ಅಂಕಣಗಳು

Subscribe


 

ನೂತನ ಏಕವ್ಯಕ್ತಿ ಯಕ್ಷ-ಭರತ ಸಂಗಮ ಸೈರಂಧ್ರಿಯ ಸೊಗಸು

Posted On: Saturday, June 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಡಾ| ಆನಂದರಾಮ ಉಪಾಧ್ಯ, ಬೆಂಗಳೂರು

ಕನ್ನಡ ಸಾಹಿತ್ಯದ ವೈವಿಧ್ಯಮಯ ಪ್ರಕಾರಗಳಲ್ಲಿ ಒಂದಾದ ಹಾಡುಗಬ್ಬವೇ ಯಕ್ಷಗಾನದ ಉಗಮಕ್ಕೆ ಕಾರಣವಾಗಿರಬೇಕೆಂಬ ವಾದ ಪ್ರಚಲಿತವಿದೆ. ಈ ವಾದಕ್ಕೆ ಪೂರಕವೋ ಎಂಬಂತೆ ಈಚೆಗೆ ನಡೆದದ್ದು ’ಸಮೂಹ, ಉಡುಪಿ’ ಯವರ ಒಂದು ಪ್ರಯೋಗ “ಸೈರಂಧ್ರಿ”. ಅಸಾಮಾನ್ಯ ಪ್ರತಿಭೆಯ ಅಷ್ಟೇ ವೈವಿಧ್ಯಮಯ ವ್ಯಕ್ತಿತ್ವದ, ಮೇರು ಸದೃಶ ಯತೀಂದ್ರರಾದ ಶ್ರೀ ವಾದಿರಾಜರು ರಚಿಸಿರುವ ಅಸಂಖ್ಯ ಕೃತಿಗಳಲ್ಲಿ “ಕೀಚಕ ವಧೆ”ಯು ಒಂದು. ಎಂಟೆಂಟು ಸಾಲುಗಳಿಂದ ಕೂಡಿರುವ ಒಟ್ಟು ೧೮೪ ಸಾಲುಗಳಲ್ಲಿ ಅತ್ಯಂತ ಸರಳವಾಗಿ ಹಾಗೂ ಮನೋಜ್ಞವಾಗಿ ರೂಪುಗೊಂಡಿರುವ “ಕೀಚಕ ವಧೆ”ಗೆ  ಹೆಸರಾಂತ ರಂಗತಜ್ಞ ಹಾಗೂ ಖ್ಯಾತ ಸಾಹಿತಿ ಪ್ರೊ| ಉದ್ಯಾವರ ಮಾಧವ ಅಚ್ಕಾರ್ಯರು ಯಕ್ಷಗಾನದ ಸಂಗೀತವನ್ನು ಅಳವಡಿಸಿ  ಏಕವ್ಯಕ್ತಿ ಭರತನೃತ್ಯ ಪ್ರದರ್ಶನದ ಮೂಲಕ ಪ್ರಸ್ತುತ ಪಡಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಈ ಪ್ರಯೋಗದ ಮೊದಲ ಪ್ರದರ್ಶನ ಈಚೆಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಿತು. ಶ್ರೀ ಗುರು ವಾದಿರಾಜ ಸೇವಾ ಸಮಿತಿ ಹಾಗು ಜೆಸಿಯ ಸಂಯುಕ್ತ ಆಶ್ರಯದಲ್ಲಿ ನಡೆದ ’ಸಾಂಸ್ಕೃತಿಕ ಕಲರವ’ ದ ಮೊದಲದಿನ ನಡೆದ ಈ ಪ್ರಯೋಗ ಕುಂದಾಪುರದ ಸಂಗೀತ ನೃತ್ಯಾಸಕ್ತರ ಮನತಣಿಸುವಲ್ಲಿ ಯಶಸ್ವಿಯಾಗಿತ್ತು.   

ಶ್ರೀ ವಾದಿರಾಜರು ವಿರಾಟಪರ್ವದ ಈ ಕಥೆಯಲ್ಲಿ ಮಾನಿನಿ ದ್ರೌಪದಿಯ ಮೇಲೆ ಅತ್ಯಾಚಾರವೆಸಗಲು ಬಂದ ದುರುಳ ಕೀಚಕನನ್ನು ಸಂಹರಿಸಲು ಭೀಮಸೇನನು ಭಾಮಿನಿಯಾಗಿ ಪರಿವರ್ತನೆಗೊಳ್ಳಬೇಕಾದ ಪರಿಸ್ಥಿತಿಯನ್ನು ವಿವರಿಸುತ್ತಾ ಕಾರಣಾಂತರಗಳಿಂದ ಸಟ್ಟುಗ ಹಿಡಿದ ಕೈ ಪುನಃ ಗದೆಯನ್ನು ಧರಿಸಿದ ಬಗೆಗಿನ ಒಳನೋಟವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಪ್ರೊ| ಮಾಧವ ಅಚಾರ್ಯರು ಶ್ರೀ ವಾದಿರಾಜರ ಹಾಡುಗಬ್ಬಕ್ಕೆ ಯಕ್ಷಗಾನದ ಹಿಮ್ಮೇಳದೊಂದಿಗೆ ಯಕ್ಷಗಾನೀಯ ಸಂಗೀತವನ್ನು ಬಳಸಿ, ರಂಗದಲ್ಲಿ ನೃತ್ಯಕ್ಕೆ ಭರತನಾಟ್ಯದ ಸಂಗಮವಾಗುವಂತೆ ಪರಿಕಲ್ಪಿಸಿದ್ದಾರೆ. ಯಕ್ಷಗಾನದ ತಾಳಕ್ಕೆ ಭರತನಾಟ್ಯದ ಹೆಜ್ಜೆ-ಗೆಜ್ಜೆಯ ದನಿಯನ್ನು ಸೇರಿಸಿದ್ದಾರೆ. ಹಾಡುಗಬ್ಬದಲ್ಲಿ ಬಂದಿರುವ ಭಾವಶ್ರೀಮಂತಿಕೆಗೆ ತಮ್ಮ ನಾಟ್ಯಶ್ರೀಮಂತಿಕೆಯ ಮೂಲಕ ರಂಗದಲ್ಲಿ ಪ್ರಸ್ತುತಪಡಿಸಿದವರು ಖ್ಯಾತ ನೃತ್ಯಕಲಾವಿದೆ ಶ್ರೀಮತಿ ಭ್ರಮರಿ ಶಿವಪ್ರಕಾಶರು. ಭಿನ್ನ ಸನ್ನಿವೇಶಗಳಿಗೆ ಭಿನ್ನ ಪದ್ಯಗಳಲ್ಲಿ ವ್ಯಕ್ತವಾಗುವ ವಿಭಿನ್ನ ಭಾವಲಹರಿಗಳನ್ನು ಭರತನಾಟ್ಯದ ಅಡವು-ಹಸ್ತ ಮುದ್ರೆಗಳ ಮೂಲಕ ಪ್ರಕಟಪಡಿಸುತ್ತಾ ಅದಕ್ಕೆ ಸರಿದೊರೆಯಾಗಬಲ್ಲ ಅಭಿನಯಗಳನ್ನು ಅಭಿವ್ಯಕ್ತಗೊಳಿಸುತ್ತಾ ಸುಮಾರು ಒಂದೂವರೆ ತಾಸುಗಳ ಕಾಲ ಪ್ರೇಕ್ಷಕರನ್ನು ರಸಭಾವದಲ್ಲಿ ಅದ್ದಿದರು. ಅವರ ಹಾವಭಾವ, ನೃತ್ತದ ನಿಲುವುಗಳು ಹಾಡಿನ ಒಟ್ಟು ಅರ್ಥವನ್ನು ನೃತ್ಯದ ಮೂಲಕ ಹೊರಹೊಮ್ಮಿಸುವ ಪರಿ ವಿಶಿಷ್ಟವಾದುದು. 

ಮೊದಲಿಗೆ ಪ್ರಾರ್ಥನಾಪದ್ಯದಲ್ಲಿ ’ಹಯವದನ ಅಭಿನಯದೊಂದಿಗೆ ರಂಗಪ್ರವೇಶಿಸಿ, ಯತಿವರೇಣ್ಯರಿಗೆ ಗೌರವ ಸಲ್ಲಿಸುವುದರೊಂದಿಗೆ ಶ್ರೀಮತಿ ಭ್ರಮರಿ  ಕಾರ್ಯಕ್ರಮ ಪ್ರಾರಂಭಿಸಿದರು. ಕೌರವನ ಆಸ್ಥಾನದಲ್ಲಿ ನಡೆದ ಮೋಸದ ಜೂಜಾಟದ ಚಿತ್ರಣದೊಂದಿಗೆ ಕಥಾ ಪ್ರಾರಂಭಗೊಂಡು, ಪಾಂಡವರಿಗೆ ಸೂಜಿ ಮೊನೆಯಷ್ಟು ನೆಲವು ದೊರೆಯದೆ ವನವಾಸ ಹಾಗು ಅಜ್ಞಾತವಾಸಕ್ಕೆ ಹೊರಟ ಬಗೆಯ ಮನೋಜ್ಞ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ವಿರಾಟನ ಮನೆಯಲ್ಲಿ ದ್ರೌಪದಿಯು ಸೈರಂಧ್ರಿಯಾಗಿ ಪಡಿಪಾಟಲು ಪಟ್ಟ ನಿರೂಪಣೆ ಸೊಗಸಾಗಿದೆ. ಮುಂದೆ ಬರುವ ’ಭಂಡ ಕೀಚಕ ಮೀಸೆ ತಿರುವುತ ಮೀಸಲೆನಗೆಂದ’ ಎಂಬ ಪದ್ಯಭಾಗದಲ್ಲಿ ಬರುವ ಕೀಚಕನ ಅಭಿನಯ,  ಭರತನಾಟ್ಯದ ವೀರರಸದ ಹೆಜ್ಜೆಗಾರಿಕೆಯಲ್ಲಿ ನರ್ತಿಸಿದ ಬಗೆ ರಂಜನೆಯನ್ನು ಕೊಟ್ಟಿತು. ಕೀಚಕ ಹಾಗೂ ಸೈರಂಧ್ರಿಯರ ನಡುವಿನ ಸಂಭಾಷಣೆಯನ್ನು ಏಕಪಾತ್ರಾಭಿನಯದ ಮೂಲಕ ಬಗೆಬಗೆಯಾಗಿ ತೋರಿದ ಶ್ರೀಮತಿ ಭ್ರಮರಿಯವರ ಕೌಶಲ ಮೆಚ್ಚಬೇಕಾದದ್ದು.    ’ಪೊಡವಿಪತಿಗಳ ಮಡದಿ ನಾನು, ಮಾಡುವುದೇನು!’ ಎಂಬ ಪದ್ಯದ ನಿರೂಪಣೆಯಲ್ಲಿ ಹೆಣ್ಣುಕುಲದ ಅಸಾಹಯಕತೆಯನ್ನು ಬಹು ಸಮರ್ಪಕವಾಗಿ ನಿರೂಪಿಸಿದ್ದಾರೆ. ದೊರೆಗಳ ಹೆಂಡತಿಯಾದವಳ ಸ್ಥಿತಿಯೇ ಹೀಗಾದ ಮೇಲೆ ಸಾಮಾನ್ಯರ ಪಾಡೇನು ಎಂಬ ಭಾವ ರಸಿಕರಲ್ಲಿ ಉದಯಿಸುತ್ತದೆ. ಪ್ರದರ್ಶನದುದ್ದಕ್ಕು ಎಲ್ಲೂ ಪ್ರೇಕ್ಷಕರ ಮನಸ್ಸು ಅಚೀಚೆ ಹೋಗದಂತೆ ನೋಡಿಕೊಂಡ ಬಗೆ ಇಡೀ ಪ್ರದರ್ಶನದ ಯಶಸ್ಸಿನ ಗುಟ್ಟಾಗಿದೆ.   ಅದಕ್ಕಾಗಿ ಈ ತಂಡದ ಹಿಮ್ಮೇಳದಲ್ಲಿ ಭಾವಪೂರ್ಣ ಗಾಯನ ಹಾಗು ವಾದನ ಪರಿಣಾಮಗಳಲ್ಲಿ ಸಹಕರಿಸಿದ ಕೆ ಜೆ ಗಣೇಶ್ ಸಹೋದರು ಸ್ತುತ್ಯರ್ಹರು. 

ಭೀಮಸೇನನನ್ನು ಭಾಮಿನಿಯಾಗಿ ಶೃಂಗರಿಸುವ ಬಗೆ, ದ್ರೌಪದಿಯೇ ಭೀಮನನ್ನು ನೋಡಿ ನಾಚುವ ರೀತಿ ಇವೆಲ್ಲ ನೃತ್ಯದಲ್ಲಿ ಶಕ್ತಿ ತುಂಬಿ ಬಂದಿದೆ. ಇಡೀ ಪ್ರದರ್ಶನದ  ರಸಸ್ಯಂದಿಯಾದ ಭಾಗ ಇದಾಗಿದೆ. ಶ್ರೀಮತಿ ಭ್ರಮರಿ ತಮ್ಮ ಕಲಾನೈಪುಣ್ಯವನ್ನೆಲ್ಲ ಇಲ್ಲಿ ಧಾರೆಯೆರೆದಿದ್ದಾರೆ.  ಈ ಸಂದರ್ಭದಲ್ಲಿ ಭಾಗವತರಾದ ಕೆ ಜೆ ಗಣೇಶರ ಹಾಡುಗಾರಿಕೆ ಬಹಳ ಸೊಗಸಾಗಿ ಬಂದಿದೆ. ಮದ್ದಲೆಯಲ್ಲಿ ಕೆ ಜೆ ಸುಧೀಂದ್ರ ಹಾಗು ಚಂಡೆಯಲ್ಲಿ ಕೆ ಜೆ ಕೃಷ್ಣ ಅವರು ಬಹು ಪೂರಕವಾಗಿ ವಾದ್ಯಗಳನ್ನು ನುಡಿಸಿದರು. ಒಳಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿಮ್ಮೇಳದ ಬಳಕೆ ಹಿತಮಿತವಾಗಿದ್ದು ಬಹು ಸಹ್ಯವಾಗಿತ್ತು. ಭೀಮನನ್ನು ಶೃಂಗರಿಸುವ ಮಂಗಳ ಕ್ಷಣದ ಒಂದೆರಡು ಕಡೆ ಶ್ರೀ ಗಣೇಶರ ಹಾಡುಗಾರಿಕೆಯಲ್ಲಿ ಶೋಭಾನೆ ಹಾಡಿನ ಧಾಟಿ ಮಿಂಚುತಿತ್ತು. ವೀರರಸದ ಸಂದರ್ಭಗಳಲ್ಲಿ ಶ್ರೀ ಅಚಾರ್ಯರೇ ಚಕ್ರತಾಳವನ್ನು ಬಳಸಿ ರಂಗಕ್ಕೆ ಅಬ್ಬರವನ್ನು ತರುತ್ತಿದ್ದರು.  ’ಪ್ರೇಮದ ಸತಿಯ ಕಾಮಿಸಿದವನ ಸೀಳುವೆ’ ಎಂಬ ಭೀಮನ ಪದ್ಯದ ನಿರೂಪಣೆಯಲ್ಲಿ ವೀರರಸ ಉಕ್ಕುತ್ತಿತ್ತು. ವಿದುಷಿ ಭ್ರಮರಿ ಅವರು ಅತ್ಯಂತ ರೋಚಕವಾಗಿ ಇದನ್ನು ಅಭಿನಯಿಸಿದರು. ಈ ಸಂದರ್ಭ ದ್ರುತ ಲಯದ ಗತಿಯಲ್ಲಿದ್ದು ಅವರ ನರ್ತನವು ಯಕ್ಷಗಾನದ ಕುಣಿತಕ್ಕೆ ಎಂದೂ ಕಡಿಮೆಯಿಲ್ಲ ಎಂಬಂತಿತ್ತು. 

ಕೊನೆಯಲ್ಲಿ ಹೆಣ್ಣಿನ ಶೀಲರಕ್ಷಣೆಗೆ ಶ್ರೀಕೃಷ್ಣನೇ ದಾರಿದೀಪವಾಗುತ್ತಾನೆ. ಅವನ ಲೀಲಾವಿನೋದದ ಕಥೆ ಇದು ಎಂಬ ಭಾವದೊಂದಿಗೆ ಪ್ರಸಂಗ ಕೊನೆಗೊಳ್ಳುತ್ತದೆ. ಸ್ತ್ರೀ ಪುರುಷ ಶಕ್ತಿಗಳ ಸಂಗಮದಿಂದಲೇ ವಿಶ್ವಕ್ಕೆ ಶಾಂತಿ ಸಾಧ್ಯ ಎಂಬ ತತ್ವವನ್ನು ಈ ರಂಗ ಪ್ರಸ್ತುತಿ ಸಾರಿದೆ. ಈ ನೂತನ ಪ್ರಯೋಗ,  ಹಾಡುಗಬ್ಬವೊಂದಕ್ಕೆ ಸಮರ್ಥ ರಂಗ ತಂತ್ರದ ನೆರವು ದೊರೆತರೆ ಅದೊಂದು ಯಶಸ್ವಿ ಪ್ರಯೋಗವಾಗುವ ಸಾಧ್ಯತೆ ಇದೆ ಎಂಬುದನ್ನು ತೋರಿಸಿಕೊಟ್ಟಿತು.  ಜಾನಪದ ಸೊಗಡಿನಿಂದ ಕೂಡಿದ ಈ ಹಾಡುಗಬ್ಬವನ್ನು ಸಮರ್ಥ ನರ್ತನದ ಮೂಲಕ ಜೀವಂತವಾಗಿ ಪ್ರೇಕ್ಷಕರಿಗೆ ಮುಟ್ಟಿಸಿದ ಕೀರ್ತಿ ಶ್ರೀಮತಿ ಭ್ರಮರಿ ಶಿವಪ್ರಕಾಶರಿಗೆ ಸಲ್ಲುತ್ತದೆ. ಭರತನಾಟ್ಯ ನೃತ್ಯ ತಂತ್ರದ ಭದ್ರ ತಳಹದಿಯೊಂದಿಗೆ ಯಕ್ಷಗಾನದ ತಾಳ- ಲಯಗಳ ಪರಿಜ್ಞಾನ ರಂಗದ ಮೇಲೆ ಎದ್ದು ತೋರುತ್ತಿತ್ತು. ಲವಲವಿಕೆಯಿಂದ ಕೂಡಿದ ಹಿಮ್ಮೇಳ ಅವರ ಚುರುಕುತನಕ್ಕೆ ಪೂರಕವಾಗಿ ಒದಗಿ ಬಂದಿದೆ. ಹಾವ ಭಾವಗಳ ಮೂಲಕ, ಸುಮನೋಹರ ಅಭಿನಯದ ಮೂಲಕ ರಸಭಾವಗಳನ್ನು ರಂಗದಲ್ಲಿ ಸೃಷ್ಟಿಸುವ ಪರಿ ವಿಶಿಷ್ಟವಾಗಿದೆ. ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಪ್ರೊ| ಮಾಧವ ಆಚಾರ್ಯರು ಧನ್ಯರು. ಅವರ ’ಏಕವ್ಯಕ್ತಿ ಯಕ್ಷಗಾನ’ಕ್ಕೆ “ಪಾಂಚಾಲಿ”ಯ ನಂತರ ಇನ್ನೊಂದು ಯಶಸ್ವಿ ಸೇರ್ಪಡೆಯಾಗಿದೆ ಈ “ಸೈರಂಧ್ರಿ”. 

Leave a Reply

*

code