ಭಾವಾನುಭಾವ- ೨೦೨೫: ಭಾವನಾತ್ಮಕ ಸಂವರ್ಧನೆ ಆಶಯದ ತರಗತಿ/ಕಾರ್ಯಾಗಾರ

Posted On: Tuesday, August 19th, 2025
1 Star2 Stars3 Stars4 Stars5 Stars (No Ratings Yet)
Loading...

Author: Principal

ನೂಪುರ ಭ್ರಮರಿ (ರಿ.) – ಭಾರತದ ಪ್ರದರ್ಶನಕಲೆಗಳು ಹಾಗೂ ಸಂಬಂಧಿತ ಕಲೆಗಳ ಅಧ್ಯಯನ, ಪ್ರಕಾಶನ, ಉನ್ನತ ಮಟ್ಟದ ಸಂಶೋಧನೆ, ದಾಖಲೆ ಸಂಗ್ರಹ ಹಾಗೂ ವಿದ್ಯಾರ್ಥಿವೇತನ ಕಾರ್ಯಗಳಿಗೆ ಸಮರ್ಪಿತವಾದ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು. ಭಾರತದ ಶಿಕ್ಷಣ ಸಚಿವಾಲಯದ ಭಾರತೀಯ ಜ್ಞಾನಪರಂಪರೆ ವಿಭಾಗದಿಂದ (IKS Division) ಭಾರತೀಯ ಜ್ಞಾನಪರಂಪರೆ ಅಧ್ಯಯನ ಕೇಂದ್ರವಾಗಿ (Centre for Indian Knowledge systems) ಮಾನ್ಯತೆ ಪಡೆದಿದೆ. ಈ ಕೇಂದ್ರವು IKS ವಿಭಾಗದಡಿ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಗಮನಾರ್ಹ ಫಲಿತಾಂಶಗಳನ್ನು ಸಾಧಿಸಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ನೂಪುರಭ್ರಮರಿಯು ತನ್ನ ಆನ್ಲೈನ್ ಪತ್ರಿಕೆ ಮತ್ತು ಸಂಶೋಧನ ಪತ್ರಿಕೆ ಪ್ರಕಾಶನಗಳ ಜೊತೆಗೆ, ಈಗಾಗಲೇ ೧೦+೬ ಕೃತಿಗಳನ್ನು ಪ್ರಕಟಿಸಿದ್ದು, ೩ ಸಮ್ಮೇಳನಗಳು, ೮ ವಿಚಾರಸಂಕಿರಣಗಳು, ೧೧ ಪ್ರಮಾಣಪತ್ರಾಧಾರಿತ ಪಠ್ಯಕ್ರಮಗಳು, ೧೨ ಕಾರ್ಯಾಗಾರಗಳು, ೪ ಇಂಟರ್ನ್‌ಶಿಪ್‌ಗಳು ಹಾಗೂ ಫೆಲೋಶಿಪ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಜೊತೆಗೆ ಆಕಾಶವಾಣಿಯಲ್ಲಿ ೪೦ ವಿಶೇಷ ಕಾರ್ಯಕ್ರಮ ಪ್ರಸಾರಗಳು, ೨೦ಕ್ಕೂ ಹೆಚ್ಚು ಸಂಶೋಧನಾಧರಿತ ನೃತ್ಯ- ಯಕ್ಷಗಾನ ಪ್ರದರ್ಶನಗಳು, ಅನೇಕ ಶೈಕ್ಷಣಿಕ ಲೇಖನಗಳು, ೧೫೦ಕ್ಕೂ ಹೆಚ್ಚು ಆಡಿಯೋ-ವಿಜುವಲ್ ಸರಣಿಗಳು ಹಾಗೂ ಡಾಕ್ಯುಮೆಂಟರಿಗಳ ಸಂಗ್ರಹವನ್ನು ಯಶಸ್ವಿಯಾಗಿ ಕೈಗೊಂಡಿದೆ. ಈ ಸಂಸ್ಥೆಯು ೨೦೨೫-೨೬ರಲ್ಲಿ ವಿಂಶತಿ ಉತ್ಸವ (೨೦ನೇ ವಾರ್ಷಿಕೋತ್ಸವ) ಆಚರಿಸಿಕೊಳ್ಳುತ್ತಿದ್ದು ಈ ಸಂಬಂಧ ಅನೇಕ ವಿಶಿಷ್ಟ ಶೈಕ್ಷಣಿಕ ಕಾರ್ಯಾಗಾರ, ತರಬೇತಿ ಹಾಗೂ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿದೆ.

 

ಕಾರ್ಯಾಗಾರ ತರಗತಿಯ ಆಶಯ

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಈ ಮಕ್ಕಳ ಭಾವನಾತ್ಮಕ ಸಾಮರ್ಥ್ಯ (EQ), ಹಾಗೂ ಬೌದ್ಧಿಕ ಸಾಮರ್ಥ್ಯವೇ (IQ) ಸಮಾಜ ಹಾಗೂ ಒಟ್ಟು ಪರಿಸರದ ಆರೋಗ್ಯಕರ ಬಾಳ್ವೆಗೆ ಮುನ್ನುಡಿಯನ್ನು ಹಾಕುತ್ತದೆ. ಆದರೆ ಪ್ರಸಕ್ತ ದಿನಗಳಲ್ಲಿ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನೇ ಹೆಚ್ಚಾಗಿ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಇವೆಯೇ ಹೊರತು; ಭಾವನಾತ್ಮಕವಾಗಿ ಅವರನ್ನು ಸಬಲಗೊಳಿಸುವ ದಾರಿಗಳು ಬಹಳ ಕ್ಷೀಣವಾಗುತ್ತಿವೆ. ಅದೂ ಆಧುನಿಕವಾದ ಮಾಧ್ಯಮಗಳ ಭರಾಟೆ ಹಾಗೂ ಮೊಬೈಲ್ ವ್ಯಸನವೇ ಮೊದಲಾದವುಗಳಲ್ಲಿ ಕಳೆದುಹೋಗುತ್ತಿರುವ ಮಕ್ಕಳಿಗೆ ಸುತ್ತಮುತ್ತಲಿನ ವ್ಯಕ್ತಿಗಳ, ಪರಿಸರದ ಹಾಗೂ ತಮ್ಮ ಬಗೆಗಿನ ಭಾವನೆಗಳನ್ನು ಸರಿಯಾಗಿ ಅರಿಯುವಂತೆ ಮಾಡಿ ಸಂವೇದನಾಶೀಲವಾಗಿಸುವ ಜವಾಬ್ದಾರಿ ಇದೆ. ಭಾವಸಂವೇದನಾಶೀಲ ವ್ಯಕ್ತಿಯೇ ಭಾರತವನ್ನು ಕಟ್ಟಲು ಸಾಧ್ಯ. ಈ ಹಿನ್ನೆಲೆಯಲ್ಲಿ ನೂಪುರ ಭ್ರಮರಿ ಸಂಸ್ಥೆಯು ಕನ್ನಡ ಬಲ್ಲ ಪ್ರಾಥಮಿಕ ಶಾಲಾವಿದ್ಯಾರ್ಥಿಗಳಿಗೆಂದೇ ಭಾವಾನುಭಾವ- ೨೦೨೫ ಎಂಬ ಶೀರ್ಷಿಕೆಯಲ್ಲಿ ಭಾವನಾತ್ಮಕ ಸಂವರ್ಧನೆ ಆಶಯದ ಕೋರ್ಸ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ.

 

ಭಾವಾನುಭಾವ ಎಂದರೇನು? ಉಪಯೋಗ ಹೇಗೆ?

ಭಾವ+ಅನುಭಾವ. ಅಂದರೆ Emotion and Expression. ಮಾನವನಾಗಿ ಹುಟ್ಟಿದ ಮೇಲೆ ಇರುವ ಸಹಜ ಭಾವ ಯಾವುದು? ಬೆಳೆಸಲ್ಪಡುವ ಭಾವಗಳು ಯಾವುವು? ಅವುಗಳ ಅಭಿವ್ಯಕ್ತಿ ಹೇಗೆ? ಯಾವ ಭಾವ ಹಾಗೂ ಅಭಿವ್ಯಕ್ತಿಗೆ ಏನು ಹೆಸರು? ಹೇಗೆ ಕಂಡುಹಿಡಿಯುವುದು? ಯಾವ ಭಾವಕ್ಕೆ ಯಾವ ಅನುಭಾವ ಯುಕ್ತ? ಅವುಗಳ ನಟನಾಕೌಶಲ್ಯ ಹೇಗೆ? ವೃದ್ಧಿಸಿಕೊಳ್ಳುವ ರೀತಿ ಹೇಗೆ? – ಹೀಗೆ ಇನ್ನೂ ಹಲವು ವಿಚಾರಗಳನ್ನು ಮುಕ್ತ ಸಂವಾದದ ಕ್ರಿಯಾಶೀಲ ತರಗತಿಗಳ ಮೂಲಕ ಕಲಿಸಲಾಗುತ್ತದೆ.

ನಾಟ್ಯಶಾಸ್ತ್ರದ ನವರಸಗಳನ್ನು ಆಧರಿಸಿದ ಕಾರ್ಯಕ್ರಮ ಇದಾಗಿದೆ. ಜೀವನದಲ್ಲಿ ಕಾಣಬರುವ ಭಾವ-ರಸಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಆಶಯವನ್ನು ಹೊಂದಿದೆ. ಜೊತೆಗೆ ಮಕ್ಕಳು ಸುಲಭವಾಗಿ ನೆನಪಿಡುವಂತೆ ಪದ್ಯಸಾಹಿತ್ಯವನ್ನೂ ಹೇಳಿಕೊಡಲಾಗುತ್ತದೆ. ಶಾಲೆಯಿಂದ ಬೇಡಿಕೆಯಿದ್ದಲ್ಲಿ ಸಮಯದ ವ್ಯಾಪ್ತಿಯನ್ನು ಗಮನಿಸಿ ಇದೇ ವಿಷಯದ ಮುಂದುವರಿಕೆಯೆಂಬಂತೆ ಅಭಿನಯದ ಕಲಿಕೆಯನ್ನೂ ಹಮ್ಮಿಕೊಳ್ಳಲಾಗುತ್ತದೆ. ಇದರಿಂದ ಜೀವನ ಹಾಗೂ ರಂಗಗಳೆರಡರಲ್ಲೂ ಸಾಧಿಸಬೇಕಾದ ಭಾವನಾತ್ಮಕ ಸಂವಹನದ ವ್ಯಾಪ್ತಿಯ ಅರಿವಾಗುತ್ತದೆ. ಧನಾತ್ಮಕ ಚಿಂತನೆಗಳು ಹುಟ್ಟುತ್ತವೆ. ಋಣಾತ್ಮಕ ಆಲೋಚನೆಗಳ ಬಗ್ಗೆ ವಿವೇಕ ಹೊಮ್ಮುತ್ತದೆ. ಗುಣಾತ್ಮಕವಾದ ಭಾವವೃದ್ಧಿ ಸಾಧ್ಯವಾಗುತ್ತದೆ. ಹಾಗೂ ಮಕ್ಕಳಲ್ಲಿರುವ ಕಲಾಸಕ್ತಿಯು ಪೋಷಣೆಗೊಂಡು ಕಲಾವಿದ ಇಲ್ಲವೇ ಉತ್ತಮ ಪ್ರೇಕ್ಷಕರೆನಿಸಿಕೊಳ್ಳಲೂ ಅವಕಾಶವಾಗುತ್ತದೆ.

 

ಕನ್ನಡವೇ ಏಕೆ?

ಭಾಷೆಯೇ ಭಾವದ ತಂತು. ನಮ್ಮ ನಾಡು-ನೆಲ-ಜಲ-ಸಂಸ್ಕೃತಿಯ ಚೈತನ್ಯವನ್ನು ಮೂಡಿಸುವುದೇ ಭಾಷೆ. ಭಾಷೆ ಬಲಗೊಂಡರೆ ಜಾಗೃತಿ ತನ್ನಿಂತಾನೇ ಪ್ರವಹಿಸುತ್ತದೆ. ಭಾರತೀಯ ಭಾಷೆಗಳ ಬೆಳವಣಿಗೆಯು IKSನ ಗುರಿಯಾಗಿದೆ ಕೂಡಾ. ಮಾತೃಭಾಷೆಯ ಮಹತ್ತ್ವವನ್ನು ಲಯಬದ್ಧವಾದ ಪದ್ಯದ ಮೂಲಕವಾಗಿ ಸ್ಮರಣಾರ್ಹವಾಗಿಸಿ ಭಾವಸಂಬಂಧವನ್ನು ಉದ್ದೀಪಿಸುವುದು ಹಾಗೂ ಭಾಷೆಯ ಪುನಶ್ಚೇತನಕ್ಕೆ ಸಹಕರಿಸುವುದು ಕೂಡಾ ಈ ಕಾರ್ಯಾಗಾರದ ಉದ್ದೇಶವಾಗಿದೆ.

 

ಮಕ್ಕಳಿಗೆ ಏಕೆ?

ಎಳವೆಯಲ್ಲಿ ಕಲಿತ ವಿಷಯ ಜೀವನದುದ್ದಕ್ಕೂ ದಾರಿದೀಪವಾಗುವುದು. ಬೆಳೆಯುವ ಸಿರಿ ಮೊಳಕೆಯಲ್ಲೇ ಕಾಣಿಸಬೇಕೆಂದರೆ ಅದಕ್ಕೆ ಯುಕ್ತವಾದ ಪೋಷಣೆ ಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಹಾಗೆಂದೇ ಪ್ರಾಥಮಿಕ ಶಿಕ್ಷಣದಲ್ಲಿ ಇದನ್ನು ಅಳವಡಿಸಿಕೊಂಡರೆ ಪರಿಣಾಮ ಹೆಚ್ಚೆಂದು ಅಂದಾಜಿಸಿ ರೂಪಿಸಲಾಗಿದೆ. ಅದರಲ್ಲೂ ಈ ತರಗತಿಗಳು ೪, ೫, ೬ ಮತ್ತು ೭ನೇ ತರಗತಿಯ ಮಕ್ಕಳನ್ನು ಸುಲಭವಾಗಿ ತಲುಪುವಂತಿವೆ.

ಎಷ್ಟು ಅವಧಿ?

ಈ ಕಾರ್ಯಾಗಾರ/ತರಗತಿಗಳು ಸುಮಾರು ೪ರಿಂದ ೮ಗಂಟೆಗಳ ಅವಧಿಯವು. ಶಾಲಾವಧಿಗಳಲ್ಲಿ ವಾರಕ್ಕೆ ಒಂದು ಘಂಟೆಯಂತೆ ಒಂದು ತಿಂಗಳು ಇಲ್ಲವೇ ಎರಡು ತಿಂಗಳನ್ನು ಮೀಸಲಿಡುವುದರಿಂದ ಈ ಕಾರ್ಯಾಗಾರ ಸಾಧ್ಯ. ಭಾವಪರಿಚಯಕ್ಕೆ ನಾಲ್ಕು ತರಗತಿ. ಅವನ್ನು ನಟನಾತ್ಮಕವಾಗಿ ಸಿದ್ಧಿಸಿಕೊಳ್ಳಲು ನಾಲ್ಕು ತರಗತಿಗಳು ಅವಶ್ಯ. ಇಲ್ಲ್ಲವೇ ಕೇವಲ ನಾಲ್ಕು ತರಗತಿಯಲ್ಲಿ ಪರಿಚಯವನ್ನಷ್ಟೇ ಮಾಡಿಕೊಡಬಹುದು. ಪದ್ಯಸಾಹಿತ್ಯವನ್ನು ಅರ್ಥ ಮಾಡಿಸಿದ ಬಳಿಕ ಅದನ್ನು ಕಲಿತುಕೊಂಡಲ್ಲಿ ಮಕ್ಕಳಲ್ಲಿ ಹೆಚ್ಚಿನ ಸಾಮರ್ಥ್ಯವೃದ್ಧಿಗೆ ಅವಕಾಶವಾಗುವುದು. ಈ ಕಾರ್ಯಗಾರದ ಫಲಶ್ರುತಿಯಾಗಿ ಅಭಿವ್ಯಕ್ತಿ ಕಾರ್ಯಕ್ರಮವನ್ನೂ ಶಾಲಾ ವಾರ್ಷಿಕೋತ್ಸವಗಳಲ್ಲಿ ನಡೆಸಬಹುದಾಗಿದೆ.

ಯಾರು ಸಂಪರ್ಕಿಸಬಹುದು?

ಕರ್ನಾಟಕದ ಯಾವುದೇ ಆಸಕ್ತ ಶಾಲಾ ಸಂಸ್ಥೆಗಳು ಸಂಪರ್ಕಿಸಬಹುದಾಗಿದೆ. ಪ್ರಯಾಣ/ವಸತಿ-ಊಟದ ವ್ಯವಸ್ಥೆ/ಭತ್ಯೆಯನ್ನು ಭರಿಸತಕ್ಕದ್ದು. ಶಾಲೆಯ ಬೇಡಿಕೆಗೆ ಅನುಗುಣವಾಗಿ ಸಮಯಾವಕಾಶವನ್ನು ಗಮನಿಸಿ ಕಾರ್ಯಾಗಾರದ ಅವಧಿಯನ್ನು ಹಮ್ಮಿಕೊಳ್ಳಲಾಗುವುದು.

ಸಂಪರ್ಕಿಸಬೇಕಾದ ಫೋನ್ ಸಂಖ್ಯೆ : ೯೯೬೪೧೪೦೯೨೭

 

Bhavanubhava Workshop for Children BY Noopura Bhramari IKs Centre

 

Noopura Bhramari IKS Centre presents

“Bhavanubhava – 2025”
An Emotional Enrichment Workshop/Class for Primary School Children who knows Kannada language.

Today’s children are tomorrow’s citizens. Their emotional quotient (EQ) and intellectual quotient (IQ) together lay the foundation for a healthy society and environment. However, in the current times, most programmes focus primarily on developing intellectual abilities, while opportunities to strengthen emotional well-being are steadily diminishing.

With the growing influence of modern media and mobile addiction, children are losing touch with understanding their own emotions as well as those of people and the environment around them. Hence, it is our collective responsibility to sensitize them and foster emotional awareness. We strongly believe that an emotionally sensitive individual alone can truly contribute to building a strong nation.

In this context, Noopura Bhramari Institution has designed “Bhavanubhava – 2025”, a specially curated course exclusively for Kannada-speaking primary school students, with the core objective of nurturing emotional enrichment and sensitivity.

Leave a Reply

*

code