ನಮ್ಮ ಬಗ್ಗೆ

Posted On: Thursday, December 29th, 2011
1 Star2 Stars3 Stars4 Stars5 Stars (2 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿಯಂದು. ಶಕ್ತಿ ದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ, ಹಾಗೂ ನೃತ್ಯ ಮಂಟಪದ ಶ್ರೀಮತಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ಒಂದು ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು.
ವಾರ್ಷಿಕ ಸಂಭ್ರಮ ನೆರವೇರಿದ್ದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ. ಯಕ್ಷಗಾನ ಕಲಾವಿದ ಸರ್ಪಂಗಳ ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ, ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ವೆಬ್‌ಸೈಟಿಗೆ ಚಾಲನೆಯನ್ನಿತ್ತರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರೆ, ಲೇಖಕಿ ಮನೊರಮಾ ಬಿ.ಎನ್ ಅವರು ಬರೆದ ಇತಿಹಾಸ ಪುಸ್ತಕ ಶ್ರೀ ಓಂಕಾರೇಶ್ವರ ದೇವಾಲಯದ ಇತಿಹಾಸದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಭಾರತೀಯ ವಿದ್ಯಾಭವನದ ಮಡಿಕೇರಿ ಶಾಖೆಯ ಉಪಾಧ್ಯಕ್ಷ ಕೆ. ಎಸ್. ದೇವಯ್ಯ ಅನಾವರಣಗೊಳಿಸಿದರು.
ದ್ವಿತೀಯ ವಾರ್ಷಿಕ ಸಂಭ್ರಮಕ್ಕೆ ಸಾಕ್ಷಿಯಾದವರು ಮಂಗಳೂರಿನ ಸಹೃದಯರು. ಭರತ ನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯ ಇವರ ಸಹಭಾಗಿತ್ವದಲ್ಲಿ ನಡೆದ ಮಂತಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಗಾನ ಸರಣಿಯ ಕಾರ್ಯಕ್ರಮ ಉದ್ಘಾಟನೆಯನ್ನು ನೂಪುರ ಭ್ರಮರಿಯ ವರ್ಣಮಯ ವಾರ್ಷಿಕ ವಿಶೆಷ ಸಂಚಿಕೆಯು ಖ್ಯಾತ ಯಕ್ಷಗಾನ ವಿಮರ್ಶಕ, ಕಲಾವಿದ ಡಾ. ಪ್ರಭಾಕರ ಜೋಷಿ ಅವರು ಅನಾವರಣಗೊಳಿಸಿ ಶುಭ ಹಾರೈಸಿದರೆ, ವೇದಿಕೆಯಲ್ಲಿ ಆಸೀನರಾಗಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್, ಹಿರಿಯ ಭರತನಾಟ್ಯ ಗುರು ಮುರಳೀಧರ ರಾವ್, ಭರತನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯದ ಅಧ್ಯಕ್ಷ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಗುರು ಶಾರದಾಮಣಿ ಶೇಖರ್ ಪತ್ರಿಕೆಯನ್ನು ಹೃನ್ಮನಪೂರ್ವಕವಾಗಿ ಹಾರೈಸಿ, ಶ್ಲಾಘಿಸಿ, ಅಭಿನಂದಿಸಿದರು.

ಮೂರನೇ ವಾರ್ಷಿಕ ಸಂಭ್ರಮವು ಮಡಿಕೇರಿಯಲ್ಲಿ ಸರಳವಾಗಿ ನೆರವೇರಿತಾದರೂ, ಅದಕ್ಕೆ ಪೂರ್ವಭಾವಿಯಾಗಿ ಮುದ್ರಾರ್ಣವದ ಅನಾವರಣದ ಸಡಗರದ ಕಾರ್ಯಕ್ರಮ ವರುಷದಿಂದ ವರುಷಕ್ಕೇರುತ್ತಿರುವ ಮೆಟ್ಟಿಲಿಗೆ ಸಾಕ್ಷಿ ಹೇಳಿತು.

೪ನೇ ವಾರ್ಷಿಕ ಸಂಭ್ರಮವು ದಿನಾಂಕ ೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರಿನಲ್ಲಿ ನೆರವೇರಿತು. ಪ್ರಧಾನ ಅತಿಥಿಗಳಾಗಿ ಪ್ರಧಾನ್ ಗುರುದತ್, ಅಧ್ಯಕ್ಷರು, ಕರ್ನಾಟಕ ಅನುವಾದ ಅಕಾಡೆಮಿ; ಡಾ. ಶಂಕರ್, ಮನಶಾಸ್ತ್ರಜ್ಞರು ಮತ್ತು ಅಷ್ಟಾವಧಾನಿಗಳು; ಡಾ||ಜಿ.ಬಿ. ಹರೀಶ್, ವಿಮರ್ಶಕರು ಹಾಗೂ ಪ್ರಾಧ್ಯಾಪಕರು, ತುಮಕೂರು ವಿ.ವಿ; ಮುರಳೀಧರ್ ರಾವ್, ಹಿರಿಯ ನಾಟ್ಯಾಚಾರ್ಯ, ಮಂಗಳೂರು; ಹಾಗೂ ಧಾರವಾಢದ ಯಕ್ಷಗಾನ ಸಾಹಿತಿ ಮತ್ತು ಕವಿಗಳಾದ ದಿವಾಕರ ಹೆಗಡೆ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಮನೋರಮಾ ಬಿ. ಎನ್ ಅವರ ‘ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣಗೊಂಡಿತು.

ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸಿದ್ದು ಈ ಪ್ರಶಸ್ತಿಗೆ ಮೊದಲು ಭಾಜನರಾದವರು. ಶ್ರೀಮತಿ ಪ್ರಿಯಾ ರಾಮನ್.

ಗುರು ಮುರಳೀಧರ ರಾವ್ ಮತ್ತು ದಿವಾಕರ ಹೆಗಡೆಯವರನ್ನು ಈ ಸಂದರ್ಭ ಅಭಿವಂದಿಸಲಾಯಿತು. ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಐಶ್ವರ್ಯಾ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಭರತನಾಟ್ಯ ಕಾರ್ಯಕ್ರಮವೂ ಈ ಸಂದರ್ಭ ಜರುಗಿತು. ಈ ಸಂದರ್ಭ ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್, ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ ಬಿ.ಜಿ.ನಾರಾಯಣ ಭಟ್, ಚೈತ್ರರಶ್ಮಿ ಸಂಪಾದಕ ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು.

೫ನೇ ವರ್ಷ ಪೂರ್ಣಗೊಳಿಸಿದ ಸಂಭ್ರಮ ನಿಜಕ್ಕೂ ಸ್ಮರಣೀಯ. ಕರ್ನಾಟಕದಲ್ಲೇ ಮೊತ್ತ ಮೊದಲ ಬಾರಿಗೆ ನೂಪುರ ಭ್ರಮರಿ ಪ್ರತಿಷ್ಠಾನವು ಸಂಘಟಿಸಿದ  ನೃತ್ಯ ಸಂಶೋಧನಾ ವಿಚಾರಸಂಕಿರಣವು ಜಯಭೆರಿಯನೇ ಗಳಿಸಿತ್ತಲ್ಲದೆ ಸಂಶೋಧನಾ ಸಂಗ್ರಹಸೂಚಿ, ಪುಸ್ತಕ-ಪತ್ರಿಕಾ ಸೂಚಿಯನೊಳಗೊಂಡ ಹಲವು ಬಗೆಯ ಲೇಖನ, ವಿಮರ್ಶಾ ಮಾರ್ಗದರ್ಶಿಯ ವಿಶೇಷ ಸಂಕಲನವು ಅನಾವರಣಗೊಂಡಿತು. ನಾಲ್ಕು ಪ್ರಬುದ್ಧ ಸಂಶೋಧನಾ ಪ್ರಬಂಧವಾಚನ, ೩ ವಿಶೇಷ ಉಪನ್ಯಾಸ, ವಿದ್ವಾಂಸರೊಂದಿಗೆ ಸಂವಾದ, ಪ್ರತಿಭಾ ಸಾಮಗರಿಗೆ ವಿಮರ್ಶಾ ಪ್ರಶಸ್ತಿ, ಶತಾವಧಾನಿ ಡಾ.ಆರ್.ಗಣೇಶ್, ಎಚ್.ಎಸ್.ಗೋಪಾಲರಾವ್, ಪ್ರೊ.ಶೇಷ ಶಾಸ್ತ್ರಿ,ಖ್ಯಾತ ನೃತ್ಯಕಲಾವಿದ ಶ್ರೀಧರ್, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ರಂತಹ ಹಿರಿಯರಿಂದ, ಸಂಶೋಧಕರಿಂದ ಆಶೀರ್ವಾದದೊಂದಿಗಿನ ಬೆಂಬಲ-ಉಪಸ್ಥಿತಿ, ಚಿಂತನ-ಮಂಥನ, ಸಂಶೋಧನಾಧಾರಿತ ನೃತ್ಯ ಕಾರ್ಯಕ್ರಮ ಮತ್ತು ಎಲ್ಲಾ ಪ್ರಯತ್ನಕ್ಕೂ ಭವಿತವ್ಯದಲ್ಲಿ ಸಿದ್ಧ ಅಡಿಪಾಯ ನೀಡುವಂತೆ ಒಲುಮೆಯ ಗೆಳೆಯರ ಸದಾಶಯದೊಂದಿಗೆ ಪ್ರಾರಂಭವಾದ ನೃತ್ಯ ಸಂಶೋಧಕರ ಒಕ್ಕೂಟವೆಂಬ ಸಂಶೋಧನೆ-ನೃತ್ಯದ ತಂತುಗಳನ್ನು ಬೆಸೆಯುವ ಕೆಲಸ.. ಒಟ್ಟಿನಲ್ಲಿ ಎಲ್ಲಾ ಹಂತಗಳನ್ನು ಬರೆಯಹೊರಟರೆ ಪುಟಗಟ್ಟಲೆ ಸಾಲದು.

ಕಳೆದ 6 ವರ್ಷಗಳಲ್ಲಿ, ಕೆಲವೇ ಕೆಲವು ಸಂಚಿಕೆಗಳಲ್ಲೇ ಪ್ರಬುದ್ಧ ಗುರು-ಕಲಾವಿದರು, ಹೆಸರಾಂತ ವಿದ್ವಾಂಸರು, ಸಂಶೋಧಕರು ಮತ್ತು ಓದುಗರ ಹರಕೆ-ಹಾರೈಕೆ- ಆಶೀರ್ವಾದ -ಮಾನ್ಯತೆ ಪಡೆದಿರುವ ನೂಪುರ ಭ್ರಮರಿಯನ್ನು ಗಮನಿಸಿದರೆ ಗುಣಮಟ್ಟದ ಸಮಗ್ರ ಕಲ್ಪನೆ ಇದಿರು ನಿಲ್ಲುತ್ತದೆ.ಈಗಾಗಲೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳು, ನೃತ್ಯ ವಿದ್ಯಾಲಯಗಳು ತಾವೇ ಸ್ವಾಗತವನ್ನಿತ್ತು ತೆರೆದ ಹೃದಯದಿಂದ ಸ್ವೀಕರಿಸಿವೆ. ಕಏವಲ ಒಂದು ನಿಯತಕಾಲಿಕೆಯಷ್ಟೇ ಆಗಿರದೆ ಪರಾಮರ್ಶನದ ಜರ್ನಲ್ ಆಗಿ, ಹಲವು ಮಂದಿ ವಿದ್ವಂಸರು ಕಾತರದಿಂದ ನಿರೀಕ್ಷಿಸಿ ಓದಲ್ಪಡುವ  ಪತ್ರಿಕೆಯಾಗಿ ಬೆಳೆದಿದೆ. ಜೊತೆಗೆ ನೂಪುರ ಭ್ರಮರಿಯೆಂಬುದು ಈಗ ಸಂಶೋಧನಾ ಪ್ರತಿಷ್ಠಾನವೂ ಹೌದು, ನೃತ್ಯ ಸಂಶೋಧಕರ ಒಕ್ಕೂಟವೂ ಹೌದು.ಇವೆಲ್ಲವೂ ಸಾಧ್ಯವಾಗುತ್ತಿರುವುದು ಶ್ರಮ, ಸಹಕಾರ, ಪ್ರೋತ್ಸಾಹದಿಂದ. ನಿಮ್ಮ ಬೆಂಬಲ ಅನವರತ ನಮ್ಮನ್ನು ಕಾಯಲಿ.

ನೂಪುರ ಭ್ರಮರಿಯ ಸಂಪಾದಕೀಯ ಬಳಗ :

ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮತ್ತು ನೂಪುರ ಭ್ರಮರಿ ಪ್ರತಿಷ್ಠಾನದ ಅಧ್ಯಕ್ಷೆ ಮನೋರಮಾ ಬಿ. ಎನ್.

ವೃತ್ತಿಯಿಂದ ಅಧ್ಯಾಪಿಕೆಯೂ, ಸಾಧನೆಯಿಂದ ಕಲಾವಿದೆಯೂ, ಸಂಶೋಧಕಿಯೂ ಆದ ಶ್ರೀಮತಿ ಮನೋರಮಾ. ಬಿ. ಎನ್. ಇವರು ನೂಪುರ ಭ್ರಮರಿಯ ಪ್ರಧಾನ ಸಂಪಾದಕಿಯಾಗಿ ಪತ್ರಿಕೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣಕರ್ತರು. ಪತ್ರಿಕೋದ್ಯಮ ವಿದ್ಯಾರ್ಥಿನಿ & ಅಧ್ಯಾಪಿಕೆಯಾಗಿ ಹಾಗೂ ಸುಮಾರು 20 ವರ್ಷಗಳ ಭರತನಾಟ್ಯ ಕ್ಷೇತ್ರದ ಅನುಭವವಿರುವ ಇವರು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಕಂಡುಕೊಂಡರು. ಇದುವೇ ಈ ಪತ್ರಿಕೆಯ ಜನನಕ್ಕೆ ಅವರಿಗೆ ಪ್ರೇರಣೆಯಾಯಿತು.manorama

ಬಾಲ್ಯದಿಂದಲೂ ಲಲಿತಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬೆಳೆದ ಇವರು ಕಲೆಯ ಸಾಧನೆಯ ಮಹದಾಸೆಯನ್ನು ಹೊತ್ತು ಸ್ನಾತಕೋತ್ತರ ಪದವಿಯನ್ನು ಪಡೆದು, ಯು.ಜಿ.ಸಿ. ಪರೀಕ್ಷೆಯನ್ನು ಚೊಚ್ಚಲ ಪ್ರಯತ್ನದಿಂದಲೇ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಮೂರು ವರ್ಷ ಮಡಿಕೇರಿ, ಮಂಗಳೂರು, ಉಜಿರೆಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಬೆಂಗಳೂರಿನ ನಾಗರಭಾವಿಯಲ್ಲಿರುವ ಪ್ರತಿಷ್ಟಿತ; ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕಿಯಾಗಿ ಪ್ರೊ.ಜಿ.ಕೆ.ಕಾರಂತ್ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರಕ್ಕೆ ಸಿನಿಮಾ ಸಬ್ಸಿಡಿ ವಿಷಯದಲ್ಲಿ ಅಧ್ಯಯನವೊಂದನ್ನು ಸಿದ್ಧಪಡಿಸಲು ನೆರವಾಗಿದ್ದಾರೆ. ಪ್ರಸ್ತುತ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ’ಕರ್ನಾಟಕದಲ್ಲಿ ನಟುವಾಂಗ ಪರಂಪರೆ’ಯ ಕುರಿತಾಗಿ ಅಧ್ಯಯನ ನಡೆಸಲು ಫೆಲೋಶಿಪ್ ಕೂಡಾ ಪಡೆದಿದ್ದಾರೆ.

2008ರಲ್ಲಿ ಯು ಎಸ್ ಎ ಯ ಚಿಕಾಗೋದಲ್ಲಿ ನಡೆದ ಅಕ್ಕ- ಕನ್ನಡ ಒಕ್ಕೂಟಗಳ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಗಾಗಿ ನಡೆದ ಜಾಗತಿಕ ಲೇಖನ ಸ್ಪರ್ಧೆಯಲ್ಲಿ ಇವರ  ‘ಪ್ರದರ್ಶಕ ಕಲೆಗಳಲ್ಲಿ ಕನ್ನಡಿಗರ ಫ್ಯೂಷನ್ ಪರಂಪರೆ’ ಎಂಬ  ವಿದ್ವತ್ಪೂರ್ಣ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಪ್ರಥಮ ಪ್ರಶಸ್ತಿ ದೊರೆತಿದೆ.ಇವರ ಸಾಹಿತ್ಯ/ನೃತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿದ ಅಖಿಲ ಹವ್ಯಕ ಮಹಾಸಭೆಯು ೨೦೦೮-೦೯ ನೇ ಸಾಲಿನ ವಿದ್ವತ್ ಸಮ್ಮಾನನವನ್ನಿತ್ತು ಸನ್ಮಾನಿಸಿ ಗೌರವಿಸಿದೆ.

ತಂದೆ: ಬಿ. ಜಿ. ನಾರಾಯಣ ಭಟ್, ತಾಯಿ : ಸಾವಿತ್ರಿ ಬಿ. ಎನ್, ಸಹೋದರ: ಬಿ.ಎನ್. ರಾಜಗೋಪಾಲ್ ; ಮೂಲತಃ ದಕ್ಷಿಣ ಕನ್ನಡದ ಪಂಜ ಸೀಮೆಯವರಾದರೂ ಮಡಿಕೇರಿಯಲ್ಲಿ ನೆಲೆ ನಿಂತವರು, ಇವರ ಪೂರ್ವಿಕರು ಮಡಿಕೇರಿಯ ಲಿಂಗರಾಜನಿಗೆ ಆಸ್ಥಾನ ಪುರೋಹಿತರಾಗಿ ಸೇವೆ ಸಲ್ಲಿಸಿದವರು. ಮನೋರಮಾ ಅವರ ಪ್ರಾಥಮಿಕ, ಪ್ರೌಢ, ಪಿಯುಸಿ ವಿದ್ಯಾಭ್ಯಾಸ : ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರಥಮದರ್ಜೆ ಕಾಲೇಜು, ಮಡಿಕೇರಿ.; ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಕೊಡಗಿಗೇ ಪ್ರಥಮ ಸ್ಥಾನ (೧೨೪/೧೨೫ ಅಂಕ) ಪಡೆದು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಚಿನ್ನದ ಪದಕವನ್ನು ಪಡೆದವರು. ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರ, ಇಂಗ್ಲೀಷ್  ಐಚ್ಛಿಕದಲ್ಲಿ ಉನ್ನತ  ಶ್ರೇಣಿಯಲ್ಲಿ ಪದವಿ ಪಡೆದರು.ಇವರ ಪತಿ ವಿಷ್ಣು ಪ್ರಸಾದ್ ನಿಡ್ದಾಜೆ ಭ್ರಮರಿಯ ಬಳಗದಲ್ಲಿ ಸಕ್ರಿಯರು.

ಭರತನಾಟ್ಯ
ಭರತನಾಟ್ಯದ ಪ್ರಾರಂಭಿಕ ಶಿಕ್ಷಣವನ್ನು ತಮ್ಮ ೨ನೇ ತರಗತಿಯಲ್ಲಿ ಮಡಿಕೇರಿಯ ನಾಟ್ಯನಿಕೇತನ ಸಂಸ್ಥೆಯ ಮಾಜಿ ಪ್ರಾಂಶುಪಾಲೆ, ಪ್ರಸ್ತುತಃ ಚಂದ್ರದೀಪ ನೃತ್ಯಸಂಸ್ಥೆಯ ಪ್ರಾಚಾರ್ಯೆ, ಪಂದನಲ್ಲೂರು ಶೈಲಿಯ ಶ್ರೀಮತಿ ವಿದುಷಿ ವೀಣಾ ಕಾರಂತ್ ಅವರಲ್ಲಿ ಕೈಗೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ನೃತ್ಯ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಅಲ್ಪಕಾಲ ಭಾರತೀಯ ಸಂಗೀತ ನೃತ್ಯ ಕಲಾ ಪರಿಷತ್‌ನ ಗುರು ಅಂಬಳೆ ರಾಜೇಶ್ವರಿ, ಮಂಡ್ಯದ ಗುರುದೇವ ಲಲಿತ ಕಲಾ ಅಕಾಡೆಮಿಯ ಗುರು ಶ್ರೀಮತಿ ವಿದುಷಿ ಚೇತನಾ ರಾಧಾಕೃಷ್ಣ ಅವರಲ್ಲಿ ಶಿಷ್ಯವೃತ್ತಿ ಕೈಗೊಂಡು, ಮಡಿಕೇರಿಯ ನೃತ್ಯ ಮಂಟಪ ಟ್ರಸ್ಟ್‌ನ ಪ್ರಾಚಾರ್ಯೆ ಶ್ರೀಮತಿ ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರಲ್ಲಿ ಕಲಾಕ್ಷೇತ್ರ ಶೈಲಿಯ ನೃತ್ಯಾಭ್ಯಾಸ ಮಾಡಿದ ಮನೋರಮಾ, ತದನಂತರ ಸ್ವಂತ ಶ್ರಮದಿಂದ ವಿದ್ವತ್ ಶ್ರೇಣಿಯನ್ನು ಪಡೆದವರು. ಪ್ರಶಸ್ತಿ, ಪ್ರದರ್ಶನ, ಪರೀಕ್ಷೆಗಳಿಗೆಲ್ಲದಕ್ಕಿಂತಲೂ ನೃತ್ಯದ ಬಗೆಗಿನ ತುಡಿತ, ಅರಿಯುವಲ್ಲಿ ಜ್ಞಾನ ಮುಖ್ಯ ಎನ್ನುವ ಇವರು ಪ್ರಸ್ತುತ ನಾಟ್ಯ ಕರಣಗಳ ಕುರಿತು  ಭರತನೃತ್ಯದ ಹಿರಿಯ ಗುರು ಪದ್ಮಾ ಸುಬ್ರಹ್ಮಣ್ಯಂ ಪರಂಪರೆಯ ಡಾ.ಶೋಭಾ ಶಶಿಕುಮಾರ್ ಅವರಲ್ಲಿ  ನೃತ್ಯಾಭ್ಯಾಸ ನಡೆಸುತ್ತಿದ್ದಾರೆ.
ಹಲವು ನೃತ್ಯಸಂಯೋಜನೆ ಮಾಡಿರುವ ಅನುಭವವಷ್ಟೇ ಅಲ್ಲದೆ, ಸಂಪನ್ಮೂಲ ವ್ಯಕ್ತಿಯಾಗಿಯೂ, ತೀರ್ಪುಗಾರಾಗಿಯೂ, ನೃತ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ನೃತ್ಯ ಸಮಾರಂಭಗಳಲ್ಲಿ ಇವರು ನಿರ್ವಹಿಸುವ ಅಚ್ಚುಕಟ್ಟಾದ, ಆಕರ್ಷಕ ನಿರೂಪಣೆ ಜನಮನದ ಮನ್ನಣೆ ಗಳಿಸಿದರೆ, ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿಯ ಜೊತೆಗೆ, ಜಿಲ್ಲಾ ಮತ್ತು ವಿಶ್ವವಿದ್ಯಾನಿಲಯದ ಭರತನಾಟ್ಯ ಸ್ಪರ್ಧೆಗಳಲ್ಲೆಲ್ಲಾ ಬಹುಮಾನಗಳನ್ನು ಬಾಚಿಕೊಂಡಿರುವ ಇವರನ್ನು ಹಲವು ಸನ್ಮಾನಗಳೂ ಅರಸಿ ಬಂದಿವೆ.

ಯಕ್ಷಗಾನ

ಶ್ರೀರಾಮಚಂದ್ರಾಪುರ ಮಠ ಯಕ್ಷಗಾನ ಮೇಳದ ವ್ಯವಸ್ಥಾಪಕರೂ, ಯಕ್ಷಗಾನ, ತಾಳಮದ್ದಳೆ ಕಲಾವಿದ ಉಜಿರೆ ಅಶೋಕ ಭಟ್ ಅವರ ಗರಡಿಯಲ್ಲಿ ಉಜಿರೆಯ ‘ಯಕ್ಷಕೂಟ’ದಲ್ಲಿ ಮನೋರಮಾ ಪಳಗಿದರು. ತೆಂಕುತಿಟ್ಟು ಯಕ್ಷಗಾನದ ಕೌಶಲ್ಯಗಳನ್ನು ಕಲಿತು, ಹವ್ಯಾ ಕಲಾವಿದೆಯಾಗಿ ಸತತ ೩ ವರ್ಷಗಳ ಕಾಲ ಧರ್ಮಸ್ಥಳ ಲಕ್ಷದೀಪೋತ್ಸವ, ಮಹಾನಡಾವಳಿ, ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಅಖಿಲ ಕರ್ನಾಟಕ ಮಹಾ ಯಕ್ಷಗಾನ ಸಮ್ಮೇಳನ, ಬೆಂಗಳೂರು ದೂರದರ್ಶನ, ಉಜಿರೆ, ಬೆಳ್ತಂಗಡಿ, ಮಂಗಳೂರು, ಮಡಿಕೇರಿ ಮುಂತಾದವನ್ನೂ ಒಳಗೊಂಡಂತೆ ಪ್ರತಿಷ್ಟಿತ ಕಲಾವಿದರೊಂದಿಗೆ ಸುಮಾರು ೫೦ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಸಂಜಯ, ಸೀತೆ, ಮಯೂರದ್ವಜ, ಲಕ್ಷ್ಮಿ, ಮೋಹಿನಿ, ದೇವಿ ಮುಂತಾದ ಭಾವನಾತ್ಮಕ ಅಭಿನಯಪೂರ್ಣ ಪಾತ್ರಗಳು ಮತ್ತು ರಾಜ, ಹಾಸ್ಯ, ಪಕಡಿ ವೇಷಗಳು ಮನ್ನಣೆಗೆ ಪಾತ್ರವಾಗಿದೆ. ಯಕ್ಷಗಾನದ ಮಾಸಿಕ ಯಕ್ಷಪ್ರಭಾದ ದಶಮಾನೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾದ ಮನೋರಮಾ, ಮಂಗಳೂರಿನ ಹೆಮ್ಮೆಯ ಯಕ್ಷೋತ್ಸವ ಸ್ಪರ್ಧೆಯಲ್ಲಿ ವಿಶೇಷ ಪ್ರಶಸ್ತಿಗೆ ಪಾತ್ರವಾಗಿ, ಸತತ ೩ ವರ್ಷಗಳ ಕಾಲ ಅಲ್ಲಿ ನೀಡಿದ ಪ್ರದರ್ಶನಗಳಲ್ಲಿ ಹಿರಿಯ ಕಲಾವಿದರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ.

ಅಷ್ಟೇ ಅಲ್ಲದೆ ಯಕ್ಷ ದಿಗ್ಗಜರಿಂದ ಇವರ ಪತ್ರಿಕೆಯ ಪ್ರಯತ್ನಗಳಿಗೆ ಹಾರ್ದಿಕ ಮನ್ನಣೆ ದೊರೆತಿದೆ. ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡ  ಸುಳ್ಯದಲ್ಲಿ ಜರುಗಿದ ಯಕ್ಷಗಾನ ವಿದ್ವಾಂಸರನ್ನೊಳಗೊಂಡ ರಾಜ್ಯ ಮಟ್ಟದ ಯಕ್ಷಗಾನ  ಶಿಕ್ಷಣ ಕಾರ್ಯಾಗಾರ, ಮತ್ತು ಪರೀಕ್ಷಾ ಪದ್ಧತಿ ಕರಡು ಪ್ರತಿಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮನ್ನಣೆಗೆ ಪಾತ್ರರಾದವರಲ್ಲಿ  ಕೆಲವೇ ಕೆಲವು ಮಹಿಳೆಯರಲ್ಲಿ ಮನೋರಮಾ ಅವರು ಒಬ್ಬರು. ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನೂ ಇವರು ಕೈಗೆತ್ತಿಕೊಂಡು ಮುನ್ನಡೆಯುತ್ತಿದಾರೆ.

ಏಕಪಾತ್ರಾಭಿನಯ-ಏಕವ್ಯಕ್ತಿ ಪ್ರದರ್ಶನ
‘ಚಂದ್ರಹಾಸ- ದುಷ್ಟಬುದ್ಧಿ’- ಜನಮನ್ನಣೆ ಮತ್ತು ಹಲವು ಜಿಲ್ಲಾ, ವಿಶ್ವವಿದ್ಯಾನಿಲಯ, ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ತಂದಿತ್ತ ಇವರ ಏಕಪಾತ್ರಾಭಿನಯ. ಸುಮಾರು ೫೦ ಕ್ಕೂ ಹೆಚ್ಚು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮೂಕಾಭಿನಯ, ಕಿರುನಾಟಕಗಳನ್ನು ನಿರ್ದೇಶಿಸಿದ ಅನುಭವ, ರಾಷ್ಟ್ರೀಯ ಪ್ರಶಸ್ತಿಗಳೂ ಜೊತೆಗಿದೆ. ಎಸ್.ಎಲ್.ಭೈರಪ್ಪ ಅವರ ’ಮಂದ್ರ’ ಕಾದಂಬರಿಯನ್ನಾಧರಿಸಿ ರಂಗಾಯಣ ನಿರ್ದೇಶಕ ಕಲಾಗಂಗೋತ್ರಿ ಸ್ಥಾಪಕ ಡಾ. ಬಿ.ವಿ.ರಾಜಾರಾಮ್ ನಿರ್ದೇಶಿಸಿದ ನಾಟಕದಲ್ಲಿ ಸುಪ್ರಸಿದ್ಧ ರಂಗನಟರೊಂದಿಗೆ ನಟಿಸಿ ಬೆಂಗಳೂರಿನ ರಂಗಶಂಕರವನ್ನೂ ಒಳಗೊಂಡಂತೆ ನರ್ತಕಿ ’ಮನೋಹರಿ ದಾಸ್’ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಂಗೀತ, ಸುಗಮ ಸಂಗೀತ
ಕರ್ನಾಟಕ ಸಂಗೀತ ಶಾಖೆಯ ದಿವಂಗತ ಸುಧಾ ಶ್ರೀಧರ್, ವಿದುಷಿ ಶಾಂತಾಬಾಯಿ ಅವರಲ್ಲಿ ಅಭ್ಯಸಿಸಿ, ವಿದುಷಿ ಶ್ರೀಮತಿ ಸೌಮ್ಯಾ ರವಿಶಂಕರ್ ಇವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ, ಸಂಗೀತ ಪ್ರಾಥಮಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ಜಿಲ್ಲಾ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ೭೫ಕ್ಕಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಇವರು, ದೂರದರ್ಶನದಲ್ಲಿ, ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳಲ್ಲಿ ಸ್ವರ ಸಂಯೋಜಿಸಿ ಸುಗಮಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.

ಸಾಹಿತ್ಯ ಸಂಬಂಧಿ ಚಟುವಟಿಕೆಗಳು
ಬಾಲ್ಯದಿಂದಲೇ ಭಾಷಣ, ಚರ್ಚೆ, ಪ್ರಬಂಧ, ಆಶುಭಾಷಣ, ಕಥೆ-ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹಳಷ್ಟು ಬಹುಮಾನಗಳನ್ನು ಬಾಚಿಕೊಂಡಿರುವ ಇವರು, ಕಾರ್ಯಕ್ರಮ ನಿರೂಪಣೆಯಲ್ಲೂ ಸಿದ್ಧಹಸ್ತರು. ರಾಜ್ಯ ಸಹಕಾರ ಮಹಾಮಂಡಳ, ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಹೊಂಬೆಳಕು ಸಂಸ್ಥೆ, ಎನ್‌ಎಂಕೆ‌ಆರ್‌ವಿ ಕಾಲೇಜು ಮುಂತಾಗಿ ಪ್ರಸಿದ್ಧ ರಾಜ್ಯ ಮಟ್ಟದ ಸಾಹಿತ್ಯ ಸಂಬಂಧಿ ಚಟುವಟಿಕೆಗಳಲ್ಲಿ ಪ್ರಶಸ್ತಿ ಪಡೆದಿರುವ ಮನೋರಮಾ, ೨೦೦೨ರಲ್ಲಿ ಕೊಡಗಿನ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಕುರಿತಾಗಿ ಇತಿಹಾಸ ಪುಸ್ತಕ ರಚಿಸಿ, ವಿದ್ವಜ್ಜನರ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದಾರೆ.  ಈ ಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿ ನೂಪುರ ಭ್ರಮರಿ ಪ್ರಥಮ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ ಮತ್ತು ಭರತನಾಟ್ಯ ಹಸ್ತಮುದ್ರೆಗಳ ಕುರಿತಾದ ಅಧ್ಯಯನ ಕೃತಿ ’ಮುದ್ರಾರ್ಣವ’ ಹಾಗೂ ಭರತನಾಟ್ಯ ಮಾರ್ಗ ಪರಂಪರೆಯ ಕುರಿತ ’ನೃತ್ಯ ಮಾರ್ಗ ಮುಕುರ’ ಕೃತಿಗಳು ಪ್ರಕಾಶನಗೊಂಡು ಮನ್ನಣೆ ಪಡೆದಿದೆ.
ಹವ್ಯಾಸಿ ಪತ್ರಕರ್ತೆಯಾಗಿ ಇವರ ಸುಮಾರು ೧೫೦ಕ್ಕಿಂತಲೂ ಹೆಚ್ಚು ಲೇಖನ, ಬರಹ, ನುಡಿಚಿತ್ರಗಳು ರಾಜ್ಯ ಮಟ್ಟದ ದೈನಿಕ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಪ್ರಶಂಸೆಗೆ ಪಾತ್ರವಾಗಿವೆ. ರಾಷ್ಟ್ರ, ರಾಜ್ಯಮಟ್ಟದ ಹಲವು ವಿಚಾರ ಸಂಕಿರಣ, ಕಾರ್ಯಗಾರ-ಶಿಬಿರಗಳಲ್ಲಿ ಭಾಗವಹಿಸಿರುವ ಇವರು, ಹಲವು ವಾರ್ಷಿಕ ಸಂಚಿಕೆಗಳ ಸಂಪಾದಕತ್ವದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅತಿಥಿ ಅಂಕಣಗಾರ್ತಿಯಾಗಿ, ಪತ್ರಿಕೆಗಳಿಗೆ ಆಹ್ವಾನಿತ ಬರಹಗಾರರಾಗಿ ಹಲಕೆಲವು ಕಲಾಸಂಘಟನೆಗಳ ಸಕ್ರಿಯ ಸದಸ್ಯರಾಗಿ ಪರಿಚಿತರು ಕೂಡಾ!

’ಮುದ್ರಾರ್ಣವ’

ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. (ಈ ನಿಟ್ಟಿನಲ್ಲಿ ಪತ್ರಿಕೆಯೂ ‘ಹಸ್ತಮಯೂರಿ’ ಯ ಮೂಲಕ ಗಮನಾರ್ಹ ರೀತಿಯಿಂದ ಪ್ರಯತ್ನ ಮಾಡುತ್ತಿರುವುದು ನಿಮಗೆ ತಿಳಿದ ವಿಷಯವೇ. ) ಆದ್ದರಿಂದ ಹಸ್ತ ಮುದ್ರೆಗಳ ಭಾವ, ಉಪಯೋಗ, ಸಂವಹನದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಅವುಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಫಲವೇ ;
‘ಮುದ್ರಾರ್ಣವ’. ಸುಮಾರು ೩೦೦ ಪುಟಗಳ ಗ್ರಂಥ.

  1. ಭರತನಾಟ್ಯದಲ್ಲಿ ಉಪಯೋಗಿಸಲಾಗುತ್ತಿರುವ ಹಸ್ತಗಳನ್ನು ಪ್ರಧಾನವಾಗಿರಿಸಿಕೊಂಡು ಇತರೆ ಮರೆಯಾಗಿರುವ ಹಸ್ತಗಳ ಕುರಿತ ಅವಲೋಕನ ಮತ್ತು ಅವುಗಳ ಸಂವಹನ ಪ್ರಕ್ರಿಯೆ ಎಷ್ಟರ ಪಟ್ಟಿಗೆ ಮಹತ್ವಪೂರ್ಣವಾಗಿದೆ ಎಂಬುದು ಸಂಸೋಧನೆಯ ಮೂಲ ಉದ್ದೇಶ. ಜೊತೆಗೆ ಇತರೆ ನೃತ್ಯಪದ್ಧತಿ (ಉದಾ: ಕಥಕ್ಕಳಿ, ಮಣಿಪುರಿ, ಓಡಿಸ್ಸಿ, ಯಕ್ಷಗಾನ)ಗಳಲ್ಲಿ ಬಳಕೆಯಾಗುತ್ತಿರುವ ಹಸ್ತಗಳು ಮತ್ತು ಅವುಗಳಲ್ಲಿ ಎಷ್ಟು ನಾವು ದಿನನಿತ್ಯದ  ಜೀವನದಲ್ಲಿ ಬಳಸಿಕೊಳ್ಳುತ್ತೇವೆ ಎಂಬ ಅವಲೋಕನ. ಮತ್ತು ಅವುಗಳಲ್ಲಿನ ಸಮಾನ ಮತ್ತು ವ್ಯತ್ಯಾಸ ಅಂಶಗಳೆಡೆಗೆ ದೃಷ್ಟಿ.
  2. ಅಭಿನಯದರ್ಪಣದ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಅಧ್ಯಯನ ನಡೆದರೂ ಉಳಿದಂತೆ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಹಸ್ತ ಲಕ್ಷಣ ದೀಪಿಕಾ, ಭರತಸಾರ, ಭರತಕಲ್ಪಲತಾ ಮಂಜರಿ, ಸಾರಸಂಗ್ರಹ, ಲಾಸ್ಯರಂಜನ, ಸಂಗೀತ ರತ್ನಾಕರ, ನರ್ತನನಿರ್ಣಯ, ಬಾಲರಾಮ ಭರತ, ಪುರಾಣಗಳು, ಸಂಹಿತೆಗಳು, ಪ್ರಣೀತಗಳು, – ಹೀಗೆ ಹಲವಾರು ಗ್ರಂಥಗಳಲ್ಲಿ ಪ್ರಸ್ತಾಪಿಸಿದ ಹಸ್ತಗಳು, ಅವುಗಳ ವಿನಿಯೋಗ, ಮಹತ್ವ, ಪ್ರಚಲಿತದಲ್ಲಿ ಉಪಯೋಗವಾಗುತ್ತಿರುವ ಹಸ್ತಗಳು, ಅವುಗಳ ಮೂಲ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಗ್ರಾಂಥಿಕ ಹಿನ್ನಲೆಗಳು.
  3. ಹಸ್ತ ಮುದ್ರೆಗಳು ಮುದ್ರಾವಿಜ್ಞಾನದಲ್ಲಿ, ಹಠಯೋಗ ಪ್ರದೀಪಿಕಾ ಮುಂತಾಗಿ ಯೋಗಶಾಸ್ತ್ರದಲ್ಲಿ, ಮುದ್ರಾ ಶಾಸ್ತ್ರ, ಧಾರ್ಮಿಕ ಪೂಜಾ ವಿಧಿ, ಪ್ರತಿಮಾಶಾಸ್ತ್ರ, ತಂತ್ರ-ಮಂತ್ರಗಳಲ್ಲಿ ಹೇಗೆ ಬಳಕೆಯಾಗುತ್ತಿವೆ ಮತ್ತು ಅವುಗಳ ಉಪಯೋಗ. ಮುಖ್ಯವಾಗಿ ಮುದ್ರೆಗಳ ಬಳಕೆಯಿಂದಾಗುವ ಆರೋಗ್ಯಕರ ಆಯಾಮಗಳ ತುಲನೆ.
  4. ಅಧ್ಯಯನಕ್ಕೆ ಅವಶ್ಯವಿರುವ ಇತಿಹಾಸ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರಿಂದ ಆಳ ಸಂದರ್ಶನ, ಪ್ರದರ್ಶನಗಳ ಸಮೀಕ್ಷೆ, ಗ್ರಂಥ ಅಧ್ಯಯನ.

’ನೃತ್ಯ ಮಾರ್ಗ ಮುಕುರ’

ಮನೋರಮಾ ಬಿ. ಎನ್ ಅವರ ‘ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೬೦ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ. ಮಾರ್ಗ, ದೇಸೀ ನೃತ್ಯದ ಪರಿಕಲ್ಪನೆ, ಲೋಕಧರ್ಮಿ ನಾಟ್ಯಧರ್ಮಿ ಪ್ರಬೇಧಗಳು, ಆಯಾಯ ಕಾಲಘಟ್ಟದ ಲಾಕ್ಷಣಿಕರ ವ್ಯಾಖ್ಯಾನಗಳ ಮೂಲಕ ನಾಟ್ಯಪದ್ಧತಿಯ ಮಜಲುಗಳಲ್ಲಿ ವ್ಯತ್ಯಾಸ, ನಾಟ್ಯದ ಪರಿಕಲ್ಪನೆ ಕಾಲಾನಂತರದಲ್ಲಿ ನೃತ್ಯವಾದ ರೀತಿನೀತಿಯನ್ನೊಳಗೊಂಡಂತೆ ಭರತನಾಟ್ಯದ ಇತಿಹಾಸ, ಬದಲಾವಣೆ, ಬೆಳವಣಿಗೆ ಮತ್ತು ಕಛೇರಿಮಾರ್ಗವನ್ನು ಹೇಳುವ ಈ ಕೃತಿಯು ಆಲಯ ಮತ್ತು ರಾಜಾಶ್ರಯ ನೃತ್ಯಪದ್ಧತಿಯಲ್ಲಿ ಬೆಳೆದುಬಂದ ಭರತನಾಟ್ಯದ ವಿವಿಧ ಹಂತಗಳನ್ನೂ, ಭರತನಾಟ್ಯಕ್ಕೆ ಕರ್ನಾಟಕ ಸಂಗೀತದ ಕೊಡುಗೆಯನ್ನೂ ವಿವೇಚಿಸುತ್ತದೆ.

ರಸನಿರೂಪಣೆಯೇ ಕಲೆಯ ಅತ್ಯುನ್ನತ ಸಾಧನೆ ಎನ್ನುವ ಸಾರಾಂಶವನ್ನು ಹೇಳುವ ಈ ಕೃತಿ, ಭರತನಾಟ್ಯದ ಸಮಕಾಲೀನ ಬದಲಾವಣೆ, ಬೆಳವಣಿಗೆ, ವ್ಯತ್ಯಾಸ, ಲೋಪದೋಷ, ಗುಣಾವಗುಣಗಳನ್ನೂ ಸಾಕ್ಷ್ಯಸಮೇತ ವಿಶ್ಲೇಷಿಸಿದೆ. ಪುಷ್ಪಾಂಜಲಿ, ಅಲಾರಿಪ್ಪು ಮುಂತಾದ ನರ್ತನಪ್ರಕಾರಗಳಿಂದ ಮೊದಲ್ಗೊಂಡು ತಮಿಳ್ನಾಡು ಮತ್ತು ಮೈಸೂರು ಪರಂಪರೆಗಳಲ್ಲಿ ಬೆಳೆದುಬಂದ ವಿವಿಧ ನೃತ್ಯಾಂಗಗಳನ್ನೂ ಸೂಕ್ತ ದಾಖಲೆ, ಹಿನ್ನಲೆಗಳೊಂದಿಗೆ ಮೆಟ್ಟಿಲಿನೋಪಾದಿಯಲ್ಲಿ ಚರ್ಚಿಸಿದೆ. ನೃತ್ಯಕ್ಷೇತ್ರದ ಹಿರಿಯರ ಸಂದರ್ಶನ, ಗ್ರಂಥ ಪರಾಮರ್ಶನ, ಅವಲೋಕನ, ಕ್ಷೇತ್ರಕಾರ್ಯಾಧಾರಿತ ಸಂಶೋಧನೆಯಿಂದ ‘ನೃತ್ಯಮಾರ್ಗ ಮುಕುರ’ದ ವಿಷಯ ವಿಶ್ಲೇಷಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿನ ಭರತನಾಟ್ಯಕ್ಷೇತ್ರದ ಅಗತ್ಯ, ಅನಿವಾರ್ಯತೆ, ಸಮಸ್ಯೆಗಳಿಗೆ ಕನ್ನಡಿ ಹಿಡಿದಿರುವ ಈ ಪುಸ್ತಕ ನೃತ್ಯಕ್ಷೇತ್ರದ ಒಂದು ಕೊಡುಗೆ ಮತ್ತು ನಿಜಕ್ಕೂ ಮಾರ್ಗ ಮುಕುರವೆಂಬ ಹೆಸರಿಗೆ ಅನ್ವರ್ಥ.- ಎಂದಿದ್ದಾರೆ ಪುಸ್ತಕಕ್ಕೆ ವಿಶ್ಲೇಷಣೆಯನ್ನಿತ್ತ ಅಷ್ಟಾವಧಾನಿಗಳು, ಚಿತ್ರಕಾವ್ಯ ಪರಿಣತರು, ಪೃಚ್ಛಕರೂ ಆದ ಡಾ. ಆರ್. ಶಂಕರ್.

ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ‘ಇಂದಿನ’ ಭರತನಾಟ್ಯ ಎಂಬ ನೃತ್ಯಪದ್ಧತಿಗೂ ‘ಅಂದಿನ’ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ ಇರುವ ಸಂಬಂಧಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯುತ್ತಿದ್ದರೂ ತಾರ್ಕಿಕ, ತಲಸ್ಪರ್ಶಿಯಾದ ಅಧ್ಯಯನಗಳಾಗಿರುವುದು ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿ ನೃತ್ಯ ಮಾರ್ಗ ಮುಕುರ ಭರತನಾಟ್ಯ ನೃತ್ಯಮಾರ್ಗಕ್ಕೆ ಹಿಡಿದ ಕೈಗನ್ನಡಿಯೇ ಆಗಿರುವುದು ಅಭಿನಂದನೀಯ.- ಎಂದಿದ್ದಾರೆ ಪುಸ್ತಕಕ್ಕೆ ನಲ್ನುಡಿಯನ್ನಿತ್ತ ಕಲಾ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ.

ಇದರೊಂದಿಗೆ ಕಲಾ ಸಂಶೋಧನೆಗೆ ಸಂಬಂಧಿಸಿದಂತೆ ಪ್ರತಿಷ್ಠಾನವೊಂದನ್ನು ರೂಪಿಸಿ ಸ್ವಂತ ಪ್ರಕಾಶನ ಸಂಸ್ಥೆ ’ಸಾನ್ನಿಧ್ಯ’ದ ಹೊಣೆಯನ್ನೂ ಮನೋರಮಾ ಹೊತ್ತವರು. ಕರ್ನಾಟಕ ಸಂಶೋಧಕರ ಒಕ್ಕೂಟದ ಸಂಶೋಧನಾ ಜರ್ನಲ್ ’ಪರಿಶೋಧ’ದ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಸಂಶೋಧನಾ ಸತ್ರದಲ್ಲಿ ತೊಡಗಿಸಿಕೊಂಡವರು. ನೃತ್ಯ ಮತ್ತು ಸಂವಹನಕ್ಕೆ ಸಂಬಂಧಿಸಿದ ವಿಷಯದಲ್ಲಿ ಪಿ ಎಚ್ ಡಿ ವ್ಯಾಸಂಗ ನಿರತರು. ಇವರ ಆಯೋಜನೆಯಲ್ಲಿ ಹಿರಿಯ ವಿದ್ವಾಂಸರ ಸಮಿತಿಯೊಂದು ರೂಪುಗೊಂಡು ನೂಪುರ ಭ್ರಮರಿ’ಯ ಮೂಲಕ ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕದಲ್ಲೇ ವಿನೂತನ ಪ್ರಯತ್ನವಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆಯನ್ನು ಆರಂಭಿಸಲಾಗಿದೆ. ಜೊತೆಗೆ ಇವರ ಸಂಚಾಲಕತ್ವದಲ್ಲಿ ಕರ್ನಾಟಕದಲ್ಲಿ ನೃತ್ಯಸಂಸ್ಕೃತಿಗೆ ಸಂಬಂಧಿಸಿದಂತೆ ವಸ್ತುನಿಷ್ಠ ಅಧ್ಯಯನ, ಕ್ರಮಬದ್ಧವಾದ ಸಂಶೋಧನಾಕ್ರಮ ಮತ್ತು ಅವಕಾಶಗಳಿಗಾಗಿ ಒಂದು ದಿನದ ಸಂಶೋಧನಾ ಕಮ್ಮಟ/ವಿಚಾರಸಂಕಿರಣವನ್ನು ಕರ್ನಾಟಕ ಸಂಶೋಧಕರ ಒಕ್ಕೂಟ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಫೆಬ್ರವರಿ ೨೦ರಂದು  ಆಯೋಜಿಸಲಾಗಿದೆ.

ವಿಷ್ಣುಪ್ರಸಾದ್ ನಿಡ್ಡಾಜೆ :

ಪ್ರಸ್ತುತ ಫೆಡರಲ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾಗಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು, ಮೂಲತಃ  ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ನಿಡ್ಡಾಜೆ vishnu-prasadಮನೆತನದವರು. ಪುತ್ತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಉನ್ನತ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಕೆಲವು ಕಾಲ ಮೂಡಬಿದ್ರಿಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ, ಕೆಲವು ಕಾಲ ಕಂಪೆನಿಯೊಂದರಲ್ಲಿ ಗುಣಮಟ್ಟ ನಿಯಂತ್ರಣ ರಾಸಾಯನಿಕ ತಜ್ನರಾಗಿಯೂ ಸೇವೆ ಸಲ್ಲಿಸಿದ ವಿಷ್ಣುಪ್ರಸಾದ್,ಉತ್ತಮ ಚಿಂತಕರೂ, ಕಲಾಸಕ್ತರೂ ಹೌದು. ನೂಪುರ ಭ್ರಮರಿ ಬಳಗದ ಕ್ರಿಯಾಶೀಲ ಸದಸ್ಯರಾಗಿರುವ ಇವರು, ಪತ್ರಿಕೆಯ ವಿತರಣೆ ಹಾಗೂ ಪ್ರತಿಷ್ಠಾನದ ಟ್ರಸ್ಟಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

ವೇದಮೂರ್ತಿ ಬಿ.ಜಿ. ನಾರಾಯಣ ಭಟ್ :

ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕರೂ, ಸಮಿತಿ ಸದಸ್ಯರೂ ಆಗಿ ಕಳೆದ 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಸಜ್ಜನಿಕೆಯ, ವಿದ್ವತ್ ಪೂರ್ಣ ನೆಲೆಗಟ್ಟಿನ ವಿಮರ್ಶಕರು, ಸಹೃದಯಿ ಬರೆಹಗಾರರು,  ಸೃಷ್ಟಿಶೀಲ ಮನಸ್ಸಿನ ಕಲಾವಿದರು, ಹಿರಿಯ ಚಿಂತಕರು, ಮುಕ್ತ ಮನಸ್ಸಿನ ಹೋರಾಟಗಾರರು ಹಾಗೂ ಜನ ಮಾನಸಕ್ಕೆ ಹತ್ತಿರದ ಪಂಡಿತರು. ಮೂಲತಃ ದಕ್ಷಿಣ ಕನ್ನಡದ ಪಂಜಗ್ರಾಮದ ಬರ್ಲಾಯಬೆಟ್ಟು  ಎಂಬ ಪೌರೋಹಿತ್ಯ ಮನೆತನಕ್ಕೆ ಸೇರಿದ  ಇವರು ಕಡು ಬಡತನದಲ್ಲಿ ಬೆಳೆದು ಬಂದ ಶ್ರಮಜೀವಿ.  ಇವರು ನೂಪುರ ಭ್ರಮರಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರು ಮತ್ತು ಪತ್ರಿಕೆಯ ಕಛೇರಿ ವ್ಯವಸ್ಥೆ ನಿರ್ವಹಣೆ ಹೊತ್ತವರು. ಮಡಿಕೇರಿಯ ಹಾಲೇರಿ ರಾಜ ಮನೆತನಕ್ಕೆ ಇವರ ಪೂರ್ವಿಕರು ರಾಜಪುರೋಹಿತರಾಗಿ ಸೇವೆ ಸಲ್ಲಿಸಿ ಸನ್ಮಾನ-ಮಾನಪತ್ರ-ಉಂಬಳಿ ಭೂಮಿ-ಪ್ರಶಸ್ತಿ ಬಿರುದಾವಳಿಗಳಿಂದ ಶೋಭಿತರಾಗಿದ್ದಾರೆ.

ರಾಜಗೋಪಾಲ ಬಿ. ಎನ್
ಮಡಿಕೇರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಸ್ತರಣಾ ಶಾಖೆಯಲ್ಲಿ ಮೈಕ್ರೋಬಯಾಲಜಿ ಎಂ ಎಸ್ಸಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮಸ್ಥಾನ ಪಡೆದು ಪ್ರಸ್ತುತ  ಬೆಂಗಳೂರಿನ  ಅಂತರ್ರಾಷ್ಟ್ರೀಯ ಫಾರ್ಮಾ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನೂಪುರ ಭ್ರಮರಿಯ ಟ್ರಸ್ಟಿಗಳಲ್ಲೊಬ್ಬರು.rajagopal B.N

ವಿಮರ್ಶಕಶೀಲ ವ್ಯಕ್ತಿತ್ವದ ರಾಜ್, ಸರಳ ನಡೆನುಡಿಯ  ಹವ್ಯಾಸಿ ಬರಹಗಾರರು.

ಸಿ. ಎಸ್. ರಾಮಚಂದ್ರ ಹೆಗಡೆ :

ಶಿವಮೊಗ್ಗ ಜಿಲ್ಲೆಯ ಚಂದಳ್ಳಿ ಗ್ರಾಮದವರಾದ ರಾಮಚಂದ್ರ ಹೆಗಡೆ ಬಾಲ್ಯದಿಂದಲೂ ಶ್ರಮಜೀವಿ, ಸಂಘಟನಾಶೀಲ, ಸಾಹಿತ್ಯಾಸಕ್ತ; ರಾಷ್ಟ್ರ ಜಾಗೃತಿಯ ಕುರಿತಾಗಿ ಪ್ರೌಢ ಚಿಂತನೆಗಳನ್ನು ಹೊಂದಿರುವ ಇವರು, ಮಲ್ನಾಡಿ ಹಳ್ಳಿಯಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಕೈಗೊಂಡು, ಮೈಸೂರಿನಲ್ಲಿ ಎಂಜಿನಿಯರಿಂಗ್ ಪದವಿ ಉನ್ನತ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯಮದಲ್ಲಿ ವೃತ್ತಿ. ಹಳ್ಳಿಗಾಡಿನ ಬರಹಗಾರರ ಪ್ರತಿಭೆಯನ್ನು ಪೋಷಿಸಲು, ಪ್ರೋತ್ಸಾಹ ನೀಡಲು ಮತ್ತು ಸಾಹಿತ್ಯ, ರಾಷ್ಟ್ರ ಜಾಗೃತಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸಲು ಹಲವಾರು ಶ್ರಮದ ನಡುವೆ ಪ್ರಾರಂಭಿಸಿದ ‘ಚೈತ್ರರಶ್ಮಿ’‌ಎಂಬ ಸದಭಿರುಚಿ ಮಾಸಿಕ ಇವರ ಪ್ರವೃತ್ತಿ.ಇತ್ತೀಚೆಗೆ ತಾನೇ ಚೈತ್ರರಶ್ಮಿ ಹಲವು ಬರಹಗಾರರಿಗೆ ಉತ್ತಮ ವೇದಿಕೆಯನ್ನು, ಸದಭಿರುಚಿಯ ಓದುಗ ಮತ್ತು ಬರಹಗಾರರ ಬಳಗವನ್ನು ಸೃಷ್ಟಿಸಿ ಹಲವು ಸಾಹಿತ್ಯಾಧರಿತ ಪುಸ್ತಕಗಳನ್ನು ಪ್ರಕಾಶನಗೊಳಿಸಿದ್ದಾರೆ.

ಅಷ್ಟೇ ಅಲ್ಲ, ನೀವೆಲ್ಲರೂ ನಮ್ಮವರೇ! ನಮ್ಮ ಜೊತೆಗಿದ್ದೀರಿ. ಪ್ರತಿ ತಿಂಗಳು ಪತ್ರಿಕೆಯ ಬಳಗಕ್ಕೆ ಸೇರ್ಪಡೆಯಾಗುತ್ತಿರುವ ಆಸಕ್ತ ಮಿತ್ರರ ಬಳಗವನ್ನು ಮುಂದಿನ ಪುಟಗಳಲ್ಲಿ ನೋಡಿರಿ.

3 Responses to ನಮ್ಮ ಬಗ್ಗೆ

  1. keshav

    ತುಂಬ ಚಂದದ ಜಾಲ ನಿಮ್ಮದು.

  2. ಮನೋರಮಾ.ಬಿ.ಎನ್

    ಧನ್ಯವಾದ. ನಿಮ್ಮ ಪ್ರೋತ್ಸಾಹ ಇರಲಿ ಅನವರತ.

  3. Kaa.Vee. Krishnadas

    Dear Friends,

    Good efforts from your team.God Bless you Manorama And Team and their theme…

Leave a Reply

*

code