ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 2-ಕರ್ನಾಟಕದ ಮೊದಲ ವಿಶ್ವಕೋಶ ಮೂರನೇ ಸೋಮೇಶ್ವರನ ಮಾನಸೋಲ್ಲಾಸ.

Posted On: Sunday, October 22nd, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ
ಶಾಸ್ತ್ರರಂಗ

ಭಾಗ ೧ : ದಾಕ್ಷಿಣಾತ್ಯ.
ಸಂಚಿಕೆ 2- ಈ ಸಂಚಿಕೆಯಲ್ಲಿ ಕರ್ನಾಟಕದ ಮೊದಲ ವಿಶ್ವಕೋಶವೆಂದೇ ಖ್ಯಾತವಾದ ಅಪ್ರತಿಮ ಸಂಸ್ಕೃತ ಗ್ರಂಥ ಮೂರನೇ ಸೋಮೇಶ್ವರನ ಮಾನಸೋಲ್ಲಾಸ. ಇದರ ಸಂಕ್ಷಿಪ್ತ ವಿಚಾರವೇ ಈ ಸಂಚಿಕೆಯಲ್ಲಿದೆ.

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ.ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

ಮರೆಯದೆ ಈ ವಿಶಿಷ್ಟ ಸಂಚಿಕೆಯನ್ನು ಕೇಳಿ ಆನಂದಿಸಿ….

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 2- First Encyclopedia of Karanataka, Mānasollāsa of King Someshwara III- A sanskrit treatise

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by Nirmiti An abode of Arts and Culture, Bengaluru. (Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ಕರ್ನಾಟಕದ ಮೊದಲ ವಿಶ್ವಕೋಶವೆನಿಸುವಂಥ ಲಕ್ಷಣಗ್ರಂಥ ಮಾನಸೋಲ್ಲಾಸ. ಅಂದರೆ ಮನಸ್ಸನ್ನು ಉಲ್ಲಸಿತಗೊಳಿಸುವುದು ಎಂಬ ಅರ್ಥದ್ದು. ರಾಜರ ಮನಸ್ಸನ್ನು ಸಂತೋಷಪಡಿಸುವುದು ಎಂಬ ಅರ್ಥವನ್ನು ಸ್ಫುರಿಸುವಂತೆ ಎಂದು ಆಲೋಚಿಸಿದರೆ ಇದಕ್ಕೆ ರಾಜಮಾನಸೋಲ್ಲಾಸವೆಂದೂ ಗುರುತಿಸಬಹುದು. ಮೇಲ್ನೋಟಕ್ಕೆ ಇದರ ಶ್ಲೋಕಗಳಲ್ಲಿ ರಾಜನ ಸಂತೋಷ ನೆರವೇರುವುದಕ್ಕೆ ಬೇಕಾದ ಎಲ್ಲ ಭೋಗಗಳ ಕುರಿತು ಬರೆಯಲಾಗಿದೆ ಎನ್ನಬಹುದಾದರೂ ಸೂಕ್ಷ್ಮವಾಗಿ ಗಮನಿಸಿದಾಗ ಆಗಿನ ಕಾಲದ ಜನಜೀವನ ಸಂಸ್ಕೃತಿ ಸಂಸ್ಕಾರ- ಜನಜೀವನ ಗುಣಮಟ್ಟ- ಅಭಿರುಚಿಗಳ ಪರಿಚಯ ಸ್ಪಷ್ಟವಾಗಿ ಆಗುತ್ತದೆ. ಹಾಗೆಂದೇ ಇನ್ನೊಂದು ಹೆಸರೂ ಇದೆ. ಅಭಿಲಾಷಿತಾರ್ಥ ಚಿಂತಾಮಣಿ- ಅಂದರೆ ಅಭಿಲಾಷೆಗಳನ್ನು ನೆರವೇರಿಸುವ ಅಮೂಲ್ಯ ರತ್ನ. ಈ ಗ್ರಂಥ ಬರೆಯಲ್ಪಟ್ಟ ಕಾಲ ೧೧೨೫-೧೧೨೯ನೇ ಇಸವಿ. ಸೋಮೇಶ್ವರನು ಇದನ್ನು ಬರೆಯಲು ಹೊರಟಾಗ ಆತ ಸಿಂಹಾಸನವನ್ನೇರಿ ಎರಡು ವರುಷಗಳಾಗಿದ್ದವು.

ಮೂರನೇ ಸೋಮೇಶ್ವರ- ವೈಯಕ್ತಿಕ ವಿವರಗಳು

ಕಲ್ಯಾಣಿ ಚಾಲುಕ್ಯರ ರಾಜರ ಸಾಲಿನಲ್ಲಿ ಮೂರನೆಯವನು. ತ್ರಿಭುವನಮಲ್ಲನೆಂದು ಹೆಸರಾದ. ಆರನೇ ವಿಕ್ರಮಾದಿತ್ಯ ಮತ್ತು ಅಭಿನವಸರಸ್ವತಿಯೆಂದು ಖ್ಯಾತಳಾದ ರಾಣಿ ಚಂದಲಾದೇವಿಯವರ ಮಗ. ಈತನ ಆಡಳಿತದಲ್ಲಿ ಅನೇಕ ವಿದ್ಯಾಕೇಂದ್ರಗಳು, ಮಠಗಳು ಬಹಳ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟದ್ದು ಕೂಡಾ ತಿಳಿದುಬರುತ್ತದೆ. ಹೀಗಿರುವಾಗ ಆತನ ಆಶ್ರಯವೇ ವಿದ್ಯಾಸ್ಥಾನವಾಗಿತ್ತೆಂದು ಅರ್ಥವಾಗುತ್ತದೆ.

ಸೋಮೇಶ್ವರನ ತಂದೆ ವೀರ ವಿಕ್ರಮಾದಿತ್ಯ ಸುಮಾರು ೬೦ ವರುಷ ರಾಜ್ಯಭಾರ ಮಾಡಿದವ. ಈತ ತನ್ನ ಹೆಸರಿನಲ್ಲಿ ಶಕೆಯನ್ನು ಆರಂಭಿಸಿದವ. ಶಾಸನಗಳಲ್ಲೂ ವಿಕ್ರಮ ಶಕೆ ಎಂಬುದು ಉಲ್ಲೇಖಗೊಂಡಿದೆ. ಪರಮರ್ದಿ ಎಂಬ ಹೆಸರೂ ಈತನದ್ದೇ ಆಗಿದೆಯೆನ್ನುವುದು ತಿಳಿದುಬರುತ್ತದೆ. ಕಾಶ್ಮೀರದ ಬಿಲ್ಹಣ ಕವಿಯು ಈ ರಾಜನ ಆಸ್ಥಾನಕವಿಯಾಗಿದ್ದು ವಿಕ್ರಮಾಂಕದೇವಚರಿತೆ ಎಂಬ ಕಾವ್ಯ ಬರೆಯುವ ಮಟ್ಟಿಗೆ ಪ್ರಖ್ಯಾತನಾಗಿದ್ದ ವೀರ ವಿಕ್ರಮಾದಿತ್ಯ. ಅಷ್ಟೇ ಅಲ್ಲ, ವಿಕ್ರಮಾದಿತ್ಯ ಸ್ವತಃ ಸಂಗೀತಶಾಸ್ತ್ರಕಾರನೂ ಆಗಿದ್ದ. ಈತನನ್ನೇ ಶಾರ್ಙ್ಗದೇವ, ಪಾರ್ಶ್ವದೇವ, ಜಗದೇಕಮಲ್ಲ ಮೊದಲಾದ ಸಂಗೀತ ಲಾಕ್ಷಣಿಕರೂ ಸ್ಮರಿಸಿಕೊಂಡಿದ್ದಾರೆ ಕೂಡಾ. ಸ್ವತಃ ಸೋಮೇಶ್ವರನೂ ಕೂಡಾ ತನ್ನ ತಂದೆಯ ಜೀವನಚರಿತ್ರೆಯನ್ನು ವಿಕ್ರಮಾಂಕಾಭ್ಯುದಯ ಎಂಬ ಹೆಸರಿನಲ್ಲಿ ಚಂಪೂಕಾವ್ಯವಾಗಿ ಬರೆದಿದ್ದ; ಆದರೆ ಅದು ಅಪೂರ್ಣವಾಗಿ ಸಿಗುತ್ತದೆ.

ಇಂಥ ರಾಜ ಸೋಮೇಶ್ವರನು, ತ್ರಿಭುವನ-ಮಲ್ಲ, ಭೂಲೋಕ-ಮಲ್ಲ ಮತ್ತು ಸರ್ವಜ್ಞ-ಭೂಪ ಎಂದು ವಿವಿಧ ರೀತಿಯಲ್ಲಿ ಕೊಂಡಾಡಲ್ಪಟ್ಟ ಮಹೋನ್ನತ ಲಾಕ್ಷಣಿಕ, ವಿದ್ವಾಂಸ, ಕವಿ, ಕಲಾವಿದ; ವೀರ, ಪ್ರಬುದ್ಧ ಆಡಳಿತಗಾರ. ತಂದೆಯ ಆಡಳಿತದ ಅವಧಿಯಲ್ಲಿ ಶಾಸ್ತ್ರಾಭ್ಯಾಸದಲ್ಲಿ ವಿದ್ಯಾವಿನೋದದಲ್ಲಿ ತೊಡಗಿಸಿಕೊಂಡ ಕಾರಣ ಆತನ ಬಹುಮುಖೀ ಅಧ್ಯಯನದ ಫಲವಾಗಿ ಈ ಗ್ರಂಥ ಮೂಡಿತು ಮಾತ್ರವಲ್ಲ; ಮಾನಸೋಲ್ಲಾಸ ಗ್ರಂಥ ಮುಂದಿನ ಅದೆಷ್ಟೋ ಗ್ರಂಥಗಳಿಗೆ ಆಕರವಾಗುವಂತಾಯಿತು. ಈ ಗ್ರಂಥ ರಚನೆಯ ಹಿಂದೆ ಬರೀ ಸೋಮೇಶ್ವರನೊಬ್ಬನೇ ಆಲ್ಲದೆ ಪಂಡಿತ ಮಂಡಲಿಯೂ ಶ್ರಮಿಸಿತ್ತು ಎನ್ನುವುದನ್ನೂ ಸಂಶೋಧಕರು ಅಭಿಪ್ರಾಯಿಸುತ್ತಾರೆ.

ಮಾನಸೋಲ್ಲಾಸ- ರಚನಾಕ್ರಮ

ಸುಮಾರು ೮೦೨೨ ಶ್ಲೋಕಗಳವರೆಗೆ ವಿಸ್ತರಿಸಿರುವ ಮಾನಸೋಲ್ಲಾಸವು ಐದು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಸರ್ವೇಸಾಧಾರಣವಾಗಿ ಲಕ್ಷಣಗ್ರಂಥಗಳು ಬರೆಯಲ್ಪಡುವ ಅನುಷ್ಟುಪ್ ಛಂದಸ್‌ನಲ್ಲಿಯೇ ಇದನ್ನೂ ರಚಿಸಲಾಗಿದೆ. ಪ್ರತಿಯೊಂದೂ ವಿಭಾಗವನ್ನು ವಿಂಶತಿ ಎಂದು ಕರೆಯಲಾಗುತ್ತದೆ. ವಿಂಶತಿ ಎಂದರೆ ೨೦ ಎಂದರ್ಥ. ೨೦ ಗುಣಿಸು ೫ ಅಂದರೆ ೧೦೦ ಅಧ್ಯಾಯಗಳನ್ನು ಇದು ಒಳಗೊಂಡಿದೆ. ಈ ಎಲ್ಲ ಅಧ್ಯಾಯಗಳು ಒಟ್ಟು ೨೦ ವಿಧದ ವಿನೋದಗಳನ್ನು ವಿವರಿಸಿದೆ. ಪ್ರತಿಯೊಂದು ವಿಂಶತಿಗಳಲ್ಲೂ ಶ್ಲೋಕಗಳ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ.

ಮಾನಸೋಲ್ಲಾಸದಲ್ಲಿ ಇಲ್ಲದಿರುವ ವಿಷಯವೇ ಇಲ್ಲವೇನೋ ಎಂಬ ಮಟ್ಟಿಗೆ ಓರ್ವ ಮನುಷ್ಯ ಅನುಭವಿಸಬಹುದಾದ ಎಲ್ಲ ಭೋಗವಸ್ತುಗಳ ವಿವರಣೆಯೂ ಇದೆ. ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳುವ ವಿಧಾನಗಳಿಂದ ಹಿಡಿದು, ಅದನ್ನು ಸ್ಥಾಪಿಸುವ ವಿಧಾನಗಳು, ಖಗೋಳವಿಜ್ಞಾನ, ಜ್ಯೋತಿಷ್ಯ, ಆಹಾರ, ವಾಸ್ತುಶಿಲ್ಪ, ಔಷಧ, ಮಾಂತ್ರಿಕ, ಪಶುವೈದ್ಯಕೀಯ ವಿಜ್ಞಾನ, ಅಮೂಲ್ಯ ರತ್ನಗಳ ಮೌಲ್ಯಮಾಪನ, ಕೋಟೆಗಳು, ಚಿತ್ರಕಲೆ, ಕಲೆ, ಆಟಗಳು, ವಿನೋದಗಳು, ಪಾಕಕಲೆ, ನೃತ್ಯ, ಸಂಗೀತ ಮತ್ತು ಹೀಗೆ; ಆ ಕಾಲದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಗಳು; ಮತ್ತು ವಿವಿಧ ಉದ್ಯೋಗಗಳು ಅದರ ಜನರ ಬಗ್ಗೆ ವಿವರಗಳನ್ನು ಕೊಡುತ್ತದೆ.

ಮಾನಸೋಲ್ಲಾಸ- ಅಧ್ಯಾಯಗಳು

ಮೊದಲನೆಯ ವಿಶಂತಿ

ರಾಜ್ಯ ಪ್ರಕರಣ- ರಾಜ್ಯವನ್ನು ಪಡೆಯುವ ಮತ್ತು ಅದನ್ನು ಸಮರ್ಥವಾಗಿ ಆಳುವ ವಿಧಾನಗಳನ್ನು ವಿವರಿಸುತ್ತದೆ; ತನ್ನ ರಾಜ್ಯವನ್ನು ವಿಸ್ತರಿಸಲು ಬಯಸುವ ರಾಜನಿಗೆ ಅಗತ್ಯವಾದ ಅರ್ಹತೆಗಳು, ಅದನ್ನು ಪಡೆಯುವಲ್ಲಿ ಆತನ ಶ್ರಮ- ಸಾಮರ್ಥ್ಯಗಳು; ರಾಜ್ಯಭಾರದ ಸುಳುಹು-ಸೂಕ್ಷ್ಮಗಳನ್ನು ದಂಡನೀತಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ಹೋಲಿಕೆಯೆಂಬಂತೆ ಗುರುತಿಸಬಹುದು.

ಎರಡನೆಯ ವಿಂಶತಿ

ಪ್ರಾಪ್ತ ರಾಜ್ಯ ಸ್ಥಾಯಿಕರಣವು ರಾಜನ ಸ್ಥಾನವನ್ನು ಬಲವಾಗಿ ಮತ್ತು ಸ್ಥಿರವಾಗಿ ನಿರ್ವಹಿಸುವ ವಿಧಾನಗಳನ್ನು ವಿವರಿಸುತ್ತದೆ; ಮಂತ್ರಿಗಳು- ಕೋಶಾಧಿಕಾರಿಗಳು- ಪುರೋಹಿತ- ಧರ್ಮಾಧಿಕಾರಿ- ಸಾರಥಿ-ಲೇಖಕ- ಪ್ರತೀಹಾರ, ಸಂಧಿವಿಗ್ರಹಿಕ, ಹೀಗೆ ಅನೇಕ ಅಧಿಕಾರಿಗಳಳ ಅರ್ಹತೆಗಳು, ಅವರ ಕರ್ತವ್ಯಗಳು ಮತ್ತು ನೀತಿ ಸಂಹಿತೆಗಳು, ಹೀಗೆ,. ರಾಜ್ಯಪಾಲನೆಯ ವಿಧಾನಗಳು, ಅದರ ಮೂಲಸೌಕರ್ಯ, ವಾಸ್ತುಶಿಲ್ಪ, ಸೈನ್ಯದ ನಿರ್ವಹಣೆ ಮತ್ತು ತರಬೇತಿ, ಸೇನಾಪತಿಯ ಸಾಮರ್ಥ್ಯಗಳು ಮತ್ತು ಜವಾಬ್ದಾರಿಗಳು, ಖಜಾನೆ ಮತ್ತು ತೆರಿಗೆಯ ಆಡಳಿತ, ಚತುರೋಪಾಯಗಳು, ನಿಧಿಸಂಗ್ರಹ, ವಿಜಯಯಾತ್ರೆ, ಯುದ್ಧಕಾಲದ ಕ್ರಮ, ಇದರಲ್ಲೇ ಸೈನ್ಯಕ್ಕೆ ಸೇವೆ ಸಲ್ಲಿಸುವ ಪಶುವೈದ್ಯಕೀಯ ಆರೈಕೆ, ಪೋಷಣೆ ಮತ್ತು ತರಬೇತಿಯ ಅಧ್ಯಾಯಗಳನ್ನು ಒಳಗೊಂಡಿದೆ.

ಮೂರನೆಯ ವಿಂಶತಿ

ಇಪ್ಪತ್ತು ಬಗೆಯ ಉಪಭೋಗಗಳನ್ನು ವಿವರಿಸುತ್ತದೆ. ಗೃಹ- ಸ್ನಾನ- ಪಾದುಕಾ- ತಾಂಬೂಲ-ವಿಲೇಪನ-ವಸ್ತ್ರ- ಮಾಲ್ಯ- ಭೂಷಣ- ಆಸನ- ಚಾಮರ- ಆಸ್ಥಾನ- ಪುತ್ರಭೋಗ-ಅನ್ನ-ಪಾನೀಯ-ಪಾದಾಭ್ಯಂಗ- ಯಾನ- ಛತ್ರ- ಶಯ್ಯಾ- ಧೂಪ ಮತ್ತು ಸ್ತ್ರೀ ಎಂಬ ೨೦ ಉಪಭೋಗಗಳಿವೆ. ಆ ಪೈಕಿ ದೇವಾಲಯ- ಪ್ರಾಸಾದ-ಗೃಹಗಳ ನಿರ್ಮಾಣ, ವಾಸ್ತುಶಿಲ್ಪದ ವಿವರವುಳ್ಳ ಮೊದಲನೆಯ ಅಧ್ಯಾಯ ಬಹಳ ದೊಡ್ಡದು. ಇದರಲ್ಲೇ ಮೂರ್ತಿಕೆತ್ತನೆ, ಚಿತ್ರಕಲೆಯ ವಿವರಗಳಿವೆ. ಆ ಬಳಿಕದ ಉಪಭೋಗಗಳಲ್ಲಿ ಅನ್ನ, ಆಭರಣಗಳು-ಮುತ್ತು ರತ್ನಗಳು, ಸುಗಂಧ ದ್ರವ್ಯಗಳು, ಧೂಪದ್ರವ್ಯ ಉಡುಪುಗಳು, ಆಕರ್ಷಕ ಹೂಮಾಲೆಗಳು, ಆಸನ-ರಥಗಳು- ಛತ್ರಿ- ಯಾನ, ಅಂಗಮರ್ದನದ ಕ್ರಮ ಮತ್ತು ಆಟಗಳು ಸೇರಿದಂತೆ ರಾಜನ ಜೀವನಕ್ಕಷ್ಟೇ ಅಲ್ಲದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳಿಗೂ ಹೊಂದುವಂತೆ ಉಪಭೋಗಗಳ ಕರ್ತವ್ಯ, ಜವಾಬ್ದಾರಿ, ಸೂಕ್ಷ್ಮಗಳ ವಿವರಣೆಗಳಿವೆ. ಪಾಕವಿಧಾನಗಳು, ಅದರ ತಯಾರಿ, ಬಡಿಸುವ ಕ್ರಮ, ಪಾನೀಯಗಳ ಕ್ರಮ, ಆರೋಗ್ಯದ ಪಾಲನೆ, ವಿವಿಧ ಬಗೆಯ ಚಿಕಿತ್ಸೆಗಳು, ಹೀಗೆ ಅನೇಕಾನೇಕವಾಗಿ ಇವೆ. ವಸ್ತ್ರೋಪಭೋಗ ಅಧ್ಯಾಯದಲ್ಲಿ ವಿವಿಧ ಪ್ರದೇಶಗಳ ಬಟ್ಟೆಗಳ ವಿವರಗಳು ಕಾಣಸಿಗುತ್ತವೆ. ತಾಂಬೂಲಭೋಗ ಅಧ್ಯಾಯದಲ್ಲಿ ತಾಂಬೂಲ ಸಾಮಗ್ರಿಗಳನ್ನು ಬೆಳೆವ ಪ್ರದೇಶಗಳ ಬಗ್ಗೆ ಮಾಹಿತಿಗಳಿವೆ. ಅನ್ನಭೋಗ ಅಧ್ಯಾಯದಲ್ಲಿ ಇಡ್ಲಿ, ಹೋಳಿಗೆ, ಮಂಡಿಗೆ, ವಡೆ ಮೊದಲಾಗಿ ಹಲವು ರೀತಿಯಾಗಿ ಇಂದಿನ ಕಾಲಕ್ಕೂ ಪ್ರಸಿದ್ಧವಾಗಿರುವ ಸಾಂಪ್ರದಾಯಿಕ ಸಿಹಿತಿಂಡಿ, ಕರಿದ ತಿಂಡಿ ಎಂಬ ಭಕ್ಷ್ಯಭೋಜ್ಯ ಪದಾರ್ಥಗಳನ್ನು, ಮಾಂಸಾಹಾರದ ವಿವರಗಳನ್ನು ಕೂಡಾ ತಿಳಿಸಲಾಗಿದೆ. ವಿವಿಧ ರೀತಿಯ ಔಷಧಿಗಳನ್ನು ಮಾಡುವ ಕ್ರಮ, ಅವು ಸಿಗುವ ದೇಶ, ಎಲೆಗಳನ್ನು ಗುರುತಿಸುವ ಕ್ರಮ, ಋತುಗಳನ್ನು ಗಮನಿಸಿ ಮಾಡಬೇಕಾದಾ ಉಪಚಾರಗಳು, ಮಾನವ-ಪಕ್ಷಿ ಪ್ರಾಣಿಗಳ ಶರೀರ ಪ್ರಕೃತಿ.., ಹೀಗೆ ಇಲ್ಲಿ ಹೇಳಲಾದ ಆದಿಭೌತಿಕವಾದ ಎಲ್ಲ ಸಾಮಗ್ರಿಗಳನ್ನು ಪಟ್ಟಿ ಮಾಡಹೊರಟರೆ ಒಂದೊಂದು ಅಧ್ಯಾಯವೂ ಕುತೂಹಲಕರ, ವಿಸ್ಮಯಕರ. ಹಾಗೆಯೇ ಮನೋಜ್ಞವಾದ ನಿರೂಪಣೆಯೂ ಕೂಡಾ ನಮ್ಮನ್ನು ಚಕಿತರನ್ನಾಗಿ ಮಾಡಿಬಿಡುತ್ತದೆ. ಮಾನ – ಪ್ರಮಾಣ ವರ್ಗ-ವರ್ಣವನ್ನಾಶ್ರಯಿಸಿ ಮಾನವ ಜೀವನದ ಹಲವು ಮುಖಗಳನ್ನು ಔಚಿತ್ಯಪೂರ್ಣವಾಗಿ ಕಣ್ಣ ಮುಂದೆ ತರುತ್ತದೆ.

ನಾಲ್ಕನೇ ವಿಂಶತಿ

ಇದು ವಿನೋದದ ಅಧ್ಯಾಯಗಳಿಗೆ ಮೀಸಲಾಗಿದೆ. ಕತ್ತಿ, ಗುರಾಣಿ ಮೊದಲಾದ ಶಸ್ತ್ರಗಳು ಮತ್ತು ಧನುರ್ವಿದ್ಯೆಗೆ ಸಂಬಂಧಿಸಿಂತೆ ವಿವಿಧ ಅಸ್ತ್ರಗಳ ಸ್ವರೂಪ, ಅದರ ತಯಾರಿಕೆ, ಸ್ಥಾನಗಳು, ಅವುಗಳನ್ನು ವಿನೋದಕ್ಕೆಂದು ಬಳಸುವ ಕ್ರಮ ಮೊದಲಾದವನ್ನು ಹೇಳಲಾಗಿದೆ. ಬಳಿಕ ಕವಿತ್ವ, ವಾಕ್ಚಾತುರ್ಯ, ಪಾಂಡಿತ್ಯಪೂರ್ಣ ಚರ್ಚೆಗಳ ಶಾಸ್ತ್ರವಿನೋದಾಧ್ಯಾಯ ಇದೆ. ಅನಂತರದಲ್ಲಿ ಪ್ರಾಣಿಪಕ್ಷಿಗಳ ಕ್ರೀಡಾವಿನೋದಗಳು. ಎಂತೆಂಥ ವಿನೋದಗಳು ಅಂದರೆ – ಆನೆ ಸವಾರಿ, ಕುದುರೆ ಸವಾರಿ, ಕುಸ್ತಿ-ಮಲ್ಲವಿನೋದ, ಕೋಳಿ ಕಾಳಗ, ಲಾವಕಿ ಎಂಬ ಬೇಟೆಪಕ್ಷಿಗಳ ಕಾಳಗ, ಟಗರು ಕಾದಾಟಗಳು, ಎಮ್ಮೆ ಕಾಳಗಗಳು, ಪಾರಿವಾಳ ಕಾದಾಟ, ಗಿಡುಗ ಮತ್ತು ನಾಯಿಗಳ ಆಟಗಳು, ಮೀನುಗಾರಿಕೆ ಹಂದಿ-ಜಿಂಕೆ ಮತ್ತು ಪಕ್ಷಿಗಳ ಬೇಟೆ ಮಾಡುವ ೩೧ ಬಗೆಯ ಕ್ರಮಗಳು,.., ಹಾಗೂ ಇವೆಲ್ಲದಕ್ಕೂ ಮಾಡಬೇಕಾದ ತಯಾರಿ, ಪ್ರಾಣಿ ಪಕ್ಷಿಗಳ ಲಾಲನೆ ಪಾಲನೆ, ಆಹಾರ, ತರಬೇತಿಯ ಕ್ರಮ.. ಎಲ್ಲವನ್ನೂ ಹೇಳುತ್ತದೆ. ಇವುಗಳಲ್ಲಿ ಇಂದಿಗೆ ಬಹಳಷ್ಟು ವಿನೋದಗಳು ಬಳಕೆಯಲ್ಲೇ ಇಲ್ಲ.

ಮಾನಸೋಲ್ಲಾಸ ಗಾಯನ ಸಂಗೀತ, ವಾದ್ಯಸಂಗೀತ, ನೃತ್ಯ, ಕಥೆ ಹೇಳುವಿಕೆ ಮತ್ತು ಇಂದ್ರಜಾಲಗಳ ಬಗ್ಗೆಯೂ ಸಾಕಷ್ಟು ಬರೆದಿದೆ. ಸಂಗೀತ ಮತ್ತು ನೃತ್ಯದ ವಿಷಯಗಳನ್ನು ವಿನೋದ ವಿಂಶತಿಯ ಹದಿನಾರರಿಂದ ಹದಿನೆಂಟನೆಯ ಅಧ್ಯಾಯಗಳಲ್ಲಿ ಕಾಣಬಹುದು. ಗೀತಾ ವಿನೋದ, ವಾದ್ಯ ವಿನೋದ; ನೃತ್ಯ ವಿನೋದ ಎಂಬ ಶೀರ್ಷಿಕೆಗಳನ್ನ ಇ‌ಈ ಅಧ್ಯಾಯಕ್ಕೆ ಕೊಡಲಾಗಿದೆ. ಅಂತೆಯೇ ಕಥೆಗಳನ್ನು ರಸವತಾಗಿ ಬಣ್ಣಿಸುವ ಕಲಾಪ್ರಕಾರಗಳನ್ನು ನೆನಪಿಸುವಂತೆ ಒದಗುವಂಥ ಕಥಾವಿನೋದ, ಜಾದೂಗಾರಿಕೆಯ ಚಮತ್ಕಾರವಿನೋದ ಎಂಬ ಅಧ್ಯಾಯಗಳೂ ಪ್ರಮುಖವಾಗಿವೆ.

ಅದರೊಳಗೂ ನೃತ್ಯವಿದ್ಯೆಯ ಬಗ್ಗೆ ಸ್ಥೂಲ ಅವಲೋಕನವನ್ನು ಮಾಡುವುದಾದರೆ- ಸೋಮೇಶ್ವರನಲ್ಲೇ ಮೊದಮೊದಲೆಂಬಂತೆ ಮಾರ್ಗೋತ್ತರ ಕಾಲದಲ್ಲಿ ಪ್ರಸಿದ್ಧವಾಗಿದ್ದ ತಾಂಡವ, ಲಾಸ್ಯ, ವಿಕಟ, ವಿಷಮ, ಲಘು ಮೊದಲಾದ ಆರು ವಿಧಗಳ ನೃತ್ಯಗಳು ಮತ್ತು ಅದನ್ನಾಡುವ ನಟ, ನರ್ತಕಿ, ಕೊಲ್ಲಟಿಕ, ಚಾರಣ, ವೈತಾಳಿಕಾ ಮೊದಲಾದ ಆರು ವಿಧದ ನರ್ತಕರ ವಿಚಾರ ಕಂಡುಬರುತ್ತದೆ. ಮತ್ತು ಇವುಗಳನ್ನು ನರ್ತಿಸುವುದಕ್ಕೆ ಅವಶ್ಯವಿರುವ ಆಂಗಿಕಾಭಿನಯಗಳನ್ನು ಅಂದರೆ ಅಂಗೋಪಾಂಗ ಅಭಿನಯ, ಸ್ಥಾನಕ, ಚಾರಿಗಳನ್ನು ವಿಶೇಷವಾಗಿ ವಿವರಿಸಲಾಗಿದೆ. ಭರತನು ನಾಟ್ಯಶಾಸ್ತ್ರದಲ್ಲಿ ಹೇಳಿದ ವಿಚಾರಗಳನ್ನು ಕೂಡಾ ಎಷ್ಟೋ ಕಡೆ ಪುನರುಕ್ತಿಸಲಾಗಿದೆ. ಮತ್ತು ಆಯಾ ಕಾಲಕ್ಕೆ ವಿಶೇಷವಾಗಿ ಕಂಡುಬರುವ ಲಕ್ಷಣವಿಸ್ತರಣೆಯನ್ನೂ ಕೂಡಾ ಈ ಗ್ರಂಥದಲ್ಲಿ ಪ್ರಪ್ರಥಮವೆಂಬಂತೆ ಕಾಣಬಹುದು. ದೇಶೀ ಎಂದು ಇಂದಿನ ಕಾಲಕ್ಕೆ ಹೆಸರಾದ ಎಷ್ಟೋ ಹೊಸ ಬಗೆಯ ಹೆಸರುಳ್ಳ ಸ್ಥಾನಕ, ಚಾರಿಗಳನ್ನೂ ಮೊದಮೊದಲೆಂಬಂತೆ ತೋರಿಸಿಕೊಡುವ ಗ್ರಂಥ ಮಾನಸೋಲ್ಲಾಸವೇ. ಜೊತೆಗೆ ವಿಕಟ-ವಿಷಮಾದಿ ನೃತ್ಯಗಳಿಗೆ ಬೇಕಿರುವ ಉತ್ಲ್ಪುತಿ ಕರಣಗಳು ಅಂದರೆ ಉತ್ ಪ್ಲುತಿ- ಹಾರುವ ನೆಗೆಯುವ ಚಮತ್ಕಾರಿಕವಾದ ಕರಣಗಳ ಲಕ್ಷಣಗಳು ಕೂಡಾ ಪ್ರಪ್ರಥಮವೆಂಬಂತೆ ಇಲ್ಲಿ ಕಂಡೂಬರುತ್ತವೆ. ಇವೇ ವರ್ಗೀಕರಣಗಳನ್ನು ಮುಂದಿನ ಅದೆಷ್ಟೋ ಶಾಸ್ತ್ರಜ್ಞರು ಅನುಸರಿಸಿ ಬೆಳೆಸುತ್ತಾರೆ. ಈ ವಿಚಾರ ಸುಮಾರು ಐನೂರು ವರುಷಗಳ ಅನಂತರಕ್ಕೂ ಸಿಂಹಭೂಪಾಲ, ಪಂಡರೀಕ ವಿಠಲರ ವರೆಗೂ ಕಂಡುಬರುತ್ತದೆ. ಆದರೆ ಉತ್ಪ್ಲುತಿ ಕರಣಕ್ಕೆ ಸಂಬಂಧಿಸಿದಂತೆ ಈ ಗ್ರಂಥವು ಮಾಡಿದ ವರ್ಗೀಕರಣಗಳು ಈ ಗ್ರಂಥದ ಅನಂತರಕ್ಕೆ ಕಂಡುಬರುವ ಮತ್ತೆಷ್ಟೋ ಗ್ರಂಥಗಳಿಗಿಂತ ಬಹಳ ಮಟ್ಟಿಗೆ ಯುಕ್ತವಾದ ಕ್ರಮವುಳ್ಳವೂ ಆಗಿವೆ. ವಿಚಿತ್ರವೆಂದರೆ ಉತ್ಪ್ಲುತಿ ಕರಣಗಳ ಬಗ್ಗೆ, ನಾಟ್ಯಶಾಸ್ತ್ರದ ಅಂಗೋಪಾಂಗ ಅಭಿನಯಗಳ ಬರೆಯುವ ಸೋಮೇಶ್ವರನ ಗ್ರಂಥದಲ್ಲಿ ನಾಟ್ಯಶಾಸ್ತ್ರದ ಮಾರ್ಗಕರಣಗಳ ವಿಚಾರ ಕಂಡುಬರುವುದಿಲ್ಲ. ಅಷ್ಟನ್ನೆಲ್ಲ ಬರೆದವನು ನಾಟ್ಯಶಾಸ್ತ್ರದ ಕರಣಗಳನ್ನು ಏಕೆ ಹೆಸರಿಸದೇ ಹೋಗಿರಬಹುದು? ಎಂದು ವಿಚಾರ ಮಾಡಿದಾಗ ಬಹುಷಃ ಆ ಭಾಗ ಲುಪ್ತವಾಗಿರಬಹುದು ಎಂದೇ ಈ ಲೇಖಿಕೆಯ ಗ್ರಂಥ ಯಕ್ಷಮಾರ್ಗಮುಕುರ ಅಭಿಪ್ರಾಯಪಡುತ್ತದೆ.[1]

ಐದನೇ/ ಕೊನೆಯ ವಿಂಶತಿ

ಇದು ೨೦ ಬಗೆಯ ವಿವಿಧ ಕ್ರೀಡಾದಿ ಮನರಂಜನೆಗಳನ್ನು ವಿವರಿಸುತ್ತದೆ. ಭೂಧರ ಕ್ರೀಡೆ ಎಂಬುದರಲ್ಲಿ ಉದ್ಯಾನ ವಿನ್ಯಾಸ, ಸಸ್ಯಗಳು ಮತ್ತು ಅವುಗಳ ಪ್ರಭೇದಗಳು, ಕೃತಕ ಕೊಳಗಳು, ವಿವಿಧ ಬಗೆಯ ಮರಗಳ ಲಕ್ಷಣಗಳು ಮರಗಳನ್ನು ಬೆಳೆಸುವ ಕ್ರಮ, ಬೇಕಾದ ಮಣ್ಣು, ಬೀಜಗಳು, ಸಸ್ಯಗಳು ಮತ್ತು ಮರಗಳ ನಡುವಿನ ಅಂತರ, ಗೊಬ್ಬರವನ್ನು ತಯಾರಿಸುವ ವಿಧಾನಗಳು, ಉದ್ಯಾನವನ್ನು ನಿರ್ವಹಿಸುವ ವಿಧಾನಗಳು, ಹೀಗೆ ಎಷ್ಟೋ ವಿಚಾರಗಳೂ ಇವೆ. ವನಕ್ರೀಡೆಯಲ್ಲಿ ಕೃತಕ ವನಗಳ ನಿರ್ಮಾಣದ ಸಹಿತ ವನವಿಹಾರದ ಎಲ್ಲ ಆಯಾಮಗಳನ್ನು ವಿವರಿಸಲಾಗಿದೆ. ಆಂದೋಲನ ಕ್ರೀಡಾ ಅಂದರೆ ಉಯ್ಯಾಲೆ ಆಟ, ವಿವಿಧ ಬಗೆಯ ನೀರೆರೆಚುವ ಆಟ, ಜಲಕ್ರೀಡೆಗಳು, ಹುಲ್ಲುಗಾವಲು ಮತ್ತು ಮರಳಿನ ದಿಣ್ಣೆಯಲ್ಲಿ ಆಡುವ ಶಾದ್ವಲ ಮತ್ತು ವಾಲುಕಾ ಕ್ರೀಡೆಗಳು, ಬೆಳದಿಂಗಳಿನಲ್ಲಿ ಆಡುವ ಜ್ಯೋತ್ಸ್ನಾ ಕ್ರೀಡಾ, ಸಸ್ಯಗಳು ಸೊಂಪಾಗಿ ಬೆಳೆದಿರುವಲ್ಲಿ ಆಡುವ ಸಸ್ಯಕ್ರೀಡಾ, ಮದಿರಾಪಾನ ಮತ್ತು ಮಾಡುವ ವಿಧಾನ, ಒಗಟು ಬಿಡಿಸುವ ಅಂದರೆ ಪ್ರಹೇಲಿಕೆಗಳ ಕ್ರೀಡೆ, ಚದುರಂಗ, ಪಗಡೆ, ಕವಡೆ, ಮತ್ತು ಚೌಕಾಬಾರ ಇಲ್ಲವೇ ಐದು ಗರಗದಂತೆ ತೋರುವ ಫಂಜಿಕಾಕ್ರೀಡೆ, ಮುಷ್ಟಿಯಿಂದ ಗುದ್ದಿ ಮುರಿಯುವ, ಸೀಳುವ ಅಥವಾ ಹಸ್ತಲಾಘವವನ್ನು ಗಮನಿಸಿ ಆಡುವ ಫಣಿದಾಕ್ರೀಡೆ ಮತ್ತು ಅವುಗಳಿಗೆ ಅವಶ್ಯವಿರುವ ಸಾಮಗ್ರಿ- ಕ್ರಮ-ವಿಧಿಗಳನ್ನು ವಿವರಿಸಲಾಗಿದೆ.

ಸಮಾಪನ

ಒಟ್ಟಿನಲ್ಲಿ ಸೋಮೇಶ್ವರನೇ ಹೇಳಿಕೊಂಡಂತೆ ಮಾನಸೋಲ್ಲಾಸವು ಸರ್ವಶಾಸ್ತ್ರಸಂಪನ್ನವಾದ ಜಗದಾಚಾರ್ಯ ಗ್ರಂಥ. ಜೀವನಕಲೆಯನ್ನು ಭವ್ಯವಾಗಿ ಚೆಂದವಾಗಿ ಕಾಣುವಲ್ಲಿ ಬೇಕಾದ ಎಲ್ಲ ರೀತಿಯ ಅಂಶಗಳನ್ನು ಭೋಗ, ಉಪಭೋಗ, ವಿನೋದ, ಕ್ರೀಡೆ ಎಂಬ ಹೆಸರುಗಳಿಂದ ಬಹು ಸೊಗಸಾಗಿ ಚಿತ್ರಿಸುತ್ತದೆ. ಅರ್ಥ ಕಾಮಗಳೆಂಬ ಪುರುಷಾರ್ಥಗಳು ಧರ್ಮುಮುಖವಾಗಿ ಸಾಗುವ ಅಷ್ಟೂ ಚಿತ್ರಣ ಮತ್ತು ಅದರಿಂದ ದೊರಕಬಹುದಾದ ಸುಖ, ಸಂತೋಷ, ಆನಂದ, ಅನುಕೂಲಗಳ ವಿಶ್ವಕೋಶವೇ ಇದಾಗಿದೆ. ಅಂದಿನ ದಿನಗಳ ಆ ವೈಭೋಗವನ್ನು, ಅದನ್ನು ಹಿಡಿದಿಟ್ಟ ವಿದ್ವತ್ತನ್ನು ಗಮನಿಸಿದಾಗ ರಾಜ ಮಹಾರಾಜರಷ್ಟೇ ಅಲ್ಲದೆ ಅವರೊಂದಿಗೆ ತೊಡಗಿಕೊಳ್ಳುತ್ತಿದ್ದ ಸಮಸ್ತ ಪ್ರಜಾವರ್ಗವೂ ಎಷ್ಟೊಂದು ಶ್ರೀಮಂತರು; ನಮ್ಮ ಪ್ರಾಚೀನರು ಬದುಕು-ಭಾವ- ಗುಣ- ವಿದ್ಯೆ ಮತ್ತು ಸಂಪತ್ತಿನಲ್ಲಿ ಎಷ್ಟು ಉದಾರಿಗಳು, ಶ್ರೇಷ್ಠರು ಎಂದು ಗಮನಿಸಿ ಮೂಗಿನ ಮೇಲೆ ಬೆರಳಿಡುವಂತೆ ಆಗುತ್ತದೆ. ಇದಕ್ಕಾಗಿ ಸನಾತನ ಧರ್ಮದ ಅರ್ಥಶಾಸ್ತ್ರ, ಆಯುರ್ವೇದ, ಜ್ಯೋತಿಷ, ಪುರಾಣ, ಧರ್ಮಶಾಸ್ತ್ರ, ಕಾಮಶಾಸ್ತ್ರ, ನಾಟ್ಯಶಾಸ್ತ್ರ ಮೊದಲಾದ ಅನೇಕ ಜೀವನೋಪಯೋಗಿ ಶಾಸ್ತ್ರಗಳ ನೆರವಿನಿಂದ ನೂರೆಂಟು ವಿಧವಾದ ಅನೇಕ ಜ್ಞಾನಸಂಪತ್ತನ್ನು ಮತ್ತು ಆ ಕಾಲದ ಲೌಕಿಕವನ್ನೂ ಗಮನಿಸಿಕೊಳ್ಳಲಾಗಿದೆ. ಮನಸ್ಸಿನ ಉಲ್ಲಾಸಕ್ಕೆ ಎಷ್ಟೆಲ್ಲ ದಾರಿಗಳು ಇವೆ, ಯಾವ ದಾರಿ ಉತ್ತಮ, ಯಾವ ದಾರಿ ಕ್ಲಿಷ್ಟ, ಯಾವ ದಾರಿ ಬೇಡ, ಯಾವುದು ಬೇಕು, ಯಾವುದು ಸವಾಲಿನದ್ದು.. ಎಂಬುದು ಅರ್ಥವಾಗುವಂತೆ ವಿವರಿಸಿದ ಕ್ರಮ ನೋಡಿದರೆ ಎಷ್ಟೊಂದು ವಿವೇಕಿಗಳು ನಮ್ಮ ಪ್ರಾಚೀನರು, ಎಷ್ಟೊಂದು ವೈಶಾಲ್ಯವುಳ್ಳದ್ದು ನಮ್ಮ ಸನಾತನ ಧರ್ಮ ಎನ್ನುವುದೂ ಅರ್ಥವಾಗುತ್ತದೆ. ಇನ್ನೂ ಸಂತೋಷದ ಸಂಗತಿಯೆಂದರೆ – ಇಂಥ ವಿಶಿಷ್ಟವೂ, ಅಸಾಮಾನ್ಯವೂ ಆದ ಸಾಮಾಜಿಕ-ಸಾಂಸ್ಕೃತಿಕ-ರಾಜ್ಯಜೀವನದ ವಿಶ್ವಕೋಶವು ನಮ್ಮ ಕರ್ನಾಟಕದ ಕೊಡುಗೆ, ಅರಸು ಮನೆತನದ ಶ್ರೇಷ್ಠ ಭೂಪಾಲನ ಮತ್ತು ಅಂದಿನ ಜನವರ್ಗದ ಪರಿಶ್ರಮ.

ಪರಾಮರ್ಶನ ಗ್ರಂಥಗಳು

ಶ್ರೀ ಸೋಮೇಶ್ವರ ಭೂಪತಿ ವಿರಚಿತ ಮಾನಸೋಲ್ಲಾಸ, ಪ್ರಧಾನ ಸಂಪಾಕದರು – ಪ್ರೊ ಮಲ್ಲೇಪುರಂ ವೆಂಕಟೇಶ. 2015. ಕರ್ನಾಟಕ ಸಂಸ್ಕೃತವಿಶ್ವವಿದ್ಯಾನಿಲಯ ಮತ್ತು ದರೇಸ ಪಬ್ಲಿಕೇಶನ್ ನ ಪ್ರಕಟಣೆ.

Leave a Reply

*

code