ನೂಪುರಭ್ರಮರಿ: ವಾರ್ಷಿಕ ಸಂಭ್ರಮದ ವರದಿ:

Posted On: Friday, November 7th, 2008
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ಅಂದು ಫೆಬ್ರವರಿ ೧೦..,ಮಡಿಕೇರಿಯ ಭಾರತೀಯ ವಿದ್ಯಾಭವನದ ತುಂಬೆಲ್ಲಾ ಹರುಷ, ನಗುವಿನ ವಾತಾವರಣ. ಸಮಾಧಾನದ ತಯಾರಿಗಳ ನಡುವೆಯೇ ಗಡಿಬಿಡಿಯ ಓಡಾಟ-ಭರಾಟೆಗಳು, ಕೊನೆಯ ಕ್ಷಣದ ಕನವರಿಕೆ-ನಿರೀಕ್ಷೆಗಳು, ಎದೆ ಅವಲಕ್ಕಿ ಕುಟ್ಟುತ್ತಿತ್ತು.

…ಆತಂಕಗಳಿಗೆ ಸಮಾಧಾನ ಹೇಳಿದರು.., ಸಂಭ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಮಡಿಕೇರಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸರ್ಪಂಗಳ ಈಶ್ವರ ಭಟ್. ಕಲಾವಿದರ ಸಿಟ್ಟು- ಸೆಡವು-ಪ್ರತಿಭೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವರು, ಸ್ವತಃ ಗುಣಮಟ್ಟದ ಸಜ್ಜನ ಯಕ್ಷಗಾನ ಕಲಾವಿದರು ಕೂಡಾ! ಜಗತ್ತಿನಲ್ಲಿ ಕೆಲವೊಂದಕ್ಕೆ ಜನರ ಭೇಟಿ ಕಡಿಮೆಯಾಗುತ್ತದೆ ಎಂದ ಮಾತ್ರಕ್ಕೆ ಅದರ ಬೆಲೆ ಕಡಿಮೆಯಾಗೋದಿಲ್ಲ. ಕಲೆ ಎಂದರೇನು ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಾಗಾದಾಗ ಮಾತ್ರ ಕಲೆಯ ನಿಜವಾದ ಮಹತ್ವ ತಿಳಿಯುತ್ತದೆ. ಕಲೆಯ ಬಗ್ಗೆ ಪ್ರೀತಿಯಿರುವವರು ಅದರ ಕುರಿತಾಗಿ ಮಾಡುವ ಪ್ರಯತ್ನಗಳ ಬಗ್ಗೆಯೂ ಗೌರವ ಹೊಂದಿರುತ್ತಾರೆ ಎನ್ನುವ ಹುರುಪಿನ ನಲ್ನುಡಿ- ಉಪಸ್ಥಿತರಿದ್ದ ಗುಣಮಟ್ಟದ ಪ್ರೇಕ್ಷಕರಿಗೆ ಪ್ರಶಂಸೆ ಮಾತ್ರವಲ್ಲ, ಬೇಯುವ ಮನಸ್ಸಿಗೆ ಸೂಕ್ಷ್ಮ ಸೂಚನೆ!

ನೂಪುರ ಭ್ರಮರಿಯನ್ನು ಸುಂದರವಾಗಿ ವ್ಯಾಖ್ಯಾನಿಸಿದ ಅವರು, ಮಗುವು ಅನ್ನಪ್ರಾಶನ್ನದ ಮೂಲಕ ಧಾರಣಾಶಕ್ತಿಯನ್ನು ಪಡೆದುಕೊಳ್ಳುತ್ತದೆ. ಅಂತೆಯೇ ಪತ್ರಿಕೆಯು ಅಂತರ್ಜಾಲಕ್ಕೆ ಪ್ರವೇಶ ಮಾಡುವ ಮೂಲಕ ಧಾರಣಶಕ್ತಿಯನ್ನು ಪಡೆದುಕೊಂಡಿದೆ. ಹೂವಿಂದ ಹೂವಿಗೆ ಹಾರುತ್ತಾ, ತಿರುಗುತ್ತಾ ಬರುವ ದುಂಬಿ ಝೇಂಕರಿಸುವಾಗ, ಆ ನಾದ ಓಂಕಾರದೊಡನೆ ಬೆರೆತು ಕೇಳುಗರ ಕಿವಿಗೆ, ನೋಡುವ ಕಣ್ಣಿಗೆ ಆನಂದಾಹ್ಲಾದವನ್ನು ಉಂಟುಮಾಡುತ್ತದೆ! ಆ ಪರಿಭ್ರಮಣದ ಚಲನೆಯೇ ಭ್ರಮರಿ. ಬ್ರಹ್ಮಾನಂದಕ್ಕೆ ದಾರಿ! ಇಂತಹ ಆನಂದವನ್ನು ಆಸ್ವಾದಿಸಲು ಬರುವ ಆಸಕ್ತ-ಭ್ರಮರಗಳು ನೂಪುರ ಭ್ರಮರಿಯ ಮೂಲಕ ನೃತ್ಯವನ್ನು ಸುತ್ತುವರಿಯುತ್ತಾ ಅದರ ಸವಿಯನ್ನು ಪಡೆಯುತ್ತಿವೆ ! ಜೀವನಚಕ್ರದಲ್ಲಿ ನಾವೆಲ್ಲರೂ ಭ್ರಮರಿಗಳೇ! ಭ್ರಮರಗಳ ಭ್ರಮರೀನಾದ ಸದಾ ನಮ್ಮೆಲ್ಲರನ್ನು ತುಂಬುತ್ತಿರಲಿ ಎಂದು ಆಶೀರ್ವದಿಸಿದರು.

ನಮ್ಮೆಲ್ಲರಿಗೂ ಪತ್ರಿಕೋದ್ಯಮದ ಗುರುಗಳೆನಿಸಿದ ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀ ಭಾಸ್ಕರ ಹೆಗಡೆ ದೂರದ ಉಜಿರೆಯಿಂದ ತಮ್ಮ ಬಿಸಿ ಶೆಡ್ಯೂಲ್ಗಳಿಗೆ ಕೊಂಚ ಮಟ್ಟಿನ ಬ್ರೇಕ್ ಕೊಟ್ಟು ಬಂದ್ದಿದ್ದರು. ಜೊತೆಗೆ, ಉಜಿರೆಯ ಬುಟ್ಟಿ ತುಂಬ ಶುಭಾಶಯಗಳು, ಹಾರೈಕೆಗಳನ್ನು ಹೊತ್ತು ಬಂದ ಅವರು, ಮನೆಯವರಲ್ಲೊಬ್ಬರಾಗಿ ಹೋಗಿದ್ದರು. ಸಂಭ್ರಮದ ದೀಪವನ್ನು ಪ್ರಜ್ವಾಲಿಸಿ, ನೂಪುರ ಭ್ರಮರಿಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಬೆನ್ನು ತಟ್ಟುವ, ಅನುಭವದ ಮಾತುಗಳನ್ನಾಡಿದರು. ಪ್ರಸ್ತುತ ಭಾರತೀಯ ಕಲೆಗಳ ಬಗ್ಗೆ ಪಾಶ್ಚಿಮಾತ್ಯರು ಆಸಕ್ತರಾಗಿ ಅದನ್ನು ತಿಳಿದುಕೊಳ್ಳುವ ಪ್ರಯತ್ನಗಳಿಗೆ ಮುಂದಾಗಿದ್ದಾರಾದರೂ, ಇದಕ್ಕೇ ಸ್ಥಳೀಯರು ಮಾತ್ರ ಅಪವಾದವೆಂಬಂತೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಮುಂದಾಗುತ್ತಿದ್ದಾರೆ ಎನ್ನುವುದು ಅವರ ವಿಷಾದ. ಅವರ ಆಶೀರ್ವಾದ ನಮಗೆಲ್ಲರಿಗೂ ಶ್ರೀರಕ್ಷೆ., ಭ್ರಮರಿಯ ಕುರಿತಾಗಿ ಇತ್ತೀಚೆಗೆಮಂಜುವಾಣಿಯಲ್ಲಿ ಬರೆದ ಅವರ ಅಂಕಣ ಬರಹ ನಮಗೆ ಸ್ಫೂರ್ತಿ.

ನೂಪುರದ ಪ್ರಾರಂಭಕ್ಕೆ ಪ್ರಥಮ ಪ್ರತಿಕ್ರಿಯೆ ನೀಡಿ ಸಲಹೆಗಳನ್ನಿತ್ತವರಲ್ಲಿ ಖ್ಯಾತ ಸಾಹಿತಿ, ವಿಮರ್ಶಕ, ನ್ಯಾಯವಾದಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮೊದಲಿಗರು. ಅವರು ಸಂಭ್ರಮದ ಮುಖ್ಯ ಅತಿಥಿಗಳಲ್ಲೊಬ್ಬರು. ವೆಬ್‌ಸೈಟ್ ಅನಾವರಣಗೊಳಿಸಿದ ಅವರು, ನೃತ್ಯ ಕಲೆಯ ಮಾಹಿತಿಯನ್ನೊದಗಿಸುವ ವೆಬ್‌ಸೈಟ್ ಆರಂಭಿಸುವುದು ಸಣ್ಣ ಸಾಧನೆಯೇನಲ್ಲ. ಹಾಗೆಯೇ ಸಿದ್ಧಿಯೂ ಅಲ್ಲ. ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಬಹಳಷ್ಟಿದೆ. ವೈಯಕ್ತಿಕವಾಗಿ ನಮಗೆ ನಮ್ಮ ಆರು ತಲೆಮಾರುಗಳ ಬಗೆಗೆ ಮಾಹಿತಿಯಿದ್ದರೂ ಅವರ ಹಿಂದಿನವರ ಬಗ್ಗೆ ಮಾಹಿತಿಯಿರುವುದಿಲ್ಲ. ಆದರೆ ಶಂಕರಾಚಾರ್ಯರಂತವರು ಕಾಲ ದೇಶಗಳನ್ನು ಮೀರಿದ ಸಾಧನೆಯ ಮೂಲಕ ಇಂದಿಗೂ ನಮ್ಮ ಮನದಾಳದಲ್ಲಿ ಚಿರಸ್ಠಯಿಯಾಗಿ ಉಳಿದಿದ್ದಾರೆ. ಅಂತಹ ಸಾಧನೆಯ ಮೂಲಕ ಎತ್ತರೆತ್ತರಕ್ಕೆ ಏರಬೇಕು ಎಂದು ಮಾತನಾಡಿ ನಾವು ಭವಿಷ್ಯದಲ್ಲಿ ಏರಬೇಕಾದ ಮಜಲುಗಳ ನಕ್ಷೆ ಹಾಕಿಕೊಟ್ಟರು.

ಪ್ರಸ್ತುತ ನಾವಿರುವ ವ್ಯವಸ್ಥೆಯಲ್ಲಿ ಜ್ಞಾನದ ಕಡೆಯಿಂದ ಮಾಹಿತಿಯ ಕಡೆಗೆ ಹೋಗುತ್ತಿದ್ದೇವೆ. ಯಾವುದೇ ಒಂದು ವಿಷಯದ ಆಳವಾದ ಅಧ್ಯಯನ ಮತ್ತು ಹೆಚ್ಚಿನ ಜ್ಞಾನ ಸಂಪಾದನೆಯ ಹಾದಿಯಲ್ಲಿನ ಸಾಧಕರು ಕಡಿಮೆಯಗುತ್ತಿದ್ದಾರೆ. ಪ್ರಸ್ತುತ ಸಾಧನೆಯ ಹಾದಿಯಲ್ಲಿ ಪ್ರಸಿದ್ಧಿಯನ್ನೇ ಯಶಸ್ಸೆಂದು ತಪ್ಪು ತಿಳಿಯುವ ಸಾಧ್ಯತೆಗಳಿವೆ. ಕಲಾವಿದ ಅಂತಹ ಅಪಾಯಗಳಿಂದ ಪಾರಾಗಬೇಕು. ಪ್ರಸಿದ್ಧಿ ಎನ್ನುವುದು ಹೇಗೆ ಬರುತ್ತದೋ ಎನ್ನುವುದು ತಿಳಿಯಲಾರದು. ಅದು ಆಕಸ್ಮಿಕವಾಗಿಯೂ ದೊರಕಿಬಿಡಬಹುದು. ಆದರೆ ಸಾಧನೆಗೆ ಎಂದಿಗೂ ಆ ರೀತಿಯ ಯಶಸ್ಸು ದೊರಕಲಾರದು. ಗುರಿಯೆಡೆಗಿನ ನಿರಂತರವಾದ ಸಾಧನೆ ಯಶಸ್ಸನ್ನು ತಂದುಕೊಡುತ್ತದೆ. ಕಲೆಯ ಮೂಲಕ ವರ್ತಮಾನದಿಂದ ಭವಿಷ್ಯಕ್ಕೆ ಮುನ್ನಡೆಸುವ ಕಾಯಕ ಆಗಬೇಕು ಎನ್ನುವ ಅವರ ಮಾತು ಎಂದೆಂದಿಗೂ ನಿತ್ಯ ಸತ್ಯ.

ಯಾವುದೇ ದೇವಾಲಯದ ಪುಸ್ತಕದ ಕುರಿತಾದ ಸ್ಥಳದ ಇತಿಹಾಸ, ಕಾರ್ಣಿಕ, ಮಾಹಿತಿಯನ್ನು ತಿಳಿಯದೆ ಕ್ಷೇತ್ರದರ್ಶನ ಪೂರ್ಣಗೊಳ್ಳುವುದಿಲ್ಲ ಎಂದಿದ್ದರು ಈಶ್ವರ ಭಟ್. ಅದಕ್ಕೆ ಪೂರಕವಾಗಿ ನಮ್ಮದೇ ಸಾನಿಧ್ಯಪ್ರಕಾಶನದಿಂದ ೫ ವರ್ಷಗಳ ಹಿಂದೆ ಭವ್ಯ ಸಮಾರಂಭದಲ್ಲಿ ಬಿಡುಗಡೆ ಕಂಡ ಮಡಿಕೇರಿಯ ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಾಲಯದ ಕೃತಿಯ ಪರಿಷ್ಕೃತ ಪ್ರತಿಯನ್ನು ಮಡಿಕೇರಿ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರಾದ ಮತ್ತೋರ್ವ ಮುಖ್ಯ ಅತಿಥಿ ಕೆ. ಎಸ್. ದೇವಯ್ಯ ಅವರು ಅನಾವರಣ ಮಾಡಿ ಮೆಚ್ಚುಗೆಯ ಮಾತನ್ನಾಡಿದರು.

ಹಿರಿಯರಾದ ಡಾ| ಎಂ. ಜಿ. ಪಾಟ್ಕರ್ ಸಭಾಂಗಣವನ್ನು ಒದಗಿಸಿಕೊಟ್ಟಿದ್ದರು. ಸಾನಿಧ್ಯ ಪ್ರಕಾಶನದ ಪ್ರಕಾಶಕರಾದ ವೇದಮೂರ್ತಿ ಬಿ. ಜಿ. ನಾರಾಯಣ ಭಟ್, ಸಾವಿತ್ರಿ ಬಿ. ಎನ್, ಕಲಾಪೋಷಕರಾದ ಡಾ| ನಡಿಬೈಲು ಉದಯಶಂಕರ್, ಸ್ವಾತಿ, ರಾಮಕೃಷ್ಣ ಭಟ್, ಪುರುಶೋತ್ತಮ ಭಟ್, ಶಾರದಾ ಮಂದಪ್ಪ, ಕಲಾವಿದರು, ಉಪನ್ಯಾಸಕರು ವಾರ್ಷಿಕ ಸಂಭ್ರಮಕ್ಕೆ ತೋರಣ ಕಟ್ಟಲು ನೆರೆದಿದ್ದರು. ಅಸೀಮಾ ಆಂಗ್ಲ ಮಾಸಿಕದ ಕಾರ್ಯ ನಿರ್ವಾಹಕ ಸಂಪಾದಕ ಯು. ಮಹೇಶ್ ಪ್ರಭು, ಕನ್ನಡಪ್ರಭದ ಮಹೇಶ್ ಚೇವಾರ್, ಶಕ್ತಿ, ಆಂದೋಲನ, ಇಂಡಿಯನ್ ಎಕ್ಸ್‌ಪ್ರೆಸ್‌ನ ಪತ್ರಕರ್ತಮಿತ್ರರು ಹಾಜರಿದ್ದರು.

ನನ್ನೆಲ್ಲ ಸಿಟ್ಟು, ಗಡಿಬಿಡಿ, ಆತಂಕಗಳನ್ನು ಪ್ರೀತಿಯಿಂದಲೇ ಸಹಿಸುವ ಬಳಗದ ಒಲುಮೆಯ ವಿಷ್ಣುಪ್ರಸಾದ್ ನಿಡ್ಡಾಜೆ, ರಾಧಿಕಾ ವಿಟ್ಲ, ಪ್ರಿಯಾ. ಎಂ. ಕೆರ್ವಾಶೆ, ಶ್ವೇತಾ, ತಮ್ಮ ರಾಜಗೋಪಾಲ್, ಲಕ್ಷ್ಮಣ, ಸುಬ್ರಹ್ಮಣ್ಯ ನೂಪುರದ ಅಂಗಳದ ತುಂಬಾ ಸಂಭ್ರಮದಿಂದ ಓಡಾಡಿಕೊಂಡಿದ್ದರು. ಸಹೋದರ ಅಕ್ಷಯರಾಮ ಕಾವಿನಮೂಲೆ ಪ್ರಾರ್ಥನೆಯ ಮೂಲಕ ಶುಭಾರಂಭ ನೀಡಿದರೆ, ವೆಬ್‌ಸೈಟ್‌ನ್ನು ನಿರ್ವಹಿಸುವ, ಅಕ್ಕರೆಯಿಂದಲೇ ಮನು ಅಕ್ಕ ಎನ್ನುವ ಅಣ್ಣ ಮಹೇಶ್ ಎಲ್ಯಡ್ಕ ಸುಂದರವಾಗಿ ವೆಬ್‌ಸೈಟ್‌ನ್ನು ಪರಿಚಯಿಸಿದರು. ಪ್ರೀತಿಯಿಂದಲೇ ಜಗಳವಾಡುವ ಗೆಳೆಯ, ನಮ್ಮದೇ ಬಳಗದ ಚೈತ್ರರಶ್ಮಿ ಮಾಸಿಕದ ಸಂಪಾದಕ ಸಿ. ಎಸ್. ರಾಮಚಂದ್ರ ಹೆಗಡೆ ಕೊನೆಗೆ ವಂದನೆ ಸಲ್ಲಿಸಿದರು. ಅಚ್ಚುಕಟ್ಟಾದ, ಆಕರ್ಷಕ ನಿರೂಪಣೆ ಮಾಡುವ ಗೆಳತಿ ಶ್ರೀಲಕ್ಷ್ಮಿ ಸಮಾರಂಭದ ಹೈಲೈಟ್ !

ಇದೇ ಸಂದರ್ಭದಲ್ಲಿ ಮಡಿಕೇರಿಯ ಎಫ್‌ಎಂಸಿ ಕಾಲೇಜಿನಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ, ಉಪನ್ಯಾಸಕ-ವಿದ್ಯಾರ್ಥಿಗಳ ಸಂಘಟನೆ ಯಕ್ಷಕಲಾ ವೇದಿಕೆಯಿಂದ ಶರಸೇತುಬಂಧ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿತ್ತು. ಇಂದಿನ ಕಾಲ-ಸಂದರ್ಭಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಭಾಗವಹಿಸುವುದಕ್ಕಿಂತ ಅದರ ಆಯೋಜನೆ ಎಷ್ಟರ ಮಟ್ಟಿಗೆ ದುಸ್ತರ ಎಂಬ ಅನುಭವ ಇತ್ತಾದರೂ, ಕಲಾವಿದರ ಅಲಭ್ಯತೆ, ಸಂಭಾವನೆ, ಸೂಕ್ತ ವ್ಯವಸ್ಥೆಯ ಹೊಂದಾಣಿಕೆ, ಓಡಾಟ, ಪರದಾಟ, ಕೊನೆ ಘಳಿಗೆಯ ಬದಲಾವಣೆ…ಹೀಗೆ, ಪ್ರತ್ಯಕ್ಷೀಕರಿಸಿಕೊಂಡ ಸಂಭ್ರಮವೂ ಅಲ್ಲಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಸರೆಯಾಗಿ ನಿಂತ ಸಂಯೋಜಕ-ಕಲಾವಿದ ಮಹಾಬಲೇಶ್ವರ ಭಟ್, ಸಂಚಾಲಕ ರಾಜೀವ್ ಪೆರ್ಲ ಅವರ ಪ್ರೋತ್ಸಾಹ ಸ್ಮರಣೀಯ. ಹಿಮ್ಮೇಳದಲ್ಲಿ ಭಾಗವತರಾಗಿ ಹರಿನಾರಾಯಣ ಭಟ್ ಪುಂಡಿಕಾ, ಮದ್ದಳೆಯಲ್ಲಿ ರಾಘವ ಬಲ್ಲಾಳ್, ಚೆಂಡೆಯಲ್ಲಿ ರಾಜೇಂದ್ರಪ್ರಸಾದ್ ಪುಂಡಿಕಾ, ಶ್ರುತಿಯಲ್ಲಿ ರಾಜೀವ ಪೆರ್ಲ ಅವರು ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಜುನನಾಗಿ ಸರ್ಪಂಗಳ ಈಶ್ವರ ಭಟ್, ಹನುಮಂತನಾಗಿ ಗೋಪಾಲಕೃಷ್ಣಯ್ಯ, ವೃದ್ಧ ಬ್ರಾಹ್ಮಣನಾಗಿ ಮಹಾಬಲೇಶ್ವರ ಭಟ್ ಪಾತ್ರ ವಹಿಸಿದ್ದರು.

ಅಂದಹಾಗೆ ನೀವೆಲ್ಲರೂ www.noopurabhramari.com ವೆಬ್‌ಸೈಟ್‌ನ್ನು ನೋಡಿದ್ದೀರಿ, ಮೆಚ್ಚಿದ್ದೀರಿ, ಸಲಹೆ ಸೂಚನೆಗಳನ್ನಿತ್ತಿದ್ದೀರಿ. ಹಾಗಾದರೆ ಗಮನಿಸಿರುತ್ತೀರಿ, ನೂಪುರದ ಅತ್ಯಾಕರ್ಷಕ ಲೋಗೋ ! ಅದು ಗೆಳೆಯರಾದ ವಿಘ್ನರಾಜ, ರಾಧಿಕಾ ಅವರ ಶ್ರಮ. ಈ ಬಾರಿಯ ಮುಖಪುಟದ ಕಲ್ಪನೆಯೂ ಅವರದ್ದೇ ! ವಾರ್ಷಿಕ ವಿಶೇಷ ಸಂಚಿಕೆಯ ಪುಟವಿನ್ಯಾಸ ಮಿತ್ರ ಹರೀಶ್ ಅದೂರು ಅವರಿಂದ ಮೂಡಿದ್ದು.

ಒಟ್ಟಿನಲ್ಲಿ ಮೈಸೂರುಪಾಕಿನ ಸಿಹಿಯಷ್ಟೇ ನಗು-ಒಲುಮೆ-ಸಂತಸದ ಸ್ಮೃತಿಯ ಕ್ಷಣ . ಸಂಭ್ರಮದ ಪ್ರತಿಯೊಂದರಲ್ಲೂ ಹೊಸತಿನ ಕ್ಷಣದ ಅನಾವರಣವಿತ್ತು, ಓದು ಮತ್ತು ಕಲೆಯನ್ನು ಪ್ರೀತಿಸುವ ಒಂದೊಂದು ಕ್ಷೇತ್ರದ ಪ್ರತಿನಿಧಿಗಳಿದ್ದರು. ಸಮೃದ್ಧ ಓದಿಗಾಗಿ ಚೈತ್ರರಶ್ಮಿ, ಅಸೀಮಾ, ನೂಪುರ ಭ್ರಮರಿ ಕೂಡಾ !

ಕೊನೆಗೆ… ಯಶಸ್ವಿಯಾಗಿ ಮುಗಿದ ಕ್ಷಣಗಳೆಡೆಗೆ ಧನ್ಯತೆ ! ಬರುವ ಸಂಭ್ರಮದ ಕ್ಷಣಗಳೆಡೆಗೆ ಪುಟ್ಟ ಕಾತರಿಕೆ !

ಪ್ರಸ್ತುತ ಕಾರ್ಯಕ್ರಮಗಳ ವರದಿಯನ್ನು ಇಲ್ಲಿ ಓದಿ…

Leave a Reply

*

code