ನೃತ್ಯಸಂಶೋಧನೆಯ ಸಾರ್ಥಕತೆಯನ್ನು ಎತ್ತಿಹಿಡಿದ ನೂಪುರ ಭ್ರಮರಿಯ ನೃತ್ಯಪ್ರದರ್ಶನ, ಸಂವಾದ

Posted On: Sunday, July 28th, 2013
1 Star2 Stars3 Stars4 Stars5 Stars (No Ratings Yet)
Loading...

Author: Prajavani

 

Shobha Shashikumar

ನೃತ್ಯಕ್ಷೇತ್ರದ ಪಾಲಿಗೆ ಅಪರೂಪವೆನಿಸಿರುವ ಸಂಶೋಧನೆಗೆ ಪೂರಕವಾದ ನೆಲೆಯಲ್ಲಿ ದುಡಿಯುತ್ತಿರುವ ಸಂಸ್ಥೆಯೇ ನೂಪುರ ಭ್ರಮರಿ. ನೃತ್ಯಸಂಶೋಧನೆ, ಅಧ್ಯಯನ ತರಗತಿ, ಮಾರ್ಗದರ್ಶನ, ಪ್ರದರ್ಶನ, ಸಂವಾದ, ಪ್ರಕಟಣೆಗಳಿಗೆ ಮೀಸಲಾದ ಪ್ರತಿಷ್ಠಾನವಾಗಿ ಗುರುತಿಸಿಕೊಂಡಿರುವ ನೂಪುರ ಭ್ರಮರಿಯ ಮತ್ತ್ತೊಂದು ಪ್ರಯತ್ನವಾಗಿ ಮೂಡಿಬಂದಿದ್ದು ಜುಲೈ ೨೭ರಂದು ಬೆಂಗಳೂರಿನ ಜೆ.ಸಿ. ರಸ್ತೆಯ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ನಡೆದ ನೃತ್ಯಪ್ರದರ್ಶನ, ಸಂವಾದ ಮತ್ತು ಸಮೀಕ್ಷೆಯ ಕಾರ್ಯಕ್ರಮ.

ಈಗಾಗಲೇ ಕಳೆದ ಫೆಬ್ರವರಿಯಲ್ಲಿ ನೃತ್ಯಕ್ಷೇತ್ರಕ್ಕೇ ಮೀಸಲಾದ ರಾಷ್ಟ್ರಮಟ್ಟದ ಸಂಶೋಧನ ಸಮ್ಮೇಳನವನ್ನು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ನಡೆಸಿದ ಸಂಸ್ಥೆಯ ಮತ್ತೊಂದು ಅಂಗವು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಜೊತೆಗೆ ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯು; ಭಾರತದಲ್ಲೇ ಪ್ರಪ್ರಥಮವಾದ ನೃತ್ಯ ಸಂಶೋಧನ ನಿಯತಕಾಲಿಕೆ-ನೂಪುರಾಗಮವನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ಸಂಸ್ಥೆಯ ಆಶ್ರಯದಲ್ಲಿ ನೂಪುರ ಭ್ರಮರಿ ಪತ್ರಿಕೆಯ ಸಂಪಾದಕಿ, ಅಧ್ಯಕ್ಷೆ ಮತ್ತು ಸ್ವತಃ ಸಂಶೋಧಕಿಯಾಗಿರುವ ಮನೋರಮಾ ಅವರ ಅಧ್ಯಯನ ಶಿಸ್ತಿಗೆ ಅನುರೂಪವಾಗಿ ಅಣಿUಗೊಂಡದ್ದು ಈ ಸಂಶೋಧನೆಗೆ ಪೂರಕವಾದ ಈ ಕಾರ್ಯಕ್ರಮ.

ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಂiiಗಳನ್ನು ಭರತನಾಟ್ಯದಲ್ಲಿ ಅಳವಡಿಸಿಕೊಳ್ಳುವುದರ ಸಂಬಂಧ ಇರುವ ಸಂಶೋಧನಾ ವಸ್ತುವಿಗೆ ಅಗತ್ಯ ನೆಲೆಯಲ್ಲಿ ಕಾರ್ಯಕ್ರiವನ್ನು ಚೊಕ್ಕಟವಾಗಿ ಆಯೋಜಿಸಲಾಗಿತ್ತು. ಶಾಸ್ತ್ರೀಯ ನೃತ್ಯವೆನ್ನುವುದು ಹೇಗೆ ಸಾಮಾಜಿಕ ಅಗತ್ಯದ ವಿಷಯಗಳಿಗೆ ಸ್ಪಂದಿಸಬಲ್ಲುದು? ಸ್ಪಂದಿಸುವುದಾದರೆ ಇರಬೇಕಾದ ಮಾನದಂಡಗಳೇನು? ನೃತ್ಯದ ಚೌಕಟ್ಟು ಎಷ್ಟರಮಟ್ಟಿಗೆ ಸೂಕ್ತ ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳನ್ನು ಆಧರಿಸಿ ಕಾರ್ಯಕ್ರಮವನ್ನು ನಿರ್ದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ನೃತ್ಯಪ್ರದರ್ಶನದಲ್ಲಿ ಪ್ರೇಕ್ಷಕರ ಆಯ್ಕೆ, ಒತ್ತಾಸೆಗಳೇನು? ಅವರ ನಿರೀಕ್ಷೆಗಳೇನು ಎಂಬುದನ್ನೂ ಅರಿಯುವ ವಿನೂತನ ಪ್ರಯತ್ನವೂ ಕಂಡಿತು. ಕಾರ್ಯಕ್ರಮದಲ್ಲಿ ಪ್ರೇಕ್ಷಕಪ್ರಭುವಿಗೆ ಇz ಮಾನ್ಯತೆಯಿಂದಾಗಿ ಯಾವುದೇ ಭಾಷಣ, ಸನ್ಮಾನಗಳ ಆಡಂಬರಗಳು ಅಲ್ಲಿ ಕಾಣಲಿಲ್ಲ. ಒಂದು ನಿಟ್ಟಿನಲ್ಲಿ ಬದಲಾವಣೆಯ ದ್ಯೋತಕವಾಗಿ, ಕ್ರಾಂತಿಕಾರಿಕ ವಿಚಾರಗಳನ್ನು ಅಳವಡಿಸಿಕೊಳ್ಳಲು ಅಡಿಪಾಯವೆಂಬಂತೆ ನೃತ್ಯಪ್ರದರ್ಶನ ಮತ್ತು ಅದರ ನಂತರದ ಸಂವಾದಗಳು ತೋರಿಬಂದವು.

ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧.೩೦ ಗಂಟೆಯ ವರೆಗೆ ನqದ ಈ ವ್ಯವಸ್ಥಿತ ನಿರ್ದೇಶನದ ಕಾರ್ಯಕ್ರಮದಲ್ಲಿ ಒಟ್ಟು ಮೂರು ಬಗೆಯಲ್ಲಿ ನೃತ್ಯಪ್ರದರ್ಶನಗಳು ವಿಕಸನವಾಗಿದ್ದವು. ಭರತನಾಟ್ಯ ಪರಂಪರೆಯಲ್ಲೇ ಹೆಚ್ಚಿನ ಸಾಂಪ್ರ್ರದಾಯಿಕ ನೆಲೆಯನ್ನು ಹೊಂದಿರುವ ವರ್ಣವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದು ಬಹುಷಃ ನೃತ್ಯದ ಇತಿಹಾಸದಲ್ಲೇ ಪ್ರಪ್ರಥಮ. ಬಾಲಾಲಾಪ ವೆಂಬ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಈ ವರ್ಣದ ವಿನ್ಯಾಸ ಮಕ್ಕಳ ಶಿಕ್ಷಣ, ಶಿಕ್ಷೆ ಮತ್ತು ಬಾಲ್ಯದ ಒತ್ತಡದ ಹಿನ್ನೆಲೆಯ ವಸ್ತುವನ್ನು ಹೊಂದಿತ್ತು. ಭರತನಾಟ್ಯದ ಕಛೇರಿಮಾರ್ಗ ಪರಂಪರೆಯ ಬಳಕೆಯನ್ನು ಕೊಂಚ ಬದಲಾವಣೆಯ ಸಹಿತ ಹೊಂದಿಸಿಕೊಳ್ಳಲಾಗಿತ್ತು. ಅದರಲ್ಲೂ ಬಹುಪಾಲು ಸಂದರ್ಭಗಳಲ್ಲಿ ಏಕವ್ಯಕ್ತಿಯಾಗಿ ಪ್ರದರ್ಶಿತಗೊಳ್ಳುವ ವರ್ಣವನ್ನು ಸಮೂಹನೃತ್ಯವಾಗಿ ಒಗ್ಗಿಸಿರುವ ಪರಿ ಶ್ಲಾಘನೀಯ. ಸಾಮಾನ್ಯವಾಗಿ ನಾಯಿಕಾ ನಾಯಕಾ, ಭಕ್ತಿಭಾವಕೇಂದ್ರವಾದ ವರ್ಣವನ್ನು ಆಯ್ದುಕೊಂಡು ಸಾಮಾಜಿಕ ಸಂದೇಶದ ವಸ್ತುವನ್ನು ಅದಕ್ಕೆ ಸಂಯೋಜಿಸಿ ಜನಸಾಮಾನ್ಯರಿಗೆ ಯಶಸ್ವಿಯಾಗಿ ಮುಟ್ಟಿಸಬಹುದೆಂದು ಹಿಮ್ಮೇಳ ಸಹಿತವಾಗಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ಬಳಗ ಸಾಧಿಸಿ ತೋರಿದರು. ವರ್ಣಕ್ಕೆ ಅಳವಡಿಸಲಾದ ಕನ್ನಡದ್ದೇ ಆದ ಸಾಹಿತ್ಯ ಮತ್ತು ಕರ್ಣಾನಂದಕರವಾದ ಸಂಗೀತ ಸಂಯೋಜನೆ, ಅದಕ್ಕೊಪ್ಪುವ ಸಂಚಾರಿ ಭಾವಗಳು, ಭಾವಗಳಿಗೆ ಅನುರೂಪವಾದ ಜತಿವಿನ್ಯಾಸ- ಹೀಗೆ ಎಲ್ಲವೂ ಪ್ರೇಕ್ಷಕರನ್ನು ರಸದೃಷ್ಟಿಯಲ್ಲಿ ಹಿಡಿದಿರಿಸುವಲ್ಲಿ ಯಶಸ್ವಿಯಾದವು. ಸಾಮಾನ್ಯವಾಗಿ ಪುರಾಣ ಸ್ಪರ್ಶ ಕೊಡಬೇಕಾದ ಅಗತ್ಯವಿದ್ದರೂ ಅದನ್ನು ಹೆಚ್ಚಾಗಿ ಕೊಡದೆ ಸಮಕಾಲೀನ ಸಮಸ್ಯೆಯನ್ನೇ ಎತ್ತಿ ತೋರಿಸುವ ವಸ್ತುವು ಇಷ್ಟರಮಟ್ಟಿಗೆ ಗೆಲ್ಲಲು ಅದರ ಒಟ್ಟು ನಿರ್ಮಾಣದ ಹಿಂದಿನ ನಿರ್ದೇಶಕರಿಗೆ ಮತ್ತು ಸಂಯೋಜಕರಿಗೆ ಅಭಿನಂದನೆ ಸಲ್ಲಲೇಬೇಕು. ಇಂದಿನ ಮಕ್ಕಳ ಶಿಕ್ಷಣದ ಹೊರೆ, ಗುರುಕುಲಕ್ರಮದ ಒಳಿತುಗಳು, ಅಂಕವೇ ಕೇಂದ್ರಿತವಾಗುತ್ತಿರುವ ವ್ಯವಸ್ಥೆ ಇತ್ಯಾದಿಯಾಗಿ ಹಲವು ಆಯಮಗಳಲ್ಲಿ ಪ್ರದರ್ಶಿತವಾದ ವರ್ಣವನ್ನು ಆರು ನೃತ್ಯ ಕಲಾವಿದರು ಪ್ರಸ್ತುತಿಪಡಿಸಿದ ರೀತಿ ಅಭಿನಂದನೀಯ.

ನಂತರದಲ್ಲಿ ಸ್ತ್ರೀ ನಿಜಜೀವನದಲ್ಲಿ ಅಂದುಕೊಳ್ಳುವ ಶಕ್ತಿ ಮತ್ತು ದೌರ್ಬಲ್ಯಗಳ ಸಂಕೇತವಾಗಿ ಸ್ತ್ರೀಶಕ್ತಿ ಎಂಬ ಏಕವ್ಯಕ್ತಿ ನೃತ್ಯರೂಪಕವನ್ನು ಪ್ರದರ್ಸಿಸಿದವರು ಡಾ. ಶೋಭಾ ಶಶಿಕುಮಾರ್. ಸ್ತ್ರೀ ಹಾಗೂ ಸ್ತ್ರೀತ್ವದ ಅಂತರಗಳ ಕುರಿತ ಈ ವಸ್ತುವು ಮನೋಜ್ಞವಾಗಿ ಹೊರಹೊಮ್ಮೆ ಸ್ತ್ರೀ ಸಬಲೀಕರಣದ ದಾರಿಯನ್ನು ಸಮರ್ಥವಾಗಿ ಗ್ರಹಿಸಿ ಪ್ರದರ್ಶಿಸಿದ ಪ್ರಯೋಗವಾಗಿ ಕಂಡುಬಂತು. ಸ್ತ್ರೀಯರು ಅವನತಿಯ ದಾರಿಯಿಂದ ಹೊರಬಂದು ಅಭಿವೃದ್ಧಿ ಪಥದತ್ತ ನಡೆಯಲು ಅವಳ ಸ್ತ್ರೀತ್ವ ಜಾಗೃತಿಯಾದರೆ ಸಾಧ್ಯ ಎಂಬ ಸಂದೇಶದೊಂದಿಗೆ ಸಮರ್ಥವಾಗಿ ಮೂಡಿಬಂತು. ಅದರಲ್ಲೂ ಮಹಿಳೆಯ ವಿಭಿನ್ನ ಮುಖಗಳನ್ನು ಪರಿಚಯಿಸಿ ಸಂಗೀತ ಮತ್ತು ಸಾಹಿತ್ಯದ ಕ್ರಮಬದ್ಧವಾದ ಯೋಜನೆಯಲ್ಲಿ ಈ ನೃತ್ಯಪ್ರದರ್ಶನ ಸಿಂಹಪಾಲು ಪಡೆಯಿತು. ಸಾಮಾನ್ಯವಾಗಿ ಸಮೂಹಪ್ರದರ್ಶನಕ್ಕೊಪ್ಪುವ ಅಭಿವ್ಯಕ್ತಿಯನ್ನೂ ಏಕವ್ಯಕ್ತಿ ಪ್ರಯೋಗವನ್ನಾಗಿ ಮಾಡಿಕೊಂಡ ಜಾಣ್ಮೆ, ನಾಟ್ಯಶಾಸ್ತ್ರದ ಮಾರ್ಗಪರಂಪರೆಗೆ ನಿಷ್ಠವಾದ ಆಂಗಿಕ ವಿನ್ಯಾಸ ಹಿಮ್ಮೇಳ ಸಹಿತವಾಗಿ ಮೂಡಿದ್ದು ಸ್ತುತ್ಯರ್ಹ. ಪುರಾಣ ಕಥೆಗಳೊಂದಿಗೆ ಅಲ್ಲಲ್ಲಿ ಹೊಂದಿಕೊಂಡು ಅದಕ್ಕೆ ಇಂದಿನ ಸಾಮಾಜಿಕ ವಸ್ತುವನ್ನೂ ಹೊಂದಿಸಿದ ಪ್ರಯೋಗವಾಗಿ ಸ್ತ್ರೀಶಕ್ತಿಯು ವಿಶಿಷ್ಟವಾದ ಸಂವೇದನೆಯನ್ನೇ ನೀಡಿತ್ತು. ಇಂದಿನ ಕಾಲಕ್ಕೆ ಒಪ್ಪುವ ಅಭಿನಯಗಳು ಇಲ್ಲಿ ವಿಶಿಷ್ಟವಾಗಿ ಕಂಡುಬಂದವು. ವರ್ಣ ಮತ್ತು ಏಕವ್ಯಕ್ತಿ ನೃತ್ಯರೂಪಕದ ಸಾಹಿತ್ಯ ಮತ್ತು ಜತಿ ಸಂಯೋಜನೆಯನ್ನು ನಟುವನಾರ್ ಪ್ರಸನ್ನ ಕುಮಾರ್ ಸಮರ್ಥವಾಗಿ ಚಿತ್ರಿಸಿದ್ದರು. ಸುಮನೋಹರವಾದ ಸಂಗೀತ ನಿರ್ದೇಶನ ಮತ್ತು ಗಾಯನ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರದ್ದಾಗಿತ್ತು. ಮೃದಂಗದಲ್ಲಿ ಲಿಂಗರಾಜು, ಕೊಳಲಿನಲ್ಲಿ ನಿತೀಶ್ ಅವರದ್ದು ಪೂರಕವಾದ ಅಭಿವ್ಯಕ್ತಿ.

ಇದರ ತರುವಾಯ ಬೇರೆ ಬೇರೆ ವಾದ್ಯಸಂಗೀತವನ್ನು ಆಯ್ದುಕೊಂಡು ಆಡಿಯೋ ರೆಕಾರ್ಡೆಡ್ ವ್ಯವಸ್ಥೆಯಲ್ಲಿ ಪ್ರದರ್ಶಿಸಿದ ನೃತ್ಯನಾಟಕ ಪಾವನಗಂಗಾ ಪತಿತ ತರಂಗ – ಗಂಗೆಯನ್ನೂ ಒಳಗೊಂಡಂತೆ ನೀರಿನ ಮಾಲಿನ್ಯ, ಪಾವಿತ್ರ್ಯದ ಕುರಿತಾಗಿ ಸೊಗಸಾಗಿ ಮೂಡಿಬಂತು. ಇತ್ತೀಚೆಗೆ ನಡೆದ ಉತ್ತರಾಖಂಡ ದುರಂತದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಈ ನೃತ್ಯನಾಟಕವು ದೀಪಕ್ ಕುಮಾರ್ ಅವರ ನೃತ್ಯನಿರ್ದೇಶನದಲ್ಲಿ ಸಮೂಹದಲ್ಲಿ ಮೂಡಿಬಂದಿತ್ತು. ಸಾಹಿತ್ಯದ ಬಳಕೆ ಅಷ್ಟಾಗಿ ಇಲ್ಲದೆ ಇದ್ದರೂ ಸಂಭಾಷಣೆಸಹಿತವಾಗಿ ನೆರವಾಗಿ ಮನಮುಟ್ಟುವಂತಿತ್ತು. ಹೊಂದಿಸಿಕೊಂಡ ಸಂಗೀತದ ಪ್ರತಿಯೊಂದು ನುಡಿತಕ್ಕೂ ಸರಿಯಾಗಿ ಆಂಗಿಕ ಮತ್ತು ಭಾವವಿನ್ಯಾಸಗಳು ಪ್ರಕಟವಾದವು. ಭರತನಾಟ್ಯದ ಚಲನೆಗಳನ್ನು ನಾಟಕೀಯ ಚಲನೆಗಳೊಂದಿಗೆ ಹೊಂದಿಸಿದ ಈ ಫ್ಯೂಷನ್‌ನ ವೇಷಭೂಷಣಗಳು ಸರಳ ಸುಂದರವಾಗಿ ಕಣ್ಮನ ಸೆಳೆದವು. ಗಂಗೆಯಾಗಿ ಅಭಿನಯಿಸಿದ ತೇಜಸ್ವಿನಿಯವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ನಡೆದ ಸಂವಾದದಲ್ಲಿ ಮುಕ್ತ ವಿಮರ್ಶೆಗಳು ನೆರೆದ ಕಲಾಸಕ್ತರು ಮತ್ತು ನೃತ್ಯಗುರುಗಳಿಂದ ಬಂದು ನೃತ್ಯದ ಆಯಾಮವನ್ನು ಕಂಡುಕೊಳ್ಳಲು ಅನುವಾದವು.

ಒಟ್ಟಿನಲ್ಲಿ ನೃತ್ಯಪ್ರಯೋಗದ ದಿಕ್ಕು ಹೇಗಿರಬೇಕು? ನೃತ್ಯವೊಂದು ಯಾವ್ಯಾವ ನೆಲೆಯಲ್ಲಿ ಬೆಳೆಯಬೇಕು ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವಂತಿತ್ತು ಈ ಕಾರ್ಯಕ್ರಮ. ಸಂಶೋಧನೆಯ ಪ್ರಶ್ನಾವಳಿಗಳು ಉತ್ತರ ನೀಡುವಲ್ಲಿ ದೀರ್ಘವೆನಿಸಿದರೂ ಸಂಶೋಧನೆಯ ಆಳ, ಅಗಲ, ಮಾದರಿಯನ್ನು ಕಂಡುಕೊಳ್ಳುವ ಒಳ್ಳೆಯ ಪ್ರಶ್ನಾವಳಿಯಾಗಿಯೇ ತೋರಿತು. ಇಂತಹ ಸದಭಿರುಚಿಯ, ವಸ್ತುನಿಷ್ಠ ಕಾರ್ಯಕ್ರಮಗಳು ನೃತ್ಯದ ಪ್ರಗತಿಯನ್ನು ತೋರುತ್ತದೆ. ಇಂತಹ ಕಾರ್ಯಕ್ರಮಗಳ ಸಂಖ್ಯೆ ಸಾವಿರವಾಗಲಿ.

ಇದೇ ಕಾರ್ಯಕ್ರಮ ಪುತ್ತೂರಿನಲ್ಲಿ ಆಗಸ್ಟ್ ೧೮, ೨೦೧೩ರಂದು ಸಂಜೆ ೪.೪೫ಕ್ಕೆ ನಡೆಯಲಿದ್ದು; ಆಸಕ್ತ ಕಲಾಪ್ರೇಕ್ಷಕರು ಸಮಾರಂಭದ ಪ್ರಯೋಜನವನ್ನು ಮತ್ತೊಮ್ಮೆ ಪಡೆ‌ಅಯಲು ಅವಕಾಶವಿರುವುದು ಸಂಸ್ಥೆ ಮತ್ತು ಸಂಶೋಧಕಿಯ ನೃತ್ಯಪ್ರೇಮಕ್ಕೆ ಮತ್ತು ಅದರ ವಿಸ್ತಾರಕ್ಕೆ ಉದಾಹರಣೆ.

 

Leave a Reply

*

code