Suyodhana : Yaksha Bhanika/ ಸುಯೋಧನ – ಯಕ್ಷಭಾಣಿಕಾ ನಾಟ್ಯ (ಯಕ್ಷಗಾನ & ಭರತನೃತ್ಯ ಸಮಾಹಾರದ ಏಕವ್ಯಕ್ತಿಪ್ರಯೋಗ)

Posted On: Monday, December 16th, 2019
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಯಕ್ಷಗಾನ ಮತ್ತು ಭಾರತೀಯ ಸಾಂಪ್ರದಾಯಿಕ ನೃತ್ಯನಿಷ್ಠವಾದ ರಂಗಕಲೆಗಳ ಪ್ರತಿನಿಧಿಯಾದ ಭರತನೃತ್ಯ ಸಮಾಹಾರದ ಅಧ್ಯಯನನಿಷ್ಠ ಏಕವ್ಯಕ್ತಿಪ್ರಯೋಗವಿದು. ಆದ್ದರಿಂದಲೇ ಇದನ್ನು ಯಕ್ಷಭಾಣಿಕಾ ಎಂದು ಕರೆಯಲಾಗಿದೆ. ರಂಗಭೂಮಿ ಮತ್ತು ಭರತನೃತ್ಯದೊಳದ್ದಿದ ಯಕ್ಷಗಾನೀಯ ರೂಪಕಶೈಲಿ. ಇದರ ಅಭಿವ್ಯಕ್ತಿಯಾದದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ನೂಪುರ ಭ್ರಮರಿ (ರಿ.) ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ -ಭಾರತೀಯ ಸಾಂಪ್ರದಾಯಿಕ ರಂಗಭೂಮಿ- ಯಕ್ಷಗಾನ, ಭರತನೃತ್ಯ ಸಂಬಂಧ ಸಮನ್ವಯದ ಕುರಿತಾದ ಒಂದು ದಿನದ ರಾಜ್ಯಮಟ್ಟದ ವಿದ್ವತ್ ಪೂರ್ಣ ವಿಚಾರಸಂಕಿರಣದಲ್ಲಿ. ಡಿಸೆಂಬರ್ 15, 2020 ರಂದು ಬೆಂಗಳೂರಿನ ಜಯರಾಮ ಸೇವಾ ಮಂಡಳಿ. ಜಯನಗರ.

ಭಾಣವೆಂಬುದು ಭರತನ ನಾಟ್ಯಶಾಸ್ತ್ರವು ಹೇಳುವ ದಶರೂಪಕಗಳಲ್ಲೊಂದು ಬಗೆ. ಒಂದೇ ಪಾತ್ರ, ಒಂದೇ ಅಂಕ. ಅನೇಕ ಅವಸ್ಥೆಗಳ ಅನುಭವಕ್ಕೆ ಸಂಬಂಧಿಸಿದ್ದು. ಅಂತೆಯೇ ಬಹಳಷ್ಟು ಚಲನವಲನವುಳ್ಳದ್ದು. ಇನ್ನೊಬ್ಬರ ಮಾತನ್ನು, ಅಸ್ತಿತ್ವವನ್ನು ಕಲ್ಪಿಸಿ ಆ ಪಾತ್ರಧಾರಿಯೇ ಸಂಭಾಷಿಸುವ ಆಕಾಶಭಾಷಿತ ಇಲ್ಲಿನ ಪ್ರಧಾನ ಅಂಶ. ಭಾಣ ಎಂಬ ಪದಕ್ಕೆ ಕ ಪ್ರತ್ಯಯ ಸೇರಿದಾಗ -ಆಪ್ತ, ಪರಿಚಯ, ಸಂಗ್ರಹಕ್ಕೆ ಬಳಕೆಯಾಗಿ ಭಾಣಿಕ ಎಂದರೆ- ಭಾಣ ರೂಪಕದ ಸಂಗ್ರಹ, ಸಂಕ್ಷಿಪ್ತ ಆತ್ಮೀಯ ರೂಪ ಎಂಬ ಆಕಾರವನ್ನು ತಾಳುತ್ತದೆ. ಈ ಮೊದಲು ಯಕ್ಷಗಾನದಲ್ಲಿ ಅಂತೆಯೇ ಭರತನೃತ್ಯದಲ್ಲಿ ಭಾಣಿಕಾ ಪ್ರಯೋಗಗಳು ನಡೆದಿವೆ. ಆದರೆ ಇಲ್ಲಿನ ಮಾಧ್ಯಮ ಯಕ್ಷಗಾನ ಮತ್ತು ಭರತನೃತ್ಯವನ್ನು ಸೇರಿಸಿದ ಸಂಯೋಜನೆ.

ಪ್ರಯೋಗ ಮೊದಲು, ಶಾಸ್ತ್ರ ಅದನ್ನಾಧರಿಸಿ ಬೆಳೆಯುವಂಥದ್ದು. ಯಕ್ಷಭಾಣಿಕಾವೂ ಹಾಗೆಯೇ. ಪ್ರಕೃತ- ಕಲಾವಿದೆ, ಕಲಾವಿದೆಯ ತಂದೆ ಬಿ.ಜಿ.ನಾರಾಯಣ ಭಟ್ ರವರು ಶಾಸ್ತ್ರವನ್ನು ಹೀಗೆಂದು ತಿಳಿಯುವ ಮುಂಚೆಯೇ ಸ್ವತಂತ್ರ ಚಿಂತನೆಯಲ್ಲಿ ಭಾವೋಜ್ವಲ ಶೈಲಿಯಾಗಿ ಕಲಾವಿದೆಯ ಎಳವೆಯಿಂದಲೂ ಏಕಪಾತ್ರಾಭಿನಯ ರೂಪಕ್ಕೆ ಹೊಂದುವಂತೆ ಮಾಡಿಕೊಂಡು ಬಂದದ್ದಕ್ಕೆ ಸುಧಾರಿತ ರೂಪವನ್ನು ನೀಡಲಾಗಿದೆ. ಮಡಿಕೇರಿಯಲ್ಲಿದ್ದ ಪುರೋಹಿತಶ್ರೇಷ್ಠ ಕೀರ್ತಿಶೇಷ ನಾರಾಯಣ ಭಟ್ಟರು ಏಕಪಾತ್ರಾಭಿನಯವನ್ನೇ ಸುಷಿರವಾದ್ಯ, ರಿದಂ ಪ್ಯಾಡ್‌ನ ಬಳಕೆಯೊಂದಿಗೆ ಕಲಾವಿದೆ ಗೆಜ್ಜೆ ಧರಿಸಿ, ಯಕ್ಷಗಾನ ಪದ್ಯ ಹಿಮ್ಮೇಳಗಳ ಸಾಂಗತ್ಯದಲ್ಲಿ ವಾಚಿಕಾಭಿನಯವನ್ನು ಅಭಿನಯದ ಆಡುಂಬೊಲದಲ್ಲಿ ಪರಿಣಾಮಕಾರಿಯಾಗಿ ರಂಗಧರ್ಮಕ್ಕೆ ಅನುಯೋಜ್ಯವಾಗಿ ಪಾತ್ರೌಚಿತ್ಯವನ್ನು ಗಮನಿಸಿ ವಿಸ್ತರಿಸಿಕೊಳ್ಳಬೇಕು, ಭರತನಾಟ್ಯದ ಹೆಜ್ಜೆಗಾರಿಕೆ ಬಳಸಬೇಕು ಎಂದು ಕೆಲವು ಪಾತ್ರಾಭಿನಯವನ್ನು ವಾಚಿಕ ಸಹಿತ ವಿನ್ಯಾಸ ಮಾಡಿದ್ದರು.. ಹಾಗೆಂದು ಇದು ಏಕಪಾತ್ರಾಭಿನಯದ ಮಾರ್ಗದಂತಲ್ಲ. ಎಲ್ಲಾ ದೃಷ್ಟಿಯಲ್ಲಿಯೂ ಬೇರೊಂದು ಪಾತ್ರವನ್ನು ಕಲ್ಪಿಸಿಕೊಂಡು ಮಾಡುವ ಏಕಾಹಾರ್ಯ. ಕಥೆ/ಇತಿವೃತ್ತಾದಿಗಳನ್ನು ಒಳಗೊಂಡು ಸಾತ್ತ್ವತೀ, ಆರಭಟೀ, ಭಾರತೀವೃತ್ತಿಯನ್ನಾಶ್ರಯಿಸಿ ಪುರುಷಾಭಿವ್ಯಕ್ತಿಯ ಮೂಲಕ ಸಾಧಿಸುವಂತೆ ಯಕ್ಷಭಾಣಿಕಾ ರೂಪುಗೊಂಡಿದೆ.

ಕಲಾವಿದೆ ಸ್ತ್ರೀ; ಆದರೆ ಅಭಿವ್ಯಕ್ತಿಸುವ ಆಕಾರ ಪುರುಷನದ್ದು. ಈವರೆಗಿನ ಭಾಣಿಕಾ ಪರಿಕಲ್ಪನೆಗಿಂತ ಕೊಂಚ ವಿಭಿನ್ನ. ಪ್ರಸ್ತುತಿ ಮಾಡುವ ಕಲಾವಿದೆಗೂ ಪುರುಷಾಭಿವ್ಯಕ್ತಿ ಜನ್ಮತಃ ಆಪ್ಯಾಯಮಾನವಾಗಿರುವುದರಿಂದ ಉದ್ಧತವೇ ಇಲ್ಲಿನ ಮುಖ್ಯ ಅಭಿವ್ಯಕ್ತಿ ಮಾರ್ಗ. ಹೇಗೆ ಯಕ್ಷಗಾನವೆಂಬ ಪರಿಪೂರ್ಣ ನಾಟ್ಯ ರಂಗಭೂಮಿ, ಸಾಹಿತ್ಯ, ಅದರ ಹಿಮ್ಮೇಳ ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ಎಲ್ಲಾ ಬಗೆಯ ಶೈಲಿ, ಸಾಧ್ಯತೆಗಳನ್ನೂ ತನ್ನೊಳಗೆ ಅರಳಿಸಿಕೊಳ್ಳಬಲ್ಲುದು ಎಂಬುದರ ಒಂದು ಪ್ರಾತಿನಿಧಿಕ ಮಾರ್ಗವಾಗಿ ಕಾಣಿಸಲಾಗಿದೆ. ಹಾಗೆಂದು ಯಕ್ಷಗಾನ ತಾಳಮದ್ದಳೆಯಲ್ಲಿರುವಂತೆಯೋ ಅಥವಾ ಯಕ್ಷಗಾನದಲ್ಲಿರುವಂತೆಯೋ ಭಾರತೀವೃತ್ತಿಯನ್ನೇ ಆಧರಿಸಿಯೇ ಇಲ್ಲಿನ ನೃತ್ತನಡೆ ವಿನ್ಯಾಸವಾಗಿಲ್ಲ. ಭರತನೃತ್ಯದ ಸಾಂಗತ್ಯವು ಭಾಣಿಕಾದ ಸಾಹಿತ್ಯಾನುಸಂಧಾನ ಮತ್ತು ನೃತ್ಯನಡೆಗಳಿಗೆ ಒದಗಿಬಂದಿದೆ. ನಾಟ್ಯೋಚಿತವಾದ ಹಸ್ತಾಭಿನಯ, ಚಾರಿ, ಕರಣಾದಿಗಳ ಬಳಕೆಯನ್ನು ಯಥಾಸಾಧ್ಯ ಗಮನಿಸಿಕೊಂಡು ಹಿಮ್ಮೇಳವು ಚಿಮ್ಮಿಸುವ ರಸಕ್ಕೆ ಸಂವಾದಿಯಾಗಿ ಆಶುವಾಗಿಯೇ ಪ್ರಸ್ತುತಪಡಿಸಲಾಗುತ್ತಿದೆ. ಭಾವನಿರ್ಮಾಣಕ್ಕೆಂದು ಯಕ್ಷಗಾನದ ಹಿಮ್ಮೇಳದೊಂದಿಗೆ ಸುಷಿರವಾದ್ಯದ ಸಾಂಗತ್ಯವನ್ನೂ ಜೊತೆಯಾಗಿಸಲಾಗಿದೆ. ಒಟ್ಟಿನಲ್ಲಿ ನೃತ್ಯಮಾಧ್ಯಮದಲ್ಲಿ ಅಷ್ಟಾಗಿ ಪ್ರಯೋಗಗೊಳ್ಳದ, ಯಕ್ಷಚಿಂತನೆಯಲ್ಲಿ ಪ್ರಯೋಗಬಾಹುಳ್ಯಕ್ಕೆ ಸಾಕಷ್ಟು ಸಲ ಇಂಬಾಗಿದ್ದರೂ ಸೂಕ್ಷ್ಮಾಭಿನಯ ಮತ್ತು ಪ್ಲ್ಯಾಶ್‌ಬ್ಯಾಕ್ ನಂತಹ ರಂಗಭೂಮಿಯ ಸಾಧ್ಯತೆಗಳನ್ನು ಪುರುಷಪಾತ್ರಕ್ಕೆ ಸ್ಪರ್ಶಿಸದ ಸಂಗತಿಗಳನ್ನು ಪ್ರಧಾನವಾಗಿ ಲಕ್ಷಿಸಿ ಏಕವ್ಯಕ್ತಿಯ ರೂಪದಲ್ಲಿ ಇಲ್ಲಿನ ಪಾತ್ರವಿನ್ಯಾಸ ಮಾಡಲಾಗಿದೆ. ಹಾಗೆಂದೇ ಇಲ್ಲಿ ಮುಕ್ತಾಯ-ಬಿಡ್ತಿಗೆ-ಪ್ರವೇಶಧ್ರುವಾಗಳಿಲ್ಲ. ವಾಚಿಕಾಭಿನಯವೂ/ಮಾತುಗಾರಿಕೆ ಪದ್ಯದ ನಂತರ ಅದೇ ಪದ್ಯದ ಸಾಲುಗಳಿಗೆ ಅರ್ಥ ಹೇಳುವ ಯಕ್ಷಗಾನದ ಎಂದಿನ ಕ್ರಮದಂತೆ ಇಲ್ಲ. ಬದಲಾಗಿ ಪರಸ್ಪರ ಸಂವಾದಿಯಾಗಿದೆ. ಪ್ರಸಾಧನ- ವೇಷಕಲ್ಪನೆಯೂ ಯಕ್ಷಗಾನಕ್ಕೆ ಹೋಲಿಸಿದರೆ ನಾಟಕೀಯವಾಗಿ ರೂಪಕನಿಷ್ಠವಾಗಿ ಮೈದಾಳಿದೆ. ಹಾಗೆಂದು ಇದರಲ್ಲಿ ಸುಧಾರಣೆಯ ಅಂಶಗಳನ್ನು ಕಾಲೋಚಿತವಾಗಿ ಮೈಗೂಡಿಸಿಕೊಳ್ಳಬಹುದಾಗಿದೆ.

ಇದೇ ಯಕ್ಷಭಾಣಿಕಾವು ಭರತನೃತ್ಯದ ಹಿಮ್ಮೇಳದಲ್ಲಿ ಅರಳಿದರೆ ಭಿನ್ನವಾದ ಮತ್ತೊಂದು ಬಗೆಯ ಅಭಿನಯನಿರೂಪಣೆಯನ್ನೇ ನೀಡುತ್ತದೆಯೆನ್ನುವುದು ಕಲಾವಿದೆಯ ಇಂಗಿತ. ಈ ಯಕ್ಷಭಾಣಿಕಾಕ್ಕೆ ಆರಿಸಿರುವ ಕಥಾವಸ್ತು ಮಹಾಭಾರತದ ಸುಯೋಧನನ ಅಂತಿಮ ಜೀವನವೃತ್ತಾಂತ. ಇಲ್ಲಿ ನಾಯಕನೂ ಸುಯೋಧನ, ಪ್ರತಿನಾಯಕನೂ ಸುಯೋಧನ. ಇಲ್ಲಿ ಪ್ರಯೋಗಿಸಲಾದ ಸಾಹಿತ್ಯ ವಿಭಿನ್ನವಾದ ಯಕ್ಷಗಾನ ಪಠ್ಯ-ಪ್ರಸಂಗಗಳಿಂದ ಹೆಣೆಯಲ್ಪಟ್ಟಿದೆ.

ಸಾಹಿತ್ಯಾನುಸಂಧಾನ : ಯಕ್ಷಗಾನ ಪ್ರಸಂಗಗಳು- ಗದಾಯುದ್ಧ-ರಕ್ತರಾತ್ರಿ, ದುರ್ಯೋಧನ ವಧೆ, ಶ್ರೀಕೃಷ್ಣಸಂಧಾನ, ರನ್ನನ ಗದಾಯುದ್ಧ, ಕುಮಾರವ್ಯಾಸಭಾರತ, ಜೈಮಿನಿ ಮಹಾಭಾರತ, ಶೇಣಿಭಾರತ.

ಪರ್ವ, ವ್ಯಾಸಭಾರತ, ಯುದ್ಧಭಾರತ, ವಚನಭಾರತ(ಆಂಶಿಕ)

ರಂಗಪ್ರಸ್ತುತಿ ಮತ್ತು ಅಧ್ಯಯನ : ಡಾ.ಮನೋರಮಾ ಬಿ.ಎನ್

ಪಾತ್ರಪರಿಕಲ್ಪನೆ : ಕೀರ್ತಿಶೇಷ ಬಿ.ಜಿ.ನಾರಾಯಣ ಭಟ್

ಸಲಹೆ ಮತ್ತು ಶಾಸ್ತ್ರಪೋಷಣೆ : ಶತಾವಧಾನಿ ಡಾ. ಆರ್. ಗಣೇಶ್

ಪದ್ಯ ಆಯ್ಕೆ -ಹಿಮ್ಮೇಳ ನಿರ್ದೇಶನ : ಉಜಿರೆ ಅಶೋಕ ಭಟ್

ಭರತನೃತ್ಯ ಮತ್ತು ರಂಗಭೂಮಿ ಸಹಕಾರ : ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ.ಶೋಭಾ ಶಶಿಕುಮಾರ್

ಹಿಮ್ಮೇಳ : ಕಾವ್ಯಶ್ರೀ ಅಜೇರು(ಭಾಗವತಿಕೆ),

ವಿ|ಎಚ್.ಎಸ್.ವೇಣುಗೋಪಾಲ್(ಕೊಳಲು),

ಕೃಷ್ಣಪ್ರಕಾಶ ಉಳಿತ್ತಾಯ(ಮೃದಂಗ/ಮದ್ದಳೆ),

ಪ್ರಸನ್ನ ಕುಮಾರ್ (ರಿದಂಪ್ಯಾಡ್)

Leave a Reply