‘ವರುಷವೆರಡು ಕಳೆದಿದೆ… ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ…’

Posted On: Sunday, March 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ದೊಂದು ರೀತಿಯಲ್ಲಿ ಬಯಸದೇ ಒಲಿದು ಬಂದ ಭಾಗ್ಯ !!!
ಎರಡು ವಸಂತಗಳನ್ನು ಪೂರೈಸಿ ಮೂರನೇ ಸಂವತ್ಸರಕ್ಕೆ ಕಾಲಿಡುವ ಹೊತ್ತಿಗೆ ಅಂತಹುದೊಂದು ಶುಭಾರಂಭ ಒದಗೀತು ಎಂಬುದನ್ನು ನೂಪುರ ಭ್ರಮರಿಯ ಬಳಗದ ಯಾವ ಮಿತ್ರರೂ ಕಲ್ಪಿಸಿಯೂ ಇರಲಿಲ್ಲ. ಏಕೆಂದರೆ ಕಳೆದ ವರ್ಷದಂತೆ ಒಂದು ವರ್ಷ ಪೂರೈಸಿದ ಪ್ರಯುಕ್ತ ಮಿತ್ರರೆಲ್ಲಾ ಒಟ್ಟಾಗಿ ವಾರ್ಷಿಕ ಸಂಭ್ರಮವನ್ನು ಆಚರಿಸಿಕೊಂಡು, ವೆಬ್‌ಸೈಟ್ ಅನಾವರಣಗೊಳಿಸಿದಂತ ಯಾವುದೇ ನೆವವೂ ಈ ವರ್ಷದ ಪ್ರಾರಂಭಕ್ಕೆ ಇರಲಿಲ್ಲ. ಬಳಗದ ಕುಟುಂಬ ಸಾಕಷ್ಟು ಹಿರಿದಾಗುತ್ತಿದ್ದರೂ ಈ ವರ್ಷಕ್ಕೆ ಅಂತಹ ಸಮಾರಂಭ ಮಾಡುವ ಇರಾದೆ ಯಾರಿಗೂ ಇರಲಿಲ್ಲವೆನ್ನಬಹುದೇನೋ ! ಹಾಗಾಗಿ ಬಳಗದ ಪ್ರಮುಖರು ಸಭೆ ಸೇರಿ ಒಕ್ಕೊರಲಿನಿಂದ ತೀರ್ಮಾನಿಸಿದ್ದು, ಸಮಾರಂಭದ ಬದಲಾಗಿ ಪತ್ರಿಕೆಗೆ ಒಂದು ಹೊಸ ವಿನ್ಯಾಸ ಮತ್ತು ಶೈಲಿ ನೀಡೋಣ ಮತ್ತು ಪತ್ರಿಕೆಯ ಪ್ರಸಾರದ ದಿಕ್ಕನ್ನು ಮತ್ತಷ್ಟು ವಿಶಾಲವಾಗಿಸೋಣ ಎಂದಷ್ಟೇ . ಆದ್ದರಿಂದ ಎಲ್ಲರ ಗಮನವೂ ಇದ್ದದ್ದು ಗುಣಮಟ್ಟದ ಲೇಖನಗಳು ಮತ್ತು ವರ್ಣಮಯ ಮುದ್ರಿತ ಸಂಚಿಕೆಯೆಡೆಗೆ !
ಆದರೆ ಅಯಾಚಿತವಾಗಿ, ಕಾಕತಾಳೀಯವೋ ಎಂಬಂತೆ ಒದಗಿ ಬಂದಿತ್ತು ಭವ್ಯ ವೇದಿಕೆಯಲ್ಲಿ ಎರಡನೇ ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಆಚರಿಸಿಕೊಳ್ಳುವ ಅವಕಾಶ. ಅದೂ ಎಷ್ಟು ಕಡಿಮೆ ಅವಧಿಯಲ್ಲಿ ಎಂದರೆ ಹಿಂದಿನ ದಿನ ರಾತ್ರಿ ನಿಗದಿಯಾಗಿ, ಬಳಗದ ಎಲ್ಲರಿಗೂ ಸರಿಯಾಗಿ ವಿಚಾರ ತಿಳಿಸದಷ್ಟೂ ಅವಸರವಸರವಾಗಿ !
ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ೨೦೦೭ ಫೆಬ್ರವರಿಯ ಶಿವರಾತ್ರಿಯಂದು. ಮೊನ್ನೆ ಮೊನ್ನೆ ಕಣ್ಬಿಟ್ಟಳೋ ಎಂಬಂತಿರುವಾಗಲೇ ವಾರ್ಷಿಕ ಸಂಭ್ರಮ ೨೦೦೮ರ ಫೆಬ್ರವರಿ ೧೦ಕ್ಕೆ. ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹೊತ್ತಿಗೆ ಮಂಟಪ ಪ್ರಭಾಕರ ಉಪಾಧ್ಯರ ಮುಖಪುಟ, ಸಂದರ್ಶನ ಹೊತ್ತ ವಾರ್ಷಿಕ ಸಂಚಿಕೆ ತೆರೆದುಕೊಂಡದ್ದು ಫೆಬ್ರವರಿ ೧೩, ೨೦೦೯. ಅದೂ ಭರತನೃತ್ಯ ಸಭಾದ ಆಶ್ರಯದಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಮಂಟಪರ ಏಕವ್ಯಕ್ತಿ ಯಕ್ಷಗಾನ ಸರಣಿ ಕಾರ್ಯಕ್ರಮದ ಉದ್ಘಾಟನೆಯ ದಿನದಂದು.
ಒಟ್ಟಿನಲ್ಲಿ ಮಂಗಳೂರು ವಲಯದ ಹೊಸ-ಹೊಸ ಗೆಳೆಯರ ಬಳಗ ಆದರದಿಂದ ಸ್ವಾಗತಿಸಿತ್ತು. ಹೊಸ ಓದುಗ ಮಿತ್ರರ ಮೆಚ್ಚುಗೆ ಸಂತಸವನ್ನು ಇಮ್ಮಡಿಸಿತ್ತು. ಈ ಹೊತ್ತಿಗೆ ಸರಿಯಾಗಿ ಮೂರರ ಪೋರಿ ಭ್ರಮರಿಯನ್ನು ಸಿದ್ಧಪಡಿಸಿ ವೇದಿಕೆಗೆ ಹತ್ತಿಸಿ ಸಹಕರಿಸಿದ ಬಳಗದ ಮಿತ್ರ ಸುನಿಲ್ ಕುಲಕರ್ಣಿ ಮತ್ತು ಅಕ್ಷರೋದ್ಯಮದ ಗೆಳೆಯರಿಗೆ ಧನ್ಯವಾದದ ಪುಟ್ಟ ಹೂಗುಚ್ಛ.
ಈ ಸಂಭ್ರಮಕ್ಕೆ ಮುನ್ನುಡಿ ಬರೆದವರು ಭರತನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯದ ಅಧ್ಯಕ್ಷರೂ ಆದ ಚಂದ್ರಶೇಖರ ಶೆಟ್ಟಿ ಮತ್ತು ಅವರ ಸನ್ಮಿತ್ರರು. ಕಳೆದ ಒಂದೂವರೆ ವರ್ಷಗಳಿಂದ ಮಂಗಳೂರಿನ ಭರತನೃತ್ಯ ಸಭಾ ಕಲಾಪ್ರೇಮಿಗಳಿಗೆ ಮಾತ್ರವಲ್ಲದೆ ಎಲೆಮರೆಯ ಪ್ರತಿಭಾವಂತ ಕಲಾವಿದರ ಅರಳುವಿಕೆಗೆ ಸಾಕಷ್ಟು ಚಟುವಟಿಕೆಗಳು, ಅವಕಾಶಗಳು, ಉತ್ಸವ, ಕಾರ್ಯಾಗಾರಗಳನ್ನು ನಡೆಸಿಕೊಡುತ್ತ ಬಂದಿರುವ ಸಮಾನ ಮನಸ್ಕರ ಸಂಸ್ಥೆ.
ಕಲಾಜಗತ್ತಿನ ದಿಗ್ಗಜರ, ಹಿರಿಯರ ಉಪಸ್ಥಿತಿಯಿದ್ದರೂ ಅಂದು ಸನಾತನ ನಾಟ್ಯಾಲಯದ ಚಾವಡಿಯಲ್ಲಿ ಜರುಗಿದ್ದು ಆಡಂಬರದ ಸದ್ದುಗದ್ದಲವಿಲ್ಲದ, ಹೊಗಳಿಕೆ-ತೆಗಳಿಕೆ-ಓಲೈಕೆ-ಸ್ವಂತಿಕೆ ಮೆರೆಸುವ ಭಾಷಣಗಳಿಲ್ಲದ ಕಲಾವಂತರನ್ನು ನೇರವಾಗಿ ತಟ್ಟುವ ಸಮಯಪ್ರಜ್ಞೆಯ ಚೊಕ್ಕ ಚಿಕ್ಕ ಕಾರ್ಯಕ್ರಮ. ಔಪಚಾರಿಕವಾಗಿದ್ದರೂ, ಪ್ರೀತಿ-ಗೌರವ, ಆದರದಿಂದಾಗಿ ಅನೌಪಚಾರಿಕ ನೆಲೆಯಲ್ಲಿ ಮೂಡಿಬಂದ ವೇದಿಕೆಗೆ ದೀಪಬೆಳಗಿ ಉದ್ಘಾಟನೆ ನೆರವೇರಿಸಿದವರು  ‘ಚಿಂತನೆಯಲ್ಲಿ ಹೊಸತನ ಕಂಡಾಗ ಪರಿಣಾಮಕಾರಿ ಬದಲಾವಣೆ ಸಾಧ್ಯ’ ಎಂದು ಶುಭಪ್ರದವಾಗಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್.
ಜೊತೆಗೆ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರ ಅಧ್ಯಕ್ಷತೆ, ಸ್ತ್ರೀ ವೇಷ ಸಾಮ್ರಾಟ ಮಂಟಪ ಪ್ರಭಾಕರ ಉಪಾಧ್ಯ, ಹಿರಿಯ ನೃತ್ಯ ಗುರು ಮುರಳೀಧರ ರಾವ್, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ನಾಗೇಶ್. ಎ. ಬಪ್ಪನಾಡು, ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್, ನೃತ್ಯಾಭ್ಯಾಸಿಗಳು, ವಿಮರ್ಶಕರು, ಕಲಾವಿದರು.., ಹೀಗೆ ಹಮ್ಮು ಬಿಮ್ಮು ಇಲ್ಲದ ಸಹೃದಯ ಮನಸ್ಥಿತಿ.
ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿ ಅವರ ಮಾತುಗಳು ಸಮಕಾಲೀನ ಸಂದರ್ಭವನ್ನು ಇಣುಕಿ ನೋಡಿ, ಚಿಂತನೆಗೆ ಪೂರಕವಾಗಿ ಧ್ವನಿಸಿತ್ತು.. ಇದೋ, ಅವರ ಮಾತುಗಳಲ್ಲಿ ಬೊಗಸೆಗೆ ಸಿಕ್ಕಿದ ಒಂದಷ್ಟು ನುಡಿಗಳಿಗೆ ಕಿವಿಯಾಗೋಣ..
‘ ಒಬ್ಬ ನರ್ತಕನಿಗೆ ಲಯ ಮುಖ್ಯವಾದದ್ದು. ಅದರ ಆಧಾರದಲ್ಲಿ ಅವನ ನೈಪುಣ್ಯತೆ ನಿಗದಿಯಾಗುತ್ತದೆ. ಇಂತಹ ನೃತ್ಯಾಧಾರಿತ ವಿಷಯಗಳನ್ನು ಅವಲೋಕನ ಮತ್ತು ಅಭಿವೃದ್ದಿಪಡಿಸುವಲ್ಲಿ ನೂಪುರ ಭ್ರಮರಿಯ ಕೆಲಸ ಸಮಾಜಕ್ಕೆ ಅವಶ್ಯಕ.
ಪರಂಪರೆ, ಸುಧಾರಣೆ, ಹೊಸತನ -ಅತ್ಯಂತ ಭಯಾನಕ ಶಬ್ದಗಳು. ನಮಗೆ ತಿಳಿಯದೇ ಮಾಡಿದ್ದನ್ನೇ ಮಾಡಿದರೆ ಅದು ಪರಂಪರೆಯೆನ್ನುತ್ತೇವೆ. ಸಂಪ್ರದಾಯವೆಂಬುದು ಕಲೆಯಲ್ಲಿ ನುಸುಳಿದೆ. ಆದರೆ ಇಂತಹ ಶಬ್ದಗಳ ಗಂಭೀರ ಅರ್ಥವನ್ನು ತಿಳಿದುಕೊಂಡು, ಕಲೆಯಲ್ಲಿ ಏನಾಗಿದೆ ಎಂದು ನೋಡುವ ಕೆಲಸ ಅಗಬೇಕು.. ಇಂತಹ ಅವಲೋಕನ ನೂಪುರ ಭ್ರಮರಿ ಮುನ್ನಡೆಸಿಕೊಂಡು ಬರುತ್ತಿದೆ..
ಕಲೆಯ ಚರಿತ್ರೆಯನ್ನು ತಿಳಿದರೆ ಕಾಲಕಾಲಕ್ಕೂ ಕಲೆಯೊಂದು ಕವಲೊಡೆಯುವುದನ್ನು ಕಾಣುತ್ತೇವೆ. ಕಲೆಗಳೆಲ್ಲ ಒಂದೇ ಮೂಲದಿಂದ ಬಂದವಾಗಿದ್ದರೂ,  ಬೇರೆ ಬೇರೆ ದಿಕ್ಕನ್ನು ಹಿಡಿದು ಹೊರಟ ಕಾರಣ ಅಂತಹ ವ್ಯತ್ಯಾಸಗಳನ್ನು ಅರಿತುಕೊಳ್ಳಬೇಕು. ಇಲ್ಲವಾದರೆ  ಮುಂದೊಂದು ದಿನ ಕಲೆಯೊಂದನ್ನು ಕಲಿಯಬೇಕು ಅಥವಾ ನೋಡಬೇಕೆಂದರೆ ಅದು ಅಂಚೆ ತೆರಪಿನ  ಶಿಕ್ಷಣದಲ್ಲಿ ಕಳಿಸುವ ಪುಸ್ತಕವಾಗುವ ಅಪಾಯವಿದೆ.
ನಮ್ಮ ಅನುಭವಕ್ಕೆ ಬಾರದ ವಿಷಯಗಳನ್ನು ಕಲಿಯುವಾಗ ಹೆಚ್ಚು ಆಲೋಚಿಸಿ ಕಲಿಯಬೇಕಾದ ಆವಶ್ಯಕತೆಯಿದೆ. ಯಾವುದೇ ಪ್ರಸಂಗವನ್ನು ನಿರ್ವಹಿಸುವಾಗ ಕಲಾವಿದನಿಗೆ ಹೊಸ ಕಲ್ಪನೆಗಳಿರಬೇಕು. ಆ ಕಲ್ಪನೆಯಲ್ಲಿ ಔಚಿತ್ಯ-ಪ್ರಾಯ-ವಯಸ್ಸು-ಲಿಂಗ-ಅನುಭವ ಎಲ್ಲವನ್ನೂ ಹೊಂದಿಸಿಕೊಂಡಂತೆ ಆ ಪಾತ್ರದ ಮಟ್ಟವನ್ನು ತಿಳಿಯಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಮುದ್ರೆಗಳನ್ನು ಯಥಾವತ್ತಾಗಿ ಮಾಡುವಾಗಲೂ ಎಷ್ಟೋ ಜನರು ಯೋಚಿಸುವುದೇ ಇಲ್ಲ.
ಪಾತ್ರ ಯಾವುದು; ಅನುಭವ ಏನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ನಟಿಸುವುದು ಮುಖ್ಯ.  ಜನರು ಮೆಚ್ಚುತ್ತಾರೆ ಎಂದು ಕ್ರಿಯೆ-ಪ್ರತಿಕ್ರಿಯೆಗಳನ್ನು ತಪ್ಪಾಗಿ ಮಾಡಕೂಡದು. ಆದರೆ ಇಂದು ದೊಡ್ಡ-ದೊಡ್ಡ ಕಲಾವಿದರೆನಿಸಿಕೊಂಡವರಲ್ಲೇ ಇದರ ಕೊರತೆ ಕಾಣುತ್ತಿದೆ.
ಇಂದು ಕಲೆಯ ಮೇಲಿನ ಬೆಲೆ ಕಡಿಮೆಯಾಗುತ್ತಿದೆ. ಮಾಧ್ಯಮಗಳಲ್ಲಿ ನೃತ್ಯದ ಕಾರ್ಯಕ್ರಮವೂ ನೋಡಲು ಸಿಗುತ್ತಿದೆ. ಇಂದು ಕಲೆಯನ್ನು ಪೂರ್ಣವಾಗಿ ಅರ್ಥೈಸಿಕೊಳ್ಳದೇ ಹಾಡುವುದು, ನರ್ತಿಸುವುದು, ಪ್ರೋತ್ಸಾಹ-ಬಹುಮಾನ-ಬಿರುದುಗಳನ್ನು ನೀಡುವುದು ಜಾಸ್ತಿಯಾಗುತ್ತಿದೆ. ರಂಗಭೂಮಿ ಬತ್ತಿ ಹೋಗುತ್ತಿದೆಯೇನೋ ಎಂಬಂತೆ ಇತ್ತೀಚೆಗಿನ ದಿನಗಳಲ್ಲಿ ಭಾಸವಾಗುತ್ತಿದೆ. ಸಾಧಿಸುವ ಮೊದಲ ಮೆಟ್ಟಿಲಿನಲ್ಲಿರುವವರನ್ನು ಹಿರಿಯ ಸಾಧಕರೊಂದಿಗೆ ಹೋಲಿಸುವಾಗ ಅರ್ಹತೆ, ಸಾಧನೆಗಳಿಗಿಂತಲೂ ಓಲೈಕೆ, ಜಾಸ್ತಿಯಾಗುತ್ತಿದೆ. ಇಲ್ಲವಾದರೆ ಟಿವಿಯಲ್ಲಿ ಬಾಯಿಪಾಠ ಕಲಿತು ಹಾಡುವ ಮಗುವನ್ನು ಲತಾ ಮಂಗೇಶ್ಕರ್ ತರಹ ಹಾಡುತ್ತೀ ಎಂದರೆ ಕಲೆಗೂ, ಕಲಾವಿದನಿಗೂ ಮಾಡುವ ಅಪಹಾಸ್ಯ ಮತ್ತು ಅವಿವೇಕ.
ಇಂತಹ ಸಂದರ್ಭದಲ್ಲಿ ನಾವು ತುಂಬಾ ಗಟ್ಟಿಯಾಗಿ ನಿಲ್ಲಬೇಕಾದ ಅವಶ್ಯಕತೆಯಿದೆ. ಕಲೆಗಳ ಕೀಳು ಮಾರುಕಟ್ಟೆಯ ಕಾಲದಲ್ಲಿ ತಪಸ್ಸಿನಂತೆ ಛಲ ಹೊತ್ತು ಸಣ್ಣ-ಸಣ್ಣ ರೂಪದಿಂದ, ಪಿಸುಧ್ವನಿಯಿಂದ ಹಿಡಿದು ಸ್ಥಿರವಾಗಿ, ಅರ್ಥಪೂರ್ಣವಾದ ಕೆಲಸ ಮಾಡುವ ಅನಿವಾರ್ಯತೆಯಿದೆ. ಈಗಾಗಲೇ ಯಕ್ಷಗಾನವನ್ನೂ ಒಳಗೊಂಡಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ಹುದುಗಿಕೊಂಡಿರುವ ಸಾಹಿತ್ಯವನ್ನು ಬಳಸಿಕೊಂಡು ಕಲೆಗಳು ಬೆಳೆಯಬೇಕಾಗಿದೆ. ಜೊತೆಗೆ ಈ ಸಾಹಿತ್ಯಗಳು ಯಾವ್ಯಾವ ಭಾವಗಳನ್ನು ಕೊಡುತ್ತವೆ ಎಂಬುದನ್ನು ಮಕ್ಕಳೂ ಸೇರಿದಂತೆ ಹಿರಿಯರು ವಿಶೇಷವಾಗಿ ಗಮನಿಸಬೇಕು.’
ತದನಂತರ ಸತತ ಮೂರು ದಿನಗಳ ಪರ್ಯಂತವೂ ಭಾವ-ರಸ ಸರಣಿ. ಮಂಟಪರ ಅಭಿನಯ, ರಸಪ್ರತಿಪಾದನೆ ಮತ್ತಷ್ಟು ಮನೆಮಂದಿ ಸನಾತನ ನಾಟ್ಯಾಲಯದ ಚಾವಡಿಗೆ ಬಂದು ಕುಳಿತುಕೊಳ್ಳುವಂತೆ ಮಾಡಿತ್ತು. ಜೊತೆಗೆ ಎರಡು ದಿನಗಳ ಸಂವಾದ ಸರಣಿ ಸಹೃದಯರನ್ನು ಕಲೆಗೆ ಇನ್ನಷ್ಟು ಸಮೀಪಕ್ಕೆ ತಂದಿತ್ತು. ಧನ್ಯತೆಯ ಕ್ಷಣಗಳವು.
ಆದರೆ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಪೋನ್ ಕಾಲ್, ಇ-ಮೇಲ್ ಗಳಲ್ಲಿ ಆತ್ಮೀಯ ಸ್ನೇಹಿತರ ಪ್ರೀತಿ ತುಂಬಿದ ಆಕ್ರೋಶ, ನಲುಮೆಯ ಹಾರೈಕೆ.. ‘ನಮಗ್ಯಾಕೆ ಹೇಳಲಿಲ್ಲ ! ಮೊದಲೇ ಹೇಳೋಕೆ ಏನಾಗಿತ್ತು? ಬರೋದಿಲ್ಲಾ ಅಂತಿದ್ವಾ?’
ಕಣ್ಣಿಂದ ಇಣುಕಿದ್ದವು ಹನಿಗಳು !!!

Leave a Reply

*

code