ನಾರಾಯಣದರ್ಶನ- ಕೃತಿ ಅನಾವರಣ ಮತ್ತು ವಿಮರ್ಶೆ

Posted On: Tuesday, November 24th, 2020
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

​ಭಾರತೀಯ ಸಾಹಿತ್ಯ ಸಂಸ್ಕೃತಿಯಲ್ಲಿ ಅರ್ಚಕರ ಆತ್ಮಕಥನ ಪ್ರಕಟವಾದದದ್ದು ಬಹಳ ವಿರಳ.  ದೇವಾಲಯ ಸಂಸ್ಕೃತಿಯ ಪೋಷಣೆ ಮತ್ತು ರಕ್ಷಣೆಯಲ್ಲಿ ಅರ್ಚಕರ ಕೊಡುಗೆ ಅನುಪಮ. ಇಂತಹ ಅರ್ಚಕರ ಸೇವೆಯನ್ನು ದಾಖಲಿಸುವ ಪ್ರಯತ್ನದಲ್ಲಿ ಕೊಡಗಿನವರೆ ಆಗಿ ಎಲ್ಲೆಡೆ ಮನ್ನಣೆ ಪಡೆ​​ದಿದ್ದವರೊಬ್ಬರ ಅರ್ಧ ಶತಮಾನದ ದೇವಸ್ಥಾನ ಕೈಂಕರ್ಯವನ್ನು ದಾಖಲಿಸಿದ ವಿಶಿಷ್ಟ ಪ್ರಯತ್ನ ನಡೆದಿದೆ.
ಇತಿಹಾಸ ಪ್ರಸಿದ್ಧ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ 54 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ವೇದಮೂರ್ತಿ ಬಿ.ಜಿ. ನಾರಾಯಣ ಭಟ್ಟರು. ಇವರು ಪುರೋಹಿತರಷ್ಟೇ ಅಲ್ಲದೆ ವಾಗ್ಮಿಯೂ, ಜ್ಯೋತಿಷಿಗಳೂ ವೇದವಿಚಕ್ಷಣರೂ, ಬರೆಹಗಾರರೂ, ಕವಿಗಳೂ ಮೇಲಾಗಿ ಸಾಮಾಜಿಕ ಚಿಂತಕ, ಎಮರ್ಜೆನ್ಸಿ ಮೊದಲಾದ ಸಮಯಗಳಲ್ಲಿ ಹೋರಾಟಗಾರರರೂ ಆಗಿದ್ದು, ಅನೇಕ ಧಾರ್ಮಿಕ-ಸಾಮಾಜಿಕ ಕಾರ್ಯಗಳ ಮುಂಚೂಣಿಯಲ್ಲಿದ್ದರು, ಭಕ್ತಾದಿಗಳ ನೆಚ್ಚಿನ ಅರ್ಚಕರಾಗಿ ಸುಮಾರು ಸಾವಿರಕ್ಕೂ ಮಿಗಿಲು ವಿವಾಹ ನಾಮಕರಣ, ಐನೂರಕ್ಕೂ ಮಿಗಿಲು ಸತ್ಯನಾರಾಯಣ ಪೂಜೆ, ಸಾರ್ವಜನಿಕ ಉತ್ಸವಗಳ ಕರ್ತವ್ಯಗಳನ್ನು ನಡೆಸಿದ್ದಷ್ಟೇ ಅಲ್ಲದೆ ತಮ್ಮ ಸಂಘಟನಾಶೀಲತೆಯ ಬಲದಿಂದ ತೆಪ್ಪೋತ್ಸವ, ಷಷ್ಠಿ, ಶಿವರಾತ್ರೆಗಳ ವೈಭವಕ್ಕೆ ಕಾರಣೀಭೂತರಾಗಿ ಜನಾನುರಾಗಿಗಳೂ ಆಗಿದ್ದರು. ಮೂಲತಃ ದಕ್ಷಿಣಕನ್ನಡದವರಾಗಿದ್ದು ತಮ್ಮ ಹದಿನಾರನೆಯ ವಯಸ್ಸಿನಲ್ಲೇ ಓಂಕಾರೇಶ್ವರ ದೇವಸ್ಥಾನಕ್ಕೆ ನಿಯುಕ್ತಿಯಾಗಿ ತಮ್ಮ 70 ನೆ ವಯಸ್ಸಿನವರೆಗೂ ಅವಿರತವಾಗಿ ಕರ್ತವ್ಯ ನಿರ್ವಹಿಸಿದವರು ನಾರಾಯಣ ಭಟ್ಟರು. ಇವರ ಕುಟುಂಬ ಮೊದಲಿಗೆ ಕೊಡಗಿನ ಲಿಂಗರಾಜ ಅರಸರಿಗೆ ರಾಜಪುರೋಹಿತರಾಗಿ ಸೇವೆ ಸಲ್ಲಿಸಿ ಅನೇಕ ಮನ್ನಣೆ, ಬಿರುದು, ಪುರಸ್ಕಾರಗಳನ್ನು ಪಡೆದಿತ್ತು. ಓಂಕಾರೇಶ್ವರ ದೇವಾಲಯದ ನಿರ್ಮಾಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾರಾಯಣ ಭಟ್ಟರಿಗಿಂತ ಐದಾರು ಪೀಳಿಗೆಯ ಹಿಂದಿನ ಹಿರಿಯರು ಸೇವೆ ಸಲ್ಲಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಾರಾಯಣ ಭಟ್ಟರು ಅರ್ಚಕರತ್ನ ಬಿರುದು ಸಹಿತ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
 ಕಳೆದ 2019 ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದ ಕೀರ್ತಿಶೇಷ ವೇದಮೂರ್ತಿ ಬಿ.ಜಿ. ನಾರಾಯಣ ಭಟ್ಟರ ಪ್ರಥಮಾಬ್ದಿಕ ಶ್ರಾದ್ಧವನ್ನು ಇತ್ತೀಚೆಗೆ (ಅಕ್ಟೊಬರ್ 5, 2020) ನೆರವೇರಿಸಲಾಯಿತು. ಆ ಸಂದರ್ಭ ಮಡಿಕೇರಿಯ ಕಲಾಸಂಸ್ಥೆ ನೂಪುರಭ್ರಮರಿ ಯಿಂದ ಪ್ರಕಟಿಸಲಾದ ಬಿ.ಜಿ. ನಾರಾಯಣ ಭಟ್ಟರ ಆತ್ಮಕಥನ ಮತ್ತು ಸಂಸ್ಮರಣಾ ಕೃತಿ *ನಾರಾಯಣದರ್ಶನ* ವನ್ನು  ಸವಣೂರಿನ ಅಗರಿ ಬೆಟ್ಟುಕಜೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವೇದಜ್ಞರಾದ ಬಳ್ಳಕ ಶ್ರೀಪತಿ ಭಟ್ ಮತ್ತು ಕಂರ್ಭಿ ಗಣಪತಿ ಭಟ್ಟರು ಅನಾವರಣಗೊಳಿಸಿದರು.
ಈ ಕೃತಿಯು ನಾರಾಯಣ ಭಟ್ಟರ ಆತ್ಮಕಥನ- *ನಾರಾಯಣಾಯನ* ದೊಂದಿಗೆ ಕೊಡಗಿನ ಅವರ ಒಡನಾಡಿಗಳು, ಗಣ್ಯರು ಅನಿಸಿಕೆ, ಅಭಿಪ್ರಾಯಗಳನ್ನು ಒಳಗೊಂಡಂತೆ ಸುಮಾರು 68 ಜನರ ಬರೆಹಗಳನ್ನು ಪ್ರಕಟಿಸಿದ ಸಂಸ್ಮರಣಾ ಕೃತಿಯೂ ಆಗಿದ್ದು, ಸುಮಾರು 324 ಪುಟಗಳ ಈ ಕೃತಿಯ ಬೆಲೆ 200ರೂ.

ಬಿ.ಜಿ.ನಾರಾಯಣಭಟ್ಟ ರ ಆತ್ಮಕಥನ ಮತ್ತು ಸಂಸ್ಮರಣಾ ಕೃತಿ ನಾರಾಯಣದರ್ಶನ ಕೊಡಗಿನ ಪ್ರಸಿದ್ಧ ವೈದ್ಯರೂ, ಸಾಮಾಜಿಕ-ಧಾರ್ಮಿಕ ಧುರೀಣರೂ ಮೇಲಾಗಿ ತಂದೆಯವರ ನಿಡುಗಾಲದ ಗೆಳೆಯರೂ ಆದ ಡಾ.ಮನೋಹರ್ ಪಾಟ್ಕರ್ ಮತ್ತು ಡಾ. ಜಯಲಕ್ಷ್ಮಿ ಪಾಟ್ಕರ್ ಅವರಿಂದ ಮಡಿಕೇರಿಯಲ್ಲಿ ಅನಾವರಣಗೊಂಡ ಕ್ಷಣ.

 

ಕೊಡಗು ಟಿವಿ ಚಾನಲ್ ನಲ್ಲಿ ಬಿತ್ತರಗೊಂಡ ಪುಸ್ತಕ ಅನಾವರಣದ ವಿವರಣೆ ಮತ್ತು ಬೈಟ್ಸ್

https://www.facebook.com/100000332230718/videos/3523409327680107/

 

ಕೊಡಗಿನ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ ಅವರಿಂದ ಲೇಖನ

 

ಪುಸ್ತಕ ಅನಾವರಣ ದಿನದಂದು ಉಪಸ್ಥಿತರಿದ್ದು ಪ್ರಥಮಪ್ರತಿ ಸ್ವೀಕರಿಸಿದ ವೇದಬ್ರಹ್ಮ ಮಿತ್ತೂರು ತಿರುಮಲೇಶ್ವರ ಭಟ್ಟರ ಲೇಖನ

*#ನಾರಾಯಣದರ್ಶನ’ ಪಡೆದ ಮೇಲೆ . . .*
🌹ನಿಡುವಜೆ ರಾಮ ಭಟ್
ಕೃತಿಯನ್ನು ಓದುತ್ತಾ ಹೋದಂತೆ ಒಂದು ಸಮಗ್ರ ಜೀವನ ದರ್ಶನವೇ ಕಂಡಂತಾಗಿದೆ. ಪ್ರತಿಯೊಬ್ಬನ ಜೀವನದಲ್ಲೂ ವಿವಿಧ ಅನುಭವಗಳು ಅನೇಕ ಬಗೆಯ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಅದನ್ನು ಒಂದೆಡೆಯಲ್ಲಿ ದಾಖಲಿಸಿಕೊಳ್ಳುವುದು ಆತ್ಮವಿಮರ್ಶೆಗೆ, ಆತ್ಮಾವಲೋಕನಕ್ಕೆ ಎಡೆಮಾಡಿಕೊಡುತ್ತದೆ. ಹೀಗೆ ಜೀವನಾನುಭವಗಳನ್ನು ಒಂದೆಡೆ ದಾಖಲಿಸಿಟ್ಟುಕೊಳ್ಳುವ ಕ್ರಮ ನಿಜಕ್ಕೂ ಒಳ್ಳೆಯದು. ಅನೇಕರಿಗೆ ಸ್ಫೂರ್ತಿ ಕೊಡುವುದಲ್ಲದೆ ಎಡವದೆ ಅವರವರ ಜೀವನಮಾರ್ಗವನ್ನು ನಡೆಯುವಾಗ ದಾರಿದೀಪವಾಗುತ್ತದೆ. ಅದೇ ರೀತಿಯಲ್ಲಿ ಶ್ರೀ ಬಿ.ಜಿ.ನಾರಾಯಣ ಭಟ್ಟರ ಜೀವಿತಾವಧಿಯ ಅನೇಕ ಅನುಭವಗಳ ಮಾರ್ಗದರ್ಶಕ ಕೃತಿ- ನಾರಾಯಣ ದರ್ಶನ .
ಕನ್ನಡ ಸಾಹಿತ್ಯದಲ್ಲಿ ಅರ್ಚಕ/ಪುರೋಹಿತರ ಜೀವನಕಥನದ ಪುಸ್ತಕಗಳು ಬಂದಿರುವುದೇ ಕಡಿಮೆ. (ನನ್ನ ಮಿತಿಯ ಓದಿನಲ್ಲಿ ಅರಿತುಕೊಂಡಂತೆ) ಅದರಲ್ಲೂ ವ್ರತದಂತಹ ಬದುಕನ್ನು ಬರೆಯುವುದೂ, ಬರೆದದ್ದನ್ನ ಸಂಪಾದಿಸಿ ಪ್ರಕಟಿಸುವುದೂ ಕಷ್ಟವೇ ಸರಿ. ಇಂತಹ ಅಪರೂಪದ ಸಾಲಿನಲ್ಲಿ ‘ನಾರಾಯಣ ದರ್ಶನ’ ಖಂಡಿತಾ ಮೊದಲ ಸ್ಥಾನದಲ್ಲಿ ನಿಲ್ಲಲು ಅರ್ಹ. ಈ ಕೃತಿಯಲ್ಲಿ ನಾರಾಯಣ ಭಟ್ಟರ ಜೀವನದ ನೋವು ನಲಿವುಗಳೆರಡನ್ನೂ ಸಮತ್ವದಿಂದ ಬಿಂಬಿಸಲಾಗಿದೆ. ನಡುನಡುವೆ ಮುಕ್ತಕ/ವಚನಗಳ ರೀತಿಯಲ್ಲಿ ಮೂಡಿಬಂದ ಸಾಲುಗಳು ನಮಗೆ ಹಿತವಚನದಂತಿದೆ ಮತ್ತು ಕೃತಿಯ ಒಟ್ಟಂದವನ್ನು ಹೆಚ್ಚಿಸಿದೆ. ಓದುತ್ತಾ ಹೋದಂತೆಲ್ಲಾ ಅವರು ಬದುಕಿ ಬಾಳಿದ ರೀತಿ, ಅದಕ್ಕೆ ಕಾರಣವಾದ ಕೌಟುಂಬಿಕ ಸ್ಥಾನಗಳ ಬಗ್ಗೆ ಆಪ್ತತೆ, ಗೌರವ ಹೆಚ್ಚುತ್ತದೆ. ಹೃದಯ ತುಂಬಿಬರುತ್ತದೆ.
ಇದಕ್ಕೆ ಪೂರಕವಾಗಿ ಅಪರೂಪವೆನ್ನಬಹುದಾದ ಅನೇಕ ಭಾವಚಿತ್ರಗಳು (ಕಪ್ಪುಬಿಳುಪು ಹಾಗೂ ಬಣ್ಣದ) ನಮ್ಮನ್ನು ಅಂದಿನ ನೆನಪಿನಂಗಳಕ್ಕೆ ಕರೆದೊಯ್ದಂತಾಗಿದೆ.
ಎರಡನೇಯ ಭಾಗದಲ್ಲಿ ಎಲ್ಲ ಬಂಧು-ಬಾಂಧವರ, ಮಿತ್ರವೃಂದದವರ ಆಶಯ ಬರಹಗಳು, ಪ್ರಶಂಸೆಯ ನುಡಿಗಳು ಅವರ ಮೇಲಿದ್ದ ಪ್ರೀತಿ, ವಿಶ್ವಾಸಗಳ ದರ್ಶನವನ್ನೂ ಮಾಡಿಸಿದೆ. ಅದನ್ನು ಹೂಮಾಲೆಯಂತೆ ಪೋಣಿಸಿದ ರೀತಿಯೂ ಸೊಗಸು. ಅವರಿಂದ ಉಪಕೃತರಾದ ಅನೇಕ ಮಂದಿ ಮತ್ತು ಅವರ ಒಡನಾಡಿಯಾಗಿ ದುಡಿದವರು ಕೂಡಾ ಅವರನ್ನು ಮೇಲಿಂದ ಮೇಲೆ ಸ್ಮರಿಸಿಕೊಂಡಿದ್ದಾರೆ. ತನ್ಮೂಲಕ ಅವರು ಇನ್ನೂ ಒಂದಷ್ಟು ಕಾಲ ನಮ್ಮೊಡನೆ ಇರಬೇಕಿತ್ತು ಎಂಬು ಒಕ್ಕೊರಲ ಆಶಯವಾಗಿ ಹೊರಹೊಮ್ಮಿರುವುದು ಸತ್ಯ. ನನ್ನ ಹಿರಿಯರೊಬ್ಬರು ಹೇಳುವಂತೆ ‘ನಮ್ಮ ನಡೆ-ನುಡಿಗಳಿಂದ ಈತ ಸದಾ ನಮ್ಮೊಂದಿಗಿರಬೇಕು, ಈತ ಹೋದರೆ ಸಾಕು ಎಂಬಂತಿರಬಾರದು’ ಎಂದು ಹೇಳುವಂತೆ ಈ ಜೀವನ ದರ್ಶನವನ್ನು ಓದಿದಾಗ ಅವರು ಇನ್ನೂ ಇರಬೇಕಿತ್ತು ಎಂಬ ಎಲ್ಲರ ಆಶಯವು ಅವರ ಬದುಕನ್ನು ಸಾರ್ಥಕ್ಯಗೊಳಿಸಿದೆ.
ಒಂದು ಪುಸ್ತಕ ಮುದ್ರಣದ ಸವಾಲುಗಳು ಕಡಿಮೆಯಲ್ಲ. ಅದರಲ್ಲೂ ೩೦೦+ ಪುಟಗಳ ಒಂದು ಕೃತಿಯನ್ನು ಹೊರತರುವುದು ತಮಾಶೆಯ ವಿಚಾರವಲ್ಲ. ಅದೂ ಒಂದು ರೀತಿಯಲ್ಲಿ ಪ್ರಸವದಂತೆಯೇ. ಒಟ್ಟಿನಲ್ಲಿ ಇದೊಂದು ಸಾರ್ಥಕ ಕೃತಿ. ಅರ್ಚಕ/ ಪುರೋಹಿತರೊಬ್ಬರ ಇಡಿಯ ‘ಜೀವನಯಾನ’ವನ್ನು ಒಂದೆಡೆ ಕಲೆಹಾಕಿದ ಮತ್ತು ಅದನ್ನು ಓದಿಸಿಕೊಂಡು ಹೋಗುವಂತೆ ಕಟ್ಟಿಕೊಟ್ಟ ರೀತಿ ನಿಜಕ್ಕೂ ಅಭಿನಂದನಾರ್ಹವಾಗಿದೆ.
ಒಳ್ಳೆಯ(ಸದ್ಗುಣಗಳ) ಮಕ್ಕಳನ್ನು ಹೊಂದಲು ಮಾತಾಪಿತರು ಪುಣ್ಯ ಮಾಡಿರಬೇಕು. ಅಂತೆಯೇ ಒಳ್ಳೆಯ ಮಾತಾಪಿತರನ್ನು ಪಡೆಯಬೇಕಾದರೆ ಮಕ್ಕಳು ಪುಣ್ಯ ಮಾಡಿರಬೇಕು. (ಇಲ್ಲಿ ಮಾತಾಪಿತರು ಮತ್ತು ಮಕ್ಕಳು ಪುಣ್ಯವಂತರು). ಈ ನಿಟ್ಟಿನಲ್ಲಿ ತನ್ನ ತಂದೆಯ ಜೀವನ ದರ್ಶನವನ್ನು ಒಂದು ಸಮಗ್ರ ಕೃತಿಯ ಮೂಲಕ ಬಂಧು-ಮಿತ್ರರಿಗೆ ಪರಿಚಯಿಸಿದ ಮಕ್ಕಳ ಪರಿಶ್ರಮ ನಿಜಕ್ಕೂ ಸಾರ್ಥಕವೆನಿಸಿದೆ. ಪ್ರತಿಯೊಂದು ಸನ್ನಿವೇಶಗಳನ್ನೂ ಕಣ್ಣಿಗೆ ಕಟ್ಟಿದಂತೆ ದಾಖಲಿಸಿದ ರೀತಿಯು ಸಂಪಾದಕರ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿದಂತಾಗಿದೆ. ಈ ಸಾಹಸ(ಶ್ರಮ)ಕ್ಕೆ ಧುಮುಕಿದವರಿಗೆ ನನ್ನ ಅಭಿನಂದನೆಗಳು; ಆಶೀರ್ವಾದಗಳು. ಶ್ರಮವನ್ನು, ಮೌಲ್ಯವನ್ನು ಅರಿತು ಆದರಿಸಿ ಓದುವುದು ನಮ್ಮಂತಹವರ ಕರ್ತವ್ಯವೆಂದು ನಂಬಿ ನನ್ನ ಈ ಪುಟ್ಟ ಮನದಾಳದ ಅನಿಸಿಕೆಗಳನ್ನು ಇಲ್ಲಿ ಹಾಕುತ್ತಿದ್ದೇನೆ. ನೂಪುರ ಭ್ರಮರಿಯ ಈ ಪುಸ್ತಕ ಕೈಂಕರ್ಯ ಉಳಿಯಲಿ, ಬೆಳೆಯಲಿ.
ನಿಜಕ್ಕೂ ಈ ಪುಸ್ತಕ ಓದಿದ ನಂತರ ಪೂಜ್ಯ ನಾರಾಯಣ ಭಟ್ಟರನ್ನ ಒಮ್ಮೆಯಾದರೂ ಭೇಟಿಯಾಗಿ ಆಶೀರ್ವಾದವನ್ನು ಪಡೆಯುವ ಅವಕಾಶ ಸಿಗಲಿಲ್ಲವಲ್ಲಾ ನನಗೆ ಎಂದು ಎಷ್ಟೋ ಬಾರಿ ಅಂದುಕೊಂಡಿದ್ದೇನೆ.ಪೂಜ್ಯ ನಾರಾಯಣಭಟ್ಟರು ಭಕ್ತಿಯೋಗ ಮತ್ತು ಕರ್ಮಯೋಗ ಮಾರ್ಗಗಳ ಹದವನ್ನರಿತು ಜೀವನವನ್ನು ನಡೆಸಿದ ಓರ್ವ ಋಷಿ ಎಂದರೆ ತಪ್ಪಿಲ್ಲ. ಓಂಕಾರೇಶ್ವರ ಸ್ವಾಮಿಯ ಮೇಲಿನ ಅಖಂಡ ಭಕ್ತಿ ಮತ್ತು ಶ್ರದ್ಧೆ, ಹಾಗೆಯೇ ಜೀವನದಲ್ಲಿ ಎದುರಾದ ಎಲ್ಲಾ ವಿಷಮ ಪರಿಸ್ಥಿತಿ ಗಳನ್ನೂ ಸಮಚಿತ್ತರಾಗಿ ಎದುರಿಸಿದ ರೀತಿ, ಮಾನವ ಸಂಭಂಧಗಳ ಬಗೆಗಿನ ಅವರ ನಿಲುವು, ಪರೋಪಕಾರ, ಇಂದಿನ ವಿದ್ಯಾಭ್ಯಾಸದಲ್ಲಿ ಮೌಲ್ಯಾಧಾರಿತ ವಿಷಯಗಳು ಇಲ್ಲ ಎಂಬ ಅವರ ಅಭಿಪ್ರಾಯ, ಅವರ ಬಹುಮುಖ ಪ್ರತಿಭೆ, ಜನಾನುರಾಗಿಯಾಗಿ, ಅವರು ನಡೆದು ಬಂದ ದಾರಿ ನಿಜಕ್ಕೂ ಅದ್ಭುತ ಮತ್ತು ಸ್ಫೂರ್ತಿದಾಯಕ ಅನ್ನುವುದರಲ್ಲಿ ಎರಡನೇ ಮಾತಿಲ್ಲ.
ಫಲವನು ಬಯಸದೆ ಕರ್ಮವ ಮಾಡು ಎಂಬ ಭಗವದ್ಗೀತೆ ಯ ಸಂದೇಶವನ್ನು ಚಾಚೂ ತಪ್ಪದೇ ತನ್ನ ಜೀವನದಲ್ಲಿ ಅಳವಡಿಸಿಕೊಂಡು ನೂರಾರು ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರೇರಕ ಶಕ್ತಿಯಾಗಿ ಸಾರ್ಥಕ ಜೀವನವನ್ನು ನಡೆಸಿ ಶಿವ ಸಾಯುಜ್ಯವನ್ನ ಪಡೆದ ಹಿರಿಯರು ಪೂಜನೀಯರೂ ಆದ ನಾರಾಯಣ ಭಟ್ಟರಿಗೆ ಭಕ್ತಿಯಿಂದ ನಮಿಸುತ್ತೇನೆ.
– ನಾಗಶ್ರೀ ನಾರಾಯಣ, ಬೆಂಗಳೂರು
——
“ನಾರಾಯಣ ದರ್ಶನ” ನಿಜಕ್ಕೂ ಒಂದು ಅದ್ಭುತ ಹೊತ್ತಗೆ. ಅಪ್ಪನ ಬಗೆಗಿನ ಪ್ರೀತಿಯ ಒಂದು ಸುಂದರ ಕಲಾಕೃತಿ. ಕುಟುಂಬದ ಹೆಮ್ಮೆಯ ಹೆಮ್ಮರವಾಗಿದ್ದ ಅಪ್ಪ ಎಂಬ ಪದದ ಪೂರ್ಣಚಂದ್ರ ಈ ಕೃತಿ.
ಬೆಂಗಳೂರಿನಲ್ಲಿದ್ದ ನನಗೆ, ನಾರಾಯಣ ದರ್ಶನ ಪುಸ್ತಕ ನನ್ನ ಮನೆ ಭೂಮಿಕಾ ಕುಶಾಲನಗರಕ್ಕೆ ತಲುಪಿದೆ ಎಂಬ ಸುದ್ದಿ ಕೇಳಿ ಅತೀವ ಸಂತಸ. ಯಾವಾಗ ಊರಿಗೆ ತಲುಪುತ್ತೇನೋ ಯಾವಾಗ ಪುಸ್ತಕ ಓದುತ್ತೇನೋ ಎಂಬ ಕೌತುಕ-ಕಾತರ. ದಾಸರಾಕ್ಕೆಂದೇ ಮನೆಗೆ ಹೋದವನೇ ಮೊದಲು ಕೇಳಿದ್ದು ಮಾವನ ಪುಸ್ತಕ ಎಲ್ಲಿ? ಬಲು ಪ್ರೀತಿಯಿಂದ ಪುಸ್ತಕವನ್ನು ಬಾಚಿಕೊಂಡವನೇ ಮೊದಲು ಹಾಳೆಗಳ ತಿರುಗಿಸಿದ್ದು ನನ್ನ ಸಾಲುಗಳು ಎಲ್ಲಿ ಬಂದಿವೆ ಎಂದು! ಬಹುಷಃ ಈ ಪುಸ್ತಕದಲ್ಲಿ ಕಂಡ ನನ್ನ ಬರವಣಿಗೆ ನನಗೆ ಬಲು ವಿಶೇಷವಾದದ್ದಾಗಿತ್ತು!
ನನ್ನ ತಂದೆಗೆ ಚಿಕ್ಕಯ್ಯ ಎಂದರೆ ಬಲು ಅಭಿಮಾನ-ಪ್ರೀತಿ. ಚಿಕ್ಕ ಪ್ರಾಯದಿಂದಲೇ ಕಂಡವರಾಗಿದ್ದರಿಂದ ಅವರೊಡನಾಟ ಹೆಚ್ಚಿನದೇ ಆಗಿತ್ತು ಅದೇ ಪ್ರಭಾವ ನಮ್ಮ ಕುಟುಂಬದ ಮೇಲೂ ಬೀರಿತ್ತು. ಕೆಲವೊಂದು ಆಯ್ದ ಪುಟಗಳ ಓದಿ ಹೇಳಲು ಶುರುಮಾಡಿದೆ ಅಪ್ಪನು ಬಹಳ ಖುಷಿಯಿಂದಲೇ ಕೇಳಹೊರಟರು. ಏರುದನಿಯಲ್ಲಿ ಸಾಗಿದ ನನ್ನ ಸ್ವರ 3ಪುಟ ದಾಟಿ ತಿರುವು ಪಡೆದುಕೊಂಡಿತ್ತು ಏನೂ ಕಾಣದೆ ಕಣ್ಣೀರು ಪರದೆ ಹಿಡಿದಿತ್ತು ಗದ್ಗದಿತನಾದ ನನ್ನ ನೋಡಲು ಅಮ್ಮ ಒಳಗಿನಿಂದ ಓಡೋಡಿ ಬಂದು “ಏನಾಯಿತು” ಅಂದರು. ಮನುವಿನ, ರಾಜನ, ವಿಷ್ಣುಬಾವನ ಪರಿಶ್ರಮ ನಿಜಕ್ಕೂ ಸಾರ್ಥಕ ಎಂದು ನೆನೆದು-ಬೈದು ಪುಸ್ತಕಕ್ಕೊಂದು ನಮಸ್ಕರಿಸಿದೆ 🙏🏻
ಅಪ್ಪಚ್ಚಿಯ ಜೀವನ ಪಯಣ ನಿಜಕ್ಕೂ ರೋಚಕವೆನಿಸಿತು. ಬದುಕು ಕಟ್ಟಿಕೊಳ್ಳಲು ಜೀವ ಪರಿತಪಿಸುವ ರೀತಿ, ಕಷ್ಟಗಳ ಸರಮಾಲೆ, ಜೀವನದ ಏಳುಬೀಳುಗಳ ಹಾದಿ ಮಾರ್ದನಿಯನ್ನುಟುಮಾಡಿದ್ದಂತೂ ಸುಳ್ಳಲ್ಲ. ಕಷ್ಟ ಸುಖಗಳ ಹಾದಿಯಲ್ಲಿ ಅವರಿಗಿದ್ದ ಆಸೆ ಪ್ರೇರಣೆ ಇಚ್ಛೆ ಹವ್ಯಾಸ ಎಲ್ಲರಿಗೂ ಬದುಕಿನ ಸತ್ಯ ಸಂಗತಿಗಳನ್ನ ಯತಾವತ್ತಾಗಿ ಚಿತ್ತಾರಗೊಂಡಿತ್ತು. ಮನು, ರಾಜ ಮತ್ತು ವಿಷ್ಣುವಿನ ಅತೀವ ಪ್ರೀತಿ ಮತ್ತು ಪುಸ್ತಕ ಹೊರತರುವಲ್ಲಿ ಇದ್ದ ಪರಿಶ್ರಮ ಎದ್ದು ಕಂಡಿತ್ತು.
ಮಾವನ ಮೇಲಿನ ಪ್ರೀತಿಯನ್ನ-ಅಭಿಪ್ರಾಯವನ್ನ ವ್ಯಕ್ತ ಪಡಿಸಿದ ಪ್ರತಿಯೊಬ್ಬರಿಗೂ ನನ್ನ ಪರವಾಗಿ ಅನಂತ ಧನ್ಯವಾದಗಳು. ಕುಟುಂಬದವರು, ಬಂಧು-ಬಾಂಧವರು, ಸ್ನೇಹಿತರು, ಹಿತೈಷಿಗಳು, ಮೊಮ್ಮಕಳಾದಿಯಾಗಿ ಅವರೊಂದಿಗೆ ಕಳೆದ ಕ್ಷಣಗಳು, ಸಹಾಯ, ಪ್ರೀತಿ, ಹವ್ಯಾಸ, ಆಸಕ್ತಿಯ ವಿಚಾರಗಳನ್ನು ನೆನದು ವರ್ಣಿಸಿದ ಬಗೆ ನಿಜಕ್ಕೂ ತುಂಬಾ ಸುಂದರವಾಗಿ ಮೂಡಿಬಂದಿದೆ. ಎಲ್ಲರ ಕೊನೆಯ ಸಾಲುಗಳು ಮಾತ್ರ ಹೇಳುವುದೊಂದೇ ನೀವಿರಬೇಕಿತ್ತು ನೀವಿರಬೇಕಿತ್ತು!!
– ಮುಕುಂದ ಜಿ.ಜೆ, ಕುಶಾಲನಗರ 
———
,ಪುಸ್ತಕವನ್ನು ಓದಿದ್ದೇನೆ,ಏನು ಹೇಳುವುದೋ ಗೊತ್ತಿಲ್ಲ,ಬಹಳ ಸಾಹಸದ,ಸಂಕಷ್ಟಗಳ ಬದುಕು ಅವರದ್ದು.ಕಡುಬಡತನದ ಬವಣೆಯ ಬದುಕು,ಅಂಥದ್ದರಲ್ಲೂ ಇದ್ದುದರಲ್ಲಿ/ಸಿಕ್ಕಿದುದರಲ್ಲಿ ಸ್ವಲ್ಪವೇ ಆದರೂ ಹಂಚಿ ತಿನ್ನುವಂಥ ಮನಸ್ಸು,ಬಡತನ ಕಲಿಸಿದ ಜೀವನಾನುಭವ ಬದುಕಿಡೀ ಕಾದಿದೆ,ಜೀವನದಲ್ಲಿ ಎಂಥಾ ಸಂಕಷ್ಟವನ್ನೂ ಭಗವದ್ ವಿಶ್ವಾಸದಿಂದ ಧೈರ್ಯ,ಆತ್ಮವಿಶ್ವಾಸ,ಛಲದಿಂದ ಎದುರಿಸುವ ಶಕ್ತಿ ಕೊಟ್ಟಿದೆ,ಪುಸ್ತಕವು ಆರ್ದ್ರತೆಯಿಂದಲೂ,ರೋಚಕತೆಯಿಂದಲೂ ಓದಿಸಿತು.ನನ್ನ ಬಾಲ್ಯ ಹಾಗೂ ನಂತರದ ದಿನಗಳಲ್ಲಿ ದೇವಸ್ಥಾನದಲ್ಲಿ ಅರ್ಚಕರು ಎಂದು ಪರಿಚಯವಿತ್ತೇ ವಿನಃ,ಮುಗುಳುನಗುವಿನ ವಿನಃ ಜಾಸ್ತಿ ಮಾತನಾಡಿ ಪರಿಚಯ ಇರಲಿಲ್ಲ.ಅವರಲ್ಲಿ ಒಬ್ಬ ಕವಿ,ಕಲಾವಿದ,ಕಲಾರಸಿಕ ಇದ್ದುದು ಈ ಪುಸ್ತಕದಿಂದಲೇ ತಿಳಿದದ್ದು.ಕೊಡಗು ಕಲೆಯ ವಿಷಯದಲ್ಲಿ ಅಷ್ಟು ಸಮೃಧ್ದ ನೆಲವಲ್ಲ ಎಂದು ಒಂದು ರೀತಿ ಬೇಸರ,ಆದರೆ ನಿಮ್ಮ ತಂದೆಯವರಂಥವರೂ ಇಲ್ಲಿ ಇದ್ದರು ಎಂದು ಖುಷಿ ಆಯಿತು.
ಅವರು ಗತಿಸುವ ಕೆಲವು ತಿಂಗಳುಗಳ ಮುನ್ನ(ಆಗ ಅವರಿಗೆ ಆರೋಗ್ಯ ಅಷ್ಟಾಗಿಲ್ಲ,ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡು ಬಂದಿದ್ದಾರೆ ಎಂದು ಕೇಳಿದ್ದೆ) ದೇವಸ್ಥಾನಕ್ಕೆ ಹೋಗಿದ್ದಾಗ ಗರ್ಭಗುಡಿಯಿಂದ ಹೊರಬಂದಿದ್ದರು,ಬಹಳ ಆಪ್ತವಾಗಿ ಮಾತಾಡಿಸಿದ್ದರು.ಆಗ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ,ಓಂಕಾರೇಶ್ವರನ ದಯೆಯಿಂದ ಚೇತರಿಸಿಕೊಂಡಿದ್ದೇನೆ ಅಂದಿದ್ದರು,ನೋವು ತೋರಿಸಿಕೊಂಡಿರಲಿಲ್ಲ.ಅದೇ ಕೊನೆ ಅವರನ್ನು ನೋಡಿದ್ದು.😔
– ಜಯಲಕ್ಷ್ಮಿ, ಬೆಂಗಳೂರು.

Leave a Reply

*

code