2010-ವರ್ಷದ ಅತ್ಯುತ್ತಮ ವಿಮರ್ಶೆ ಪ್ರಶಸ್ತಿ

Posted On: Tuesday, February 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸುತ್ತಿದೆ. ಅದರಲ್ಲೂ ಯುವ ಮನಸುಗಳನ್ನು ಪ್ರೇರೇಪಿಸಿ, ಪ್ರೋತ್ಸಾಹಿಸಿ, ಉತ್ತಮ ವಿಮರ್ಶೆಗಳನ್ನು ಬರೆಯುವ ಮನಸ್ಸನ್ನು ಹುಟ್ಟುಹಾಕುವ ಕಾರ್ಯದ ಮುನ್ನುಡಿಯಾಗಿ ಈ ಪ್ರಶಸ್ತಿಯ ಚಿಂತನೆ ಅನಾವರಣಗೊಂಡಿದೆ. ಮುಂದಿನ ದಿನಗಳಲ್ಲಿ ಈ ಕುರಿತಾಗಿ ಮಾಧ್ಯಮ ಮತ್ತು ಕಲೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ಕಟ್ಟಿಕೊಡುವ ದಿಸೆಯಲ್ಲಿ ಚಿಂತನಾರ್ಹವಾದ, ಪ್ರಾಯೋಗಿಕ ನೆಲೆಗಟ್ಟು ಭವಿಷ್ಯದಲ್ಲಿ ತೆರೆದುಕೊಳ್ಳಲಿದೆಯೆಂಬ ಆಶಯ ನಮ್ಮದು.

೨೦೧೦ನೇ ಸಾಲಿನಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಮೊದಲು ಭಾಜನರಾಗುತ್ತಿರುವವರು ಶ್ರೀಮತಿ ಪ್ರಿಯಾ ರಾಮನ್. ನವದೆಹಲಿಯ ಸಂಸ್ಕೃತಿ ಫೌಂಡೇಶನ್‌ನ ಕಾರ್ಯಕ್ರಮ ಸಂಯೋಜಕರಾಗಿ, ಟೈಮ್ಸ್ ಆಫ್ ಇಂಡಿಯಾದ ಜೊತೆ ಭಾರತೀಯ ಶಾಸ್ತ್ರೀಯ ನೃತ್ಯಗಳ ಶೈಕ್ಷಣಿಕ ಉದ್ದೇಶಗಳ ಕುರಿತಂತೆ ಕಾರ್ಯ ನಿರ್ವಹಿಸಿದ ಪ್ರಿಯಾರಾಮನ್ ಹಲವು ಶೈಕ್ಷಣಿಕ ಮತ್ತು ಸಂಶೋಧನೆಯ ನೆಲೆಗಟ್ಟಿನ ಕೆಲಸಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಬೆಂಗಳೂರಿನ ಶುಭಾ ಧನಂಜಯ್ ಮತ್ತು ದೆಹಲಿಯ ಪದ್ಮಶ್ರೀ ಗೀತಾ ಚಂದ್ರನ್, ಚೆನ್ನೈನ ಬ್ರಾಘ್ಹಾ ಬೆಸಲ್ಸ್ ಬಳಿಯಲ್ಲಿ ನೃತ್ಯಾಭ್ಯಾಸ ಮಾಡಿದ ಪ್ರಿಯಾ; ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಷ್ಟೇ ಅಲ್ಲದೆ ನಿರೂಪಣೆಯನ್ನೂ ನಿರ್ವಹಿಸಿದವರು. ರಾಷ್ಟ್ರೀಯ ಯುವ ಉತ್ಸವ ಪ್ರಶಸ್ತಿ, ವಿದ್ಯಾರ್ಥಿವೇತನಗಳನ್ನು ಪಡೆದ ಪ್ರಿಯಾರಾಮನ್ ನೃತ್ಯಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಅನನ್ಯ ಕಲಾಸಂಘಟನೆಯ ಸ್ವಯಂಸೇವಕಿಯಾಗಿರುವ ಪ್ರಿಯಾರಾಮನ್; ರೋಟರಿ ಫೌಂಡೇಶನ್‌ನ ರಾಯಭಾರಿಯಾಗಿ, ನೃತ್ಯ ಶಿಕ್ಷಣ ವಕ್ತಾರೆಯಾಗಿ ಯು‌ಎಸ್‌ಎಗೆ ಭೇಟಿಯಿತ್ತಿದ್ದಾರೆ.

ಶ್ರೀಮತಿ ಪ್ರಿಯಾ ರಾಮನ್

ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿ, ಪ್ರಸ್ತುತ ಹೈದರಾಬಾದಿನಲ್ಲಿ ತಮ್ಮ ವಾಸ್ತವ್ಯ ಹೂಡಿದರೂ ನೃತ್ಯಸಂಬಂಧೀ ಕಾರ್ಯಕ್ರಮಗಳಿಗೆ ಆಗಾಗ್ಗೆ ಕರ್ನಾಟಕದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡು ಹವ್ಯಾಸಿ ಪತ್ರಕರ್ತೆಯಾಗಿ ದುಡಿಯುತ್ತಿದ್ದಾರೆ. ಚಂದನ ದೂರದರ್ಶನ ಕಲಾವಿದೆಯಾಗಿರುವ ಪ್ರಿಯಾರಾಮನ್ ಜಯಾ ಟಿವಿ ನಡೆಸಿಕೊಡುವ ತಕಧಿಮಿತಾ ನೃತ್ಯಸ್ಫರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು. ೧೯೯೭ರಲ್ಲಿ ವಿದ್ವತ್ ಮತ್ತು ಅರಂಗೇಟ್ರಂ ಪೂರ್ಣಗೊಳಿಸಿದ್ದು; ಧಾರವಾಡದ ಯುವ ಸೌರವ, ಸಾಗರದ ಕಲೋತ್ಸವ, ಅಂಕುರ ಉತ್ಸವ, ಯವನಿಕಾ ಸಾಂಸ್ಕೃತಿಕ ಸಂಜೆ, ಸಾಯಿ ನೃತ್ಯೋತ್ಸವ, ಅನನ್ಯ ನೃತ್ಯಧಾರೆ, ದೆಹಲಿಯ ಲೋಕ್ ಕಲಾ ಮಂಚ್, ಹೈದರಾಬಾದ್‌ನ ನೃತ್ಯ ನೀರಾಜನ್, ಸಪ್ತಪರ್ಣಿ, ಶಿಲ್ಪರಾಮಂಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದಾರೆ. ಅವರು ಅನನ್ಯ ಕಲಾಸಿಂಚನ, ನರ್ತನಂ ಮತ್ತು ನರ್ತಕಿ ನಿಯತಕಾಲಿಕಗಳಲ್ಲಿ ಬರೆದ ಮೂರು ವಿಮರ್ಶೆಗಳನ್ನಾಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಶ್ರೀಮತಿ ಪ್ರಿಯಾ ರಾಮನ್ ಅವರ ಭಾಷೆ, ಶೈಲಿ ಸೂಕ್ತವಾಗಿ ತೋರಿದ್ದು; ವಿಷಯಕ್ಕೆ ನೇರವಾಗಿ ನವಿರಾದ ಲೇವಡಿ, ಸೂಕ್ತ ಸಲಹೆಗಳ ಜೊತೆಗೆ ವಿಮರ್ಶೆಗಳನ್ನು ಬರೆಯಲಾಗಿದೆ. ನೃತ್ಯ ಕಾರ್ಯಕ್ರಮ, ವಿಚಾರಸಂಕಿರಣ, ಉತ್ಸವ… ಹೀಗೆ ವಿವಿಧ ಆಯಾಮಗಳನ್ನು ಬಳಸಿಕೊಂಡಿದ್ದು; ವರದಿ, ವಿಮರ್ಶೆಗಳ ಎರಡೂ ಚಹರೆ ಮೇಳೈಸಿ ಬಂದಿದೆ. ಒಟ್ಟಾರೆಯಾಗಿ ವಿಮರ್ಶಕರಿಗೆ ಇರಬೇಕಾದ ಲಕ್ಷಣಗಳು ಕಂಡುಬಂದಿವೆ ಎಂಬ ಅಭಿಪ್ರಾಯ ತೀರ್ಪುಗಾರರದ್ದು.

ವಿಮರ್ಶಾಕ್ಷೇತ್ರವನ್ನು ಸಮೃದ್ಧಗೊಳಿಸುವಲ್ಲಿ ಸಹಕರಿಸುತ್ತಾ, ಈ ಸ್ಫರ್ಧೆಯಲ್ಲಿ ಹೃತ್ಪೂರ್ವಕವಾಗಿ ಭಾಗವಹಿಸಿದ ನಾಡಿನ ಎಲ್ಲಾ ಗಣ್ಯ ವಿಮರ್ಶಕರಿಗೂ ಮತ್ತು ಹೆಸರನ್ನು ಸೂಚಿಸಿ; ನಾಮನಿರ್ದೇಶನಗೊಳಿಸಿದ ಸಕಲ ಆದರಣೀಯರಿಗೂ, ವಿದ್ವಾಂಸರಿಗೂ, ಪತ್ರಕರ್ತ ಮಿತ್ರರಿಗೂ, ತೀರ್ಪುಗಾರರಿಗೂ ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಭವಿಷ್ಯದಲ್ಲೂ ನಮ್ಮೊಂದಿಗಿದ್ದು; ನೃತ್ಯ/ನಾಟ್ಯ ಕ್ಷೇತ್ರದ ಹಲವು ಆಯಾಮಗಳನ್ನು ಸ್ಪರ್ಶಿಸುವಲ್ಲಿ ಸದಭಿರುಚಿಯ ಪ್ರಯತ್ನಗಳೊಂದಿಗೆ ಜೊತೆಯಾಗಿ ಮುನ್ನಡೆಯೋಣ ಎಂಬ ಬಯಕೆ ನೂಪುರ ಭ್ರಮರಿಯದ್ದು.

Leave a Reply

*

code