‘ನೂಪುರಾಗಮ’- ನೃತ್ಯಕ್ಷೇತ್ರಕ್ಕೆ ಮೌಲಿಕ ಸೇರ್ಪಡೆ

Posted On: Friday, April 15th, 2016
1 Star2 Stars3 Stars4 Stars5 Stars (No Ratings Yet)
Loading...

Author: ನಿಡುವಜೆ ರಾಮ ಭಟ್, ಉಡುಪಿ

ಹೆಸರು : ನೂಪುರಾಗಮ (ನೃತ್ಯ ಸಂಶೋಧನಾ ಬರೆಹಗಳ ಸಂಕಲನ)

ಸಂಪಾದಕರು  ಮನೋರಮಾ ಬಿ.ಎನ್

ಪುಟಗಳು  ೧೪೮

ಬೆಲೆ  ೨೦೦ರೂ.

ಪ್ರಕಾಶನ- ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿ, ಬೆಂಗಳೂರು/ಮಡಿಕೇರಿ

 Noopuraagama

ಕಲಾಸಂಶೋಧನೆಯಲ್ಲಿ ಒಳ್ಳೆಯ ಗುಣಮಟ್ಟ, ನಿರ್ದೇಶನ ಸಾಮರ್ಥ್ಯವುಳ್ಳ ಸಂಶೋಧನ ಸಂಕಲನಗಳ ಕೊರತೆ ಕೆಲವು ವರುಷಗಳಿಂದ ಕರ್ನಾಟಕವನ್ನಷ್ಟೇ ಅಲ್ಲದೆ ಜಾಗತಿಕವಾಗಿಯೂ ಗಾಢವಾಗಿಯೇ ತಟ್ಟುತ್ತಿದೆ. ಈ ಹಿನ್ನೆಲೆಯನ್ನು ಅರಿತುಕೊಂಡು ಶೋಧ-ಸಂಶೋಧನೆಯ ಹಾದಿಯನ್ನು ಅನುಸರಿಸಿ ಬರುವ ಮನಸ್ಸುಗಳಿಗೆ ಪ್ರೇರಣೆ, ಪೋಷಣೆಯನ್ನು ನೀಡುವ ಉದ್ದೇಶದಿಂದ ಅನಾವರಣಗೊಂಡ ಸಂಶೋಧನ ಸಂಕಲನವೇ ನೂಪುರಾಗಮ. ಇದು ಐ‌ಎಸ್‌ಎಸ್‌ಎನ್ ನೋಂದಣಿ ಸಂಖ್ಯೆಯನ್ನು ಪಡೆದ ಭಾರತದ ಮೊತ್ತಮೊದಲ ಸಂಶೋಧನ ಲೇಖನಗಳ ವಾರ್ಷಿಕ ಸಂಗ್ರಹವೆಂಬ ಮನ್ನಣೆಯನ್ನೂ ಪಡೆದಿದೆ.

ನೂಪುರ ಭ್ರಮರಿ ನಾಡಿನ ಹೆಸರಾಂತ ಕಲಾನಿಯತಕಾಲಿಕೆಯಾಗಿ ಮೊದಲ್ಗೊಂಡು ಪ್ರತಿಷ್ಠಾನ ಮತ್ತು ಪ್ರಕಾಶನಸಂಸ್ಥೆಯಾಗಿ ರೂಪ ಪಡೆದು ನೃತ್ಯ ಸಂಶೋಧಕರ ಚಾವಡಿ ಎಂಬ ಸಂಶೋಧನೆಗೆ ಮೀಸಲಾದ ಅಂಗಳವನ್ನೂ ೨೦೧೨ರಲ್ಲಿ ಪ್ರಾರಂಭಿಸಿದೆ. ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ನೃತ್ಯ ಸಂಶೋಧನ ಸಮ್ಮೇಳನದಲ್ಲಿ ಈ ನೂಪುರಾಗಮವು ಅನಾವರಣಗೊಂಡಿದೆ.

ಕಲಾಸಂಶೋಧನೆಗೆ ತಟ್ಟಿರುವಷ್ಟು ಶಾಪ ಬಹುಷಃ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಪರಿಸರ, ಸಮಾಜವಿಜ್ಞಾನಗಳಾದಿಯಾಗಿ ಯಾವ ಕ್ಷೇತ್ರಕ್ಕೂ ತಟ್ಟಿಲ್ಲ. ಫಲವಾಗಿ ಪ್ರದರ್ಶಕ ಕಲೆಯಾದ ನೃತ್ಯವನ್ನೇ ಲಕ್ಷಿಸಿದರೂ ಸಾಕು; ಬೆಳವಣಿಗೆಯು ಹೆಪ್ಪುಗಟ್ಟಿದ ಸರೋವರ ಇಲ್ಲವೇ ಮೃಗಜಲ. ಕಲಾಸಂಶೋಧನೆಯ ವ್ಯಾಪ್ತಿ ಕ್ಷೀಣಿಸುತ್ತಿದೆ ಎಂಬ ಆತಂಕಕ್ಕೆ ಪ್ರತಿಸ್ಪರ್ಧಿಯೆಂಬಂತೆ ಹೊಸ ಚೈತನ್ಯವಾಗಿ ಹೊರಹೊಮ್ಮಬೇಕು ಎಂಬುದು ಈ ಸಂಕಲನದ ಆಶಯ. ಇದನ್ನು ಪ್ರತೀ ವರುಷವೂ ಪ್ರಕಟಿಸಬೇಕೆಂಬ ಇರಾದೆಯಿದೆಯೆಂಬ ಅಭಿಪ್ರಾಯವನ್ನು ತಮ್ಮ ಸಂಪಾದಕೀಯದಲ್ಲಿ ವ್ಯಕ್ತಪಡಿಸಿದ್ದಾರೆ ಸಂಪಾದಕಿ ಮನೋರಮಾ ಬಿ.ಎನ್.

ಈ ಸಂಕಲನದಲ್ಲಿ ಒಟ್ಟು ೬ ಬೆಲೆಯುಳ್ಳ ಸಂಶೋಧನ ಲೇಖನಗಳಿದ್ದು ; ಕನ್ನಡ ಕಾದಂಬರಿ ಸಾಹಿತ್ಯ ಮತ್ತು ನೃತ್ಯದ ಕುರಿತು ೬ ದಶಕಗಳ ಬೆಳವಣಿಗೆಯನ್ನು ಗುಣತ್ಮಕ ಪದ್ಧತಿಯಲ್ಲಿ ಸ್ವತಃ ಸಂಪಾದಕರೇ ಬೆಳಕು ಚೆಲ್ಲಿದ್ದಾರೆ. ಕರಾವಳಿಯ ನೃತ್ಯಗಳ ಅಭಿವೃದ್ಧಿ ಸಂವಹನದ ಕುರಿತ ಸಮೀಕ್ಷಾ ಪದ್ಧತಿಯನ್ನನುಸರಿಸಿದ ಡಾ. ಸತೀಶ್ ಕುಮಾರ್ ಅಂಡಿಂಜೆ ಅವರ ಲೇಖನವು ಜನಜೀವನದಲ್ಲಿ ಹಾಸುಹೊಕ್ಕಾದ ನೃತ್ಯಗಳ ಪರಿಣಾಮ ವಿಶ್ಲೇಷಣೆಯನ್ನು ಗಮನಾರ್ಹವಾಗಿ ಮಾಡಿದೆ. ಸಮೀಕ್ಷೆಯ ಮಾದರಿಯನ್ನು ಅವಲಂಬಿಸಿದ ಶಾಲಿನಿ ವಿಠಲ್ ಅವರು ಬರೆದ ನೃತ್ಯದಲ್ಲಿ ತಂಜಾವೂರು ಸಹೋದರರ ರಚನೆಗಳ ಪ್ರಸ್ತುತತೆಯ ಕುರಿತ ಲೇಖನವು, ಪ್ರಸ್ತುತ ನೃತ್ಯ ಜಗತ್ತಿನ ಕಲಾವಿದರ ಆಯ್ಕೆ, ಅಭಿಮತಗಳನ್ನು ಸ್ಪಷ್ಟವಾಗಿ ದಾಖಲಿಸುತ್ತದೆ. ಸುಧೀರ್ ಕುಮಾರ್ ಅವರ ನೃತ್ಯ ಮತ್ತು ಸಿನಿಮಾ ಹಾಡುಗಳ ಆನ್ವಯಿಕತೆಯ ಕುರಿತ ಲೇಖನವು ನೃತ್ಯಜಗತ್ತಿನ ಸಾಹಿತ್ಯದ ಆಯ್ಕೆಯಲ್ಲಿ ಹೊಸತನವನ್ನು ನೀಡುವ ಹಂತದಲ್ಲಿ ಗಮನಾರ್ಹವೆನಿಸಿದೆ. ಡಾ. ಕರುಣಾ ವಿಜಯೇಂದ್ರ ಅವರ ಮಹಾನಟ ಲೇಖನವು ನಟರಾಜತತ್ತ್ವದ ಉಗಮವನ್ನು ಉಲ್ಲೇಖಿಸುತ್ತಾ ಕರ್ನಾಟಕದಲ್ಲೇ ನಟರಾಜನ ಮೂಲಶಿಲ್ಪವಿದೆಯೆಂದಿದ್ದು; ಮಹಾನಟ ಶಿಲ್ಪದ ವೈಭವ ಮತ್ತು ಹೆಚ್ಚುಗಾರಿಕೆಯನ್ನು ತಿಳಿಸುತ್ತದೆ. ಈ ಲೇಖನವು ಕಲಾವಿಕಾಸದ ಘಟ್ಟಗಳನ್ನು ಹೇಳುತ್ತಾ ಸಾಗುವಲ್ಲಿ ಮಹತ್ತ್ವಪೂರ್ಣವಾದ ಲೇಖನವಾಗಿ ಹೊರಹೊಮ್ಮಿದ್ದು; ಕಲಾವಿದರಾದಿಯಾಗಿ ಸಹೃದಯ ಓದುಗರು ಓದಲೇಬೇಕಾದ ಬರೆಹವಾಗಿದೆ. ಡಾ. ಶೋಭಾ ಶಶಿಕುಮಾರ್ ಅವರ ಭರತನಾಟ್ಯದ ಪ್ರಯೋಗ ಮತ್ತು ಶಾಸ್ತ್ರದ ಸಮನ್ವಯತೆಯನ್ನು ಆಧಾರಸ್ವರೂಪವಾಗಿ ನೀಡಿದ್ದು; ಚಿಂತನಾರ್ಹವಾಗಿದೆ.

ಇವಿಷ್ಟೇ ಅಲ್ಲದೆ ಕಲಾಮೀಮಾಂಸಕರಾದ ಶತಾವಧಾನಿ ಡಾ. ಆರ್. ಗಣೇಶ್ ಅವರ ದಿಗ್ಧರ್ಶಕ ಲೇಖನವು ಕಲೆಯೆಂಬ ಪ್ರಾಯೋಗಿಕ ನೆಲೆಯುಳ್ಳ ವಸ್ತುವಿಗೆ ಯಾವ ಮಾದರಿಯ ಸಂಶೋಧನಸ್ಪರ್ಶ ಬೇಕು? ಕಲಾಸಂಶೋಧನೆಗಳು ಹೇಗಿರಬೇಕು? ಕಲೆಯನ್ನು ಸಂಶೋಧನೆಯ ಹಿನ್ನಲೆಯಲ್ಲಿ ಕಾಣುವಾಗ ಗಮನಿಸಬೇಕಾದ ಅಂಶಗಳೇನು? ಅದರ ನೆಲೆಗಳೇನು? ಶಿಸ್ತುಗಳ್ಯಾವುವು? ನಡೆಸುವ ಮಾದರಿಗಳು ಹೇಗೆ? ಸಂಶೋಧನಾ ಉದ್ದೇಶ ಮತ್ತು ವಿಧಾನಗಳನ್ನು ಕಂಡುಕೊಳ್ಳುವುದು ಹೇಗೆ? ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗುವಂತೆ ಎಂತಹ ದಿಕ್ಕುಗಳು ನಮ್ಮೆದುರಿಗಿವೆ? ಅವಕಾಶಗಳಾವುವು ಎಂಬುದನ್ನು ಬಿಡಿಬಿಡಿಯಾಗಿ ಚಿತ್ರಿಸಿದೆ. ಹೆಸರಾಂತ ಸಾಂಸ್ಕೃತಿಕ ಇತಿಹಾಸ ಸಂಶೋಧಕ ಡಾ. ಶೇಷಶಾಸ್ತ್ರಿಯವರ ಲೇಖನವು ಕಲಾಸಂಶೋಧನೆಯ ಸವಾಲುಗಳೇನು? ಅತ್ಯಗತ್ಯ ಕರ್ತವ್ಯಗಳೇನು? ಸಂಶೋಧಕನ ಜವಾಬ್ದಾರಿಗಳೇನು? ಅಂತರ್ ಶಿಸ್ತೀಯ ನೆಲೆಗಳೇನು? ಯಾವ ಮನಸ್ಸು ಬೇಕು? ಸಂಶೋಧನೆಯೊಂದರ ಭವಿಷ್ಯ, ಆಯುಷ್ಯ ಹೇಗೆ ನಿರ್ಧಾರವಾಗುತ್ತದೆ ಎಂಬೆಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದೆ. ಶಾಸನತಜ್ಞರಾದ ಡಾ. ಎಚ್.ಎಸ್.ಗೋಪಾಲ ರಾವ್ ಅವರ ಲೇಖನ ಸಂಶೋಧನೆಯ ಅರ್ಥ, ಕಲಾಸಂಶೋಧನೆಯ ಜಗತ್ತಿಗೆ ಬೇಕಾದ ಗುಣಮಟ್ಟ, ಹಂತಗಳನ್ನು ಚರ್ಚಿಸಿದರೆ; ಖ್ಯಾತ ನರ್ತಕ, ಚಲನಚಿತ್ರ ಕಲಾವಿದರಾದ ಶ್ರೀಧರ್ ಅವರ ಅವಲೋಕನ ಮತ್ತು ಸರಳವೂ ಗಂಭೀರವೂ ಆದ ಗೆಜ್ಜೆಯ ಆಯಾಮವನ್ನು ತಿಳಿಸುವ ಮುಖಪುಟ ಹಾಗೂ ಅಚ್ಚುಕಟ್ಟಾದ ವಿನ್ಯಾಸ, ಮುದ್ರಣ ನೂಪುರಾಗಮದ ಪ್ರಕಾಶವನ್ನು ಹೆಚ್ಚಿಸಿದೆ. ಈ ನಿಯತಕಾಲಿಕೆಯ ಪ್ರಾರಂಭಿಕ ವರ್ಷದ ಪ್ರಾಯೋಜಕತ್ವವನ್ನು ಬೆಂಗಳೂರಿನ ವಿಜಯೇಂದ್ರ ಮತ್ತು ಡಾ. ಕರುಣಾ ವಿಜಯೇಂದ್ರ ಅವರು ವಹಿಸಿಕೊಂಡಿದ್ದರು.

ಒಟ್ಟಿನಲ್ಲಿ ಈ ಕೃತಿ ಪಿ‌ಎಚ್‌ಡಿ/ ಎಂಫಿಲ್ ಪದವಿಗಳಿಂದಾಚೆಯೂ ಸಂಶೋಧನೆಯನ್ನು ಶಿಸ್ತಾಗಿ ಬೆಳೆಸಿಕೊಳ್ಳುವ ಅಧ್ಯಯನಶೀಲತೆಯನ್ನು ಪ್ರೋತ್ಸಾಹಿಸುತ್ತದೆ. ಶೋಧ ಜಗತ್ತಿನ ವಿವಿಧ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಶೈಕ್ಷಣಿಕ ನೆಲೆಗಟ್ಟಿನಲ್ಲಿ ಉತ್ತರ ಕಂಡುಕೊಳ್ಳುವ ದಿಸೆಯಲ್ಲಿ ಈ ಸಂಕಲನವು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ನೃತ್ಯಕ್ಷೇತ್ರದ ಶಿಕ್ಷಕರಿಗೆ, ಗುರುಗಳಿಗೆ ಉತ್ತಮ ಮಾರ್ಗದರ್ಶಿ.

ಸಂಶೋಧನ ಬರೆಹಗಳನ್ನು ಕ್ರಮವತ್ತಾಗಿ ಪ್ರಕಟಿಸುವುದೇ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವಕಾಶಕ್ಕೆ ಹಾತೊರೆದ ಮನಸ್ಸುಗಳು ಮತ್ತೊಂದಷ್ಟು ಸಮಾನ ಮನಸ್ಸುಗಳ ಕನಸು-ಬದ್ಧತೆಗಳಿಗಾಗಿ ಒಟ್ಟಾಗಿ ಪ್ರಾರಂಭಿಸಿದ ಈ ಧ್ಯೇಯ ನಿಜಕ್ಕೂ ಸ್ತುತ್ಯರ್ಹ ಮತ್ತು ನಾಡಿನ ಸಂಶೋಧನಾ ಸಾಹಿತ್ಯ ಲೋಕಕ್ಕೆ ಮೌಲಿಕ ಸೇರ್ಪಡೆ.

(ಲೇಖಕರು ಹವ್ಯಾಸಿ ಪತ್ರಕರ್ತರು, ಕಲಾವಿಮರ್ಶಕರು)

Leave a Reply

*

code