ಅಂಕಣಗಳು

Subscribe


 

ಭಾರತೀಯ ರಂಗಭೂಮಿ, ಯಕ್ಷಗಾನ ಹಾಗೂ ಭರತನೃತ್ಯಾದಿ ಕಲೆಗಳಿಗಿರುವ ಸಂಬಂಧ ಮತ್ತು ಸಮನ್ವಯ ವಿಚಾರ ಸಂಕಿರಣ : ಹೋಲಿಕೆಯ ಹದುಳ

Posted On: Thursday, February 6th, 2020
1 Star2 Stars3 Stars4 Stars5 Stars (No Ratings Yet)
Loading...

Author: - ದಿವಾಕರ ಹೆಗಡೆ, ಮೈಸೂರು

೨೦೧೯, ಡಿಸೆಂಬರ್ ಹದಿನೈದರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ನೂಪುರ ಭ್ರಮರಿ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ರಂಗಭೂಮಿ ಯಕ್ಷಗಾನ ಹಾಗೂ ಭರತನೃತ್ಯಾದಿ ಕಲೆಗಳಿಗಿರುವ ಸಂಬಂಧ ಮತ್ತು ಸಮನ್ವಯ ಕುರಿತಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಇಡೀ ದಿನದ ಕಾರ್ಯಕ್ರಮವನ್ನು ನೂಪುರ ಭ್ರಮರಿಯ ಡಾ. ಮನೋರಮಾ ಬಿ.ಎನ್. ಶ್ರಮಪಟ್ಟು ಸಂಯೋಜಿಸಿದ್ದರು.

ಯಕ್ಷಗಾನ, ಕನ್ನಡದ ಪ್ರಾತಿನಿಧಿಕ ರಂಗ ಕಲೆ. ಪರಂಪರೆಗೂ ವರ್ತಮಾನಕ್ಕೂ ನಿರಂತರ ಅನುಸಂಧಾನವನ್ನು ಕಾಯ್ದುಕೊಂಡು ಬಂದಿರುವ ಕಲೆ. ಈ ಕಲೆಗೆ ತನ್ನ ಸಹೋದರ ಕಲೆಗಳ ಸಂಬಂಧ ಎಂಥದ್ದು ಎನ್ನುವುದರ ಕುರಿತು ತಿಳಿದುಕೊಳ್ಳಬೇಕಾದ, ಹೋಲಿಸಿ ನೋಡಿ ಕೊಡುಕೊಳೆಯನ್ನು ನಿರ್ದಿಷ್ಟವಾಗಿ ಗುರುತಿಸಿಕೊಳ್ಳಬೇಕಾದ ಅಗತ್ಯವಂತೂ ಇದ್ದೇ ಇದೆ. ಇದರ ಕುರಿತ ಗಂಭೀರ ಸಮಾಲೋಚನೆಗೆ ಅಂದಿನ ವಿಶ್ಲೇಷಣೆಗಳು, ಪ್ರಾತ್ಯಕ್ಷಿಕೆಗಳು ಸಾಕ್ಷಿಯಾದವು.

ಹಿಂದಿನ ದಿನಗಳಲ್ಲಿ ಯಕ್ಷಗಾನದ ಪರಿಸರದಲ್ಲಿ ಭಾರತೀಯ ನೃತ್ಯದ ಇನ್ನುಳಿದ ಪ್ರಕಾರಗಳ ಪರಿಚಯ ಅಪರೂಪದ್ದಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳು, ಸೂರಿಕುಮೇರು ಗೋವಿಂದ ಭಟ್ಟರು ಹೀಗೆ ಕೆಲವೇ ಕೆಲವರು ಯಕ್ಷಗಾನದ ಸಂಗಡ ಒಂದಷ್ಟು ಭರತ ನೃತ್ಯದ ಅಭ್ಯಾಸವನ್ನೂ ಮಾಡಿದ್ದರು. ಕೆರೆಮನೆ ಶಂಭು ಹೆಗಡೆಯವರು ದೆಹಲಿಯಲ್ಲಿದ್ದು ನೃತ್ಯ ವಿದುಷಿ ಮಾಯಾರಾವ್ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನೇತರ ರಂಗ ತಂತ್ರ, ಸಿದ್ಧಾಂತಗಳ ಅಧ್ಯಯನ ಮಾಡಿದ್ದರು. ಮೂರೂರು ದೇವರು ಹೆಗಡೆ, ಎಕ್ಟರ್ ಜೋಶಿ, ಸಾಲ್ಕೋಡು ಗಣಪತಿ ಹೆಗಡೆಯವರೆಲ್ಲ ವೃತ್ತಿ ನಾಟಕ ಕಂಪನಿಗಳಲ್ಲಿ ಪಳಗಿದವರಾಗಿದ್ದರು. ಅವರೆಲ್ಲರ ಅಭಿನಯದಲ್ಲಿ ಸಹೋದರ ಕಲೆಗಳ ಪ್ರಭಾವ ಅಷ್ಟಿಷ್ಟು ಕಾಣಿಸಿಕೊಂಡಿದೆ. ಕೆರೆಮನೆ ಶಂಭು ಹೆಗಡೆಯವರ ಪ್ರಯತ್ನ ಈ ವಿಷಯದಲ್ಲಿ ಗಮನಾರ್ಹವಾದದ್ದು. ಆದರೆ ಆಗ, ಯಕ್ಷಗಾನಕ್ಕೆ ಬೇರೆ ರಂಗಭೂಮಿಯ ಪ್ರಭಾವ-ಪರಿಕರಗಳು ನಿಷಿದ್ಧ ಎನ್ನುವ ನಿಲುವಿಗೆ ಬದ್ಧರಾದವರು ಮತ್ತು ಬಳಸಿಕೊಳ್ಳುವುದಿದ್ದರೂ ಊಟದಲ್ಲಿ ಮೇಲುಪ್ಪಿನಂತೆ ಬಳಸಬಹುದೆಂಬ ಉದಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಈಗಿನ ಪರಿಸ್ಥಿತಿ ಸಂಪೂರ್ಣ ಬೇರೆಯಾದದ್ದು. ವೃತ್ತಿ ರಂಗಭೂಮಿಯ ಮಾದರಿಗಳನ್ನು ಸರಿಸಿ ಪರಂಪರೆಯನ್ನೂ ಪರಿಷ್ಕಾರವನ್ನೂ ಸರ್ಜನಶೀಲವಾಗಿ ನಿರೂಪಿಸುವ ಹವ್ಯಾಸಿ ತಂಡಗಳು ಬೆಳೆದು ಬಂದಿವೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಿನ್ನೆಲೆ ಮುನ್ನೆಲೆಗಳಲ್ಲಿ ತೊಡಗಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಯಕ್ಷಗಾನ ಕಲಿಕಾ ಕೇಂದ್ರಗಳು, ಹವ್ಯಾಸಿ ಪ್ರದರ್ಶನಗಳೂ ವ್ಯವಸ್ಥಿತವಾಗಿ ನಡೆಯುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಯಕ್ಷಗಾನದ ಸಂಗಡ ಉಳಿದ ನೃತ್ಯ ಪ್ರಕಾರಗಳಲ್ಲೂ ಪರಿಶ್ರಮವುಳ್ಳವರಾಗಿದ್ದಾರೆ. ಅವರಿಗೆ ಸಮಗ್ರ ಮಾರ್ಗದರ್ಶನ ಬೇಕಾಗಿದೆ. ಯಕ್ಷಗಾನದ ಅನನ್ಯತೆಯೂ ಉಳಿಯಬೇಕು, ಅನ್ಯ ಪ್ರಕಾರದ ಪರಿಕರಗಳ ಔಚಿತ್ಯಪೂರ್ಣ ಬಳಕೆಯೂ ಸಾಧ್ಯವಾಗಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅಂದು ನಡೆದ ವಿಚಾರ ವಿನಿಮಯ, ಹೋಲಿಕೆಯ ಪ್ರಾತ್ಯಕ್ಷಿಕೆಗಳು ಮಹತ್ವವಾದವು. ಸುದೂರದ ಪರಿಣಾಮವನ್ನು ಬೀರುವಂತಹವು.

ಯಕ್ಷಗಾನದ ಭಾಗವತಿಕೆ ಅನ್ಯ ಪ್ರಭಾವಕ್ಕೆ ಒಳಗಾಗುತ್ತಲೇ ಬಂದಿದೆ. ತೆಂಕಿನಲ್ಲಿ ಕರ್ನಾಟಕ ಸಂಗೀತದಂತೆ ಹಾಡುವ ಮಂಡೆಚ್ಚರಿದ್ದರು. ಬಡಗಿನಲ್ಲಿ ಹೆಚ್ಚಿನ ಭಾಗವತರು ನಾವುಡೀಕರಣದಿಂದ ತಪ್ಪಿಸಿಕೊಳ್ಳಲು ಪರದಾಡುವುದನ್ನು ಕಾಣುತ್ತೇವೆ. ಹೊಸ ಪ್ರಸಂಗಗಳ ಹಾವಳಿಯಲ್ಲಿ ವೇಭೂಷಣವೂ ಸಾಕಷ್ಟು ಬದಲಾವಣೆ ಹೊಂದಿದೆ. ಇವೆಲ್ಲ ಅನಿವಾರ್ಯ ಎಂಬ ವೃತ್ತಿ ಮೇಳಗಳ ಮಾತನ್ನು ಪ್ರೇಕ್ಷಕರೂ ಒಪ್ಪಿ ಪ್ರೋತ್ಸಾಹಿಸುತ್ತಿದ್ದಾರೆ! ಈ ಮಾತನ್ನೇ ನಾವು ನೃತ್ಯ ಅಭಿನಯಗಳ ಶಾಸ್ತ್ರೀಯ ಚಿಂತನದ ನೆಲೆಯಲ್ಲಿ ಸ್ವೀಕರಿಸಿದರೆ ಅದನ್ನೂ ಪ್ರೋತ್ಸಾಹಿಸುವ ಪ್ರೇಕ್ಷಕ ವರ್ಗವೊಂದು ಯಕ್ಷಗಾನಕ್ಕಿದೆ. ಅಲ್ಲದೆ, ಸಹೋದರ ಕಲೆಗಳ ಅಧ್ಯಯನದೊಂದಿಗೆ ಅವನ್ನು ಯಕ್ಷಗಾನಕ್ಕೆ ಅಳವಡಿಸಿಕೊಂಡು, ಔಚಿತ್ಯಪೂರ್ಣವಾಗಿ ಪ್ರದರ್ಶನ ನೀಡಬಲ್ಲ ಹೊಸ ಕಲಾವಿದರ ಪಡೆಯೇ ಇದೆ.

ಶತಾವಧಾನಿ ಡಾ. ರಾ. ಗಣೇಶರ ಸಾಹಿತ್ಯ ಮತ್ತು ಮಾರ್ಗದರ್ಶನದಲ್ಲಿ, ಭರತನೃತ್ಯದ ನಿಲುವು ಚಾರಿ ಕರಣಗಳ ಸುಂದರ ಹೊಂದಾಣಿಕೆಯ ನಿದರ್ಶನವೊಂದನ್ನು ಮಂಟಪ ಪ್ರಭಾಕರ ಉಪಾಧ್ಯರು ಸ್ತ್ರೀ ವೇಷದ ಏಕವ್ಯಕ್ತಿ ಯಕ್ಷಗಾನದಲ್ಲಿ ಸಮರ್ಥವಾಗಿ ನೀಡಿದ್ದಾರೆ. ಔಪಚಾರಿಕ ಉದ್ಘಾಟನೆಯ ನಂತರದ ಮೊದಲ ಗೋಷ್ಠಿಯನ್ನು ನಡೆಸಿಕೊಟ್ಟವರು ಶತಾವಧಾನಿ ಗಣೇಶರು. ಅಂದು ಅವರು ನೀಡಿದ ವಿಶ್ಲೇಷಣೆ ಅಂದಿನ ಸಂಕಲ್ಪಕ್ಕೆ ನೀಡಿದ ದಿಕ್ಸೂಚಿಯಾಗಿತ್ತು. ಅವರ ಮಾರ್ಗದರ್ಶನದಲ್ಲಿ ಮಂಟಪ ಪ್ರಭಾಕರ ಉಪಾಧ್ಯರು ನೀಡಿದ ಪ್ರಾತ್ಯಕ್ಷಿಕೆ ಮನೋಜ್ಞವಾಗಿತ್ತು. ರಂಗದಲ್ಲಿ ರಸಪ್ರತಿಪಾದನೆಗೆ, ಪಾತ್ರಪ್ರಸ್ತುತಿಗೆ ಎಂತಹ ಸೌಂದರ್ಯ ಒದಗುತ್ತದೆ ಎನ್ನುವುದು ಮನದಟ್ಟಾಯಿತು. ಮಂಟಪರು ಯಕ್ಷಗಾನದ ಸ್ತ್ರೀಪಾತ್ರದ ವೇಷ, ಬಣ್ಣ, ನಡೆ, ನಿಲುವುಗಳಲ್ಲೆಲ್ಲ ಸೌಂದರ್ಯವನ್ನು ತುಂಬಿದ್ದಾರೆ. ಈಗೀಗ ಅದನ್ನೆಲ್ಲ ಅಷ್ಟಿಷ್ಟು ಅನುಕರಣೆ ಮಾಡುವವರೂ ಸಿಗುತ್ತಿದ್ದಾರೆ. ಆದರೆ, ಯಕ್ಷಗಾನ ರಂಗದ ಮುಖ್ಯಪ್ರವಾಹ ಅದನ್ನು ಸೇರಿಸಿಕೊಂಡು ಹರಿಯುತ್ತಿಲ್ಲ, ಸಮಾಂತರವಾಗಿ ಹರಿಯುತ್ತಿದೆ ಎನ್ನುವುದೂ ಸತ್ಯ. ಈ ವಿಷಯದಲ್ಲಿ ಅಂದು ತೆಂಕು ತಿಟ್ಟಿನ ಮೇರು ಕಲಾವಿದರಾದ ಗೋವಿಂದ ಭಟ್ಟರು ತಮ್ಮ ಪ್ರಯತ್ನಗಳ ಬಗ್ಗೆ ಹೇಳುವ ಪ್ರಯತ್ನ ಮಾಡಿದರು. ಆದರೆ, ಅಗತ್ಯ ಪೂರ್ವ ಸಿದ್ಧತೆ, ಪರಿಕರಗಳ ಹೊಂದಾಣಿಕೆಯಿಲ್ಲದೆ ಅದು ನಿರೀಕ್ಷೆಯನ್ನು ಹುಸಿಯಾಗಿಸಿತು. ಅಂತೆಯೇ ಕೆರೆಮನೆ ಶಿವಾನಂದ ಹೆಗಡೆಯವರ ಪ್ರಸ್ತುತಿಯೂ ಹೊಸ ಸಾಧ್ಯತೆಗಳನ್ನು ಪ್ರಸ್ತಾಪಿಸಿತಾದರೂ ಪ್ರಾತ್ಯಕ್ಷಿಕೆಯಿಲ್ಲದೇ ಬಡವಾಯಿತು. ಯಕ್ಷಗಾನದ ವೃತ್ತಿನಿರತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲವಲ್ಲ ಎಂಬ ಕೊರಗು ಕಾಡಿತು. ದೊಡ್ಡ ಪೆಟ್ಟಿಗೆಯಲ್ಲಿ ಬಹಳವಿದೆ ಎಂದು ಅದನ್ನು ತೆರೆಯದೇ ಕೈಯಲ್ಲಿ ಕೀಲಿ ತಿರುಗಿಸುತ್ತ ‘ನಮ್ಮದೇ ಸೂಪರ್’ ಎನ್ನುವ ಪಂಡಿತ ಪರಾಕು ಆತ್ಮ ಪ್ರಶಂಸೆ ಎನ್ನಿಸಿತು.

ಡಾ. ಶೋಭಾ ಶಶಿಕುಮಾರ್ ಅವರು ತಮ್ಮ ಶಿಷ್ಯರೊಂದಿಗೆ ನಡೆಸಿಕೊಟ್ಟ ಪ್ರಾತ್ಯಕ್ಷಿಕೆ, ಭರತ ನೃತ್ಯ ಮತ್ತು ಯಕ್ಷಗಾನದ ಹೊಂದಾಣಿಕೆಯ ಸಂಗತಿಗಳನ್ನು ತೆರೆದು ತೋರಿದ ಪರಿ ಅಭ್ಯಾಸಿಗಳಿಗೆ ಹೊಸ ಸಾಧ್ಯತೆಗಳತ್ತ ಕೈತೋರಿತು. ಎರಡು ಮತ್ತು ಎರಡಕ್ಕಿಂತ ಹೆಚ್ಚು ಕಲಾವಿದರು ರಂಗದಲ್ಲಿರುವಾಗ ಆ ಕಲಾವಿದರ ಪರಸ್ಪರ ನೋಟ ನಿಲುವುಗಳ ಕೋನಗಳಿಂದಲೇ ಸಿದ್ಧಿಸುವ ಭಾವಸಂವಹನದ ರೀತಿಯೇ ಅನನ್ಯವಾದದ್ದು. ಯಕ್ಷಗಾನ ಕಲಾವಿದರಿಗಿರುವ ಸ್ವಾತಂತ್ರ್ಯಕ್ಕೆ ಸೌಂದರ್ಯದ ಸಂಯಮ ಒದಗಿದರೆ ಅದೆಷ್ಟು ಹೊಸತನವನ್ನು ಪಡೆಯಬಹುದಲ್ಲ ಎನಿಸಿದ್ದು ನಿಜ. ಕೂಚಿಪುಡಿಯ ವಿದುಷಿ ಡಾ. ವೀಣಾಮೂರ್ತಿ ವಿಜಯ್ ಅವರು ಯಕ್ಷಗಾನದ ಆಂಗಿಕಾಭಿನಯಗಳನ್ನು ತಮ್ಮ ಪ್ರಯೋಗದಲ್ಲಿ ಅಳವಡಿಸಿಕೊಂಡ ಮಾದರಿಗಳನ್ನು ಶ್ರೀಮತಿ ಶಮಾ ಕೃಷ್ಣ, ಕೃಷ್ಣಮೂರ್ತಿ ತುಂಗ ಮತ್ತು ಕುಮಾರಿ ಚಿತ್ಕಲಾ ತುಂಗ ಅವರ ನೆರವಿನಲ್ಲಿ ಪ್ರಸ್ತುತಪಡಿಸಿದರು. ಆಗ ಯಕ್ಷಗಾನದ ಚಾಲುಕುಣಿತಗಳು ಅದೆಷ್ಟು ಸುಂದರವಾಗಿವೆ ಎನ್ನಿಸಿತು. ಕೂಚಿಪುಡಿಯ ಅಡವುಗಳು ಚೆಂದದ ಒಡವೆಗಳಂತೆ ಯಕ್ಷಗಾನವನ್ನು ಅಲಂಕರಿಸಬಲ್ಲವು, ಸೂಕ್ಷ್ಮ ಭಾವಾಭಿವ್ಯಕ್ತಿಗೆ ಬೇಕಾದ ಅಂಗಭಾಷೆಯನ್ನು ರೂಢಿಸಬಲ್ಲವು ಎನ್ನುವುದನ್ನು ಸ್ಪಷ್ಟಪಡಿಸಿದವು.

ಈ ಎಲ್ಲ ಪ್ರಾತ್ಯಕ್ಷಿಕೆಗಳಿಗೆ ಕಿರೀಟವಿಟ್ಟಂತೆ ಪ್ರದರ್ಶಿತವಾದದ್ದು ಡಾ. ಬಿ.ಎನ್. ಮನೋರಮಾ ಅವರ ಯಕ್ಷಭಾಣಿಕದ ಪ್ರಸ್ತುತಿ. ಯಕ್ಷಗಾನ ಮತ್ತು ಭರತನೃತ್ಯದ ಸಹಾಯದಿಂದ ಗದಾಪರ್ವದ ಕೌರವನ ಭಾವ ತಲ್ಲಣಗಳನ್ನು ತೆರೆದಿಡುವ ಪ್ರಯತ್ನ ಹೊಸತೆನ್ನಿಸಿತು, ಹದುಳವೆನ್ನಿಸಿತು. ಅಭಿನಯವೇ ಹೆಚ್ಚು ಹೇಳುತ್ತಿರುವಾಗ ವಾಚಿಕದ ಸಂಯಮ ಮುಖ್ಯವೆನ್ನಿಸಿತು. ಮರು ಪ್ರಯೋಗವಾದರೆ ಉದ್ದೇಶಿತ ಪ್ರಸ್ತುತಿಯ ನವಿರಾದ ಸಾಧ್ಯತೆಗಳೆಲ್ಲ ತೆರೆದುಕೊಳ್ಳಬಹುದೆನ್ನಿಸಿತು.

ಒಟ್ಟಾರೆ ಸಹೋದರ ಕಲೆಗಳು ಯಕ್ಷಗಾನದ ದಾಯಾದ್ಯರಲ್ಲ ಎಂಬ ಔದಾರ್ಯ ನಮ್ಮದಾದರೆ ಕೊಡುಕೊಳುವಿಕೆಯ ಉತ್ತಮ ನಿದರ್ಶನಗಳು ಮೂಡಿಬರಲು ಸಾಧ್ಯ ಎಂಬ ಭರವಸೆಯನ್ನು ಹುಟ್ಟಿಸಿದ ದಿನ ಅದು. ಯಕ್ಷಗಾನ ಅಕಾಡೆಮಿ ಇಂತಹ ಅಕಾಡೆಮಿಕ್ ಸಮಾವೇಶಗಳನ್ನು ಹೇಗೆ ನಡೆಸಬಹುದು ಎನ್ನುವುದಕ್ಕೂ ಮಾದರಿಯಾಗಿತ್ತು.

————-

 (ಲೇಖಕರು- ಆಕಾಶವಾಣಿ ಉದ್ಯೋಗಿ, ಬರೆಹಗಾರರು, ಅವಲೋಕನಕಾರರು, ಏಕವ್ಯಕ್ತಿ ತಾಳಮದ್ದಳೆಯ ಸೃಷ್ಟಿಶೀಲ)

Photos by : Pooja Balasubhramanya, Bengaluru

 

 

Leave a Reply

*

code