‘ನೂಪುರ ಭ್ರಮರಿ’ಯ ವರ್ಷದ ನೃತ್ಯ ವಿಮರ್ಶಕ ಪುರಸ್ಕಾರ-2012: ‘ವಿಮರ್ಶಾ ವಾಙ್ಮಯಿ’ ಬಿರುದಿನೊಂದಿಗೆ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರಿಗೆ.

Posted On: Friday, February 8th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನರ್ತನ ಮತ್ತು ಪ್ರದರ್ಶಕ ಕಲೆಗಳ ಕುರಿತ ಪ್ರತಿಷ್ಠಿತ ದ್ವೈಮಾಸಿಕ ಮತ್ತು ಪ್ರತಿಷ್ಠಾನ ‘ನೂಪುರ ಭ್ರಮರಿ’ – ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ನಾಡಿನಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಿದ ಪ್ರಶಸ್ತಿಯಿದು. ವಿಮರ್ಶೆಯ ಕ್ಷೇತ್ರಕ್ಕೆ ಯೋಗ್ಯ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮೌಲ್ಯಯುತ ನಿರ್ಣಯ ಮತ್ತು ಮೌಲ್ಯಮಾಪನದಿಂದ ಪ್ರಶಸ್ತಿಯು ಪ್ರತಿಷ್ಠಿತವೆಂದೂ ಮತ್ತು ಕಳೆಗುಂದುತ್ತಿರುವ ವಿಮರ್ಶೆಯ ಕ್ಷೇತ್ರವನ್ನು ಬಲಪಡಿಸುವಲ್ಲಿ ಇಟ್ಟಿರುವ ಉತ್ತಮ ಹೆಜ್ಜೆಯೆಂದು ಗುರುತಿಸಲ್ಪಟ್ಟಿದೆ. ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶರು ಈ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಮತ್ತು ಅವರೊಂದಿಗೆ ಯೋಗ್ಯ ನಿರ್ಣಾಯಕರು ಪ್ರಶಸ್ತಿಯ ಸಮಿತಿಯಲ್ಲಿದ್ದಾರೆ.

೨೦೧೧ನೇ ಸಾಲಿನ ಪ್ರಶಸ್ತಿ ಅನನ್ಯ ಪತ್ರಿಕೆಯ ಸಂಚಾಲಕಿ-ವಿಮರ್ಶಕಿ ಪ್ರಿಯಾ ರಾಮನ್ ಹಾಗೂ ೨೦೧೨ನೇ ಸಾಲಿನ ಪ್ರಶಸ್ತಿ ಉಡುಪಿಯ ಕಲಾವಿಮರ್ಶಕಿ ಪ್ರತಿಭಾ ಸಾಮಗ ಅವರಿಗೆ ಈ ಪ್ರಶಸ್ತಿ ಸಂದಿರುತ್ತದೆ.

 ೨೦೧೩ನೇ ಸಾಲಿನಲ್ಲಿ ಈ ಪ್ರಶಸ್ತಿಯಿಂದ ಪುರಸ್ಕೃತಗೊಳ್ಳಲಿರುವವರು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.

ಸದ್ಯ ಬೆಂಗಳೂರಿನ ಜೆಪಿನಗರ ವಾಸಿಯಾದರೂ ಮೂಲತಃ ಕರಾವಳಿಯ ಕುಂದಾಪುರದ ಕೊರ್ಗಿ ಎಂಬ ಊರಿನವರು. ಉಪಾಧ್ಯಾಯರ ಮನೆತನ ಸಂಸ್ಕೃತ- ಕನ್ನಡ ಭಾಷಾಪ್ರೌಢಿಮೆಗೆ ಹೆಸರುವಾಸಿ. ತಂದೆ ತಾಯಂದಿರು ದಿವಂಗತರಾದ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಕಲ್ಯಾಣಿ. ಕಳೆದ ವರುಷವಷ್ಟೇ ನಮ್ಮನ್ನಗಲಿದ ಹೆಸರಾಂತ ಸಂಸ್ಕೃತ ವಿದ್ವಾಂಸ, ದ್ವಿವೇದಿ, ಯಕ್ಷಗಾನ ಅರ್ಥದಾರಿ/ವಿಮರ್ಶಕ/ಕವಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ಇವರ ಅಣ್ಣ. ನಿವೃತ್ತ ಬಿ‌ಎಸ್‌ಎನ್‌ಎಲ್ ಉದ್ಯೋಗಿಯಾಗಿರುವ ಕೊರ್ಗಿಯವರಿಗೆ ಸಾಹಿತ್ಯ ಸಂಗೀತ ನಾಟಕ ನೃತ್ಯ ಯಕ್ಷಗಾನಗಳು ಆಸಕ್ತಿಯ ಕ್ಷೇತ್ರಗಳು. ಮಡದಿ ಲಕ್ಷ್ಮಿ ಪತಿಯ ಸಾಹಿತ್ಯ, ಸಂಗೀತ, ನೃತ್ಯಾದಿ ಎಲ್ಲ ಸಂದರ್ಭವಿಶೇಷಗಳಲ್ಲೂ ಸಮಭಾಗಿ, ಸಹಚಾರಿಣಿ, ಸರಳೆ, ದಿಟ್ಟೆ, ಸಹೃದಯಿ. ಮಗ ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ (ಸೂರ್ಯ) ಚಾರ್ಟಡ್ ಅಕೌಂಟೆಂಟ್ ಓದಿದ್ದರೂ; ಆ ವೃತ್ತಿಯನ್ನು ಕೈಬಿಟ್ಟು ಮೃದಂಗಾದಿ ವಾದ್ಯಗಳಲ್ಲಿ ತೊಡಗಿಸಿಕೊಂಡು, ಸಂಖ್ಯಾಬಂಧವೆಂಬ ಅವಧಾನದ ಒಂದು ವಿಭಾಗದ ಪೃಚ್ಛಕತ್ತ್ವದಲ್ಲಿಯೂ ಹೆಸರುವಾಸಿಯಾದ ಕಲಾತಪಸ್ವಿ. ಬೆಂಗಳೂರಿನಂತಹ ಪ್ರದೇಶಗಳಲ್ಲಿಯೂ ಲಾಭದ ಲೆಕ್ಕಾಚಾರವನ್ನು, ಜೀವನವ್ಯವಸ್ಥೆಯ ತಳುಕುಬಳುಕುಗಳನ್ನು ಬದಿಗಿಟ್ಟು ಸಹೃದಯೀ ಸಮಾಲೋಚನೆಗಳಿಗೆ ಓಡಾಡುವ ಇಡೀ ಸಂಸಾರ ; ಮನೆಯ ಕೆಳಮಹಡಿ ಪೂರ್ತಾ ತಮ್ಮ ಆಲೋಚನೆಯ ಯಕ್ಷಗಾನ, ಸಂಗೀತ, ನೃತ್ಯ, ತಾಳಮದ್ದಳೆ, ಅವಧಾನದಂತಹ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂಬಂತೆಯೇ ಪುಟ್ಟ ವೇದಿಕೆ, ಸಭಾಂಗಣವನ್ನು, ಮೇಲ್ಮಹಡಿಯಲ್ಲಿ ಗ್ರಂಥಾಲಯವನ್ನೂ ಮೀಸಲಿರಿಸಿದೆ. ಒಟ್ಟಿನಲ್ಲಿ ಇಡಿಯ ಸಂಸಾರವೇ ಕಲೆಯ ಬೇರೆ ಬೇರೆ ಆಯಾಮಗಳಲ್ಲಿ ಗುರುತರವಾದ ನಿರಾಡಂಬರ ಕೆಲಸವನ್ನು ಮಾಡುತ್ತಿದೆ ಎಂಬುದು ಕೆಲವೇ ಮಂದಿಯಲ್ಲಾದರೂ ಜನಜನಿತ.

 ಸ್ವಯಂ ವಯೋಲಿನ್ ವಾದಕರೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ೫೭ರ ಹರೆಯ. ವಯಸ್ಸನ್ನೂ ನಾಚಿಸುವ ವೈಚಾರಿಕ, ವಿಮರ್ಶಕ ಪ್ರೌಢಿಮೆ ಅವರ ವಿಚಾರ, ವಿಮರ್ಶೆ, ನಡೆನುಡಿಗಳಲ್ಲಿ ಧ್ವನಿಸುತ್ತದೆ. ಭಾಷೆಯೂ ಅಷ್ಟೇ; ಸ್ವಚ್ಛ, ಸುಂದರ ಸಂಸ್ಕೃತಪೋಷಣೆಯ ಅಚ್ಚಗನ್ನಡ; ಓದಿಕೊಂಡುಹೋದಂತೆಲ್ಲಾ ಅಲ್ಲಲ್ಲಿ ಬೆರಗುಗೊಳಿಸುವ ರೂಪಕ/ಅಲಂಕಾರಗಳ ಒನಪು; ಸಾರ್ಥಕತೆಯ ಸೂಚನೆಯುಳ್ಳ ಸಲಹೆ-ಕುಟುಕುಗಳ ಸುಮನೋಹರ ಗುಟುಕು. ಪ್ರತೀ ಪದ, ಅಕ್ಷರಗಳಿಗೂ ಅದರದ್ದೇ ಆದ ಬೆಲೆ-ನೆಲೆ-ಸಾಮ್ಯ-ಆನಂದವಿದೆ ಎಂದು ಅರಿತು ಭಾಷೆಯನ್ನು ಉಪಯೋಗಿಸುವ ಕೊರ್ಗಿಯವರಿಗೆ ಅಕ್ಷರ ಅಕ್ಷರವನ್ನೂ ಅಳೆದು ತೂಗಿನೋಡುವ ಪ್ರಾಯೋಗಿಕ ಅರ್ಥವಂತಿಕೆಯಿದೆ. ಇವೆಲ್ಲದಕ್ಕೂ ಪೂರಕವಾಗಿ ನೃತ್ಯಾದಿ ಕಲೆಗಳ ಕುರಿತ ಪಾಂಡಿತ್ಯ, ಅಭಿಜಾತ ಕಲೆ-ಸಾಹಿತ್ಯದ ಓದು, ಅಲಂಕಾರ-ವ್ಯಾಕರಣಾದಿಗಳ ಬಳಕೆಯ ಸೊಗಸು, ಕಲೆ ಮತ್ತು ಸಂದರ್ಭದ ಔಚಿತ್ಯಪ್ರಜ್ಞೆ, ವ್ಯಕ್ತಿ, ವಸ್ತು ಯಾರೇ, ಯಾವುದೇ ಆಗಿರಲಿ ತಮಗನಿಸಿದ್ದನ್ನು ಸ್ಪಷ್ಟವಾಗಿ ತೋರಬಲ್ಲ ಜಾಣ್ಮೆ, ಔಚಿತ್ಯ, ಹೇಳಬಲ್ಲ ತಾಳ್ಮೆ, ಕೇಳ್ಮೆ ಅವರಿಗೆ ಸಿದ್ಧಿಸಿವೆ.

ಅವರು ವಿಮರ್ಶೆ ಬರೆಯಲು ಪ್ರಾರಂಭಿಸಿದ್ದು ಸಂಗೀತದ ಸಹಚರ್ಯದಲ್ಲಿ; ಸುಮಾರು ೨೦೦೨ರ ಸುಮಾರಿಗೆ ! ಆಗ ವಿಜಯಕರ್ನಾಟಕದ ಬೆಂಗಳೂರು ಪುರವಣಿಗೆ ಬರೆಯುತ್ತಿದ್ದ ಅವರಿಗೆ ಅಯಾಚಿತವಾಗಿ ಪ್ರೇಕ್ಷಕತ್ವ ಒದಗಿಬಂದಿದ್ದು ಸುಂದರೀ ಸಂತಾನಂ ಅವರ ಗೀತಗೋವಿಂದದ ಅಭಿವ್ಯಕ್ತಿ ೨೦೦೩ರಲ್ಲಿ. ಕರ್ನಾಟಕದಲ್ಲಿ ಅಷ್ಟರವರೆಗೂ ಭರತನಾಟ್ಯದ ಸೀಮೆಯಲ್ಲೇ ತೋರಿಬರದಿದ್ದ ಸೌಂದರ್ಯ ಸಾಕ್ಷೀಭೂತವಾದದ್ದೇ ತಡ, ಬರೆಯುವ ನಿರ್ಧಾರವನ್ನು ಪ್ರಕಟಪಡಿಸಿಯೇಬಿಟ್ಟರು. ಆದರೇನು, ನಾಟಕ, ಯಕ್ಷಗಾನದ ಸಹವಾಸ ಸಾಕಷ್ಟಿದ್ದರೂ ನೃತ್ಯವಿಮರ್ಶೆ ಬರೆಯಲು ನೃತ್ಯ ಆಳ-ಅಗಲಗಳ ರವಷ್ಟು ಪರಿಚಯವಿಲ್ಲವಲ್ಲ ಎಂಬ ಅಳುಕು. ಅಂತೂ ಶತಾವಧಾನಿ ಗಣೇಶರಿಂದ ಮೊಬೈಲ್‌ನಲ್ಲಿಯೇ ಪಾಠ ಹೇಳಿಸಿಕೊಂಡವರಿಗೆ ಸ್ಪಷ್ಟವಾದದ್ದು ವಿಮರ್ಶೆಗೆ ಬೇಕಾದದ್ದು ಅನುಭವ; ಪ್ರದರ್ಶನದ ಕುರಿತ ಅನಿಸಿಕೆಯೇ ಹೊರತು ತಾಂತ್ರಿಕ ಜಾಟಿಲ್ಯದ ಮಾಹಿತಿಯಲ್ಲ. ಸರಿ; ಬರೆದು ಮುಗಿಸಿ ಪ್ರಕಟವಾದದ್ದೇ ತಡ ಕ್ಷಣಮಾತ್ರದಲ್ಲೇ ವಿದ್ವಾಂಸ/ಓದುಗವಲಯದ ಭರಪೂರ ಮೆಚ್ಚುಗೆಯೂ ದೊರಕಿದೆ. ಅಂದಿನಿಂದ ಮೊದಲ್ಗೊಂಡ ನೃತ್ಯ ವಿಮರ್ಶೆಯ ಸಾಂಗತ್ಯ ಅವ್ಯಾಹತವಾಗಿ ಮುಂದುವರೆದಿದೆ.

ಅವರ ಬರೆವಣಿಗೆಯಂತೆಯೇ ವ್ಯಕ್ತಿತ್ತ್ವ ಕೂಡ ಗುರುಸಮಾನವಾದದ್ದು. ಒಂದೇ ಬಾರಿಗೆ ವಿದ್ಯಾರ್ಥಿಯಾಗಿಯೂ, ಗುರುವಾಗಿಯೂ ಕೇಳುವ-ಹೇಳುವ ಗುಣ, ತಪ್ಪಿದ್ದರೆ ಅಷ್ಟೇ ನಿಷ್ಠುರವಾಗಿ ಹೇಳುವ ಸೈದ್ಧಾಂತಿಕ ಬಲದ ಸಾಧ್ಯತೆ; ತಮಗೆ ತಿಳಿದಿದ್ದನ್ನು ಯಾವುದೇ ಪ್ರತಿಫಲಗಳ ಆಸೆ-ಬೀಸುಗಳಿಲ್ಲದೆ ಮುಕ್ತವಾಗಿ ಹಂಚಿಕೊಳ್ಳುವ, ಮಾರ್ಗದರ್ಶಿಸುವ ಪ್ರೀತಿ, ಆಸ್ಥೆ; ಕೊಟ್ಟಷ್ಟೂ ತುಂಬಿಕೊಳ್ಳುತ್ತದೆ ಎಂಬ ವಿವೇಚನೆಯೊಂದಿಗೆ ಚಿಗುರೊಡೆದ ಸಸಿಗಳನ್ನು ನೀರೆರೆದು ಪೋಷಿಸುವ ಹೃದಯವೈಶಾಲ್ಯತೆಯೇ ಅವರ ಅನನ್ಯತೆ. ಸದಾ ನಗುತ್ತಾ, ನಗಿಸುತ್ತಾ ತಮ್ಮ ಹಾಸ್ಯ/ತುಂಟತನದ ಸ್ವಭಾವಗಳಿಂದ, ಮಾತಿನ ಓಘದಿಂದ ಜನಮನವನ್ನು ಸೆಳೆಯುವ, ಜಾಣತನದ ಪ್ರಶ್ನೆಗಳಿಂದ ಕುತೂಹಲಿಗಳಾಗಿಸುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಅವಧಾನಗಳ ಪೃಚ್ಛಕವಲಯದಲ್ಲಂತೂ ಬಹುಖ್ಯಾತರು.

ಇವೆಲ್ಲವುದಕ್ಕೆ ಸಮರ್ಥ ಸಾಕ್ಷಿಯೆಂಬಂತೆ ಡಾ. ಎಸ್. ಎಲ್ ಭೈರಪ್ಪ ಅವರ ಮಂದ್ರ ಕಾದಂಬರಿಯ ನಾಟಕ ರೂಪಾಂತರ, ಮುದ್ರಾರಾಕ್ಷಸ ಹಾಗೂ ಮಧ್ಯಮ ವ್ಯಾಯೋಗದ ಕನ್ನಡ ಅನುವಾದ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಕೃತಿಯ ನಾಟಕ ರೂಪ/ನಿರ್ದೇಶನ/ಅಭಿನಯ, ಡಾ. ಪದ್ಮಾಸುಬ್ರಹ್ಮಣ್ಯಂ ಅವರ ಭರತನೃತ್ಯದ ಅಕ್ಷರೀಕರಣದ ವಿಶಿಷ್ಟ ಕೃತಿ ನೃತ್ಯರಸೋದಯ’ – ಇವು ಕೊರ್ಗಿಯವರ ಕೆಲವು ಸಾಹಿತ್ಯ ಹಾಗೂ ರಂಗಭೂಮಿಯ ನಿರ್ಮಿತಿಗಳು. ಶತಾವಧಾನಿ ಡಾ. ಆರ್. ಗಣೇಶ್ ಅವರ ನೂರಕ್ಕೂ ಮಿಕ್ಕಿ ಅವಧಾನಗಳಲ್ಲಿ ಭಾಗವಹಿಸಿರುವ ಉಪಾಧ್ಯಾಯರು ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಪ್ರಶಸ್ತಿ ಪುರಸ್ಕೃತರು. ಋತುಪರ್ಣ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಲಭಿಸಿದೆ. ಪುಣ್ಯಕೋಟಿ,ಧರ್ಮನಂದಿನಿ ಮಹರ್ಷಿದಧೀಚಿ ಮುಂತಾದ ರಂಗರೂಪಕಗಳನ್ನು ರಚಿಸಿರುವ ಶಂಕರನಾರಾಯಣ ಉಪಾಧ್ಯಾಯರು ಲೀಲಾಶುಕ ಕವಿಯ ಕೃಷ್ಣಕರ್ಣಾಮೃತವನ್ನು ಕನ್ನಡಕ್ಕೆ ಪದ್ಯವಾಗಿ ಅನುವಾದಿಸಿದ್ದಾರೆ. ಹಲವಾರು ಯಕ್ಷಗಾನ ಪ್ರಸಂಗಗಳನ್ನು ಕೂಡಾ ಬರೆದಿದ್ದಾರೆ. ನೂಪುರ ಭ್ರಮರಿಯ ಆಯಕಟ್ಟಿನ ಸಂದರ್ಭಗಳೂ ಕೂಡ ಅವರ ಈ ಘನವಂತಿಕೆಯ ಪ್ರಯೋಜನವನ್ನು ಸಾಕಷ್ಟು ಬಾರಿ ಪಡೆದಿದ್ದು ಋಣಿಯಾಗಿದೆ.

ವಿಮರ್ಶಕರಾಗಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳ ವಸ್ತುನಿಷ್ಠ ಅವಲೋಕನವನ್ನು ಮಾಡುತ್ತಾ ಬಂದಿರುವ ಉಪಾಧ್ಯಾಯರ ಬರೆಹಗಳು ಹಲವಾರು ಪತ್ರಿಕೆಗಳ ಅಂಕಣ ಬರೆಹಗಳಾಗಿ ಮೂಡಿಬಂದಿದ್ದಾವೆ. ಹಾಗೆಂದು ಉಪಾಧ್ಯಾಯರು ಹಮ್ಮು-ಬಿಮ್ಮು-ಓಲೈಕೆ- ಸ್ನೇಹಸಂಪರ್ಕದ ರಾಜಿಗೆಲ್ಲಾ ಬರೆಯುವವರಲ್ಲ. ಕಲಾಪ್ರದರ್ಶನವು ಪ್ರಾಮಾಣಿಕವಲ್ಲವಾದರೆ ಅದರಲ್ಲಿ ಎಳ್ಳಷ್ಟೂ ಕರುಣೆ ತೋರಲಾರರು. ಎಷ್ಟೇ ದೊಡ್ಡವರಿರಲಿ; ಸಣ್ಣವರಿರಲಿ ಆ ಹೊತ್ತಿಗೆ ಕಲಾವಿದ ಒದಗಿಸುವ ಪ್ರಾಮಾಣಿಕತೆಯೆಂಬ ಪ್ರಮಾಣ, ಪ್ರೇಕ್ಷಕಪ್ರಭುವಿನ ಆತ್ಮತೃಪ್ತಿಯೇ ಅವರ ಮಾನದಂಡ. ಹಾಗೆಂದು ಅವರಿಗೆ ನೋಡಿದ್ದನ್ನೆಲ್ಲ ಬರೆಯಬೇಕೆಂಬ ಹಟವಿಲ್ಲ; ತೋಚಿದ್ದನ್ನೆಲ್ಲಾ ಬರೆಯುವುದೂ ಇಲ್ಲ; ಆದರೆ ಬರೆಯಲು ಕಾಡಿದ್ದನ್ನು ಬರೆಯದೇ ಬಿಡುವುದೂ ಇಲ್ಲ; ಮತ್ತು ಇಂಥದ್ದೇ ಪತ್ರಿಕೆ-ನಿಯತಕಾಲಿಕೆಗಳಾಗಬೇಕೆಂಬ ಬಿನ್ನಾಣವೂ, ಸಂಖ್ಯಾತ್ಮಕ ಏರಿಕೆಯ ಪ್ರಯೋಜನದೃಷ್ಟಿಯೂ ಇಲ್ಲ. ಕೆಲವನ್ನು ಹೃದಯಕ್ಕಿಳಿಸಿದರೆ; ಮತ್ತೂ ಕೆಲವನ್ನು ಬುದ್ಧಿಗೆ ಕೆಲಸ ಕೊಡುವಂತೆ ಮಾಡುತ್ತಾರೆ. ಹಲವು ಅನುಭವಕ್ಕಾದರೆ ಕೆಲವಷ್ಟೇ ಅಕ್ಷರದ ಜಾದೂಗಾರಿಕೆಯಲ್ಲಿ ಅರಳುತ್ತದೆ.

ಬರೆಯುವುದು ಬೆರಳೆಣಿಕೆಯಾದರೂ ಬಹಳ ವರ್ಷ ಬೆಲೆಬಾಳುವಂತದ್ದಾಗಿರಬೇಕು ಎಂಬುದು ಉಪಾಧ್ಯಾಯರ ಅಂತರಂಗ. ತಮಗಿಷ್ಟವಾದ ಕಾರ್ಯಕ್ರಮ ಯಾವುದೇ ಆಯಾಮದ್ದಿರಲಿ, ಯಾರದ್ದೇ ಆಗಿರಲಿ, ಕಣ್ಣಳತೆಯ ಎಷ್ಟೇ ದೂರದಲ್ಲಿರಲಿ ಪ್ರತಿಫಲಾಪೇಕ್ಷೆ- ಕರೆಯೋಲೆಯ ಸೋಂಕಿಲ್ಲದೆ ಕುಟುಂಬಸಮೇತವಾಗಿ ತೆರಳುವ, ಕಲೆಯ ಪರಮೋದ್ದೇಶದ ಆನಂದವನ್ನೇ ಗುರಿಯಾಗಿಸುವ ಸಹೃದಯಿ, ಅಧ್ಯಾತ್ಮನಿಷ್ಠ. ಕಲಾವಿದರ ಸಾಧ್ಯತೆ-ತೊಂದರೆಗಳ ಬಗ್ಗೆ ಸಾಕಷ್ಟು ಅರಿವಿದ್ದು ವಸ್ತುನಿಷ್ಠತೆಗೆ ಎಲ್ಲೂ ಲಗಾಮು ಹಿಡಿಯದೆ ಹೇಳಬೇಕಾದದ್ದನ್ನು ಚುಟುಕಾಗಿ ತಿಳಿಸಿಹೇಳುವ ವಿನಯಶೀಲ. ಅದೇ ರಸಗವಳದಲ್ಲಿ ಮಿಂದೆದ್ದರೆ ಕಲಾವಿದನೆಡೆಗೆ ಧನ್ಯತೆ-ಸಾರ್ಥಕತೆಯ ನೋಟದೊಂದಿಗೆ ಭೋರ್ಗರೆವ ಭಾಷೆಯಲ್ಲಿ ಪ್ರಶಂಸೆಗಳ ಗರಿಯನ್ನು ಅಕ್ಷರಶಃ ಕಲಾವಿದನ ತುರುಬಿಗಿಡುತ್ತಾರೆ. ಅದು ಕೇವಲ ಬಾಯ್ಮಾತಿಗಲ್ಲ ಎಂಬುದು ಇಲ್ಲಿ ಅವರ ಆಸ್ವಾದನೆಯ ಗುಣಮಟ್ಟಕ್ಕೆ ಸಾಕ್ಷಿ. ಒಂದರ್ಥದಲ್ಲಿ ಕೊರ್ಗಿಯವರಿಗೆ ಕೊರ್ಗಿಯವರೇ ಸಾಟಿ !

ಕಳೆದ ೨ ವರುಷಗಳಿಂದಲೂ ವರ್ಷದ ಉತ್ತಮ ವಿಮರ್ಶಕ ಪುರಸ್ಕಾರದ ನಾಮನಿರ್ದೇಶನದ ಪಟ್ಟಿಯಲ್ಲಿದ್ದವರಲ್ಲಿ ಕೊರ್ಗಿಯವರು ಒಬ್ಬರಾದರೂ ಪುರಸ್ಕಾರ ಸ್ವೀಕರಿಸುವ ಘಳಿಗೆ ಈ ವರ್ಷ ಒದಗಿಬಂದಿದೆ. ಪಟ್ಟಿಯಲ್ಲಿ ಸುಮಾರು ೩೦ ಮಂದಿ ಲೇಖಕರ ಭರ್ಜರಿ ಸ್ಪರ್ಧೆಯಿದ್ದರೂ ; ೨೦೧೨ರ ನೂಪುರ ಭ್ರಮರಿ ಪತ್ರಿಕೆಯಲ್ಲಿ ಬರೆದ ೩ ವಿಮರ್ಶೆಗಳನ್ನು ಗಮನಿಸಿ ಪ್ರಶಸ್ತಿ ಸಮಿತಿ ಉಪಾಧ್ಯಾಯರನ್ನು ಆಯ್ಕೆ ಮಾಡಿರುವುದು ನೂಪುರ ಭ್ರಮರಿಯ ಪಾಲಿಗೆ ಹೆಮ್ಮೆಪಡುವಂತಹ ವಿಷಯ.

ಅಂತೆಯೇ ಅವರದ್ದೊಂದು ಚಿಕ್ಕ ವಿಮರ್ಶೆಯೂ ನಿಮ್ಮ ಅವಗಾಹನೆಗೆ ಬೇಡವೇ? ಆದ್ದರಿಂದಲೇ ಉಪಾಧ್ಯಾಯರ ಭಾಷೆ, ಶೈಲಿ, ಬೆಳವಣಿಗೆಗಳ ಸಾದೃಶ್ಯರೂಪದ ಪರಿಚಯವಾಗಿ ಅವರು ಸುಂದರೀ ಸಂತಾನಂ ಕುರಿತಾಗಿ ಬರೆದ ಪ್ರಥಮ ವಿಮರ್ಶೆಯ ಮೂಲಕವಾಗಿ ಇಲ್ಲಿ ನೀಡುತ್ತಿದ್ದೇವೆ. ಬರೆಯಲು ಹೊರಡುವ ಪ್ರಾರಂಭಿಕ ದಿನದಿಂದ ಇಂದಿನ ವರೆಗಿನ ವಿಮರ್ಶೆಯ ಪಯಣದಲ್ಲಿ ಶಂಕರನಾರಾಯಣ ಉಪಾಧ್ಯಾಯರು ಸಾಕಷ್ಟು ಪಳಗಿದ್ದಾರೆ. ಆದರೆ ಈ ವಿಮರ್ಶೆ ನೃತ್ಯದ ತಾಂತ್ರಿಕ ವಿವರಗಳ ಕುರಿತು ಅರಿವಿಲ್ಲದಿದರೂ ಅಭಿಜಾತವೆನಿಸುವ ನೃತ್ಯವನ್ನು ನೋಡಿದ ಸಹೃದಯನ ಮೊದಲ ಅಭಿವ್ಯಕ್ತಿಯ ಉತ್ಕೃಷ್ಟ ಕೃತಿ. ಇದನ್ನು ನೋಡಿದರೆ ಕಂಡಿತವಾಗಿಯೂ ಮೊದಲನೆಯ ವಿಮರ್ಶೆ ಎಂಬ ಮಾತು ನಂಬಲಿಕ್ಕಾಗವುದಿಲ್ಲ ಎನ್ನುವ ಹೆಚ್ಚುಗಾರಿಕೆಯ ಪ್ರಶಂಸೆಯನ್ನೇ ವಿದ್ವಜ್ಜನರಿಂದ ಪಡೆದಿದೆಲ್ಲಾದೇ ಉಪಾಧ್ಯಾಯರ ಪ್ರತಿಭೆ, ವ್ಯುತ್ಪತ್ತಿ. ವಿಮರ್ಶೆ ಪಾರಿಭಾಷಿಕ ಪದಗಳಲ್ಲಿ ಮುಳುಗದೆ ಅನುಭವನಿಷ್ಠವಾಗಬೇಕು; ಓದುಗನಿಗೆ ನೃತ್ಯಪ್ರದರ್ಶನ ಕಣ್ಣಿಗೆ ಕಟ್ಟುವಂತಿರಬೇಕು; ಆಗಲೇ ರಸನಿಷ್ಠವಾದ ಬರೆವಣಿಗೆ, ಪ್ರದರ್ಶನಗಳು ಹುಟ್ಟು ಪಡೆಯುತ್ತವೆ; ವಿಮರ್ಶಕಾರನಿಗೆ ಬೇಕಿರುವುದು ಕಲೆಯೆಡೆಗಿನ ಸಹೃದಯತೆಯೇ ವಿನಾ ತಾಂತ್ರಿಕ ಅಂಶಗಳ ಪರಿಚಯದ ಬಾಹುಳ್ಯವಲ್ಲ ಎನ್ನಲು ಇದು ಒಳ್ಳೆಯ ನಿದರ್ಶನ. ಈ ಮೂಲಕ ಹೊಸ ಪರಂಪರೆಯನ್ನು ನೃತ್ಯಬರೆವಣಿಗೆಯ ಕ್ಷೇತ್ರದಲ್ಲಿ ಹುಟ್ಟುಹಾಕುತ್ತಿದ್ದೇವೆ. ಬರೆದದ್ದು ಮರೆಯಾಗದೆ ಲೇಖನಗರ್ಭದಿಂದ ಮತ್ತೊಮ್ಮೆ ಚಿಗಿದು ನಿಲ್ಲುವ ನಿತ್ಯ ಚೈತನ್ಯ ಸಾರ್ವಕಾಲಿಕ ಪ್ರಮೇಯಕ್ಕೆ ಇದು ಸಾಕ್ಷಿ. ಒಂದರ್ಥದಲ್ಲಿ ಇದು ಸುಂದರೀ ಸಂತಾನಂ ಅವರಿಗೆ ಅವರದ್ದೇ ಹುಟ್ಟುಹಬ್ಬದ ದಿನದಂದು (೧೫ ಫೆಬ್ರವರಿ) ಅರ್ಪಿಸುವ ಶ್ರದ್ಧಾಂಜಲಿಯೂ ಹೌದು…! ನೃತ್ಯ ಸಂಶೋಧನ ಸಮ್ಮೇಳನದಲ್ಲಿ ಈ ಪುರಸ್ಕಾರವನ್ನು ಕೊಡುತ್ತಿರುವ, ಪ್ರಕಟಿಸುತ್ತಿರುವ ನಮಗೆ ದಕ್ಕಿರುವ ಭಾಗ್ಯವೂ ಹೌದು..!

-ಸಂಪಾದಕರು.

 

1.    ‘ವಿಮರ್ಶಾ ವಾಙ್ಮಯಿ ಪುರಸ್ಕಾರಕ್ಕಾಗಿ ಅಭಿನಂದನೆಗಳು. ಅಂದಹಾಗೆ ಇಂದಿನ ನೃತ್ಯ ವಿಮರ್ಶೆಯ ಸ್ಥಿತಿ-ಗತಿ ಸಾಗುವ ಕ್ರಮವನ್ನು ಹೇಗೆ ಅಭಿಪ್ರಾಯಿಸುತ್ತೀರಿ ?

ಇಂದಿನ ದಿನಮಾನದಲ್ಲಿ ನೃತ್ಯ ಮಾತ್ರವಲ್ಲ ಅಭಿಜಾತವಾದ ಕಲಾ-ಸಾಹಿತ್ಯದ ಕುರಿತು ವಿಮರ್ಶೆಯ ಮಾತು ಹಾಗಿರಲಿ; ಚಿಂತನ/ವಿಚಾರಗಳ ರೂಢಿಯೇ ಕಣ್ಮರೆಯಾಗುತ್ತಿದೆ. ಮನೋರಂಜನೆಯ ಮಾಧ್ಯಮ ಆಭಿಜಾತ್ಯದಿಂದ ಲಾಘವದತ್ತ ಹೊರಳಿದ್ದರ ಪರಿಣಾಮವೇ ಇದು ಎಂಬುದು ಸ್ಪಷ್ಟ. ವಿಮರ್ಶಾ ಎನ್ನುವ ಪ್ರಕಾರ ಅವಲೋಕನ-ಅನಿಸಿಕೆ-ವರದಿಯ ರೂಪ ಪಡೆದುಕೊಂಡಿದೆ. ಪತ್ರಿಕೆಯಂತಹ ಮಾಧ್ಯಮವು ನೃತ್ಯ ಸಂಗೀತಗಳ ವಿಭಾಗಕ್ಕೇ ಮೀಸಲಿಡುವ ಸ್ಥಳವೂ ಜಾಹೀರಾತು-ಟಿ‌ಆರ್‌ಪಿಗಳ ಭೂತಚ್ಛಾಯೆಯಲ್ಲಿ ಮಸುಳಿಹೋಗುತ್ತಿದೆ. ಇಂತಿಷ್ಟು ವಾಕ್ಯಗಳಲ್ಲಿ/ಶಬ್ದಗಳಲ್ಲಿ ಬರೆಯಬೇಕಾದ ನಿರ್ಬಂಧ ವಿಮರ್ಶೆ ಆಗುವುದಾದರೂ ಹೇಗೆ? ಹಾಗೂ ಹೀಗೂ ಬರೆಯುವವರು ಅಭಿಜಾತ ಕಲಾಕ್ಷೇತ್ರವನ್ನು ಗಂಭೀರವಾಗಿ ಗಣಿಸದೆ, ತಮ್ಮ ಬರೆಹ ಕಲಾವಿದನಿಗೆ ಮಾಡುವ ಅನುಗ್ರಹ ಎಂಬ ಆಗ್ರಹ ಹೊಂದಿರುತ್ತಾರೆ. ಹಾಗಾಗಿ ವಿಮರ್ಶೆ ಗತಿಶೀಲವಾಗದೆ ಸ್ಥಿತಿಶೀಲವಾಗಿದೆ ಎನ್ನದೆ ಗತ್ಯಂತರವಿಲ್ಲ.

 

೨.    ಹಾಗಾದರೆ ವಿಮರ್ಶಕನಿಗೆ ಮತ್ತು ಒಳ್ಳೆಯ ನೃತ್ಯ ವಿಮರ್ಶೆಗೆ ಇರಬೇಕಾದ ಗುಣ-ಲಕ್ಷಣಗಳೇನು?

ವಿಮರ್ಶಕನಿಗೆ ಮೊತ್ತಮೊದಲು ಇರಬೇಕಾದದ್ದು ಸಹೃದಯತೆ. ಸಹೃದಯಪ್ರೇಕ್ಷಕತ್ವವನ್ನು ಆದ್ಯಂತ ಆವಾಹಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಒಂದು ಪ್ರಯೋಗದ/ಪ್ರದರ್ಶನದ ಪರಿಶ್ರಮ ಅರಿವಾದೀತು. ಸುಮ್ಮನೆ ಶಬ್ದಗಳಲ್ಲಿ ರಸಭಾವ ಎನ್ನದೆ, ಅದನ್ನು ಬೇರುಮಟ್ಟದಿಂದ ಅನುಭವಿಸುವ ಕಲಾಜೀವಿಕೆ ಇರಬೇಕು. ಇದರಿಂದ ಪೂರ್ವಾಗ್ರಹವೂ ದೂರಾಗುತ್ತದೆ; ತಾನು ನೋಡುತ್ತಿರುವ ಪ್ರದರ್ಶನದ, ಕಲಾಪರಿವೇಷದ ಪ್ರಾಥಮಿಕವಾದ ಲಕ್ಷಣಪರಿಜ್ಞಾನವಾದರೂ ಇರಲೇಬೇಕು. ಕೇವಲ ಶಾಸ್ತ್ರಪಾಂಡಿತ್ಯವಲ್ಲದೆ ರಂಗಸಾಧ್ಯತೆಯ ಬಗೆಗೂ ಒಳನೋಟವಿದ್ದಷ್ಟೂ ಅಭಿಪ್ರಾಯ ಮಾಗುತ್ತದೆ.

 

೩.    ನಿಮ್ಮ ವಿಮರ್ಶೆಗಳ ವಿಶೇಷವನ್ನು ಹೇಗೆ ಕಂಡುಕೊಂಡಿದ್ದೀರಿ?

ಯಾವುದೇ ಕಲಾವಿಮರ್ಶೆಯ ವಸ್ತು, ಆಶಯ ಸವಕಲೆನಿಸುವ ಪರಿಭಾಷೆಗಳ ಕೋಟೆಯಲ್ಲಿ ಕಳೆದುಹೋಗಬಾರದು; ನಮ್ಮನ್ನು ನಾವೇ ಮೋಸಮಾಡಿಕೊಳ್ಳಬಾರದು. ಅಷ್ಟಕ್ಕೂ ಓದುಗನಿಗೆ ವಿಮರ್ಶೆಯ ಮೂಲಕ ಬೇಕಾಗಿರುವುದು ಅಕ್ಷರಗಳಲ್ಲಿ ಕಲಾಭೂಮಿಕೆಯ ಮರುಪ್ರಸ್ತುತಿಯೇ ವಿನಾ ಪಾರಿಭಾಷಿಕ ಪದಗಳ ವಿವರಣೆಯಲ್ಲ. ನನಗಂತೂ ಶೀರ್ಷಿಕೆಯಿಂದ ಮೊದಲ್ಗೊಂಡು ಲೇಖನದುದ್ದಕ್ಕೂ ಶಬ್ದಶಕ್ತಿಯ ಗರಿಷ್ಟಪ್ರಯೋಗವಾಗಬೇಕೆಂಬ ಹಟವಿದೆ. ಹೊಸ-ಹೊಸತನ್ನು ಟಂಕಿಸಬೇಕೆಂಬ ಹಂಬಲವಿದೆ. ಪ್ರತೀ ಬರೆವಣಿಗೆಗಳಲ್ಲೂ ಚಲಾವಣೆಯಲ್ಲಿಲ್ಲದ ಅಥವಾ ಪ್ರಚಲಿತಕ್ಕೆ ಬರದ ಶಬ್ದಗಳನ್ನು ಬಳಸುವ ಇಲ್ಲವೇ ಸೃಷ್ಟಿಸುವ ಜಾಯಮಾನವಿದೆ. ಸಂಗೀತ-ನೃತ್ಯಗಳ ರುಚಿಯೊಂದಿಗೆ ಸಾಹಿತ್ಯದ ರುಚಿಯನ್ನು ಓದುಗನಿಗೆ ರೂಢಿಸಬೇಕು ಎನ್ನುವುದು ಇಲ್ಲಿನ ಆಶಯ. ಒಂದು ವಿಮರ್ಶೆಯಿಂದ ಓದುವವರಲ್ಲಿ ಪದವ್ಯುತ್ಪತ್ತಿ, ವಾಕ್ಯಸರಣಿ, ಭಾಷೆಯ ಒನಪು-ಗಾಂಭೀರ್ಯದ ಪ್ರಜ್ಞೆ, ಆಸಕ್ತಿ ಮೂಡಿದರೆ ಅದು ವಿಮರ್ಶೆಯ, ವಿಮರ್ಶಕನ ಧನ್ಯತೆ.

 

೪.    ಕಲಾವಿಮರ್ಶೆಯ ದಾರಿ ಎತ್ತ ಹೊರಳಬೇಕು? ಎಂತಹ ವಿಮರ್ಶೆ ಬರಬೇಕೆನಿಸುತ್ತದೆ?

ವಿಮರ್ಶೆ ಕಲಾಪೋಷಕವಾಗಿದ್ದಷ್ಟೂ ಕಲೆಯ ಆಯಸ್ಸು ಹೆಚ್ಚಾಗುತ್ತದೆ. ವಿಮರ್ಶೆ ಇರುವುದು ವಿಮರ್ಶಕನ ವೈದುಷ್ಯದ ಅನಾವರಣಕ್ಕಲ್ಲ ಎಂಬ ವಿನಯ ಕಾಣುವಂತೆ ಅಭಿಪ್ರಾಯಮಂಡನೆ ಇದ್ದರೆ, ಅದೇ ಅಹೋಭಾಗ್ಯ. ಇಷ್ಟಕ್ಕೂ ವಿಮರ್ಶೆ ಎಂಬುದು ಒಬ್ಬ ವ್ಯಕ್ತಿಯ ಪರಿಶೀಲನ. ಅದನ್ನು ಸಾಧ್ಯವಾದಷ್ಟು ಬಹ್ವೀಕರಿಸುವ ಔದಾರ್ಯ ಕಲಾಶಾಸ್ತ್ರ ಪರಿಮಿತಿಯಲ್ಲಿ ಮೂಡುವಂತಿರಬೇಕು.

 

೫.    ಕಲಾವಿಮರ್ಶೆಯ ಕ್ಷೇತ್ರ ಎಷ್ಟು ಆರೋಗ್ಯಕರವಾಗಿದೆ? ವಿಮರ್ಶಕನಿಗೆ ಎದುರಾಗುವ ತೊಡಕು-ತೊಂದರೆಗಳೇನು?

ವಿಮರ್ಶಕನನ್ನು ತಮಗೆ ಬೇಕಾದಂತೆ ಬರೆಸುವ ಪ್ರಾಯೋಜಕ/ಕಲಾವಿದರ ಆತ್ಮಸ್ಥೈರ್ಯದ ಶೈಥಿಲ್ಯ ನಿಜವಾದ ವಿಮರ್ಶೆ ಮೂಡದಂತೆ ಪ್ರಬಲವಾದ ಲಾಬಿಯನ್ನೇ ಮಾಡುತ್ತಿದೆ. ತುಷ್ಟೀಕರಣ ಮತ್ತು ಪುಷ್ಟೀಕರಣದ ವ್ಯತ್ಯಾಸವನ್ನು ಪ್ರಯೋಗಕಾರರು ಸವಾಲಾಗಿ ಒಪ್ಪಿಕೊಳ್ಳದಿರುವುದೇ ತೊಂದರೆ.

 

೬.    ವಿಮರ್ಶೆ ಮತ್ತು ವಿಮರ್ಶಕರ ಬಗೆಗೆ ಇಂದಿನ ಕಲಾಸಮಾಜ ಮತ್ತು ಮಾಧ್ಯಮದ ದೃಷ್ಟಿ ಹೇಗಿದೆ ? ಕಾರಣ? ಯಾವುದು ನಿಜವಾದ ವಿಮರ್ಶಕನ ಸವಾಲೆನಿಸಬಲ್ಲದು?

ವಿಮರ್ಶಾಕ್ಷೇತ್ರಕ್ಕೆ ಇಂದಿನ ಮಾಧ್ಯಮದಲ್ಲಿ ತಾವಿಲ್ಲ. ಕಣ್ಣಿನ ತಂಪಿನ ಕಡೆ ಮಾಧ್ಯಮ ಕಣ್ಣುಹಾಯಿಸುತ್ತದೆಯೇ ಹೊರತು ಬುದ್ಧಿಯ ಬೆಚ್ಚಗಿನ ಕಡೆಗೆ ಅಲ್ಲ. ಇಷ್ಟಕ್ಕೂ ವಿಮರ್ಶೆ/ಅಭಿಪ್ರಾಯ/ಅವಲೋಕನ ತಮ್ಮ ಪರವಾಗಿ ಬಂದರಷ್ಟೇ ನಾಳೆ ನಮ್ಮಮಾರ್ಕೆಟ್ ಕುದುರುತ್ತದೆ ಎಂಬ ಪ್ರಚಾರಭ್ರಾಂತಿ ಹೆಚ್ಚಿನ ಕಲಾವಿದರನ್ನು ವಿಮರ್ಶೆಯ ಕುರಿತು ಅಸಹಿಷ್ಣುಗಳನ್ನಾಗಿ ಮಾಡಿದೆ. ಇದಕ್ಕೆ ತಮ್ಮ ಕಾಯಕದ ಪಂಚಾಂಗ ಪೆಡಸಾಗಿರುವುದೂ ಕಾರಣ ಇದ್ದೀತು. ಕಲಾವಿದನ ಸತ್ತ್ವ ಸಮೃದ್ಧವಿದ್ದಷ್ಟೂ ಆತ ವಿಮರ್ಶೆಯ ಬೆಂಗದಿರಿಗೆ ಮೈಯೊಡ್ಡಬಲ್ಲ. ಅಂತಹ ಸತ್ತ್ವಸಂಪನ್ನರ ಸಂಖ್ಯೆ ಹೆಚ್ಚಿದಷ್ಟೂ ವಿಮರ್ಶಕನ ಸವಾಲೂ ಹೆಚ್ಚುತ್ತದೆ.

 

೭.    ಭವಿಷ್ಯದ ವಿಮರ್ಶಕರಿಗೆ ನಿಮ್ಮ ಹಿತನುಡಿಗಳನ್ನು ತಿಳಿಸಿ.

ತಾನೊಂದು ವಿಮರ್ಶನ ಮಾಡುತ್ತೇನೆಂದು ತೊಡಗುವವ ಆಯಾ ಅಭಿಜಾತಕಲಾಂಗಣದ ಪ್ರಾಥಮಿಕ ಪರಿಭಾಷಾಲೋಕದ ಪರಿಚಯ ಹೊಂದಿರಬೇಕು. ರಂಗದ ಮೇಲೆ ಹರಿಯುವ ನಾಟ್ಯಕ್ರಿಯೆ ತನ್ನ ಹೃದಯರಂಗದಲ್ಲೂ ಹರಿವ ಹಠವನ್ನು ಅನುಭವಿಸುವ ಸಹೃದಯತೆ ಹೊಂದಿರಬೇಕು. ಕಲಾವಿದನ ಪರಿಚಯದ ಆಧಾರಶ್ರುತಿಯಲ್ಲಿ ವಿಮರ್ಶೆ ಮೈಯೊಡೆಯದಂತೆ ಅಂತರವನ್ನು ಕಾಯ್ದುಕೊಳ್ಳಬೇಕು. ತನ್ನ ನೋಟ ಕಲೆಯ ಉತ್ತರೋತ್ತರ ಪ್ರವರ್ಧಮಾನತೆಗೆ ಉತ್ತೇಜಕವಾಗುವಂತೆ ಭಾಷೆಯನ್ನು ಬಳಸುವ ಸೌಹಾರ್ದ ದೃಷ್ಟಿ ರೂಪಿಸಿಕೊಳ್ಳಬೇಕು. ತನಗಿಂತ/ಕಲಾವಿದನಿಗಿಂತ ಕಲೆಯ ಗಾತ್ರ, ಪಾತ್ರ ಅಮೇಯ ಎನ್ನುವ ಎಚ್ಚರ ಇರಬೇಕು.

 

 

 

ಮಧುರಾನುಭೂತಿಯ ಅನನ್ಯ ಭರತನೃತ್ಯ-ಗೀತಗೋವಿಂದ

-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

(ಕೃಪೆ : ವಿಜಯ ಕರ್ನಾಟಕ, ೧೫-೦೩-೨೦೦೩)

ಜಯದೇವಕವಿಯ ಗೀತಗೋವಿಂದ ನೃತ್ಯಕ್ಷೇತ್ರೀಯರಿಗೆ ಅನಿವಾರ್ಯ ಎಂಬಷ್ಟು ಒದಗಿಬರುವ ಶೃಂಗಾರಕಾವ್ಯ. ಅಷ್ಟನಾಯಿಕೆಯರ ಲಕ್ಷಣನಿರೂಪಣೆಗೆ ಅತ್ಯಂತ ಹತ್ತಿರದ ಕೈಯಳತೆಯಲ್ಲಿ ಸಿಗುವ ಅಷ್ಟಪದಿಯ ಸರಸಸಾಹಿತ್ಯ ನರ್ತಕರಿಗೆ ಪರಮವಂದ್ಯವೆನಿಸುವಷ್ಟು ಪರಿಚಿತ. ಆದರೆ ರಾಧಾಕೃಷ್ಣರ ಅವ್ಯಾನಿರ್ಮಲ ಪ್ರೇಮಾಂತಃಕರಣವನ್ನು ಆದ್ಯಮ್ತವಾಗಿ ಕಥಾಸೂತ್ರದಲ್ಲಿ ಹೆಣೆದು ಆ ಪಾತ್ರಗಳ ಔನ್ನತ್ಯವನ್ನು ನೃತ್ಯಪರಿಭಾಷೆಯಲ್ಲಿ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನಸ್ಸಲ್ಲೂ ಪ್ರಸನ್ನವಾಗಿ ಪ್ರತಿಷ್ಠಾಪಿಸಿ, ಗೀತಗೋವಿಂದಕ್ಕೆ ರಂಗಸಮಗ್ರತೆಯನ್ನು ತಂದುಕೊಟ್ಟವರು ಶ್ರೀಮತೀ ಸುಂದರೀ ಸಂತಾನಂ.

ಅವರು ಇತ್ತೀಚೆಗೆ ಬಸವನಗುಡಿಯ ಅಭಿನವ ಸಭಾಂಗಣದಲ್ಲಿ ಗೀತಗೋವಿಂದಂ ಭರತನೃತ್ಯದ ಸೋಲೋ ಕಾರ್ಯಕ್ರಮ ನೀಡಿ ನೃತ್ಯಪಾಠ್ಯಕ್ಕೆ ಯಶಸ್ಸಿನ ಇನ್ನೊಂದು ಅಧ್ಯಾಯವನ್ನು ಸೇರಿಸಿದರು.

ಕೃಷ್ಣ-ರಾಧೆ-ಸಖಿ ಪಾತ್ರಗಳನ್ನು ಆಂಗಿಕಸಂಜ್ಞೆಗಳ ಮೂಲಕ ನಿರ್ದೇಶಿಸುತ್ತಾ ಲಲಿತಲವಂಗದಿಂದ ಮೊದಲ್ಗೊಂಡು ಕುರುಯದುನಂದನದ ತನಕ ರಾಧಾ-ಕೃಷ್ಣರ ಪ್ರೇಮದ ಉತ್ಕಟತೆಯನ್ನು ಹೃದಯಸಂಸ್ಕಾರದ ಪರಿಪಾಕದಲ್ಲಿ ಸಾತ್ತ್ವಿಕ-ಆಂಗಿಕಗಳ ಪರಿಪೂರ್ಣ ಸಮನ್ವಯದಲ್ಲಿ ಕಲಾವಿದೆ ನಿರೂಪಿಸಿದ ರೀತಿ ಭರತನೃತ್ಯದ ಪರಿಷ್ಕೃತ ವ್ಯಾಖ್ಯೆಯಂತಿತ್ತು. ಮಿಂಚಿನ ವೇಗದಲ್ಲಿ ಪಾತ್ರದಿಂದ ಪಾತ್ರಕ್ಕೆ ಭಾವಾಂತರಗೊಳ್ಳುತ್ತಿದ್ದರೂ, ವಿಷಾದವನ್ನೋ ಹಸಾದವನ್ನೋ ಗೆರೆ ಬಿಡಿಸಿ ತೋರಿದಷ್ಟು ಸ್ಪಷ್ಟವಾಗಿ ಸ್ಫುಟವಾಗಿ ಅಭಿವ್ಯಕ್ತಿಸುತ್ತಿದ್ದುದು ಸಾಧನೆಯ ಕಠಿನತೆಯ ಕನ್ನಡಿಯಾಗಿತ್ತು.

ಪ್ರೇಮ-ವಿರಹಗಳ ಏಕತಾನದಲ್ಲಿ ಲಗಾಟಿ ಹೊಡೆಯಬಹುದಾ ಅಪಾಯದ ಕಥಾಕಥನಕ್ಕೆ ಹೃದ್ಯವೆನಿಸುವಂತೆ ಸನ್ನಿವೇಶಗಳನ್ನು ಪರಿಕಲ್ಪಿಸಿದ್ದು ಕಲಾವಿದೆಯ ರಸಜ್ಞತೆಗೆ ದ್ಯೋತಕ. ರಾಧಾಕೃಷ್ಣರ ಪ್ರೇಮಪ್ರಯಾಣದಲ್ಲಿ ವಿರಹೋತ್ಕಂಠಿತಾ, ಖಂಡಿತಾ, ಅಭಿಸಾರಿಕಾ ಇತ್ಯಾದಿ ನಾಯಿಕೆಯರ ಭೂಮಿಕೆಗೆ ಸಮಾನಾಂತರವಾಗಿ ನಾಯಕಭೂಮಿಕೆಯ ನೃತ್ಯಚಿತ್ರವನ್ನು ತೋರಿದ್ದು ಗಮನಾರ್ಹ.

ಕತೆಯ ಆವರಣದಲ್ಲಿ ಪಾತ್ರಗಳ ಭಾವಾಭಿನಯ ನಿರಂತರ ಸಾಗುವಾಗ ಪ್ರತಿಯೊಂದು ಸ್ಥಿತಿ/ಗತಿಯಲ್ಲಿ ಶಾಸ್ತ್ರನಿಬದ್ಧ ನೃತ್ತಹಸ್ತ-ಅಂಗಹಾರ-ಚಾರಿ-ಕರಣಾದಿಗಳನ್ನು ಶಿಲ್ಪಶುದ್ಧವಾಗಿ ಮಾಡಿ ತೋರುತ್ತಿದ್ದರೂ, ಪಾತ್ರದ ಭಾವಾಭಿನಯ ಚಲನೆಯಲ್ಲಿ ಈ ಎಲ್ಲ ಲಕ್ಷಣವೃತ್ತಿಗಳು ಏಕೀಭವಿಸಿ ನೃತ್ತ-ನೃತ್ಯಗಳು ಅವಿನಾಭಾವವಾಗಿ, ರಾಧಾಕೃಷ್ಣರ ಅಂತರಂಗದ ರಂಗಸ್ಥಳಕ್ಕೆ ನೋಡುಗರನ್ನು ಕರೆದೊಯ್ದು ನಿಲ್ಲಿಸುತ್ತಿದ್ದವು.

ಗೀತಗೋವಿಂದದ ಸ್ಥಾಯಿಯಾದ ಶೃಂಗಾರವನ್ನು ಅಲೌಕಿಕ ಎನಿಸುವಂತೆ ಚಿತ್ರಿಸದೆ, ತೀರಾ ಸಾಮಾನ್ಯರ ನಿತ್ಯವ್ಯವಹಾರದ ತುಣುಕುಮಿಣುಕುಗಳ ಮಿತಿಯಲ್ಲಿ ಚಿತ್ರಿಸಿಕೊಟ್ಟು ಕೊನೆಗೆ ಸ್ವಾಧೀನಪತಿಕೆಯಾಗಿ ರಾಧೆಯನ್ನು ಕಟೆದದ್ದು ಸರಸೋದಾರವಾಗಿತ್ತು. ಶಬ್ದಕಾವ್ಯವಾದ ಗೀತಗೋವಿಂದ, ಕಲಾವಿದೆಯ ಅದ್ಭುತ ಅಭಿನಯದ ಮೂಲಕ ಭಾವಕಾವ್ಯವಾಗಿ ರಂಗದಲ್ಲಿ ಮೂಡಿಬಂತು. ಪೂರ್ಣಾವಧಿಯ ರಂಗಪ್ರದರ್ಶನಕ್ಕೆ ಗೀತಗೋವಿಂದವನ್ನು ಉಲ್ಲೇಖಾರ್ಹವಾಗಿ ಅಳವಡಿಸಿದ ಸುಂದರಿಯವರ ಪರಿಶ್ರಮ ಸಾರ್ಥಕ, ಅಭಿನಂದನೀಯ.

ಇಂತಹ ಸ್ಮರಣೀಯ ಕಾರ್ಯಕ್ರಮವನ್ನು ಡಾ. ಪದ್ಮಾಸುಬ್ರಹ್ಮಣ್ಯಂ ಅವರ ಹಿರಿಯ ಶಿಷ್ಯೆಯಾದ ಸುಂದರೀಸಂತಾನಂ ಅವರಿಂದ ಮೂಡಿಸಲು ಏರ್ಪಾಟು ಮಾಡಿದ ಪ್ರಸಿದ್ಧ ಕಥಕ್ ಕಲಾವಿದರಾದ ನಿರುಪಮಾ-ರಾಜೇಂದ್ರ ಉದ್ಗರಿಸಿದಂತೆ, ಗೀತಗೋವಿಂದ ರೂಪಕ ಒಂದು ರಸಾನಂದ.

ಸುಶ್ರಾವ್ಯವಾಗಿ ಭಾವದೀಪಕವಾಗಿ ಹಾಡಿದ ಮಾನಸಿ, ಪದೋಚಿತವಾಗಿ ತಬಲಾ ನುಡಿಸಿದ ತುಳಸಿರಾಂ, ರಸಪೋಷಕವಾಗಿ ಕೊಳಲು ನುಡಿಸಿದ ಸತ್ಯನಾರಾಯಣರ ಹಿಮ್ಮೇಳ ಕರ್ಣಾನಂದಕುತೂಹಲವಾಗಿತ್ತು.

ಗೀತಗೋವಿಂದದ ಅಷ್ಟಪದಿಗಳನ್ನು ಆಯ್ದು ಕಥಾಗತಿಗೊಪ್ಪುವಂತೆ ಜೋಡಿಸಿದ್ದಲ್ಲದೇ, ಕಾರ್ಯಕ್ರಮದಲ್ಲಿ ಉದ್ಬೋಧಕವಾಗಿ ನಿರೂಪನೆಯನ್ನು ನಿರ್ವಹಿಸಿದವರು ಶತಾವಧಾನಿ ಡಾ. ಆರ್. ಗಣೇಶ್.

 

1 Response to ‘ನೂಪುರ ಭ್ರಮರಿ’ಯ ವರ್ಷದ ನೃತ್ಯ ವಿಮರ್ಶಕ ಪುರಸ್ಕಾರ-2012: ‘ವಿಮರ್ಶಾ ವಾಙ್ಮಯಿ’ ಬಿರುದಿನೊಂದಿಗೆ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರಿಗೆ.

  1. ರೋಹಿಣಿ ಸುಬ್ಬರತ್ನಂ ಕಾಂಚನ

    ನಮಸ್ಕಾರ ಮನೋರಮ ರವರೇ ವಿದ್ವಾಂಸರಾದ. ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರವರನ್ನು ಕುರಿತ ಲೇಖನವನ್ನು ಈಗ ತಾನೇ ಓದಿ ತುಂಬಾ ಸಂತೋಷವಾಯಿತು. ಅಕ್ಷರಶಃ ಸತ್ಯವಾದ ಸುಂದರವಾದ ಮಾತುಗಳಿಂದ ಶೋಭಿಸಿದೆ. perfect ಅನ್ನುವುದು ಸರಿಯಾದ ಪದವೆನ್ನಿಸುತ್ತಿದೆ. ಹಿರಿಯ ಕಲಾವಿದಸಾಹಿತಿಗಳಾದ ಉಪಾಧ್ಯಾಯರ ವಿಮರ್ಶೆ ಯ ಬಗೆಗಿನ ವಿಮರ್ಶೆಯೂ ಅಷ್ಟೇ ಸತ್ಯ ಹಾಗೂ ವಸ್ತು ನಿಷ್ಠವಾಗಿದೆ. ಅವರ ಭಾಷೆ, ಶೈಲಿ ಅನೂನವಾದದ್ದು. ನಿಮ್ಮ ಹಾಗೂ ನಿಮ್ಮ ಸಂಸ್ಥೆಯ ಅಖಂಡ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪರಿಯು ಲೋಕೋತ್ತರವಾಗಿದೆ, ಪ್ರಾತಃಸ್ಮರಣೀಯವಾಗಿದೆ.

Leave a Reply

*

code