ಅಂಕಣಗಳು

Subscribe


 

‘ಉದಾತ್ತವಾದ ಉದ್ದೇಶದಲ್ಲಿ ಕಲಾಪ್ರಕಾರಗಳು ವಿಕಸಿತವಾಗಲಿ’

Posted On: Saturday, April 27th, 2013
1 Star2 Stars3 Stars4 Stars5 Stars (No Ratings Yet)
Loading...

Author: ಪ್ರೊ.ಪಿ.ವಿ.ಕೃಷ್ಣ ಭಟ್, ನೃತ್ಯಸಂಶೋಧನ ಸಮ್ಮೇಳನದ ಉದ್ಘಾಟನಾ ಭಾಷಣ

ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ-ಸಂಗೀತಾದಿಗಳನ್ನು ಮನರಂಜನೆಯ ಸಾಧನವೆಂದಷ್ಟೇ ಪರಿಗಣಿಸಿಲ್ಲ. ಭಗವದಾರಾಧನೆಯ ಪ್ರತೀಕಗಳು ಎಂದೇ ನಾವು ಅದನ್ನು ಭಾವಿಸಿದ್ದೇವೆ. ದೇವಾಲಯಗಳ ರಂಗಮಂಟಪ, ನೃತ್ಯಶಾಲೆಗಳೂ ಇದನ್ನು ಸ್ಪಷ್ಟಪಡಿಸುತ್ತವೆ. ‘ನೃತ್ಯಂ ಸಮರ್ಪಯಾಮಿ, ಗೀತಂ ಸಮರ್ಪಯಾಮಿ’ ಎಂದೆಲ್ಲಾ ಭಗವಂತನಿಗೆ ಕಲೆಗಳನ್ನು ಸಮರ್ಪಣೆ ಮಾಡುತ್ತೇವೆ. ಆ ಹಿನ್ನೆಲೆಯಲ್ಲಿಯೇ ಮತ್ರ್ಯದಿಂದ ಅಮತ್ರ್ಯಕ್ಕೆ ಕರೆದೊಯ್ಯುವ ದರ್ಶನ ಭಾರತೀಯ ಕಲೆಗಳಲ್ಲಿ ಅಡಕವಾಗಿದೆ. ಮನಸ್ಸನ್ನು ವಿಕಾಸಗೊಳಿಸುತ್ತಾ ಭಗವಂತನ್ನು ಸಾಕ್ಷಾತ್ಕಾರಗೊಳಿಸುವ ಆಶಯವನ್ನು ಹೊಂದಿದೆ.

ಆದರೆ ಇಂದಿನ ಕಾಲಕ್ಕೆ ವಿನೂತನ ಪ್ರಯೋಗಗಳನ್ನು ತರುವ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳ ನೃತ್ಯಗಳನ್ನು ಅನುಕರಣೆ ಮಾಡಿ ಅಳವಡಿಸಿಕೊಳ್ಳುವ ಯೋಚನೆಯೂ ನಡೆಯುತ್ತಲಿದೆ. ಹಾಗೆಂದು ಯಾವುದೇ ಕಲಾಪ್ರಕಾರವೂ ನಿಂತ ನೀರಾಗಲು ಸಾಧ್ಯವಿಲ್ಲ. ಹೊಸ ಪರಿಷ್ಕಾರ, ಬದಲಾವಣೆ ನಿರೀಕ್ಷಿತ. ಇಲ್ಲದೇ ಹೋದರೆ ಅದರ ಉದ್ದೇಶವೂ ಸಾರ್ಥಕಗೊಳ್ಳುವುದಿಲ್ಲ; ಜನರಿಗೆ ಬೇಕಾದ ಉತ್ಸಾಹವನ್ನೂ ನಿರ್ಮಾಣ ಮಾಡುವುದಿಲ್ಲ.

ಆದರೆ ಬದಲಾವಣೆಗಳು ಹೇಗೆ ಆಗಬೇಕು ಎನ್ನುವುದು ಬಹಳ ಮುಖ್ಯ. ಪರಿವರ್ತನೆಯ ಹೆಸರಿನಲ್ಲಿ ಮನಸ್ಸಿಗೆ ತೋಚಿದ ಬದಲಾವಣೆ ತರಲು ಹೋದರೆ ಅದರ ಮೂಲ ಉದ್ದೇಶ, ಧಾತು, ದರ್ಶನಕ್ಕೆ ಹೊಡೆತ ಬೀಳುತ್ತದೆ. ಅದರಲ್ಲೂ ನಮ್ಮ ಮೂಲ ಸಂಸ್ಕೃತಿಯ ಪರಿಕಲ್ಪನೆ, ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ ಬದಲಾವಣೆಗಳು ಘಟಿಸಿದರೆ ಇನ್ನೂ ತೊಂದರೆಗಳು ಜಾಸ್ತಿ. ಪಶ್ಚಿಮದ ನೃತ್ಯರೀತಿಗಳ ಕುರುಡು ಅನುಕರಣೆಗಾಳಾದರಂತೂ ಸಾಕಷ್ಟು ಅನ್ಯಾಯ ಮಾಡಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ಕಲೆಯ ಮೂಲಧಾತುವನ್ನು ಬಿಡದೆಯೇ ಪರಿಷ್ಕಾರ ತರುವ ಪ್ರಯತ್ನ ಆಗಬೇಕು.

ನೃತ್ಯಕಲಾವಿದರು ಸಾಕಷ್ಟಿದ್ದಾರೆ. ವ್ಯಾಪಾರೀಕರಣವಾಗುತ್ತಿರುವ ಹಾದಿ ದಟ್ಟವಾಗುತ್ತಿದೆ. ಆದರೆ ಕಲಾಪ್ರಕಾರವನ್ನು ಕೇವಲ ವ್ಯಾಪಾರೀ ಮನೋಭಾವದಿಂದ ನೋಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶ್ರದ್ಧೆ, ತಪಸ್ಸು ಅಗತ್ಯ ಬೇಕು. ಆಗಲೇ ವಿಕಾಸ ಸಾಧ್ಯ. ಉದಾಹರಣೆಗೆ ಕತೆಯೊಮ್ದನ್ನು ಉಲ್ಲೇಖಿಸುವುದಾದರೆ ತಾನ್‍ಸೇನ್‍ಗಿಂತಲೂ ಮಿಗಿಲಾದ ಸಂಗೀತಗಾರರು ಯಾರಿದ್ದಾರೆ ಎಂದು ಅಕ್ಬರ್ ಚಕ್ರವರ್ತಿ ಕೇಳಿದಾಗ, ತಾನ್‍ಸೇನ್ ತನ್ನ ಗುರುಗಳ ಕಡೆಗೆ ಬೆರಳು ತೊರಿದನಂತೆ. ಗುರುಗಳನ್ನು ಅರಮನೆಗೆ ಕರೆತರಲು ಆಗುವುದಿಲ್ಲವೆಂದು ತಿಳಿದ ಅಕಬರ್ ಗುರುಗಳಿದ್ದ ಮಂದಿರಕ್ಕೇ ತೆರಳಿ ಸಂಗೀತವನ್ನು ಕೇಳಿ ಆನಂದತುಂದಿಲನಾದ.

‘ಅದಾವ ವಿಶೇಷ ಶಕ್ತಿ ತಾನ್‍ಸೇನ್‍ಗಿಂತಲೂ ಹೆಚ್ಚಿನ ಮಟ್ಟದ ಸಂಗೀತವನ್ನು ಗುರುಗಳಲ್ಲಿ ಮೂಡಿಸಿದೆ’ ಎಂಬ ಆತನ ಪ್ರಶ್ನೆಗೆ ತಾನ್‍ಸೇನನ ಉತ್ತರ ಬಹಳ ಮಾರ್ಮಿಕವಾಗಿದೆ. ‘ತನ್ನ ಸಂಗೀತ ಮನುಷ್ಯರನ್ನು ತೃಪ್ತಿಪಡುಸುವುದು. ಆದರೆ ಗುರುಗಳ ಸಂಗೀತವಿರುವುದು ಎಲ್ಲಾ ಬಗೆಯ ಅಧಿಕಾರ ಆರ್ಥಿಕ ರಂಜನೆಯ ಮೋಹವಿಲ್ಲದೆ ಭಗವಂತನ ಆರಾಧನೆಗೆಂದು ಮೀಸಲಾಗಿರುವುದರಿಂದ’ ಎಂದು. ಈ ಮೂಲಕ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಏನೆಂದರೆ ಉದಾತ್ತವಾದ ಉದ್ದೇಶವನ್ನಿಟ್ಟುಕೊಂಡು ಕಲಾಪ್ರಕಾರಗಳು ವಿಕಸಿತವಾದರೆ ಚೈತನ್ಯ ಸಹಜವಾಗಿಯೇ ಅರಳುತ್ತದೆ.

ನೃತ್ಯಸಂಶೋಧನೆಗೆ ಸಹಕಾರ, ಆರ್ಥಿಕ ಒತ್ತಾಸೆ ಹೆಚ್ಚಿನ ಮಟ್ಟದಲ್ಲಿ ಬೇಕು. ಅದಕ್ಕೆ ಎಲ್ಲರೂ ನೂಪುರ ಭ್ರಮರಿಯ ಈ ಕರ್ತವ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸುವಂತಾಗಲಿ. ನೂಪುರ ಭ್ರಮರಿಯ ಕಾರ್ಯ ಸ್ತ್ಯುತ್ಯಾರ್ಹವಾದ ಪ್ರಯತ್ನ. ಕರ್ನಾಟಕದ ಮಟ್ಟಿಗೆ ಈ ಬಗೆಯ ವೇದಿಕೆ ಈ ವರೆಗೆ ರೂಪುಗೊಂಡಿರಲಿಲ್ಲ. ಆಸಕ್ತರೆಲ್ಲರ ಬೆಂಬಲ ಮತ್ತಷ್ಟು ಸಂಸ್ಥೆಯನ್ನು ಸಶಕ್ತವಾಗುವಂತೆ ಮಾಡಲಿ.

Leave a Reply

*

code