Yaksha Marga mukura

Posted On: Tuesday, October 18th, 2022
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: Editor

 

ಯಕ್ಷಮಾರ್ಗಮುಕುರ-ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತೀ ವೀ. ಹೆಗ್ಗಡೆ ಅವರ ಗೃಹಸ್ಥಾಶ್ರಮದ ಸುವರ್ಣಸಂಭ್ರಮ ವರ್ಷ, ಪುರಾಣವಾಚನ, ಲಲಿತಕಲಾಕೇಂದ್ರ ಸ್ಥಾಪನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಸುವರ್ಣ ವರ್ಷ ಸಂಭ್ರಮಕ್ಕೆ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಶರನ್ನವರಾತ್ರದ ಷಷ್ಠಿಯಂದು (ಒಕ್ಟೋಬರ್ ೧, ೨೦೨೨) ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಮರ್ಪಣೆಯಾದ ಗ್ರಂಥ

 

ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರಕಟಿತವಾದ ಅಪೂರ್ವ ಗ್ರಂಥ

ಕಲಾಸಂಶೋಧಕಿ ಡಾ. ಮನೋರಮಾ ಬಿ ಎನ್ ಅವರು ಹತ್ತು ವರುಷಗಳ ಕಾಲ ಸಂಶೋಧನೆ ನಡೆಸಿ ಬರೆದ ಭಾರತದ ನಾಟ್ಯಕಲೆಗಳ ಆಂಗಿಕಾಭಿನಯದ ವಿಶ್ವಕೋಶವೆಂದೇ ಮಾನ್ಯಗೊಂಡ ಗ್ರಂಥ

ಪುಟಗಳು : ೮೨೪;  ರೇಖಾಚಿತ್ರಗಳ ಸಂಖ್ಯೆ : ೩೨೦ಕ್ಕೂ ಮಿಗಿಲು

ಮುಖಬೆಲೆ : ೧೬೦೦ರೂ. (ಕೊರಿಯರ್ ವೆಚ್ಚ ಪ್ರತ್ಯೇಕ)

 • ನಾಟ್ಯಶಾಸ್ತ್ರ ಮತ್ತು ಅಲ್ಲಿಂದೀಚೆಗಿನ ಸುಮಾರು ೨೦೦೦ವರುಷಗಳ ಕಾಲದಲ್ಲಿ ಭಾರತದ ಬಹುತೇಕ ಪ್ರಾಂತ್ಯಗಳಲ್ಲಿ ರಚಿತವಾದ 130ಕ್ಕೂ ಮಿಗಿಲು ಸಂಗೀತ-ನೃತ್ಯ ಶಾಸ್ತ್ರಗ್ರಂಥಗಳ ಬಾಂಧವ್ಯದ ಅಧ್ಯಯನವಿದೆ. ಸುಮಾರು 300 ಕ್ಕಿಂತ ಹೆಚ್ಚಿನ ಎಲ್ಲ ಮುಖ್ಯ ಕೃತಿಗಳ ಪರಾಮರ್ಶನವಿದೆ.
 • ಮಾರ್ಗ-ದೇಶೀ ಅಂಗೋಪಾಂಗ ಅಭಿನಯಗಳ ಸಮಗ್ರದೃಷ್ಟಿಯಿರುವ ಕೃತಿ. ನಾಟ್ಯಶಾಸ್ತ್ರ ಮತ್ತು ದೇಶೀಗ್ರಂಥಗಳಲ್ಲಿರುವ ಅಂಗೋಪಾಂಗಭೇದಗಳು, ಹಸ್ತಾಭಿನಯ, ಸ್ಥಾನಕ, ಚಾರಿ, ಕರಣಗಳು, ಭ್ರಮರಿಗಳು ಹಾಗೂ ಕೆಲವು ವಿಶೇಷ ನೃತ್ತಬಂಧಗಳ ಐತಿಹಾಸಿಕ ಮತ್ತು ತೌಲನಿಕ ವಿಶ್ಲೇಷಣೆ, ಪ್ರಯೋಗಕ್ರಮಗಳ ಸೋದಾಹರಣ ವಿವರವಿದೆ.
 • ಯಕ್ಷಗಾನದ ಹೆಜ್ಜೆಗಾರಿಕೆ/ಆಂಗಿಕದ ಮೂಲಚೂಲಗಳ ಸಮಗ್ರ ಪರಿಚಯದ ಸಹಿತ ಭರತನಾಟ್ಯ-ಕೂಚಿಪೂಡಿ-ಮೋಹಿನಿಯಾಟ್ಟಂ-ಕಥಕ್-ಓಡಿಸ್ಸಿ-ಮಣಿಪುರಿ-ಸತ್ರಿಯಾ-ಬಿಹು-ಕಳರಿಪಯಟ್ಟು-ಕಥಕಳಿ-ತೆರಕ್ಕೂತ್ತು-ಕೂಡಿಯಾಟ್ಟಂ ಮೊದಲಾಗಿ ಎಲ್ಲ ಭಾರತೀಯ ಕಲೆಗಳ ಪ್ರಯೋಗಪರಂಪರೆಯಲ್ಲಿ ಕಾಣುವ ಆಂಗಿಕಾಭಿನಯದ (ಅಡವುಗಳ ಮೂಲವನ್ನು ದೊರಕಿಸಿಕೊಡುವ ಅಧ್ಯಯನಸಹಿತ) ವ್ಯಾಪ್ತಿಯನ್ನು ಭಾರತೀಯ ಯಕ್ಷಗಾನವೆಂಬ ನಾಟ್ಯಸಂಪ್ರದಾಯದೊಂದಿಗೆ ಸಮೀಕರಿಸಿದ ಬೃಹತ್ ದರ್ಶನವಿದೆ. ಭಾರತೀಯ ನೃತ್ಯ-ನೃತ್ತ-ನೃತ್ಯಕಲೆಗಳಲ್ಲಿರುವ ವೈವಿಧ್ಯ ಮತ್ತು ಸಾಮರಸ್ಯದ ವಿಸ್ತೀರ್ಣ, ವ್ಯಾಪ್ತಿಯನ್ನು ಸೋದಾಹರಣವಾಗಿ ಕಂಡುಕೊಳ್ಳಲಾಗಿದೆ. ​ನಾಟ್ಯಶಾಸ್ತ್ರದ ಆಂಗಿಕಾಭಿನಯವನ್ನು ಹೇಗೆ ಯಾವ ಅನುಗುಣವಾಗಿ ಹೊಂದಿಸಿಕೊಳ್ಳಬೇಕು ಎಂಬ ವಿವೇಚನೆ, ಸುಲಭ ದಾರಿಯನ್ನು ಹೇಳಲಾಗಿದೆ. ಇದರಿಂದ ಯಾವುದೇ ನೃತ್ತ ನಾಟ್ಯ ನೃತ್ಯಶೈಲಿಗಳ ಆಂಗಿಕದ ಕ್ರಮ ಸ್ಪಷ್ಟಪಡುತ್ತದೆ, ಚೆನ್ನಾಗಿ ಪ್ರಯೋಗಿಸುವಲ್ಲಿ ಅನುಕೂಲ ಆಗುತ್ತದೆ. ಜೊತೆಗೆ ​ಕಲೆಗಳ ಒಳಗೆ ಸಾಮರಸ್ಯ, ಕೊಡುಕೊಳ್ಳುವಿಕೆ ಎಂದರೆ ಏನು ಎಂದು ಅರ್ಥ ಮಾಡಿಕೊಳ್ಳಲು ಈ ಗ್ರಂಥ ಉಪಯುಕ್ತ.
 • ​ಭರತನಾಟ್ಯ ಕೂಚಿಪೂಡಿ ಮೊದಲಾದ ನೃತ್ಯಶೈಲಿಗಳ ಅಡವು, ಹಸ್ತ ಮೊದಲಾದ ಇನ್ನೂ ಅನೇಕ ಚಲನೆಗಳಿಗೆ ಮೂಲ ಆಧಾರ ಯಾವುದು, ಅದಕ್ಕೆ ನಾಟ್ಯಶಾಸ್ತ್ರದ ಸಂಬಂಧ ಇದೆಯೇ? ಇದ್ದರೆ ಹೇಗೆ? ಬೇರಾವ ಲಕ್ಷಣಗ್ರಂಥಗಳ ಬಲ ಇದೆ- ಎಂಬ ಬಗ್ಗೆ ಇದೇ ಮೊದಲ ಬಾರಿಗೆ ಅನೇಕ ಸುಪ್ತ ಮಾಹಿತಿಗಳನ್ನು ಸಂಶೋಧನೆಯಿಂದ ತಿಳಿದು ಕೊಡಲಾಗಿದೆ.
 • ಭಾರತದ ನೃತ್ಯ ನಾಟ್ಯ ಪದ್ಧತಿಗಳಷ್ಟೇ ಅಲ್ಲದೆ ಪಾಶ್ಚಾತ್ಯ ರಾಯಲ್ ಕ್ಲಾಸಿಕಲ್ ಬ್ಯಾಲೆಟ್ ನಲ್ಲಿರುವ ಚಲನೆಗಳನ್ನು ಭರತನ ನಾಟ್ಯಶಾಸ್ತ್ರದೊಂದಿಗೆ ಸಮೀಕರಿಸಬಹುದೇ? ಅವುಗಳು ಯಾವುವು ? ಭಾರತೀಯ ಚಲನಚಿತ್ರಗಳಲ್ಲಿ ಕಂಡುಬರುವ ಆಂಗಿಕಾಭಿನಯ ಚಲನೆಗಳಿಗೆ ಶಾಸ್ತ್ರವನ್ನು ಅನ್ವಯಿಸಬಹುದೇ? ಇದ್ದರೆ ಅವುಗಳು ಯಾವುವು? ಭಾರತೀಯ ಜಾನಪದ ನೃತ್ಯಗಳು ಎನಿಸಿಕೊಂಡವಲ್ಲೂ ಶಾಸ್ತ್ರ ಪರಿಭಾಷೆಗಳನ್ನು ಕಾಣಬಹುದೇ? ಇದ್ದರೆ ಅವುಗಳ ಬಗ್ಗೆ ತಿಳಿಯುವ ಆಸಕ್ತಿ ಇದೆಯೇ? ಕಳರಿಪಯಟ್ಟು, ಕರಾಟೆ, ಛಾವ್ ಮೊದಲಾದ ಯುದ್ಧಕಲೆಗಳಲ್ಲಿ ಇರುವ ಚಲನೆಗಳಿಗೆ ಹೊಂದುವ ನಾಟ್ಯಶಾಸ್ತ್ರೀಯ ಮತ್ತು ನಂತರದ ಗ್ರಂಥಗಳ ಚಲನೆಗಳ ಪರಿಭಾಷೆಗಳೇನು? ಯೋಗಾಭ್ಯಾಸದಲ್ಲಿರುವ ನಿಲುವುಗಳಿಗೂ, ನೃತ್ಯದ ನಿಲುವುಗಳಿಗೂ ಸಂಬಂಧವಿದೆಯೇ? ಇದ್ದರೆ ಎಷ್ಟು? ಹೇಗೆ? ಯಾವ ರೀತಿಯಿಂದ ನೋಡಬೇಕು?- ಎಂಬಿತ್ಯಾದಿ ಸಮಗ್ರ ವಿವರಗಳನ್ನು ಒಳಗೊಂಡ ಕೃತಿಯಿದು.
 • ತಮಿಳು-ಮಲಯಾಳಂ-ತೆಲುಗು-ಓಡಿಯಾ-ಹಿಂದಿ ಭಾಷೆಗಳಲ್ಲಿರುವ ಲಕ್ಷಣಗ್ರಂಥಗಳಲ್ಲಿರುವ ನೃತ್ಯದ ವಿವರಗಳು ನಮ್ಮ ಕರ್ನಾಟಕದ ಕಲಾಪರಿವೇಶಕ್ಕೆ ಹೊಂದಿಕೆಯಾಗುತ್ತದೆಯೇ? ಯಾವುದರಲ್ಲಿ ?ಹೇಗೆ? ನೃತ್ಯಲಕ್ಷಣಗ್ರಂಥಗಳಲ್ಲಿರುವ ಸಂಸ್ಕೃತಭಾಷೆಯ ಮಟ್ಟ ಕಾಲದಿಂದ ಕಾಲಕ್ಕೆ ಹೇಗೆ ಸಾಗಿದೆ?-ಎನ್ನುವುದನ್ನು ವಿಮರ್ಶಿಸಿದೆ.
 • ಶಿಲ್ಪಗಳಲ್ಲಿರುವ ನೃತ್ಯದ ಚಲನೆಗಳನ್ನು ಹೇಗೆ ಅರಿಯಬೇಕು? ಹೇಗೆ ಹೋಲಿಸಿಕೊಳ್ಳಬೇಕು? ಶಿಲ್ಪದ ಭಂಗಿ ಭಣಿತಿಗಳನ್ನು ನೃತ್ಯ ನಾಟ್ಯದಲ್ಲಿ ಅಳವಡಿಸಿಕೊಳ್ಳುವುದಾದರೆ ಯಾವುದು ಸರಿಯಾದ ಹಾದಿ…..ಯಾವುದು? ಎಂಬಿತ್ಯಾದಿ ವಿವರಗಳನ್ನು ಇದು ಕಟ್ಟಿಕೊಡುತ್ತದೆ.
 • ಪ್ರಾಯೋಗಿಕವಾಗಿ ಲಕ್ಷಣಗಳನ್ನು ಅರಿಯಲು ಸಹಾಯವಾಗುವಂತೆ ಸುಂಆರು 320ಕ್ಕೂ ಮಿಗಿಲಾದ ರೇಖಾಚಿತ್ರಗಳನ್ನು ಕಲಾವಿದ ನೀರ್ನಳ್ಳಿ ಗಣಪತಿ ಅವರಿಂದ ಸುಮಾರು ಎರಡು ವರುಷ ಪರ್ಯಂತ ಚರ್ಚೆ ನಡೆಸಿ ಅಧ್ಯಯನಭೂಯಿಷ್ಠವಾಗಿ ಬರೆಯಿಸಲಾಗಿದೆ. ಈ ಬಗೆಯ ದೊಡ್ಡ ಪ್ರಯತ್ನವೇ ಕರ್ನಾಟಕದ ಇಡಿಯ ಕಲೆ ಮತ್ತು ಲಕ್ಷಣಶಾಸ್ತ್ರಪ್ರಪಂಚದಲ್ಲಿ ಇದಂ ಪ್ರಥಮವೆನಿಸುವಂಥದ್ದು. ​ಲಕ್ಷಣವನ್ನು ಅರ್ಥ ಮಾಡಿಸುವ ರೇಖಾಚಿತ್ರಗಳು ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ನೃತ್ಯಶೈಲಿಗಳಿಗೂ ಮಾರ್ಗದರ್ಶೀಯವಾಗಿದೆ.
 • ಮಾರ್ಗ-ದೇಶೀ ಪರಿಭಾಷೆಗಳು, ಶಾಸ್ತ್ರೀಯ-ಜಾನಪದ ಮೊದಲಾದ ಅನೇಕ ತಥಾಕಥಿತ ಸತ್ಯಗಳನ್ನು ಆಧಾರಸಹಿತವಾಗಿ ವಿವೇಚಿಸಿ ನಿರ್ಣಯಕ್ಕೆ ಬರಲಾಗಿದೆ. ಅದರಲ್ಲೂ ಕರ್ನಾಟಕದ ಕಲೆಯಾದ ಯಕ್ಷಗಾನಕ್ಕೆ ಇವೆಲ್ಲ ವಿಚಾರಗಳ ಅನ್ವಯ ಹೇಗೆ ಎಂಬುದನ್ನು ಅಧ್ಯಯನನಿಷ್ಠವಾಗಿ ಸಾಧಿಸಿ ರಚಿಸಲಾಗಿದೆ.
 • ​ಒಂದು ನೃತ್ಯಶೈಲಿ ಮತ್ತೊಂದರಿಂದ ಭಿನ್ನವೆನಿಸಿಕೊಳ್ಳುವುದು ಹೇಗೆ?ಭಿನ್ನವಾಗಿದ್ದೂ ಅವುಗಳೊಳಗೆ ಯಾವ ಸಂಬಂಧ ಇರುತ್ತದೆ? ಹೇಗಿರುತ್ತದೆ? ನಾಟ್ಯಶಾಸ್ತ್ರದ ‘ಮಾರ್ಗ’ಕ್ಕೂ ನೃತ್ಯಕಛೇರಿಯ ‘ಮಾರ್ಗ’ಕ್ಕೂ ಇರುವ ವ್ಯತ್ಯಾಸ ಏನು?- ಇತ್ಯಾದಿ ಅಧ್ಯಯನಬದ್ಧ ಅನೇಕ ವಿವರಗಳಿವೆ. ​
 • ನಾಟ್ಯಶಾಸ್ತ್ರದ ಕರಣಗಳಷ್ಟೇ ಅಲ್ಲದೆ ದೇಶೀ ಉತ್ಪ್ಲುತಿ ಕರಣಗಳು ಹಾಗೂ ಇದೇ ಮೊದಲ ಬಾರಿಗೆ ಭರತಾರ್ಣವ, ಸಂಗೀತಾಸುಧಾಕರ, ಸಂಗೀತಮುಕ್ತಾವಳಿ ಮೊದಲಾದ ಗ್ರಂಥಗಳಲ್ಲಿ ಕಾಣುವ ಇನ್ನುಳಿದ ಅದೆಷ್ಟೋ ರೀತಿಯ ಕರಣ ಗಳನ್ನೂ ಸಂಶೋಧಿಸಿ ಅದನ್ನು ಮಾಡುವ ಕ್ರಮದ ಬಗ್ಗೆ ಬರೆಯಲಾಗಿದೆ.

“ಯಕ್ಷಮಾರ್ಗಮುಕುರ”- ಕೃತಿಯ ಹೆಸರೇ ಸೂಚಿಸುವಂತೆ ಸಮಸ್ತ ಯಕ್ಷಗಾನ ಸಂಪ್ರದಾಯದ ಆಧಾರಶ್ರುತಿಯಲ್ಲಿ ಇಡಿಯ ಭಾರತೀಯ ರಂಗಭೂಮಿಯನ್ನು ಸೋದಾಹರಣವಾಗಿ ಮನಗಾಣಿಸಿದೆ. ಕಲಾವಿದರಿಗೂ, ಕಲಾಭಿಮಾನಿಗಳಿಗೂ ಉಪಯುಕ್ತ ಮಾಹಿತಿಯ ಕಣಜವಾಗಿದೆ. ನಮ್ಮ ನಾಡಿನ ಕಲೆ ಎಷ್ಟೊಂದು ವೈಜ್ಞಾನಿಕ ಮತ್ತು ಶಾಸ್ತ್ರೀಯ ಎಂಬುದನ್ನು ತೋರಿಸಿಕೊಟ್ಟಿದೆ. ಶಾಶ್ವತಕೀರ್ತಿ-ಅಭಿಮಾನದ ಕಾರ್ಯವಿದು. ಇದು ಕಲಾಮಾತೆಯು ನಿರೀಕ್ಷಿಸುತ್ತಿದ್ದ ಶಾಸ್ತ್ರ ಮತ್ತು ಪ್ರಯೋಗ ಪರಂಪರೆಯ ಸಮಗ್ರ ಪರಿಚಯವುಳ್ಳ ಅಪೂರ್ವ ಕಲಾಕೃತಿ. ಎಲ್ಲ ಕಲಾವಿದರೂ ಓದಬೇಕಾದ ಗ್ರಂಥವಿದು. ವಿಶ್ವದ ಎಲ್ಲ ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನಕ್ಕೆಂದು ಇರಲೇಬೇಕಾದದ್ದು. ಧರ್ಮಸ್ಥಳದಿಂದ ನಾಡಿನ ಎಲ್ಲ ವಿಶ್ವವಿದ್ಯಾನಿಲಯಗಳಿಗೆ, ನಮ್ಮ ಯಕ್ಷಗಾನ ಮೇಳದ ಕಲಾವಿದರಿಗೆ ಒಂದು ಪ್ರತಿಯನ್ನು ಉಚಿತವಾಗಿ ನೀಡುವ ಯೋಚನೆ ಮಾಡಿದ್ದೇವೆ.

– ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ, ಪೂಜ್ಯ ಧರ್ಮಾಧಿಕಾರಿಗಳು. ಶ್ರೀಕ್ಷೇತ್ರ ಧರ್ಮಸ್ಥಳ.

“ಯಕ್ಷಮಾರ್ಗಮುಕುರ”- ಈ ಗ್ರಂಥ ಯಕ್ಷಕಲೆಗೊಂದು ದರ್ಪಣಾದರ್ಶ. ಸಂಶೋಧಕಿ ಡಾ. ಮನೋರಮಾ ಬಿ. ಎನ್ ಅವರು ನಿರಂತರ ಅಧ್ಯಯನ, ಸಾಧನೆ, ಶೋಧನೆಗಳಿಂದ ಭಾರತೀಯ ನಾಟ್ಯ/ನೃತ್ಯಕಲೆಗಳಲ್ಲಿರುವ ವೈವಿಧ್ಯ ಮತ್ತು ಸಾಮರಸ್ಯಗಳೆರಡನ್ನೂ ಗುರುತಿಸಿದ್ದಾರೆ. ಕಲೆಗಳನ್ನು ಅಭೇದ ದೃಷ್ಟಿಯಿಂದ ನೋಡುವಂತೆ ಮಾಡಿದ್ದಾರೆ. ಪುರುಷರಿಗೂ ಅಸಾಧ್ಯವೆನಿಸುವಂಥ ಇಂಥ ಕಾರ್ಯಗಳನ್ನು ಮಹಿಳೆಯಾಗಿ ಸಂಸಾರದ ಕರ್ತವ್ಯಗಳ ನಡುವೆ ಸರಿತೂಗಿಸಿಕೊಂಡು ಮಾಡುವುದೆಂದರೆ ಖಂಡಿತವಾಗಿಯೂ ಇದು ಶ್ಲಾಘನೀಯವಾದ ದಿಟ್ಟತನದ ಕಲಾಕಾಯಕ.

-ಮಾತೃಶ್ರೀ ಹೇಮಾವತೀ ವೀ. ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ.

 

‘ಯಕ್ಷಮಾರ್ಗಮುಕುರ’ವು ಕಲೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ದಾರಿದೀಪವಾಗುವ ಮಾರ್ಗಪ್ರವರ್ತಕ ಗ್ರಂಥ. ಈ ಗ್ರಂಥ ಮಹತ್ತು ಮತ್ತು ಬೃಹತ್ ಕೂಡಾ ಆಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಸಂಶೋಧಕ ಲೇಖಕಿಯರ ಕೊರತೆಯಿದ್ದದ್ದನ್ನು ನೀಗಿಸಿದ್ದಾರೆ. ನೀರ್ನಳ್ಳಿ ಗಣಪತಿ ಅವರು ಬಿಡಿಸಿದ ಎಲ್ಲ ರೇಖಾಚಿತ್ರಗಳು ಈ ಗ್ರಂಥವನ್ನು ಅರ್ಥೈಸಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ನೆರವಾಗಿವೆ. ಮುಂದಿನ ಪೀಳಿಗೆಗೆ ಎಲ್ಲ ಅರ್ಥದಲ್ಲೂ ಈ ಗ್ರಂಥವು ಬಹು ದೊಡ್ಡ ಕೊಡುಗೆ. ಈ ಮಹತ್ಕಾರ್ಯಕ್ಕೆ ಕೈಜೋಡಿಸಲು ಕರ್ನಾಟಕ ಬ್ಯಾಂಕ್ ಬಹಳ ಹೆಮ್ಮೆ ಪಡುತ್ತದೆ.

– ಶ್ರೀ ಮಹಾಬಲೇಶ್ವರ ಎಂ.ಎಸ್, ನಿರ್ದೇಶಕರು ಮತ್ತು ಸಿ.ಇ.ಒ., ಕರ್ನಾಟಕ ಬ್ಯಾಂಕ್, ಮಂಗಳೂರು.

 

‘ಸಹಸ್ರಾರು ವರುಷಗಳ ಚರಿತ್ರೆ ಯಕ್ಷಗಾನಕ್ಕಿದೆ’ ಎಂಬುದನ್ನು ಮಾತ್ರವಲ್ಲದೆ ‘ಯಕ್ಷಗಾನ ಕಲೆಯು ಶಾಸ್ತ್ರೀಯ’ವೆನ್ನುವುದನ್ನು ಇನ್ನೂ ಮುಂದಿನ ಸಾವಿರಾರು ವರುಷಗಳವರೆಗೂ ಸಾಬೀತುಪಡಿಸುವ ಗ್ರಂಥ ‘ಯಕ್ಷಮಾರ್ಗಮುಕುರ’. ಇದು ಶಾಶ್ವತ ಸಾಹಿತ್ಯ. ಯಕ್ಷಗಾನ ಉಳಿಯುವವರೆಗೂ ಇದು ಉಳಿಯುತ್ತದೆ. ವಿಶ್ವವಿದ್ಯಾನಿಲಯಗಳು ತೊಡಗಿಸಿಕೊಳ್ಳುವ ಮಟ್ಟಿನ ಬೃಹತ್ ಕೆಲಸವನ್ನು ಒಬ್ಬರೇ ಏಕದೀಕ್ಷೆಯಿಂದ ತೊಡಗಿಸಿಕೊಂಡು ಮಾಡಿದ್ದಾರೆ ಮನೋರಮಾ. ಅವರೇ ಒಂದು ವಿಶ್ವವಿದ್ಯಾನಿಲಯದ ಕಾರ್ಯವನ್ನು ಮಾಡಿದ್ದಾರೆ. ಅಂತೆಯೇ ಚಿತ್ರರಚನೆ, ಪ್ರಕಾಶನದ ಸಾಮರ್ಥ್ಯ-ಧೈರ್ಯವೂ ಮೆಚ್ಚುವಂಥದ್ದು. ಎಲ್ಲ ನಿಟ್ಟಿನಿಂದ ಈ ಗ್ರಂಥರಚನೆಯು ಅತ್ಯಪೂರ್ವ, ಅಮೋಘವಾದ ತಪಸ್ಸು.

– ಪ್ರೊ. ನಿರಂಜನ ವಾನಳ್ಳಿ, ಉಪಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ (ಉತ್ತರ), ಕೋಲಾರ.

 

ಐತಿಹಾಸಿಕ ಕಾರ್ಯವಿದು. ಗ್ರಂಥ ಅನಾವರಣದ ಕಾರ್ಯಕ್ರಮವೂ ಕೂಡಾ ಅಭೂತಪೂರ್ವ. ಎಲ್ಲರೂ ಮಾಡುವಂಥದ್ದಲ್ಲ. ಸುಯೋಗದಿಂದ ಕೂಡಿ ಸ್ಮರಣೀಯವಾದದ್ದು.

– ಶ್ರೀ ಪ್ರತಾಪಸಿಂಹ ನಾಯಕ್, ಕರ್ನಾಟಕ ವಿಧಾನಪರಿಷತ್ ಸದಸ್ಯರು, ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ.

 

ವಿದ್ವಾಂಸರ ಅಭಿಪ್ರಾಯಗಳು

ಡಾ. ಮನೋರಮಾ ಬಿ. ಎನ್ ಅವರು ಗುಣ-ಗಾತ್ರಗಳಲ್ಲಿ ವಿಸ್ಮಯಾವಹವೆನಿಸುವ ಮಹಾಗ್ರಂಥವನ್ನೇ ರಚಿಸಿದ್ದಾರೆ. ಇಲ್ಲಿ ಕೇವಲ ಯಕ್ಷಗಾನದ ಆಂಗಿಕವಷ್ಟೇ ಅಲ್ಲ, ಇಡಿಯ ಭಾರತದ ಎಲ್ಲ ಬಗೆಯ ರಂಗಕಲೆಗಳ, ನೃತ್ಯಪದ್ಧತಿಗಳ, ಜಾನಪದನರ್ತನಗಳ ಚಲನ-ವಲನಗಳ ವಿವೇಚನೆಯೂ ಹಾಸುಹೊಕ್ಕಾಗಿ ಬಂದಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಇದನ್ನು ಭಾರತದೇಶದ ನೃತ್ತ-ನೃತ್ಯ-ನಾಟ್ಯಗಳ ಆಂಗಿಕವಿಶ್ವಕೋಶವೆನ್ನಬಹುದು.  ಯಕ್ಷಮಾರ್ಗಮುಕುರ ಎಂಬ ಈ ಗ್ರಂಥವು ಸಮಗ್ರಭಾರತೀಯ ರಂಗಪ್ರಪಂಚಕ್ಕೇ ಸಲ್ಲಿಸಿದ ನಿರುಪಮಸೇವೆ; ಯಕ್ಷಗಾನದ ಮೂಲಕ ಜಗತ್ತಿನ ಕಲೆಗಳಿಗೆ ನೀಡುವ ಬೆಲೆಯುಳ್ಳ ಕೊಡುಗೆಯೆನ್ನುವುದರಲ್ಲಿ ಸಂದೇಹವಿಲ್ಲ.

– ಶತಾವಧಾನಿ ಡಾ. ಆರ್. ಗಣೇಶ್, ಬಹುಶ್ರುತ ವಿದ್ವಾಂಸರು, ಅವಧಾನಿಗಳು.

 

ಡಾ. ಮನೋರಮಾ ಬಿ.ಎನ್ ಅವರು ಅಪರಿಮಿತವಾದ ಪರಿಶ್ರಮದಿಂದ ಈ ಆಚಾರ್ಯಕೃತಿ ‘ಯಕ್ಷಮಾರ್ಗಮುಕುg’ವನ್ನು ಸಂರಚಿಸಿದ್ದಾರೆ. ಈ ಶೋಧಾಯನದಲ್ಲಿ ಸುಮಾರು ನೂರಾಮೂವತ್ತಕ್ಕೂ ಹೆಚ್ಚು ಆಕರಗ್ರಂಥಗಳನ್ನು ಆಲೋಡಿಸಿದ್ದಾರೆ. ಯಕ್ಷಗಾನಕಲಾಕ್ಷೇತ್ರಕ್ಕೆ ಸಾರ್ವಕಾಲಿಕವಾದ ಉಲ್ಲೇಖ್ಯಗ್ರಂಥವನ್ನು ನೀಡಿದ್ದಷ್ಟೇ ಅಲ್ಲದೆ ಇನ್ನಷ್ಟು ಶೋಧನೆಯ ಹೊಳಹುಗಳನ್ನು ಹರಿಸಿದ್ದಾರೆ. ಅಧ್ಯಯನಾಸಕ್ತರಿಗೆ ಶೋಧಶೀಲರಿಗೆ ಶಾಸ್ತ್ರಕುತೂಹಲಿಗಳಿಗೆ ಈ ಕೃತಿಯು ಅಮೂಲ್ಯ ನಿಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

– ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ರಂಗಕರ್ಮಿ.

 

ವ್ಯಾಪಕವಾದ ಅಧ್ಯಯನ ಮತ್ತು ವಿಸ್ತಾರವಾದ ವಿವಿಧ ಪ್ರಕಾರಗಳ ಅನುಶೀಲನ ಅನ್ವಯಗಳ, ಶಾಸ್ತ್ರ ಮತ್ತು ಪ್ರಯೋಗಗಳ ಹಿತವಾದ ಸಮನ್ವಯವುಳ್ಳ ಗ್ರಂಥ. ಯಕ್ಷಗಾನ, ಭರತನಾಟ್ಯಸಹಿತ ಎಲ್ಲ ಬಗೆಯ ನೃತ್ಯ-ನಾಟ್ಯ ಸಂಶೋಧಕರಿಗೂ ಹಾಗೂ ಕಲಾವಿದರಿಗೂ ಪ್ರಯೋಜನ ನೀಡುವ ಮಹತ್ತ್ವದ ಕೃತಿ.

ಡಾ. ಎಂ. ಪ್ರಭಾಕರ ಜೋಷಿ, ಹಿರಿಯ ಯಕ್ಷಗಾನ ವಿದ್ವಾಂಸರು ಮತ್ತು ಸಂಶೋಧಕರು.

 

ಡಾ. ಮನೋರಮಾ ಅವರು ದೀರ್ಘಕಾಲದ ಪರಿಶ್ರಮಗೈದು ವಿವಿಧ ನೃತ್ಯ-ನಾಟ್ಯಪದ್ಧತಿಗಳನ್ನು ಯಕ್ಷಗಾನದೊಂದಿಗೆ ತೌಲನಿಕವಾಗಿ ಇರಿಸಿ ಯಕ್ಷಗಾನದ ಶಾಸ್ತ್ರೀಯತೆ, ಪ್ರಾಚೀನತೆ ಮತ್ತು ಶ್ರೀಮಂತಿಕೆಗಳನ್ನು ಆಂಗಿಕಾಭಿನಯ ಅಪಾರ ವ್ಯಾಪ್ತಿಯ ಆಯತನದಲ್ಲಿ ಕಾಣಿಸಿದ ಶ್ರೇಷ್ಠವೆನಿಸುವ ಹೊತ್ತಗೆ. ಕಲಾಸಕ್ತರ ಬಳಿ ಇರಲೇಬೇಕಾದ ಮತ್ತು ಪರಾಮರ್ಶನಕ್ಕೆ ಎಂದೆಂದಿಗೂ ಅರ್ಹವಾದ ಕೃತಿ.

 ಕೆ. ಗೋವಿಂದ ಭಟ್, ಯಕ್ಷ ದಶಾವತಾರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತರು.

—–

1 Response to Yaksha Marga mukura

 1. ರೋಹಿಣಿ ಸುಬ್ಬರತ್ನಂ ಕಾಂಚನ

  ಉತ್ಕೃಷ್ಟ ಕೆಲಸ. ಕನ್ನಡ ನಾಡಿನ ಕೀರ್ತಿಗೆ ಇನ್ನೊಂದು ಮುಕುರವಾಯಿತು. ಅತ್ಯಗತ್ಯವಿರುವ ಇಂತಹ ಗ್ರಂಥಗಳು ಡಾ. ಮನೋರಮ ರವರಿಂದ ಇನ್ನಷ್ಟು ಬರಲಿ ಎಂದು ಆಶಿಸುತ್ತೇನೆ.

Leave a Reply

*

code