ನಾರಾಯಣಸ್ಮರಣ ಮತ್ತು ಯಕ್ಷಗಾನ – ಭರತನೃತ್ಯ ಸಂಬಂಧದ ವಿಚಾರಸಂಕಿರಣ & ಯಕ್ಷಭಾಣಿಕಾ

Posted On: Sunday, December 22nd, 2019
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕಿ

 

ನೂಪುರ ಭ್ರಮರಿ ಸಂಸ್ಥಾಪಕ ಅಧ್ಯಕ್ಷ, ಟ್ರಸ್ಟಿ, ಕಲಾರಾಧಕ, ಅರ್ಚಕರತ್ನ, ವೇದಮೂರ್ತಿ ಬಿ.ಜಿ.ನಾರಾಯಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ನಾರಾಯಣಸ್ಮರಣ ಬೆಂಗಳೂರಿನ ಬಸವನಗುಡಿಯ ಕಲಾಗೌರಿ ಆಪ್ತ ಸಭಾಂಗಣದಲ್ಲಿ ೧೪ ಡಿಸೆಂಬರ್ ೨೦೧೯ರಂದು ನೆರವೇರಿಸಲಾಯಿತು.  ನುಡಿನಮನಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ರಂಗಭೂಮಿ ಕ್ಷೇತ್ರಕ್ಕಾಗಿ ಬೆಂಗಳೂರಿನ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಗೆ ಕಲಾಶಂಕರ, ಯಕ್ಷಗಾನ & ಸಂಘಟನೆಗಾಗಿ ಬೆಳ್ತಂಗಡಿಯ ಶ್ರೀ ಉಜಿರೆ ಅಶೋಕ ಭಟ್ ರಿಗೆ ‘ಕಲಾಯೋಜನಕೌಶಿಕ , ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆಯ ಆವಿಷ್ಕಾರಕ್ಕಾಗಿ ಮೈಸೂರಿನ ಶ್ರೀ ದಿವಾಕರ ಹೆಗಡೆ ಅವರಿಗೆ ‘ ಯಕ್ಷದಿವಾಕರ’ ಎಂಬ ಅಭಿಧಾನವನ್ನಿತ್ತು ಸನ್ಮಾನಿಸಲಾಯಿತು.

ಬಿ.ಜಿ.ನಾರಾಯಣ ಭಟ್ ಅವರ ಹೆಸರಿನಲ್ಲಿ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಮಧ್ಯಾಹ್ನದೂಟ ಯೋಜನೆಗೆ ಸಂಬಂಧಿಸಿ ವಾರ್ಷಿಕವಾಗಿ ಈರ್ವರು ಮಕ್ಕಳನ್ನು ದತ್ತು ತೆಗೆದುಕೊಂಡ ಉಪಕ್ರಮವಾಗಿ ಉಡುಗೊರೆಯಾಗಿ ದೊರೆತ ಸ್ಟೀಲ್ ನೀರಿನ ಬಾಟಲಿನ ಸಹಿತ ಸನ್ಮಾನಿತರನ್ನು ಬೆಳ್ಳಿಯ ಸ್ಫಟಿಕ/ರುದ್ರಕ್ಷಿ ಹಾರ, ಶಾಲು, ಒಣಹಣ್ಣು, ಜೇನುತುಪ್ಪದೊಂದಿಗೆ ಅಭಿನಂದಿಸಿದ್ದು ವಿಶೇಷವಾಗಿತ್ತು. ಇದಾದ ಬಳಿಕ ಮಯೂರಿ ನೃತ್ಯಕಲಾಶಾಲೆ (ರಿ.) ಬೆಂಗಳೂರು ಇದರ ಗುರುಗಳಾದ ಡಾ. ಶೋಭಾ ಶಶಿಕುಮಾರ್ ಮತ್ತು ಶಿಷ್ಯರಿಂದ, ಭರತನೃತ್ಯಸಂಧ್ಯಾ ಕಾರ್ಯಕ್ರಮವನ್ನೂ ಏರ್ಪಡಿಸಿ ಕಲಾವಿದರನ್ನು ಅಭಿನಂದಿಸಲಾಯಿತು.

ಸಂಜೆಯ ಭರತನೃತ್ಯಸಂಧ್ಯಾದ ಫೆಸ್ಬುಕ್ ಲೈವ್ ವಿಡಿಯೋ ಇಲ್ಲಿದೆ.

Posted by Manorama BN on Saturday, December 14, 2019

 

 

 

 

ಡಿಸೆಂಬರ್ ೧೫ ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ನೂಪುರ ಭ್ರಮರಿ (ರಿ.) ಸಹಯೋಗದಲ್ಲಿ ಜರುಗಿದ ಭಾರತೀಯ ಸಾಂಪ್ರದಾಯಿಕ ರಂಗಭೂಮಿ- ಯಕ್ಷಗಾನ ಮತ್ತು ಭರತನೃತ್ಯಾದಿ ಕಲೆಗಳು; ಸಂಬಂಧ ಮತ್ತು ಸಮನ್ವಯದ ಕುರಿತ ರಾಜ್ಯಮಟ್ಟದ ಒಂದು ದಿನದ ವಿಚಾರಸಂಕಿರಣದಲ್ಲಿ ಬಿ.ಜಿ.ನಾರಾಯಣ ಭಟ್ಟರ ಕಲಾಚಿಂತನೆಯಲ್ಲರಳಿದ ಯಕ್ಷಭಾಣಿಕ (ಯಕ್ಷಗಾನ ಮತ್ತು ಭರತನೃತ್ಯ ಸಮಾಹಾರದ ಅಧ್ಯಯನನಿಷ್ಠ ಏಕವ್ಯಕ್ತಿಪ್ರಯೋಗ)ದ ಪ್ರಯೋಗವನ್ನು ಪುತ್ರಿ ಡಾ.ಮನೋರಮಾ ಬಿ.ಎನ್ ನರ್ತಿಸಿ ಅರ್ಪಿಸಿದರು. ಹಿಮ್ಮೇಳದಲ್ಲಿ ಕಾವ್ಯಶ್ರೀ ಆಜೇರು, ಎಚ್.ಎಸ್.ವೇಣುಗೋಪಾಲ್, ಕೃಷ್ಣಪ್ರಕಾಶ ಉಳಿಯತ್ತಾಯ, ಪ್ರಸನ್ನ ಕುಮಾರ್ ಸಹಕರಿಸಿದರು. ಸಲಹೆ ಹಾಗೂ ನಿರ್ದೇಶನದಲ್ಲಿ ಶತಾವಧಾನಿ ಡಾ. ಅರ್. ಗಣೇಶ್, ಉಜಿರೆ ಅಶೋಕ ಭಟ್, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತು ಡಾ. ಶೋಭಾ ಅವರ ಸಹಕಾರವಿತ್ತು. ಇವೆರಡೂ ಕಾರ್ಯಕ್ರಮಗಳೂ ಸುಯೋಗವೋ ಎಂಬಂತೆ ಬಿ.ಜಿ.ನಾರಾಯಣ ಭಟ್ಟರ ಮೂರನೇ ತಿಂಗಳ ತಿಥಿಯಂದೇ ಆಯೋಜಿತವಾಗಿದ್ದು ವಿಶೇಷವೆನಿಸಿ ನೆರೆದವರ ಕಣ್ಣಾಲಿಗಳನ್ನು ತುಂಬಿಸಿ ಆರ್ದ್ರವಾಗಿಸಿತು.

 

ಲೈವ್ ಸ್ಟ್ರೀಮ್ ಲಿಂಕ್ ಇಲ್ಲಿ ಲಭ್ಯವಿದೆ. ಆಸಕ್ತರು  ಲಾಗಿನ್ ಆಗಿ ಕಾರ್ಯಕ್ರಮ ವೀಕ್ಷಿಸಬಹುದು.

http://live.shaale.com/kya

https://shaale.com/live-event/NHqzzPhiug5cyKqfRcTJ%3C%3E38801830-1e4f-11ea-a9f3-875c15d43261

ಸಾರ್ಥಕ ಪ್ರಯತ್ನ

ಭಾರತೀಯ ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನ ಮತ್ತು ಭರತನೃತ್ಯಾದಿ ಕಲೆಗಳು

(ಸಂಬಂಧ ಮತ್ತು ಸಮನ್ವಯ)

ರಾಜ್ಯಮಟ್ಟದ ಒಂದು  ದಿನದ ವಿಚಾರ ಸಂಕಿರಣ

  • ವರದಿ : ನಾಗರಂಜಿತ, ಬೆಂಗಳೂರು
  • ಫೋಟೋಗಳು : ಪೂಜಾ ಬಾಲಸುಬ್ರಹ್ಮಣ್ಯಂ, ಬೆಂಗಳೂರು

ದಿನಾಂಕ  ೧೫.೧೨.೨೦೧೯, ಭಾನುವಾರದಂದು ಕರ್ನಾಟಕ  ಯಕ್ಷಗಾನ  ಅಕಾಡೆಮಿ ಹಾಗು ನೂಪುರಭ್ರಮರಿ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನ  ಹಾಗೂ ಭರತನೃತ್ಯಾದಿ ಕಲೆಗಳ ಸಂಬಂಧ ಮತ್ತು  ಸಮನ್ವಯಗಳ ಕುರಿತಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಇಡೀ ದಿನ ನಡೆದ ಈ ವಿಚಾರ ಸಂಕಿರಣದಲ್ಲಿ ಭಾರತೀಯ ರಂಗಕಲೆಗಳಿಗೆ ಇರುವ ಸಂಬಂಧ ಸಮನ್ವಯತೆ ಹಾಗೂ ಭರತನ ನಾಟ್ಯಶಾಸ್ತ್ರದಲ್ಲಿ ತಿಳಿಸಿರುವ ಮಾರ್ಗ ಪದ್ದತಿಯ ವಿವಿಧ ಅಂಶಗಳು ಈ ಎಲ್ಲ ಕಲೆಗಳಿಗೂ ಹೇಗೆ ಒದಗಿ ಬರುತ್ತದೆ, ಚತುರ್ವಿಧ ಅಭಿನಯದಲ್ಲಿ ಆ ಅಂಶಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ನೆರೆದಿದ್ದ ವಿದ್ವದ್ಸಭಿಕರ ನಡುವೆ ಅನೇಕ ರೀತಿಯ ವೈಚಾರಿಕ ವಿನಿಮಯ ಹಾಗೂ ಚರ್ಚೆಗಳು ನಡೆದವು.

ಕಲಾ ಸಂಶೋಧನೆ ಮತ್ತು ಕಲಾಸಕ್ತಿ ಉಳ್ಳವರಿಗಾಗಿಯೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ರಂಗಕಲೆಗಳ ಹೆಸರಾಂತ ಕಲಾವಿದರು ಹಾಗೂ ಅನೇಕ ವಿದ್ವಾಂಸರುಗಳು ಭಾಗವಹಿಸಿದ್ದರು. ಪ್ರಾಯೋಗಿಕವಾಗಿ ಕಲೆಗಳ ಸಮನ್ವಯವನ್ನು ಅರ್ಥೈಸಿಕೊಳ್ಳಲು ಕೈಗೊಂಡ ಅಪರೂಪದ ಪ್ರಯತ್ನವೆನಿಸಿ, ಆಸಕ್ತರು ವಿವಿಧ ಆಯಾಮಗಳಲ್ಲಿ  ತಮ್ಮ ವೈಚಾರಿಕಶಕ್ತಿಯನ್ನು ಪರಸ್ಪರ  ಚರ್ಚೆಯ ಮೂಲಕ ಪೋಷಿಸಿ  ಪುಷ್ಟೀಕರಿಸಿಕೊಳ್ಳುವುದು  ಹೇಗೆ ಎಂಬುದನ್ನು ಕಾರ್ಯಕ್ರಮವು ಯಶಸ್ವಿಯಾಗಿ ತಿಳಿಸಿಕೊಟ್ಟಿತು. ಉಪನ್ಯಾಸಕ್ಕೆ ಅನುಕೂಲವಾಗಿ ಮೂಡಿಬಂದ ಪ್ರಾತ್ಯಕ್ಷಿಕೆಗಳು ಹಾಗೂ ರಂಗಪ್ರಸ್ತುತಿಗಳು ವಿಚಾರಗಳನ್ನು ಸಹೃದಯರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅರ್ಥಪೂರ್ಣವೆನಿಸಿದವು.

ಬೆಳಗ್ಗೆ ೧೦:೩೦ಕ್ಕೆ ಪ್ರಾರಂಭವಾದ ವಿಚಾರಸಂಕಿರಣವನ್ನು ಬೆಂಗಳೂರಿನ  ಸಂಸ್ಕೃತ  ವಿಶ್ವವಿದ್ಯಾನಿಲಯದ  ವಿಶ್ರಾಂತ  ಕುಲಪತಿಗಳಾದ  ಶ್ರೀ ಡಾ. ಮಲ್ಲೇಪುರಂ ಜಿ ವೆಂಕಟೇಶ್ ರವರು ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ  ಅಧ್ಯಕ್ಷರಾದ ಪ್ರೊ. ಎಂ ಎ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಶಯ ಭಾಷಣದದೊಂದಿಗೆ ಗೋಷ್ಠಿಯನ್ನು ಪ್ರಾರಂಭಿಸಿದ ಶತಾವಧಾನಿ ಡಾ. ಆರ್. ಗಣೇಶ್ ರವರು ವಿವಿಧ ಪ್ರಾಂತ್ಯಗಳ ಭಾರತೀಯ ಸಾಂಪ್ರದಾಯಿಕ ರಂಗಕಲೆಗಳ ಸಂಕ್ಷಿಪ್ತ ಪರಿಚಯವನ್ನೂ, ಈ ಎಲ್ಲ ಕಲೆಗಳಲ್ಲಿರುವ ಸೋದರತ್ವ ಹಾಗೂ ಏಕವ್ಯಕ್ತಿ ಯಕ್ಷಗಾನದ ಪ್ರಯೋಗದಲ್ಲಿ ನಾಟ್ಯಶಾಸ್ತ್ರದ ಆಂಗಿಕ ವಿನ್ಯಾಸಗಳ ಬಳಕೆ ಹಾಗೂ ನೃತ್ಯಮಾಧ್ಯಮವಾಗಿ ಕರ್ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ಒಂದು ಪ್ರಾತಿನಿಧಿಕ ಶಾಸ್ತ್ರೀಯನೃತ್ಯದ ಸ್ಥಾನಮಾನವನ್ನು ಕೊಡುವ ನೆಲೆಯಲ್ಲಿ ಯಕ್ಷಗಾನವನ್ನು ಬಳಸಿಕೊಂಡು ರೂಪಿಸಿದ ಏಕವ್ಯಕ್ತಿ ಪ್ರಯೋಗದ ಕುರಿತು ಅಂಶಗಳ ಮೂಲಕವಾಗಿ ಸಂಕ್ಷಿಪ್ತವಾಗಿ ವಿಚಾರ ಮಂಡಿಸಿದರು. ಶ್ರೀ ಮಂಟಪ ಪ್ರಭಾಕರ ಉಪಾಧ್ಯಾಯರ, ಎ.ಪಿ.ಪಾಠಕ್ ಅವರು ಪ್ರಾತ್ಯಕ್ಷಿಕೆಯ ಮೂಲಕ ನೆರವಾದರು.

ನಂತರದ ಅಧ್ಯಯನ ಗೋಷ್ಠಿಯಲ್ಲಿ ಹೆಸರಾಂತ ಕಲಾವಿದ ಶ್ರೀ ಸೂರಿಕುಮೇರು ಗೋವಿಂದ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಆಂಗಿಕಾಭಿನಯಕ್ಕೆ ಭರತನಾಟ್ಯದ ಪ್ರಭಾವದ ಸಾಧ್ಯತೆ ಭಾದ್ಯತೆಗಳ ಕುರಿತಾಗಿ ತಮ್ಮ ಅನುಭವಗಳನ್ನೂ ಗಮನಿಸಿದಂತೆ ಪ್ರಾತ್ಯಕ್ಷಿಕೆಯ ಮುಖೇನ ಸಾದರಪಡಿಸಿದರು. ದಿವಾಣ ಶಿವಶಂಕರ ಭಟ್ಟರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ನಂತರ ಶ್ರೀ ಕೆರೆಮನೆ ಶಿವಾನಂದ ಹೆಗಡೆಯವರು ಬಡಗು ಯಕ್ಷಗಾನದಲ್ಲಿ ಉತ್ತರ ದಕ್ಷಿಣಾದಿ ಕಲೆಗಳ ಪ್ರಭಾವ ಮತ್ತು  ಕೊರಿಯೋಗ್ರಫಿ ಪ್ರಯೋಗಗಳ ಕುರಿತಾಗಿ ತಮ್ಮ ವಿಚಾರಗಳನ್ನೂ, ಬಡಗು ಯಕ್ಷಗಾನದ ಆಂಗಿಕಾಭಿನಯದಲ್ಲಿ  ಕಂಡುಬರುವ ವೈಶಿಷ್ಠ್ಯತೆಗಳನ್ನೂ  ಪ್ರಾತ್ಯಕ್ಷಿಕೆಗಳೊಂದಿಗೆ ತೋರಿಸಿಕೊಟ್ಟರು.

ಅಪರಾಹ್ನ ದ  ಬಳಿಕ ಡಾ ಶೋಭಾ ಶಶಿಕುಮಾರ್ ರವರು ಯಕ್ಷಗಾನದೊಂದಿಗೆ ಭರತನೃತ್ಯದ ಹೊಂದಾಣಿಕೆಯ ಕುರಿತು ತಮ್ಮ ಪ್ರಯೋಗ ಮೀಮಾಂಸೆಯನ್ನು ಮಂಡಿಸಿದರು. ಯಕ್ಷಗಾನದಲ್ಲಿ ಕಂಡುಬರುವ ಉದ್ಧತ ಹಾಗೂ ಸುಕುಮಾರ ಸ್ವರೂಪದ ನೃತ್ತಕ್ಕ ಪೂರಕವೆನಿಸುವ ಕೆಲವು ನಾಟ್ಯಶಾಸ್ತ್ರದ ಮಾರ್ಗ ಕರಣಗಳನ್ನು ಅವರು ವಿವರಿಸಿದರು. ಅವರಿಗೆ ಶ್ರೀ ಅರುಣ್ ಶ್ರೀನಿವಾಸನ್, ಶ್ರೀಮತಿ ಮಧುಲಿಕಾ ಶ್ರೀವತ್ಸ ಹಾಗೂ ಮೇಘಾ ಶ್ರೀನಿವಾಸ್ ರವರು ಪ್ರಾತ್ಯಕ್ಷಿಕೆಯಲ್ಲಿ ಸಹಕಾರವಿತ್ತರು. ನಂತರ ಡಾ. ವೀಣಾ ಮೂರ್ತಿ ವಿಜಯ್ ರವರು ಯಕ್ಷಗಾನ ಆಧಾರಿತವಾಗಿ ಕೂಚಿಪುಡಿ ಅಡವುಗಳನ್ನು ರೂಪಿಸಿದ ಅವರ ಸಂಶೋಧನೆಯ ಕುರಿತು ಕುರಿತಾಗಿ ಮಾತನಾಡುತ್ತಾ, ಕೂಚಿಪುಡಿಯು ಯಕ್ಷಗಾನದ ಅಂಗಿಕಾಭಿನಯದ ಅಂಶಗಳನ್ನು ಅಳವಡಿಸಿಕೊಂಡ ಮಾದರಿಗಳನ್ನ  ಶ್ರೀಮತಿ ಶಮಾ ಕೃಷ್ಣ ಹಾಗೂ ಕೃಷ್ಣಮೂರ್ತಿ ತುಂಗ, ಚಿತ್ಕಲಾ ತುಂಗ ಅವರ ಪ್ರಾತ್ಯಕ್ಷಿಕೆಯ ನೆರವಿನಲ್ಲ್ಲಿ ತಿಳಿಸಿದರು.

ವಿಚಾರ ಗೋಷ್ಠಿಯಲ್ಲಿ ಬೆಳಕಿಗೆ ಬಂದ ಎಲ್ಲ ಪ್ರಯೋಗಗಳ ಹಾಗೂ ಚರ್ಚೆಗಳ ಕುರಿತಾಗಿ ಡಾ ಪಾದೆಕಲ್ಲು ವಿಷ್ಣುಭಟ್ಟರು, ಶ್ರೀ  ಉಜಿರೆ ಅಶೋಕ ಭಟ್ಟರು , ಶ್ರೀ ಕೊರ್ಗಿ  ಶಂಕರನಾರಾಯಣ  ಉಪಾಧ್ಯಾಯರು ತಮ್ಮ ನೋಟಗಳನ್ನು ಅವಲೋಕನಕಾರರಾಗಿ ಹಂಚಿಕೊಂಡರು.  ಸಮಾರೋಪ ಸಮಾರಂಭದಲ್ಲಿ ಡಾ ಪ್ರಭಾಕರ್ ಜೋಶಿಯವರೂ ಹಾಗೂ ಅಧ್ಯಕ್ಷ ಭಾಷಣದಲ್ಲಿ ಪ್ರೊ ಎಂ  ಎ ಹೆಗಡೆ ಯವರೂ ಮಾತನಾಡಿದರು.

ನಂತರ ರಸಪ್ರತಿಪಾದನೆ – ಕರ್ಣಭೇಧನ ಯಕ್ಷಗಾನ ತಾಳಮದ್ದಳೆಯ ಕಾರ್ಯಕ್ರಮದಲ್ಲಿ, ಕರ್ಣನಿಗೆ ತಾನು ಕುಂತಿಯ ಪುತ್ರನೆಂದು ಕೃಷ್ಣನು ತಿಳಿಸಿಕೊಂಡುವ ಆ ಸನ್ನಿವೇಶವು, ಶ್ರೀ ದಿವಾಕರ್ ಹೆಗಡೆ ಹಾಗೂ ಶ್ರೀ ಉಜಿರೆ ಅಶೋಕ್ ಭಟ್ಟರ ಮುಮ್ಮೇಳದಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿತು. ಹಿಮ್ಮೇಳದ  ನಿರ್ವಹಣೆಯಲ್ಲಿದ್ದ   ಶ್ರೀಮತಿ ಕಾವ್ಯಶ್ರೀರವರ ಭಾಗವತಿಕೆಯೂ ಹಾಗೂ ಶ್ರೀ ಕೃಷ್ಣಪ್ರಕಾಶ ಉಳಿತಾಯರವರ ಮದ್ದಳೆ ವಾದನವೂ ಕರ್ಣಾನಂದ ಉಂಟುಮಾಡಿತು.

ತದನಂತರ ಡಾ ಮನೋರಮಾ ಬಿ ಎನ್ ರವರ ಯಕ್ಷಭಾಣಿಕದ ರಂಗಪ್ರಸ್ತುತಿಯಾಯಿತು. ಈ ಏಕವ್ಯಕ್ತಿಪ್ರದರ್ಶನವು ಯಕ್ಷಗಾನ ಮತ್ತು ಭರತನೃತ್ಯ ಸಮಾಹಾರದ ಕುರಿತಾದ ಅಧ್ಯಯನದ ಪ್ರಾಯೋಗಿಕ ಅಂಗವಾಗಿತ್ತು. ದುರ್ಯೋಧನನ ಪಾತ್ರದ ಸಾತ್ವಿಕಾಭಿನಯವನ್ನು ಮೆಲುಕುತ್ತಿದ್ದ ಸಹೃದಯರಿಗೆ ಎಲ್ಲೂ ನಾಟ್ಯಶಾಸ್ತ್ರದ ಮಾರ್ಗಕರಣಗಳನ್ನು ಬಳಸಿರುವ ರೀತಿ ಪ್ರತ್ಯೇಕವಾದ ಆಂಗಿಕಾಭಿನಯ ಎನ್ನಿಸದಷ್ಟು ಸಹಜವಾಗಿ ಆ ಪಾತ್ರಕ್ಕೆ ಹೊಂದಿಸಿದ್ದದ್ದು ಪ್ರಸ್ತುತಿಯ ಗಮನಾರ್ಹ ವಿಶೇಷ. ಸಮಗ್ರವಾಗಿ ಹೇಳುವುದಾದರೆ ಮುಕ್ತ ಮನಸ್ಥಿತಿಯ ವಸ್ತುನಿಷ್ಠ ಸಂಶೋಧನೆಗಳಿಂದ, ಪರಸ್ಪರ ಕೊಡುಕೊಳ್ಳುವ ಮನೋಭಾವದಿಂದ, ಸೋದರ ಕಲೆಗಳು ಹೇಗೆ ಸಮೃದ್ಧಗೊಳ್ಳುತ್ತವೆ ಎಂಬುದನ್ನು ಕಾರ್ಯಕ್ರಮವು ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟಿತು.

Leave a Reply

*

code