ಸಮಕಾಲೀನ ಕಾಗುಣಿತ ನರ್ತನದಲ್ಲಿ…. ಅಭಿಜಾತ ನೃತ್ಯಗಳು

Posted On: Monday, November 26th, 2018
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ ಎನ್

25 ನವೆಂಬರ್ 2018- #ಹೊಸದಿಗಂತ #ಸಾಪ್ತಾಹಿಕ #ಪುರವಣಿ #ಆದ್ಯಂತದಲ್ಲಿ ಭಾರತದ #ಅಭಿಜಾತನೃತ್ಯಗಳ #ಸಮಕಾಲೀನ ದಶಕಗಳ ಬೆಳವಣಿಗೆ-ಪಲ್ಲಟಗಳನ್ನು #ಇತಿಹಾಸದ ಬೆಳಕಿಂಡಿಯಲ್ಲಿ ವಿವೇಚಿಸುವ ಲೇಖನ.

ಬರೆಯಲು ಪ್ರೇರೇಪಿಸಿ ಪ್ರಕಟಿಸಿದ ಹೊಸದಿಗಂತದ ಸಾಪ್ತಾಹಿಕ ಮುಖ್ಯಸ್ಥೆ ನಯನಾ ಅವರಿಗೆ ಮತ್ತು ಸಂಪಾದಕಬಳಗಕ್ಕೆ, ವಿಷಯ ಚಿಂತನದಲ್ಲಿ ಜೊತೆಯಾಗಿ ಸೂಚನೆಗಳನ್ನು ಕೊಟ್ಟ ವಿದ್ವತ್ ಸಹೋದರರಾದ ಶತಾವಧಾನಿ ಡಾ ಆರ್ ಗಣೇಶ್, ಕೊರ್ಗಿ  ಶಂಕರನಾರಾಯಣ ಉಪಾಧ್ಯಾಯರಿಗೆ ಮತ್ತು ಗುರು ಡಾ. ಶೋಭಾ ಶಶಿಕುಮಾರ್, ಅನಿಸಿಕೆಗಳನ್ನು ನೀಡಿದ ಗುರು ಲಲಿತಾ ಶ್ರೀನಿವಾಸನ್ ಅವರಿಗೆ ಆಭಾರಿಯಾಗಿದ್ದೇನೆ.

—————

ಕಲಾವಿದರ ಅಸ್ಮಿತೆ, ಕಲಾವಂತಿಕೆಗೆ ರಾಜಕೀಯದ ಸೋಂಕು ಮುಟ್ಟಿದೆ. ಶಾಸ್ತ್ರೀಯವೆನಿಸಿದ ಸಂಗೀತ ಮತ್ತು ನೃತ್ಯಗಳನ್ನು ಜಾತ್ಯಾತೀತವಾಗಿಸುವ ನೆಪವನ್ನೊಡ್ಡಿ ಅನ್ಯಮತಗಳಕೆಳೆಸುವಲ್ಲಿ ಕಲೆಯ ಸಂವಿಧಾನವು ಸಡಿಲಗೊಳ್ಳುತ್ತಿದೆ. ವಿಕ್ರಯ-ವ್ಯವಹಾರ ಕಲೆಗೆ ಹೊಸತಲ್ಲ, ನಿಜ. ಆದರೆ ಈವರೆಗೆ ಆರ್ಜಿಸಿದ ಪುಣ್ಯವು ಪಣ್ಯದ ಮಾರುಕಟ್ಟೆಯಲ್ಲಿದೆಯೇ? ಎತ್ತಲಿಂದ ನೋಡಿದರೂ ಕಲೆಗಿದು ಕ್ರಾಂತಿಯ ಕಾಲ. ಪುನಶ್ಚೇತನಾನಂತರದಲ್ಲಿನ ಪ್ರವರ್ಧಮಾನ ಯುಗ. ಈ ಹೊತ್ತಿನ ಕಲೆಗೆ ಅತಿವ್ಯಾಪ್ತಿ ದೋಷಗಳಿವೆಯೇ? ಸಂಘರ್ಷ-ಸಂಧಾನಗಳೆಷ್ಟು? ಶಾಸ್ತ್ರೀಯವೆನಿಸಿಕೊಂಡ ನೃತ್ಯಗಳ ದಶಕಪರ್ಯಂತದ ನೆಲೆ-ಬೆಲೆ-ಪಲ್ಲಟ-ಪರಿಣಾಮ-ಸಂಕ್ರಮಣಗಳನ್ನು ವಿವೇಚಿಸುವ ಲೇಖನವಿದು.

ಕಾಲದ ವೇಗ ಎಷ್ಟು ಮಾಯಕದ್ದೆಂದರೆ ಓಡುವ ಕ್ಷಣಗಳು ವರ್ತಮಾನದ ಪ್ರಜ್ಞೆಯನ್ನು ಮತ್ತೆ ಭೂತಕಾಲಕ್ಕೆ ನಂಟು ಹಾಕಿಸಿ ಭವಿಷ್ಯವನ್ನೂ ತನ್ನ ತೆಕ್ಕೆಗೆಳೆದು ಪರಿಭ್ರಮಿಸುವಾಗ ಕಾಯವೂ ಚಕ್ರವಾಗಿ ತನ್ನನ್ನೊಡ್ಡಿಕೊಳ್ಳಲೇಬೇಕು. ಈ ಪರಿಭ್ರಮಣದಲ್ಲಿ ಅಪರೂಪಕ್ಕೊಮ್ಮೆ ನೆನಪುಗಳ ಜಾತ್ರೆಯಾಗಿ ತಪ್ಪು‌ಒಪ್ಪುಗಳು ಲೆಕ್ಕದ ತಕ್ಕಡಿಯಲ್ಲಿ ತೂಗುತ್ತವೆ. ಒಮ್ಮೊಮ್ಮೆ ‘ಇಂದಿಗಿಂತ ಹಿಂದೇ ವಾಸಿ’ ಎಂಬ ಕೃತಕೃತ್ಯತೆಯನ್ನು ಕಾಲಕ್ಕೀಯುತ್ತದೆ. ಹಾಗೆ ನೋಡಿದರೆ ಯಾವುದೇ ಉಚ್ಛ್ರಾಯಸ್ಥಿತಿಯಲ್ಲಿಯೂ ಸಮಸ್ಯೆಗಳು ಇರಲಿಲ್ಲವೆಂದೇನೂ ಇಲ್ಲ. ಕಾಲಾನಂತರದ ಒಂದು ನಿಶ್ಚಿತ ಘಟ್ಟಕ್ಕೆ ನಡೆಯುವ ಪ್ರಮಾಣಗಳ ವಿಮರ್ಶೆಗಳಲ್ಲಿ ಉತ್ತಮ-ನೀಚವೆಂಬ ಎಂಬ ಶ್ರೇಣಿ, ಸುವರ್ಣಯುಗ, ಕತ್ತಲದೆಶೆಯೆಂಬ ಮುದ್ರೆಯೊತ್ತಿಸಿಕೊಳ್ಳುತ್ತವೆಯಷ್ಟೇ. ಇರಲಿ., ಭವಿತವ್ಯದ ಪಂಚಾಂಗ ನಿಂತಿರುವುದು -ನಿನ್ನೆಯ ಕಲಿಕೆಯನ್ನು ಎಷ್ಟರಮಟ್ಟಿಗೆ ಇಂದಿಗೆ ಅರಿತುಕೊಂಡು ವಾಸ್ತವಪರಿಜ್ಞಾನದಲ್ಲೆಷ್ಟು ಪ್ರಯೋಗನಿಷ್ಟರಾಗುತ್ತೇವೆ ಎಂಬ ವಿವೇಕದಲ್ಲ್ಲಿ. ಇವೆರಡರ ಸಮನ್ವಯದಲ್ಲಿ ನಾಡಿನ ಅಭಿಜಾತ ನೃತ್ಯಕಲೆಗಳನ್ನು ಗಮನಿಸಿಕೊಳ್ಳುವುದು ಈ ಲೇಖನೋದ್ಯೋಗ.

ಭರತನಾಟ್ಯಾದಿ ಅಭಿಜಾತನೃತ್ಯಗಳು ಶ್ರೀಮಂತಕಲೆ. – ಈ ಮಾತು ಜ್ಞಾನ-ತತ್ತ್ವ-‘ಅರ್ಥ’ಕ್ಕೂ ಬಹ್ವಾನ್ವಯ. ಅನಾದಿಕಾಲದಿಂದಲೂ ನೃತ್ಯವು ತನ್ನ ಪಾಲನೆ-ಪೋಷಣೆಗಾಗಿ ಹಲವು ಮಂದಿಯ ಸಹಭಾಗಿತ್ವ, ನೆರವು, ಸಮಯವನ್ನಾಶ್ರಯಿಸಿಯೇ ಬಾಳಿದೆ. ಅದಕ್ಕಾಗಿ ಕಾಂಚನಾಶ್ರಿತವಾಗಬೇಕಾದ ವಾಸ್ತವವನ್ನೂ ಗಣಿಸಿದೆ! ಈ ಕಾಲಕ್ಕೂ ನೃತ್ಯಕಲಿಕೆ-ಸಂವರ್ಧನೆಯು ದುಬಾರಿಯ ವ್ಯವಸಾಯ, ಅವಲಂಬನೆಯ ಆಳ್ತನದ್ದು ಎಂಬುದು ಎಲ್ಲರಿಗೂ ತಿಳಿದಿರುವುದೇ. ಹಾಗೆಂದೇ ಕುಲವೃತ್ತಿಯ ಮಿತಿಯಿಂದ ಹೊರಜಿಗಿದು ಲಿಂಗಭೇದಗಳ ಪರದೆ ಸರಿಸಿ ಪುನರುಜ್ಜೀವನದ ಶಕೆಯಲ್ಲಿ ಕಲಾಸ್ವಾತಂತ್ರ್ಯವು ಕಳೆದ ಶತಮಾನದಲ್ಲೇ ಮಹತ್ತರವಾಗಿ ಚಿಮ್ಮಿದರೂ, ನೃತ್ಯವನ್ನು ಜೀವನದ ಪ್ರಥಮ ಆದ್ಯತೆಯಾಗಿ ಆಯ್ದುಕೊಳ್ಳುವ ಸಂದರ್ಭದಲ್ಲಿ ಕಲಾಜೀವಿಗಳು ಇಂದಿಗೂ ಚಿಂತನಶೀಲರಾಗುತ್ತಾರೆ.

ಶಾಸ್ತ್ರೀಯ ನೃತ್ಯ-ದುಬಾರಿ ಕಲೆಯೇ?

ಪ್ರವೃತ್ತಿಯಾಗಿ ಆರಿಸಿಕೊಂಡಾಗ ಕಲೆಯಿಂದ ಸಿಗಬಹುದಾದ ಫಲಾಫಲಗಳ ನಿರೀಕ್ಷೆ ಸಹಜವಾಗಿ ಕಡಿಮೆ. ಅದೇ ಜೀವನದ ಪ್ರಧಾನೋದ್ಯೋಗವಾದಾಗ ಕಲಾವಿದರೂ ತಕ್ಕಮಟ್ಟಿಗೆ ಲಾಭಚಿಂತಕರಾಗುವುದು ಅಪರಿಹಾರ್ಯ. ಆಗ ಶಿಕ್ಷಕತ್ವದ ಸಾನಿಧ್ಯ, ಔದಾರ್ಯ, ಆತ್ಮಾಯತನವಿಶ್ರಾಂತಿ ಮತ್ತು ವಿದ್ಯಾದಾನದಿಂದ ದೊರಕುವ ಪುಣ್ಯಸಂಚಯನವಷ್ಟೇ ಕಲಾವಿದನ ಕಾಂಕ್ಷೆಗಳಾಗಲಾರವು. ಅದರಲ್ಲೂ ಆಧುನಿಕ ಕಾಲದ ನವನವೀನ ಪ್ರಲೋಭನೆಗಳು ಜಗತ್ತನ್ನೇ ಆಳುವಾಗ ಕಲಾವಿದನ ಬದುಕೂ ಅನುವರ್ತಿಯಾಗಿ ಕುಣಿಯಲೇಬೇಕಲ್ಲ! ಈ ಕಾರಣಕ್ಕೇ ‘ನೃತ್ಯಾಭ್ಯಾಸ/ಪ್ರದರ್ಶನದಲ್ಲಿ ವ್ಯಾಪಾರೀಕರಣ ಹೇರಳವಾಗಿದೆ ’ ಎಂಬ ಹಳಹಳಿಕೆಯನ್ನು ಭಂಗಿಸುವಂತೆ ಅತಂತ್ರ ಬದುಕನ್ನು ಮುಂದಿಟ್ಟ ಸಮರ್ಥನೆಗಳು ಕೇಳಿಬಂದಿವೆ.

ಅಪಚಾರ, ಮೈಲಿಗೆ, ಕೀಳು ಎಂಬ ಭಾವನೆಯಿದ್ದ ಕಾಲದಲ್ಲಿ ಗೆಜ್ಜೆ ಕಟ್ಟುವವರೇ ಕಡಿಮೆ. ಆ ಶಕೆಗೆ ಪ್ರತಿಸ್ಪರ್ಧಿಯೋ ಎಂಬಂತೆ ಈಗ ಪ್ರತಿಯೊಂದು ಮನೆಯೂ ಗೆಜ್ಜೆಯ ನಾದವನ್ನು ಹಂಗು-ಭೀತಿಗಳಿಲ್ಲದೆ ಮುಕ್ತವಾಗಿ ಸ್ವೀಕರಿಸುತ್ತಿವೆ. ಸಂಗೀತ-ನೃತ್ಯಾಸಕ್ತಿಯೇ ಇಂದಿನ ಸಂಸ್ಕಾರಸೋಪಾನಕ್ರಮ. ಬಡ-ಸಾಮಾನ್ಯವರ್ಗಕ್ಕೆ ಶಾಸ್ತ್ರೀಯನೃತ್ಯ ದುಬಾರಿಕಲೆಯೇ ಆಗಿದ್ದರೂ ಮಧ್ಯಮವರ್ಗಕ್ಕೆ ಈ ವಾಸ್ತವವೂ ಆಕರ್ಷಕ. ಕಾರಣ ಹಣದ ಲಗಾವಿಗಿಂತಲೂ ಕೀರ್ತಿ, ಪ್ರತಿಷ್ಠೆ, ಪ್ರಚಾರದ ನಿರೀಕ್ಷೆಯ ಹಂಬಲ. ಹಾಗೆಂದೇ ಶಾಲೆಗಳ ಪಾಠ್ಯೇತರ ಚಟುವಟಿಕೆಗಳಲ್ಲಿ ನೃತ್ಯಕಲಿಕೆಯು ಅಂಗಭಾಗವಾಗಿದ್ದು, ಅದಕ್ಕೊಪ್ಪಿದ ಎಲ್ಲಾ ಬದಲಾವಣೆಯೂ ಸಾಧುವೆನಿಸಿದೆ.

ಕಲಿಯುವುದೇ ಕಲಾವಿದರಾಗುವುದಕ್ಕೆಂಬ ಬಯಕೆಯೂ ವ್ಯಾಪಕವಾಗುತ್ತಿರುವುದೂ ಕಾಲಮಹಿಮೆ. ಹಾಗೆನೋಡಿದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ನೃತ್ಯಗಾರರ ಸಂಖ್ಯಾತ್ಮಕ ವೃದ್ಧಿ ಬಹುಶಃ ಹಿಂದಿನ ಇನ್ನಾವುದೇ ಕಾಲದಲ್ಲೂ ಇದ್ದಿರಲಾರದು. ಒಂದಾನೊಂದು ಕಾಲಕ್ಕೆ ‘ಬೀದಿಗೆ ಬಿತ್ತು’ ಎಂಬ ಹೀನಾಯಸ್ಥಿತಿಯನ್ನು ನೋಡಿದ ಕಲೆಯೇ ಮತ್ತೊಂದು ಮಗ್ಗುಲಿನಲ್ಲಿ ‘ಬೀದಿಗೊಂದರಂತೆ ಡ್ಯಾನ್ಸ್ ಕಲಿಸುವವರು ಹುಟ್ಟಿಕೊಂಡಿದ್ದಾರೆ ’ ಎಂಬ ಮಾತನ್ನೂ ಕೇಳಿಕೊಳ್ಳುತ್ತಲಿದೆ. ಎಲ್ಲರೂ ನೃತ್ಯಾರಾಧಕರೇ. ಆದರೆ ಆರಾಧನೆಯ ನೆಲೆಬೆಲೆಗಳು ಹೇಗಿವೆಯೆನ್ನುವುದು ಪರಿಶೀಲನಾರ್ಹ.

ರಂಗವಾಯ್ತು ಪ್ಲಾಟ್ಫಾರ್ಮ್ !

ನೃತ್ಯ ಜನ್ಮತಃ ಪ್ರದರ್ಶನಕಲೆಯೆಂಬುದು ಎಷ್ಟು ಸತ್ಯವೋ ಅದೊಂದು ಅಂತರಂಗ ‘ದರ್ಶನ’ದ ದಾರಿಯೆಂಬುದೂ ಋಷಿವಾಕ್ಯ. ಯಜ್ಞಭಾವಯಜಮಾನ್ಯದಲ್ಲಿ ಅದೊಂದು ಆರಾಧನಾಸಾಧ್ಯತೆ. ಸ್ವೋಪಜ್ಞಶೀಲ ಪ್ರತಿಭಾವರೇಣ್ಯರಿಗೆ ಅದುವೇ ತಪಸ್ಸು. ಅದೇ ಕಲೋದ್ಯೋಗವಾಗುವಲ್ಲಿ ಆದ್ಯತೆಗಳೇ ಬದಲಾಗಬೇಕಲ್ಲ! ಅದರಲ್ಲೂ ರಿಯಾಲಿಟಿ ಶೋಗಳಿಂದ ಮೊದಲಾದ ವೇದಿಕೆಗಳೆಲ್ಲ ಬಹುಮುಖ ಪ್ರತಿಭೆಯ ‘ಪ್ಲಾಟ್ಫಾರ್ಮ್’ಗಳೇ ಆಗುವಲ್ಲಿಗೆ ರಂಗಸಂಸ್ಕೃತಿ ಮಾಯವಾಗುವುದಕ್ಕೆ ಅದೆಷ್ಟು ಹೊತ್ತು ಬೇಕು? – ಪ್ರಶ್ನಾರ್ಹ.

ರಾಜಾಶ್ರಯದಲ್ಲಿ ನರ್ತಕರಿಗೆ ಪೋಷಣೆ- ಪ್ರದರ್ಶನದ ಕ್ರಮಕ್ಕೆ ವಿಧಿನಿಯಮಗಳಿದ್ದವು. ಋತುಮಾನ-ಪರ್ವದಿನಾಧರಿತವಾಗಿಯೇ ಸಂಗೀತ-ನೃತ್ಯ ಕಾರ್ಯಕ್ರಮಗಳು ಆಯೋಜನೆಯಾಗುತ್ತಿದ್ದ ಕಾಲಕ್ಕೆ ನೃತ್ಯಪ್ರದರ್ಶನ ನೀಡುವುದೆಂದರೆ ಜೀವಮಾನಸಾಧನೆ. ಸಾಂಸ್ಕೃತಿಕಪ್ರಕಲ್ಪಗಳ ಸಂಘಟನೆಯೋ ಬಡಪೆಟ್ಟಿಗೆ ಒಗ್ಗುವ ವಿಷಯವಾಗಿರಲಿಲ್ಲ. ಚಿಕ್ಕದಿರಲಿ, ದೊಡ್ಡದಿರಲಿ-ರಂಗತಲ್ಪಾರೋಹಣವೆಂಬುದೇ ದಿವ್ಯಸಾನಿಧ್ಯ. ಕಾತರದಿಂದ ಕಣ್ತುಂಬಿಕೊಳ್ಳಬೇಕಾದ ಕುತೂಹಲಿಗಳಿಗೂ ಅದೊಂದು ಅವತರಣ. ಆದರೆ ಕಾಲಪ್ರಭಾವದ ಮುಂದೆ ಕಲಾವಿದ ಹೊರತಾದಾನೇ? – ಕಲಾವಿದರ ಬದುಕೇನೂ, ಅನುಪಾತವಾಗಿ ಪ್ರೇಕ್ಷಕನೂ ಬದಲಾಗಲೇಬೇಕು!

ರಾಷ್ಟ್ರೀಯ, ಅಂತಾರಾಷ್ಟ್ರೀಯ ನೃತ್ಯೋತ್ಸವಗಳ ಸಂಖ್ಯೆ ಗಣನೀಯವಾಗಿ ವೃದ್ಧಿಸಿದೆ. ಮಿನಿಟ್ ಟು ಮಿನಿಟ್ ಲೆಕ್ಕಾಚಾರಗಳಲ್ಲಿ ಪ್ರದರ್ಶನಗಳೇರ್ಪಡುತ್ತವೆ. ನೃತ್ಯಾಭ್ಯಾಸಿಗಳೆಲ್ಲರೂ ಪ್ರದರ್ಶನಾಸಕ್ತರೂ ಆದ ಕಾಲಕ್ಕೆ ಬೇಡಿಕೆಗೆ ತಕ್ಕ ಪೂರೈಕೆಯೂ ಆಗಲೇಬೇಕಾದ ಅನಿವಾರ್ಯತೆಯಲ್ಲಿ ಆಯೋಜಕರನೇಕರು ಜನ್ಮಿಸಿದ್ದಾರೆ. ಪ್ರಾಯೋಜಕತ್ವ-ಅನುದಾನಗಳ ಸಂಖ್ಯೆ ಹೆಚ್ಚಿದೆ. ನೃತ್ಯಶಿಕ್ಷಕ/ಕಲಾವಿದರೂ ಸಂಘಟಕರಾಗುವಲ್ಲಿ ಹಿಂದೆ ಬಿದ್ದಿಲ್ಲ. ಕಾರ್ಪೋರೇಟ್-ರೆಸಾರ್ಟ್ ಕೂಟಗಳಲ್ಲೂ ಅಭಿಜಾತನೃತ್ಯಗಳ ಆಸ್ವಾದನೆಯಾಗುತ್ತದೆ. ಋತುಧರ್ಮಸೀಮೋಲ್ಲಂಘನಗೈದು ವರುಷವಿಡೀ ಹಗಲಿರುಳೆನ್ನದೆ ಅಭಿನಯಿಸುತ್ತದೆ ನೃತ್ಯಜಾತ್ರೆ. ಕಛೇರಿಯ ಸವಾಲಿನ ಮೂರು ತಾಸಿನ ಅಭಿವ್ಯಕ್ತಿಯು ‘ನೃತ್ಯಪ್ರದರ್ಶನ’ಕ್ಕಾಗಿ ಕತ್ತರಿಗೊಡ್ಡಿಕೊಳ್ಳಬೇಕು. ಕಾಲದ ಕದನಕ್ಕೊಡ್ಡಿಕೊಂಡು ಪ್ರೇಕ್ಷಕನೂ ಪಾಲ್ಗೊಳ್ಳಬೇಕು. ಜಗತ್ತು ಕಿರಿದಾದಂತೆ ಅಂದೊಮ್ಮೆ ಅಪರೂಪವಾಗಿದ್ದ ಕಲಾವಿದರ ವಿದೇಶಭೇಟಿ–ಕಾರ್ಯಕ್ರಮ-ಉಪನ್ಯಾಸ-ಕಾರ್ಯಾಗಾರ-ವಿಚಾರಸಂಕಿರಣಗಳೆಲ್ಲಾ ಇಂದಿಗೆ ಸರ್ವೇಸಾಮಾನ್ಯ. ಫಲವಾಗಿ ಉತ್ಸವ-ಪ್ರಶಸ್ತಿ-ಸನ್ಮಾನ-ಬಿರುದು-ಪುರಸ್ಕಾರಗಳಲ್ಲಿದ್ದ ಸ್ವಾರಸ್ಯ ಮರೆಯಾಗಿ ದಶಕವೆರಡು ಸಂದಿತು. ಟಿಕೇಟ್ ಶೋಗಳಿಗೆ ಜನಪ್ರೀತಿ ಕಡಿಮೆಯಾಗುತ್ತ ಬಂದಿತು. ಪರಸ್ಪರ ಒಬ್ಬರಿಗೊಬ್ಬರು ಪ್ರೇಕ್ಷಕರಾಗಿ ಹೋಗದಿದ್ದರೆ ತಮ್ಮ ಕಾರ್ಯಕ್ರಮಕ್ಕೆ ಖಾಲಿ ಆಸನಗಳೇ ಸ್ವಾಗತಿಸಿಯಾವೆಂಬ ಎಚ್ಚರ ಅನೇಕ ಕಲಾವಿದರಲ್ಲಿದೆ.

‘ಸಿಡಿ ಸಂಸ್ಕೃತಿ’ ವ್ಯಾಪಕವಾಗಿರುವುದರಿಂದ ಆಯೋಜನೆಯಲ್ಲಾಗಲೀ, ಅವಲಂಬನದಲ್ಲಾಗಲೀ ಕಛೇರಿಸಂಸ್ಕೃತಿಯಲ್ಲಿರುವ ತ್ರಾಸ-ಹ್ರಾಸಗಳಿಲ್ಲ. ಪೂರಕವಾಗಿ ನೃತ್ಯಶಿಕ್ಷಕ/ಗುರುಗಳ ಕಣ್ಣಳತೆಯಲ್ಲೇ ಶಿಷ್ಯರು ಇರಬೇಕೆಂಬ ಒತ್ತಡವನ್ನು ಕಡಿಮೆ ಮಾಡಿಸಿದೆ ಧ್ವನಿಮುದ್ರಿತ ಹಿಮ್ಮೇಳಗಳ ಕಾರ್ಬಾರು. ಸ್ಟುಡಿಯೋ ಮತ್ತು ಮಾರ್ದಂಗಿಕ/ತಾಳಪರಿಣತರೆಡೆಗೇ ಅವಲಂಬನ ಹೆಚ್ಚು. ಕಲಾಪ್ರದರ್ಶನದಲ್ಲಿ ಆಶುತ್ವ, ಸತ್ತ್ವಸಂಸ್ಫೂರ್ತಿಯಾದರೆ ಸವಾಲಿನ ಕೆಲಸ. ಅದೇ ಪುನರಾವರ್ತನೆಗೆ ಪರಿಶ್ರಮ ಹೆಚ್ಚು ಬೇಕಿಲ್ಲವಲ್ಲ್ಲ !

ಇಷ್ಟೆಲ್ಲಾ ಕಾರ್ಯಕ್ರಮಗಳಿಗೆ ವಿಮರ್ಶೆಯ ಭಾಗ್ಯ ಸಿಕ್ಕೀತೇ? ಅವಲೋಕನವೇ ಪ್ರಚಲಿತವಾಗಿರುವ ಕಾಲಕ್ಕೆ ವಿಮರ್ಶೆಗಳ ಪಂಚಾಂಗ ಕುಸಿಯಲೇಬೇಕಲ್ಲ ! ಬಾಯ್ಮಾತಿನ ಮೆಚ್ಚುಗೆಯೇ ಭಾಷ್ಯವಾಗುವಾಗ ‘ವಿಮರ್ಶಕ-ವಿದ್ವಾಂಸರೂ ನರ್ತಕರೇ, ನೃತ್ಯ ಮಾಡಲು ಅವರಿಗೆಲ್ಲಿಂದ ಬರಬೇಕು?’ ಎಂಬ ತಾತ್ಸಾರವೂ ಸಹಜ. ಇದಕ್ಕೊಪ್ಪುವಂತೆ ಪ್ರದರ್ಶನಗಳ ಪರಿಮಾಣ, ಉಪನ್ಯಾಸ-ಕಾರ್ಯಾಗಾರ-ಪ್ರಶಸ್ತಿ-ಪ್ರವಾಸಪಟ್ಟಿ ಬೆಳೆದಷ್ಟೂ ಮಟ್ಟವೂ ಹೆಚ್ಚು ಎನ್ನುವುದೂ ಅನೇಕರ ಖಚಿತ ಗ್ರಹಿಕೆ.

ಪಾರಂಪರಿಕ ಆಮಂತ್ರಣ ಮತ್ತು ಪ್ರಸಾರದ ಆಲಂಬನವನ್ನು ದೂರ ಮಾಡಿದ ಆನ್‌ಲೈನ್ -ಕಲಾವಿದರ ಬದುಕಿನ ಕ್ರಾಂತಿಗಳಲ್ಲೊಂದು. ಸಾಂಪ್ರದಾಯಿಕ ಸಮೂಹಮಾಧ್ಯಮಗಳಲ್ಲಿ ತಗ್ಗಿದ ಸಾಂಸ್ಕೃತಿಕ ಕಾಳಜಿ, ಪರ್ಯಾಯವಾಗಿ ಹೆಚ್ಚಿದ ತಂತ್ರಜ್ಞಾನವು ಕಲೆಯನ್ನು ಆಳವಾಗಿ ಪ್ರಭಾವಿಸಿದೆ. ಫಲವಾಗಿ ಪ್ರಚಾರದ ಆಯ್ಕೆ, ಜಾಹೀರಾತು ವೈಖರಿ ಪ್ರಭಾವಶಾಲಿಯಾಗಿದೆ. ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಯೂಟ್ಯೂಬ್, ಲೈವ್‌ವಿಡಿಯೋಗಳ ಆಕರ್ಷಣೆಯಿಂದ ಗುರುತಿಸಿಕೊಳ್ಳುವ ಅಪೇಕ್ಷೆಯು ಹಿರಿದಾಗಿದೆ.

ನೃತ್ಯಮಾರ್ಗದಲ್ಲಿ ಕವಲು

ಏಕತಾನತೆಯಲ್ಲಿ ಅದಾವ ಸ್ವಾರಸ್ಯವಿದೆ? ಬದಲಾವಣೆಯೇ ಪ್ರಕೃತಿನಿಯಮ. ಕಲೆಯೂ ಹೊರತಲ್ಲ. ಹಾಗೆಂದೇ ಕಾಲವೇ ಕೊಟ್ಟ ಉಡುಗೊರೆ -ಅಭಿಜಾತೀಯವಾದ ‘ಮಾರ್ಗ’ದೊಂದಿಗೆ ಸಮಾನಾಂತರದಲ್ಲಿ ಚಲಿಸುವ ‘ದೇಶೀಯ’ ಆಯ್ಕೆಗಳು. ಸನಾತನ ಮತ್ತು ಸಮಕಾಲೀನತೆಯ ಸಾಮರಸ್ಯಬಾಂಧವ್ಯಕ್ಕೆ ಭಾರತವು ವಿಶ್ವಕ್ಕಿತ್ತ ಪರಿಭಾಷೆ. ನೃತ್ತ, ನೃತ್ಯ, ನಾಟ್ಯವೆಂಬ ತ್ರಿವರ್ಗವೂ, ಲೋಕಧರ್ಮೀ ನಾಟ್ಯಧರ್ಮೀಯ ನೆಲೆಗಳು ತಮ್ಮ ತಮ್ಮಲ್ಲೇ ಪಾರಮ್ಯವನ್ನು ಸ್ಥಾಪಿಸಿಕೊಳ್ಳುವುದು ಈ ಔದಾರ್ಯದಲ್ಲೇ.

ಹಾಗೆ ನೋಡುವುದಿದ್ದರೆ ದೇಶೀಯವಾಗಿಯೇ ಚೌಕಟ್ಟು ಪಡೆದ ಇಂದಿನ ಅಭಿಜಾತ ನೃತ್ಯಗಳ ಕಛೇರಿಪದ್ಧತಿ ‘ಮಾರ್ಗಂ’ – ಕೂಡಾ ಇಂದಿಗೆ ಅಪರೂಪಕ್ಕೊಮ್ಮೆ ಸಂಧಿಸುವ ಹಳೆಯ ಜಾಹೀರಾತಿನಂತೆ. ಒಂದೂವರೆ ಗಂಟೆಗಳ ವಿಸ್ತಾರವಾದ ವರ್ಣಾಭಿನಯಗಳೇ ಹೆಚ್ಚೆಂದರೆ ಅರ್ಧಗಂಟೆಗೆ ಇಳಿಯುವಾಗ ಸದ್ಯಃಸ್ಫೂರ್ತಿಯ ಅಭಿನಯದ ಕೊಂಡಿಗಳೂ ಸವೆಯಲೇಬೇಕು. ಕಲಾಭ್ಯಾಸವೂ ನವೆಯಲೇಬೇಕು. ಬದಲಾಗಿ ಸಮೂಹಾಭಿವ್ಯಕ್ತಿ, ಕೊರಿಯೋಗ್ರಫಿ, ಅದಕ್ಕನುಗುಣವಾದ ರೇಖೆ-ಭಂಗಿಭಣಿತಿ, ವಸ್ತ್ರವಿನ್ಯಾಸ, ಬೆಳಕು-ರಂಗಸಜ್ಜಿಕೆಗಳೆಡೆಗೆ ಹೆಚ್ಚಿದ ಸೆಳೆತ ರಿಹರ್ಸಲ್‌ನ ನೆಲೆಗಳನ್ನು ಬದಲಾಯಿಸಿದೆ. ತಮಿಳು-ತೆಲುಗು ಸಾಹಿತ್ಯಗಳಿಗೆ ಇದ್ದ ಪ್ರಾತಿನಿಧ್ಯ ಕ್ರಮೇಣ ಹಿಂದೆ ಸರಿಯುತ್ತಾ ಕನ್ನಡ ಸಾಹಿತ್ಯವನ್ನು ಬಳಸಿಕೊಳ್ಳುವಲ್ಲಿ ಅನುಕೂಲಿಸುವಂತೆ ಸಾಹಿತ್ಯಸೃಷ್ಟಿಸುವ ಆದ್ಯತೆ ಹೆಚ್ಚಿದೆ. ಏಕಾಹಾರ್ಯರೂಪಕಗಳ ಅಭಿನಯಾಸಕ್ತಿಯು ಪ್ರಪ್ರತ್ಯೇಕವಾಗಿ ನೃತ್ಯಮಾರ್ಗಗಳನ್ನು ಸೃಷ್ಟಿಸದೆ ಸತ್ತ್ವಾಶ್ರಿತವಾಗಿ ಮುನ್ನಡೆದರೆ ಆಯುಷ್ಯ-ಆನಂದ ಹೆಚ್ಚು.

ಭರತನಾಟ್ಯ ಕ್ಷೇತ್ರದಲ್ಲಿ ಲುಪ್ತವಾಗಿ, ನಿರ್ಲಕ್ಷಿತವಾಗಿ ಹೋಗುತ್ತಿದ್ದ ಭರತಮುನಿಯ ನಾಟ್ಯಶಾಸ್ತ್ರಾನ್ವಿತವಾದ ಮಾರ್ಗೀಯ ಚಲನವಲನಗಳಿಗೆ ಪ್ರಾತಿನಿಧ್ಯ ಒದಗಿರುವುದು ಸ್ವಾಗತಾರ್ಹ ಬೆಳವಳಿಗೆ. ಆದರೆ ಭಾವಾಧಿಪತ್ಯಕ್ಕಿಂತ ನೃತ್ತಾಭಿನಯದಲ್ಲಿಯೇ ರಸವನ್ನರಸುವ ಯತ್ನಕ್ಕೆ ಅದೂ ಹೊರತಾಗಿಲ್ಲ. ಕೂಚಿಪೂಡಿ, ಓಡಿಸ್ಸಿ, ಯಕ್ಷಗಾನ ಮುಂತಾಗಿ ವಿವಿಧ ನೃತ್ಯ-ನಾಟ್ಯಸಂಪ್ರದಾಯಗಳಲ್ಲಿ, ಅಷ್ಟೇಕೆ ಸಿನೆಮಾ, ಜಾನಪದಗಳಲ್ಲೂ ಭಾವಸ್ಪಂದಕ್ಕಿಂತಲೂ ನೃತ್ತಪ್ರಪಂಚವೇ ಆಕರ್ಷಣೆಯೆನಿಸಿದೆ. ಲೆಕ್ಕಾಚಾರಗಳ ಪಾಶ ಇದ್ದವರಿಗೆ, ಶರೀರ ಕಸುವು ಹೆಚ್ಚಿರುವ ಉತ್ಸಾಹಿಗರಿಗೆ ಸಾಹಿತ್ಯಾಭಿನಯಕ್ಕಿಂತ ನೃತ್ತನೈಪುಣ್ಯವೇ ಪ್ರಧಾನ ಆಯ್ಕೆ. ಹೆಚ್ಚುತ್ತಿರುವ ನೃತ್ಯಾಭ್ಯಾಸಿಗಳಿಗೆ ಅಯಾಚಿತವಾಗಿ ಸಿಗುವ ಮೊದಲ ಆಯ್ಕೆಯೂ ಆಂಗಿಕಾಭಿನಯವಷ್ಟೇ! ಮೇಲಾಗಿ ಅಭಿಜಾತ ಕಲಾವಿನ್ಯಾಸಕ್ಕೆ ಅವಶ್ಯಕವಿರುವ ಸಾಂಪ್ರದಾಯಿಕ ಪರಿಸರ, ಆಚರಣೆ, ದೈನಂದಿನ ರೂಢಿಗಿಂತ ಭಿನ್ನವಾದ ಬದುಕೇ ಎದುರಿಗಿರುವಾಗ ಅಭಿನಯದ ಪಾಠವೆಂಬುದು ಕಲಾಭ್ಯಾಸಿಗಳಿಗೆ ಎಟುಕದ ದ್ರಾಕ್ಷಿ, ಶಿಕ್ಷಕರಿಗೆ ಬಹುದೊಡ್ಡ ಸವಾಲು ಕೂಡಾ. ಹೀಗಿರುವಾಗ ‘ನೃತ್ಯಪಟು’ಗಳಾಗುವಲ್ಲಿ ಬಾಣದಂತೆ ನಾಟುವ ರೇಖಾವಿನ್ಯಾಸ, ಬಿಗಿದ ಮುಖಮುದ್ರೆಗೆ ಒಪ್ಪುವಂತೆ ‘ಆಟಿಟ್ಯೂಡ್’ಗಳಲ್ಲಿ ಹರಿಯುವ ಕಣ್ಣಿನ ಕುಡಿನೋಟ, ಚಿಗಿಯುವ ವೇಗದ ಪಾದರಸಣಿಯಲ್ಲೇ ಲಂಬಿಸುವ ಜತಿಗಳು ಹೊಸ ತಲೆಮಾರಿನ ಆಕರ್ಷಣೆಗಳಾಗುವುದರಲ್ಲಿ ಅತಿಶಯವಿಲ್ಲ.

ಆಹಾರ್ಯಸಂಸ್ಕೃತಿಯ ಚೌಕಟ್ಟು ಕೂಡಾ ಸಮಕಾಲೀನ ‘ಫ್ಯಾಶನ್’ಪ್ರಭಾವಕ್ಕೊಳಪಟ್ಟಿದೆ. ಫಲವಾಗಿ ರಂಗಾಹಾರ್ಯದ ತಂತ್ರಜ್ಞಾನ, ಪ್ರಸಾಧನಗಳ ಬಾಹುಳ್ಯ ‘ಪ್ರೊಡಕ್ಷನ್’ ಗಳ ಅವಿಭಾಜ್ಯ ಅಂಗವೇ ಆಗಿದೆ. ಬಹ್ವಾಹಾರ್ಯ ನೃತ್ಯವಿನ್ಯಾಸಗಳಲ್ಲಿ ನರ್ತಕರು ಅನೇಕ ಎಂಬುದು ಬಿಟ್ಟರೆ ಆಹಾರ್ಯವ್ರು ಏಕರೂಪದ್ದೇ! ‘ಸರ್ವಾಭರಣಲಂಕೃತ’ ಎಂಬ ಪಾರಂಪರಿಕ ಕ್ರಮಕ್ಕಿಂತ ನವನವೀನ ಆಭರಣಗಳನ್ನು ವಸ್ತ್ರವಿನ್ಯಾಸದ ಜೊತೆ ಮಿಕ್ಸಿಂಗ್ ಮಾಡಿ ಆದಷ್ಟೂ ಕಡಿಮೆ ಬಳಸುವುದೂ ಕೂಡಾ ಏಕಾಹಾರ್ಯದ ಟ್ರೆಂಡ್.

‘ತಂಜಾವೂರುಸೋದರರ ಮಾರ್ಗಂಪದ್ಧತಿ ಕಲಸಿ ಹೋಗಿದೆ. ಹಿರಿಯರು ಹೇಳಿದ ಹಾಗೆಯೇ ಈ ಹೊತ್ತಿಗೆ ಯಾವುದೂ ಉಳಿದುಕೊಂಡಿಲ್ಲ. ಈಗ ಮೈಸೂರುಶೈಲಿ ಎಂದುಕೊಳ್ಳುವ ಬಹುತೇಕ ಕಲಾವಿದರೂ ನರ್ತಿಸುವುದು ಅಲರಿಪು-ಜತಿಸ್ವರ-ವರ್ಣ-ತಿಲ್ಲಾನ ಮುಂತಾದ ತಂಜಾವೂರಿನ ರಚನೆಗಳನ್ನೇ! ಪಾಶ್ಚಿಮಾತ್ಯ-ಸಮಕಾಲೀನ ನೃತ್ಯಗಳನ್ನು, ಇತರ ಶಾಸ್ತ್ರೀಯ ನೃತ್ಯಗಳನ್ನು ಸತತವೂ ಕಾಣುವ ಕಣ್ಣು, ಮನ ಬೇಕಾದ್ದನ್ನು ಆರಿಸಿಕೊಳ್ಳುವುದು ಸಹಜ. ಈಗಿನ ರಸಿಕರಿಗೂ ಓಟ ಬೇಕು. ಹೊಸಬಗೆಯ ಸಮೂಹನೃತ್ಯಗಳಲ್ಲಿ ಹೆಚ್ಚಿನ ಅಭಿರುಚಿಯಿದೆ. ನೃತ್ತವೆನ್ನುವುದೇ ಅಭಿನಯಕ್ಕಿಂತ ಹೆಚ್ಚೆಂಬ ಭಾವವೂ ಎಲ್ಲರಲ್ಲಿದೆ.’ ಎಂದು ಅಭಿಜಾತ ನೃತ್ಯಗಳ ಚಲನವಲನವನ್ನು ಗುರುತಿಸಿದ್ದಾರೆ ಮೈಸೂರು ಪರಂಪರೆಯ ಹಿರಿಯ ಗುರು ಡಾ.ಲಲಿತಾ ಶ್ರೀನಿವಾಸನ್. ಭರತನಾಟ್ಯಗುರು ಬಿ.ಭಾನುಮತಿಯವರೂ ಸಾತ್ತ್ವಿಕಾಭಿನಯಕ್ಕಿಂತ ನೃತ್ತಪ್ರಿಯತೆ ಹೆಚ್ಚಿದೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

ಶೈಲಿಗಳ ಸವಾಲಿನಲ್ಲಿ..

ಅಭ್ಯಾಸಿಗಳಿಗೆ ಶಿಕ್ಷಕರು ಬದಲಾದಂತೆಲ್ಲಾ ಅವರವರ ಶೈಲಿ ಕಲಿಯುವ ಅನಿವಾರ್ಯತೆ ಮೊದಲಿನಿಂದಲೂ ನೃತ್ಯಪ್ರಪಂಚದಲ್ಲಿದ್ದದ್ದೇ. ಹಲವೆಡೆ ನೃತ್ಯಶಿಕ್ಷಕರ ಕಟ್ಟುನಿಟ್ಟಿನ ಶೈಲಿಶಿಸ್ತಿಗೆ ವಿದ್ಯಾರ್ಥಿಗಳು ಬಸವಳಿದು ಗೊಂದಲದಲ್ಲಿಯೇ ಕಲಿಕೆಯನ್ನು ಕೈಬಿಟ್ಟ ಪ್ರಕರಣಗಳಿವೆ. ಹಾಗೆಂದು ವೈಯಕ್ತಿಕವಾಗಿ ಒಬ್ಬೊಬ್ಬ ವಿದ್ಯಾರ್ಥಿಗಳಿಗೂ ಪಾಠ ಮಾಡುವ ಕ್ರಮ ಇಂದಿಗೆ ತ್ರಾಸದಾಯಕ. ಈ ನಿಟ್ಟಿನಲ್ಲಿ ಏಕರೂಪ ಪಠ್ಯ ರೂಪಿಸುವ ಚಿಕಿತ್ಸಕಪಥ ಈವರೆಗೆ ಫಲಪ್ರದವಾಗಿಲ್ಲ. ಹಾಗೆಂದೇ ಅಬೋಧಮುಗ್ಧ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಬಹಳ ಸಲ ಕಾಡಿದ, ಕಾಡುತ್ತಿರುವ ಪ್ರಶ್ನೆ – ಯಾವ ಶೈಲಿ ಸೂಕ್ತ? ಯಾವುದನ್ನು ಕಲಿತರೆ ಒಳ್ಳೆಯದು?

ಪ್ರಾಚೀನದಲ್ಲಿ ವೈಭವೋಪೇತವಾದ ನಾಟ್ಯಶಾಸ್ತ್ರಾಧಾರಿತವಾದ ಪದ್ಧತಿಯಿತ್ತು. ನಂತರಕ್ಕೆ ಅನೇಕ ದೇಶೀಯ ನೃತ್ಯಗಳು ಪ್ರವರ್ಧಮಾನಕ್ಕೆ ಬಂದವು. ಆದರೂ ಏನನ್ನು, ಹೇಗೆ ನರ್ತಿಸುತ್ತಿದ್ದರು ಎಂಬುದು ಇಂದಿಗೆ ಒಂದು ಅಂದಾಜಿನ ಕಲ್ಪನೆ. ೨೦ನೇ ಶತಮಾನದ ವರೆಗೂ ಇದ್ದ ಅರಮನೆಯ, ಆಲಯದ ನೃತ್ಯವಿಶೇಷಗಳು ಕ್ರಮೇಣ ಸಾರ್ವಜನಿಕ ನೃತ್ಯಾವರಣದಲ್ಲಿ ಸೇರುತ್ತಾ ಬಂದಾಗ ಪ್ರತಿಭಾಶಾಲಿ ಕಲಾವಿದರು ತಂತಮ್ಮ ನೃತ್ಯಪರಂಪರೆಯಲ್ಲಿ ಕಂಡುಕೊಂಡ ಅಭಿನಯವಿನ್ಯಾಸದ ಪಠ್ಯಗಳು ಹಿರಿದಾಗಿ ಪ್ರಸಿದ್ಧಿಗೆ ಬಂದು ಶೈಲಿ/ಬಾನಿ/ ಘರಾನಾ ಎಂದು ಕರೆಯಲ್ಪಟ್ಟಿತು. ಕಲಾವಿದನು ತಾನು ಏರಬೇಕಾದ ಎತ್ತರಕ್ಕೆ ಇವೆಲ್ಲಾ ಕವಲುಗಳೂ ತಮ್ಮದೇ ಆದ ಸೋಪಾನಕ್ರಮವನ್ನು ಹೊಂದಿದ್ದಾವೆ ಎಂಬುದನ್ನು ಹೊರತುಪಡಿಸಿದರೆ ಎಲ್ಲಾ ಪರಂಪರೆಗಳೂ ಒಂದೇ ಗಂಗೋತ್ರಿಯ ನದಿಶಾಖೆಗಳು. ಅಂಗವಿಜ್ಞಾನ, ತಾಳಬದ್ಧತೆ, ಸಂಗೀತ ಇವುಗಳ ಅವಶ್ಯಕತೆ ಯಾವುದೇ ಶೈಲಿಗೂ ಸೌಂದರ್ಯವೇ, ಸ್ವಾಸ್ಥ್ಯವೇ.

ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಶರೀರ ರಚನೆ, ಅವಯವ ಶ್ರಮ-ಸಾಮರ್ಥ್ಯ-ಲೋಪಕ್ಕನುಗುಣವಾಗಿ ಅಭಿನಯದ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಪಳಗಿಸಿಕೊಂಡು ತಮ್ಮಗೊಪ್ಪುವ ಶೈಲಿಗಳನ್ನು ಸಿದ್ಧಿಸಿಕೊಳ್ಳಲು ಶಾಸ್ತ್ರದಲ್ಲಿ ಯಾವ ತೊಡಕೂ ಇಲ್ಲ. ಹಿಂದೆಲ್ಲಾ ಕಲಾವಿದರಲ್ಲಿ ಶೈಲಿಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಕಡಿಮೆ, ಹಾಗಾಗಿ ಪ್ರಭಾವವೂ ಕಡಿಮೆ. ಆದರೆ ನಿರ್ದಿಷ್ಟ ನೃತ್ಯಶಾಖೆಯ ಕಲಿಕೆಗೆಂದೇ ಜೀವನ ಮುಡಿಪಿಡುವ ಕಾಲ ಮಾಯವಾಗಿ ಬಗೆಬಗೆಯ ನೃತ್ಯಗಳನ್ನು ಏಕಕಾಲಕ್ಕೆ ಕರಗತ ಮಾಡಿಕೊಳ್ಳುತ್ತಾ ತೌಲನಿಕವಾಗಿ ಗಮನಿಸಿ ಬಳಸಿಕೊಳ್ಳುವ ಹಪಹಪಿಕೆ ಇಂದಿನದ್ದು. ಹಲವಾರು ಕಲಾವಿದರನ್ನು ನೋಡಿ ಲೋಪದೋಷಗಳನ್ನು ತಿದ್ದಿಕೊಳ್ಳುವ ಅವಕಾಶ. ಹಾಗೆಂದೇ ಒಂದೇ ಗುರುವಿನಿಂದ ಕಲಿತರೂ ಸೃಷ್ಟಿಶೀಲತೆ, ಬುದ್ಧಿವಂತಿಕೆ, ದೇಹದ ಸಾಧ್ಯಾಸಾಧ್ಯತೆಗಳ ಅರಿವು ಪಡೆದಂತೆಲ್ಲಾ ಸ್ವಂತಿಕೆ ಮೈಗೂಡಿಸಿಕೊಂಡು ವಿಶಿಷ್ಟರಾಗುತ್ತಾರೆ.

ಆದರೆ ಪರಂಪರಾವ್ರತಿಗಳು ಪಟ್ಟು ಹಿಡಿದು ಸಾಧಿಸಲೆಳೆಸಿದಾಗ ಪರದಾಡುವವರು ಶಿಷ್ಯರೇ! ಅಭಿವ್ಯಕ್ತಿಸ್ವಾತಂತ್ರ್ಯದ ಔಚಿತ್ಯ, ಶೈಲಿಗಳ ಸಾಪೇಕ್ಷತೆಯ ಕುರಿತು ಸ್ಪಷ್ಟತೆ ಕೊಡದ ನೃತ್ಯಾಭ್ಯಾಸವು ಜೀವನದುದ್ದಕ್ಕೂ ಕಿರಿಯರ ಭಾವಪ್ರಪಂಚವನ್ನೂ ಕಾಡುತ್ತದೆ. ಪರಿಣಾಮ, ಶೈಲಿಗಳನ್ನು ಕಲಿಯುತ್ತೇವೆಯೆಂದು ‘ಐಟಂ’ ಕಲಿಕೆಯ ನಿತ್ಯಹೋರಾಟಕ್ಕೆ ತೆತ್ತುಕೊಳ್ಳುತ್ತಾ ಕಂಡದ್ದನ್ನೆಲ್ಲವನ್ನೂ ಅನುಕರಿಸುವ ಗೀಳು ಅಂಟುತ್ತದೆ. ವಿಪರ್ಯಾಸವೆಂದರೆ ಇಂದಿಗೆ ನೃತ್ಯದ ಬಹುತೇಕ ಕಾರ್ಯಾಗಾರಗಳಲ್ಲಿ ಪಾಠಗಳಾಗುವುದು ನೃತ್ಯಬಂಧಗಳೆಂಬ ‘ಐಟಂ’ಗಳೇ. ತಂತಮ್ಮ ಕೊರಿಯೋಗ್ರಫಿ ಅಥವಾ ಶೈಲಿಪ್ರಚಾರವನ್ನೇ ಮಾಡುವಲ್ಲಿಗೆ ಬಹ್ವಂಶದಲ್ಲೂ ಶಾಸ್ತ್ರ-ಪ್ರಯೋಗದ ಸಮನ್ವಯತೆ ದಿಕ್ಕುತಪ್ಪುತ್ತದೆ.

ಹೊಸತನವೆಂಬ ಪರಿಭಾಷೆ

ಕಲೆಯಲ್ಲಿ ಹೊಸತು ಎಂದಾಕ್ಷಣ ಪೌರಾಣಿಕ ಸಂಬಂಧಿ ಚಿತ್ರಣಗಳಿಗಿಂತ, ಶಾಸ್ತ್ರೀಯ ರಂಗಪ್ರದರ್ಶನಗಳಿಗಿಂತ ಭಿನ್ನವಾದದ್ದು, ವಾಸ್ತವಕ್ಕೆ ಕಲೆಯು ಪೂರಕವಾಗಿರಬೇಕು ಇಲ್ಲವೇ ಸಮಕಾಲೀನ ತರ್ಕವನ್ನು ಪುರಾಣಕ್ಕೆ ಒಗ್ಗಿಸುವುದು ಎಂಬ ಪರಿಕಲ್ಪನೆಯೇ ಪ್ರಚಲಿತ. ಇದಕ್ಕಾಗಿ ಹಳೆಯದನ್ನು ಲಂಘಿಸುವ ಸಾಹಸದಲ್ಲಿ ನೃತ್ಯಸಾಂಕರ್ಯ ಅಪರಿಮಿತ. ಸಮಕಾಲೀನ, ಫ್ಯೂಷನ್‌ನೃತ್ಯಗಳು ‘ಹೊಸತನ’ದ ಹರಿಕಾರರೆನಿಸಿನಿಸಿದ್ದು ಹೀಗೆಯೇ.

ಹೊಸತನದ ಹಂಬಲದಲ್ಲಿ ಕಲೆಯ ರೂಪದ ತಿದ್ದುಪಡಿಕೆಗೇ ನೇರ ಕೈಯಿಕ್ಕುವ ಇಲ್ಲವೇ ಪ್ರಯೋಗಾಶಯದಲ್ಲಿ ಸತ್ತ್ವಾಶ್ರಿತವಲ್ಲದ ನಿರೂಪಣೆಗಳಿಗೆ ಮುಂದಾದರೆ ಕಲೆಯ ಆನಂದ ಕ್ಷೀಣವಾಗುತ್ತದೆ. ಪ್ರಯೋಗ ಅಲ್ಪಾಯುಷಿಯಾಗುತ್ತದೆ. ಜೊತೆಗೆ ವ್ಯಾಪಕವಾಗುತ್ತಿರುವ ಕಲೆಯ ಕುರಿತಾದ ಅಸಹಿಷ್ಣುತೆಯ ಧೋರಣೆ, ಸಮಾಜದ ಅನೇಕ ಸಮಸ್ಯೆಗಳಿಗೆ ಉತ್ತರ ನೀಡಿಬಿಡುತ್ತೇವೆಂಬ ಔದ್ಧತ್ಯದಿಂದ ಹೊರಟಾಗಲೂ ಕಲೆ ಬೇಗನೆ ಅಪುಷ್ಟವಾಗುತ್ತದೆ, ಹಾಸ್ಯಾಸ್ಪದವಾಗುತ್ತದೆ.

ಪ್ರವೇಶ-ಪರೀಕ್ಷೆಗಳ ಸುಳಿ

ರಂಗಪ್ರವೇಶಗಳು ಸಹೃದಯರ ಮನದಂಗಣದಿಂದ ಹೊರಜಿಗಿದು ಕಾಲವೆಷ್ಟೋ ಕಳೆಯಿತು. ರಂಗಪ್ರವೇಶದ ಪಾರಂಪರಿಕ ಅರ್ಥ, ಉದ್ದೇಶ, ವಿಮರ್ಶೆಗಳಾವುವೂ ಇಂದಿಗೆ ಉಳಿದುಕೊಂಡಿಲ್ಲವಾದರೂ, ಶಿಕ್ಷಕ-ವಿದ್ಯಾರ್ಥಿ-ಪೋಷಕರಿಗೆ ಪ್ರತಿಷ್ಠೆಯ ಬಾಬತ್ತೆನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ. ಎಷ್ಟೋ ಸಲ ಶಾಸ್ತ್ರೀಯ ಕಲೆಯ ಮುಂದಾಳುತನದಲ್ಲಿ ನಡೆಯುವ ಇವು ಬಂಧು-ಮಿತ್ರವರ್ಗದವರ ಅತಿಥಿಕೂಟವಾಗಿಯೇ ಸೀಮಿತಗೊಳ್ಳುತ್ತದೆ. ‘ಗುರುವಂದನ’ ಎಂಬ ಪರ್ಯಾಯನಾಮದಲ್ಲಿರುವ ಅನೇಕ ನೃತ್ಯಾಭಿವ್ಯಕ್ತಿಗಳೂ ಪಾಲಿಸುವುದು ಮತ್ತದೇ ರಂಗಪ್ರವೇಶ ಚೌಕಟ್ಟನ್ನೇ.

ಪರಸ್ಪರ ಪ್ರಶಂಸಾಶ್ರಯವಾದ ಆರಂಗೇಟ್ರಂಗಳಲ್ಲಿ ಊಟೋಪಚಾರ ಮಾಡಿಸುವುದೂ ಇತ್ತೀಚೆಗೆ ಪಟ್ಟಣಸಂಸ್ಕೃತಿಯ ಜೀವನಶೈಲಿ ಪ್ರಭಾವಿಸಿದ ಅನಿವಾರ್ಯತೆ. ಅಪರೂಪಕ್ಕೊಮ್ಮೆ ದೇವಾಲಯಗಳಲ್ಲಿಯೋ, ಹಲವು ಅಭ್ಯಾಸಿಗಳ ಕೂಡುವಿಕೆಯಲ್ಲೋ ನಡೆಯುವ ರಂಗಪ್ರವೇಶಗಳ ಸುದ್ದಿ ‘ಅರ್ಥ’ವಂತಿಕೆ ದೃಷ್ಟಿಯಲ್ಲಿ ಆಪ್ತ. ಆದಾಗ್ಯೂ ವ್ಯವಸ್ಥಿತವಾಗಿ ಕಲಿತು ರಂಗಾರೋಹಣಗೈಯುವ ಪ್ರಬುದ್ಧತೆಯು ಅಳಿಯುತ್ತಾ ರಂಗನಿರ್ಗಮನಕ್ಕಿಂತ ಮೊದಲಿನ ಹಂತಗಳಲ್ಲೊಂದಾಗಿ ಸ್ಥಾನಪಲ್ಲಟಗೊಳ್ಳುತ್ತಿದೆ.

ಪ್ರತಿಭಾನಿಕಷವಾಗಬೇಕಿದ್ದ ಪರೀಕ್ಷೆಗಳು ಸರ್ಟಿಫಿಕೇಟುಗಳನ್ನು ಪಡೆಯುವುದಕ್ಕಷ್ಟೇ ಅಪೇಕ್ಷಿತವೆಂಬ ಮಟ್ಟಿಗಿನ ಧೋರಣೆ ಇಂದಿನ ವಾಸ್ತವ. ಸಾಕಷ್ಟು ಅವ್ಯವಸ್ಥೆ, ಹಿತಾಸಕ್ತಿಗಳ ನಡುವೆಯೂ ಪರೀಕ್ಷೆಗಳ ಹಂಗು ಎಲ್ಲರಿಗೂ ಪ್ರೀತ್ಯಾದರ. ಸ್ವಂiiಂ ಸರ್ಕಾರವೇ ಸಂಗೀತ-ನೃತ್ಯಪರೀಕ್ಷೆಗಳಿಗೆ ಕಾಯಕಲ್ಪ ನೀಡುವಲ್ಲಿ ಆಸಕ್ತಿ ತೋರಿಲ್ಲವೆಂಬುದು ಎಷ್ಟು ನಿಜವೋ, ಅಷ್ಟೇ ನಿಜ ಪ್ರಾಥಮಿಕ ಪರೀಕ್ಷೆಗಳಿಂದ ತೊಡಗಿ ನೃತ್ಯಶಿಕ್ಷಣವೆನ್ನುವುದು ವ್ಯವಹಾರಪ್ರಪಂಚದ ಅಳತೆಗೋಲು ಎಂಬುದೂ. ಆಧುನಿಕ ಬದುಕಿಗೆ ಪರಮಾಪ್ತವಾದ ಪಾಶ್ಚಾತ್ಯನೃತ್ಯಗಳನ್ನು ಕಲಿಸುವ ಸಂಸ್ಥೆಗಳೂ ಕನಿಷ್ಟಪಕ್ಷ ಭರತನಾಟ್ಯದ ಪ್ರಾಥಮಿಕ ಪರೀಕ್ಷೆಯ ಬೋರ್ಡನ್ನು ಹಾಕಿಕೊಂಡಿರುವುದಿದೆ. ನೃತ್ಯವು ಚಿಕಿತ್ಸೆ, ವ್ಯಾಯಾಮ ಎಂದು ಬದಲಾಗಿರುವ ಸ್ಥಳಗಳಲ್ಲೂ ಭರತನಾಟ್ಯದ ತರಗತಿ ಇರುತ್ತದೆ ಎಂಬುದನ್ನು ಗಮನಿಸಿದರೆ ಅತಿವ್ಯಾಪ್ತಿಯ ದೋಷ ತಟ್ಟಿದಂತಿಲ್ಲವೇ?- ಚಿಂತನಾರ್ಹ.

ಕಲಾಸಂಶೋಧನೆಯೆಂಬ ಮಜಲು

ವಿದ್ವತ್‌ಪರೀಕ್ಷೆಯೇ ಕಲಾಧ್ಯಯನದ ಪ್ರಬುದ್ಧತೆಯನ್ನು ನಿರ್ಣಯಿಸುವ ಕಾಲ ಕಳೆದದ್ದೇ, ಆಸಕ್ತ ಅಧ್ಯಯನಾಪೇಕ್ಷಿಗಳಿಗೆ ಕಂಡ ಹೊಸ ಬೆಳಕು ಕಲಾಸಂಶೋಧನೆ. ಎಲೆಮರೆಯಾಗುತ್ತಿದ್ದ ಕಲಾಧ್ಯಯನದ ಆಸಕ್ತಿ ಸಂಶೋಧನಮುಖದಲ್ಲಿ ಅರಳಿಕೊಳ್ಳತೊಡಗಿರುವುದು ಸ್ವಾಗತಾರ್ಹ. ಆದರೆ ಎಂಫಿಲ್/ಪಿ‌ಎಚ್‌ಡಿ/ಗೌರವ ಡಾಕ್ಟರೇಟ್‌ಗಳ ಹಪಹಪಿಕೆಗಷ್ಟೇ ಮಿತಿಗೊಂಡು ಕ್ರಮೇಣ ಅದೂ ಕಲಾವಲಯವನ್ನು ಕ್ರಮೇಣ ತಣ್ಣಗೆ ಕೊರೆಯುವ ಸಂಗತಿಯಾಗುವ ಲಕ್ಷಣವೂ ಗೋಚರಿಸುತ್ತಿದೆ.

ಇಂದಿಗೆ ವಿಶ್ವವಿದ್ಯಾನಿಲಯಗಳಲ್ಲಿ ನೃತ್ಯವಿಭಾಗಗಳು ತೆರೆದಿವೆ, ಸಂಶೋಧನವಿದ್ಯಾರ್ಥಿಗಳು, ಮಾರ್ಗದರ್ಶಕರೂ ಹೆಚ್ಚುತ್ತಿದ್ದಾರೆ. ನೃತ್ಯಸಂಶೋಧನೆಯ ವಿಧಾನಗಳು ರೂಪುಗೊಳ್ಳುತ್ತಿವೆ. ಆಧಾರಗಳನ್ನು ಹುಡುಕುವ ಶ್ರದ್ಧೆಗೆ ಪಾರಂಪರಿಕ ಮತ್ತು ಆಧುನಿಕವಾದ ಮಾರ್ಗಗಳು ಕೈಗೆಟುಕುವಂತಿವೆ. ವಿವಿಧ ಶಾಖೆ-ಶಾಸ್ತ್ರಗಳ ಅಧ್ಯಯನಕ್ಕೆ ಸಾಮಗ್ರಿಗಳೂ ಲಭ್ಯವಿವೆ. ಆದರೆ ವಿದ್ವತ್ತನ್ನು ಪ್ರತಿಷ್ಠಾಪಿಸಿಕೊಳ್ಳುವ ನೆಪಕ್ಕೆ ಹಿರಿಕಿರಿಯರೆನ್ನದೆ ಗಂಟುಬಿದ್ದು ಪದವಿಲಾಲಸೆಯೇ ಮುಖ್ಯವಾಗುವುದಾದರೆ ಸದ್ಯಭವಿಷ್ಯದ ಕಲಾಧ್ಯಯನ ಶಿಸ್ತಿಗೆ ಭಂಗವೊದಗದೇ ಇರಲಾರದು.

ಸುಧಾರಣೆಯೆಂಬ ಹೊಯ್ದಾಟ

ಒಂದು ಕಾಲಕ್ಕೆ ಸ್ತುತ್ಯವಾದದ್ದು ಇನ್ನೊಂದು ಕಾಲಕ್ಕೆ ಅಪಥ್ಯವೆನಿಸಬಹುದು. ಮೇಲಾಗಿ ಕಲೆಯು ಅವರವರ ಕಣ್ಣಿಗೆ, ಕಾಣ್ಕೆಯ ಆಯಕ್ಕೆ ಒದಗುವ ಸೋಪಾನಸಾಧನ. ಹೀಗಿರುವಾಗ ಕಲಾಸುಧಾರಣೆ ಎಂಬುದು ದಿನ ಬೆಳಗಾಗುವುದರೊಳಗೆ ಘಟಿಸುವ ಸಂಗತಿಯಲ್ಲ. ಅದೇನಿದ್ದರೂ ನಿರಂತರ ಔಚಿತ್ಯಾನುಸಾರಿ. ಶಾಸ್ತ್ರಕ್ಕಿಂತ ಭಿನ್ನವಲ್ಲ ಎಂಬುದರ ವಿವೇಕ ಸಂಪುಷ್ಟವಾಗಿದ್ದರೇನೇ ಇದು ಸಾಧ್ಯ. ಅದಿಲ್ಲದೆ ಮೇಲ್ನೋಟದಲ್ಲಿರುವ ಸುಧಾರಣಾಸಂಕಲ್ಪಗಳು ಆ ಕ್ಷಣದ ವಾತಾಯನವನ್ನು ತುಂಬಬಹುದಷ್ಟೇ.

ಇತ್ತ ಕಲಾವಿದನ ನಡತೆ, ಬದುಕು, ಭಾವಶುದ್ಧಿಗಳೂ ಕಲೌದಾರ್ಯದ ಮಟ್ಟಕ್ಕೆ ಏರಿರಬೇಕೆಂದು ಸಹೃದಯನು ಬಯಸುವುದಾದರೆ ಅದುವೂ ತಪ್ಪಲ್ಲ. ಕಲೆಯ ರಸಸೌಂದರ್ಯ ಮೋದ-ಬೋಧಗಳ ಅಖಂಡಾನುಭವ. ಇಲ್ಲಿ ಭಾವದ ಬಿಡುಗಡೆಯೇ ಬದುಕು. ಅದು ರಸದ ಹೊನಲಾಗುವಂತೆ ಮಾಡುವ ಹೆಜ್ಜೆಯಲ್ಲಿ ಗಂಧದ ಕೊರಡಿನ ಅನುಭವವೂ ಕಲೆಯ ಪಾಲಿಗೆ ಬಹುದೊಡ್ಡ ಸುಧಾರಣೆ. ಕಲೆಯಿಂದ ವ್ಯಕ್ತಿಯು ತನ್ನನ್ನು ಮರುಶೋಧಿಸಿಕೊಳ್ಳುವ ಸೌಭಾಗ್ಯವೇ ಕಲೆಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆ. ಅದಾಗಬೇಕೆಂದರೆ ನೃತ್ಯ ಕೇವಲ ಪ್ರದರ್ಶನವಾಗಬಾರದು. ‘ದರ್ಶನ’ವಾಗಬೇಕು.

ಕಾಲದ ಹೊಯ್ದಾಟಗಳು ಎಷ್ಟೇ ಇದ್ದರೂ ಕಲಾವಿದರ ವೈಯಕ್ತಿಕ ನೆಲೆಗೆ ಬಂದಾಗ ಅವರವರ ಪ್ರತಿಭೆ, ಸಂಸ್ಕಾರವೇ ಕಲಾಮೌಲ್ಯಕ್ಕೂ, ಸಿದ್ಧಿಗೂ ಬೀಜಾವಾಪ. ಯಾವುದೇ ತರ್ಕ-ವಿಮಶೆ-ದಾಖಲೆಗಳಿಂದಾಚೆಗೂ ಪರಮಪ್ರಮಾಣ ಮನಃಸಾಕ್ಷಿ, ಪ್ರಾಮಾಣಿಕತೆಯೇ ! ಎಲ್ಲಾ ಆಚರಣೆಗಳಿಗೂ ಬೆಲೆ ಅದು ಸ್ವಾನಂದದಲ್ಲಿ ಮಿಂದು ಪುಳಕಿತಗೊಂಡಾಗ ಮಾತ್ರ. ‘ಒಳ್ಳೆಯ ಕಲೆ ಏನು’ ಎಂಬುದು ನಿರ್ಣಯಿಸಲ್ಪಡುವುದೇ ಬಾಯುಪಚಾರಕ್ಕಿಂತ ಮಿಗಿಲಾಗಿ ಕಲಾಪ್ರಯೋಗವೊಂದು ಕಾಲಾತೀತವಾಗಿ ಯಾವ ಮಟ್ಟಕ್ಕೆ ಉಳಿಯಬಲ್ಲುದು ಎಂಬುದರ ನಿಷ್ಕರ್ಷೆಯಲ್ಲಿಯೇ. ಕಲಾವಿದನು ತನ್ನ ಕಲೆಯನ್ನು ಎಷ್ಟು ಆತ್ಯಂತಿಕವಾಗಿ ಸ್ವಾನುಭವನಿಷ್ಠನಾಗಿ ಅನುಭವಿಸಿದ ಮತ್ತು ಸಹೃದಯಾಹ್ಲಾದದ ಆಯುಷ್ಯವೆಷ್ಟಿತ್ತು ಎನ್ನುವುದೇ ಪರಮಪ್ರಮಾಣ. ಇವುಗಳ ಪ್ರಭಾವಲಯ ಹೆಚ್ಚಿದಷ್ಟೂ ಆ ಕಲೆ ಮತ್ತಷ್ಟು ಜೀವಂತವಾದ ರೇಕುಗಳನ್ನು ಚಿಮ್ಮಿಸಿ ಪರಿಣಾಮರಮಣೀಯವಾಗುತ್ತದೆ.

ಪ್ರೇಕ್ಷಕಪ್ರೀತ್ಯರ್ಥವಾಗಿ ಆನಂದನಿಷ್ಟವಾದುದನ್ನಷ್ಟೇ ಕಲೆ ಕಾಪಿಟ್ಟುಕೊಳ್ಳುತ್ತದೆ. ನಾಟ್ಯಶಾಸ್ತ್ರಕಾಲದಿಂದಲೂ ಅದುವೇ ಕಲೆಯ ಅನ್ನ. ಆಗಲೂ, ಈಗಲೂ ನೃತ್ಯಮಾಧ್ಯಮ ನಿರೀಕ್ಷಿಸುತ್ತಲೇ ಇರುವುದು ಆ ಸಾತ್ತ್ವಿಕವೊಂದನ್ನೇ. ಕಾಲಕಾಲಕ್ಕೂ ಅನ್ನಸಂತೃಪ್ತಿಯನ್ನೊದಗಿಸುತ್ತಿದ್ದರೇನೇ ಕಲೆಯ ಗೆಲುವು, ಕಲಾವಿದನ ಗೆಲುವು.

ಆತ್ಮಾನೋ ಮೋಕ್ಷಾರ್ಥಂ ಜಗತ್ ಹಿತಾಯ ಚ

 

Leave a Reply

*

code