ಅಂಕಣಗಳು

Subscribe


 

ಸ್ವಸ್ತಿಕ ಹಸ್ತ

Posted On: Sunday, April 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಸ್ವಸ್ತಿಕದ ಉಲ್ಲೇಖ ಸಾಮಾನ್ಯವಾಗಿ ಎಲ್ಲಾ ಲಕ್ಷಣಗ್ರಂಥಗಳಲ್ಲಿ ಕಂಡುಬಂದಿದ್ದು ಒಂದು ಕೈ/ಹಸ್ತವನ್ನು ಪರಸ್ಪರ ಸಮಾನಾಂತರದಲ್ಲಿ ಬೆಸೆದು ಮತ್ತೊಂದರ ವಿರುದ್ಧಾಭಿಮುಖವಾಗಿಸುವುದೇ ಸ್ವಸ್ತಿಕದ ಲಕ್ಷಣವಾಗಿದೆ. ಈ ಸ್ವಸ್ತಿಕಕ್ಕೆ ಯಾವ ಹಸ್ತ/ಮುದ್ರೆಯನ್ನು ಹೇಳಲಾಗುತ್ತದೆಯೋ ಅದರ ಆಧಾರದಲ್ಲಿ ಸಂಯುತ ಹಸ್ತದ ಹೆಸರು ನಿರ್ಧರಿತವಾಗುತ್ತದೆ. ನಾಟ್ಯಶಾಸ್ತ್ರದ ಲಲಿತ, ಮುಷ್ಠಿಕಸ್ವಸ್ತಿಕ, ಅರಾಲಕಟಕಾಮುಖ ನೃತ್ತಹಸ್ತದಲ್ಲಿ ಮತ್ತು ಹಲವು ಚಾರಿ, ಕರಣಗಳಲ್ಲಿ ಸ್ವಸಿಕದ ಬಳಕೆ ಹೇರಳವಾಗಿದೆ. ಭರತಾರ್ಣವ ತಿಳಿಸುವ ಸ್ಥಾನಕಗಳಲ್ಲಿಯೂ ಸ್ವಸಿಕದ ಬಳಕೆಯಿದೆ. ಅಂತೆಯೇ ಅಡವು ವಿನ್ಯಾಸಗಳಲ್ಲೂ ಸ್ವಸ್ತಿಕವು ಬಳಸಲ್ಪಡುತ್ತದೆ. ಒಡಿಸ್ಸಿ, ಕಥಕ್‌ನೃತ್ಯಗಳಲ್ಲಿಯೂ ಈ ಹಸ್ತದ ಬಳಕೆ ಹೇರಳವಾಗಿದೆ.

ಎರಡು ಪತಾಕಹಸ್ತಗಳನ್ನು ಮಣಿಕಟ್ಟಿನ ಹತ್ತಿರ ಸ್ವಸ್ತಿಕಾಕಾರವಾಗಿ ಅಡ್ಡವಾಗಿ ಹಿಡಿದರೆ ಪತಾಕಾಸ್ವಸ್ತಿಕವಾಗುವುದು. ಇದು ಅಭಿನಯದರ್ಪಣದ ಸಂಯುತ ಮತ್ತು ನೃತ್ತ ಹಸ್ತಗಳಲ್ಲೊಂದು. ವಿನಿಯೋಗ : ಮೊಸಳೆ, ಭಯದಿಂದ ಮಾತನಾಡುವುದು, ವಾದಮಾಡುವುದು, ಹೊಗಳುವುದು.

ಇತರೇ ವಿನಿಯೋಗ : ವಿವಾದ, ಸ್ವಸ್ತಿಕಾಯುಧ, ಕೊಂಬೆಗಳು ಕವಲೊಡೆಯುವುದು, ಹಂಸಡೋಲ, ಹೆದರಿಕೆಯಿಂದ ಹಾಗೆಯೇ ಆಗಲಿ ಎನ್ನುವುದು, ವನ, ಸಮುದ್ರ, ಋತುಗಳು, ವಿಸ್ತೀರ್ಣವಾದ ಪೃಥ್ವಿ, ಬಾಗಿಲಿಗೆ ಹಾಕುವ ಅಗಣಿ, ಹೀಗಾಗಬಹುದು,ಇರಲಿ ಬಿಡುಎನ್ನುವುದು, ಹಸ್ತಾಚಾರ ಬಂಧವೆಂಬ ಸಂಯೋಗ-ಚಲನೆಗಳ ನೃತ್ಯಶೈಲಿ, ಗೆಜ್ಜೆ ಕಟ್ಟುವ ಪ್ರದೇಶ. ನಿತ್ಯಜೀವದಲ್ಲಿ ಪರಸ್ಪರ ವಿವಾದ, ವಿರುದ್ಧ ಎನ್ನಲು ಬಳಸುತ್ತಾರೆ. ಕರಾಟೆಯಲ್ಲಿ ಇದರ ಬಳಕೆಯಿದೆ.

ತ್ರಿಪತಾಕ ಹಸ್ತಗಳನ್ನು ಸ್ವಸ್ತಿಕಾಕಾರವಾಗಿ ಹಿಡಿಯುವುದು ತ್ರಿಪತಾಕ ಸ್ವಸ್ತಿಕ. ಇದು ಭರತಾರ್ಣವದಲ್ಲಿ ಉಲ್ಲೇಖಿತ. ವಿನಿಯೋಗ : ಭಯ, ಮರ್ಯಾದಾ ಭಾವ, ಇಂದ್ರಹಸ್ತ.

ಹಂಸಪಕ್ಷ ಹಸ್ತಗಳನ್ನು ಮುಂಗೈಯಲ್ಲಿ ಸ್ವಸ್ತಿಕವಾಗಿಸಿ ಇಡುವುದು. ಸ್ವಸ್ತಿಕಾಮುಖ. ವಿನಿಯೋಗ : ಕಲ್ಪವೃಕ್ಷ, ಪರ್ವತ.

ತ್ರಿಪತಾಕ ಹಸ್ತಗಳನ್ನು ದೂರವಿರಿಸಿದರೂ ಹತ್ತಿರ ಬಂದು ಪರಸ್ಪರ ಸ್ವಸ್ತಿಕವಾಗಿ ನಿಲ್ಲುವಂತಹ ಚಲನೆ ವಿಪ್ರಕೀರ್ಣ ಹಸ್ತದ್ದು. ಇನ್ನೊಂದು ಮೂಲದ ಪ್ರಕಾರ ಸ್ವಸ್ತಿಕಾಮುಖ ಹಸ್ತವನ್ನು ತಕ್ಷಣ ಬೇರ್ಪಡಿಸುವುದು ಲಕ್ಷಣ. ದಕ್ಷಿಣಾಮೂರ್ತಿ ಇದರ ಅಧಿದೇವತೆ.     ವಿನಿಯೋಗ : ಗುರಾಣಿ, ವಿವಿಧ ಮಂತ್ರಾಲೋಚನೆಯ ಕಲ್ಪನೆ, ಹಗ್ಗಜಗ್ಗಾಟ, ಕ್ಷಮೆ, ಗಣನೆ.

ಮುಷ್ಟಿಗಳನ್ನು ಹೊಟ್ಟೆಯ ಬಳಿ ಸ್ವಸ್ತಿಕಾಕಾರದಲ್ಲಿ ಹಿಡಿಯುವುದು ಮುಷ್ಟಿಸ್ವಸ್ತಿಕ ಹಸ್ತ. ಕಿಂಪುರುಷ ಇದರ ಅಧಿದೇವತೆ. ವಿನಿಯೋಗ : ಹೂಚೆಂಡಿನ ಆಟ, ವರ್ತುಲಾಕಾರದ ರಚನೆ, ಲಜ್ಜೆ.

ಎರಡು ಕರ್ತರೀ ಮುಖ ಹಸ್ತಗಳನ್ನು ಸ್ವಸ್ತಿಕಾಕಾರವಾಗಿ ಹಿಡಿಯುವುದು ಕರ್ತರೀ ಸ್ವಸ್ತಿಕದ ಲಕ್ಷಣ. ವಿನಿಯೋಗ: ಮರದ ಕೊಂಬೆಗಳು, ಬೆಟ್ಟದ ಶಿಖರಗಳು, ವೃಕ್ಷಗಳು, ಅಡ್ಡವಾಗಿರುವುದು. ಇತರೇ ವಿನಿಯೋಗ : ಜಿಂಕೆಯ ಕೊಂಬು, ಅಡ್ಡದಾರಿ, ಕುರಿ.

ಇದೇ ರೀತಿಯಲ್ಲಿ ಅರಾಳ ಹಸ್ತಗಳನ್ನು ಸ್ವಸ್ತಿಕವಾಗಿ ಹಿಡಿದರೆ ಅರಾಳಸ್ವಸ್ತಿಕ. ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಸಂಗೀತ ರತ್ನಾಕರವು ಅರಾಳ ಹಸ್ತಗಳನ್ನು ಸ್ವಸ್ತಿಕಾಕಾರವಾಗಿ ಹಿಡಿಯಲು ಸೂಚಿಸಿದೆ. ಕೂರ್ಮಕ ಎಂಬ ಹೆಸರಿನಿಂದ ಸಂಗೀತ ರತ್ನಾಕರದಲ್ಲಿ ಸೂಚಿಸಲಾಗಿದೆ. ವಿನಿಯೋಗ : ದಿಕ್ಕು, ಮೋಡ, ಆಕಾಶ, ವಿಸ್ತಾರ, ಸಮುದ್ರ, ಏಳು ದ್ವೀಪಗಳಿಂದ ಸುತ್ತುವರಿದ ಭೂಮಿ, ಏಳು ದ್ವೀಪ, ಏಳು ಸಾಗರ, ಏಳು ಸ್ವರ್ಗ, ನೌಕೆ, ಸಂಪತ್ತು, ಹಬ್ಬ, ಬೆಳಗು,ದಿನ, ರಾತ್ರಿ, ಸಂಜೆಯಲ್ಲಿ ಹೋಗುವುದು, ವೂಡ, ಆಕಾಶ, ನಕ್ಷತ್ರ, ಗ್ರಹಗಳು, ನೀರಿನಿಂದ ಆವೃತವಾದದ್ದು, ವಾಸನೆ, ತುಟಿಗಳ ಒಂದಾಗುವಿಕೆ, ಬೆಳದಿಂಗಳು, ಸರ್ಪ, ಸೂರ್ಯ, ಧೂಮ, ಗಾಳಿ, ಧೂಳು, ಸೌಂದರ್ಯ, ಚೂಪಾದ ವಸ್ತು, ಮಧ್ಯಾಹ್ನ, ಅರಣ್ಯ, ಸೇನೆ, ಹೆಮ್ಮೆಯುಳ್ಳ ವ್ಯಕ್ತಿ, ಸೇನಾಳುಗಳ ಕದನ, ಮಿಂಚು, ವಿನಯ, ಮಂತ್ರ ಮುಂತಾದುವನ್ನು ಶ್ರದ್ಧೆಯಿಂದ ಕೇಳುವುದು ಅಥವಾ ನೋಡುವುದು, ಕುತ್ತಿಗೆಯ ಆಭರಣ, ಪುಷ್ಪಮಾಲಿಕೆ, ವಂಚಕ, ಬೈಯುವುದು, ತಪ್ಪು ಶಬ್ದ, ಸಾಮಾನ್ಯ ವ್ಯಕ್ತಿ, ಮಹತ್ವವಾದ ವಿಷಯ, ಸಹಿಸಿಕೊಳ್ಳುವುದು, ಹಸ್ತಚಾರಬಂಧವೆಂಬ ನೃತ್ಯ, ಕಾಲಿಗೆ ಗೆಜ್ಜೆ ಕಟ್ಟುವ ಪ್ರದೇಶ.

ಅರ್ಧಚಂದ್ರ ಹಸ್ತಗಳನ್ನು ಅಂಗೈಭಾಗವು ತನಗೆ ಅಭಿಮುಖವಾಗಿರುವಂತೆ ಅಡ್ಡಲಾಗಿ ಹಿಡಿದು ಸ್ವಸ್ತಿಕಾಕಾರಮಾಡಿ ಹೆಬ್ಬೆರಳನ್ನು ಕೊಂಡಿಯಂತೆ ಸೇರಿಸುವುದು ಗರುಡಹಸ್ತದ ಲಕ್ಷಣ. ವಿನಿಯೋಗ : ಗರುಡ. ಯಕ್ಷಗಾದಲ್ಲಿ ಗರುಡ ಪಕ್ಷಿಯನ್ನು ತೋರಿಸಲು ಈ ಹಸ್ತವನ್ನು ಬಳಸುತ್ತಾರಾದರೂ, ಇದಕ್ಕೆ ಪಯಯವಾಗಿ ತಾರ್ಕ್ಷ್ಯೆ ಎಂಬ ಮುದ್ರೆಯನ್ನೂ ಬಳಸುತ್ತಾರೆ. ಇದೇ ತಾರ್ಕ್ಷ್ಯಹಸ್ತವು ಮಣಿಪುರಿ ಇತ್ಯಾದಿ ನೃತ್ಯಪ್ರಕಾರಗಳಲ್ಲಿ (ಎರಡು ಕೈಯ ಮಣಿಕಟ್ಟನ್ನು ಸೇರಿಸಿ ಹೊರಮುಖವಾಗಿ ಅಂಗೈಯನ್ನು ಹಿಡಿಯುವುದು) ಬಳಸುತ್ತಾರೆ. ನಿತ್ಯಜೀವನದಲ್ಲಿ ಹಕ್ಕಿ ಹಾರಾಡುವುದು ಎಂದು ಸೂಚಿಸಲು ಬಳಸುತ್ತಾರೆ.

ಸರ್ಪಶೀರ್ಷಹಸ್ತಗಳನ್ನು ಮಣಿಬಂಧದ ಬಳಿ ಸ್ವಸ್ತಿಕಾಕಾರವಾಗಿ ಹಿಡಿಯುವುದು ನಾಗಬಂಧ ಹಸ್ತ. ನಾಗಬಂಧವೆಂದರೆ ಸರ್ಪಬಂಧ ಎಂದರ್ಥ. ವಿನಿಯೋಗ : ಸರ್ಪಗಳ ರತಿಬಂಧ, ಸರ್ಪ ದಂಪತಿಗಳು, ಲತಾಮಂಟಪ (ಬಳ್ಳಿಗಳ ಹಂದರ) ಅಥರ್ವಣ ವೇದದ ಮಂತ್ರ. ನಿತ್ಯಜೀವ ನದಲ್ಲಿ ಸರ್ಪ ಜೋಡಿ ಎನ್ನಲು ಬಳಸುತ್ತಾರೆ. ಕರಾಟೆಯಲ್ಲಿ ಇದರ ಬಳಕೆ ಇದೆ.

ಕಪಿತ್ಥ ಹಸ್ತಗಳನ್ನು ಮಣಿಕಟ್ಟಿನ ಬಳಿ ಸ್ವಸ್ತಿಕಾಕಾರವಾಗಿ ಹಿಡಿಯುವುದನ್ನು ಭೇರುಂಡಹಸ್ತವೆನ್ನುತ್ತಾರೆ. ಇದನ್ನು ಗಂಡ ಭೇರುಂಡ ಹಸ್ತ ಎಂದೂ ಹೇಳುತ್ತಾರೆ. ವಿನಿಯೋಗ : ಭೇರುಂಡ ಪಕ್ಷಿ, ಪಕ್ಷಿದಂಪತಿ.

ಬಾಲರಾಮ ಭರತದಲ್ಲಿ ಉಲ್ಲೇಖಿಸಲಾದ ಮಲ್ಲಯುದ್ಧ ಹಸ್ತವು ಸರ್ಪಶೀರ್ಷ ಮತ್ತು ಸ್ವಸ್ತಿಕ ಹಸ್ತಗಳ ಸಮ್ಮಿಲನದಂತೆ ತೋರುತ್ತದೆ. ವಿನಿಯೋಗಗಳು ಸ್ಪಷ್ಟವಾಗಿ ಕಂಡುಬರದಿದ್ದರೂ; ಮಲ್ಲಯುದ್ಧ, ಜಟ್ಟಿಗಳ ತಾಲೀಮಿನಲ್ಲಿ ಬಳಕೆಯಾಗುವಂತದ್ದು ಎನ್ನುವುದನ್ನು ಕಂಡುಕೊಳ್ಳಬಹುದು.

ಅಲಪದ್ಮ ಹಸ್ತಗಳನ್ನು ಸ್ವಸ್ತಿಕವಾಗಿರಿಸುವುದು ದಶರಥರಾಜನನ್ನು ಸೂಚಿಸಿದರೆ ; ಚತುರ ಹಸ್ತಗಳನ್ನು ಮೇಲ್ಮುಖವಾಗಿರಿಸಿ ಮುಂಗೈ ಬಳಿ ಸ್ವಸ್ತಿಕಾಕಾರ ಮಾಡುವುದು ಮಹಾಮೇರು ಪರ್ವತವನ್ನು ಸೂಚಿಸುತ್ತದೆ. ಪತಾಕ ಮತ್ತು ಚತುರವನ್ನು ಎರಡು ಕೈಯಲ್ಲಿ ಹಿಡಿದು ಸ್ವಸ್ತಿಕವಾಗಿರಿಸುವುದು ಕೇತಕಿ ಪುಷ್ಪದ ಸಂಕೇತವಾದರೆ ; ಪತಾಕ ಮತ್ತು ಚತುರವನ್ನು ಸ್ವಸ್ತಿಕಾಕಾರವಾಗಿರಿಸುವುದು ಜಪಾಕುಸುಮ ಹಸ್ತದ ಲಕ್ಷಣ. ಪೂಗ ಪುಷ್ಪಕ್ಕೆ ಪದ್ಮಕೋಶಗಳನ್ನು ಸ್ವಸ್ತಿಕವಾಗಿರಿಸಬೇಕೆಂಬ ನಿಯಮವಿದ್ದರೆ ; ಅಲಪದ್ಮ ಹಸ್ತಗಳನ್ನು ಸ್ವಸ್ತಿಕಾಕಾರವಾಗಿರಿಸುವುದು ಕಪಿತ್ಥಫಲದ ಸಂಕೇತ. ನಿಂಬಾಫಲವನ್ನು    ಶುಕತುಂಡ ಹಸ್ತಗಳನ್ನು ಸ್ವಸ್ತಿಕಾಕಾರವಾಗಿರಿಸುವುದರಿಂದ ಸೂಚಿಸಬಹುದು. ಸಾಲವೃಕ್ಷ ಸೂಚನೆಗೆ ಶುಕತುಂಡ ಹಸ್ತಗಳನ್ನು ಸ್ವಸ್ತಿಕಾಕಾರವಾಗಿರಿಸಬೇಕು.ಉತ್ತರಾಭಾದ್ರಾ ನಕ್ಷತ್ರಕ್ಕೆ ಸೂಚೀಹಸ್ತವನ್ನು ಸ್ವಸ್ತಿಕಾಕಾರ ಮಾಡುವುದು ಕ್ರಮ.

Leave a Reply

*

code