ಸಂಘರ್ಷ ಮತ್ತು ಸಂಕ್ರಮಣದ ನಡುವೆ ಭಾವಪುತ್ರ

Posted On: Sunday, November 4th, 2018
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಮನೋರಮಾ ಬಿ.ಎನ್

ಹೊಸದಿಗಂತ ೪ ನವೆಂಬರ್ ೨೦೧೮ – ಆದ್ಯಂತ- ಸಾಪ್ತಾಹಿಕ ಪುರವಣಿ ಮುಖಪುಟಲೇಖನ – ಸಂಘರ್ಷ ಮತ್ತು ಸಂಕ್ರಮಣ ದ ನಡುವೆ ಭಾವಪುತ್ರ

ಪುಟ ೨

ಮಕರ ಸಂಕ್ರಮಣಕ್ಕೆ ಹದಿನೈದು ದಿನಗಳಿರುವಾಗಲೇ ಮನೆಯಲ್ಲಿ ಹಬ್ಬದ ಸಂಭ್ರಮ. ದೂರದೂರಿನಿಂದ ಮಿತ್ರ-ಬಂಧುಗಳೂ ಮೊಕ್ಕಾಂ ಹೂಡುತ್ತಿದ್ದರು. ಅಮ್ಮನ ಅಡಿಗೆಯ ಸೌಟು ಬಹುವಾಗಿ ಸದ್ದು ಮಾಡುತ್ತಿತ್ತು. ಪಾಟ್ಕರ್‌ಡಾಕ್ಟ್ರುಮಾಮನೇ ಸ್ವಯಂ ಖರ್ಚು ಹಾಕಿ ಮುತುವರ್ಜಿಯಿಂದ ಕಟ್ಟಿಸಿದ್ದ ಗುಡಿಯಲ್ಲಿ ಪ್ರತೀವರ್ಷದ ಸಂಭ್ರಮಕ್ಕೂ ಅಪ್ಪನದ್ದೇ ಪೌರೋಹಿತ್ಯ. ಹುರಿಗೆಜ್ಜೆ ಕಟ್ಟಿ, ಚಿತ್ರ-ವರ್ಣಾಲಂಕಾರ ಮಾಡಿ ಬಗೆಬಗೆಯ ಕೌದಿಗೆ ವಸ್ತ್ರ ಹೊದೆದ ಆನೆಯ ಮೇಲೇರಿ ಹೊಯ್ದಾಡುತ್ತಾ ಬರುವ ಸ್ವಾಮಿಯ ಪ್ರಭಾವಳಿ ಕಲಶದ ಗಾಂಭೀರ್ಯದ ಮೆರವಣಿಗೆಯನ್ನು ನೋಡುತ್ತಾ ಹೆಜ್ಜೆಯಿಡುತ್ತಿದ್ದರೆ ಬರಿಗಾಲುಗಳು ಮುಳ್ಳು-ಕಲ್ಲು ಒತ್ತಿದರೂ ನೋಯುತ್ತಿರಲಿಲ್ಲ. ಗಂಧ-ಭಸ್ಮದ ಅಡ್ಡ ಬೊಟ್ಟಿಟ್ಟು ಪಂಚೆಯನ್ನು ಬಿಗಿದು ಕಟ್ಟಿ, ಅಂಗವಸ್ತ್ರವನ್ನೊಂದು ಹೆಗಲಿಗೆ ಹಾಕಿದ ಕೇರಳದ ಚಂಡೆ ಹುಡುಗರು ಹಗ್ಗವನ್ನು ಜಗ್ಗುತ್ತಾ ರಟ್ಟೆ ಬಿಗಿದು ರಟಕಟರಢಢೀಂ ಎಂದು ಮಾಯಕದ ಕೋಲಿನಿಂದ ನಿಮಿಷಕ್ಕೆ ನೂರಿನ್ನೂರು ಬಡಿತದ ಸ್ಪೀಡಿಗೆ ಢಣರುಗುಟ್ಟುವಾಗ ಅವರ ಮೈಕೈಗಳಿಂದ ಸುಯ್ಯುವ ಬೆವರೂ ಆ ಸ್ವಾಮಿಯನ್ನೇ ಕೂಗಿ ಹೇಳುತಿತ್ತು. ಸ್ನೇಹದ ಅಂಟನ್ನು ಎರೆದ ಸಾವಿರ ದೀಪಗಳು ಪರಂಜ್ಯೋತಿರೂಪನ ಗುಡಿಯನ್ನು ಮಾತ್ರ ಬೆಳಗಿಸುತ್ತಿರಲಿಲ್ಲ; ಎಲ್ಲರ ಕಣ್ಣುಗಳನ್ನು ಹೊಳೆಯಿಸುತ್ತಿದ್ದವು. ಭಜನೆತಾಳಗಳೊಂದಿಗೆ ನಮ್ಮ ಕೊರಳುಗಳೂ ಬೆರೆತು ಹಾಡುತ್ತಿದ್ದರೆ ನರ್ತನಾಲಸನಿಗೆ ಕಾಲುಗಳೂ ತಂತಾನೇ ಮೇಲೆದ್ದು ಹೆಜ್ಜೆ ಹಾಕುತ್ತಾ ಸೇವೆಗೈಯುತ್ತಿದ್ದವು. ಎಲತ್ತಾಳ, ಮಣಿ, ಘಂಟೆ, ಶಂಖ, ಜಾಗಟೆಗಳು ಶಕ್ತಿ ಮೀರಿ ಭಕ್ತಿ ಎಂಬಂತೆ ಕೀರ್ತಿಸುತ್ತಿದ್ದರೆ, ಸ್ವಾಮಿಯು ಸೊಗಸಾಗಿ ಕುಕ್ಕರುಗಾಲಿನ ಭಂಗಿಯಲ್ಲಿ ಕುಳಿತು ಮೀಯಿಸಿಕೊಳ್ಳುತ್ತಿದ್ದ ಗಂಧ-ಚಂದನ, ಹರಿದ್ರಾ-ಕುಂಕುಮ, ಕ್ಷೀರ, ಧಧಿ, ಘೃತ, ಮಧು, ಪಂಚಾಮೃತ, ಭಸ್ಮ, ಪುಷ್ಪಗಳಲ್ಲಿ. ಅಬ್ಬಬ್ಬಾ. ಅಭಿಷೇಕದ ಒಂದೊಂದು ಹಂತಕ್ಕೂ ಸೋಪಾನಾಧಿಪ ಮೂರ್ತಿ ತಳೆಯುತ್ತಿದ್ದ ಅವತಾರವನ್ನು ಕಾಣಬೇಕೆನ್ನಿಸುವಷ್ಟರಲ್ಲೇ ಕಣ್ಣಂಚು ಒದ್ದೆಯಾಗುತ್ತಿತ್ತು. ರಂಗಪೂಜೆ, ದರ್ಶನಬಲಿಯ ಕ್ಷಣಕ್ಷಣಕ್ಕೂ ‘ಸ್ವಾಮಿಯೇ..ಯೈ’ ಎಂಬ ಘೋಷ ಮಾರ್ದನಿಸಿದಾಗೆಲ್ಲಾ ರೋಮಾವಳಿಗಳು ಎದ್ದು ನಿಲ್ಲುತ್ತಿದ್ದವು. ಪಾಯಸಪ್ರಸಾದವಿನಿಯೋಗ, ಅನ್ನದಾನದ ಹೊತ್ತಿಗೆ ಭಕ್ತರ ತೃಪ್ತಿ ನಗು ಹೊನಲಾಗುತ್ತಿತ್ತು.

ಪಕ್ಕದ ಆಂಜನೇಯ ಗುಡಿಯ ವಿಶಾಲ ಮೈದಾನದಲ್ಲಿ ಮಾಲಾಧಾರಿಗಳ ಹರುಷ ವರುಷವರುಷವೂ ಮುಗಿಲುಮುಟ್ಟುತ್ತಿದ್ದ ಕಾಲವದು. ಬಾಳೆದಿಂಡನ್ನು ಸೀಳಿ ಬೃಹದಾಕಾರದ ಮಂಟಪ ಮಾಡುವ ಆ ಚಿತ್ತಾರದ ಕೌಶಲಕ್ಕೆ ಶಕ್ತಿ ಭಗವನ್ನಾಮದ ಪ್ರೀತಿಯಲ್ಲದೆ ಬೇರೇನಲ್ಲವೆನಿಸಿದ್ದಿದೆ. ನಲುವತ್ತು ದಿನಗಳ ಕಾಲವೂ ಪತರುಗುಟ್ಟುವ ಚಳಿಯಲ್ಲಿ ಮಾಡುತ್ತಿದ್ದ ತಣ್ಣೀರಿನ ಸ್ನಾನ, ನೆಲ ಅಥವಾ ಬರಿಯ ಚಾಪೆಯಲ್ಲಿಯೋ ಮಲಗಿಕೊಳ್ಳಬೇಕಾದ ನೇಮವನ್ನು ನೆನೆದೇ ನಮ್ಮ ಕಾಲುಗಳು ತಣ್ಣಗಾಗುತ್ತಿದ್ದವು. ಅವರವರ ಕೈಯಡುಗೆಯಲ್ಲಿ ವ್ರತದಂತೆ ಉಪಾಹಾರ ಸೇವನೆಗೆ ದೇಹಗಳು ಬಡಕಲಾಗಿಹೋದರೂ ಮಿನುಗುತ್ತಿದ್ದ ಕಣ್ಣುಗಳ ಕಾಂತಿಗೆ ‘ಸ್ವಾಮಿ’ ಎನ್ನುವ ಸಂಬೋಧನೆ ಅರಿವಿಲ್ಲದಂತೆಯೇ ನಮ್ಮ ನಾಲಗೆ ತುದಿಯಲ್ಲಿರುತ್ತಿತ್ತು. ಚಿಕ್ಕವರಾದರೂ ಸರಿಯೇ, ಎಲ್ಲರೂ ಸ್ವಾಮಿ ಅಂಶರೇ ಎನ್ನುವ ಆತ್ಮದೀಪ್ತಿಯ ಸಂಸ್ಕಾರಕ್ಕೆ ಕರಿಯಬಟ್ಟೆಯೇ ತೋರುಗೈಯಾಗುತ್ತಿತ್ತು. ಬದ್ಧತೆಗೆ, ಭಕ್ತಿಗಲ್ಲದೆ ಭಗವಂತ ಬೇರಾವುದಕ್ಕೆ ಒಲಿದಾನು? ಆಸೆ-ಕಾಂಕ್ಷೆಗಳನ್ನು ಬದಿಗೊತ್ತಿ ನಡೆದುಕೊಳ್ಳಬೇಕಾದ ಜೀವನಕ್ಕೆ ಭಜನೆ, ಪೂಜೆ, ಧ್ಯಾನಗಳು ಊರುಗೋಲಾಗಿರುತ್ತಿದ್ದವು. ಮಕ್ಕಳ ಹಕ್ಕೊತ್ತಾಯಕ್ಕೆ ಟಿವಿಯೊಂದನ್ನು ಬಾಡಿಗೆ ಪಡೆದು ಕಪ್ಪನೆಯ ಕ್ಯಾಸಟ್ಟಿನಲ್ಲಿ ಅಡಗಿರುತ್ತಿದ್ದ ಮಣಿಕಂಠನ ಮಹಿಮೆ, ಶಬರಿಮಲೆ ಸ್ವಾಮಿ ಅಯ್ಯಪ್ಪ ಮೊದಲಾದ ಬೆರಳೆಣಿಕೆಯ ಸಿನೆಮಾಗಳನ್ನು ಅದೆಷ್ಟು ಬಾರಿ ರಾತ್ರಿ ಮೂಡಿಸಿದರೂ ದೊಡ್ಡವರೂ ನೆರೆದು ಕಣ್ಣು ಬಾಯಿಬಿಟ್ಟು ನೋಡಿ ಕೊಂಡಾಡುವಾಗ ಟಿವಿಮಾಧ್ಯಮವೂ ಮಾನ್ಯವಾಗಿ ಧನ್ಯವಾಗಿ ಪೂಜೆಯನ್ನು ಸ್ವೀಕರಿಸುತ್ತಿತ್ತು !

ವ್ರತಸಮಾಪ್ತಿಯಾಗಿ ಯಾತ್ರೆಗೆ ಇನ್ನೇನು ಹೊರಡಬೇಕು..,ಮಧ್ಯರಾತ್ರಿಯ ವೇಳೆಗೆಲ್ಲಾ ಕೆಂಡ ಹಾಯುವ ಸೇವೆಯ ರುದ್ರಾದ್ಭುತ ಸನ್ನಿವೇಶ. ಬರಿಗಾಲಿನಲ್ಲಿ ನಡೆಯುವುದು, ಕೆಂಡಕ್ಕೆ ಬಿದ್ದು ಮೇಲೆದ್ದು ನಿಲ್ಲುವುದು, ಕುಣಿಯುವುದು..ಹೀಗೆ ವಿಧವಿಧವಾಗಿ ದೇಹವನ್ನು ದಂಡಿಸುವಾಗ ಮೈಗಳಲ್ಲಿ ಸ್ವಾಮಿಯೇ ಮಂಡಿಸಿದ್ದಾನೋ ಎಂಬ ಆವೇಶ. ಆಬಾಲವೃದ್ಧರೂ ನಿಷ್ಠೆಯನ್ನು ಸಡಿಲಿಸದೆ ಆರಾಧನೆ ಮುಗಿಸಿ ಇರುಮುಡಿ ಕಟ್ಟಿ ಕಾಣಿಕೆಯನ್ನು ಹೊತ್ತು ಗುಳೆಯೇಳುವಾಗ ಅದೇಕೋ ಗಂಟಲುಬ್ಬಿ ಕಣ್ಣು ತೇವ. ದುರ್ಗಮ ಅರಣ್ಯದ ಕಾಲುದಾರಿಯಲ್ಲಿ ದುರ್ಲಭವಾದ ದರುಶನಾಪೇಕ್ಷಿಗಳಾಗಿ ಪ್ರಾಣಸಮಾನವಾದ ಇರುಮುಡಿ ಹೊತ್ತು ಹೊರಡುವವರ ಸಂಕಲ್ಪ ನಿಜಕ್ಕೂ ಭಗವಂತನಷ್ಟೇ ದೊಡ್ಡದು ಎಂದು ಎಷ್ಟೋ ಸಲ ಕಂಡದ್ದಿದೆ. ಮಕರಜ್ಯೋತಿಯು ಬಾನಿನಲ್ಲಿ ಮೂಡುವ ಭಗವತ್ಸ್ವರೂಪ ಎಂಬ ಅಸಾಮಾನ್ಯ ಅದ್ಭುತಕ್ಕೆ ತೆರೆಯುವ ಕಿವಿ ಕಣ್ಣುಗಳು ‘ಅದೇನು ಬಿಡಿ ಮಹಾ, ಕಾಡುಜನಗಳು ದೂರದ ಬೆಟ್ಟದಲ್ಲಿ ಬೆಂಕಿ ಹಾಕುತ್ತಾರೆ, ಅದೇ ಆ ಬೆಳಕು’ ಎಂಬ ವಾದವನ್ನು ಒಪ್ಪಲು ತಯಾರಿರುತ್ತಿರಲಿಲ್ಲ. ಹೌದು, ಬದುಕಿಗೆ ಬೆರಗು ಬೇಕು. ಆ ಬೆರಗಿಗೊಂದು ಭವ್ಯತೆ-ದಿವ್ಯತೆ ಬೇಕು. ಹಾಗೆಂದೇ ಮಾಲಾಧಾರಿಗಳು ಹೇಳುವ ಮಹಿಮೆಯಕಥೆಗಳಲ್ಲಿ ಎಂದೂ ಸಂದೇಹ ಇಣುಕಿದ್ದಿಲ್ಲ. ಧಾರ್ಮಿಕರಿಗೆ ನಂಬಿಕೆಗಳು ಕೊಡುವ ಆಪ್ತತೆಯೆದುರಿಗೆ ಆಧುನಿಕ ವಿಜ್ಞಾನ ಪ್ರಮೇಯಗಳ ಹಂಗು ಬೇಕೆನ್ನಿಸುವುದಿಲ್ಲ.

ಯಾತ್ರೆ ಮುಗಿಸಿ ಶರಣರು ತಂದಿತ್ತ ಅರವಣ ಪಾಯಸ, ನೆಯ್ಯಿಯನ್ನು ಕಣ್ಣಿಗೊತ್ತಿ ಮೆಲ್ಲುವಾಗ ಮತ್ತೊಮ್ಮೆ ಸಂಕ್ರಮಣದ ಕಾಲ ಯಾವಾಗ ಬರುವುದೋ ಎಂದು ಹಪಹಪಿಸಿದ್ದಿದೆ. ‘ಅಯ್ಯೋ ಪಾಪ. ಅಯ್ಯಪ್ಪ ಅಂದರೆ ಪುಣ್ಯ’ ಎಂಬ ಹಿರಿಯರ ಮಾತನ್ನು ಮನಸ್ಸಿನಲ್ಲಿಟ್ಟು ಅದೆಷ್ಟು ಸಲ ಬಿದ್ದಾಗ, ಪೆಟ್ಟು ತಿಂದಾಗ ಪಾಲಿಸಿಲ್ಲ? ಅಯ್ಯಪ್ಪನ ಹೆಸರೇ ಸೃಷ್ಟಿಸುತ್ತಿದ್ದ ಈ ಪುಳಕ-ರುಚಿಸೌಂದರ್ಯ-ಜೀವನಪರದೃಷ್ಟಿಗಳ ಮುಂದೆ ‘ನೀನ್ಯಾಕೋ, ನಿನ್ನ ಹಂಗ್ಯಾಕೋ.. ನಿನ್ನ ನಾಮದ ಬಲವೊಂದಿದ್ದರೆ ಸಾಕು’- ಎಂಬ ದಾಸಾನುದಾಸರ ಮಾತು ಅಲ್ಲಿಗೆ ಹೋಗಲಾಗದ ಅದೆಷ್ಟೋ ಮಂದಿಗೆ ಕಂಡರೆ, ಅದು ಸತ್ಯ.

ಪರಮಾತ್ಮ ದೂರದ ಶಬರಿಗಿರಿಯಲ್ಲಲ್ಲ, ಇಲ್ಲೇ ನಮ್ಮ ನಡುವಿನಲ್ಲಿದ್ದಾನೆ, ನಿಜಭಕ್ತನಲ್ಲಿದ್ದಾನೆ, ಭಕ್ತಿ-ಭಾವದ ಉಸಿರಿನಲ್ಲಿದ್ದಾನೆ ಎಂದೆನಿಸುವುದಕ್ಕೆ ಎಷ್ಟು ಹೊತ್ತು ಬೇಕು? ಮಾಲಾಧಾರಿಗಳು ಕಣ್ಣೀರಿಟ್ಟು ಅಂಗಾಲಾಚಿ ಹೋರಾಡುವಾಗ, ಅಸಂಖ್ಯಾತ ಮಹಿಳೆಯರು ‘ನಾವು ಕಾಯಲು ಸಿದ್ಧ’ ಎಂದು ದಿಟವಾಗಿ ನಿಂತು ಬೇನೆಯುಣ್ಣುವಾಗ ಕಣ್ಣಿಂದ ಇಳಿದ ಹನಿಗಳೂ ಭಾರವಾಗಿದ್ದವಲ್ಲಾ ! ಅಲ್ಲಿ ಭಾವಪುತ್ರನಿಲ್ಲವೇ?

ಹಟವಿರಬೇಕಾದ್ದು ಶ್ರದ್ಧೆಯಿಂದ ಭಗವಂತನನ್ನು ಅಂತರಂಗಕ್ಕೆ ದರ್ಶನವಾಗಿ ದಕ್ಕಿಸಿಕೊಳ್ಳುವುದಕ್ಕೋ ಅಥವಾ ಹಕ್ಕೊತ್ತಾಯದ ನೆಪವೊಡ್ಡಿ ಆಲಯರಂಗವನ್ನೂ ಧೂಳೆಬ್ಬಿಸಿ ಭಾವಪ್ರಕೋಪಗಳನ್ನು ಬೆಳೆಯಿಸಿ ಮನುಷ್ಯತ್ವವನ್ನೇ ದೂರಮಾಡಿ ಪ್ರದರ್ಶನ ಮಾಡಿಕೊಳ್ಳುವುದಕ್ಕೋ?

****

ಹೇಳಿಕೇಳಿ ನನ್ನದು ಕಲಾವಿದರ ಜಾತಿ. ಜಾತಿ-ಮತ-ಲಿಂಗಬೇಧಗಳ ಹಂಗಿಲ್ಲದೆ ಕಲೆಯಲ್ಲಿ ಭಗವಂತನನ್ನರಸುವ ಕಾಯಕ ಪರಂಪರೆಯಿಂದ ಬಂದದ್ದು. ಕಲೆ-ಸಾಹಿತ್ಯದೊಂದಿಗಿನ ಅಭಿವ್ಯಕ್ತಿಯಲ್ಲಿಯೇ ನಮಗೆ ಬಲ, ಪ್ರೀತಿ. ಹಾಗೆಂದೇ ಕಲಾಮಾರ್ಗವನ್ನು ಅದಕ್ಕಾಶ್ರಯವಾದ ಧರ್ಮ, ಸಂಪ್ರದಾಯ, ಸನಾತನ ನಂಬಿಕೆಗಳನ್ನು ಪುರಸ್ಕರಿಸುವವರಿಗೆ ಅದೇ ಪ್ರಬಲ ಭಾವಾಭಿವ್ಯಕ್ತಿಯ ಮಾಧ್ಯಮ. ಈ ಕಾರಣಕ್ಕೇ ಈ ರಚನೆಯನ್ನು ಸ್ವಾಮಿಗೆ ಅರ್ಪಿಸುತ್ತಾ ಅವನಿಗಾಗಿ ನಿಂತ ಶ್ರದ್ಧಾಳುಗಳ ಸಂಕಟವಿಮೋಚನೆಗೆ ಆತನನ್ನೇ ಪ್ರಾರ್ಥಿಸುತ್ತಿದ್ದೇನೆ.

ಕೌತ್ವ

ಕೌತ್ವವೆಂಬುದು ಅಭಿಜಾತನರ್ತನಬಂಧಗಳಲ್ಲೊಂದು. ಅದಕ್ಕೂ ಈ ಪೂರ್ವೋಕ್ತ ವಿಚಾರಗಳ ಕೇಂದ್ರವಾದ ದೇವಾಲಯಸಂಪ್ರದಾಯಕ್ಕೂ ಸಂಬಂಧವೇನು ಎಂದು ನಿಮಗನ್ನಿಸೀತು. ಆದರೆ ನಮ್ಮಲ್ಲಿರುವ ಯಾವ ಕಲೆಯೂ ದೇವಾಲಯಾವರಣದಿಂದಲೇ ಬಂದದ್ದು ಎಂಬುದನ್ನು ಪ್ರಥಮತಃ ಗಮನಿಸಿಕೊಳ್ಳಬೇಕು. ಕಲೆಗಳಿಗೆ ಮಾತೃಭೂಮಿಕೆ ಆಲಯದ ರಂಗಾಂತರಂಗವೇ. ಅದರೊಳಗೂ ಭಾರತೀಯ ನೃತ್ಯಪರಂಪರೆಯ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿ ಕೌತ್ವವೆಂಬುದು ಆಲಯದ ಆವರಣದೊಳಗೆ ಬಹಳ ಕಾಲ ಬಾಳಿ ಬದುಕಿದ, ಭಗವಂತನ ನಾಮಾವಿಶೇಷಣಗಳನ್ನು ಪಾಟಾಕ್ಷರಗಳ ವಿಶೇಷ ಸಂಕಲನದಲ್ಲಿ ಪ್ರಸ್ತುತಪಡಿಸುತ್ತಿದ್ದ ನೃತ್ಯಬಂಧ ಎನ್ನುವುದು ತಿಳಿದುಬರುತ್ತದೆ. ಮೂಲದಲ್ಲಿ ರೂಢಿಯಿದ್ದಿತೆನ್ನಲಾದ ಆಲಯ ನೃತ್ಯಪದ್ಧತಿಯ ಕೌತ್ವ ಹೇಗಿತ್ತು ಎನ್ನುವುದಕ್ಕೆ ಇಂದಿಗೆ ನಿರ್ದಿಷ್ಟ ಸಾಕ್ಷಿಗಳು ಉಳಿದುಬಂದಿಲ್ಲವಾದರೂ ಶೇಷಮಾತ್ರವನ್ನಾದರೂ ಉಳಿಸಿಕೊಳ್ಳುವಷ್ಟರ ಮಟ್ಟಿಗೆ ಹಿರಿಯರ ದಾಖಲೆಗಳು ಅನುಕೂಲವನ್ನಿತ್ತಿವೆ. ಹಾಗೆಂದೇ ಕೌತ್ವವು ಇಂದು ಸಭಾಪದ್ಧತಿಯ ರಂಜನೆಯೊಳಗೂ ಸೇರಿಕೊಂಡಿದೆ. ಅದೇನೇ ಇರಲಿ, ಭಾರತೀಯ ದೇವಾಲಯ ಪರಂಪರೆಯಿಂದಲೇ ಬಂದ ಭರತನಾಟ್ಯ, ಕೂಚಿಪೂಡಿಯಂತಹ ನೃತ್ಯಪ್ರಕಾರಗಳಷ್ಟೇ ಅಲ್ಲದೆ; ನಾಟ್ಯಸಂಪ್ರದಾಯಗಳಾದ ಯಕ್ಷಗಾನ ಮತ್ತು ಕಥಕಳಿ, ಕೂಡಿಯಾಟ್ಟಂಗಳಲ್ಲೂ ಪೂರ್ವಾಂಗದ ಪ್ರಥಮ ಆದ್ಯತೆಯಾಗಿ ಕೌತ್ವದ ಬಳಕೆ ಪರಂಪರೆಯಿಂದ ಬಂದಿರುವುದು ಔಚಿತ್ಯಪೂರ್ಣ ಮತ್ತು ಸರ್ವದಾ ಸ್ತುತ್ಯ.

ಅಲೌಕಿಕವಾದ ದೈವವನ್ನು ಸಾಕ್ಷಾತ್ಕರಿಸುವ ಮಾಧ್ಯಮವಾಗಿ, ಅವ್ಯಕ್ತ ಅಂಶಗಳಿಗೆ ಸಾಂಕೇತಿಕ ಸ್ಪರ್ಶವನ್ನು ನೀಡುವ ವಿಧಿಯಾಗಿ, ಧರ್ಮಸ್ರೋತವಾಗಿ ಕಲೆಯರೂಪವನ್ನಾಂತು ಮೂಡಿಬಂದದ್ದು ಗೀತ-ನರ್ತನ. ಸಾಮಾನ್ಯವಾಗಿ ಆಲಯ ಪದ್ಧತಿಯಲ್ಲಿ ಆಚರಣೆಯಲ್ಲಿರುವ ಗೀತ-ನೃತ್ಯಗಳು ಆಸ್ವಾದಕ್ಕೆಂದೇ ಬರುವ ರಸಿಕಪ್ರೇಕ್ಷಕರನ್ನು ಗುರಿಯಾಗಿಸಿಕೊಳ್ಳುವುದಿಲ್ಲ. ಅದೇನಿದ್ದರೂ ಆಲಯಾನುಸಾರಿಯಾಗಿ ಭಗವಂತನ ಪ್ರೀತ್ಯರ್ಥ. ಅದನ್ನು ಪೂರೈಸುವ ಆಗಮರೀತ್ಯಾವಿಧಿವಿಧಾನಗಳನ್ನು ಪಾಲಿಸುವಲ್ಲಿ ಇರಬೇಕಾದದ್ದು ಶ್ರದ್ಧೆ ಮತ್ತು ಭಕ್ತಿ. ಧಾರ್ಮಿಕ, ತಾಂತ್ರಿಕ ಸಂಪ್ರದಾಯದ ಅಲೌಕಿಕ ರಸದೃಷ್ಟಿಯೇ ಇದರ ಪ್ರಧಾನ ಪರಿಕಲ್ಪನೆ. ಅದರಿಂದಾಚೆಗೆ ಸಿಗುವ ಸಹೃದಯಾಹ್ಲಾದವು ಕಲಾಂಗಣಕ್ಕೆ ಬೋನಸ್.

ಆಗಮೋಕ್ತವಾಗಿ ದೇವಾಲಯಗಳು ನಿರ್ಮಾಣಗೊಳ್ಳುವ ವೇಳೆಗಾಗಲೇ ಬೀಜಾಕ್ಷರವನ್ನು ಅನ್ವಯಿಸಿ ದೇವರನ್ನು ಪೂಜಿಸುವ ವೈದಿಕವಿಧಿ ಪ್ರಚಲಿತವಾಗಿತ್ತು. ಇಂತಹ ಬೀಜಾಕ್ಷರಗಳು ಕಾಲಪ್ರಮಾಣ, ಉಚ್ಚಾರಕ್ರಮ, ಶ್ವಾಸೋಚ್ಛ್ವಾಸಗಳನ್ನು ಲಕ್ಷಿಸಿ ನಿಯಮಾನುಸಾರವಾದ ಅನುಷ್ಠಾನಬದ್ಧತೆಯಲ್ಲಿ ಪರಿಣಾಮವನ್ನು ಬೀರುವಂತವು. ಅವು ಉಂಟುಮಾಡುವ ಶಬ್ದತರಂಗಗಳಿಂದ ದೇವತೆಗಳನ್ನು ಆವಾಹಿಸುವ, ಉಚ್ಛಾಟಿಸುವ, ಶಾಂತ ಮಾಡುವ ಸಾಧ್ಯತೆಗಳು ಶತಪ್ರತಿಶತ ನಿಜ. ಅದೇ ಈ ಶಬ್ದತರಂಗಗಳು ವಿರುದ್ಧಪ್ರಮಾಣದಲ್ಲಿ ಚಲಿಸಿ ಸಂಚಯಿಸಿದರೆ ಹಾನಿ ಉಂಟಾಗುವುದೂ ಇದೆ.

ಬೀಜಾಕ್ಷರಸ್ವರೂಪವಾದ ಗೀತ-ನರ್ತನಾನ್ವಯಕ್ಕೊಪ್ಪುವ ಸ್ವರ-ಪಾಟಾಕ್ಷರಗಳ ಶಬ್ದಸಂಚಯನ ಗುಣವನ್ನು ದೇವಾಲಯ ಪರಂಪರೆ ಗಮನಿಸಿಕೊಂಡಿದೆ. ಹೀಗೆ ಪಾಟ-ಸ್ವರ-ಸಾಹಿತ್ಯ-ಲಯ-ತರಂಗಗಳನ್ನು ಆಲಯವಿಧಿಗನುಗುಣವಾಗಿ ಗರಿಷ್ಟಪ್ರಮಾಣದಲ್ಲಿ ಸಂಚಯಿಸುವ ಸ್ತುತಿರೂಪಕ್ಕೆ ಮನ್ನಣೆ ಹೆಚ್ಚು. ಅವುಗಳ ಪೈಕಿ ಕೌತ್ವಗಳಿಗೆ ಮೇಲ್ಪಂಕ್ತಿಯಿದೆ. ಇದು ವಾದ್ಯಪ್ರಬಂಧಗಳಿಗೊಪ್ಪ್ಪುವಂತೆ ಉದ್ಧತ ಶೈಲಿಯಲ್ಲಿ ಹೆಣೆಯಲಾದ ಸಾಂಪ್ರದಾಯಿಕ ಮಂಗಲಾಚರಣೆಯನ್ನುಳ್ಳ ದೇವತಾಸ್ತುತಿ. ಕೇಳಲು ಒರಟೆನಿಸುವ, ಜಟಿಲವೆನಿಸುವ ವಿಚಿತ್ರ ಪಾಠಾಕ್ಷರಗಳಿಂದ ಮತ್ತು ಶಬ್ದಾರ್ಥರೂಪಗಳು ಇದರ ಆಯಕಟ್ಟಿನಲ್ಲಿರುತ್ತದೆ. ಸಂಗೀತ ರತ್ನಾಕರ ಶಾಸ್ತ್ರಗ್ರಂಥವು ತಿಳಿಸುವಂತೆ ಕವಿತ್ವವೆಂಬ ವಾದ್ಯಪ್ರಬಂಧದನುಸಾರವಾಗಿ ರಚನೆಯಾಗಬೇಕೆನ್ನುವುದು ಇದರ ಸಾಹಿತ್ಯಲಕ್ಷಣ. ಹೀಗೆ ರಚನೆಯಾದ ಸಾಹಿತ್ಯ-ಪಾಟಾಕ್ಷರಗಳನ್ನು ದ್ರುತಗತಿಯಲ್ಲಿ ಹಲವು ಬಾರಿ ಪ್ರಥಮಾರ್ಧ, ದ್ವಿತೀಯಾರ್ಧವನ್ನೂ ಗದ್ಯ/ಗೇಯಮಿಶ್ರಿತ ರೂಪಕ್ಕೆ ಅಳವಡಿಸಿ ಮಂತ್ರದ ಛಾಯೆಯ ಶ್ರುತಿಯಲ್ಲಿ ಹೇಳುವುದು ಇದರ ಪ್ರಧಾನ ಗಾನಲಕ್ಷಣ. ಇನ್ನು ಭ್ರಮರಿ, ಉತ್ಪ್ಲವನ, ಮಂಡಲ ಮುಂತಾದ ಚಲನೆಗಳನ್ನು ಒಳಗೊಂಡು ದೀರ್ಘವಲ್ಲದ ವೇಗಗತಿಯ ಕ್ರಮ ಇದರ ನರ್ತನಲಕ್ಷಣ.

ಭಯ-ಭಕ್ತಿ-ಪರಿಣಾಮದ ಕುರಿತ ಮಾನಸಿಕ ಪರಿಕಲ್ಪನೆಗಳೇ ಅನುಷ್ಠಾನದ ವಿಷಯದಲ್ಲೂ ವ್ಯಕ್ತವಾಗಿ ಎಚ್ಚರಿಕೆ ಕಾಯ್ದುಕೊಳ್ಳುವಂತೆ ಮಾಡುತ್ತವೆ. ಹಾಗೆಂದೇ ಆಲಯನೃತ್ಯಕ್ರಮದಿಂದಾಚೆಗೆ ಈ ಕೌತ್ವದ ಬಳಕೆ ಸಭಾಪದ್ಧತಿಯೊಳಗೆ ಎಷ್ಟರಮಟ್ಟಿಗೆ ಔಚಿತ್ಯಪೂರ್ಣ ಎಂಬ ಪ್ರಶ್ನೆ ಬದಲಾದ ಸಭಾಪದ್ಧತಿಯ ನರ್ತನಕ್ರಮದ ಕಾಲಕ್ಕೂ ಹಲವು ಶ್ರದ್ಧಾಳುಗಳಿಗೆ ಜಿಜ್ಞಾಸೆಯನ್ನಿತ್ತಿದೆ. ಯಥೋಚಿತ ಶಬ್ದಪಾಟ, ಕ್ರಮಾನುಗತ ದೇವತಾರಾಧನೆ, ನೃತ್ಯವಿಧಿಯಲ್ಲಿ ಆರಾಧಾನಾಭಾವ ಇದ್ದರೇನೆ ಕೌತ್ವಾಧಿದೇವತೆಗಳಿಗೆ ಪ್ರೀತ್ಯರ್ಥವಾಗಿ ಸಹೃದಯಭಾವಪೋಷಕವಾಗಿ ಈ ನೃತ್ಯವಿಧಿ ಸಾರ್ಥಕ. ಇಲ್ಲವಾದರೆ ಪ್ರಕೃತ ಆಲಯಕ್ರಮವನ್ನು ಭಂಜಿಸುವ ಹಾದಿಗಳಂತೆ ಇದೂ ಪರ್ಯಾವಸಾನವಾಗಿ ಅರ್ಥ ಕಳೆದುಕೊಳ್ಳುತ್ತದೆ.

ಸರ್ವೇಸಾಮಾನ್ಯವಾಗಿ ವಿಶೇಷ ದಿನ-ಉತ್ಸವಗಳಲ್ಲಿ ಗೀತ ಮತ್ತು ನರ್ತನದ ಪರಿಪಾಠ ದೇವಾಲಯಗಳಲ್ಲಿರುವುದು ಅನೂಚಾನವಿಧಿ. ಅದೂ ದೇವಾಲಯ ವಾದ್ಯಮೇಳಕ್ಕೊಪ್ಪುವಂತೆ ಸಂಘಟಿಸಲ್ಪಟ್ಟಿರುವಂತದ್ದು. ಹಾಗೆಂದೇ ಕೌತ್ವವು ಏಕಕಾಲಕ್ಕೆ ಗಾನಕ್ಕೂ, ನರ್ತನದ ವಿಸ್ತರಣಕ್ಕೂ ಒದಗುತ್ತದೆ. ಪ್ರಸ್ತುತ ಶಾಸ್ತಾರ ಕೌತ್ವವನ್ನು ದೇವಾಲಯದಲ್ಲಿ ಬಳಕೆಯಲ್ಲಿರುವ ಘನ-ಅವನದ್ಧ ಭಾಂಡವಾದ್ಯಗಳ ಮೂಲಾಕ್ಷರಗಳಿಗೆ ಒಪ್ಪುವಂತೆ ಶಾಸ್ತ್ರದಲ್ಲಿ ಹೇಳಿರುವ ಪಾಟಪ್ರಬೇಧದ ಅಲಂಕಾರಗಳನ್ನು ಗಮನದಲ್ಲಿಟ್ಟು ಸಂಸ್ಕೃತ-ಕನ್ನಡ ಪದವಿನ್ಯಾಸದಲ್ಲಿ ರಚಿಸಲಾಗಿದೆ.

ಪ್ರಕೃತ ಕಾಲಘಟ್ಟಕ್ಕೆ ಕಲಾವಂತಿಕೆಯಿಂದಾಚೆಗಿನ ಹೂಟಗಳು ಹೆಚ್ಚಿ ರಾಡಿ ಹಬ್ಬುವಾಗ ಆಲಯ-ಆಗಮ-ಕಲೆಯ ಸಂವಿಧಾನಕ್ಕೆ ಮತ್ತಷ್ಟು ಬದ್ಧರಾಗೋಣ. ಈ ಆಶಯ ಮಾರ್ದನಿಯಾಗಿ ಹಬ್ಬಿ ಹರಡಲಿ. ಸಂಘಟಿತವಾಗಲಿ.

 

ವಾದ್ಯಪ್ರಬಂಧವಿದು ಗೀತಕವಿತ್ತ್ವ
ಕೌತನಾಮಕವಾಗಿ ಸೇರೆ ಆಲಯತತ್ತ್ವ
ಸ್ತುತಿಗಾನ ನರ್ತನದಿ ಸೇವಿಸಲು ಸ್ವಾಮಿಯನು
ಲೇಖನದ ಪೂಜೆಯಲಿ ಶಾಸ್ತಾರ ಸತ್ತ್ವ

ಶಾಸ್ತಾರಕೌತ್ವ

ಖಂಡ ಏಕತಾಳ- ರಾಗ ಮಧ್ಯಮಾವತಿ

ದಂದಂದಧೋಂಧೋಂ ಧಲಾಂಧೋಂದನೋಂಧೋಂ
Dhamdhamdadhomdhom Dhalaamdhodanomdhom
ಧರಿಗುಡುತ ಧಿರಿಗುಡು #ಪರಂಜ್ಯೋತಿರೂಪ
Dhariguduta Dhirigudu #Paramjyotirupa
ಹರಿಗಿರೀಶಕುಮಾರ ಅರಿವಿಮರ್ದನ ಶೂರ
Harigirishakumara Arivimardanashoora
#ಶಬರಿಗಿರಿವೀರ ವಿಭು ಧರ್ಮಶಾಸ್ತಾರ
Shabarigiriveera vibhu #Dharmashastara
ಶರಣಜನಮಂದಾರ ಜ್ಞಾನಮುದ್ರಾ ಧೀರ
Sharanajanamandara Jnanamudra Dheera
ಸುಂದರ, ಲತಾಕರ, ಶರಧಿಗಂಭೀರ
Sundara, Lataakara,Sharadhigambheera
ಅಭಯದಧನುರ್ಧಾರೀ |ಓಂಹ್ರೂಂ| ತತ್ ಪಠತು
Abhayadadanurdhaari | Om Hrum tat paTatu
ಕಾನನವಿಹಾರೀ | ರುಂದುಂ ಕಿರ್ರಕಿಟತ
Kaananaviharee | Rumdhum kirrakiTatu
#ಮಹಿಷಿಸಂಹಾರಿ ಜಯ | ರಟಕಟತ ರಡಢಣತು
Mahishisamhari Jaya | RaTakaTatu RaDaDhaNatu
ವ್ಯಾಘ್ರವಾಹನಗಾತ್ರ ಶಾಂತ ಸುವಿಚಾರಿ
Vyaghravaahanagaatra Shaanta Suvichari

ಮದನಾರಿಪರಿವಾರ ಗಣನಾಥಸಹಚಾರಿ | ಸಾಮಪಸ ರೀಮಪಸ ಸರಿಮಪಸ ರಿಮರೀ
MadanaariParivaara gananaatha shachaari | Sa,mapasa Ri,mapasa Sarimapasa rimari,
ಮಣಿಹಾರ ವ್ರತಧಾರಿ ಗೀತ-ನೃತ್ತೋದಾರಿ | ತಾನನಧೀ ದೀನನಾಂ ದೇವನೀಂ ಧವ ದಾನಿ
Manihaara Vratadhaari geeta-Nrittodaari | Ta,nanadhi, deenanaam devaneem dhava daani
ಘೃತ-ಪಾಯಸಸೇವ್ಯ ಸೋಪಾನಗತಿಸೂರಿ
Ghruta paayasasevya sopanagatisoori
ವೇದವೇದ್ಯ, ಮನೋsಹರ #ಬ್ರಹ್ಮಚಾರಿ
Vedavedya, Manohara, Brahmachari
#ಭೂತನಾಥಾಯ ನಮಃ ಕೌತಭೂಷಿತ ಸ್ವಾಮಿ
Bhootanaathaya Namah Kautabhooshita swamy
ಕಿತ ಕಿಂತ ಧಿತಧಿಂತ ತಧಣು ತಧನೋಂತಧಿಮಿ
Kitakimta dhitadhimta tadhaNu Tadhanomtadhimi
ಮ್ಲೇಚ್ಛಮರ್ದನನೆ ಅಯ್ಯಪ್ಪ, ಪಾವನನೆ
Mlecchamardanane Aiyyappa, Paavanane
ಧಿಮಿತ ಧಿಮಿತಾ ಧುರಂಧರನೆ ಪಂದಳಧರನೆ
Dhimita dhimitaa Dhurandharane Pandaladharane
ಧಿರುಗುಡುತ ತೋಂ ಧಿಕ್ಕಿತಾಂ | ತಕತಕತ ಧಿಗುಧಿಗುತ
DhiruguDuta tom dhikkitam | takatakata dhigudhiguta
ಧಿರುಗುಡುತ ತೋಂ ಧಿಕ್ಕಿತಾಂ | ಧಿಗುಧಿಗುತ ತೋಂಧೋಂಧ
Dhiruguduta tom Dhikkitam | dhigudhiguta tomdhomdha
ಧಿರ್ರತ್ತ ಧಿರುಗುಡುತ ತೋಂಧೋಂಧ ಧಿಗುಧಿಗುತ
Dhirratta dhiruguDuta tomdhomdha dhigudhiguta
ತೋಂಧಿಕ್ಕಿತಾಂಧಿಕ್ಕಿತಾಂ Tomdhikkitamdhikkitam

————

Leave a Reply

*

code