ಅಂಕಣಗಳು

Subscribe


 

ಯಕ್ಷಗಾನ ರಂಗಭಾಷೆ

Posted On: Friday, April 15th, 2011
1 Star2 Stars3 Stars4 Stars5 Stars (1 votes, average: 1.00 out of 5)
Loading...

Author: ಡಾ. ಚಂದ್ರಶೇಖರ ದಾಮ್ಲೆ, ಯಕ್ಷಗಾನ ಕಲಾವಿದರು, ಉಪನ್ಯಾಸಕರು, ಸುಳ್ಯ, ದ.ಕ.

ರಂಗಭಾಷೆಯೆಂದರೆ ರಂಗಕ್ಕೆ ಕಲಾವಿದರ ಪ್ರವೇಶ, ರಂಗಕ್ರಮಗಳು, ರಂಗ ಚಲನೆ, ರಂಗದಲ್ಲಿ ಪಾತ್ರಗಳ ಮುಖಾ-ಮುಖೀ ನಿಲುವುಗಳು, ರಂಗ ಸಮತೋಲನ, ರಂಗಸ್ಥಳದ ಪೂರ್ಣ ಉಪಯೋಗ ಮುಂತಾಗಿ ನಾಟ್ಯಾಭಿನಯದ ಮೂಲಕ ಪ್ರೇಕ್ಷಕನಿಗೆ ಕಥಾನುಭವವನ್ನು ನೀಡುವ ರಂಗ ತಂತ್ರವಾಗಿದೆ. ರಂಗಭಾಷೆಯು ಪ್ರತಿಯೊಂದು ನಾಟ್ಯ ಪ್ರಕಾರಕ್ಕೂ ಅದರದ್ದೇ ಆದ ಐಡೆಂಟಿಟಿಯನ್ನು ನೀಡುತ್ತದೆ. ಈ ಭಾಷೆ ಗೊತ್ತಿರುವವರೇ ಒಳ್ಳೆಯ ಪ್ರೇಕ್ಷಕರಾಗಬಲ್ಲರು. ಸಾಮಾನ್ಯವಾಗಿ ರಂಗಭಾಷೆಯ ಪರಿಚಯವಿರುವವರೇ ಪ್ರದರ್ಶನಗಳಿಗೆ ಬರುತ್ತಾರೆ ಹಾಗೂ ಕಲಾಸ್ವಾದನೆಯನ್ನು ಮಾಡುತ್ತಾರೆ.

ಕಲಾಪ್ರಕಾರಗಳ ವಿಭಿನ್ನತೆಯ ಪರಿಚಯವಾಗುವುದೇ ಅದರ ರಂಗಭಾಷೆಯಲ್ಲಿ. ಭರತನಾಟ್ಯ, ಕೂಚಿಪುಡಿ, ಕಥಕ್, ಕಥಕ್ಕಳಿ, ಯಕ್ಷಗಾನ ಇವುಗಳ ಮಧ್ಯೆ ಸಾಮ್ಯತೆಯ ಅಂಶಗಳನ್ನು ಹೆಕ್ಕಿ ತೆಗೆಯಬಹುದಾದರೂ ಮೇಲ್ನೋಟಕ್ಕೇನೇ ಅವುಗಳ ನಡುವೆ ವ್ಯತ್ಯಾಸವಿರುವುದು ರಂಗಭಾಷೆಯ ಪ್ರಭೇದದಿಂದಾಗಿಯೇ. ಇದು ಕೇವಲ ಆಹಾರ್ಯಭೇಧದಿಂದಾಗಿ ಗೊತ್ತಾಗುವುದಲ್ಲ. ಆಯಾ ಕಲೆಗಳ ರಂಗಭಾಷಾ ಭೇದದಿಂದಾಗಿಯೇ ಗೊತ್ತಾಗುವಂತಹದು.

ಉದಾಹರಣೆಗೆ ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗುತಿಟ್ಟು ಇವುಗಳ ನಡುವೆ ರಂಗಭಾಷಾ ಪ್ರಭೇದವಿರುವುದರಿಂದಲೇ ನಾವು ಅವುಗಳನ್ನು ನೋಡುವಾಗಲೇ ನಮ್ಮ ದೃಷ್ಟಿಯನ್ನು ಹೊಂದಿಸಿಕೊಂಡಿರುತ್ತೇವೆ. ರಂಗಸ್ಥಳದಿಂದ ಸರಿಯಾದ ಭಾಷೆಯಲ್ಲೇ ಕಥಾನಕ ಪ್ರದರ್ಶನವಾದರೆ ಮಾತ್ರ ’ಆಟ ಚೆನ್ನಾಗಿತ್ತು’ ಎಂದು ಹೇಳಲು ಸಾಧ್ಯ. ಇಲ್ಲಿ ನಾಟ್ಯ, ವೇಷಭೂಷಣ, ಅಭಿನಯ, ಅರ್ಥಗಾರಿಕೆಗಳಷ್ಟೇ ಅಲ್ಲ, ರಂಗಸ್ಥಳದ ಸಮತೋಲನ ಹಾಗೂ ಪೂರ್ಣ ಉಪಯೋಗ ಹೇಗೆ ಮಾಡಿದ್ದಾರೆ ಎಂಬುದೂ ಮುಖ್ಯ.

ರಂಗಸ್ಥಳದಲ್ಲಿ ರಥದ ಮೇಲೆ ಕುಳಿತು, ಕೆಳಗಿಳಿದು ನಿಂತು, ಕುಣಿದು, ಓಡಾಡಿ, ಇನ್ನೊಬ್ಬರಿಗೆ ಸ್ಪಂದಿಸಿ, ಯುದ್ಧಕ್ರಮಗಳನ್ನು ನಿರ್ವಹಿಸಿ ಮಾಡುವ ಎಲ್ಲ ಕೆಲಸಗಳ ಸಂದರ್ಭದಲ್ಲಿಯೂ ಇದು ಪ್ರೇಕ್ಶಕರನ್ನು ತಲುಪುವ ಭಾಷೆಯಲ್ಲಿದೆಯೇ ಎಂಬ ಎಚ್ಚರ ಕಲಾವಿದನಿಗೆ ಇರಬೇಕು. ಹಾಗಾಗಿ ಒಬ್ಬನೇ ಪಾತ್ರಧಾರಿ ಇದ್ದಾಗ ನಿಲ್ಲಬೇಕಾದ ಸ್ಥಳ, ಇಬ್ಬರಿದ್ದಾಗ ಪರಸ್ಪರ ಸ್ಪಂದಿಸುತ್ತ ನಿಲ್ಲುವ ಕ್ರಮ, ಅನೇಕ ಪಾತ್ರಧಾರಿಗಳಿದ್ದಾಗ ಆವರಿಸಬೇಕಾದ ರಂಗದ ವರ್ತುಲ, ಅದರ ಮಧ್ಯ ಭಾಗ, ಎದುರು ಮೂಲೆಗಳು, ಹಿಂದಿನ ಮೂಲೆಗಳು ಮುಂತಾದುವುಗಳನ್ನು ಸಮರ್ಪಕವಾಗಿ ಅರಿತು ಬಳಸಿಕೊಳ್ಳುವುದೇ ರಂಗಭಾಷೆ. ಹೀಗಾಗಿ ಯಕ್ಷಗಾನದ ಪರಂಪರೆಯಲ್ಲಿ ರಂಗಭಾಷೆಯನ್ನು ಹೇಗೆ ನಿರೂಪಿಸಿದ್ದಾರೆಂಬುದನ್ನು ಹಿರಿಯರಿಂದ ತಿಳಿದು ದಾಖಲಿಸಿಕೊಳ್ಳುವುದು ಉಪಯುಕ್ತ ಕಾರ್ಯವೆನಿಸುತ್ತದೆ.

ಉದಾ : ತೆಂಕುತಿಟ್ಟಿನ ಧಿತ್ತದ ಕ್ರಮವು ಬಹಳ ವ್ಯವಸ್ಥಿತವಾಗಿದೆ. ವೇಷಧಾರಿಗಳಿಬ್ಬರೂ ಸರಿಯಾದ ನಾಟ್ಯಾಭ್ಯಾಸಿಗಳಾಗಿದ್ದರೆ ಇದು ಒಂದು ಸುಂದರವಾದ ಮುಖಾ-ಮುಖೀ ನೃತ್ಯ. ಇದು ರಂಗಸ್ಥಳದ ಮಧ್ಯದಲ್ಲೇ ನಡೆಯಬೇಕಾದುದು. ಆದರೆ ಇಂದಿನ ಯಕ್ಷಗಾನದ ಆಟಗಳಲ್ಲಿ ಇದು ಒಟ್ಟಾರೆಯಾಗಿ ಮುಗಿದು ಹೋಗುತ್ತದೆ. ಹಾಗೆಯೇ ಎದುರಾಳಿಗಳು ನಿಲ್ಲಬೇಕಾದ ಕ್ರಮ, ವೀರೋಚಿತವಾಗಿ ನೃತ್ಯಾಭಿನಯದಲ್ಲೇ ಪರಸ್ಪರ ಸ್ಪಂದಿಸುವ ಮತ್ತು ಕೆಣಕುವ ಕ್ರಮಗಳನ್ನು ಮಾಡಿದರೆ ರಂಗಭಾಷೆಯ ಮೂಲಕವೇ ಪ್ರದರ್ಶನವನ್ನು ಪ್ರೇಕ್ಷಕನಿಗೆ ತಲುಪಿಸಿದಂತಾಗುತ್ತದೆ.

ಕಥಕ್, ಕೂಚಿಪುಡಿ, ಭರತನಾಟ್ಯ ಮುಂತಾದುವುಗಳಲ್ಲಿ ಹಿಮ್ಮೇಳದವರು ಒಂದು ಬದಿಯಲ್ಲಿ ಕುಳಿತಿರುತ್ತಾರೆ. ಆದರೆ ಯಕ್ಷಗಾನದಲ್ಲಿ ಹಿಮ್ಮೇಳದವರು ಪ್ರೇಕ್ಷಕರಿಗೆದುರಾಗಿ ಕುಳಿತಿದ್ದು ರಂಗದ ಒಂದು ಪ್ರಧಾನ ಭಾಗವಾಗಿ ಬಿಡುವುದರಿಂದ ಈ ರಂಗಭಾಷೆಯ ಸಂಕೀರ್ಣತೆ ಹೆಚ್ಚಾಗುತ್ತದೆ. ಅವರ ಅಂಗಿ ಮುಂಡಾಸುಗಳು ಕೂಡಾ ಮುಖ್ಯವಾಗುತ್ತವೆ. ಅದರ ಜೊತೆಗೆ ಪ್ರದರ್ಶನ ಕ್ರಿಯೆಯಲ್ಲಿ ಅವರ ಪೂರ್ಣ ತೊಡಗಿಸಿಕೊಳ್ಳುವಿಕೆ (Iಟಿvoಟvemeಟಿಣ) ಮುಖ್ಯವಾಗುತ್ತದೆ. ಅವರ ಇತರ ಯಾವುದೇ ವರ್ತನೆಗಳು ಪ್ರೇಕ್ಷಕನಿಗೆ ನೇರವಾಗಿ ತಲುಪುವುದರಿಂದ ಅವು ರಂಗಭಾಷೆಗೆ ತೊಡಕನ್ನುಂಟು ಮಾಡುತ್ತವೆ.

ಹೀಗಾಗಿ ಮುಮ್ಮೇಳ ಹಾಗೂ ಹಿಮ್ಮೇಳ ಒಟ್ಟಾಗಿ ಪ್ರಸಂಗವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ದುಡಿಯಬೇಕಾಗುತ್ತದೆ. ಇದರಲ್ಲಿ ಹೆಚ್ಚಿನ ಶ್ರದ್ಧೆ ತೋರುವುದರಿಂದಲೇ ಬಡಗುತಿಟ್ಟಿನ ಆಟಗಳು ಕಲಾಸ್ವಾದಕರಿಗೆ ಇಷ್ಟವಾಗುತ್ತವೆ. ಅನೇಕ ಯಕ್ಷಗಾನ ಕಲಾಸಕ್ತರು ಬೆಂಗಳೂರಿನಲ್ಲಾಗಲೀ, ಊರಿನಲ್ಲಾಗಲೀ ಕೇಳುವ ಪ್ರಶ್ನೆಯೆಂದರೆ ಬಡಗುತಿಟ್ಟಿಗೆ ಜನಸೇರುವಂತೆ ತೆಂಕುತಿಟ್ಟಿಗೆ ಯಾಕೆ ಸೇರುವುದಿಲ್ಲ? ಈ ಪ್ರಶ್ನೆಯ ಪ್ರಸ್ತುತತೆಯನ್ನೇ ತೆಂಕಿನವರು ಆಕ್ಷೇಪಿಸಬಹುದು. ಆದರೆ ಪ್ರಶ್ನೆ ಇರುವುದಂತೂ ಸತ್ಯ.

ನನ್ನ ಉತ್ತರವೇನೆಂದರೆ ತೆಂಕಿನಲ್ಲಿ ರಂಗಭಾಷೆಯ ಕೊರತೆಯದ್ದೇ ಸಮಸ್ಯೆ. ಪ್ರದರ್ಶನದ ಯಶಸ್ಸಿಗೆ ಹಿಮ್ಮೇಳ-ಮುಮ್ಮೇಳದವರ ಪೂರ್ಣ ತೊಡಗಿಸಿಕೊಳ್ಳುವಿಕೆ ಹಾಗೂ ರಂಗ ಭಾಷೆಯೂ ಮುಖ್ಯ. ಹಿಂದಿನಿಂದ ಇದ್ದ ಕ್ರಮಗಳನ್ನು ಅಲ್ಪ-ಸ್ವಲ್ಪ ಬಿಡುವುದರಲ್ಲಿ ನಿರ್ದೇಶಕರ ತಗಾದೆ ಇಲ್ಲದಿರುವುದೂ ಇದಕ್ಕೆ ಕಾರಣ. ಹಾಗಾಗಿ ಕಲಾವಿದರು ಭಾಗವತರ ನಿರ್ದೇಶನದಲ್ಲಿ ದುಡಿಯಲು ಸಿದ್ಧರಾಗಿ ಭಾಗವತರು ರಂಗಭಾಷೆಯ ಮರ್ಮಗಳನ್ನರಿತು ನಿರ್ದೇಶನ ನೀಡಿದರೆ ಆಗ ಯಕ್ಷಗಾನ ಪ್ರದರ್ಶನ ಮನಮುಟ್ಟುವುದರಲ್ಲಿ ಸಂದೇಹವಿಲ್ಲ. ಈ ದೃಷ್ಟಿಯಿಂದ ರಂಗಭಾಷೆಯ ಅಧ್ಯಯನ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ.

(ಲೇಖಕರು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು, ಮತ್ತು ಸಮಾಜಶಾಸ್ತ್ರದ ಹಿರಿಯ ಉಪನ್ಯಾಸಕರು)

Leave a Reply

*

code