
ನೃತ್ಯ ಸಂಶೋಧಕರ ಚಾವಡಿ :ನೂಪುರ ಭ್ರಮರಿ ನಾಡಿನ ಹೆಸರಾಂತ ಕಲಾನಿಯತಕಾಲಿಕೆಯಾಗಿ ಮೊದಲ್ಗೊಂಡು ಪ್ರತಿಷ್ಠಾನ ಮತ್ತು ಪ್ರಕಾಶನಸಂಸ್ಥೆಯಾಗಿ ರೂಪ ಪಡೆದು ಇದೀಗ ನೃತ್ಯ ಸಂಶೋಧಕರ ಚಾವಡಿ(Dance researchers’ Forum)ಎಂಬ ಸಂಶೋಧನೆಗೆ ಮೀಸಲಾದ ವಿಭಾಗವನ್ನೂ ಪ್ರಾರಂಭಿಸಿದೆ. ಈ ಚಾವಡಿಯು ಫೆಬ್ರವರಿ ೨೦, ೨೦೧೨ರ ಮಹಾಶಿವರಾತ್ರಿಯ ಶುಭಾವಸರದಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ಉದ್ಘಾಟನೆಗೊಂಡ ದಿನದಿಂದ ಈ ವರೆಗೆ ಕರ್ನಾಟಕ ಮತ್ತು ಹೊರರಾಜ್ಯದ ಸುಮಾರು ೪೦ಕ್ಕಿಂತಲೂ ಹೆಚ್ಚಿನ ಮಂದಿ ಸಂಶೋಧನಾಸಕ್ತರು ಇದರ ಸದಸ್ಯರಾಗಿದ್ದು ಕಲಾಸಂಶೋಧನೆಯ ಅನಿವಾರ್ಯತೆಯ ಹಿನ್ನೆಲೆ ಮತ್ತು ವೇದಿಕೆ ಕಲ್ಪಿಸಿಕೊಡಬೇಕಾದ ನೆಲೆಗಳನ್ನು ಸ್ಪಷ್ಟಪಡಿಸುತ್ತಿದೆ. ಹೆಸರಾಂತ ಸಂಶೋಧಕರೂ, ವಿದ್ವಾಂಸರೂ ಆದ ಶತಾವಧಾನಿ ಡಾ. ಆರ್. ಗಣೇಶ್ ರ ಪ್ರಧಾನ ಸಲಹಾಸಮಿತಿಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು; ಈ ಚಾವಡಿಯು ಮುಂದಿನ ದಿನಗಳಲ್ಲಿ ಉಪವಿಭಾಗಗಳನ್ನೂ, ನಾಡಿನೆಲ್ಲೆಡೆ ಉಪಕೇಂದ್ರಗಳನ್ನೂ ಪ್ರಾರಂಭಿಸುವ ವಿಸ್ತಾರವನ್ನೂ ಹೊಂದಿದೆ. ಚಾವಡಿಯ ಯೋಜನೆಗಳ ಪೈಕಿ ವಾರ್ಷಿಕ ಕಲಾ ಸಂಶೋಧನಾ ಸಮ್ಮೇಳನ, ನೃತ್ಯ ಸಂಶೋಧನಾ ಪುಸ್ತಕ ಪ್ರಕಟಣೆ, ಕಲಾಸಂಶೋಧನೆಗೆ ಮೀಸಲಾದ ವಿಶೇಷ ಸಂಶೋಧನಾ ನಿಯತಕಾಲಿಕೆ, ಕಲಾ ಸಂಶೋಧನೆಗೆ ಪ್ರತ್ಯೇಕವಾದ ಗ್ರಂಥಾಲಯ, ವಿಕಸನ ಗೋಷ್ಠಿ ಮತ್ತು ಅಧ್ಯಯನ ಸ್ವರೂಪದ ಕಮ್ಮಟ-ಕಾರ್ಯಾಗಾರ-ಉಪನ್ಯಾಸ-ಪ್ರಾಯೋಗಿಕ ಪರಿಷ್ಕರಣಗಳು ಪ್ರಧಾನವಾದವುಗಳು. ಇವುಗಳೊಂದಿಗೆ ನೂಪುರ ಭ್ರಮರಿ ಟ್ರಸ್ಟ್ನ ಹೆಮ್ಮೆಯ ನೂಪುರ ಭ್ರಮರಿ ದ್ವೈಮಾಸಿಕ, ವರ್ಷದ ಕಲಾ ವಿಮರ್ಶೆ ಪ್ರಶಸ್ತಿ, ಪ್ರಕಾಶನ ಮತ್ತು ಪ್ರಕಟಣೆಗಳು ಸಂಸ್ಥೆಯ ಧ್ಯೇಯೋದ್ದೇಶವನ್ನು ಮತ್ತಷ್ಟು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಯೋಜನೆಗಳೆಡೆಗೆ ಮುನ್ನೋಟ ಕೆಳಕಂಡಂತಿದೆ.