ಶಾರದಾಪೀಠ (ಸರ್ವಜ್ಞ ಪೀಠ)- ಶಾರದಾ ಯಾತ್ರೆ ಮತ್ತು ಪಾಕ್ ಪಾರುಪತ್ತೆ

Posted On: Saturday, October 1st, 2022
1 Star2 Stars3 Stars4 Stars5 Stars (No Ratings Yet)
Loading...

Author: Dr Manorama B N

ಕಸ್ತ್ರೂರಿ ಮಾಸಿಕ October 2018
ಶಾರದಾಪೀಠ- ಶಾರದಾ ಯಾತ್ರೆ ಮತ್ತು ಪಾಕ್ ಪಾರುಪತ್ತೆ

 

ಮುಖಪುಟ ಲೇಖನ
ಶಾರದಾಪೀಠ ದ ಕುರಿತ ಮೊದಲ ಕನ್ನಡ ಅಧ್ಯಯನ ಲೇಖನ

Kasturi Oct 2018 Sharadapeeta kashmira coverpage research article by Dr Manorama B N

 

ಸುಧಾರಿತ ಆವೃತ್ತಿ (2023 uploaded)

ಭಾರತವೇ ದೇವಾಲಯವೆಂದುಕೊಂಡರೆ, ಅದರ ಕಲಶವೇ ಕಶ್ಯಪಮೇರು ಅಂದರೆ ಕಶೀರ/ಕಾಶ್ಮೀರ. ಅದು ಕೇವಲ ಹೆಸರಿನಿಂದಷ್ಟೇ ಮೇರುವಲ್ಲ. ವಿದ್ಯೆಯ ನೆಲೆಯಲ್ಲೂ ಮೇರುಪರ್ವತವೇ. ಅನೇಕಾನೇಕ ಮಹಾಮುನಿಗಳ- ವಿದ್ವಾಂಸರ ತವರುಮನೆ. ಜ್ಞಾನದಾಹಿಗಳಿಗೆ, ಅಧ್ಯಯನಶೀಲರಿಗೆ ಶಿಖರಶೃಂಗ. ವಿದ್ಯೆಗೆಂದೇ ಮೀಸಲಾದ ಏಕಮಾತ್ರ ಸ್ಥಾನ ಎಂಬರ್ಥದಲ್ಲಿ ವಿದ್ಯಾಧಿದೇವತೆ ಶಾರದೆ ಆ ಪೀಠವಾಸಿನಿ, ಕಾಶ್ಮೀರಪುರವಾಸಿನಿ. ವಿದ್ವಾಂಸರು ಕಲೆತು-ಬೆರೆತು-ತಂಗಿ-ಮಲಗಿ-ನಡೆದು-ನುಡಿದ ಕಾಶ್ಮೀರದ ಪ್ರತಿ ಕಣಕಣವೂ ಶಾರದಾವಾಸವೇ. ಅದಕ್ಕಾಗಿ ಅವರು ಕೈಗೊಳ್ಳುತ್ತಿದ್ದ ಯಾತ್ರೆಯೆಲ್ಲವೂ ಶಾರದಾಯಾತ್ರೆಯೇ. ಅಖಂಡ ಭರತಖಂಡದಲ್ಲಿ ವಿದ್ಯಾವಂತರ ಪರಮೋಚ್ಚ ಪರೀಕ್ಷೆ ನಡೆಸುವ ಅಧ್ಯಯನಪೀಠ ಬೇರೊಂದಿರಲಿಲ್ಲ ಎಂಬಲ್ಲಿಗೆ ವಿದ್ಯೆಗೆ, ವಿದ್ವತ್ತಿಗೆ, ಆಚಾರ್ಯತ್ವಕ್ಕೆ ಇಲ್ಲಿ ದಕ್ಕುತ್ತಿದ್ದ ನೆಲೆ-ಬೆಲೆ ಯಾವ ಮಟ್ಟಿನದ್ದಿರಬಹುದು ಎಂಬ ಅಂದಾಜೇ ಸಾಕು, ಆ ಕ್ಷಣ ಶಾರದಾಯತನದಲ್ಲಿ ಸೇರಲು. ಈ ಜ್ಞಾನಸಾಮ್ರಾಜ್ಯದ ಆ ಮಹಾರಾಜಧಾನಿಯನ್ನು ಗೆದ್ದರೇನೇ ಪಂಡಿತನೆಂದು ಕರೆಸಿಕೊಳ್ಳುತ್ತಿದ್ದ! ಶಾರದೆಯ ಸನ್ನಿಧಿಯಲ್ಲೇ ಆದಿಶಂಕರರು ಸರ್ವಜ್ಞಪೀಠವನ್ನೇರಿ ಜಗದ್ಗುರುವೆನಿಸಿಕೊಂಡಿದ್ದು. ಹಾಗಾಗಿ ವಿದ್ಯೆಯ ಸಾಕಾರದಲ್ಲಿ ಸಂಭ್ರಮಿಸುತ್ತಿದ್ದ ಕ್ಷಣವೆಲ್ಲವೂ ಶಾರದೋತ್ಸವವೇ. ವಿದ್ಯೆಯ ಹಿರಿಮೆಯ ದಿನದಿನವೂ ಆಕೆಯ ಜನ್ಮದಿನದ ಆರಾಧನೆಯೇ. ಹೀಗೆ ಇಡಿಯ ಬ್ರಹ್ಮಾಂಡದ ವಿದ್ಯೆಯೇ ಶಾರದಾ ಎಂಬ ಮೂರಕ್ಷರದ ಹೆಸರಿನಲ್ಲಿ ಕಾಶ್ಮೀರಕ್ಕೆ ನತಮಸ್ತಕವಾಗಿದ್ದಾಗ, ಆಕೆ ನಿತ್ಯವೂ ನಲಿದಾಡುತ್ತಿದ್ದ ಆ ಸಾಮ್ರಾಜ್ಯವು ಶಾರದಾದೇಶ ಎಂಬ ಅನ್ವರ್ಥನಾಮದಿಂದ ಕರೆಸಿಕೊಳ್ಳುವುದರಲ್ಲಿ ಅತಿಶಯವೇನಿದೆ? ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಲಾವತೀ ರಾಗದ ಕೃತಿಯಾದ ಕಲಾವತೀ ಕಮಲಾಸನಯುವತೀ ಯಲ್ಲಿ ಕಾಶ್ಮೀರ ವಿಹಾರ ವರ ಶಾರದಾ ಎಂಬ ಸೊಲ್ಲಿನ ಸ್ತುತಿಯಲ್ಲಿ ಕಲಾಧಿದೇವತೆಯನ್ನು ಸ್ಮರಿಸಿಕೊಂಡದ್ದಷ್ತೇ ಅಲ್ಲ, ಕಲೆಗೂ ಕಾಶ್ಮೀರ ಕಲ್ಪವೃಕ್ಷವಾಗಿತ್ತು ಎಂಬುದನ್ನು ಸಾಕ್ಷೀಕರಿಸುತ್ತಾರೆ.

ಕಾಶ್ಮೀರವು ಒಂದಾನೊಂದು ಕಾಲಕ್ಕೆ ಯಾವ ಮಟ್ಟಿಗೆ ಶಾರದಾಮಯವೆಂದರೆ ಅಲ್ಲಿ ಶತಶತಮಾನಗಳ ಕಾಲ ಬಳಕೆಯಲ್ಲಿದ್ದ ಲಿಪಿಯ ಹೆಸರೂ ಶಾರದಾ ಎಂಬ ಹೆಸರಿನಲ್ಲಿಯೇ ಪ್ರಸಿದ್ಧವಾಗಿತ್ತು! ಈ ಲಿಪಿ ಸಂಸ್ಕೃತಭಾಷೆಗಿಂತ ವಿಭಿನ್ನವಾದರೂ ಸಂಸ್ಕೃತದೊಂದಿಗೂ ಬೆರೆತು, ವಿದ್ವದ್ ಲಿಪಿಯಷ್ಟೇ ಆಗಿ ಉಳಿಯದೆ, ಎಲ್ಲಾ ವರ್ಗದ ಜನರಿಂದಲೂ ಸ್ತುತಿಸಲ್ಪಟ್ಟು, ಬಳಸಲ್ಪಟ್ಟು ಪ್ರಾಂತ್ಯವಾರು ಭಾಷಾಸ್ವಾರಸ್ಯಗಳೊಂದಿಗೆ ಸುಲಭ ಸಾಂಗತ್ಯ ಹೊಂದಿ ಜ್ಞಾನದೊಂದಿಗೆ ಸಂಸ್ಕೃತಿ ಪ್ರಸಾರ, ಸಂವಹನದಲ್ಲಿಯೂ ಕೂಡಿ ಬೆಳೆದಿತ್ತು. ಭಾರತೀಯ ಜ್ಞಾನಪಂಥಕ್ಕೆ ತಮ್ಮ ಕೃತಿರತ್ನಗಳ ಮೂಲಕ ಸೋಪಾನಕ್ರಮವನ್ನು ಹಾಕಿಕೊಟ್ಟ ಭರತ, ಆನಂದವರ್ಧನ, ಅಭಿನವಗುಪ್ತಪಾದಾಚಾರ್ಯ, ಚರಕ, ಮಮ್ಮಟ, ಬಿಲ್ಹಣ, ಮಹಿಮಭಟ್ಟ, ಕ್ಷೇಮರಾಜ, ವಸುಗುಪ್ತ, ಕ್ಷೇಮೇಂದ್ರ ಮುಂತಾದ ಮಹಿಮಾನ್ವಿತ ಮಹಾಮುನಿ, ಪಂಡಿತೋತ್ತಮರೆಲ್ಲರೂ ಶಾರದಾನತರೇ. ಕಾಶ್ಮೀರದ ಮೂಲ ಸಂಜಾತರಾದ – ಕಾಶ್ಮೀರಿ ಪಂಡಿತರ ಜನಾಂಗವು ಪಂಡಿತರೆಂದು ಕರೆಸಿಕೊಳ್ಳುತ್ತಿದ್ದದ್ದೇ ಶಾರದಾನುಗ್ರಹವಾದ ವಿದ್ಯೆಯಿಂದ. ಒಂದು ಕಾಲದಲ್ಲಿ, ಆ ಇಡೀ ಜನಾಂಗದಲ್ಲಿ ಜ್ಞಾನಿಯಲ್ಲದ ಒಬ್ಬನೇ ಒಬ್ಬನೂ ಇರಲಿಲ್ಲ ! ಜ್ಞಾನಪರಿವ್ರಾಜನೆಯೇ ವೃತ್ತಿಯಾಗಿ, ಪ್ರವೃತ್ತಿಯಾಗಿ, ಶಕ್ತಿಯಾಗಿದ್ದ ಕಾಲವದು.

ಇಂಥ ಶಾರದಾಭೂಮಿಯಲ್ಲಿ ಸ್ವತಃ ಆಕೆಯೇ ಮೂರ್ತರೂಪದಲ್ಲಿ ನೆಲೆ ನಿಂತ ಒಂದು ಸಾಂಪ್ರದಾಯಿಕ ದೇಗುಲವಿತ್ತೆಂಬುದು ಐತಿಹ್ಯ. ವಿದ್ಯೆಯ ಉನ್ನತೋನ್ನತ ಶಿಖರದ ಸಂಕೇತಗುಣವಾಗಿ ಭರತಭೂಮಿಗೆ ಕಾಶ್ಮೀರವೇ ಶಾರದಾಪೀಠವಾದರೆ, ಕಾಶ್ಮೀರಕ್ಕೆ ಶಾರದಾಸಾನಿಧ್ಯದ ರೂಪವಿಶೇಷವನ್ನು ಕೊಟ್ಟದ್ದು ಈ ಮಂದಿರದಮೃತ್ತಿಕೆಯ ಗುಣ. ಈ ಪೀಠದಿಂದ ಕೇಸರ ಪರ್ವತದವರೆಗೂ ೫೦ ಯೋಜನ ವಿಸ್ತರಿಸಿತ್ತಂತೆ ಕಾಶ್ಮೀರಮಂಡಲದ ವಿದ್ಯಾವಾಹಿನಿ. ೧೮ ಮಹಾಶಕ್ತಿಪೀಠಗಳ ಪೈಕಿ ಒಂದಾಗಿ, ಕಾಶ್ಮೀರಿ ಪಂಡಿತರ ಇಷ್ಟದೈವವಾಗಿ, ಶಕ್ತಿರೂಪಿಣಿಯಾಗಿ ಶೈವಸಂಪ್ರದಾಯದ ಅನುಗುಣ ಪೂಜಿಸಲ್ಪಡುತ್ತಿದ್ದ ಸ್ಥಳವದು. ತಾಯಿ ದಾಕ್ಷಾಯಣಿಯ ದೇಹದ ಬಲತೋಳು ಬಿದ್ದ ಸ್ಥಳವೆಂಬುದು ಪುರಾಣಗ್ರಹೀತವಾದ ನಂಬಿಕೆ. ನಿತ್ಯ ಪೂಜೆ- ಪಾಠ- ಅಧ್ಯಯನಗಳು ನೆರವೇರುತ್ತಿದ್ದ, ಲಕ್ಷಾಂತರ ಯಾತ್ರಿಕರು ದೇಶ-ವಿದೇಶಗಳಿಂದ ಸಹಸ್ರಾರು ವರ್ಷಗಳ ಕಾಲ ಭೇಟಿಯಿತ್ತು ಕೃತಾರ್ಥರಾದ ಆಲಯವದು. ಪಂಡಿತರು ತಮ್ಮ ಕೃತಿಗಳನ್ನು ಭೂರ್ಜಪತ್ರದಲ್ಲಿ ಬರೆದು ಮಂದಿರದ ಶಾರದೆಯ ಮುಂದೆ ರಾತ್ರೆ ಇಟ್ಟರೆ ಬೆಳಗು ಮೂಡುವಷ್ಟರಲ್ಲಿ ಅವು ಕಿಂಚಿತ್ತೂ ಲೋಪಗೊಳ್ಳದೆ ಉಳಿದರೆ ಅದು ಸರ್ವಮಾನ್ಯವೆಂದು, ಸ್ಥಳಾಂತರವೋ ಪಲ್ಲಟವೋ ಆದರೆ ದೋಷವಿದೆಯೆಂದೂ ಬಗೆಯುತ್ತಿದ್ದರಂತೆ! ಅಂತಹ ಅನುಗ್ರಹಮೂರ್ತಿಯ ಮಹಿಮಾನ್ವಿತ ನೆಲೆಯೇ ಇಂದಿಗೆ ಪ್ರಾಚೀನ ಕಾಶ್ಮೀರದ ಏಕೈಕ ಶಾರದಾಪೀಠವೆಂಬ ಅಧಿಕೃತತೆಯನ್ನು ಸ್ಥಳಮಹಾತ್ಮ್ಯದ ಸಹಿತ ಸಾರಿ ನುಡಿಯುತ್ತಿರುವುದು.

 

ಶಾರದಾಮಂದಿರ ಎಲ್ಲಿದೆ?

ಶಾರದಾಪುರಿಯ ವರ್ಣನೆಗಳು ಕೇವಲ ಕವಿಕಲ್ಪನೆಯದ್ದೇನೋ ಎಂದು ಭಾಸವಾಗುವುದಾದರೆ ಅದಕ್ಕೆ ಕಾರಣ ಈ ಮಂದಿರ ವಾಸ್ತವದಲ್ಲಿ ಭಾರತದ ಗಡಿಯೊಳಗಿಲ್ಲ. ಮೇಲಾಗಿ ಹೊರಜಗತ್ತಿಗೆ ಮಬ್ಬುಮಬ್ಬಾಗಿಯೇ ತನ್ನಿರವನ್ನು ತೋರುತ್ತಾ ದಿನೇದಿನೇ ಪಥದಿಂದ ಸರಿದು ಪತನಗೊಳ್ಳುವುದಕ್ಕೆ ಕಾರಣ ಅದಿರುವುದು ವಿದ್ಯೆಯ ಊರ್ಧ್ವಗಮನಕ್ಕೆ ಅಪವಾದವೆನಿಸಿದ, ಪಾತಕಿಗಳ ಸ್ವರ್ಗವೆಂದೇ ಬಿರುದಾಂಕಿತವಾದ ಪಾಕಿಸ್ತಾನದ ಆವರಣದಲ್ಲಿ. ವಿಶೇಷವೆಂದರೆ ಪ್ರಾಚೀನದಲ್ಲೂ, ಪಾಕಿಸ್ತಾನದ ವಶವಾದ ಮೇಲೂ ಶಾರದಾಮಂದಿರವಿರುವ ಆ ಗ್ರಾಮಕ್ಕೆ ಶಾರದಾ ಎಂತಲೇ ಹೆಸರು ! ಮಂದಿರವನ್ನು ಸುತ್ತುವರೆದ ಕೆಳಗಿನ ಬೆಟ್ಟದ ತಪ್ಪಲಿನ ಹೆಸರು ಶಾರದೀ(೩೨೮೭ಮೀಟರ್). ಪೂರ್ವದ ಎತ್ತರದ ತಪ್ಪಲು ನಾರದೀ (೩೮೦೫ಮೀಟರ್). ಒಟ್ಟಿನಲ್ಲಿ ದೇವಿಯ ಎರಡೂ ರೂಪಗಳ ಹೆಸರಿನಿಂದಲೇ ಪ್ರಸಿದ್ಧವಾಗಿವೆ. ಅಲ್ಲಿದ್ದ ಕೆಲವು ಮನೆತನಗಳ ಹೆಸರೂ ಶಾರದಾ ! ಇದಲ್ಲವೇ ಅತಿಶಯ!

ಸರ್ಗನ್ ಪರ್ವತಶ್ರೇಣಿಗಳಿಂದಾವೃತವಾಗಿರುವ ಆ ಪ್ರದೇಶವು ಇರುವುದು ಶ್ರೀನಗರದಿಂದ ೧೫೦ ಕಿ.ಮೀ ದೂರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ನಲ್ಲಿ. ಐ‌ಔ‌ಅಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ಸಮೀಪದ ಕಿಷನ್‌ಗಂಗಾ/ನೀಲಂ ನದಿಯ ಬುಡಕ್ಕೆ ಇರುವ ನೀಲಂ ಜಿಲ್ಲೆಯಲ್ಲಿ ಸ್ಪರ್, ಪೈನ್‌ನ ಎತ್ತರದ ಮರಗಳಿಂದೊಡಗೂಡಿದ ಕಡಿದಾದ ಹಸಿರು ಕಣಿವೆಯ ಕಾಡು. ಮುಜಾಫರ್‌ನಿಂದ ತಿತ್ವಾಲ್ ಮಾರ್ಗವಾಗಿ ಬಂದರೆ ಕರ್ಣ, ಕರ್ಣದಿಂದ ಧುಧೆ ನಿಯಾಲ್- ೪ ಗಂಟೆಗಳ ಪ್ರಯಾಣ. ಮಾರ್ಗಮಧ್ಯೆ ನೀಲಂ ಕಣಿವೆ, ಜಾಗರಣ್ ಕಣಿವೆಯ ಬಣ್ಣ ಬಣ್ಣದ ಹೂವುಗಳ ಸುಗಂಧ ಬೀರುವ ಪ್ರಕೃತಿ. ಅದಾಗಿ ಧುಧೆನಿಯಾಲ್ ಮತ್ತು ಗುರೇಜ್ ಗ್ರಾಮಗಳ ಮಧ್ಯೆ ಮಧುಮತಿ ನದೀತಟದ ಬಲಬದಿಯಲ್ಲ್ಲಿರುವುದೇ ಶಾರದಾಗ್ರಾಮದ ಈ ಮಂದಿರ. ಜಮ್ಮುಕಾಶ್ಮೀರದ ಕುಪ್ವಾರ ಜಿಲ್ಲೆಗೂ ಇದು ೪೦ ಕಿ.ಮೀಗಳಷ್ಟು ಹತ್ತಿರದ ಪ್ರದೇಶ. ಶ್ರೀನಗರದಿಂದ ೭೦ ಮೈಲಿ, ಬಾರಾಮುಲ್ಲಾದಿಂದ ೪೨ ಕಿ.ಮೀ ದೂರದಲ್ಲಿದ್ದು ಅದುವೇ ಭಾರತೀಯರಿಗೆ ರೈಲು ಮತ್ತು ವಿಮಾನನಿಲ್ದಾಣಗಳ ಸಂಪರ್ಕಕ್ಕೆ ಸನಿಹದ ನಗರಗಳು.

ಕಿಶನ್ಗಂಗಾ ಹಾಗೂ ಮಧುಮತಿ ನದಿಗಳ ಭವ್ಯ ಶಾರದಾಸಂಗಮವೂ ಇದೇ ಮಂದಿರದ ವಾಯುವ್ಯ ದಿಕ್ಕಿಗಿದ್ದು ಈ ಹರಿವೇ ಮುಂದೆ ಝೀಲಂ ನದಿ (ವಿತಸ್ತಾ) ನದಿಯನ್ನು ಸಂಗಮಿಸುತ್ತದೆ. ನದೀಸ್ನಾನವೇ ಒಂದು ಪುಳಕ, ಇನ್ನು ಮೆಟ್ಟಿಲಿಗೆ ಹತ್ತುತ್ತಾ ಮಂದಿರದತ್ತ ಕಣ್ಣುಹಾಯಿಸಿದರೇನೇ ಆ ಪೀಠದ ಗಾಂಭೀರ್ಯಕ್ಕೆ ಕಣ್ಮನ ಸೋಲುತ್ತದೆ. ಸಮುದ್ರಮಟ್ಟದಿಂದ ಸುಮಾರು ೬,೫೦೦ ಅಡಿ ಎತ್ತರದಲ್ಲಿರುವ ಶಾರದಾಮಂದಿರ. ಅದರ ಘನತೆ ಸಮುದ್ರಕ್ಕಿಂತಲೂ ಆಳ ಮತ್ತು ವಿಸ್ತಾರ. ದೇಗುಲದ ಕೆಳಗಿನ ಮೆಟ್ಟಿಲಿನಿಂದ ಉತ್ತರಕ್ಕೆ ನಿಂತು ನೋಡುವಲ್ಲಿಯೇ ನಂಗಾ ಪರ್ವತರಾಶಿ ಮತ್ತು ಕೆ೨ ಶ್ರೇಣಿಗಳು ದೇವಿಯ ಪಾದಕ್ಕೆ ತಮ್ಮ ಔನ್ನತ್ಯದ ಗಟ್ಟಿತನದಲ್ಲೂ ನತಮಸ್ತಕವಾಗಿರುವಂತೆ ಕಾಣುತ್ತದೆ. ೩೪.೪೮ ಅಕ್ಷಾಂಶ ಮತ್ತು ೭೪.೧೪ ರೇಖಾಂಶದ ಮಧ್ಯ ಅಂತರದಲ್ಲಿದೆ ಈ ಮಂದಿರ.

 

ಪೌರಾಣಿಕ ಐತಿಹ್ಯ

ಕಶ್ಯಪಬ್ರಹ್ಮನ ಮೊಮ್ಮಗ, ತನ್ನದೇ ಹೆಸರಿನ ಉಪನಿಷತ್ತಿನ ರಚಯಿತ ಶಾಂಡಿಲ್ಯನೆಂಬ ಋಷಿ ಬಾಲ್ಯದಲ್ಲೇ ಉಪನಯನ ದೀಕೆಯಿಂದ ವಂಚಿತನಾದಾಗ ತಂದೆಯ ಆದೇಶದಂತೆ ತಪಸ್ಸನ್ನಾಚರಿಸಿ ಶಾರದೆಯ ಸಾಕ್ಷಾತ್ಕಾರಕ್ಕೆ ಪಣತೊಟ್ಟನಂತೆ. ಮೊದಲು ಆತ ಅಲ್ಲಿನ ಕೃಷ್ಣನಾಗವೆಂಬ ನದಿಯಲ್ಲಿ ಸ್ನಾನ ಮಾಡಲಾಗಿ ಆತನ ಅರ್ಧದೇಹವೇ ಬಂಗಾರಮಯವಾಗಿ ಜ್ಞಾನ-ಮೋಕ್ಷದ ಕವಾಟ ತೆರೆದ ಸಂಕೇತವನ್ನು ಸೂಚಿಸಿತು. ಮುಂದಿನ ಪರ್ವತಗಳ ಹಾದಿಯಲ್ಲಿ ಮುನ್ನಡೆದಾಗ ರಂಗವಾಟಿಕಾ ವನದ ಕಣಿವೆಯ ಬಳಿ ಸ್ವತಃ ದೇವಿಯೇ ಶಾರದೆಯಾಗಿ ನರ್ತನ ಮಾಡುತ್ತಿದ್ದುದ್ದನ್ನು ಕಂಡು ಶಾರದಾ ವರದಾ ದೇವಿ ಮೋಕ್ಷದಾತಾ ಸರಸ್ವತೀ ಎಂದು ಸ್ತುತಿಸಿದನಂತೆ. ಸ್ವತಃ ದೇವಿಯೇ ಸೂಚಿಸಲಾಗಿ ಊರ್ಧ್ವಮುಖವಾಗಿ ಸಂಕೇತರೂಪದಿಂದ ಉತ್ತರಾಭಿಮುಖವಾಗಿ ನದಿಯ ಮೇಲಿನ ಪ್ರದೇಶಕ್ಕೆ ಹತ್ತುತ್ತಾ ಮುನ್ನಡೆದು ಫಲ-ಪುಷ್ಪಸಮೃದ್ಧವಾದ ಶಾರದಾವನದಲ್ಲಿ ಆಕೆಯನ್ನು ಪೂರ್ಣರೂಪದಲ್ಲಿ ಸಾಕ್ಷಾತ್ಕರಿಸಿಕೊಂಡನು. ಹೀಗೆ ಸರಸ್ವತಿಯು ಭವ್ಯವಾಗಿ ಕುಂಡದಲ್ಲಿ ಪ್ರತ್ಯಕ್ಷವಾದ ಪೀಠವೇ ಶಾರದಾಪೀಠವೆಂಬುದು ಐತಿಹ್ಯ. ಏಳಡಿ ಎತ್ತರ, ಆರಡಿ ಅಗಲದ ದಿವ್ಯಾಕೃತಿಯಾಗಿ ಅರ್ಧ ಅಡಿ ಶಿಲಾಮಯ ಪೀಠದಲ್ಲಿ ನೆಲೆಯಾದ ವಿಗ್ರಹರೂಪವು ಹಿರಿದಾದ ಮಂದಿರಾವರಣವನ್ನು ಹೊಂದಿ ಸುಭೂಷಿತವಾಗಿತ್ತೆನ್ನುವುದು ನಂಬಿಕೆ. ಈ ಪುರಾಣಪ್ರತೀತಿಗಿಂತ ಮೊದಲು ಈ ಪ್ರದೇಶದಲ್ಲಿ ಶಾರದೆಯು ಪೀಠಸ್ಥಳಾಗಿ ನೆಲೆಯಾದ ಸುಳಿವು ತೋರಿಬಂದಿಲ್ಲ.

ಶಾಂಡಿಲ್ಯನ ಪಿತೃಗಳು ಶ್ರಾದ್ಧಕರ್ಮವನ್ನು ನೆರವೇರಿಸಿ ಮೋಕ್ಷ ದೊರಕಿಸಿಕೊಡಲು ಕೇಳಿಕೊಂಡರಂತೆ. ಆತನು ಮಧುಸಿಂಧು ನದಿ(ಇಂದಿನ ಕಿಶನ್ ಗಂಗಾ) ಯಲ್ಲಿ ತರ್ಪಣವನ್ನು ಬಿಟ್ಟಿದ್ದೇ ಅರ್ಧನದಿಯೇ ಜೇನಾಗಿ ಮಧುಮತಿ ಎಂಬ ನದಿಯ ರೂಪವನ್ನು ತಾಳಿ ಹರಿಯಲು ಪ್ರಾರಂಭಿಸಿತೆನ್ನುತ್ತದೆ ನೀಲಮತವೆಂಬ ಉಪಪುರಾಣ. ಅಂದಿನಿಂದ ಸರ್ವಪಾಪನಿವಾರಿಣಿಯೆಂದೂ, ಮೋಕ್ಷದಾತೆಯೆಂದೂ ಯಾತ್ರಿಗಳು ಮಧುಮತಿಯಲ್ಲಿ ಸ್ನಾನ ಮಾಡಿ ಪಿತೃಗಳಿಗೆ ತರ್ಪಣ ಬಿಡುವುದು ರೂಢಿ.

ಇವಿಷ್ಟೂ ಶಾಂಡಿಲ್ಯನೇ ರಚಿಸಿದನೆನ್ನಲಾದ ಶಾರದಾ ಮಹಾತ್ಮ್ಯಮ್ ಎಂಬ ಪುರಾಣಾಧಾರಿತ ಕೃತಿಯಲ್ಲಿದೆ ಎನ್ನುವುದು ತಜ್ಞರ ಅಧ್ಯಯನಫಲ. ಆದರೆ ಶಾರದಾ ಪೀಠದ ಅಸ್ತಿತ್ತ್ವದ ಕುರಿತು ಸ್ಥಳನಿರ್ದಿಷ್ಟತೆಯಿದ್ದಂತೆ ತೋರುವುದಿಲ್ಲ. ದೇವಿಪಾರ್ವತಿಯು ಶಾಂಡಿಲ್ಯನ ಕೋರಿಕೆಯ ಮೇರೆಗೆ ಶಾರದೆಯಾಗಿ ದರ್ಶನ ನೀಡುವ ಅಭಯ ಕೊಟ್ಟ ಬಳಿಕ ಹನುಮಂತನನ್ನು ಶಾರದಾವನಕ್ಕೆ ಕರೆದುಕೊಂಡು ಹೋಗಲು ತಿಳಿಸಿದಳಂತೆ. ಆರಂಭದಲ್ಲಿ ಆತ ಒಪ್ಪದಿದ್ದರೂ ನಂತರ ದೇವಿಯ ಒತ್ತಾಯದ ಬಳಿಕ ಕರೆದೊಯ್ದನೆಂಬುದು ಪ್ರತೀತಿ. ಹೀಗೆ ಆಕೆ ಶಾರದಾವನದವರೆಗೂ ಕ್ರಮಿಸಿದ ಸ್ಥಳಗಳಲ್ಲೆಲ್ಲಾ ಶಾರದಾಪೀಠವೆಂದು ಪೂಜಿಸುವ ಪದ್ಧತಿ ಬೆಳೆದುಬಂದಿರುವುದು ಈ ತರ್ಕದ ಹಿಂದಿನ ಕಾರಣ. ಹಾಗೆಂದೇ ಶಾರದಾಪೀಠದ ಉಲ್ಲೇಖ ಕಾಶ್ಮೀರದ ಬೇರೆ ಬೇರೆ ಭಾಗಗಳಲ್ಲಿಯೂ ಇದ್ದು ಎಲ್ಲೆಲ್ಲಾ ತೀರ್ಥಕ್ಷೇತ್ರಗಳಿವೆಯೋ ಅಲ್ಲೆಲ್ಲಾ ದೇವಿಯ ಆರಾಧನೆ-ಆಚರಣೆಗಳೂ ಜನಜೀವನದಲ್ಲಿ ಒಂದಾಗಿ ಹಬ್ಬಿವೆ. ಇಂದಿಗೂ ಕಾಶ್ಮೀರಿ ಹಾಗೂ ಪೂರ್ವಭಾರತದವರಲ್ಲಿ ಶಾಂಡಿಲ್ಯ ಗೋತ್ರದವರೇ ಅಧಿಕ (ಭಟ್ಟ, ಬಕ್ಷಿ, ನಾರಿ, ಬ್ಯಾನರ್ಜಿ, ಬಂದೋಪಾಧ್ಯಾಯ, ಟಾಗೋರ್ ಇತ್ಯಾದಿ) ಎನ್ನುವುದನ್ನು ಪರಾಂಬರಿಸಿದರೆ ಶಾಂಡಿಲ್ಯ‌ಋಷಿಯ ವಂಶವಾಹಿಯ ಕುರುಹುಗಳು ಬಿಚ್ಚಿಕೊಳ್ಳಬಹುದು.

ಶಾರದಾಪೀಠ – ಇತಿಹಾಸಕಾರರು ಕಂಡಂತೆ

ಶಾರದೆಯ ದೇಗುಲ ಯಾವಾಗ, ಯಾರಿಂದ ನಿರ್ಮಿಸಲ್ಪಟ್ಟಿತೆಂಬ ನಿಶ್ಚಿತ ಮಾಹಿತಿ ಈವರೆಗೆ ದೊರಕಿಲ್ಲ. ಆದರೆ ಇಂದಿಗೆ ಭಗ್ನಾವಶೇಷಗಳ ರೂಪದಲ್ಲಿ ಕಾಣುತ್ತಿರುವ ದೇವಾಲಯದ ವಿನ್ಯಾಸ ೮ನೇ ಶತಮಾನದ್ದೆಂಬುದು ನಿರ್ಣಯ. ೯ನೇ ಶತಮಾನದಲ್ಲಿ ರಾಜ್ಯಭಾರ ಮಾಡಿದ ಉತ್ಫಲ ಸಾಮ್ರಾಜ್ಯದ ನಾಣ್ಯಗಳಲ್ಲಿ ಶಾರದೆಯ ಚಿತ್ರವಿದೆ.

೧೧ನೇ ಶತಮಾನದಲ್ಲಿ ಗುಜರಾತಿನ ಜಯಸಿಂಗನ ಆಸ್ಥಾನದಲ್ಲಿದ್ದ ಹೆಸರಾಂತ ವಯ್ಯಾಕರಣಿ ಹೇಮಚಂದ್ರಸೂರಿಯು ಸಿದ್ಧಹೇಮಖಂಡವೆಂಬ ವ್ಯಾಕರಣ ಗ್ರಂಥದ ಕರ್ತೃ. ಈ ಗ್ರಂಥರಚನೆಗೆ ನೆರವಿಗೆಂದು ಜಯಸಿಂಗನು ಭಾರತದ ಎಂಟು ವ್ಯಾಕರಣಶಾಸ್ತ್ರದ ಉದ್ಗ್ರಂಥಗಳನ್ನು, ೭೦ಸಾವಿರ ತಾಳೆಗರಿ ಗ್ರಂಥಗಳನ್ನು ಶಾರದಾಮಂದಿರದ ಗ್ರಂಥಾಲಯದಿಂದ ತರಿಸಿಕೊಟ್ಟಿದ್ದನೆಂದು ಜೈನ ಗ್ರಂಥ ಪ್ರಭಾವಕಚರಿತ ಪ್ರಣೀತ. ಅಂತೂ ಈ ಭಾಗದಲ್ಲಿ ಬೃಹತ್ ವಿಶ್ವವಿದ್ಯಾನಿಲಯವೇ ಇದ್ದಿರಬೇಕು.

೧೨ನೇ ಶತಮಾನದಲ್ಲಿ ಕಲ್ಹಣ – ಸಿರ್ಹಸಿಲ ಕೋಟೆಯೊಂದರ ವಿವರಣೆಯಲ್ಲಿ ಅಲ್ಲಿಗೆ ಪೂರ್ವದಿಕ್ಕಿಗೆ ಸಮೀಪದ ಮಧುಮತಿ ತಟದ ಶಾರದಾಮಂದಿರವನ್ನು ಕವಿಗಳು ಹಾಡಿಹೊಗಳುವ ಪುಣ್ಯಸ್ಥಾನವೆಂದು ಭೌಗೋಳಿಕ ವಿವರವೊಂದನ್ನು ನೀಡಿದ್ದಾನೆ. ಇದನ್ನು ಬಿಟ್ಟರೆ ಮಂದಿರದ ಕುರಿತು ಇನ್ನಾವ ಸಂಗತಿಯನ್ನೂ ವಿಸ್ತರಿಸಿಲ್ಲವೆನ್ನುವುದು ಚಿಂತನಾರ್ಹ. ಆದರೆ ಕಲ್ಹಣನ ಕೃತಿಯನ್ನು ಇಂಗ್ಲೀಷ್‌ಗೆ ಅನುವಾದಿಸಿದ ಎ. ಸ್ಟೇಯಿನ್ ಹೇಳಿದಂತೆ ದೇವಿಯ ಮೂರು ರೂಪಗಳಾದ ಶಾರದೆ, ಸರಸ್ವತೀ(ನಾರದಾ) ಮತ್ತು ವಾಗ್ದೇವಿಯರೂಪಗಳನ್ನು ಕಣ್ತುಂಬಿಕೊಳ್ಳಲು ಭಾರತದ ಎಲ್ಲಾ ಪ್ರದೇಶಗಳಿಂದಲೂ ಯಾತ್ರಿಕರು ನೆರೆಯುತ್ತಿದ್ದರೆಂದು ಕಲ್ಹಣ ಬರೆದಿದ್ದಾನೆ !

ಬಿಲ್ಹಣನ ವಿಕ್ರಮಾಂಕದೇವಚರಿತದಲ್ಲಿ ಶಾರದಾಮಂದಿರ ಮತ್ತು ಶಾರದಾತೀರ್ಥಗಳ ಪ್ರಸ್ತಾಪವು ಪ್ರವರಪುರ (ಶ್ರೀನಗರ) ವರ್ಣನೆಯಲ್ಲಿದೆಯೆಂದು ಹೇಳಲಾಗಿದೆ. ಅದು ಇದೇ ಮಂದಿರದ ಕುರಿತಾದ್ದೇ ಅಲ್ಲವೇ ಎನ್ನುವುದು ವಿಚಾರಾರ್ಹ. ಬಿಲ್ಹಣನು ದಕ್ಷಿಣದೇಶಕ್ಕೆ ಹೋಗಿ ತಂಗಿದ್ದಾಗ ಶಾರದಾ ಅಧ್ಯಯನಪೀಠದ ಕಲಿಕೆಯ ವಿಧಾನಗಳ ಬಗೆಗೆ ನೆನಪು ಮಾಡಿಕೊಂಡು ತನ್ನೆಲ್ಲಾ ಕೃತಿಗಳೆಲ್ಲವೂ ಶಾರದೆಗೆ ಸಮರ್ಪಿತವೆಂದಿದ್ದಾನೆ ಎನ್ನುತ್ತವೆ ಕೆಲವು ಮೂಲಗಳು. ಈ ಕುರಿತಾಗಿ ಹೆಚ್ಚಿನ ಸ್ಪಷ್ಟತೆಯಿಲ್ಲದರೂ ಕಾಶ್ಮೀರವು ವಿದ್ಯಾನಗರಿಯಾಗಲು ಸರಸ್ವತಿಯೇ ಕಾರಣ, ಆಕೆ ಹಂಸವಾಹಿನಿ ಎಂಬ ಆತ ನೀಡುವ ವರ್ಣನೆಗಳು ಲೋಕಪ್ರಖ್ಯಾತವಾಗಿದೆ. ಜೊತೆಗೆ ಆಕೆಯ ಮಕುಟವು ನದಿಯ ಬಂಗಾರದ ಕಣಗಳಿಂದ ನಿರ್ಮಿತವಾಗಿದೆಯೆಂದಿರುವುದು ಕಾವ್ಯಸಾಕ್ಷ್ಯವನ್ನರಸುವವರಿಗೆ ಶೋಧನಾರ್ಹ.

ಅಶೋಕಸಾಮ್ರಟನ ಕಾಲದಲ್ಲಿಯೂ ಬೌದ್ಧ ವಿಶ್ವವಿದ್ಯಾನಿಲಯವು ಇಲ್ಲಿಗೆ ಸನಿಹದಲ್ಲಿತ್ತೆಂಬ ಮಾತಿದೆ. ಆದರೆ ಬೌದ್ಧಗ್ರಂಥಗಳಲ್ಲಿ ಶಾರದಾದೇಗುಲದ ವಿವರಗಳೂ ಸಿಗುವುದಿಲ್ಲ. ಅಂತೆಯೇ ಅದು ಶಾರದಾ ವಿಶ್ವವಿದ್ಯಾನಿಲಯವೇ ಆಗಿದ್ದಿರಬಹುದೇ ಎಂಬುದನ್ನೂ ನಿರೂಪಿಸಲು ತಕ್ಕಷ್ಟು ಆಧಾರಗಳಿಲ್ಲ.

ವಿನಾಯಕ ಭಟ್ಟನ ಸಾಂಖ್ಯಾಯಾನ ಭಾಷ್ಯದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆಂದು ಶಾರದಾ ವಿಶ್ವವಿದ್ಯಾನಿಲಯಕ್ಕೆ ಬರುತ್ತಿದ್ದರೆಂಬ ಉಲ್ಲೇಖವಿದೆಯೆಂದು ಇತಿಹಾಸಕಾರರು ತರ್ಕಿಸುತ್ತಾರಾದರೂ ಅಧ್ಯಯನಾರ್ಹ.

ಮಂದಿರದ ಸುತ್ತಮುತ್ತಲು ನಡೆದ ಪುರಾತತ್ತ್ವ ಕ್ಷೇತ್ರ ಕಾರ್ಯ ಮತ್ತು ಉತ್ಖನನದಿಂದ ದೊರಕಿರುವ ನಾಣ್ಯ, ಮಣ್ಣಿನ ಕೊಳವೆ, ಮಡಿಕೆ-ಕುಡಿಕೆ ಇತ್ಯಾದಿಗಳ ಪರಿವೀಕ್ಷಣೆಯಿಂದ ತಿಳಿದುಬಂದ ಸಂಗತಿಯೆಂದರೆ ಪ್ರಾಚೀನದಲ್ಲಿ ಅಧ್ಯಯನಪೀಠ, ನಾಲ್ಕು ದಿಕ್ಕಿನಿಂದ ದ್ವಾರಗಳಿರುವ ವಿಶಾಲ ಸಭಾಂಗಣ, ಪ್ರಾಂಗಣ, ವಸತಿಶಾಲೆ, ಗ್ರಂಥಾಲಯ, ಕ್ಷೀರಸಮೃದ್ಧಿಯಿದ್ದ ಗೋಶಾಲೆ, ಹೇರಳ ಜನವಾಸ್ತವ್ಯವಿದ್ದ ದೇವಾಲಯಗಳ ಸಂಕಿರಣದ ಭೂಮಿ ಶಾರದಾ. ಭಾಷೆ-ಸಾಹಿತ್ಯ-ಸಂಗೀತ-ವಿಜ್ಞಾನ-ಇತಿಹಾಸ-ಚಿತ್ರಕಲೆ-ಶಿಲ್ಪಕಲೆ-ವೈದ್ಯ-ಖಗೋಳ-ಜ್ಯೋತಿಷ-ತತ್ತ್ವ-ಕಾನೂನು-ಮಾನವಿಕ ಮುಂತಾದ ಎಲ್ಲಾ ವಿಭಾಗದ ಕಲಿಕೆಯ ಅನುಕೂಲಗಳೂ, ಪದವಿ ಪ್ರಮಾಣಪತ್ರಗಳನ್ನು ನೀಡುವ ಮಟ್ಟಿಗೆ ಕುಲಸಚಿವಾಲಯದ ವ್ಯವಸ್ಥೆಯೂ ಇಲ್ಲಿದ್ದವಂತೆ. ದೇಶ-ಪರದೇಶದ ಅನೇಕ ವಿದ್ವಾಂಸರು ಇಲ್ಲಿನ ಗ್ರಂಥಾಲಯವನ್ನು ಆಶ್ರಯಿಸಿದ್ದರಂತೆ.

 

ಶಂಕರಾಚಾರ್ಯರು ಮತ್ತು ಶಾರದಾಪೀಠ

ದಕ್ಷಿಣದೇಶದ ಯಾರೊಬ್ಬ ಪಂಡಿತನೂ ಆವರೆಗೆ ಅರಿವಿನ ಎತ್ತರವನ್ನು ಏರದ ಕಾರಣ ಶಾರದಾ ಪೀಠದ ದಕ್ಷಿಣದ್ವಾರವೇ ಅಂದಿನವರೆಗೆ ತೆರೆದಿರಲಿಲ್ಲ! ಬೇರೆಲ್ಲಾ ದಿಕ್ಕಿನಿಂದಲೂ ಬಂದ ವಿದ್ವಾಂಸರು ಕಾಶ್ಮೀರದಲ್ಲಿ ತಮ್ಮ ವಿದ್ಯಾಸಾಮರ್ಥ್ಯ ಪ್ರದರ್ಶಿಸಿದರೂ ದಕ್ಷಿಣದೇಶದಿಂದ ಯಾರೊಬ್ಬರೂ ಕಾಶ್ಮೀರವನ್ನು ಪ್ರವೇಶಿಸಿ ಸೈ ಎನಿಸಿಕೊಂಡಿರಲಿಲ್ಲ ಎಂಬುದು ಇದರೊಳಗಿನ ಗುಟ್ಟು. ಆಗ ಬಂದವರೇ ಆದಿಶಂಕರರು. ದೇಶಾದ್ಯಂತ ವಿವಿಧ ಪಂಥಗಳ ವಿದ್ವಾಂಸರನ್ನು ವಾದದಲ್ಲಿ ಗೆದ್ದು, ಭಾರತಪರ್ಯಟನೆ ನಡೆಸುತ್ತಾ ಬಂದವರೇ, ಪರಮಪರೀಕ್ಷೆಯಾಗಿ ಕಾಶ್ಮೀರದ ಪಂಡಿತಮಂಡಲವನ್ನೂ ಮಣಿಸಿ ಶಾರದಾಪೀಠದ ದಕ್ಷಿಣದ್ವಾರವನ್ನು ತೆರೆಯಿಸಿ, ಆಚಾರ್ಯಶ್ರೇಷ್ಠರಾಗಿ ಒಳಪ್ರವೇಶಿಸಿದರು! ಯಾರೂ ಏರಲು ಅಸಾಧ್ಯವಾಗಿದ್ದ ಎಲ್ಲವನ್ನೂ ತಿಳಿದ ಜ್ಞಾನಿಯೆಂಬ ಅಬಿಧಾನಕ್ಕೆ ಪಾತ್ರವಾದ ಸರ್ವಜ್ಞಪೀಠವನ್ನೇರಿ ಜಗತ್ತಿಗೇ ಗುರುವಾದರು.

ಶಂಕರರು ಸರ್ವಜ್ಞ ಪೀಠ ಆರೋಹಣ ಮಾಡುವುದಕ್ಕೆ ಅಣಿಯಾಗುತ್ತಿದ್ದಂತೆಯೇ ಪ್ರತ್ಯಕ್ಷವಾಗಿ ಪರೀಕ್ಷೆಯನ್ನೊಡ್ಡಿದ್ದಳಂತೆ ಶಾರದೆ ! ಆಕೆಯ ಪ್ರಶ್ನೆಗಳಿಗೆ ಸಮಾಧಾನವನ್ನು ನೀಡಿದ ಈ ಶಾರದಾಸೂನು ಸ್ತುತಿಯನ್ನು ರಚಿಸಿ ವೇದಾಂತ, ಅದ್ವೈತದ ಮೌಲ್ಯಗಳನ್ನು, ಸನಾತನ ಧರ್ಮವನ್ನು ದಶದಿಕ್ಕುಗಳೂ ಮೊಳಗುವಂತೆ ಅಖಂಡವಾಗಿ ಪಸರಿಸಿದ್ದರು. ಸೌಂದರ್ಯಲಹರಿ ಮುಂತಾದ ಅನೇಕ ದೇವೀಕೃತಿಗಳನ್ನು ರಚಿಸಿ, ಶ್ರೀಚಕ್ರಾಂಕಿತವಾಗಿ ಪೂಜೆ ಸಲ್ಲಿಸಿ ಶೃಂಗೇರಿ, ದ್ವಾರಕ, ಜಗನ್ನಾಥಪುರಿ ಮತ್ತು ಬದರಿಕಾಶ್ರಮದಲ್ಲಿಯೂ ಶಾರದಾಪೀಠಗಳನ್ನು ನೆಲೆಗೊಳಿಸಿದರು ಎಂಬಲ್ಲಿಗೆ ಶಾರದಾರಾಧನೆ ಯತಾರ್ಥದಲ್ಲಿಯೂ ಸಂಪನ್ನವಾಗಿತ್ತು. ಅಲ್ಲಿಯೇ ಶಂಕರರು ವಿಶ್ವವಿದ್ಯಾನಿಲಯ ಸ್ಥಾಪಿಸಿದ್ದರೆಂದೂ, ಶ್ರೀಗಂಧದ ಶಾರದಾಂಬೆಯ ವಿಗ್ರಹವನ್ನೂ ದಕ್ಷಿಣದ ಶೃಂಗೇರಿಗೆ ತಂದರೆಂಬ ಪ್ರತೀತಿಗಳಿವೆ.

ಶ್ರೀಚಕ್ರಾಂಕಿತವಾದ ಆರಾಧನೆಯ ಕುರುಹು ಪ್ರಕೃತ ಲೇಖನದ ಮುಖ್ಯವಸ್ತುವಾದ ಶಾರದಾಮಂದಿರದಲ್ಲಿ ಅವಶೇಷಗಳ ರೂಪದಲ್ಲಿಯೂ ದೊರಕುವುದಿಲ್ಲ. ಅಂತೆಯೇ ಸರ್ವಜ್ಞಪೀಠವೆಂಬುದು ಇದೇ ಶಾರದಾಮಂದಿರದಲ್ಲಿತ್ತೇ? ಅಥವಾ ಸಮಗ್ರ ಶಾರದಾದೇಶವನ್ನು ಲಕ್ಷಿಸಿ ಮಾಡಿದ ಸ್ಥೂಲ ನಾಮಕರಣವೇ ಎಂಬುದೂ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ಆದರೆ ಶಂಕರರ ಆನಂತರದಲ್ಲೂ ಕಾಶ್ಮೀರಭೇಟಿಯ ಪರಂಪರೆಯು ಬಹಳ ಶತಮಾನಗಳ ಕಾಲ ದಕ್ಷಿಣದೇಶೀಯ ವಿದ್ವಾಂಸರಲ್ಲಿ ಮುಂದುವರಿದುಕೊಂಡು ಬಂದಿದ್ದರ ಬಗ್ಗೆ ಸಾಕ್ಷ್ಯಗಳಿವೆ.

 

ಅನ್ಯಮತೀಯರು ಮತ್ತು ಶಾರದಾಪೀಠ

ಶಾರದಾ-ನೀಲಂ ಕಣಿವೆಯಲ್ಲಿ ಕಂಡುಬಂದ ಕೆಲವು ಪುರಾತನ ಶಾಸನಗಳ ಮಾದರಿ ಗಾಂಧಾರ, ಗಿಲ್ಗಿಟ್-ಬಾಲಿಸ್ತಾನದ ಶಾಸನ ಮಾದರಿಗಳನ್ನು ನೆನಪಿಸುತ್ತವೆ. ಕುಶಾನರ ದೊರೆ ಕಾನಿಷ್ಕನು ಶಾರದಾಪೀಠವನ್ನು ಬೌದ್ಧಧರ್ಮ, ಭಾಷೆ ಮತ್ತು ರಾಜಕೀಯಗಳ ಉನ್ನತ ಅಧ್ಯಯನಕ್ಕೆಂದು ಶಿಕ್ಷಣಕೇಂದ್ರವನ್ನಾಗಿ ಮಾಡಿದ್ದನು. ಬೌದ್ಧಧರ್ಮದ ಕುರಿತ ಸಮ್ಮೇಳನವೊಂದು ಶಾರದಾಪೀಠದ ಸನಿಹದಲ್ಲಿ ನಡೆದಿತ್ತು. ಕುಶಾನರ ನೆನಪಿಗೆಂದು ಹೆಸರಾದ ಕಶಾನ್ ಕಂಗಾವೇ ಇದು ಕಿಶನ್ ಗಂಗಾ ಎಂಬ ಹೆಸರಾಗಿ ಬದಲಾಗಿದೆ ಎನ್ನುತ್ತದೆ ಇತಿಹಾಸ. ಆದರೆ ಕೆಲವು ಮೂಲಗಳು ಪಾಂಡವರ ಕಾಲದ ವರೆಗೂ ನದಿಯ ಇತಿಹಾಸವನ್ನು ಸೆಳೆಯುತ್ತವೆ. ಆ ಹೊತ್ತಿಗೆ ಶಾರದಾದೇಗುಲ, ಮೂರ್ತಿಯು ಇದ್ದಿರಬಹುದಾದ ವಿವರಗಳು ಯಾವುದೂ ದೊರಕಿರುವುದಿಲ್ಲ.

ಚೀನಾದ ಬೌದ್ಧಯಾತ್ರಿಕ (ಯು)ಕ್ಸುವಾನ್ಜಾಂಗ್ ೬೩೨ನೇ ಇಸವಿಯಲ್ಲಿ ಭೇಟಿಯಿತ್ತು ಎರಡು ವರ್ಷಗಳ ಕಾಲ ಅಧ್ಯಯನಪೀಠದಲ್ಲಿ ತಂಗಿ ಇಲ್ಲಿನ ಶಿಕ್ಷಕರು, ಸಂತರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ಕ್ಷಮತೆ, ಅಸಾಧಾರಣ ಪಾಂಡಿತ್ಯಕ್ಕೆ ತಲೆದೂಗಿದ್ದನೆಂದು ಹೇಳಲಾಗುತ್ತದೆ. ಇನ್ನೊಂದಷ್ಟು ಮೂಲಗಳು ಶಾರದಾಪೀಠಕ್ಕೆ ಬರುವಲ್ಲಿ ದಾರಿ ತಪ್ಪಿಸಿಕೊಂಡು ಆತ ಕಾಶ್ಮೀರವನ್ನೇ ಹೊಗಳಿದನೆಂದೂ ಹೇಳುತ್ತವೆ.

ಪರ್ಶಿಯನ್ ಪ್ರವಾಸಿಗ ಅಲ್ಬೆರುನಿ (೧೦ನೇ ಶತಮಾನ)- ಬೊಲೋರ್ (ವುಲೂರ್ ಕಣಿವೆ)ಪರ್ವತಶ್ರೇಣೀಯಲ್ಲಿ ಮೂರ್ನಾಲ್ಕು ದಿನ ಮುಂದುವರಿದರೆ ಲಢಾಕ್ ಮತ್ತು ಗಿಲ್ಗಿಟ್‌ನ ನಡುಮಧ್ಯದಲ್ಲಿರುವ ಶಾರದಾಸ್ಥಾನವು ಹಿಂದೂಗಳಿಗೆ ಸೋಮನಾಥ, ಕುರುಕ್ಷೇತ್ರದ ಥಾಣೇಶ್ವರದ ವಿಷ್ಣು ಚಕ್ರಸ್ವಾಮಿ, ಮುಲ್ತಾನದ ಪ್ರಾಚೀನ ಸೂರ್ಯ ದೇವಾಲಯದಷ್ಟೇ ಪವಿತ್ರಸ್ಥಳ. ಇಲ್ಲಿ ವಿಸ್ಮಯಗಳು ಘಟಿಸುತ್ತವೆ. (ತಹ್ಖೀಕ್ ಮ ಲಿ-ಲ್-ಹಿಂದ್ ಕೃತಿಯಲ್ಲಿ) ಆ ಕಾಲದಲ್ಲಿ ಶಾರದೆಯ ಕಾಷ್ಠವಿಗ್ರಹ ಪೂಜಿಸಲ್ಪಡುತ್ತಿತ್ತೆಂದೂ, ಆ ವಿಗ್ರಹದಲ್ಲಿ ಬೆವರು, ಅಂಗಕಂಪನ ಕಂಡುಬರುತ್ತಿತ್ತು ಎಂದೂ ಹೇಳಿಕೊಂಡಿದ್ದಾನೆ ಎನ್ನುವುದು ಅಲ್ಬೆರುನಿಯ ಕೃತಿಯನ್ನು ಗಮನಿಸಿದ ಕೆಲವು ಇತಿಹಾಸಕಾರರ ಅಭಿಮತ. ಇನ್ನೊಂದಷ್ಟು ಲೇಖಕರು ಆತ ಶಾರದಾದೇಗುಲವನ್ನು ಸಂದರ್ಶಿಸಿಯೇ ಈ ಮಾತುಗಳನ್ನು ಹೇಳಿರಲಿಕ್ಕಿಲ್ಲ ಎಂಬ ಸಂದೇಹವನ್ನೂ ಇಣುಕಿಸಿದ್ದಾರೆ. ಆದಾಗ್ಯೂ ಇಲ್ಲಿನ ವಿವರಣೆಗಳಿಂದ ಶಾರದಾದೇಗುಲವು ಭವ್ಯವಾಗಿ ಅದಾಗಲೇ ನಿರ್ಮಾಣಗೊಂಡಿರಬಹುದಾದ ಸಾಧ್ಯತೆಗಳು ತೋರುತ್ತವೆ. ವಿಪರ್ಯಾಸವೆಂದರೆ ಮುಲ್ತಾನದ ಪ್ರಾಚೀನ ದೇವಾಲಯ ಸಂಪೂರ್ಣ ನಿರ್ನಾಮವಾದರೆ ಅದಕ್ಕೆ ಸಮದಂಡಿಯಾಗಿ ಹೊಗಳಿಸಿಕೊಂಡ ಶಾರದಾಪೀಠ ತನ್ನ ಅವಶೇಷಗಳಡಿಯಲ್ಲಿ ಉಸಿರು ಬಿಗಿ ಹಿಡಿದಿದೆ.

ಅಕ್ಬರನ ಆಸ್ಥಾನ ಕವಿದಿಗ್ಗಜ ಅಬುಲ್ ಫಜಲ್ ಫಾಜಿ – ಮಧುಮತಿ ಎಂಬ ಬಂಗಾರದ ಕಣಗಳನ್ನುಳ್ಳ ನದಿಯ ದಡದ ಮೇಲೆ ಶಾರದೆಯ ಒಂದು ವಿಶ್ವವಿಖ್ಯಾತ ಶಿಲಾಮಂದಿರವಿದೆ. ಪ್ರತೀ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಮೊದಲಿನ ಅಷ್ಟಮಿಯಂದು ಇಲ್ಲಿ ಅದ್ಭುತ ಪವಾಡಗಳು ಜರುಗುತ್ತವೆ. ಕಂಪನ ಮತ್ತು ವಿಶೇಷವಾದ ಪರಿಣಾಮಗಳು ಇಲ್ಲಿ ಕಂಡುಬರುತ್ತವೆ. ಇದನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಇಲ್ಲಿ ಬಂದು ಸೇರುತ್ತಾರೆ. (ಐನೆ-ಇ-ಅಕ್ಬರಿ ಕೃತಿಯಲ್ಲಿ) ಅಂದರೆ ಶಾರದಾಮಂದಿರವು ಪ್ರಸಿದ್ಧಿಯಾಗಿ ಯಾತ್ರಿಕರನ್ನು ಬರಮಾಡಿಕೊಂಡು ಪವಾಡಗಳನ್ನು ದರ್ಶಿಸುತ್ತಿರುವ ಸುದ್ದಿ ಜನಜಿತವಾಗಿರುವುದರ ಸ್ಪಷ್ಟತೆ ಇಲ್ಲಿದೆ. ಬಂಗಾರದ ಕಣಗಳನ್ನುಳ್ಳ ನದಿ ಎಂಬಲ್ಲಿ ಸ್ವರ್ಣಾಂಶ ಹೆಚ್ಚಿರುವ ಸೂಕ್ಷ್ಮ ಇಲ್ಲವೇ ಶಾಂಡಿಲ್ಯನ ಕೃತಿಯನ್ನು ಈತನು ಓದಿರಬಹುದಾದ ಸುಳಿವು ದೊರಕುತ್ತದೆ.

ಕಾಶ್ಮೀರದ ಸುಲ್ತಾನ ಜೈನ್-ಉಲ್-ಅಬಿದ್ದೀನ್ (೧೫ನೇ ಶತಮಾನ) – ಈತ ಶಾರದೆಯ ಭಕ್ತನಾಗಿದ್ದನೆಂದೂ ಪ್ರತಿವರ್ಷ ಶಾರದಾ ಮಂದಿರಕ್ಕೆ ಕಾಲ್ನಡಿಗೆಯಲ್ಲಿ ತಪ್ಪದೇ ಭೇಟಿಕೊಡುತ್ತಿದ್ದನೆಂದು ಕಲ್ಹಣನ ರಾಜತರಂಗಿಣಿಯನ್ನು ಪರಿಷ್ಕರಿಸಿದ ಜುನರಾಜನೆಂಬ ಇತಿಹಾಸಕಾರ (೧೪೨೦-೧೪೭೨) ಬರೆದುಕೊಂಡಿದ್ದಾನೆ. ಆ ಮಟ್ಟಿಗೆ ಕಾಶ್ಮೀರದ ನಗರದಿಂದ ನೇರವಾಗಿ ನೀಲಂ ಕಣಿವೆಯ ಮುಖಾಂತರ ಬರಲು ರಸ್ತೆ ಸೌಕರ್ಯ ಇತ್ತೆಂಬುದು ಇತ್ತೀಚೆಗಿನ ದಶಕಗಳ ಪುರಾತತ್ತ್ವ ಪರಿವೀಕ್ಷಣೆಯಿಂದಲೂ ತಿಳಿದುಬರುತ್ತದೆ. ಈ ಸುಲ್ತಾನನು ಗ್ರಂಥಾಲಯವೊಂದನ್ನೂ ನಿರ್ಮಾಣ ಮಾಡಿದ್ದನೆನ್ನುತ್ತವೆ ಕೆಲವು ಮೂಲಗಳು. ಇದಷ್ಟೇ ಅಲ್ಲದೆ ಜುನರಾಜನು ಸುಲ್ತಾನನು ೧೪೨೨ರಲ್ಲಿ ಭೇಟಿ ಕೊಟ್ಟ ಸಂದರ್ಭವನ್ನು ಬರೆದಿದ್ದಾನೆ. ವರ್ಷದ ಒಂದು ವಿಶೇಷ ಸಂದರ್ಭದಲ್ಲಿ ಶಾರದೆಯ ಮುಖದಲ್ಲಿ ಬೆವರು ಹನಿಗಳನ್ನೂ, ತೋಳುಗಳು ನಡುಗುವಂತೆಯೂ, ಪಾದಗಳಲ್ಲಿ ಬಿಸಿಯನ್ನೂ ಈತ ಅನುಭವಿಸಿದ್ದನಂತೆ. ಬಹುಶಃ ಶಾರದಾಮಂದಿರದಲ್ಲಿ ಈ ಮೊದಲೇ ಸೂಚಿಸಿದ ವಿಸ್ಮಯ ಇದೇ ಇದ್ದಿರಬೇಕು. ಆದರೆ ಈ ವಿಶೇಷ ಅನುಭವದ ನಿರೀಕ್ಷೆಯಿಂದ ಬಂದ ರಾಜನಿಗೆ ಅದು ದೊರಕದೆ, ರಾತ್ರೆಯಿಡೀ ಅಲ್ಲಿಯೇ ಮಲಗಿ ಪರೀಕ್ಷಿಸಹೊರಟು ಕೊನೆಗೆ ವಿಫಲನಾಗಿ, ಅಲ್ಲಿನ ಅರ್ಚಕರು ಮತ್ತು ಭಕ್ತಾದಿಗಳನ್ನು ಬೈಯ್ದು ಶಾರದೆಯ ಮೇಲೆ ನಂಬಿಕೆ ಕಳೆದುಕೊಂಡನೆಂದೂ ಬರೆದಿದ್ದಾನೆನ್ನಲಾಗಿದೆ. ಈ ಹೊತ್ತಿಗಾಗಲೇ ಶಾರದೆಯ ವಿಗ್ರಹವೊಂದು ಮಂದಿರದಲ್ಲಿ ಪ್ರತಿಷ್ಠಾಪನೆಯಾದ ಸಾಕ್ಷ್ಯ ಲಭಿಸುತ್ತದೆ.

ಕಲ್ಹಣನ ರಾಜತರಂಗಿಣಿಯನ್ನು ಭಾಷಾಂತರಿಸಿದನೆನ್ನಲಾದ ಆರಲ್ ಡಾ.ಸ್ಟೇಯಿನ್ (೧೮೮೮-೧೮೯೨) ಅವರ ಬರೆವಣಿಗೆಗಳಲ್ಲೂ ಮಧುಮತಿ ನದಿ, ಶಾರದಾಪೀಠದ ಪೂಜ್ಯತೆ ಮತ್ತು ಮಹತ್ತ್ವದ ಕುರಿತು ಉಲ್ಲೇಖವಿದೆ. ಸ್ಟೇಯಿನ್ ೧೮೯೨ರಲ್ಲಿ ಶಾರದಾಮಂದಿರಕ್ಕೆ ಭೇಟಿಯಿತ್ತು ವಿವರವಾಗಿ ನೋಟಗಳನ್ನಿತ್ತಿದ್ದಾನೆ. ೮ನೇ ಶತಮಾನದಲ್ಲಿ ಬಂಗಾಳದ ಗೌಡ ದೇಶದ ರಾಜನ ಬಳಗವು ಕಾಶ್ಮೀರದ ದೊರೆ ಲಲಿತಾದಿತ್ಯ ಮುಕ್ತಾಪೀಡನ ವಿರುದ್ಧ ಸಂಚು ರೂಪಿಸಲೆಂದು ಈ ಮಂದಿರವನ್ನು ಸಂದರ್ಶಿಸುವ ನೆಪದಲ್ಲಿ ಭೇಟಿ ಕೊಟ್ಟಿದ್ದರೆಂದು ಹೇಳುತ್ತದೆ ಕಲ್ಹಣನ ರಾಜತರಂಗಿಣಿಯ ಇಂಗ್ಲೀಷ್ ಅವತರಣಿಕೆ. ಆ ಮಟ್ಟಿಗೆ ಶಾರದಾಪೀಠದ ಖ್ಯಾತಿ ಭಾರತದ ಹಲವು ಪ್ರಾಂತ್ಯಗಳಿಗೆ ಹಬ್ಬಿತ್ತು ಎಂದಿದ್ದಾನೆ ಇತಿಹಾಸಕಾರ ಸ್ಟೆಯಿನ್.

ಸಿ.ಇ. ಬೇಟ್ಸ್ ೧೯೭೨ರಲ್ಲಿ ಬರೆದ ಕಾಶ್ಮೀರದ ಗೆಜೆಟಿಯರ್‌ನಲ್ಲಿಯೂ ಶಾರದಾಮಂದಿರದ ಅನೇಕ ವಿವರಗಳನ್ನಿತ್ತಿದ್ದು ಅದು ಸ್ಟೆಯಿನ್‌ನ ವಿವರಗಳಿಗೆ ತಾಳೆಯಾಗಿವೆ. ದೇವಾಲಯದ ಸುತ್ತಲಿನ ನೆಲಹಾಸಿಗೆ ಹಾಕಲಾದ ಕಲ್ಲುಗಳು ಒರಟಾಗಿದ್ದು; ನಿಧಿಯ ಶೋಧನೆಯಲ್ಲಿ ಕರ್ಣಾಹದ ಮಂಝೂರ್ ಖಾನ್ ಸಾಕಷ್ಟು ಭಗ್ನಗೊಳಿಸಿದ್ದಾನೆ ಎಂದಿದ್ದಾನೆ ಬೇಟ್ಸ್. ಹಿಂದೂ ಮತ್ತು ಮುಸ್ಲೀಂ ಜನಾಂಗಗಳೆರಡರಿಂದಲೂ ಈ ಮಂದಿರ ಆರಾಧಿಸಲ್ಪಡುತ್ತಿತ್ತಂತೆ. ಡೋಗ್ರಾ ದೊರೆಗಳ ಆಣತಿಯಂತೆ ಒಂದು ಕೋಟೆಯನ್ನು ಪಕ್ಕಕ್ಕೆ ಕಟ್ಟಿ ೬೦ ಮಂದಿ ಸೇನಾಳುಗಳನ್ನು ಮಂದಿರದ ರಕ್ಷಣೆಗೆಂದು ವ್ಯವಸ್ಥೆ ಮಾಡಲಾಗಿತ್ತಂತೆ.

ಶಾರದಾ ಪೀಠಕ್ಕೆ ಮೊದಲ ಹೊಡೆತ ಬಿದ್ದಿದ್ದು ೧೩-೧೪ನೇ ಶತಮಾನದಲ್ಲಿ. ಅದಾಗಿ ಸತತ ಮೂರು ಶತಮಾನ ಮುಘಲ್, ಪಠಾಣ್ ಮುಂತಾದ ಇಸ್ಲಾಮ್ ರಾಜರ ದಾಳಿಗೆ ತತ್ತರಿಸಿತ್ತು. ಅಪ್ಘನ್ನರ ದಾಳಿಯಿಂದಲೂ ಬಹುವಾಗಿ ಸೊರಗಿತ್ತು.

 

ಈಗಿನ ಸ್ಥಿತಿ

ಕಾಶ್ಮೀರದ ಕಲಶವೇ ಶಾರದಾಪೀಠ. ಅದು ದೇವಿಯ ಆಸನಸೂಚಕವಷ್ಟೇ ಅಲ್ಲ, ಶಾರದೆಯ ಹೆಸರಿನ ವಿಶ್ವವಿದ್ಯಾನಿಲಯವೊಂದರ ಅಸ್ತಿತ್ವವನ್ನೇ ಪಡಿನುಡಿಯುತ್ತದೆ. ಅಂತೆಯೇ ಜ್ಞಾನಾರ್ಜನೆಗೆಂದೇ ಬರುವ ಪರಿವ್ರಾಜಕರ ಕ್ಷೇತ್ರವಾಗಿದ್ದ ಸುಳಿವನ್ನೂ ಬಿಚ್ಚಿಡುತ್ತದೆ. ದೌರ್ಭಾಗ್ಯವೆಂದರೆ ಇಂದು ಆ ಶಾರದಾಮಂದಿರಕ್ಕೆ ಕಲಶವಿರಲಿ, ಸರಿಯಾದ ಛಾವಣಿಯೂ ಇಲ್ಲ! ೧೮೬೭ರಲ್ಲಿ ಡೋಗ್ರಾ ದೊರೆ ಮಹಾರಾಜ ಗುಲಾಬ್ ಸಿಂಗ್‌ನ ಆದೇಶದನ್ವಯ ಜಿಲ್ಲಾಧಿಕಾರಿ ಕೊಲೋನಲ್ ಗುಂಡು ಎನ್ನುವಾತ ಮರದ ಛಾವಣಿಯನ್ನು ಹಾಕಿಸಿ ನವೀಕರಣ ನಡೆಸಿದ್ದದ್ದೇ ಕೊನೆ. ಆಮೇಲೆ ಕಾಶ್ಮೀರದಲ್ಲಿ ರಾಜರ ಆಳ್ವಿಕೆ ಅಂತ್ಯವಾಗಿ ಇಡಿಯ ಪ್ರದೇಶವೇ ಪಾಕಿಸ್ತಾನದ ವಶವಾದಂದಿನಿಂದ ನಿರ್ವಹಣೆಯೇ ಇಲ್ಲದೆ ಕುಸಿಯುವ ಭೀತಿಗೆ ತಲುಪುತ್ತಿದೆ. ಗಾಳಿ, ಮಳೆ, ಹಿಮಕ್ಕೆ ಸಿಲುಕಿ ಒಡೆದುಬಿದ್ದ ಗೋಡೆ, ಮೋಟು ಪೀಠದ ಭಗ್ನಾವಶೇಷಗಳೇ ಇಂದಿಗೆ ವೀಕ್ಷಕರನ್ನು ಸ್ವಾಗತಿಸುತ್ತಿವೆ. ಅಕ್ಟೋಬರ್ ೨೦೦೫ರಲ್ಲಿ ನಡೆದ ಭೂಕಂಪನದಲ್ಲಿಯೂ ಮಂದಿರವು ಸಾಕಷ್ಟು ಭಗ್ನಗೊಂಡಿದೆ. ಮಾತ್ರವಲ್ಲದೆ ಮಂದಿರದ ಸುತ್ತಲಿನ ಭೂಭಾಗದ ಆಕ್ರಮಣವೂ ಮುಂದುವರಿಯುತ್ತಲೇ ಬಂದಿದೆ.

ಇತಿಹಾಸಕಾರ ಸ್ಟೇಯಿನ್‌ನ ಪ್ರಕಾರ (೧೮೯೨)ಆತ ನೋಡುವಾಗಲೇ ಮಂದಿರವು ಪೂರ್ಣರೂಪದಲ್ಲಿ ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಇರಲಿಲ್ಲ ! ಹೊರಾಂಗಣವು ಮುಖ್ಯಮಂದಿರಕ್ಕಿಂತ ಪುರಾತನವಾಗಿದ್ದು ಯಾವುದೇ ಜೀರ್ಣೋದ್ಧಾರದ ಕುರುಹು ಆತನಿಗೆ ಕಾಣಿಸಿರಲಿಲ್ಲ. ಗುಡಿಯ ಪ್ರವೇಶಕ್ಕೆ ೯ ಅಡಿ ಅಗಲದ ೬೩ ಮೆಟ್ಟಿಲುಗಳು ಉಳಿದುಕೊಂಡಿದ್ದವಂತೆ. ೬-೭ ಅಡಿ ಉದ್ದ, ಅರ್ಧ ಅಡಿ ದಪ್ಪದ ಒಂದು ಬೃದಹಾಕಾರದ ಕಲ್ಲುಚಪ್ಪಡಿಯು ಗರ್ಭಗುಡಿಯಲ್ಲಿ ಕಂಡಿದ್ದ. ಬಹುಷಃ ಇದು ಕುಂಡವನ್ನೋ, ಕುಂಭವನ್ನೋ ಸೂಚಿಸಿದ್ದಿರಬಹುದು ಎನ್ನಲಾಗಿದೆ.

ಸ್ಟೇಯಿನ್ ಉಲ್ಲೇಖಿಸಿದಂತೆ ಷಟ್ಕೋನ ಆಕೃತಿಯಲ್ಲಿ ಕಾಶ್ಮೀರಿ ವಾಸ್ತುಶಿಲ್ಪದನುಸಾರವಾಗಿ ಪಸರಿಸಿದೆ ದೇವಾಲಯ. ಇದು ೧೪೨ ಅಡಿ ಉದ್ದ, ೯೪.೬ ಅಡಿ ಅಗಲವಿದೆ. ದೇಗುಲದ ಮುಖ್ಯದ್ವಾರವು ಪಶ್ಚಿಮಾಭಿಮುಖವಾಗಿದ್ದು ಐದು ಮೆಟ್ಟಿಲುಗಳು ದ್ವಾರಪ್ರವೇಶಕ್ಕೆಂದೇ ಇವೆ. ನಿರ್ಗಮನ ದ್ವಾರವು ನೈರುತ್ಯ ದಿಕ್ಕಿಗಿದ್ದು, ಗರ್ಭಗುಡಿ ಪ್ರವೇಶಕ್ಕಿರುವ ಕಮಾನು ಸುಮಾರು ೮ ಅಡಿ ಎತ್ತರದಲ್ಲಿದೆ. ಗರ್ಭಗುಡಿ ೨೩ ಚದರ ಅಡಿ ವಿಸ್ತೀರ್ಣವಿದ್ದು, ನಾಲ್ಕುಮೂಲೆಗಳೂ ೩: ೨ ಅನುಪಾತದಲ್ಲಿದೆ. ಇದು ಪಂಚಾಂಗದಿಂದ ೫.೩ ಅಡಿ ಎತ್ತರ ಮತ್ತು ೨೪ ಅಡಿಯಷ್ಟು ಅಗಲದಲ್ಲಿ ಚೌಕಾಕೃತಿಯಲ್ಲಿದೆ. ಹೊರಗಿನ ಎರಡು ದೊಡ್ಡ ಗೋಡೆಗಳು ೬-೭ ಅಡಿ ಅಗಲವಿದ್ದು ೧೦-೧೧ ಅಡಿ ಎತ್ತರವಿದೆ. ಮಂದಿರಕ್ಕೆ ಹೊದಿಸಲಾಗಿರುವ ಕೆಂಪು ಮರಳುಗಲ್ಲಿನ ಚಪ್ಪಡಿಗಳೇ ೪-೬ ಅಡಿಗಳಷ್ಟು ದಪ್ಪವಿದ್ದು ಅವುಗಳನ್ನು ಪರಸ್ಪರ ಬೆಸೆದುಕೊಳ್ಳುವಂತೆ (ಇಂಟರ್ ಲಾಕ್) ಜೋಡಿಸಲಾಗಿದೆ. ಈ ಕಲ್ಲುಗಳು ಸುಮಾರು ೮ನೇ ಶತಮಾನದ ಕಾರ್ಕೋಟ ಸಾಮ್ರಾಜ್ಯಕ್ಕೆ ಸೇರಿದವೆಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಜೊತೆಗೆ ಮಂದಿರದ ಮಧ್ಯಭಾಗದಿಂದ ಮೇಲೆ ಆಕಾಶ ತೋರುವಂತೆ ಇರುವ ಶಂಕುವಿನಾಕೃತಿಯ ಮೂರುಬದಿಗೆ ಚಾಚಿದ ಗೋಪುರ, ಕಂಬಗಳ ಅವಶೇಷಗಳು ದೊರೆ ಲಲಿತಾದಿತ್ಯನು ನಿರ್ಮಿಸಿದ ಮಾರ್ತಾಂಡ ದೇವಾಲಯದ ವಾಸ್ತುಶಿಲ್ಪ ವಿನ್ಯಾಸ (ಡೆರಿಕ್)ವನ್ನು ನೆನಪಿಸುತ್ತದೆ ಎನ್ನುತ್ತಾರೆ. ಅಂದಾಜಿನ ಪ್ರಕಾರ ಈಗಿರುವ ಮಂದಿರ ಸುಮಾರು ೭೨೪ನೇ ಕಾಲಕ್ಕೆ ಸೇರಿದೆ.

ಯಾವುದೇ ವಿಶೇಷವಾದ ಅಲಂಕರಣಗಳಾಗಲೀ, ಶಿಲ್ಪಗಳಾಗಲೀ ಇರಲಿಲ್ಲವಾದರೂ, ಎರಡು ಲಿಂಗಗಳನ್ನೂ ಗರ್ಭಗುಡಿಯಲ್ಲಿ ಕಂಡಿದ್ದನೆಂದೂ ಸ್ಟೆಯಿನ್ ಹೇಳಿಕೊಂಡಿದ್ದಾನೆ. ಇದನ್ನು ಬೇಟ್ಸ್‌ನೂ ದೃಢಪಡಿಸಿದ್ದು ದೇವಾಲಯವು ಎರಡು ಸುತ್ತಿನ ಪ್ರಾಕಾರಗಳನ್ನು ಹೊಂದಿದ್ದು ಹೊರಗಿನ ಗೋಡೆಗಳು ೩೦ ಅಡಿ ಎತ್ತರದಲ್ಲಿದ್ದವಂತೆ ಎಂಬ ಭಿನ್ನ ಹೇಳಿಕೆ ನೀಡಿದ್ದಾನೆ. ಜೊತೆಗೆ ಶಾರದೆಯ ವಿಗ್ರಹವನ್ನು ಆತ ಕಂಡಿರಲಿಲ್ಲವೆಂದೂ, ಗೋಡೆಗಳ ಮಧ್ಯೆ ಉತ್ತರ ದಿಕ್ಕಿನ ಒಂದು ಕಮಾನಿನಂತಿರುವ ಗುಡಿಯಲ್ಲಿ ಶಿವಲಿಂಗವೊಂದು ಕಾಣಿಸಿದ್ದನ್ನು ದೃಢಪಡಿಸಿದ್ದಾನೆ. ೧೯೨೦ರ ಹೊತ್ತಿಗೆ ಗ್ರಾಮವಾಸಿಗಳಾಗಿದ್ದ ಹಿಂದಿನ ತಲೆಮಾರಿನ ಗ್ರಾಮವಾಸಿಗಳೂ ಇದನ್ನು ಸ್ಪಷ್ಟಪಡಿಸಿದ್ದು ಗರ್ಭಗುಡಿಯಿಂದ ಸ್ವಲ್ಪವೇ ದೂರದಲ್ಲಿ ಶಿವಲಿಂಗವಿದ್ದು, ಅದಕ್ಕೂ ಪೂಜೆ ಸಲ್ಲುತ್ತಿತ್ತು ಎಂದು ಖಾತರಿಪಡಿಸಿದ್ದಾರೆ. ಆದರೆ ಈ ಶಿವಲಿಂಗಗಳ ಉಲ್ಲೇಖ ಐತಿಹಾಸಿಕ ಸಾಕ್ಷ್ಯಗಳ ಪೈಕಿ ಎಲ್ಲೂ ಕಂಡುಬರುವುದಿಲ್ಲವಾದ ಕಾರಣ ಪ್ರಾಯಃ ಇದು ನಂತರದ ಕಾಲಗಳಲ್ಲಿ ಯಾವುದಾದರೂ ಆಚರಣೆಯ ಭಾಗವಾಗಿ ಬಂದಿರಬಹುದೆನಿಸುತ್ತದೆ.

ಕಟ್ಟಡದ ಸ್ಥಿತಿ ಹೇಗೇ ಇರಲಿ, ಮೂಲ ಮಂದಿರದಲ್ಲಿ ಮೂರ್ತಿಯೇ ಇಲ್ಲ! ಖಡ್ಗ, ಪುಸ್ತಕ, ಯಜ್ಞೋಪವೀತಾದಿಗಳನ್ನು ಕೈಯಲ್ಲಿ ಧರಿಸಿ ಆರು ಭುಜಗಳಿಂದ ಕೂಡಿ ಪ್ರಸನ್ನವದನಳೂ, ಪಾರ್ವತೀರೂಪಳೂ ಆಗಿದ್ದ ಕಾಶ್ಮೀರದ ಪ್ರಖ್ಯಾತ ಶಾರದಾಸ್ತುತಿಯೊಂದರ ರೂಪವನ್ನು ಹೋಲುವ ಯಾವ ಕುರುಹುಗಳೂ ಇಲ್ಲ. ಇನ್ನು ಸಂಕೇತರೂಪದಿಂದಲಾದರೂ ವಿದ್ಯೆಗೆ ಅವಕಾಶವಾಗುವ ಪರಿಸರ ಅಲ್ಲಿನದ್ದಲ್ಲ.

೧೮೪೬-೫೬ರ ಹೊತ್ತಿಗೆಲ್ಲಾ ಕೆಲವು ಜೀರ್ಣೋದ್ಧಾರವೂ ನಡೆದಿತ್ತಂತೆ. ಮಂದಿರಕ್ಕೆ ನಾಲ್ಕೂ ದಿಕ್ಕಿನಿಂದಲೂ ಬಾಗಿಲು, ಕಮಾನುಗಳಿದ್ದು ಪ್ರತಿಯೊಂದು ಕಮಾನುಗಳೂ ೨೦ ಅಡಿ ಎತ್ತರದಲ್ಲಿ ಭವ್ಯವಾಗಿದ್ದವಂತೆ. ದ್ವಾರಕ್ಕೆ ಹೊಂದಿಕೊಂಡಂತೆ ಚಚ್ಚೌಕದಾಕೃತಿಯ ೧೬ ಅಡಿ ಎತ್ತರ ೨೬ *೨೬ ಅಳತೆಯ ಕಂಬಗಳು ಏಕಶಿಲೆಯಿಂದ ಕಟೆಯಲ್ಪಟ್ಟವು ಇದ್ದವೆಂದು ಬೇಟ್ಸ್ ಹೇಳಿದ್ದಿದೆ. ಅಲ್ಲಿನ ಅರ್ಚಕರಿಗೆ ಡೋಗ್ರಾ ದೊರೆಗಳ ಆಣತಿಯಂತೆ ಪಗಾರವನ್ನೂ ನಿಯಮಿಸಲಾಗಿತ್ತು. ಆದರೆ ಇಂದು, ದೇವಾಲಯದ ಆನುವಂಶಿಕ ಮೊಕ್ತೇಸರರಾಗಿದ್ದ ಗೋಥೆಂಗ್ ಎಂಬ ಬ್ರಾಹ್ಮಣ ಸಮುದಾಯವು ಕೂಡಾ ಅಲ್ಲಿ ಉಳಿದಿಲ್ಲ. ಪೂಜೆಯೋ ಶಾಸ್ತ್ರದಿಂದಲ್ಲ, ಶಸ್ತ್ರ ಹಿಡಿದವರಿಂದ. ಶಾರದಾಭೂಮಿ ಬಳಕೆಯಾಗುತ್ತಿರುವುದೇ ಮಿಲಿಟರಿ ಕಾರ್ಯಾಚರಣೆಗೆ. ಅಲ್ಲಿಂದ ಕೆಲವೇ ನೂರು ಅಡಿಗಳ ಅಂತರದಲ್ಲಿ ಸೇನಾ ಹೆಲಿಪ್ಯಾಡ್ ಕೂಡಾ ಇದ್ದು ಬಹುಪಾಲು ಪ್ರದೇಶ ಸೇನೆಯ ಹದ್ದಿನಗಣ್ಣಲ್ಲೇ ಇದೆ. ಒಂದರ್ಥದಲ್ಲಿ ಸೇನಾ ಚಟುವಟಿಕೆಗಳು ಮಂದಿರದ ಭೂಭಾಗ ಆಕ್ರಮಣವನ್ನು ತಡೆಯುವಲ್ಲಿ ಅನುಕೂಲವಾದರೂ ನಿರೀಕ್ಷಿತ ಮಟ್ಟದ ಸುಧಾರಣೆಗಳನ್ನೂ ಕೈಗೊಳ್ಳುವ ದಿಸೆಯಲ್ಲಿ ಅದುವೇ ತೊಡರುಗಾಲು. ಆಗೊಮ್ಮೆ ಈಗೊಮ್ಮೆ ಸೈನಿಕರೇ ಪೂಜೆ ಸಲ್ಲಿಸುವುದಿದೆಯಾದರೂ ಉಳಿದವರು ಅಲ್ಲಿಗೆ ಆರಾಧನೆಗೆಂದು ಹೋಗುವ, ತಂಗುವ ಮಾತಾಗಲೀ, ಅದನ್ನು ನಿರೀಕ್ಷಿಸುವ ವ್ಯವಸ್ಥೆಯಾಗಲೀ ಅಲ್ಲಿಲ್ಲ್ಲ. ಒಟ್ಟಿನಲ್ಲಿ ಶಾರದಾಪೀಠದ ನೆಲೆಯೇ ಪ್ರಸಕ್ತ ಕಾಶ್ಮೀರದ ಸ್ಥಿತಿಯನ್ನು ಕೂಗಿ ಹೇಳುತ್ತಿದೆ.

 

ಶಾರದಾಯಾತ್ರೆ

ಶಾರದಾಯಾತ್ರೆಯೂ ಯಾವ ಕಾಲದಿಂದ ಪ್ರಾರಂಭವಾದುದು ಎಂಬ ಮಾಹಿತಿ ಈವರೆಗಿನ ಯಾವ ಅಧ್ಯಯನಗಳಿಂದಲೂ ದೊರಕಿಲ್ಲ. ಆದರೆ ದಿನದಿನವೂ ನಡೆಯುತ್ತಿದ್ದ ಜ್ಞಾನಸತ್ರವೇ ಯಾತ್ರೆಯಾಗಿದ್ದ ಕಾಲವೊಂದಿತ್ತು. ಅದರ ಮಟ್ಟ ಕುಸಿಯುತ್ತಾ ಹೋದಂತೆಲ್ಲಾ ಸಾಂಕೇತಿಕವಾಗಿ ಯಾತ್ರೆಗಳ ನಡಿಗೆ ಆರಂಭವಾಗಿದ್ದಿರಬೇಕು. ಅಪ್ಘನ್ನರ ಆಡಳಿತದ ನಂತರ ಯಾತ್ರೆ ಸಹಜ ಸ್ಥಿತಿಗೆ ಬಂದು ೧೮೪೬ರ ಹೊತ್ತಿಗೆ ಜನರ ಜೀವನದ ಅಂಗಭಾಗವಾಗಿ ಪುನಃ ನಿಯಮಿತವಾದ ಚಾಲನೆ ಪಡೆಯಿತು. ಈ ಹಿನ್ನೆಲೆಯಲ್ಲಿ ಡೋಗ್ರಾ ರಾಜರ ಆಳ್ವಿಕೆ ಪ್ರಶಂಸನೀಯ. ವಿದ್ವಾಂಸರು, ಸಂತರು, ರಾಜರ ಸೇವಕರು, ಸೇನೆ, ಅಧಿಕಾರಿಗಳು, ಅತಿಥಿಗಳು ಸಹಯಾತ್ರಿಕರಾಗಿ ಜೊತೆಗೂಡುವ ಕಾಲವದು. ಯಾತ್ರಾರ್ಥಿಗಳಿಗೆ ಆಹಾರ, ಅನುಪಾನಗಳೆಲ್ಲಾ ರಾಜನ ಸುಪರ್ದಿಯಲ್ಲಿಯೇ ನಡೆಯುತ್ತಿತ್ತು. ಯಾತ್ರಿಕರು ಕಾಲ್ನಡಿಗೆಯಲ್ಲಿ ಸಾಗುತ್ತಾ ಶಾಂಡಿಲ್ಯ‌ಋಷಿಯು ನಡೆದ ಸ್ಥಳಗಳಲ್ಲೆಲ್ಲಾ ತಂಗಿ ಭಾದ್ರಪದ ಮಾಸದ ನಾಲ್ಕನೇ ದಿನದಿಂದ ಶುಕ್ಲಪಕ್ಷದ ಎಂಟನೇಯ ದಿನದ ವರೆಗೂ ಸತತವಾಗಿ ನಡೆದು ಶಾರದಾ ಸಂಗಮದಲ್ಲಿ ತೀರ್ಥಸ್ನಾನ ಮಾಡಿದಲ್ಲಿಗೆ ಎಲ್ಲವೂ ಸಂಪನ್ನ. ಅಲ್ಲಿಯೇ ಪಿತೃಗಳಿಗೆ ತರ್ಪಣ ಕಾರ್ಯ ನಡೆಸಿದ ಬಳಿಕ ವೈಭವದಿಂದ ಉತ್ಸವಗಳೂ ಜರುಗುತ್ತಿದ್ದವು. ಆನಂತರದ ಕೆಲವು ದಶಕಗಳಲ್ಲಿ ಗುಜರ, ಪಹಾಡೀ ಜನಾಂಗದವರೂ ಶಿಲಾಮಯಪೀಠಕ್ಕೆ ಹಾಲು, ತಾವು ಬೆಳೆದ ಧಾನ್ಯ-ತರಕಾರಿಗಳನ್ನು ಅರ್ಪಿಸಿ ಪುನೀತರಾಗುತ್ತಿದ್ದರಂತೆ. ಕಳೆದ ಶತಮಾನದ ಮೊದಲ ಭಾಗದಲ್ಲಿ ಬಾರಾಮುಲ್ಲಾದಿಂದ ಯಾತ್ರಿಗಳು ಬರುತ್ತಿದ್ದರೆ, ಇನ್ನೂ ಬಹಳಷ್ಟು ಭಾರತೀಯರು ಭಾರತದ ಕುಪ್ವಾರಾ ಪ್ರದೇಶದ ಟಿಕ್ಕರ್‌ನ ಭಾಗವನ್ನೇ ಇದೇ ಯಾತ್ರೆಗೆ ಸುಲಭಮಾರ್ಗವಾಗಿ ಆರಿಸಿಕೊಂಡಿದ್ದರು. ಅಲ್ಲಿನ ಸಂತ ನಂದಾಲಾಲ್‌ಜಿಯವರ ನೇತೃತ್ವದಲ್ಲಿ ೧೯೪೭ರಲ್ಲಿ ಶಾರದಾಮಂದಿರಕ್ಕೆ ಯಾತ್ರೆ ನಡೆದದ್ದೇ ಕೊನೆಯದು. ಭಾರತ-ಪಾಕ್ ಇಬ್ಭಾಗವಾದದ್ದೇ ತಡ, ಅಲ್ಲಿದ್ದ ತಮ್ಮ ಆಶ್ರಮದ ಗುಡಿಸಲನ್ನೂ ತೆರವು ಮಾಡಿ ಮಂದಿರದಲ್ಲಿದ್ದ ಕೆಲವು ವಿಗ್ರಹಗಳನ್ನು ಕುದುರೆಯ ಮೇಲೆ ಟಿಕ್ಕರ್‌ಗೆ ನಂದಾಲಾಲರು ಸಾಗಿಸಿದ್ದರು. ಆ ಪೈಕಿ ಕೆಲವು ಶಿಲಾಮೂರ್ತಿಗಳು ಇಂದಿಗೂ ಬಾರಾಮುಲ್ಲಾದ ದೇವೀಬಾಲ್‌ನಲ್ಲಿದೆಯಂತೆ.

ಇಂದಿಗೆ ಶಾರದಾಯಾತ್ರೆ ಸ್ಥಗಿತವಾಗಿಯೇ ಸುಮಾರು ೭೨ ವರುಷಗಳಾದವು. ಆದರೂ ಎರಡು ವರ್ಷಕ್ಕೊಮ್ಮೆ ಶಾರದಾಷ್ಟಮಿ ಅಥವಾ ಗಂಗಾಷ್ಟಮಿಯ ದಿನದಂದು ಶಾರದೆಯ ಜನ್ಮದಿನವೆಂದು ಕೊಂಡಾಡುವ ಯಾತ್ರಿಗಳು ಶಾರದಾಬಲ್ ಎಂಬ ಹೆಸರಿನಲ್ಲಿ ಶ್ರಾದ್ಧಕರ್ಮ ನಡೆಸಿ ಪಿತೃತರ್ಪಣ ಬಿಡುವುದಿದೆ. ಆದರೆ ಅವರಿಗೆ ಶಾರದೆಯ ಪೀಠಕ್ಕೆ ಬರುವ ಪುಣ್ಯಾವಕಾಶವಿಲ್ಲ. ಆದ್ದರೂ ಪರಂಪರೆಯನ್ನು ಬಿಡಲೊಪ್ಪದೆ ಸನಿಹದ ಕಣಿವೆಯ ಆಸುಪಾಸಿನ ಐದು ಬೇರೆ ಬೇರೆ ಪುಣ್ಯಸ್ಥಳಗಳಲ್ಲಿ ಸೇರುತ್ತಾರೆ. ಮೊದಲೆಲ್ಲ್ಲಾ ಪಂಡಿತರು ನಿತ್ಯವೂ ಮಾಡುತ್ತಿದ್ದ ಹೋಮಹವನಗಳು ಕಳೆದ ೪೦ ವರುಷಗಳಲ್ಲಿ ಕೇವಲ ಗಂಗಾಷ್ಟಮಿಯ ದಿನವಷ್ಟೇ ಆ ಆಯ್ದ ಪುಣ್ಯಸ್ಥಳಗಳಲ್ಲಿ ನೆರವೇರುತ್ತದೆ. ಕೃಷ್ಣಜನ್ಮಾಷ್ಟಮಿಯ ಹೊತ್ತಿಗೆಲ್ಲಾ ಯಾತ್ರೆಯ ತಯಾರಿ ಜರುಗಿ ಭಾದ್ರಪದ ಮಾಸದ ಅಮಾವಾಸ್ಯೆಗೆ ಮೂರ್ನಾಲ್ಕು ದಿನಕ್ಕಿಂತ ಮೊದಲೇ ಯಾತ್ರೆ ಕೈಗೊಳ್ಳುವ ನಿರ್ಧಾರವಾಗುತ್ತದೆ. ದೇವೀ ಅಂಗಣವೆಂದು ಕರೆಯಲ್ಪಡುವ ಶ್ರೀನಗರದಲ್ಲಿ ಜೊತೆ ಸೇರಿ ಯಾತ್ರೆಯ ಬಾಧ್ಯಸ್ಥಿಕೆಗಳನ್ನು ಸಮಾಲೋಚಿಸುತ್ತಾರೆ. ಸೂಕ್ತ ರಕ್ಷಣೆ, ಸ್ವಯಂಸೇವಕರ ಸಹಕಾರ, ನಿಗದಿತ ಜಾಗಗಳಲ್ಲಿ ತಂಗುವ ವ್ಯವಸ್ಥೆ, ವಸತಿ, ಭಜನೆ, ಪ್ರಾರ್ಥನೆ, ಪಾರಂಪರಿಕ ವಿಧಿವಿಧಾನಗಳು.. ಹೀಗೆ ಯಾತ್ರೆಯೆಂದರೆ ಇಂದಿಗೂ ಸಮೂಹ ಸಂಭ್ರಮ. ಚಕ್ರೇಶ್ವರಿ (ಶ್ರೀಚಕ್ರ)ಗೆ ಪ್ರಾರ್ಥನೆ ಸಲ್ಲಿಸಿ ಯಾತ್ರೆ ಆರಂಭಿಸುವುದು ಮತ್ತು ಪೂರ್ಣಗೊಳಿಸುವ ಕ್ರಮ ಅನೂಚಾನವಾಗಿ ಪಾಲನೆಯಾಗುತ್ತಲೇ ಬಂದಿದೆ. ಭಾದ್ರಪದ ನವಮಿಯ ದಿನ ಯಾತ್ರಿಕರು ನೆನಪುಗಳನ್ನು ಮೆಲುಕು ಹಾಕುತ್ತಾ ವಾಸ್ತವ್ಯಕ್ಕೆ ವಾಪಾಸಾಗುತ್ತಾರೆ.

 

ಕಾಶ್ಮೀರಿ ಪಂಡಿತ್ ಮುಸಲ್ಮಾನರಿಂದ ಪೂಜೆ !

ಹಿಂದೂಗಳ ಪಾಲಿಗೆ ಶಾರದಾಪೀಠ ಶ್ರದ್ಧಾಕೇಂದ್ರ. ಪರಂಪರೆಯ ಮೇಲಿನ ಪ್ರೀತಿಯಿರುವವರಿಗೆ ಅದು ಸಹಜ. ವಿಶೇಷವೆಂದರೆ ಶಾರದಾಪೀಠದಲ್ಲಿ ಶಾರದಾಪೂಜೆಯನ್ನು ಮಾಡಿಕೊಂಡು ಬರುತ್ತಿರುವವರಲ್ಲಿ ಶಾರದಾ ಗ್ರಾಮದ ಮುಸಲ್ಮಾನರೂ ಇದ್ದಾರೆ ! ಇನ್ನೂ ಅಚ್ಚರಿಯೆಂದರೆ ಅವರ ಮನೆದೇವರೂ ಶಾರದೆಯೇ! ಆಣೆ-ಪ್ರಮಾಣ ಮಾಡುವುದು ತಾಯಿ ಶಾರದೆಯ ಹೆಸರಿನಲ್ಲಿಯೇ!

ಕಾರಣ, ಇವರೆಲ್ಲಾ ಮೂಲತಃ ಮತಾಂತರಗೊಂಡ ಕಾಶ್ಮೀರಿ ಪಂಡಿತರು. ಅವರ ಮೂಲವಿದ್ದಿದು ಶಾರದೆಯ ಬುಡದಲ್ಲೇ. ಜೀವನೋಪಾಯಕ್ಕಾಗಿ ಶಾರದಾತೀರ್ಥದ ಬಳಿ ಅರ್ಚಕತ್ವ, ವ್ಯಾಪಾರವನ್ನು ಅವಲಂಬಿಸಿಕೊಂಡಿದ್ದ ಅವರೊಂದಿಗೆ ಸಂತರು, ಪರಿವ್ರಾಜಕ ಸನ್ಯಾಸಿಗಳು, ಅವರ ಶಿಷ್ಯರು, ಸೇವಕರು ಆಶ್ರಯ ಪಡೆದಿದ್ದರು. ಆದರೆ ಈ ಜ್ಞಾನಜನಾಂಗವು ಮತಾಂಧರ ಕರಾಳಮುಷ್ಠಿಗೆ ಸಿಲುಕಿ ತಮ್ಮ ನೆಲೆ-ನೆಲಗಳನ್ನು ಪರಿತ್ಯಜಿಸಿ, ದಿಕ್ಕುದೆಸೆಯಿಲ್ಲದೆ ಓಡಿತು. ಜೊತೆಗೆ ಭಯೋತ್ಪಾದಕರ ಹಾವಳಿ. ಹೀಗಿದ್ದಾಗ್ಯೂ ಇವರೇ ಕೆಲವು ಹಿಂದೂ ಮಿತ್ರರ ನೆರವು ಪಡೆದು ಪೀಠದ ಎದುರಿನ ಮುರುಕು ಗರ್ಭಗುಡಿಯ ಗೋಡೆಯಲ್ಲಿ ಒಂದು ವರುಷದ ಹಿಂದೆ ಶಾರದಾ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿದರು. ಮೂರ್ತಿಯಿದ್ದ ಸ್ಥಳದಲ್ಲಿ ತಮಗರಿತಂತೆ ಪೂಜೆ ನಡೆಸಿದರು. ಹೂವುಗಳ ಪ್ರಸಾದವನ್ನೂ ಮತ್ತು ಶಾರದಾಭೂಮಿಯ ಮಣ್ಣನ್ನೂ ತಮ್ಮ ಸೋದರ ಪಂಡಿತರುಗಳಿಗೆ ಅಂಚೆಯ ಮೂಲಕ ಕಳುಹಿಸಿದರು.

ಈಗ ತಮ್ಮ ಮಾತೃಸ್ಥಾನದ ಭಗ್ನಾವಶೇಷಗಳನ್ನು ನೋಡಲೂ ಅವಕಾಶವಿಲ್ಲದ ಕಾಶ್ಮೀರಿಪಂಡಿತರಿಗೆ ಇದೇ ಶಾರದಾಗ್ರಾಮವಾಸಿಗಳಿಂದಲೇ ತಾಯ್ನೆಲದ ಭಾವಬೆಸುಗೆ. ಶಾರದಾಪೀಠದ ಪುನರುಜ್ಜೀವನ ಅವರ ನಿತ್ಯ ಹಂಬಲವಾದರೆ, ಕಾಶ್ಮೀರೀ ಪಂಡಿತರ ಶಾರದಾಯಾತ್ರೆಗೂ ಗ್ರಾಮವಾಸಿಗಳದ್ದೇ ಬೆಂಬಲವಿದೆ. ಇದೇ ಉದ್ದೇಶಕ್ಕಾಗಿಯೇ Sಚಿve Shಚಿಡಿಜಚಿ ಎಂಬ ಹೆಸರಿನಲ್ಲಿ ಸಂಘಟನಾಶೀಲರಾಗಿ ಸಕ್ರಿಯ ಹೋರಾಟವನ್ನು ನಡೆಸುತ್ತಿದ್ದಾರೆ. ೨೦೧೧ರಲ್ಲಿ ರೇಡಿಯೋ ಶಾರದಾ ೯೦.೪ ಎಂಬ ಸಮುದಾಯಬಾನುಲಿಯನ್ನೂ ೨೦೧೧ರಲ್ಲಿ ಆರಂಭಿಸಲಾಗಿದೆ. ೨೦೧೮ ಜನವರಿ ೨೦ರ ಶಾರದಾದಿವಸದಂದು ಪುನಃ ಪೂಜೆ ಸಲ್ಲಿಸಿಯೂ ಬಂದಿದ್ದಾರೆ. ಇದರೊಂದಿಗೆ ಮುಜಫರ್‌ಬಾದ್ ವಿಶ್ವವಿದ್ಯಾಲಯದ ಮಹಿಳೆ ಕುಕ್ಷಾನಾಖಾನ್, ರವೀಂದ್ರ ಪಂಡಿತ, ಮಹಮ್ಮದ್ ರಯೀಸ್, ಆರಿಫ್ ಖಾನ್‌ರಂಥ ಕೆಲ ಪುರಾತತ್ತ್ವ ಚಿಂತಕರು ಮತ್ತು ಸಂಶೋಧರು, ಗ್ರಾಮದ ಸರಪಂಚ ಮುಖ್ಯಸ್ಥ, ಶಾರದಾ ಶಾಲೆಯ ಪ್ರಾಂಶುಪಾಲರಂತಹ ಸ್ಥಳೀಯರೂ ಜೊತೆಗೂಡಿ ಶಾರದಾ ಸಂಸ್ಕೃತಿಯ ರಕ್ಷಣೆ ಮತ್ತು ಪುನರುತ್ಥಾನದ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್‌ನಲ್ಲಿ ಹಲವು ಲೇಖನಗಳು ಮಾಹಿತಿಗಳ ಸಂಬಂಧ ಸ್ಥಳೀಯರು, ಸಂಶೋಧಕರಿಂದ ಅಂತರ್ಜಾಲದಲ್ಲಿ ಇವೆಯಾದರೂ ಎಲ್ಲದರೊಳಗೂ ಏಕಾಭಿಪ್ರಾಯ ಮತ್ತು ಸಂಶೋಧನಸಹಿತವಾದ ವಿಶ್ಲೇಷಣೆ ಇಲ್ಲದಿರುವುದೂ ಈ ನೆಲೆಯಲ್ಲಿ ಆಗಬೇಕಾದ ಕೆಲಸಗಳೆಡೆಗೆ ಬೆಟ್ಟು ಮಾಡುತ್ತದೆ.

 

ಭಾರತದ ನಿಲುವು

ಅಜ್ಮೇರ್ ದರ್ಗಾಕ್ಕೆ ಬರಲು ಪಾಕಿಸ್ತಾನಿಯರಿಗೂ, ಲಾಹೋರಿನ ಸಾಹೇಬ್ ಗುರುದ್ವಾರಕ್ಕೆ ಹೋಗಲು ಭಾರತೀಯ ಸಿಖ್ಖರಿಗೂ ಉಭಯ ದೇಶಗಳು ಅವಕಾಶ ಕಲ್ಪಿಸಿದಂತೆ ಹಿಂದೂಗಳಿಗೂ ಇಲ್ಲಿಗೆ ಭೇಟಿನೀಡುವ ಸದವಕಾಶ ಕೊಡಬೇಕೆಂಬ ಕೂಗು ಕಳೆದ ೭೦ ವರುಷಗಳಿಂದಲೂ ಇದೆ. ಈಗಿರುವ ಅನುಮತಿನಿಯಮದಲ್ಲಿ ಗಡಿಯಾಚೆಗಿನ ಬಂಧುಗಳನ್ನು ಭೇಟಿಯಾಗಲು ಭಾರತೀಯರಿಗೆ ಅವಕಾಶವಿದೆ. ಅದಲ್ಲದೆ, ವ್ಯಾಪಾರ ಮಾಡಲೂ ವಿಶೇಷ ಅನುಮತಿಯಿದೆ. ಆದರೆ ಇದಾವುದೂ ಶಾರದಾಯಾತ್ರೆಯನ್ನು ಪುನರಾರಂಭಿಸಲು ಸಹಕರಿಸಿಲ್ಲ. ಧಾರ್ಮಿಕಯಾತ್ರೆಗೆಂದೇ ವಿಶೇಷ ತಿದ್ದುಪಡಿ ತರದ ಪಕ್ಷದಲ್ಲಿ ಶಾರದೆಯ ದ್ವಾರ ಮುಕ್ತವಾಗಿ ತೆರೆಯುವುದು ಅಸಾಧ್ಯ.

ಜಮ್ಮುಕಾಶ್ಮೀರ ಸರಕಾರವು ಶಾರದಾಯಾತ್ರೆಗೆ ತನ್ನ ಬೆಂಬಲವಿದೆಯೆಂದು ಘೋಷಿಸಿಯೇ ವರುಷಗಳು ಕಳೆದಿವೆ. ಆದರೆ ಭಾರತದ ಕುಪ್ವಾರಾ ಪ್ರದೇಶಕ್ಕೆ ಪಾಕಿಸ್ತಾನಿ ಭಯೋತ್ಪಾದಕರು ಒಳನುಗ್ಗುವುದು ಇದೇ ಶಾರದಾ ಮಂದಿರದ ವ್ಯಾಪ್ತಿಯ ಪ್ರದೇಶದಿಂದ ಎನ್ನುವುದು ಪುನರ್ಮಂಥನಕ್ಕೆ ಗ್ರಾಸ ಮಾಡಿವೆ.

ಹಾಗೆಂದೇ ಸಮಾಮನಮನಸ್ಕರ ವಲಸಿಗರ ಸಹಕಾರ ಸಮಿತಿಯೊಂದು(ಎಪಿ‌ಎಂಸಿಸಿ) ೨೦೧೬-೧೭ರಲ್ಲಿ ಕೇಂದ್ರಸರ್ಕಾರದ ಮಂತ್ರಿಗಳಿಗೆ, ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಿಗೆ ಬೇಡಿಕೆಯನ್ನೂ ಸಲ್ಲಿಸಿ ಯಾತ್ರೆಗೆಂದು ಶೀಘ್ರ ವ್ಯವಸ್ಥೆಗಳನ್ನು ಮಾಡಬೇಕೆಂದು ಒತ್ತಾಯಿಸಿದೆ. ಈ ಸಂಬಂಧ ಅನೇಕ ವಿಚಾರಸಂಕಿರಣ ಮತ್ತು ಪ್ರತಿಭಟನೆಗಳನ್ನೂ ೨೦೧೬ರಿಂದೀಚೆಗೆ ದೆಹಲಿಯಲ್ಲಿ ಸಂಘಟಿಸಿದೆ. ಸೇವ್ ಶಾರದಾ ಸಮಿತಿಯು ದೇಶದ ಮುಖ್ಯಪಟ್ಟಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದು; ಕಾಶ್ಮೀರದಲ್ಲೇ ಶಾರಮಂದಿರವನ್ನು ಹೋಲುವ ದೇವಾಲಯ ನಿರ್ಮಾಣ ಆಗಿ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯೂ ಕೆಲಸವೂ ಬಹುವಿಜೃಂಭಣೆಯಿಂದ ಜರುಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾರದಾ ವಿಶ್ವವಿದ್ಯಾನಿಲಯವನ್ನು ಆರಂಭಿಸಬೇಕೆಂಬುದು ಸರ್ಕಾರದ ಮುಂದೆ ಇರಿಸಿದ ಮತ್ತೊಂದು ಹಕ್ಕೊತ್ತಾಯ.

 

ಪಾಕಿಸ್ತಾನ ಏನನ್ನುತ್ತಿದೆ?

ವಾಜಪೇಯಿ ಅವರ ಎನ್‌ಡಿ‌ಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎರಡೂ ದೇಶಗಳ ಮಧ್ಯೆ ಬಸ್ ಪ್ರಯಾಣವೂ ಆರಂಭವಾಗಿದ್ದು ಸುವರ್ಣಾಕ್ಷರ ಉಲ್ಲೇಖನೀಯ. ಆಗಲೇ ಶಾರದಾಯಾತ್ರೆಗೆ ಸಂಬಂಧಿಸಿದಂತೆ ಪಾಕ್‌ನ ಅಲ್ಪಸಂಖ್ಯಾತ ಹಿಂದೂಗಳಿಂದ ಬೇಡಿಕೆಗಳು ಪ್ರಧಾನಿ ಪ್ರವೇಜ್ ಮುಷರ್ಫ್ ಅವರನ್ನು ಮುಟ್ಟಿದ್ದವು. ಸುಮಾರು ೮ ಕೋಟಿಯನ್ನು ಶಾರಾದಾಭಿವೃದ್ಧಿಗೆಂದೇ ಪ್ರಧಾನಿ ಮೀಸಲಿಸಿರಿಸಿ ಕೆಲವು ಪ್ರವಾಸೀ ತಂಗುದಾಣಗಳು, ಸಮುದಾಯಭವನಗಳು, ಹಾಸ್ಟೆಲ್, ಕೆಫೆಟೇರಿಯಾಗಳನ್ನು ನಿರ್ಮಿಸಲಾಗಿದೆ ಎನ್ನುತ್ತವೆ ಅಂತರ್ಜಾಲ ಮೂಲಗಳು. ಆದರೆ ಇದಾವುದೂ ನೇರವಾಗಿ ಶಾರದಾಮಂದಿರದ ಜೀರ್ಣೋದ್ಧಾರಕ್ಕೆ ಸಹಕಾರಿಯಾಗಿರುವಂತೆ ತೋರುವುದಿಲ್ಲ. ಕಾರಣ, ಪಾಕಿಸ್ತಾನ ಸರ್ಕಾರವು ಭಕ್ತಾದಿಗಳಿಗೆ ಈ ಪ್ರದೇಶದ ಭೇಟಿಗೆ ಇನ್ನೂ ಮುಕ್ತಾವಕಾಶ ನೀಡಿಲ್ಲ. ನೀಲಂ ಜಿಲ್ಲೆ ಕಾಶ್ಮೀರದ ಆಯಕಟ್ಟಿನ ಸೂಕ್ಷ್ಮ ಪ್ರದೇಶಗಳಲ್ಲೊಂದು ಎಂಬುದು ಪಾಕ್ ಆತಂಕ.

ಹಾಗೆಂದು ಸತತ ಅರ್ಜಿ-ಕೋರಿಕೆಗಳಿಗೆ ಬೇಸತ್ತು ಪಾಕಿಸ್ತಾನವು ಶಾರದಾದರ್ಶನಕ್ಕೆ ಅವಕಾಶ ನೀಡುವ ಸೊಲ್ಲೆತ್ತಿಲ್ಲವೆಂದಲ್ಲ. ಶಾರದಾಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡುವ ಒಕ್ಕಣೆಯನ್ನು ಕಳೆದ ೨೦ ವರುಷಗಳಿಂದ ಘೋಷಿಸಿಕೊಂಡು ಬರುತ್ತಿದೆ. ಆದರೆ ಶಾರದ ಮಂದಿರದ ಜೀರ್ಣೋದ್ಧಾರ ಮಾಡುವಲ್ಲಿ ತೊಡಕಾಗುತ್ತಿರುವುದೇ ಭಾರತದ ಕಡೆಯಿಂದ ಬರುತ್ತಿರುವ ಸತತ ಗುಂಡಿನ ದಾಳಿ ಎಂಬ ಸಬೂಬನ್ನೂ ೨೦೦೪ರಿಂದ ಹೇಳುತ್ತಲೇ ಬಂದಿದೆ.

ಸದ್ಯವರ್ತಮಾನದಲ್ಲಿ ಶಾರದ ಮಂದಿರವು ಪುರಾತನ ಪವಿತ್ರಸ್ಥಳವೆಂದು ಘೋಷಿಸಿಯೇನೋ ಆಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಸುಪ್ರೀಂಕೋರ್ಟ್ ಕೂಡಾ ಸೇವ್ ಶಾರದಾ ಸಂಘಟನೆಯ ಸತತ ಅಹವಾಲುಗಳಿಗೆ ಸ್ಪಂದಿಸಿ ೨೦೧೮ರಲ್ಲಿ ಮಂದಿರದ ರಕ್ಷಣೆಯ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಲು ಸರ್ಕಾರಕ್ಕೆ ಸೂಚಿಸಿದೆ. ಕೆಲವು ಪಾಕ್-ಕಾಶ್ಮೀರಿ ಹಿಂದೂಗಳೂ ಸಂಘಟನೆಯ ನೇತೃತ್ವದಲ್ಲಿ ಕಳೆದ ಜುಲಾಯಿ ೨೦೧೮ರಲ್ಲಿ ಕಿಶನ್ ಗಂಗಾ ನದಿಯ ವರೆಗೆ ಕಲಶ ಯಾತ್ರೆಯನ್ನು ಕೈಗೊಂಡು ಶಾರದಾಮಂದಿರದ ಮುಕ್ತಾವಕಾಶಕ್ಕೆ ಆಗ್ರಹಿಸಿಯೂ ಆಗಿದೆ.

ಇನ್ನೇನಿದ್ದರೂ ಉಭಯದೇಶಗಳೂ ಒಮ್ಮತದಲ್ಲಿ ಜೀರ್ಣೋದ್ಧಾರ, ಯಾತ್ರೆಗಳನ್ನು ನಡೆಸುವುದರ ಬಗ್ಗೆ ಸಾಕಷ್ಟು ಹಂತಗಳನ್ನು ಕ್ರಮಿಸಬೇಕಿದೆ.

 

 

Leave a Reply

*

code