ನೃತ್ಯ ಸಂಶೋಧನೆ ಮತ್ತು ಪ್ರಯೋಗಗಳೆಡೆಗೆ ಅರ್ಥಪೂರ್ಣ ವಿಚಾರಗೋಷ್ಠಿ – ಅಖಿಲ ಭಾರತೀಯ ನೃತ್ಯ ಸಂಶೋಧನ ಸಮ್ಮೇಳನ-೨೦೧೩ – ಒಂದು ನೋಟ

Posted On: Monday, April 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮಂಜುನಾಥ ಭಟ್. ಎಚ್, ಬೆಂಗಳೂರು.

ನಮ್ಮ ಸಂಗೀತ-ನೃತ್ಯಗಳ ಯಾವುದೇ ಒಂದು ಪ್ರಕಾರದ ಅಧ್ಯಯನವನ್ನೂ ಕೂಡ ಒಂದು ಜನ್ಮದಲ್ಲಿ ಮಾಡಿ ಮುಗಿಸುವುದು ಕಷ್ಟಸಾಧ್ಯ. ಆದ್ದರಿಂದಲೋ ಏನೋ ಭಾರತದ ಕಲೆಗಳ ಆಳ-ಅಗಲಕ್ಕೂ ಪುನರ್ಜನ್ಮದ ಬಗೆಗಿನ ಹಿಂದುಗಳ ನಂಬಿಕೆಗೂ ಸಂಬಂಧವಿದೆಯೆನಿಸುತ್ತದೆ. ಏಕೆಂದರೆ ಭರತಖಂಡದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನೃತ್ಯಾದಿ ಕಲೆಗಳು ನಿರಂತರವಾಗಿ ಬೆಳೆದುಬಂದಿವೆ. ಈಗಲೂ ಕಾಲಾನುಗುಣವಾದ ಬದಲಾವಣೆಗಳನ್ನು ಒಳಗೊಂಡು ಬೆಳೆಯುತ್ತಲೇ ಇವೆ. ವೈವಿಧ್ಯಮಯವಾದ ಈ ವಿಶಾಲದೇಶದಲ್ಲಿ ನೃತ್ಯಗಳು ಪಡೆದುಕೊಂಡ ವಿಭಿನ್ನಸ್ವರೂಪಗಳೇ ಅದ್ಭುತ, ಅಸಂಖ್ಯ. ಸಂಗೀತವನ್ನಾದರೋ ಹಿಂದೂಸ್ಥಾನಿ, ಕರ್ಣಾಟಕಿ ಎಂದು ಪ್ರಧಾನವಾಗಿ ಎರಡು ವಿಭಾಗ ಮಾಡಬಹುದು. ಅದೇ ಶಾಸ್ತ್ರೀಯನೃತ್ಯಗಳ ವಿಚಾರಕ್ಕೆ ಬಂದರೆ ಪ್ರಮುಖ ಪ್ರಕಾರಗಳೇ ಐದಾರು. ಮತ್ತಷ್ಟು ನೃತ್ಯಗಳು ಶಾಸ್ತ್ರೀಯವೋ, ಜಾನಪದವೋ ಎಂಬಂತಹ ಅಂಚಿನಲ್ಲಿವೆ. ಇವುಗಳೆಲ್ಲದಕ್ಕೂ ಶತಮಾನಗಳ ಇತಿಹಾಸವಿದೆ ಎಂಬುದನ್ನು ಕಾವ್ಯ-ಮಹಾಕಾವ್ಯಗಳು, ಶಾಸನಗಳು, ದೇವಸ್ಥಾನಗಳ ಶಿಲ್ಪ-ವಾಸ್ತುಶಿಲ್ಪಗಳು ಸಾರಿ ಹೇಳುತ್ತವೆ. ಇವುಗಳ ಒಂದೊಂದು ಕ್ಷೇತ್ರಗಳ ಅಧ್ಯಯನ-ಸಂಶೋಧನೆಗಳೇ ಅದೆಷ್ಟೋ ಸಂಶೋಧನ ಪ್ರಬಂಧಗಳ ವಸ್ತುವಾಗಬಹುದು.

ಒಂದು ಶಾಸ್ತ್ರೀಯಕಲೆ ಬೆಳೆಯುತ್ತಾ ಹೋಗುವಾಗ ಅದರ ಜೊತೆಜೊತೆಗೆ ಅಧ್ಯಯನ-ಸಂಶೋಧನೆಗಳು ವಿಮರ್ಶಿಸಿ ತಪ್ಪು-ಸರಿಗಳನ್ನು ಹೇಳುವ ಪ್ರಕ್ರಿಯೆ ಕೂಡ ನಡೆಯುತ್ತಿರುವುದು ಅಗತ್ಯ, ಅನಿವಾರ್ಯ. ಈ ನಿಟ್ಟಿನಲ್ಲಿ ನೃತ್ಯದ ಬಗೆಗಿನ ಅಧ್ಯಯನ-ಸಂಶೋಧನೆ-ಪ್ರಕಟಣೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಒಂದು ಸಂಸ್ಥೆ ನೂಪುರ ಭ್ರಮರಿ (ರಿ.) ನೃತ್ಯದ ಬಗೆಗೆ ಅದೇ ಹೆಸರಿನ ಪತ್ರಿಕೆಯೊಂದನ್ನು ಪ್ರಕಟಿಸುವ ಸಂಸ್ಥೆಯು ಸಭೆ-ಸಮ್ಮೇಳನಗಳನ್ನು ಕೂಡ ಸಂಘಟಿಸುತ್ತಿರುವುದು ಸ್ತುತ್ಯವೇ ಸರಿ. ಈಚೆಗೆ ಈ ಉಪಕ್ರಮದಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ನೃತ್ಯ ಸಂಶೋಧನೆಯನ್ನು ಕುರಿತ ರಾಷ್ಟ್ರಮಟ್ಟದ ಸಮ್ಮೇಳನವನ್ನು ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯಿಂದ ಏರ್ಪಡಿಸಲಾಗಿತ್ತು. ನೃತ್ಯದ ಇತಿಹಾಸ, ಹಳೆಯ ತಂತ್ರಗಳ ಪುನಾರಚನೆ, ಶಾಸ್ತ್ರೀಯ ಕೃತಿಗಳು, ವ್ಯಾಖ್ಯಾನ, ಸಾಮಾಜಿಕ ಪ್ರಸ್ತುತತೆ, ಸಂಗೀತ, ಜಾನಪದ ನೃತ್ಯ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ನೃತ್ಯದ ಕುರಿತು ಸಂಶೋಧನೆ-ಅಧ್ಯಯನಗಳ ಬಗೆಗಿನ ಸಮ್ಮೇಳನ-ವಿಚಾರಸಂಕಿರಣಗಳ ಮೂಲಪ್ರೇರಣೆ ನೂಪುರ ಭ್ರಮರಿಯದ್ದಾದರೂ ಈಗ ಈ ವಿಷಯದಲ್ಲಿ ಹಲವು ವಿದ್ವಾಂಸರು, ವಿದುಷಿಯರು ಆಸಕ್ತಿ ವಹಿಸಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಸಂತೋಷಕರ ಅಂಶವಾಗಿದೆ. ಇವರಲ್ಲಿ ಹಲವರು ಪ್ರತಿಭಾವಂತರು, ಅನುಭವಿಗಳಿದ್ದು ತಮ್ಮ ಪಾಲಿನ ಕೊಡುಗೆಯನ್ನು ಕೊಡಬಲ್ಲವರಾಗಿರುತ್ತಾರೆ. ಅವರಲ್ಲಿ ಕೆಲವರು ಸಮ್ಮೇಳನದ ಅಂಗವಾಗಿ ಜರುಗಿದ ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು.

ನೂಪುರ ಭ್ರಮರಿ ಪತ್ರಿಕೆಯ ಸಂಪಾದಕಿ ಮನೋರಮಾ ಬಿ.ಎನ್ ಅವರ ಪ್ರಾಸ್ತಾವಿಕ ಭಾಷಣದೊಂದಿಗೆ ಆರಂಭಗೊಂಡ ಸಮ್ಮೇಳನವನ್ನು ವಿಧಾನಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಸಮ್ಮೇಳನದ ಅಧ್ಯಕ್ಷರಾಗಿ ಇತಿಹಾಸಜ್ಞ ಡಾ.ಎಚ್.ಎಸ್.ಗೋಪಾಲರಾವ್ ಅವರು ಭಾಗವಹಿಸಿ ಸಮ್ಮೇಳನ ಭಾಷಣವನ್ನು ಮಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರು ಕರ್ನಾಟ್ಕದ ನೃತ್ಯಸಂದರ್ಭಗಳ ಕುರಿತು ಸೋದಾಹರಣ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕಳೆದ ಬಾರಿಯ ವಿಚಾರಸಂಕಿರನದ ಪ್ರಬಂಧ-ವಿಚಾರಸರಣಿಗಳನ್ನು ಸಂಕಲಿಸಿದ ಭಾರತದ ಮೊತ್ತಮೊದಲ ನೃತ್ಯ ಸಂಶೋಧನ ನಿಯತಕಾಲಿಕೆಯೆಂಬ ಹೆಗ್ಗಳಿಕೆ ಪಡೆದ ನೂಪುರಾಗಮ ಎಂಬ ಗ್ರಂಥವನ್ನು ಅನಾವರಣಗೊಳಿಸಲಾಯಿತು. ಗ್ರಂಥವನ್ನು ಅನಾವರಣಗೊಳಿಸಬೇಕಿದ್ದ ಹಿರಿಯ ಸಂಶೋಧಕ ಡಾ. ಸೂರ್ಯನಾಥ ಕಾಮತ್ ಅವರ ಅನುಪಸ್ಥಿತಿಯಲ್ಲಿ ಪ್ರೊ.ವೆಂಕಟಾಚಲಶಾಸ್ತ್ರಿಗಳು ಅನಾವರಣಗೊಳಿಸಿದರು. ಮಹಾನಟನ ಮುಖಪುಟ ಹೊತ್ತುಬಂದ ಕರ್ನಾಟಕದ ನೃತ್ಯ ಕಲಾವಿದರ ಸಂಸೋಧನ ಸಂಗ್ರಹ ಸಮೀಕ್ಷೆಯುಳ್ಳ ನೂಪುರಭ್ರಮರಿ ವಿಶೇಷ ಸಂಚಿಕೆಯು ಆಕರ್ಷಕವಾಗಿದ್ದು; ಅದನ್ನು ಲೋಕಾರ್ಪಣಗೈಯ್ಯಲಾಯಿತು. ನೂಪುರ ಭ್ರಮರಿಯ ಪರಿಷ್ಕೃತಗೊಂಡ ಅಂತರ್ಜಾಲ ತಾಣವನ್ನು ಪ್ರೊ. ಪಿ.ವಿ.ಕೃಷ್ಣಭಟ್ ಅವರು ತೆರೆದಿಟ್ಟರು. ನಂತರ ನೃತ್ಯ ಸಂಶೋಧಕರ ಚಾವಡಿಯಿಂದ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್ ಅವರಿಗೆ ನೂಪುರ ಕಲಾ ಕಲಹಂಸ ಎಂಬ ಬಿರುದಿನೊಂದಿಗೆ ನೀಡಲಾಯಿತು. ನೃತ್ಯ ಸಂಶೋಧಕರ ಚಾವಡಿಯ ಶೈಕ್ಷಣಿಕ ವಿಭಾಗ ಮುಖ್ಯಸ್ಥೆ ಡಾ. ಕರುಣಾ ವಿಜಯೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ನೂಪುರ ಭ್ರಮರಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಜಿ.ನಾರಾಯಣ ಭಟ್ ಮತ್ತು ನೃತ್ಯ ಸಂಶೋಧಕರ ಚಾವಡಿಯ ಪ್ರದರ್ಶನ ವಿಭಾಗ ಮುಖ್ಯಸ್ಥೆ ಡಾ.ಶೋಭಾ ಶಶಿಕುಮಾರ್ ಉಪಸ್ಥಿತರಿದ್ದರು. ಹೆಸರಾಂತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್ ಅವರ ಭಾಷಣವನ್ನು ಅವರ ಅನುಪಸ್ಥಿತಿಯಲ್ಲಿ ಬಿತ್ತರಿಸಲಾಯಿತು.

ನಂತರದಲ್ಲಿ ನಡೆದ ಪ್ರಬಂಧ ಮಂಡನಾ ಗೋಷ್ಠಿಗಳಲ್ಲಿ ಪ್ರಪ್ರಥಮವಾಗಿ ಡಾ.ಶೋಭಾ ಶಶಿಕುಮಾರ್ ಅವರು ನಾಟ್ಯ ಮತ್ತು ನೃತ್ಯಪದಗಳ ವಿಶ್ಲೇಷಣೆ ನಡೆಸಿದರು. ನಾಟ್ಯದಲ್ಲಿ ನೃತ್ಯ, ಸಂಗೀತ, ಅಭಿನಯ, ವೇದಿಕೆ ನಿರ್ವಹಣೆ ಎಲ್ಲವೂ ಸೇರಿದ್ದು ಒಟ್ಟಾಗಿ ಇದು ರಸದತ್ತ ಚಲಿಸುತ್ತದೆ. ಭರತನೇ ತಿಳಿಸುವಂತೆ ನೃತ್ತದಲ್ಲಿ ಅಂಗಚಲನೆಯೇ ಪ್ರಧಾನ. ಆದರೆ ಅದು ನೃತ್ಯ ಎನಿಸಬೇಕಾದರೆ ರಸ ಇರಲೇಬೇಕು. ಹೀಗೆ ಭಾವಸಹಿತ ಮತ್ತು ಭಾವರಹಿತ ಎಂಬೆರಡು ವಿಧಗಳಿವೆ. ದಶರೂಪಕಗಳೊಳಗೆ ಅಡಗಿದ್ದ ನೃತ್ಯ ಉಪರೂಪಕವಾಗಿ ಬಂದು ಸಂಗೀತದ ಪ್ರಮಾಣ ಅಧಿಕವಾಯಿತು. ಈ ಬದಲಾವಣೆಗೆ ವಿಷಾದ ಸಲ್ಲದು. ಬದಲಾಗಿ ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಭರತನ ಕಾಲದಲ್ಲಿ ಮುಖ್ಯಸ್ಥಾನದಲ್ಲಿದ್ದ ಆಹಾರ್ಯ ಇಂದು ಕೊನೆಯಲ್ಲಿವೆ ಎಂದು ವಿವರಿಸಿದ ಅವರು ಲೋಕಧರ್ಮಿ ಮತ್ತು ನಾಟ್ಯಧರ್ಮಿಗಳು ನೃತ್ಯದಲ್ಲಿ ಹೊಂದಿರುವ ಸ್ಥಾನವನ್ನು ತಿಳಿಸಿ ರಸೋತ್ಪತ್ತಿಯಲ್ಲಿ ಎರಡು ಅನಿವಾರ್ಯ ಎಂದು ಹೇಳಿದರು. ಡಾ. ಶೋಭಾ ಅವರ ಪ್ರಬಂಧದಲ್ಲಿ ವಿದ್ವತ್ತು, ಅಧ್ಯಯನ-ಅನುಭವಗಳು ಮೇಳೈಸಿದ್ದವು.

ನೂಪುರ ಭ್ರಮರಿ ಸಂಸ್ಥೆಯ ಮುಖ್ಯಸ್ಥೆ ಮನೋರಮಾ ಬಿ.ಎನ್ ರವರು ಹಿಮ್ಮೇಳ/ಪಕ್ಕವಾದ್ಯದ ವಿಕಾಸ ಮತ್ತು ರಂಗಪರಿವಾರ ಎನ್ನುವ ವಿದ್ವತ್ಪೂರ್ಣ ಪ್ರಬಂಧವನ್ನು ಮಂಡಿಸಿದರು. ಮೊದಲೆಲ್ಲಾ ಪಾತ್ರವು (ನರ್ತಕಿ) ರಂಗದ ಮಧ್ಯದಲ್ಲಿದ್ದರೆ ಹಿಮ್ಮೇಳ ಹಿಂಭಾಗದಲ್ಲಿರುತ್ತಿತ್ತು. ವೇದಿಕೆಯನ್ನು ಖಾಲಿ ಬಿಡಬಾರದೆನ್ನುವ ಶಿಷ್ಟಾಚಾರವಿತ್ತು. ಯಕ್ಷಗಾನದಲ್ಲಿ ಈಗಲೂ ಇದೇ ಪದ್ಧತಿಯಿದೆ. ದೇವರು ಮತ್ತು ರಾಜರ ಮುಂದೆ ಕುಳಿತಿರಬಾರದೆಂಬ ಕಾರಣದಿಂದ ಹಿಂದೆ ಪಕ್ಕವಾದ್ಯದವರು ನಿಂತೇ ಇರುತ್ತಿದ್ದರು. ಪಾತ್ರಗಳು ಬೆನ್ನುಹಾಕಿ ರಂಗಪ್ರವೇಶ ಮಾಡುವುದಾಗಲೀ, ಸಂಗೀತ ಪ್ರಾರಂಭಕ್ಕೂ ಮುಂಚೆ ಮೊದಲೇ ಬಂದು ರಂಗದಲ್ಲಿ ಬಂದು ಫೋಸು ಕೊಡುವಂತಹ ಜಾಯಮಾನವಿರಲಿಲ್ಲ. ಯಕ್ಷಗಾನದಲ್ಲಿ ಈಗಲೂ ವಾದ್ಯಗಳ ವಾದನದ ಬಳಿಕವೇ ಪಾತ್ರಗಳು ಪ್ರವೇಶಿಸುತ್ತವೆ ಎಂದು ತಿಳಿಸಿದರು. ಹಿಂದೆ ಹಿಮ್ಮೇಳದ ಗಾತ್ರ ದೊಡ್ಡದಿತ್ತು; ಹಿಮ್ಮೇಳದ ಗಾತ್ರದ ಪ್ರಕಾರ ಕುಟಿಲ, ಮಧ್ಯಮ, ಕನಿಷ್ಠ ಎನ್ನುವ ವಿಭಜನೆಯಿತ್ತು. ಕಾಲಕ್ರಮೇಣ ಹಿಮ್ಮೇಳದ ಗಾತ್ರ ಎಂಟುಜನಕ್ಕೆ ಇಳಿಯಿತು. ಹಿಮ್ಮೇಳದವರಿಗೂ ವೇಷಭೂಷಣದ ಕ್ರಮವಿತ್ತು. ಶ್ರುತಿಗೆ ಕಹಳೆಯನ್ನು ಬಳಸುವ ಉಲ್ಲೇಖವೂ ಕಂಡುಬಂದಿದೆ. ಆದರೆ ರುಕ್ಮಿಣಿದೇವಿ ಅರುಂಡೇಲ್ ಅವರು ಪಕ್ಕವಾದ್ಯಕ್ಕೆ ಪಿಟೀಲನ್ನು ಸೇರಿಸಿದರು. ಪಾತ್ರದ ಪ್ರವೇಶಕ್ಕೆ ಜವನಿಕೆಯನ್ನು(ಪರದೆ)ಬಳಸುವ ಕ್ರಮ ನೃತ್ಯದಲ್ಲಿ ಮರೆಯಾಗಿ ಯಕ್ಷಗಾನದಲ್ಲಷ್ಟೇ ಉಳಿದಿದೆ ಎಂಬಿತ್ಯಾದಿ ಹಲವು ಅಂಶಗಳನ್ನು ಮನೋರಮಾ ಪ್ರಸ್ತಾಪಿಸಿ ಹಿಮ್ಮೇಳ ನಡೆದುಬಂದ ದಾರಿಯನ್ನು ಖಚಿತವಾಗಿ ಗುರುತಿಸಿದರು.

ಬೆಂಗಳೂರಿನ ಪದ್ಮಿನಿ ಶ್ರೀಧರ್ ಅವರು ಅಷ್ಟನಾಯಿಕೆಯರಿಗೆ ಸಂಬಂಧಿಸಿ ರಾಗ ಮತ್ತು ರಸ ಎನ್ನುವ ಪ್ರಬಂಧವನ್ನು ಪ್ರಸ್ತುತಪಡಿಸಿದರು. ವಾಸಕಸಜ್ಜಾ, ಖಂಡಿತಾ ಮತ್ತು ವಿರಹೋತ್ಕಂಠಿತಾ ನಾಯಿಕೆಯರನ್ನು ಅವರು ಸೋದಾಹರಣವಾಗಿ ಪರಿಚಯಿಸಿ ನರ್ತಿಸಿದರು. ಹಾಡುಗಾರಿಕೆಯಲ್ಲಿ ವಿದ್ವಾನ್ ರಾಹುಲ್ ರವೀಂದ್ರನ್ ಸಹಕರಿಸಿದ್ದರು. ಕೋಲ್ಕತ್ತಾದಿಂದ ಆಗಮಿಸಿದ ಕಾಬೇರಿ ಸೇನ್ ಅವರು ಒಡಿಸ್ಸಿ ಮತ್ತು ಮಣಿಪುರಿ ನೃತ್ಯಗಳ ಹೋಲಿಕೆ-ವ್ಯತ್ಯಾಸಗಳ ಕುರಿತು ಉಪನ್ಯಾಸವಿತ್ತರು. ಎರಡೂ ನೃತ್ಯಗಳ ಮೇಲೆ ಚೈತನ್ಯರ ವೈಷ್ಣವ ಪಂಥದ ಪ್ರಭಾವವಿದೆ. ಹಿಂದೆ ಎರಡರಲ್ಲೂ ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುತ್ತಿದ್ದರು. ತ್ರಿಭಂಗಿ ಎರಡರಲ್ಲೂ ಇದ್ದು; ಕೃಷ್ಣ-ರಾಧೆಯರ ಸಖೀಭಾವ ಸಮನಾಗಿದೆ. ಸಂಕೀರ್ತನ, ರಾಸಲೀಲೆಗಳು ಪ್ರಮುಖ ಭಾಗವಾಗಿದೆ.ಮಣಿಪುರಿಯಲ್ಲಿ 8ರ ಅಕಾರದ ಚಲನೆ ಹೆಚ್ಚಾಗಿದೆ. ಎರಡೂ ಪ್ರಕಾರಗಳು ದೇವಳದ ರಂಗಮಂಟಪದಿಂದ ವೇದಿಕೆಗೆ ಬಂದಂತವು ಎಂದು ಸಂಕ್ಷಿಪ್ತವಾಗಿ ವಿವರಿಸಿದರು.

ಬೆಂಗಳೂರಿನ ದ್ವರಿತಾ ವಿಶ್ವನಾಥ ಅವರು ಅನ್ಯಸಂಭೋಗದುಃಖಿತಾ ಎಂಬ ನಾಯಿಕೆಯ ಕುರಿತಾಗಿ ಪ್ರಬಂಧ ಮಂಡಿಸಿ; ತನ್ನ ನಾಯಕ(ಪ್ರಿಯಕರ) ಅನ್ಯಸ್ತ್ರೀಯನ್ನು ಕೂಡಿದ್ದಾನೆಂಬ ದುಃಖಕ್ಕೆ ಗುರಿಯಾದ ಈ ನಾಯಿಕೆಯ ಸೂಕ್ಷ್ಮ ವ್ಯತ್ಯಾಸಗಳನ್ನು ವಿಶ್ಲೇಷಿಸಿದರು. ಬೆಂಗಳೂರಿನ ಪದ್ಮಿನಿ ಕುಮಾರ್ ಅವರು ವಿವಿಧ ಶಾಸ್ತ್ರಗ್ರಂಥಗಳ ಹಸ್ತ-ಮುದ್ರೆಗಳ ಸಾಮ್ಯ-ವೈಷಮ್ಯಗಳನ್ನು ಚಿಂತನಾರ್ಹವಾಗಿ ತಮ್ಮ ಪ್ರಬಂಧಮಂಡನೆಯಲ್ಲಿ ಒದಗಿಸಿಕೊಟ್ಟರು. ಗೋವಾದಿಂದ ಆಗಮಿಸಿದ್ದ ದೀಪ್ತಾಸುಂದರಂ ಅವರುತಂಜಾವೂರಿನ ಬೃಹತ್ ದೇವಾಲಯದಲ್ಲಿ ತೇವಾರಂ ಹಾಡುಗಳ ಇತಿಹಾಸ  ಎಂಬ ತಮ್ಮ ಪ್ರಬಂಧದಲ್ಲಿ ಐತಿಹಾಸಿಕವಾದ ಸಾಕ್ಷ್ಯಗಳನ್ನು ಒದಗಿಸಿ ಶಿವನ ಪ್ರಾರ್ಥನಾರೂಪದ ತೇವಾರಂ ಪದ್ಯಗಳನ್ನು ನೃತ್ಯಕಾರ್ಯಕ್ರಮಗಳಲ್ಲಿ ಪರಿಗಣಿಸಿ ನರ್ತಿಸುವ ಪರಿಪಾಠ ರೂಢಿಗೆ ಬರಬೇಕು ಎಂದು ಒತ್ತಾಯಿಸಿ ತೇವಾರಂ ಅಭಿನಯವನ್ನೂ ರಂಗದಲ್ಲಿ ಮಾಡಿದರು. ಯು‌ಎಸ್‌ಎಯ ಸ್ವಾತಿ ಸುಬ್ರಹ್ಮಣ್ಯಂ ಅವರ ಗೈರುಹಾಜರಿಯಿಂದ ನೃತ್ಯದ ವ್ಯಭಿಚಾರೀಭಾವಗಳ ಕುರಿತ ಅವರ ಪ್ರಬಂಧ ಮಂಡಿತವಾಗಲಿಲ್ಲ.

ಭರತನಾಟ್ಯದಲ್ಲಿ ಪುರುಷಾಭಿನಯದ ಅವಕಾಶ ಮತ್ತು ಕೊರತೆಗಳ ಕುರಿತು ಪ್ರಬಂಧ ಮಂಡಿಸಿದ ಬೆಂಗಳೂರಿನ ಎ.ಎಸ್.ಸುಧೀರ್ ಕುಮಾರ್; ಈಗ ಪುರುಷರಿಗೆ ನರ್ತನದಲ್ಲಿ ಅವಕಾಶಗಳು ಗುಣಾತ್ಮಕವಾಗಿ ಕುಸಿಯುತ್ತಿವೆ. ಮೊದಲಿನ ಕ್ರಮ, ಮೂಲರೂಪ ಈಗ ಯಾವುದರಲ್ಲೂ ಉಳಿದಿಲ್ಲ. ವೀರಗಾಸೆ, ಡೊಳ್ಳುಕುಣಿತ ಇತ್ಯಾದಿಯಾಗಿ ಪುರುಷರ ಕುಣಿತಗಳಿಗೂ ಸ್ತ್ರೀಯರು ಪ್ರವೇಶಿಸಿರುವುದು ಪ್ರಶಂಸನಾರ್ಹವಾದರೂ ಔಚಿತ್ಯದ ಪ್ರಶ್ನೆ ಸಾಕಷ್ಟು ಎಡತಾಕುತ್ತಿದೆ. ಹಾಗೆ ನೋಡಿದರೆ ಪುರುಷರಿಗೂ ಕೆಲವು ನೃತ್ಯಗಳು ವರ್ಜ್ಯವಿದ್ದವು ಎಂದರು. ಭರತನಾಟ್ಯ ಕಲಿಯುತ್ತಿರುವ ಹುಡುಗ-ಹುಡುಗಿಯರ ಸಂಖ್ಯೆಯಲ್ಲಿನ ಭಾರೀ ಅಂತರವನ್ನು ಉಲ್ಲೇಖಿಸಿದ ಅವರು ನೃತ್ಯವನ್ನು ಪುರುಷ ಮತ್ತು ಸ್ತ್ರೀಯರಿಗೆ ವಿಭಿನ್ನ ಹಾದಿಯಲ್ಲಿ ಕಲಿಸಬೇಕು. ಇಬ್ಬರೂ ಒಂದೇ ರೀತಿ ಭರತನಾಟ್ಯವನ್ನು ನಿರ್ವಹಿಸುವುದು ಸರಿಯಲ್ಲ. ನೃತ್ಯದ ಸಾಹಿತ್ಯವು ನಾಯಿಕಾಪ್ರಧಾನವಾಗಿದ್ದು ಮಕ್ಕಳಿಗೆ ಭಾರ ಎನಿಸುವಂತಿವೆ. ಅವರಿಗೆ ಪ್ರತ್ಯೇಕ ಬೋಧನೆ, ಪಾಠಪಟ್ಟಿ ಇರಬೇಕೆಂದು ಸಲಹೆ ನೀಡಿದರು.

ಪುತ್ತೂರಿನ ದೀಪಕ್ ಕುಮಾರ್ ಅವರು ತುಳುನಾಡಿನಲ್ಲಿ ದೇಶೀ ನೃತ್ಯದ ಪರಂಪರೆ(ವಿಕಾಸ) ಎಂಬ ವಿಷಯದ ಪ್ರಬಂಧ ಮಂಡಿಸಿ ತುಳುನಾಡಿನಲ್ಲಿ ಭೂತಕೋಲ, ನಾಗನೃತ್ಯ, ಯಕ್ಷಗಾನಗಳಲ್ಲದೆ ದೇವದಾಸಿಯರು ಆಚರಿಸುತ್ತಿದ್ದ ನೃತ್ಯವಿದ್ದಿತ್ತು. ಸ್ತ್ರೀಪ್ರಧಾನ ಕುಟುಂಬಗಳಾಗಿದ್ದ ಇವರಲ್ಲಿ ಕೂಚೆ, ಗೆಜ್ಜೆಪೂಜೆ, ತಟ್ಟೆಪೂಜೆಯ ಸಂಪ್ರದಾಯವಿತ್ತು. ಬಾರ್ಕೂರು, ಬಸ್ರೂರು, ಹಿರಿಯಡ್ಕ, ಪುತ್ತಿಗೆಗಳಲ್ಲಿ ಮಾಲೆಯವರು, ಪಾತ್ರದವರು ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಇವರ ಮನೆಮಾತು ತೆಲುಗು ಆಗಿತ್ತು. ಧರ್ಮಸ್ಥಳ ಕ್ಷೇತ್ರದಲ್ಲಿ ಯಕ್ಷಗಾನ ಮೇಳದಂತೆಯೇ ಪಾತ್ರದ ಮೇಳವೂ ಅಸ್ತಿತ್ವದಲ್ಲಿತ್ತು. ಹೀಗೆ ದೇವಳದ ನವರಂಗದಲ್ಲಿ ನಡೆಯುತ್ತಿದ್ದ ನೃತ್ಯವಿಧಿಗಳು ಈಗ ಮರೆಯಾಗಿವೆ. ಇಂತವರ ನೃತ್ಯಗಳು ಭರತನಾಟ್ಯದ ಮೂಗೂರು ಪದ್ಧತಿಗೆ ಹತ್ತಿರವಿತ್ತು ಎಂದು ಉಲ್ಲೇಖಿಸಿದರು.

ಬೆಂಗಳೂರಿನ ಶಾಲಿನಿ ವಿಠಲ್ ಅವರು ಪಂಡರೀವಿಠಲನ ದೂತೀಕರ್ಮಪ್ರಕಾಶದಲ್ಲಿ ಕಾಣುವ ದೂತೀವೈವಿಧ್ಯದ ಕುರಿತು ಪ್ರಬಂಧ ಮಂಡಿಸಿ; ದೂತೀಪರಿಕಲ್ಪನೆ ಬೆಳೆದುಬಂದ ಬಗೆಯನ್ನು, ೨೧ ಬಗೆಯ ದೂತಿಸ್ವಭಾವವನ್ನು ಸಮರ್ಥವಾಗಿ ಪರಿಚಯಿಸಿದರು. ಪ್ರಬಂಧ ಮಂಡಿಸುವ ಪೂರ್ವದಲ್ಲಿ ಮಂಡನಕಾರರನ್ನು ಸಾಂಕೇತಿಕವಾದ ಲೋಹದ ಬ್ಯಾಡ್ಜ್ ಮೂಲಕ ಗೌರವಿಸಿದ್ದು ವಿಶಿಷ್ಟವಾಗಿತ್ತು. ಕಾರ್ಯಕ್ರಮ ನಿರೂಪಿಸಿದ ಡಾ. ಕರುಣಾ ವಿಜಯೇಂದ್ರ ಅವರು ಸಮಯ ಅಭಾವದ ಕಾರಣವನ್ನು ಮುಂದಿಟ್ಟು ಕರ್ನಾಟಕದ ಶಾಲಭಂಜಿಕಾ ಶಿಲ್ಪಗಳು ಎಂಬ ತಮ್ಮ ಪ್ರಬಂಧವನ್ನು ಮಂಡಿಸಲಿಲ್ಲ. ನಂತರ ಉಪಸ್ಥಿತರಿದ್ದ ಹಿರಿಯ ವಿದ್ವಾಂಸ-ವಿದುಷಿಯರ ಪಾಲ್ಗೊಳ್ಳುವಿಕೆಯಲ್ಲಿ ಸಮೀಕ್ಷಾ ಕಾರ್ಯಕ್ರಮವು ಜರುಗಿತು. ಹಿರಿಯ ನೃತ್ಯಗುರುಗಳಾದ ಬಿ.ಕೆ.ವಸಂತಲಕ್ಷ್ಮಿ, ಭಾನುಮತಿ ಮತ್ತು ಡಾ. ಮಾಲಿನಿ ರವಿಶಂಕರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಮ್ಮೇಳನದ ಸಂಜೆಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಲೋಕಸಭಾ ಸದಸ್ಯ ಅನಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಗೋವಿಂದ ಎಂ.ಕಾರಜೋಳ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಕಲೆಯ ಕುರಿತು ಅನೇಕ ಚಿಂತನಾರ್ಹ ವಿಷಯಗಳನ್ನು ತಿಳಿಸಿ ನೂಪುರ ಭ್ರಮರಿ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿ ಸಹಕಾರದ ಭರವಸೆಗಳನ್ನು, ಯಥೋಚಿತ ಮಾರ್ಗದರ್ಶನವನ್ನೂ ನೀಡಿದರು. ಬೆಂಗಳೂರಿನ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಗೆ ವಿಮರ್ಶಾ ವಾಙ್ಮಯಿ ಎಂಬ ಬಿರುದನ್ನಿತ್ತು ವರ್ಷದ ಶ್ರೇಷ್ಠ ವಿಮರ್ಶಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅದರೊಂದಿಗೆ ರಾಜ್ಯಮಟ್ಟದ ನೃತ್ಯ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಮೂಡಿಬಂದ ಈ ಸಮಾರೋಪ ಸಂಜೆಯು ಮನೋರಮಾ ಬಿ. ಎನ್ ಅವರ ನಿರೂಪಣೆಯಲ್ಲಿ ಮತ್ತಷ್ಟು ಕಳೆಗಟ್ಟಿತು.

ಇಡೀ ದಿನದ ಕಾರ್ಯಕ್ರಮಗಳಿಗೆ ಕಲಶವಿಟ್ಟಂತೆ ಸುಂದರೀ ಸಂಜೆ ಎಂಬ ಅಪೂರ್ವ ಕಲಾಕಾರ್ಯಕ್ರಮವು ದಿವಂಗತ ಸುಂದರೀ ಸಂತಾನಂ ಅವರ ಜ್ಞಾಪಕಾರ್ಥವಾಗಿ ಜರುಗಿತು. ನಾಟ್ಯಶಾಸ್ತ್ರವನ್ನಾಧರಿಸಿದ ಚಿತ್ರ ಪೂರ್ವರಂಗ ವೆಂಬ ನೃತ್ಯಪ್ರಸ್ತುತಿ ಮತ್ತು ಶತಾವಧಾನಿ ಡಾ. ಆರ್. ಗಣೇಶರ ಸಾಹಿತ್ಯಾಧಾರಿತ ನವರಸಕೃಷ್ಣ ಎಂಬ ನೃತ್ಯ ಕಾರ್ಯಕ್ರಮಗಳು ಅಧ್ಯಯನ, ಸಂಶೋಧನೆಗಳ ಫಲಶ್ರುತಿಯೆಂಬಂತೆ ಮೂಡಿಬಂತು. ನಾಟ್ಯಶಾಸ್ತ್ರದ ಚಿತ್ರ ಪೂರ್ವರಂಗದಲ್ಲಿ ಸೂತ್ರಧಾರನಾಗಿ ಪದ್ಮಿನಿ ಶ್ರೀಧರ್, ಪರಿಪಾರ್ಶ್ವಕನಾಗಿ ವಿದ್ಯಾರಾವ್, ವಿದೂಷಕನಾಗಿ ದೀಕ್ಷಾ ಶಾಸ್ತ್ರಿ ನರ್ತಿಸಿದರು. ಅಸಾರಿತಾ ಎಂಬ ಭಾಗದಲ್ಲಿ ಅನುರಾಧಾ ಲೋಕೇಶ್, ಮೇಘಾ ಕೃಷ್ಣ, ಸಂಗೀತಾ ಅಯ್ಯರ್, ಶುಭದಾ ಪ್ರಭಾಕರ್‌ರವರು ಡಾ. ಶೋಭಾ ಅವರ ನಿರ್ದೇಶನದಂತೆ ಕರಣ, ಚಾರಿಯುಕ್ತವಾದ ನರ್ತನಗೈದರು. ಈ ನೃತ್ಯಪ್ರಸ್ತುತಿಯ ತಾಂತ್ರಿಕ ಮತ್ತು ಸಂಗೀತ ಸಂಯೋಜನೆ ಡಾ. ಕರುಣಾ ವಿಜಯೇಂದ್ರ ಅವರದ್ದಾಗಿತ್ತು. ನಂತರದಲ್ಲಿ ಡಾ. ಶೋಭಾ ಶಶಿಕುಮಾರ್ ಅವರ ಸಾರಥ್ಯದಲ್ಲಿ ಮೂಡಿಬಂದ ನವರಸಕೃಷ್ಣ ರೂಪಕವು ನೃತ್ಯರೂಪಕದ ನಿರ್ದೇಶನ ಸಾಧ್ಯತೆ, ಗುಣಮಟ್ಟಗಳಿಗೆ ಕನ್ನಡಿ ಹಿಡಿದು ನೋಡುಗರಿಗೆ ಧನ್ಯತೆಯನ್ನು ಒದಗಿಸಿಕೊಟ್ಟು ಬಹುಕಾಲ ನೆನಪಲ್ಲುಳಿಯುವಂತೆ ಮಾಡಿತು. ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ಬಾಲಸುಬ್ರಹ್ಮಣ್ಯ ಶರ್ಮ, ನಟುವಾಂಗ-ಸೂರ್ಯರಾವ್, ಮೃದಂಗದಲ್ಲಿ ಲಿಂಗರಾಜು, ಕೊಳಲಿನಲ್ಲಿ ವೇಣುಗೋಪಾಲ್, ವೀಣೆಯಲ್ಲಿ ಶಂಕರ್ ರಾಮನ್ ಸೊಗಸಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು.

ಒಟ್ಟಿನಲ್ಲಿ ಸಮ್ಮೇಳನ ಯಶಸ್ವಿಯೆನಿಸಿತಾದರೂ ಭಾಗವಹಿಸಿದ ಆಸಕ್ತರ ಸಂಖ್ಯೆ ಸಾಲದು. ಸಂಘಟನೆ ಸಮರ್ಥವಾಗಿತ್ತಾದರೂ ಅದರಿಂದ ಪ್ರಯೋಜನ ಪಡೆದುಕೊಳ್ಳುವ ಕಲಾವಿದರು ಇನ್ನಷ್ಟಿದ್ದರೆ ಕಲಾ ಸಂಶೋಧನೆ, ಅಧ್ಯಯನ, ಪ್ರಯೋಗದ ಹಲವು ಮುಖಗಳು ಇನ್ನಷ್ಟು ವಿಸ್ತಾರವಾಗಿ ತೆರೆದುಕೊಳ್ಳುತ್ತಿದ್ದವು. ಆದಾಗ್ಯೂ ಬಹುತೇಕ ಜಡವಾಗಿರುವ ನೃತ್ಯಕ್ಷೇತ್ರಕ್ಕೆ ಈ ಸಮ್ಮೇಳನ ಸಂಚಲನ ಮೂಡಿಸಿರುವುದಂತೂ ನಿಜ.

(ಲೇಖಕರು ವಿಮರ್ಶಕರು, ಬರೆಹಗಾರರು)

Leave a Reply

*

code