ಅಂಕಣಗಳು

Subscribe


 

​‘ತಧೀಂ’ – ಅಭಿನವ ಕಲಾಪರ್ವದ ಅನುಪಮ ದಿನ

Posted On: Friday, February 21st, 2020
1 Star2 Stars3 Stars4 Stars5 Stars (No Ratings Yet)
Loading...

Author: -    ಡಾ. ಮನೋರಮಾ ಬಿ.ಎನ್

ಸುವಿಖ್ಯಾತ ನೃತ್ಯದಂಪತಿ ನಿರುಪಮಾ ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪೆನಿಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಸಾಕ್ಷಿಯಾದದ್ದು ಅಪೂರ್ವವಾದ – ತಧೀಂ ವಿಚಾರಸಂಕಿರಣಕ್ಕೆ; ಚೌಡಯ್ಯ ಸಭಾಂಗಣದಲ್ಲಿ 15 ಫೆಬ್ರವರಿ 2020ರಂದು. ನೃತ್ಯ-ಸಂಗೀತಗಳ ಎಂದಿನ ಸಂಶೋಧನ ವಿಚಾರಸಂಕಿರಣಕ್ಕಿಂತಲೂ ಭಿನ್ನವಾದ ಆದರೆ ಅದೇ ಆಯಾಮಕ್ಕೆ ಮತ್ತ​​ಷ್ಟು ನವನವೀನವಾದ ಆಲೋಚನೆ-ಆಲೋಢನೆ-ಆಯೋಜನಾಸಾಧ್ಯತೆಗಳನ್ನು ಸೇರ್ಪಡೆಗೊಳಿಸಿದ ಮರೆಯಲಾಗದ ದಿನವದು. ನಮ್ಮ ನಮ್ಮ ಎಂದಿನ ದಿನವನ್ನೇ ವರ್ಣಮಯವಾಗಿಸಿ, ವಿಶೇಷವಾಗಿಸಿ, ನಮಗೇ ಉಡುಗೊರೆಯಾಗಿತ್ತ ಸಂಸ್ಕೃತಿಯ ಪುರೋಗಾಮಿ ಬೆಳವಣಿಗೆಯ ‘ಪರ್ವ’. ನಾಟ್ಯಶಾಸ್ತ್ರದ ಆಯತನದಲ್ಲಿ ಸಿನೆಮಾವನ್ನೂ ಒಳಗೊಂಡಂತೆ  ಹೆಸರಾದ ಅಭಿಜಾತ ಕಲೆಗಳ ಬೆಳವಣಿಗೆ, ಕಲಾವಂತಿಕೆಯನ್ನು ಗಮನಿಸಿಕೊಳ್ಳುವುದು ಆಶಯ ಮತ್ತು, ಅದಕ್ಕನುಗುಣವಾದ ಚಿಂತನ ಮಂಥನ.
ಇಡಿಯ ದಿನದ ವಿಚಾರಮಂಥನದಲ್ಲಿ ಕಲೆಯೊಂದು ಕಾಣಬಹುದಾದ ಬರೆವಣಿಗೆ, ಉಪನ್ಯಾಸ ಮತ್ತು ಪ್ರದರ್ಶನ – ಈ ಮೂರು ನೆಲೆಗಳಲ್ಲೂ ಉತ್ಕೃಷ್ಟಮಟ್ಟದ ನಿದರ್ಶನಗಳನ್ನಿತ್ತದ್ದು ‘ತ ಧೀಂ’. ಬರೆವಣಿಗೆಯ ನೆಲೆಯಿಂದ ಶತಾವಧಾನಿ ಡಾ. ಆರ್. ಗಣೇಶ ಅವರ ನೃತ್ಯ ಮತ್ತು ಭಾರತೀಯ ರಂಗಭೂಮಿ ಸಂಬಂಧಿತವಾದ ಕನ್ನಡ ಲೇಖನಸಮುಚ್ಛಯದ ಅನುವಾದಿತ ಕೃತಿ( ಅರ್ಜುನ್ ಭಾರಧ್ವಾಜ್ ಅವರಿಂದ ಇಂಗ್ಲೀಷ್ ಭಾಷಾನುವಾದ) ‘ಪ್ರೇಕ್ಷಣೀಯಂ’ ಶೃಂಗಪ್ರಾಯ. ಅದನ್ನು ಅನಾವರಣಗೊಳಿಸಿದವರು ಸರಸ್ವತೀಸಮಾನವಾಗಿ ಕಂಗೊಳಿಸುತ್ತಿದ್ದ ಡಾ. ಪದ್ಮಾ ಸುಬ್ರಹ್ಮಣ್ಯಂ. ಪ್ರಥಮಪ್ರತಿ ಸ್ವೀಕರಿಸುವ ಭಾಗ್ಯವು ಮಂಟಪ ಪ್ರಭಾಕರ ಉಪಾಧ್ಯಾಯರದ್ದಾದರೆ, ಅದನ್ನು ಲೋಕಾರ್ಪಣೆಗೊಳಿಸುವ ಮೂಲಕ ಅರ್ಪಿಸಿಕೊಂಬ ಧನ್ಯತೆ ಪಡೆದವರು ಸ್ವತಃ ನಿರುಪಮಾ ರಾಜೇಂದ್ರ. ಉಪನ್ಯಾಸದಲ್ಲಂತೂ ಶತಾವಧಾನಿ ಗಣೇಶರದ್ದೇ ಒಂದು ತೂಕವಾದರೆ, ಅನುಭವಸಾಂದ್ರತೆಯ ಸಂವಹನ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರದ್ದೇ ಇನ್ನೊಂದು ತೂಕ. ಅದನ್ನು ಸರಿಗಟ್ಟಲೋ ಅಥವಾ ವರದಿ-ವಿಮರ್ಶೆಗಳಲ್ಲೋ ತರಲೆಣಿಸುವುದೇ ಸಾಹಸ, ಗಜಗಾತ್ರಪ್ರಯಾಸ. ಅವರಿಂದ ಮೊಗೆದಷ್ಟೂ ನಾವು ತುಂಬಿಕೊಳ್ಳುವುದೇ ಹೆಚ್ಚು. ಲೇಖನಿಗೆ ವಿರಾಮವನ್ನೇ ಕೊಡಬೇಕಾದ, ಕೇಳ್ಮೆಯ ಮೂಲಕ ಅಂತರಂಗದ ದರ್ಶನಕ್ಕೆ ಏರಿಸಿಕೊಳ್ಳಬೇಕಾದ ಸಮಯಗಳವು. ಆ ಕ್ಷಣಕ್ಕೆ ಮನದುಂಬಿ ಅನುಭವಿಸುವ, ಆನಂದಿಸುವ ಪುಣ್ಯ ಪಡೆದವರೆಲ್ಲರೂ ಧನ್ಯರು.

Caption set to edited image by Pooja Balasubhramaniam

ಅರಿವಿನ ಬುತ್ತಿಗೆ ಉಣಿಸನ್ನು ನೀಡಿದ ಮತ್ತೊಂದು ಮೋದ-ಬೋಧಾವಹವಾದ ‘ಸರ್ಪೈಸ್’ – ಚೆನ್ನೈಯ ಸಿನೆಮಾ ಕ್ಷೇತ್ರದ ಹಿರಿತಲೆಗಳಲ್ಲೊಂದಾದ ರಾಜೀವ್ ಮೆನನ್ ಅವರ ಸ್ಪಷ್ಟ, ನಿರ್ದಿಷ್ಟ, ನಿಃಶ್ರಮ, ನಿರ್ಭಿಡೆಯ, ಅನುಭವಪ್ರಮಾಣದಲ್ಲೇ ಮಿಂದೆದ್ದ ‘ಸಿನೆಮಾಕ್ಷೇತ್ರದಲ್ಲಿ ಕರ್ನಾಟಕದ ಸಂಗೀತದ ವ್ಯಾಪ್ತಿ, ಏರಿಳಿತಗಳ’ ಕುರಿತ ಸೋದಾಹರಣ ಉಪನ್ಯಾಸ. ಸಂಗೀತ ಮತ್ತು ಸಿನೆಮಾ ಕಲೆಯ ಸೌಂದರ್ಯ, ವ್ಯಾವಹಾರಿಕತೆ, ಹೊಂದಾಣಿಕೆಗಳಲ್ಲಿ ಇಣುಕುವ ಪ್ರಭಾವ, ನಕಲುಗಳ ಔಚಿತ್ಯಗಳನ್ನು ದಾಖಲೆಗಳ ಸಹಿತ ಪ್ರಕಾಶಿಸುತ್ತಲೇ ಆ ಮೂಲಕ ತಮ್ಮ ಅನನ್ಯ ರಸೈಕದೃಷ್ಟಿಯನ್ನು ಪ್ರೇಕ್ಷಕರ ಎದೆಯಲ್ಲಿ ಅಚ್ಚೊತ್ತಿದವರು ಮೆನನ್. ನಿಸ್ಸಂಶಯವಾಗಿ ಅಂದಿನ ದಿನಕ್ಕೆ ಅವರ ಮಾತೆಂಬುದು ಸುಂದರ ಮಣಿಹಾರ. ಕಲಾರೂಪ ಮತ್ತು ಆಶಯ/ಸ್ವರೂಪಗಳೆಡೆಗಿನ ಅವರ ಪರಿಜ್ಞಾನ, ಅದನ್ನು ಕೊಡುವ ಜಾಣ್ಮೆ, ಸಿದ್ಧಿಗಳು ಮೂಗಿನ ಮೇಲೆ ಬೆರಳಿಡುವಂಥದ್ದೇ. ಮಾತ್ರವಲ್ಲ, ಕಲಾಸಂಶೋಧನೆಗಳು ಆಸ್ವಾದ್ಯವೂ ಆಗುವಲ್ಲಿ ಒಳಗೊಳ್ಳಬೇಕಾದ ಅತ್ಯುತ್ತಮ ಮಂಡನೆಯ ಮಾದರಿ. ಸುಮಾರು ನೂರು ವರ್ಷಗಳ ಕಲಾಹಾದಿಯನ್ನು ಸೂಕ್ಷ್ಮವಾಗಿ ಗಮನಿಸುವಲ್ಲಿ ಆ ವ್ಯಕ್ತಿಯ ಸಾಧನೆಯ ಹಾದಿಯೂ ಎಷ್ಟು ನಿಖರವಾಗಿ ಪ್ರೇಕ್ಷಕರಿಗೆ ಮನಗಾಣಬಲ್ಲುದು ಎಂಬುದಕ್ಕೆ ರಾಜೀವ್ ಮೆನನ್ ನಿದರ್ಶನವಾಗಿದ್ದರು.
ಸರೋಜ್ ಖಾನ್ -ಮಾತಿಗಿಂತಲೂ ಹೆಚ್ಚಾಗಿ ಅವರ ನೃತ್ಯದಲ್ಲಿ ಮಾತಾಡಿದ್ದೇ ಹೆಚ್ಚು ಎನ್ನುವುದಕ್ಕೆ ಅವರ ಬದುಕೇ ಒಂದು ತೆರೆದ ಪುಟ. ಅದನ್ನು ಅಂದಿನ ಕಾರ್ಯಕ್ರಮದ ಸಮಯಮಿತಿಯ ಕ್ಷೀಣಾವಕಾಶದೊಳಗೇ ಕಾಣಿಸಿಕೊಡುವಲ್ಲಿ ನಿರುಪಮಾ ಅವರ ಯೋಜಕತ್ತ್ವ ಗೆದ್ದಿದೆ. ಅಚ್ಚೊತ್ತಿದ ಅನುಭವವ್ಯಾಖ್ಯಾನಗಳಲ್ಲೇ ಸರೋಜ್ ಖಾನ್ ಅವರ ಸಮಯ ಮತ್ತಷ್ಟು ಬೆಂಗಳೂರಿನ ಸಹೃದಯರಿಗೆ ಬೇಕು ಎಂದೆನಿಸಿದ್ದು ಸುಳ್ಳಲ್ಲ. ಇನ್ನು ಪ್ರಾತ್ಯಕ್ಷಿಕೆರೂಪದಲ್ಲಿ ಅವರ ಶಿಷ್ಯೆಯ ಮೂಲಕ ಪ್ರಯೋಗಿಸಿದ ಬಾಲಿವುಡ್ ಚಲನೆಗಳಿಗೆ ನಿರುಪಮಾ ಅವರೇ ಆ’ಹಾರ’ವಾಗಿ ನಾಟ್ಯಶಾಸ್ತ್ರದ ಅನುಸರಣೆಯ ಸೌಖ್ಯವನ್ನು ಮನಗಾಣಿಸಿದರು. ಹಾಗೆ ನೋಡಿದರೆ ಸರೋಜ್ ಖಾನ್ ಅವರ ಇನ್ನೋರ್ವ ಶಿಷ್ಯೆಯ ‘ದೇವದಾಸ್’ ನೃತ್ಯಾಭಿನಯದಲ್ಲಿ  ವೇದಿಕೆಗಾಗುವಾಗ ಸಿನಿಮೀಯತೆಗಿಂತ ಹೆಚ್ಚಿನ  ಅತಿಶಯತೆಯನ್ನು ಬಿಂಬಿಸಿ, ಕಲಾವಿದನಿಗೆ ಆಂಗಿಕವೇ ಏಕಕಾಲಕ್ಕೆ ಸಾಧ್ಯತೆಯೂ ಮತ್ತು ಅಡ್ಡಿಯೂ ಆಗುವ ಚಿಹ್ನೆಗಳನ್ನು ಪ್ರಕಟಪಡಿಸಿತು. ಸಾತ್ತ್ವಿಕಾಭಿನಯದ ಶ್ರೇಣಿ ಏರುತ್ತಾ ಹೋದಂತೆ ಆಂಗಿಕಾಭಿನಯದ ಅವಲಂಬನೆ ಕಡಿಮೆಯಾಗುತ್ತದೆ ಎನ್ನುವ ಡಾ. ಪದ್ಮಾ ಅವರ ಪ್ರಮಾಣವಾಕ್ಯ ಯಾವ ಕಾಲಕ್ಕೂ ಸುಳ್ಳಾಗಲಾರದು !

Caption set to edited image by Pooja Balasubhramaniam

ಅಪರಾಹ್ನದ ಸಂವಾದ, ಮತ್ತು ಭೋಜನೋತ್ತರ ಉಪನ್ಯಾಸ ಪ್ರಸ್ತುತಿಗಳ ಪೈಕಿ ತಂಗದಿರನ್ನು ಬೀಸಿದ್ದು ಪ್ರವೀಣ್ ಗೋಡ್ಖಿಂಡಿ ಅವರ ವೇಣು ನಿನಾದದಲ್ಲೇ ಅರಳಿಕೊಂಡ ಚಲನವಲನಗಳು. ಅವರವರದೇ ಅನುಭವವಿಶೇಷಗಳಲ್ಲಿ ಪ್ರಯೋಗಭೂಮಿಕೆಯಲ್ಲರಳಿದ ನೃತ್ಯಸಂಗೀತ ಪ್ರಸ್ತುತಿಗಳನ್ನು ಕಾಣಿಸಿ-ಕೇಳಿಸುವಲ್ಲಿಗೆ ರಾಜಕುಮಾರ್ ಭಾರತಿ ಹಾಗೂ ಪ್ರವೀಣ್ ರಾವ್ ಅವರ ಸಮಯಾನುಸಂಧಾನವು ತೃಪ್ತವಾಯಿತು.
ಯಾವುದೇ ವಿಶೇಷವಾದ ಅರ್ಥನಿಷ್ಪತ್ತಿಯ ಅಭಿನಯವಿಲ್ಲದೆಯೂ ನೃತ್ತವೊಂದು ಆಹ್ಲಾದಕರವಾಗಬಲ್ಲುದು, ಅನುಪಮ ಅನುಭವವವನ್ನು ಕೊಡಬಲ್ಲುದು ಎಂಬುದಕ್ಕೆ ಸಾಕ್ಷಿಯಾಗಿದ್ದು ನಿರುಪಮಾ ರಾಜೇಂದ್ರ ಅವರ ಕಥಕ್ ಪ್ರಸ್ತುತಿಯ ’ತಾ ಧ”. ಪಂಡಿತ್ ಬಿರ್ಜು ಮಹಾರಾಜ್ ಅವರ ಅನುಪಸ್ಥಿತಿಯನ್ನು ಗಾಢವಾಗಿ ಕಾಡದಂತೆ ಮಾಡುವಲ್ಲಿ ಯಶಸ್ವಿಯಾದರು ನೃತ್ಯದಂಪತಿಗಳು. ನೃತ್ಯಾಂತರಂಗವನ್ನು ಹೊಗುವಲ್ಲಿ ಅವರಿಗಿರುವ ಪಕ್ವತೆ, ಪ್ರೀತಿಯೇ ಪ್ರತೀಸಲವೂ ‘ಕಥಕ್ ಎಂದರೆ ನಿರುಪಮಾ ರಾಜೇಂದ್ರ’ ಎನ್ನಿಸುವಷ್ಟು ಮನಸ್ಸನ್ನು ಕಥಕ್‌ಗಾಗಿ ಪ್ರೇಮಮಯವಾಗಿಸಿದೆ. ಎಂತಹವನ ಉರಿಯ ಎದೆಯಲ್ಲಿಯೂ ಮುಗುಳ್ನಗೆಯೊಂದನ್ನಾದರೂ ತಾರದೇ ಅವರು ತಮ್ಮ ಕಲಾಪ್ರದರ್ಶನದಿಂದ ನಿರ್ಗಮಿಸುವುದೇ ಇಲ್ಲ. ಇನ್ನುಕವಿ ಲೀಲಾಶುಕನ ಕೃಷ್ಣಕರ್ಣಾಮೃತದಿಂದಾಯ್ದ ಅಭಿನವ ಡ್ಯಾನ್ಸ್ ಕಂಪೆನಿಯ ಕಲಾವಿದರು ಪ್ರಸ್ತುತಪಡಿಸಿದ ಸಮೂಹ ನೃತ್ಯವಿನ್ಯಾಸದಲ್ಲಿಯೂ ಕಂಡಿದ್ದು ಮತ್ತದೇ ನಿರುಪಮಾ ಅವರ ಚಟುಲಶೀಲತೆಯ ಬಿಂಬ. ನಿರುಪಮಾ ಅವರ ನೃತ್ಯವ್ಯಕ್ತಿತ್ವದ ವಿಸ್ತರಣರೂಪ ಅವರ ವೃಂದದ ಅಭಿನಯದಲ್ಲೂ ಮನಗಾಣುತ್ತದೆ.
ಅದಾಗಿ ದರ್ಶನವಿತ್ತವರು ಡಾ.ಪದ್ಮಾ ಸುಬ್ರಹ್ಮಣ್ಯಂ. ಅವರ ನೃತ್ಯದ ಬಗ್ಗೆ ಬರೆಯುವುದೆಂದರೆ ಅದು ನಮ್ಮ ಪಾಲಿಗೆ ಬಾಲಿಶ ಪ್ರಯತ್ನವಷ್ಟೇ. ಅಲ್ಲಿ ಕಲಿಕೆಗೆ, ರಸಾನಂದ ಅನುಭವಕ್ಕೆ ತೆರೆಗಣ್ಣಾಗಿರಬೇಕಾದ್ದೇ ಮುಖ್ಯ ಅರ್ಹತೆಯಾಗಿರುವುದರಿಂದ ವಿಮರ್ಶೆಯ ದೃಷ್ಟಿ ಅಲ್ಲಿ ಪ್ರಕಟಗೊಂಡರೆ ನಿಜಕ್ಕೂ ನಮ್ಮನ್ನು ನಾವು ಛೇದಿಸಿಕೊಂಡಂತೆ, ಛೇಡಿಸಿಕೊಂಡಂತೆ !. ಬೆಳಗ್ಗಿನ ಅವರ ಸಹೃದಯಾಸ್ವಾದದ ನಿರೀಕ್ಷೆಯ ಮಾತುಗಳು ಅವರ ಅಂದಿನ ನೃತ್ಯದಲ್ಲಿಯೂ ತೋರಿದ್ದು ಗಮನಿಸಿದರೆ ಅವರು ನುಡಿದಂತೆಯೇ ನಡೆವವರು ! ಮಾತ್ರವಲ್ಲ, ಪದ-ಪದದ ಅರ್ಥವನ್ನೂ ಸಹೃದಯಾಂತರಂಗಕ್ಕೆ ಸ್ಪಷ್ಟವಾಗಿ ದಾಟಿಸುವಲ್ಲಿ ಪದಾರ್ಥಾಭಿನಯದಲ್ಲೇ ವಾಕ್ಯಾರ್ಥಾಭಿನಯವನ್ನೂ ಮೀಟಿದ ಸಾಧ್ಯತೆಯನ್ನು ತೋರಿದ್ದೇ ಅತ್ಯಾಶ್ಚರ್ಯವಾದ ವಿಸ್ತರಣ ! ಸಾತ್ತ್ವಿಕಾಭಿನಯವೆಂಬುದು ಅವರಿಗೆ ಕರೆದಾಗ ಬರುವ ಕಣ್ಣನಂತೆ ! ನಿಃಶ್ರಮದಿಂದ ಅದನ್ನು ಸಾಧಿಸುವ ಬಗೆಯೇ ಲೀಲೆ. ಅದನ್ನೂ ತನಗೆ ಬೇಕೆಂದಾಗ ಬೇಕೆಂದಷ್ಟೇ ಬಿಟ್ಟುಕೊಟ್ಟು ಆಟವಾಡಿಸುವ ಚತುರೆ ಪದ್ದು ಅಕ್ಕ. ಅದು ಅವರ ನೃತ್ಯಾಸ್ವಾದದುದ್ದಕ್ಕೂ ಅನುಭವರೂಪಿಯಾಗಿ ವೈಯಕ್ತಿಕವಾಗಿ ನನಗೆ ಕಂಡಿರುವಂಥದ್ದು. ಕಳೆದ ಸಲದ ಅವರ ಬೆಂಗಳೂರು ಭೇಟಿಯ ಸಮಯ ಹೇಮಾ ಪ್ರಭಾತ್ ಅವರ ಸಂಸ್ಥೆಯಿಂದ ಟೌನ್ ಹಾಲ್ ನಲ್ಲಿ ಏರ್ಪಡಿಸಿದ ನೃತ್ಯಕಾರ್ಯಕ್ರಮಕ್ಕೂ, ಈ ಸಲದ ನೃತ್ಯಪ್ರಸ್ತುತಿಗೂ ತೋರಿದ ವೈವಿಧ್ಯದ ಆಯಾಮ ಅಬ್ಬಬ್ಬಾ ಎನಿಸುವಷ್ಟು. ಕಳೆದ ಸಲ ಹೆಚ್ಚಿನ ನೃತ್ತವಿಸ್ತಾರವನ್ನೇ ತೋರಿಸದೇ ಕೇವಲ ದೇಹದ ರೇಚಕಗಳನ್ನೇ ನುಡಿಸಿ ನಡೆಸಿ ನೃತ್ಯಲೀಲೆಯನ್ನು ಕಾಣಿಸಿದರೆ; ಈ ಸಲ ಸಹೃದಯನಿರೀಕ್ಷಣೆಯಲ್ಲಿ ನೃತ್ತದ ವಿಸ್ತಾರ ಅಧಿಕವಾಗಿ ತೋರಿಕೊಂಡಿತು. ಎರಡು ನೃತ್ಯ ಕಾರ್ಯಕ್ರಮದಲ್ಲೇ ಇಷ್ಟೊಂದು ಅನೂಹ್ಯವಾದ ಅಚ್ಚರಿಯನ್ನು ನೀಡಬಲ್ಲ ಡಾ ಪದ್ಮಾ ಅವರು ಇನ್ನೆಷ್ಟು ಅಚ್ಚರಿ, ಆನಂದಗಳನ್ನು ಮೊದಮೊದಲ ದಶಕಗಳಲ್ಲಿ ಉಣಬಡಿಸಿರಲಿಕ್ಕಿಲ್ಲ.?! ಕಂಡ ಕಣ್ಣುಗಳೇ ಧನ್ಯ.
ಮೊದಲಿಗೆ ತೋಡಯಂ ಅವರ ಪ್ರಭಾವಳಿಯನ್ನು ಚಿಮ್ಮಿಸುವಲ್ಲಿ ಕೊಂಚ ಸೋತಿತಾದರೂ, ದಶಾವತಾರ ಪದ್ಮಾ ಅವರ ಅವತರಣದಲ್ಲಿ ಪ್ರತೀ ಸಲವೂ ವಿನೂತನವಾಗಿಯೇ ಪ್ರಕಟಗೊಳ್ಳುತ್ತಲೇ ಬಂದಿರುವ ನೆಲೆಗಳನ್ನು ಪ್ರಕಾಶಿಸಿತು. ನರಸಿಂಹ, ವಾಮನರನ್ನು ರಸಗರ್ಭದ ಆಳಕ್ಕಿಳಿಸಿದ ಸಂದರ್ಭಕ್ಕೆ ಕಣ್ಣಾಲಿಗಳು ಪಸೆಗೊಂಡರೆ; ಮಾಧುರ್ಯದ ಮಧುವಿನಲ್ಲಿ ಅದ್ದಿದ ಡಾ.ಗಾಯತ್ರಿ ಕಣ್ಣನ್ ಅವರ ನಟುವಾಂಗ ಸಹಿತ ಡಾ. ಕಣ್ಣನ್ ಅವರ ಹಿಮ್ಮೇಳದ ನಾದಬಿಂದುಗಳು ಶ್ರಾವ್ಯಸುಖದ ಸಹಿತ ಅನುಭಾವಪ್ರಪಂಚಕ್ಕೆ ನಿಚ್ಚಣಿಕೆಯೇ ಆಯಿತು. ಕೇಶವನ ನಾಮಸ್ಮರಣದ ಶೃಂಗದಲ್ಲಿ ಭಾವವು ಕರಗಿ ನೀರಾದರೆ; ಇಡಿಯ ಹಿಮ್ಮೇಳ ಮತ್ತು ಗಾನ-ವಾದ್ಯಪರಿಕಲ್ಪನೆಯೇ ನೃತ್ಯವೊಂದು ಅವಶ್ಯವಾಗಿ ಹೊಂದಲೇಬೇಕಾದ ದೈವಿಕ, ಪಾರಮಾರ್ಥಿಕ ಚೈತನ್ಯ ಸ್ಫುರಣೆಗೆ ನಿದರ್ಶನವಾಗಿತ್ತು. ದೇವದಾಸಿಯೊಬ್ಬಳ ಅಂತರಂಗ ಮಥನಕ್ಕೆ ಸಾಕ್ಷಿಯಾದ ವಲ್ಲತ್ತೋಳ್ ಮೆನನ್ ಅವರ ಸಾಹಿತ್ಯಕ್ಕೆ ನೂತನ ದಿಕ್ಕನ್ನೇ ಕೊಟ್ಟ ಡಾ. ಪದ್ಮಾ ಅವರ ನೃತ್ಯದಲ್ಲಿ ಸಾಧಾರಣ ನಾಯಿಕೆಯೂ ಆಸ್ವಾದರಮಣೀಯವಾದಳು. ವೃದ್ಧೆ ದೇವದಾಸಿಯ ಲೋಲುಪತೆಯೂ ಕಲೆಯೊಳಗೆ ಆನಂದದಾಯಕವಾಯಿತು. ಸ್ವಾತಂತ್ರ್ಯದ ಕೂಗಿನೊಳಗೆ ಒಂದಾಗುವ ‘ವಂದೇಮಾತರಂ’ ಭಾಗವು ಆನಂದದ ಕಣ್ಣೀರನ್ನು ಮತ್ತೊಮ್ಮೆ ಚಿಮ್ಮಿಸಿತು. ಕಲೆಯೊಂದು ಇಹದಲ್ಲಿದ್ದೂ ಪರವನ್ನು ಸಾಧಿಸುವ ಊರ್ಧ್ವಗಮನಕ್ಕೆ ಡಾ.ಪದ್ಮಾ ಅವರ ನೃತ್ಯ ಮತ್ತು ಸಂಗೀತದ ಸಮನ್ವಯಕ್ಕಿಂತ ಬೇರಾವುದೇ ಉತ್ಕೃಷ್ಟ ಉದಾಹರಣೆ ಈ ಕಲಾಜಗತ್ತಿನಲ್ಲಿಯೇ ಇರಲಿಕ್ಕಿಲ್ಲ. ಒಂದಂತೂ ನಿಜ., ಡಾ. ಪದ್ಮಾ ಅವರ ನೃತ್ಯದಲ್ಲಿ ರಸಾಸ್ವಾದವೆಂಬುದೇ ಸ್ಥಾಯಿ. ಅದನ್ನು ಬಗೆಗಣ್ಣಾಗಿ ನಮ್ಮ ಪರೀಕ್ಷಣವಾಗಿ ಕಾಂಬ ಹೃದಯ ನಮ್ಮದಾಗಿದ್ದರೆ ಅದೇ ಜನ್ಮಸುಕೃತ. ಮೊಮ್ಮಗಳು ಮಹತಿ ಕಣ್ಣನ್ ಮುದ್ದಾದ ಅಭಿವ್ಯಕ್ತಿಯಲ್ಲಿ ಆಂಗಿಕಾಭಿನಯದ ಸೌಖ್ಯವನ್ನು ಮತ್ತಷ್ಟು ಹತ್ತಿರವಾಗಿಸಿದರು.
ಸಮಗ್ರವಾಗಿ ಈ ಕಾರ್ಯಕ್ರಮವನ್ನು ಏಕವಾಕ್ಯದಲ್ಲಿ ನಿರೂಪಿಸುವುದಾದರೆ- ನಿರುಪಮಾ ಅವರಿಂದ ಅನುಪಮವಾಗಿ ಉಣಬಡಿಸಿದ ಉಪಮಾತೀತ ಕಲೌತಣ. ಇಂಥದ್ದು ನಿರುಪಮಾ ಅವರಿಗಷ್ಟೇ ಸಾಧ್ಯ ಎಂಬುದನ್ನು ಮನಗಾಣಿಸುವ ಮತ್ತೊಂದು ದಿನ – ಮದನೋತ್ಸವ ಎಂಬ ಸಂಭ್ರಮ !

Photo and caption edited by Pooja Balasubhramaniam,

Leave a Reply

*

code