ದರೆ ಈಗ ದ್ರೌಪದಿಯ ಸೀರೆಗೆ ಕೈ ಹಾಕು…. ಎಂದೆಲ್ಲಾ ಅಬ್ಬರಿಸುತ್ತಾನೆ. ಮೇಲೆ ಬಂದ ನಂತರ ಶೇಣಿ ಹೇಳುವುದು ಭಲೇ ಸೊಗಸು. ಅವರೆನ್ನುತ್ತಾರೆ ದ್ರೌಪದಿಯ ಸೀರೆಗೆ ಕೈ ಹಾಕುವುದಕ್ಕೆ ಅವಳೇನು ಇಲ್ಲಿ ಉಟ್ಟುಕೊಂಡು ಬಂದಿದ್ದಾಳಾ? ಅವಳ ಸೀರೆಗೆ ಈವತ್ತೂ ಕೈಯಿಟ್ಟೇನು, ಯಾವತ್ತೂ ಕೈಯಿಟ್ಟೇನು, ಆವತ್ತು ಇವರಿಂದ ಏನೂ ಮಾಡುವುದಕ್ಕಾಗಿಲ್ಲವಲ್ಲ, ಅಬದ್ಧಂ ಪಟಿತ್ವ ಕುಚೋದ್ಯಂ ಕರೋತಿ
ಹೀಗೆ ತಾನು ಯಾವುದೇ ಪಾತ್ರಕ್ಕೆ ಕೂರಲಿ ಅಲ್ಲೊಂದು ವೈಭವವನ್ನು ಸಾರುತ್ತಿದ್ದ ಶೇಣಿಯವರು ತೆಂಕು, ಬಡಗೆಂಬ ತಿಟ್ಟು ಲೆಕ್ಕಾಚಾರಗಳೆರಡನ್ನೂ ಮೀರಿ ನಿಂತ ಕಲಾವಿದ, ಪ್ರತಿಭಾ ರಾಶಿ. ನಿಜಕ್ಕೂ ಶೇಣಿಯವರ ಅನುಪಸ್ಥಿತಿ ಈಗ ಢಾಳಾಗಿ ಕಾಣಿಸುತ್ತಿದೆ. ಶೇಣಿಯವರನ್ನು ಒಂದಷ್ಟು ಬಾರಿ ಮಾತ್ರ ಕೇಳಿದ ಈಗಿನ ತಲೆಮಾರಿನವರಿಗಂತೂ ಶೇಣಿಯವರನ್ನು ಹೆಚ್ಚಾಗಿ ಕೇಳಿಸಿಕೊಳ್ಳುವ ಭಾಗ್ಯವಿಲ್ಲದಾಯಿತಲ್ಲಾ ಎಂಬ ಕೊರಗು ಕಾಡುತ್ತಲೇ ಇರುತ್ತದೆ.
ಹಾಂ, ಶೇಣಿ ಗೋಪಾಲಕೃಷ್ಣ ಭಟ್ಟರ ಕುರಿತು ಇನ್ನೂ ಸಾಕಷ್ಟು ವಿಷಯಗಳಿವೆ. ಅದಕ್ಕಿಂತ ಹೆಚ್ಚಾಗಿ ಸ್ವಾರಸ್ಯದ ಸಂಗತಿಗಳಿವೆ. ಅವುಗಳನ್ನೆಲ್ಲಾ ಮುಂದೊಮ್ಮೆ ಹೇಳಿಯೇನು ಬಿಡಿ.

Leave a Reply

*

code