ಚೈತ್ರರಶ್ಮಿ-೫೦ ಲೇಖನ ‘ಭಾರತೀಯ ನೃತ್ಯಕಲೆಗಳಲ್ಲಿ ಜೀವನದ ಅನುಸಂಧಾನ’

Posted On: Monday, June 8th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ನೃತ್ಯಕಲೆಗಳ ಅವಿಚ್ಛಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಅದು ಶಾಸ್ತ್ರೀಯವಾಗಿರಲಿ, ಅಥವಾ ಜಾನಪದವಾಗಿರಲಿ; ಜೀವನದ ಭಾರತೀಯ ಮುಖಗಳನ್ನು ಸುಂದರವಾಗಿ ನಿರೂಪಿಸುವುದರೊಂದಿಗೆ ಭಾವಪ್ರಚೋದಿಸುವ ಈ ನೃತ್ಯ ಮಾಧ್ಯಮ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗಷ್ಟೆ ಅಲ್ಲ, ಬದುಕಿನ ಹಲವು ಆಯಾಮಗಳಿಗೆ ತನ್ನನ್ನು ವಿಸ್ತರಿಸಿಕೊಂಡಿದೆ. ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸ್ತಾಪ ಋಗ್ವೇದದಲ್ಲಿ ಗುರುತಿಸಲಾಗಿದ್ದರೂ, ಋಗ್ವೇದಕ್ಕಿಂತಲೂ ಬಹಳಷ್ಟು ಪ್ರಾಚೀನವಾದುದು ಎಂಬುದನ್ನು ಕಂಡುಕೊಳ್ಳಬಹುದು. ಋಗ್ವೇದದಿಂದ ಪಠ್ಯವನ್ನು, ಯರ್ಜುವೇದದಿಂದ ಅಭಿನಯವನ್ನು, ಸಾಮವೇದದಿಂದ ಸಂಗೀತವನ್ನು, ಅಥರ್ವಣ ವೇದದಿಂದ ರಸವನ್ನು ತೆಗೆದು ಐದನೇಯ ವೇದವನ್ನಾಗಿ ನಾಟ್ಯವೇದವನ್ನು ರಚಿಸಲಾಯಿತು ಎಂದು ಪ್ರಾಚೀನ ಗ್ರಂಥಗಳು ಹೇಳಲ್ಪಟ್ಟಿವೆಯಾದರೂ, ಇಂತಹ ದೈವಿಕ ಸ್ಪರ್ಶ ಕೇವಲ ಪೂಜ್ಯತಾಭಾವನೆಗೆ ಮಾತ್ರ ಮೀಸಲಾಗಿರದೆ, ರಕ್ಷಣಾತ್ಮಕ ಚೌಕಟ್ಟನ್ನು, ಶಾಸ್ತ್ರೀಯ ಪರಂಪರೆಯನ್ನು ಕಾಯ್ದುಕೊಳ್ಳಲು ಮೂಡಿರಬಹುದೆಂದು ಇತಿಹಾಸತಜ್ಞರ ಅಭಿಪ್ರಾಯ. ಏನೇ ಇರಲಿ, ಭಾರತೀಯ ನೃತ್ಯಕಲೆಯು ಚಿತ್ರಕಲೆಯ ರೇಖಾವಿನ್ಯಾಸ, ವರ್ಣವೈಭವ, ಶಿಲ್ಪಕಲೆಯ ರೂಪ-ಲಾವಣ್ಯ, ನಟನ ದೇವನಾನುಕರಣ, ಸಂಗೀತ-ರಾಗ-ಲಯ-ಪದವಿನ್ಯಾಸ, ಕವಿಯ ಭಾವನಾವಿಲಾಸದ ಸಂಗಮವಷ್ಟೆ ಆಗಿರದೆ ಜೀವನದ ಜೊತೆಗಿನ ಅನುಸಂಧಾನವೂ ಹೌದು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಈ ಎಲ್ಲಾ ಭಾರತೀಯ ನೃತ್ಯಕಲೆಗಳಿಗೆ ಭರತಮುನಿಯ ಶಾಸ್ತ್ರವೇ ಆಧಾರವೆಂದೇ ನಂಬಲಾಗಿದ್ದರೂ, ಅದಕ್ಕೂ ಹಿಂದೆ ಶಿಲಾಲಿ, ಕೃಶಾಸ್ವರು ನಟಸೂತ್ರ ಗಳನ್ನೇ ರಚಿಸಿದ್ದರು ಎಂದು ಪಾಣಿನಿಯ ವ್ಯಾಕರಣ ತಿಳಿಸುತ್ತದೆ. ಆದರೆ ಲಭ್ಯವಿರುವ ಗ್ರಂಥಗಳ ಪೈಕಿ ಭರತನ ನಾಟ್ಯಶಾಸ್ತ್ರ ಅತೀ ಪ್ರಾಚೀನ ಮತ್ತು ಎಲ್ಲಾ ರಂಗ ಕಲೆಗಳಿಗೆ ಮಾತೃ ಗ್ರಂಥ ಎಂದೇ ನಿರ್ಧರಿಸಲ್ಪಟ್ಟಿದೆ. ಭರತ ಎನ್ನುವ ಐತಿಹಾಸಿಕ ವ್ಯಕ್ತಿ ಇದ್ದನೇ? ಇದ್ದರೆ ಯಾರು? ಎಂಬ ಜಿಜ್ಞಾಸೆ ಇಂದಿಗೂ ಸಿದ್ಧಾಂತಕ್ಕೆ ಸಿಲುಕಿಲ್ಲ. ಆದರೆ ಭರತಮುನಿಯ ಶಾಸ್ತ್ರವನ್ನು ಅವಲಂಬಿಸಿ ಬೆಳೆದು ಬಂದ ನಾಟ್ಯಸಂಪ್ರದಾಯಗಳೆಲ್ಲವೂ ಭರತನಾಟ್ಯವೇ ಆಗಿದೆ. ಹಾಗಾದರೆ ಕೇವಲ ಇಂದಿನ ಪ್ರಚಲಿತ, ಭರತನಾಟ್ಯ ಪದ್ಧತಿಯೊಂದೇ ಭರತನ ಕೊಡುಗೆ ಎನ್ನಲಾಗದು. (ಸಾದಿರ್, ದಾಸಿಆಟ್ಟಂ, ಕೇಲಿ, ನಿಲಂಬು, ದಾಸೀಕುಣಿತ ಎಂದು ಕರೆಯಲಾಗುತ್ತಿದ್ದ ನೃತ್ಯ ಪದ್ಧತಿ ಪುನರುಜ್ಜೀವನಗೊಂಡು ಭರತನಾಟ್ಯ ಎಂದು ಕರೆಸಿಕೊಂಡಿತಷ್ಟೆ ವಿನಃ; ಇಂದಿಗೂ ವಿಮರ್ಶಕರು ಭರತನೃತ್ಯ ಸಾದಿರ್ ಎಂದೇ ಕರೆಯಲು ಒತ್ತಾಯಿಸುತ್ತಿದ್ದಾರೆ, ಭರತನಾಟ್ಯವೆಂಬುದು ಶಾಸ್ತ್ರೀಯ ನೃತ್ಯದ ಒಂದು ಬಗೆ. ಅಷ್ಟೆ!)ಆದರೆ, ಇಂದಿನ ಹಲವು ಯುವ ಮನಸ್ಸುಗಳು, ಆಧುನಿಕ ಪ್ರೇರೇಪಿತ ನಿಲುವುಗಳು ಶಾಸ್ತ್ರೀಯ ನೃತ್ಯವನ್ನು ಅಸಡ್ಡೆಯಿಂದ ಕಾಣುವುದು, ಅದರಲ್ಲಿ ನವೀನವೆನಿಸುವ ಅತಿರೇಕದ ಬದಲಾವಣೆಗಳನ್ನು, ಪ್ರಯೋಗಗಳನ್ನು ಕಲ್ಪಿಸುವುದು ಶಾಸ್ತ್ರೀಯ ಲಕ್ಷಣಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದೆ. ಈ ನಿಟ್ಟಿನಿಂದ ನಾವು ಅರ್ಥ ಮಾಡಿಕೊಳ್ಳಬೇಕಾದುದು ಒಂದೇ!… ಶಾಸ್ತ್ರೀಯವಾಗಿರುವುದರಿಂದಲೇ ಅದು ಶಾಸ್ತ್ರೀಯ ನೃತ್ಯ. ಆದರೆ ಅಷ್ಟು ಮಾತ್ರಕ್ಕೆ ಅದರ ವೈಭವೀಕರಣವೂ ಸಲ್ಲದು. ಹಾಗೆ ನೋಡಿದರೆ ಭಾರತೀಯ ನೃತ್ಯ ಪರಂಪರೆಗಳಲ್ಲಿ ಇಂದಿಗೂ ೧೫೦೦ರಷ್ಟು ಜಾನಪದ ನೃತ್ಯದ ಸಂಪತ್ತು ಇದೆ. ಅದರಲ್ಲಿನ ಧಾರ್ಮಿಕ ಅಂಶ ಕಡಿಮೆಯಾಗುತ್ತಿದ್ದರೂ, ಜಾನಪದದ ವರ್ಣವೈವಿಧ್ಯ, ಸರಳತೆ, ಸ್ಫೂರ್ತಿ, ಲಯ-ಗತಿ, ಸಾತ್ವಿಕ ಆನಂದದಿಂದಾಗಿ ತೇಜಸ್ಸು ಕಡಿಮೆಯಾಗಿಲ್ಲ. ಜನಜೀವನದ ಪ್ರಮುಖ ಅಂಗವಾಗಿ ಸಂಸ್ಕೃತಿಯ ಅವಿಭಾಜ್ಯ ಅಂಶವಾಗಿ, ಆಕರ್ಷಣೀಯವಾಗಿರುವ ಇಂತಹ ನೃತ್ಯಗಳು ವೈವಿಧ್ಯತೆ, ಭಿನ್ನತೆ, ವ್ಯತ್ಯಾಸಗಳನ್ನು ತನ್ನೊಡಲಲ್ಲಿ ಕಾಯ್ದುಕೊಂಡು ರಂಜನೀಯವಾಗಿದೆ. ಇಂತಹ ಭಿನ್ನತೆಗಳು ಭಾರತೀಯ ಸಂಸ್ಕೃತಿಯ ಏಕತೆಯ ಮೂಲರೂಪ. ಅಂತೆಯೇ ಒಂದೊಂದು ಪ್ರಾಂತ್ಯದ ಜನಜೀವನ, ಲಕ್ಷಣ, ಸ್ಥಳೀಯ ಸ್ಥಿತಿಗತಿ, ಅವಶ್ಯಕತೆಗಳ ಫಲವಾಗಿ ಆಯಾಯ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯಗಳು ಮೈಗೂಡಿದವು. ಕೂಚಿಪುಡಿ, ಕಥಕ್ಕಳಿ, ಮೋಹಿನಿ ಆಟ್ಟಂ, ಮಣಿಪುರಿ, ಕಥಕ್, ಅಷ್ಟೇಕೆ ನಾಟ್ಯಶಾಸ್ತ್ರವನ್ನೇ ಅವಲಂಬಿಸಿರುವ ಕರ್ನಾಟಕದ ಯಕ್ಷಗಾನ, ಅಸ್ಸಾಮಿನ ಚೌ, ಸತ್ರಿಯಾ, ಕೊರವಂಜಿ, ಭಾಗವತಮೇಳ ನೃತ್ಯಗಳು ಶಾಸ್ತ್ರೀಯ ನೃತ್ಯಗಳೇ ಸರಿ! ಜೊತೆಗೆ ಸಾಮಾಜಿಕ, ಸಮಕಾಲೀನ ವಸ್ತು ನಿರೂಪಕಗಳು ನೃತ್ಯರೂಪಕವೆಂಬ ಆಕರ್ಷಕ ವಿಧಾನದ ಮೂಲಕ ಅಸ್ತಿತ್ವ ಪಡೆದುಕೊಂಡು ಶಾಸ್ತ್ರೀಯ ಶೈಲಿಯೆನಿಸಿದವು. ಹಾಗೆ ನೋಡಿದರೆ ಉತ್ತರ ಭಾರತಕ್ಕೆ ಪರರ ಆಕ್ರಮಣದ ಫಲವಾಗಿ ಅಲ್ಲಿನ ನೃತ್ಯಕಲೆಗಳು ಹೆಚ್ಚಾಗಿ ಪರಕೀಯರ ಪ್ರಭಾವ ಪಡೆದುಕೊಂಡಿವೆ. ದಕ್ಷಿಣ ಭಾರತದ ನೃತ್ಯಸಂಪ್ರದಾಯಗಳು ಸಾಕಷ್ಟು ಮೂಲ ಸಂಪ್ರದಾಯ ಪರಿಶುದ್ಧತೆಯನ್ನು ಉಳಿಸಿಕೊಂಡಿದೆ.ಮೋಕ್ಷಕ್ಕೆ ಸಾಧನ, ಪ್ರಾರ್ಥನಾ ಸ್ವರೂಪ ಎಂದೆನಿಸಿಕೊಂಡಿರುವ ಇಂತಹ ಶಾಸ್ತ್ರೀಯ, ಸಾಂಪ್ರದಾಯಿಕ ನೃತ್ಯಗಳು ಜೀವನ ಮೌಲ್ಯಗಳನ್ನು ಪುನರ್‌ವಿಮರ್ಶಿಸುವಂತವು. ಇಂದಿನ ಆಧುನಿಕ ಯುಗದಲ್ಲೂ ಎಲ್ಲಾ ದೃಷ್ಟಿಯಿಂದಲೂ ಜನಜೀವನಕ್ಕೆ ಅಗತ್ಯವೆನಿಸುವಂತವು, ಕೆಲವೊಂದು ನೃತ್ಯಗಳು ಆಯಾಕಾಲದ ಪ್ರಗತಿಗೆ ಸಾಕ್ಷಿಯಾಗಿ, ತನ್ನ ಬದುಕಿನ ಯುಗವನ್ನು ಬಿಂಬಿಸುತ್ತವೆ. ಉದಾ: ಏಕವ್ಯಕ್ತಿ ಯಕ್ಷಗಾನದ ಪ್ರಸ್ತುತತೆ. ಅಂತವು ಆಯಾಕಾಲದ ಅವಶ್ಯಕತೆ, ವೈವಿಧ್ಯತೆಗಳಿಗೆ ಅಗತ್ಯವೂ ಕೂಡಾ!..ಅಷ್ಟಕ್ಕೂ ಭಾರತೀಯ ಸಂಪ್ರದಾಯವೆಂಬುದು ಶಿಸ್ತಿನ ಕಟ್ಟುಪಾಡುಗಳಿಂದ ಕೂಡಿದ್ದಲ್ಲ ಸ್ವತಃ ಭರತಮುನಿಯೇ ತನ್ನ ಗ್ರಂಥದಲ್ಲಿ ಪಾಂಡಿತ್ಯ, ಅನುಭವ, ಲೋಕಜ್ಞಾನದಿಂದ ನೃತ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು ಎಂದಿದ್ದಾನೆ. ಹಾಗಾಗಿ ಸ್ವಾತಂತ್ರ್ಯದ ಅಭಿವ್ಯಕ್ತಿ ಭಾರತೀಯ ಕಲೆಗಳ ಮೂಲಸ್ರೋತವೂ ಹೌದು. ಜೊತೆಗೆ ಪರಂಪರೆಯ ರಕ್ಷಣೆ, ಪ್ರಗತಿಯ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕಾದ್ದು ನಮ್ಮ ಕರ್ತವ್ಯವೂ ಕೂಡಾ. ಅಷ್ಟಕ್ಕೂ ಸ್ವಾತಂತ್ರ್ಯವೆಂದರೆ ಸ್ವ‌ೇಚ್ಛೆಯಲ್ಲವಲ್ಲ!ಭಾರತೀಯ ನೃತ್ಯಗಳೂ ಹಲವು ಸ್ಥಿತ್ಯಂತರಕ್ಕೆ ಒಳಪಟ್ಟಿವೆ. ಸ್ವಾತಂತ್ರ್ಯಾ ನಂತರವಂತೂ ಅಂಟಿದ್ದ ಕಳಂಕಗಳ ಬೇಡಿಯನ್ನು ಸ್ವಲ್ಪ ಸ್ವಲ್ಪವಾಗಿಯೇ ಬಿಡಿಸಿಕೊಳ್ಳುತ್ತಾ ಜನಾದರಣೆ, ಪ್ರೆತ್ಸಾಹವನ್ನು ಪಡೆದುಕೊಂಡಿವೆ. ಆದರೆ ನಾಗರೀಕತೆಯ, ಪರಕೀಯತೆಯ ಗಾಳಿಗೆ ಕಲುಷಿತಗೊಳ್ಳದಂತೆ ಪರಿಶುದ್ಧವಾಗಿ ಉಳಿಸಿಕೊಳ್ಳುವುದೂ ಸಂಸ್ಕೃತಿಯ ಬಗೆಗೆ ನಾವು ನಿರ್ವಹಿಸಬೇಕಾದ ಕರ್ತವ್ಯ.ಪ್ರಸ್ತುತ ಕಾಲದಲ್ಲಿ ನೃತ್ಯಶೈಲಿಯನ್ನು ಕರಗತ ಮಾಡಿಕೊಳ್ಳಲು ಬೇಕಾದ ಸಂಯಮ, ಶ್ರದ್ಧೆ, ನಿಷ್ಟೆ, ಏಕಾಗ್ರತೆ, ಅರ್ಪಣಾಭಾವಗಳು ಮರೆಯಾಗಿ ಅವಕಾಶವಾದಿಗಳು, ಅಪ್ರಬುದ್ಧರು ಅಟ್ಟಣಿಗೆ ಏರುತ್ತಾ ನೃತ್ಯಸಂಪ್ರದಾಯಕ್ಕೆ ಹೊಸತೆನಿಸುವ ಕಳಂಕವನ್ನು ಅಂಟಿಸುತ್ತಿದ್ದಾರೆ. ಎಲ್ಲಾ ನೃತ್ಯಶೈಲಿಗಳಲ್ಲೂ ನಿಪುಣರೆಂದು ತೋರಿಸಿಕೊಳ್ಳುವ ಆಶೆಯಲ್ಲಿ ಪರಂಪರೆಯನ್ನು ಮರೆಯುತ್ತಿರುವುದಲ್ಲದೆ, ಪೌರಾತ್ಯದ ಬೆರಕೆ, ವ್ಯಾಪಾರೀಕರಣ ನೃತ್ಯಶೈಲಿಯ ಪ್ರಮುಖ ಸಮಸ್ಯೆ ಮತ್ತು ಸವಾಲು.ಆದರೆ ಇಂತಹ ತಾಳ್ಮೆ ಎಲ್ಲದರಂತೆ ನೃತ್ಯರಂಗದಲ್ಲೂ, ಮುಂದುವರಿದರೆ ಶಾಸ್ತ್ರೀಯ-ಸಂಪ್ರದಾಯ-ಜನಪದಗಳ ಅಸ್ತಿತ್ವವಷ್ಟೆ ಅಲ್ಲ. ನಮ್ಮ ಅಸ್ತಿತ್ವವನ್ನು ಅದರೊಂದಿಗೆ ಕಳೆದುಕೊಳ್ಳಬೇಕಾದೀತು. ಕಲೆಯ ಪ್ರಗತಿ ಪರಂಪರೆಯ ಸುಭದ್ರ ಬುನಾದಿಯ ಮೇಲೆ ಭಾರತೀಯವಾಗಿ ಮುಂದುವರಿದರಷ್ಟೆ ಅದು ಅರ್ಥಪೂರ್ಣ, ಪರಿಪೂರ್ಣ, ಅವಿನಾಶಿ… ಅಲ್ಲವೇ?
(ಚೈತ್ರರಶ್ಮಿ ಪತ್ರಿಕೆಯ ೫೦ ನೆ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )

Leave a Reply

*

code