ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 3- ನಿಃಶಂಕ ಶಾರ್ಙ್ಗದೇವನ ಸಂಗೀತರತ್ನಾಕರ

Posted On: Sunday, October 29th, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ
ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 3- ಅಸಾಮಾನ್ಯ ಶಾಸ್ತ್ರಕಾರ, ಕನ್ನಡತನವನ್ನು ಅತ್ಯುತ್ಕೃಷ್ಟ ಮಟ್ಟದಲ್ಲಿ ಮೆರೆದ ಕರಣಾಧಿಪ ನಿಃಶಂಕ ಶಾರ್ಙ್ಗದೇವನ ಸಂಗೀತರತ್ನಾಕರ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ.ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 3- Sangīta Ratnākara of Śār̥ngadeva

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ಸಂಗೀತಶಾಸ್ತ್ರದ ಉದ್ಗ್ರಂಥ ಸಂಗೀತರತ್ನಾಕರ. ಇದನ್ನು ಬರೆದವ ಶಾರ್ಙ್ಗದೇವ. ಶ್ರೀಮನ್ನಾರಾಯಣನ ಧನಸ್ಸಿನ ಅಭಿಧಾನ ಅಭಿಮಾನವನ್ನು ಹೊತ್ತ ಹೆಸರು ಈತನದ್ದು. ಹಾಗೆಯೇ ಇವನನ್ನು ಸಾರಂಗದೇವ, ಚಾಂಗದೇವ ಎಂದೂ ಗುರುತಿಸುವುದಿದೆ. ಅಂದಾಜು ೧೨೧೦-೧೨೪೭ನೇ ಇಸವಿ ಈ ಗ್ರಂಥರಚನೆಯ ಕಾಲಮಾನ. ಸಂಗೀತರತ್ನಾಕರ- ಇಲ್ಲಿ ಸಂಗೀತವೆಂದರೆ ಗೀತ-ವಾದ್ಯ-ನೃತ್ಯಗಳ ಸಮಾಹಾರವೆನಿಸುವ ಪರಿಭಾಷೆ. ರತ್ನಾಕರ, ರತ್ನಗರ್ಭ ಎನ್ನುವುದು ಸಮುದ್ರರಾಜ ಎಂದರೆ ಸಮುದ್ರಕ್ಕೆ ಇರುವ ಅಭಿಧಾನಗಳಲ್ಲೊಂದು. ಪ್ರಾಚೀನಭಾರತದಲ್ಲಿ ಹಿಂದೂ ಮಹಾಸಾಗರಕ್ಕಿದ್ದ ಅರ್ಥಪೂರ್ಣವಾದ ಹೆಸರು ರತ್ನಾಕರ ಎಂದೇ. ಅಂದರೆ ಸಂಗೀತದ ಲಕ್ಷ್ಯ-ಲಕ್ಷಣಗಳಿಗೆ ಸಾಗರಪ್ರಾಯಿಯಾದ ಗ್ರಂಥ ಎಂಬರ್ಥದಲ್ಲಿ ಇದು ಸಂಗೀತ ರತ್ನಾಕರವೆಂದು ಕೀರ್ತಿಸಲ್ಪಟ್ಟಿದೆ.

ಶಾರ್ಙ್ಗದೇವ- ವೈಯಕ್ತಿಕ ವಿವರಗಳು

ಭರತಮುನಿಯ ನಾಟ್ಯಶಾಸ್ತ್ರದ ವ್ಯಾಖ್ಯಾನಕಾರರಲ್ಲಿ ಪ್ರಸಿದ್ಧನಾದವ ಹತ್ತನೇ ಶತಮಾನದ ಆಸುಪಾಸಿಗೆ ಸಲ್ಲುವ ಕಾಶ್ಮೀರದ ಪ್ರತ್ಯಭಿಜ್ಞಾಶೈವ ಸಿದ್ಧಾಂತ ದರ್ಶನದ ಆಚಾರ್ಯ ಅಭಿನವಗುಪ್ತ. ಆತನ ಅನೇಕ ಲಕ್ಷಣ ವ್ಯಾಖ್ಯೆಗಳನ್ನು ಶಾರ್ಙ್ಗದೇವನ ಶಾಸ್ತ್ರಲಕ್ಷಣಭೇದಗಳು ಅನುಕರಿಸಿದಂತಿವೆ. ಹಾಗೆ ನೋಡಿದರೆ ಶಾರ್ಙ್ಗದೇವನ ಪೂರ್ವಿಕರು ಕೂಡಾ ಕಾಶ್ಮೀರದವರು. ವೃಷಗಣವೆಂಬ ಗೋತ್ರದ ಬ್ರಾಹ್ಮಣ ಕುಟುಂಬ. ಶಾರ್ಙ್ಗದೇವನ ತಾತ ಭಾಸ್ಕರದೇವ, ಆಯುರ್ವೇದ ವೈದ್ಯರು. ಭಾರತೀಯ ಉಪಖಂಡದ ವಾಯವ್ಯ ಪ್ರದೇಶಗಳಲ್ಲಿ ಇಸ್ಲಾಮಿಕ್ ಆಕ್ರಮಣ ಮತ್ತು ದೆಹಲಿ ಸುಲ್ತಾನರ ಪ್ರಾರಂಭದ ಯುಗದಲ್ಲಿ, ಅವರ ಕುಟುಂಬವು ದಕ್ಷಿಣಕ್ಕೆ ವಲಸೆ ಬಂದು ೧೧೭೩ರಿಂದ ೧೧೯೨ರಲ್ಲಿ ಆಳಿದ ಸೇವುಣ ಯಾದವ ರಾಜ ಭಿಲ್ಲಮನ ಆಶ್ರಯ ಪಡೆದರು. ಅನಂತರ ೧೨೦೦ಸಾಮಾನ್ಯ ಶಕದಲ್ಲಿ ಎರಡನೇ ಸಿಂಹನ/ಸಿಂಗನ ಪೋಷಣೆಗೆ ಬಂದರು.

ಉತ್ತರಕರ್ನಾಟಕ, ಮಹಾರಾಷ್ಟ್ರ ಪ್ರಾಂತ್ಯವನ್ನು ಆಳುತ್ತಿದ್ದ ದೇವಗಿರಿಯ ಈ ಯಾದವ ಸೇವುಣ ದೊರೆಗಳು ಮೂಲತಃ ಕಲ್ಯಾಣದ ಚಾಲುಕ್ಯ ಅರಸರಿಗೆ ಸಾಮಂತ ಸಂಸ್ಥಾನವಾಗಿದ್ದವರು. ಅಚ್ಚ ಕನ್ನಡಿಗರು. ಕ್ರಮೇಣ ಸ್ವತಂತ್ರ ರಾಜ್ಯಭಾರ ಘೋಷಿಸಿಕೊಂಡಿದ್ದರೂ ಕನ್ನಡವನ್ನೇ ರಾಜ್ಯಾಡಳಿತ ಭಾಷೆಯಲ್ಲೊಂದಾಗಿ ಬಳಸುತ್ತಿದ್ದವರು. ಶಾರ್ಙ್ಗದೇವನ ತಂದೆ ಸೋಡಲದೇವನು ಕರಣಿಕ ಮುಖ್ಯಸ್ಥನಾಗಿ ಅಂದರೆ ಲೆಕ್ಕಪತ್ರ ವ್ಯವಹಾರದ ಸುಪರ್ದಿಯನ್ನು ನೋಡಿಕೊಳ್ಳುತ್ತಿದ್ದ ಕಂದಾಯಾಧಿಕಾರಿ. ಜೊತೆಗೆ ಯುದ್ಧಯಾತ್ರೆಯಲ್ಲಿ ಪಾಲ್ಗೊಂಡ ಸೇನಾನಿಯೂ ಆಗಿದ್ದನು. ತಂದೆಯ ಬಳಿಕ ಶಾರ್ಙ್ಗದೇವನು ತಂದೆಯ ಕರಣಿಕ ಸ್ಥಾನಕ್ಕೆ ನೇಮಿಸಲ್ಪಡ್ತಾನೆ.ದೊರೆ ಮತ್ತು ತನ್ನ ತಂದೆಯ ಬಗ್ಗೆ, ತನ್ನ ಮತ್ತು ತನ್ನ ವಂಶದ ಬಗ್ಗೆ ಶಾರ್ಙ್ಗದೇವ ಬಹುವಾಗಿ ಕೊಂಡಾಡಿ ಬರೆದಿದ್ದಾನೆ.

ಅನವದ್ಯವಿದ್ಯಾವಿನೋದ, ಶ್ರೀಕರಣೇಶ್ವರ ಎಂಬುದು ಈತನ ಬಿರುದುಗಳಾಗಿದ್ದವು ಎನ್ನುವುದೂ ತಿಳಿದುಬರುತ್ತದೆ. ಹಾಗೆಂದೇ ‘ಶ್ರೀಮತ್ ಅನವದ್ಯವಿದ್ಯಾವಿನೋದಶ್ರೀಕರಣಾಧಿಪತಿಶ್ರೀಸೋಡಲದೇವನಂದನನಿಃಶಂಕಶ್ರೀಶಾರ್ಙ್ಗದೇವ ’ನೆಂದೇ ಕೀರ್ತಿಸಿಕೊಂಡು ಸಂಗೀತರತ್ನಾಕರಗ್ರಂಥ ಸಮಾಪ್ತಿಗೊಳಿಸಿದ್ದಾನೆ.

ತನ್ನ ಉದ್ಯೋಗದ ಜೊತೆಗೆ, ಶಾರ್ಙ್ಗದೇವನು ಕುಟುಂಬ ವೃತ್ತಿಯಾದ ಆಯುರ್ವೇದವನ್ನು, ಸಂಗೀತಶಾಸ್ತ್ರವನ್ನು ಅಭ್ಯಾಸ ಮಾಡಿದ್ದ. ಕಾವ್ಯಮೀಮಾಂಸೆ, ವ್ಯಾಕರಣ, ಛಂದಸ್ಸು, ತಂತ್ರಗಳಲ್ಲೂ ಸಾಕಷ್ಟು ಪರಿಶ್ರಮವಿತ್ತು. ತನ್ನ ಬಿಡುವಿನ ವೇಳೆಯಲ್ಲಿ, ಭಾರತೀಯ ಸಂಗೀತದ ಲಕ್ಷಣರಚನೆಯನ್ನು ಮಾಡುತ್ತಿದ್ದ. ಅದರ ಫಲವೇ ಸಂಗೀತರತ್ನಾಕರ.

ಸಂಗೀತರತ್ನಾಕರ- ಗ್ರಂಥವಿಶೇಷ ಮತ್ತು ಅಧ್ಯಾಯಕ್ರಮ

ಆಗಿನ ಕಾಲದ ವಿಶಾಲ ಕರ್ನಾಟಕದಲ್ಲಿದ್ದ ಅನೇಕ ಕಲೆಯ ಸಂಗತಿಗಳನ್ನು ಶಾರ್ಙ್ಗದೇವನು ಲಕ್ಷಣವಿವೇಚನೆಯಲ್ಲಿ ಹೇಳಿದ್ದಾನೆ ಎನ್ನುವುದು ನಮಗೆ ತಿಳಿಯುತ್ತದೆ. ಉದಾಹರಣೆಗೆ: ಸಂಗೀತರತ್ನಾಕರವು ಶುದ್ಧಪದ್ಧತಿ ಮತ್ತು ದೇಶೀಪದ್ಧತಿ/ಗೌಂದಲೀಪದ್ಧತಿ ಎಂಬ ಪ್ರಧಾನವಾದ ಎರಡು ಶಾಖೆಗಳನ್ನು ಹೇಳಿದೆ. ಇದು ಕರ್ನಾಟಕಪ್ರದೇಶದಲ್ಲಿ ಪ್ರಸಿದ್ಧವಾಗಿತ್ತೆಂದೂ, ಇಲ್ಲಿನ ವೇಷಭೂಷಣ ಪದ್ಧತಿಯನ್ನೇ ಅನುಸರಿಸಿತ್ತೆಂದೂ ಗ್ರಂಥದಿಂದ ತಿಳಿದುಬರುತ್ತದೆ. ಲಕ್ಷ್ಯ ಮೊದಲು, ಲಕ್ಷಣ ಅನಂತರ ಅಂತ ಹೇಳೋದು ಯಾಕೆ ಅಂತ ಗೊತ್ತಾಯಿತಲ್ವೆ?

ಸಂಗೀತರತ್ನಾಕರದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಆದ್ದರಿಂದ ಇದನ್ನು ಸಪ್ತಾಧ್ಯಾಯಿಯೆಂದೂ ಕರೆಯಲಾಗುತ್ತದೆ. ಈ ಗ್ರಂಥವು ಪಿಂಡೋತ್ಪತ್ತಿ ಅಂದರೆ ಮನುಷ್ಯ ಗರ್ಭಾವಸ್ಥೆಯ ಪ್ರಕರಣದಿಂದ ಮೊದಲ್ಗೊಂಡು, ಪ್ರಕೃತಿಯ, ಜೀವನದ ನಾಡಿಮಿಡಿತದಲ್ಲಿ, ಮಾನವನ ಕ್ರಿಯೆಗಳಲ್ಲಿ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಪ್ರತಿಯೊಂದು ಹಂತಕ್ಕೂ ಸಂಗೀತ ಅಂದರೆ ಗೀತ, ವಾದ್ಯ, ನೃತ್ತವು ಹೇಗೆ ಆವರಿಸಿಕೊಂಡಿದೆ ಎನ್ನುವುದನ್ನು ವಿವರಿಸುತ್ತದೆ. ಮೊದಲನೆಯದಾಗಿ ನಾದದ ತತ್ತ್ವವನ್ನು ವಿವರಿಸುವ ಸ್ವರಗತಾಧ್ಯಾಯವಿದೆ. ಸಂಗೀತ ವಿಧಾನ, ರಾಗ, ಪ್ರದರ್ಶನಗಳನ್ನು ವಿವರಿಸುವ ರಾಗವಿವೇಕಾಧ್ಯಾಯ ಮತ್ತು ಪ್ರಕೀರ್ಣಕಾಧ್ಯಾಯ ಅನಂತರದವು. ರಚನಾತ್ಮಕ ಸಂಯೋಜನೆಗಳ ಕುರಿತ ಪ್ರಬಂಧಾಧ್ಯಾಯ, ತಾಳದ ಕುರಿತ ತಾಳಾಧ್ಯಾಯ ಮತ್ತು ಸಂಗೀತ ವಾದ್ಯಗಳ ಬೇರೆ ಬೇರೆ ಅಂಶಗಳನ್ನು ವಿವರಿಸುವ ವಾದ್ಯಾಧ್ಯಾಯ, ಕೊನೆಯ ಅಧ್ಯಾಯದಲ್ಲಿ ನರ್ತನಾಧ್ಯಾಯ ನೃತ್ಯದ ಬಗ್ಗೆ ಬರೆಯಲ್ಪಟ್ಟಿದೆ.

ಗ್ರಂಥದ ಪೂರ್ವಸೂರಿಗಳು ಮತ್ತು ಪ್ರೇರಣೆಗಳು

ಶಾರ್ಙ್ಗದೇವನು ತನ್ನ ಗ್ರಂಥ ಸಂಗೀತ ರತ್ನಾಕರದಲ್ಲಿ ಸದಾಶಿವ, ಪಾರ್ವತಿ, ಬ್ರಹ್ಮ, ಭರತ, ಕಾಶ್ಯಪ, ಮತಂಗ, ಯಷ್ಟಿಕ, ದುರ್ಗಾಶಕ್ತಿ, ಶಾರ್ದೂಲ, ಕೋಹಲ, ವಿಶಾಖಿಲ, ದತ್ತಿಲ, ಕಂಬಲ, ಅಶ್ವತರ, ವಾಯು, ವಿಶ್ವಾವಸು, ರಂಭಾ, ಅರ್ಜುನ, ನಾರದ, ತುಂಬುರು, ಆಂಜನೇಯ, ಮಾತೃಗುಪ್ತ, ರಾವಣ, ನಂದಿಕೇಶ್ವರ, ಸ್ವಾತಿರಂಗ, ಬಿಂದುರಾಜ, ಕ್ಷೇತ್ರರಾಜ, ರಾಹುಲ, ರುದ್ರಟ, ನಾನ್ಯದೇವ, ಭೋಜರಾಜ, ಸೋಮೇಶ್ವರ, ಜಗದೇಕಮಲ್ಲ, ಲೋಲ್ಲಟ, ಉದ್ಭಟ, ಶಂಕುಕ, ಅಭಿನವಗುಪ್ತ, ಕೀರ್ತಿಧರರ ಗ್ರಂಥ ಮತ್ತು ವ್ಯಾಖ್ಯಾನಗಳನ್ನು ಪರಿಶೀಲಿಸಿ ರಚಿಸಿದೆ ಎನ್ನುತ್ತಾನೆ. ಇದರಿಂದ ಆತನ ಓದಿನ ವ್ಯಾಪ್ತಿ ಮತ್ತು ಪೂರ್ವಸೂರಿಗಳ ಗ್ರಂಥ ಪರಂಪರೆಯ ರಾಶಿ ಹೇಗಿತ್ತು ಎನ್ನುವ ಎರಡೂ ವಿಚಾರಗಳನ್ನೂ ಅರ್ಥ ಮಾಡಿಕೊಳ್ಳಬಹುದು.

ಹಾಗೆಂದೇ ಈತನನ್ನು ಓದದೇ ಅನಂತರದ ಗ್ರಂಥಗಳು ಮುನ್ನಡೆದದ್ದೇ ಇಲ್ಲವೆಂಬಷ್ಟು ಈತ ಪ್ರತಿಭಾಸಂಪತ್ತಿಯುಳ್ಳ ಪ್ರಖ್ಯಾತನಾದ ಲಾಕ್ಷಣಿಕ. ಸಂಗೀತರತ್ನಾಕರದ ಅಧ್ಯಾಯ ಪದ್ಧತಿ ಸ್ವರ, ರಾಗ, ಪ್ರಬಂಧ, ತಾಳ, ವಾದ್ಯ, ನರ್ತನ ಎಂಬುದಾಗಿ ಇದ್ದು; ಬಹಳ ಮಂದಿ ಲಾಕ್ಷಣಿಕರು ಇದನ್ನು ಪಾಲಿಸಿದ್ದಾರೆ. ಸಂಗೀತರಾಜ, ನರ್ತನನಿರ್ಣಯ, ಅಭಿನವಭರತಸಾರಸಂಗ್ರಹ, ಭರತಸೇನಾಪತಿ, ಸಂಗೀತಮುಕ್ತಾವಳಿ, ಸಂಗೀತಮಕರಂದ, ಮಹಾಭರತ ಚೂಡಾಮಣಿ ಮೊದಲಾಗಿ ಇನ್ನೂ ಅನೇಕ ಗ್ರಂಥಗಳೂ ಶಾರ್ಙ್ಗದೇವನನ್ನು ಅನುಸರಿಸಿಯೇ ಲಕ್ಷಣಗಳನ್ನು ದಾಖಲಿಸುತ್ತವೆ. ಎಷ್ಟರಮಟ್ಟಿಗೆಂದರೆ ತುಳಜ ಎಂಬ ರಾಜನು ೧೮ನೇ ಶತಮಾನದಲ್ಲಿ ಬರೆದ ಭರತನಾಟ್ಯದ ಅಡವುಗಳ ಉಲ್ಲೇಖ ಕೊಡುವ ಸಂಗೀತ ಸಾರಾಮೃತ ಎಂಬ ಗ್ರಂಥವು ಸಂಗೀತರತ್ನಾಕರದಿಂದ ಮೊದಲ್ಗೊಂಡು ನೃತ್ತರತ್ನಾವಳಿ, ಸಂಗೀತಮುಕ್ತಾವಲಿ, ಅಭಿನಯದರ್ಪಣ, ನಾಟ್ಯಚೂಡಾಮಣಿ, ನರ್ತನನಿರ್ಣಯ, ಸಂಗೀತದರ್ಪಣ, ಸಂಗೀತಮಕರಂದಗಳನ್ನು ಪರಿಶೀಲಿಸಿ ಉಲ್ಲೇಖಿಸಿದೆ.

ನರ್ತನದ ವಿಚಾರಕ್ಕೆ ಬಂದರೆ ಸಂಗೀತರತ್ನಾಕರದ ಕೊನೆಯದಾದ ಏಳನೇ ಅಧ್ಯಾಯವೊಂದೇ ಸುಮಾರು ೧೬೭೮ ಶ್ಲೋಕಗಳಷ್ಟು ಇದೆ. ನರ್ತನಾಧ್ಯಾಯ ಆರಂಭಗೊಳ್ಳುವುದು ‘ಆಂಗಿಕಂ ಭುವನಂ ಯತ್ರ ವಾಚಿಕಂ ಸರ್ವ ವಾಙ್ಮಯಂ | ಆಹಾರ್ಯಂ ಚಂದ್ರ ತಾರಾದಿ ತಂ ನುಮಃ ಸಾತ್ತ್ವಿಕಂ’ ಎಂಬ ಶ್ಲೋಕದಿಂದ. ಅರರೆ. ಇದು ನಂದಿಕೇಶ್ವರನ ಅಭಿನಯದರ್ಪಣದ ನಾಂದೀಶ್ಲೋಕವಲ್ಲವೇ ಅಂದರೆ .. ಹೌದು. ಸಂಗೀತರತ್ನಾಕರದಲ್ಲಿ ನಂದಿಕೇಶ್ವರಕೃತ ಗ್ರಂಥಗಳಲ್ಲಿರುವ ಎಷ್ಟೋ ಲಕ್ಷಣಶ್ಲೋಕಗಳೂ ದೊರೆಯುತ್ತವೆ. ಒಂದೋ ಅಭಿನಯದರ್ಪಣ-ಭರತಾರ್ಣವಗಳು ಸಂಗೀತರತ್ನಾಕರವನ್ನು ಪರಿಶೀಲಿಸಿರಬೇಕು ಇಲ್ಲವೇ ಸಂಗೀತರತ್ನಾಕರವು ನಂದಿಕೇಶ್ವರನ ಗ್ರಂಥಗಳನ್ನು ಗಮನಿಸಿದ್ದಿರಬೇಕು. ಆದರೆ ಸಂಗೀತರತ್ನಾಕರ ಗ್ರಂಥಕ್ಕೆ ಇರುವ ವ್ಯಾಖ್ಯಾನಗಳಿಂದಾಗಿ ಈ ಶ್ಲೋಕ ಸಂಗೀತರತ್ನಾಕರದ್ದೇ ಮೂಲ ಶ್ಲೋಕವೆನ್ನುವುದು ತಿಳಿದುಬರುತ್ತದೆ.[1]

ನರ್ತನಾಧ್ಯಾಯದಲ್ಲಿ ಅಂಗೋಪಾಂಗಭೇದಗಳು, ನಾಟ್ಯಶಾಸ್ತ್ರದ ಮಾರ್ಗನೃತ್ತಕರಣಗಳೆಂಬ ಚಲನೆಗಳು, ಮಾರ್ಗೋತ್ತರ ಕಾಲ ಅಂದರೆ ನಾಟ್ಯಶಾಸ್ತ್ರದ ನಂತರಕ್ಕೆ ಚಾಲ್ತಿಗೆ ಬಂದ ಉತ್ಪ್ಲುತಿ ಕರಣಗಳು, ಸ್ಥಾನಕಗಳು, ಚಾರಿಗಳು, ಅಂಗಹಾರಗಳು, ಲಾಸ್ಯಾಂಗ ಎಂಬ ಸುಕುಮಾರವಾದ ನರ್ತನ ಕ್ರಮ, ನವರಸ ಲಕ್ಷಣ, ವಿವಿಧ ಬಗೆಯ ನೃತ್ತಗಳು ಮತ್ತು ನರ್ತಕರು, ನರ್ತಕಲಕ್ಷಣಗಳು ಮೊದಲಾದವನ್ನು ವಿವರವಾಗಿ ಕಾಣಬಹುದು. ಇವೆಲ್ಲದಕ್ಕೂ ಶಾರ್ಙ್ಗದೇವನು ತನ್ನ ಪೂರ್ವಸೂರಿಗಳಾದ ಅಭಿನವಗುಪ್ತ, ಲೋಲ್ಲಟ, ಸೋಮೇಶ್ವರ, ಮತಂಗ, ಕೋಹಲ ಮೊದಲಾದ ಹಲವು ಲಾಕ್ಷಣಿಕರನ್ನು ಆಶ್ರಯಿಸಿದ್ದಾನೆ. ಅದರಲ್ಲೂ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಗ್ರಂಥವು ಸೂಚಿಸುವ ವಿವಿಧ ನೃತ್ತಗಳು, ಉತ್ಪ್ಲುತಿಕರಣಗಳಿಗೆ ಸಂಗೀತ ರತ್ನಾಕರವು ಆದ್ಯತೆ ಇತ್ತಿದೆಯೆನ್ನುವುದು ಅಧ್ಯಯನದಿಂದ ತಿಳಿಯುತ್ತದೆ. ಆದರೆ ಮಾನಸೋಲ್ಲಾಸಕ್ಕಿಂತ ಆರು ಉತ್ಪ್ಲುತಿಕರಣಗಳು ಸಂಗೀತರತ್ನಾಕರದಲ್ಲಿ ಹೆಚ್ಚಿವೆ. ಅದಾದ ಬಳಿಕ ಸಪ್ತವಿಧ ಪಾದಭ್ರಮರಿ ಮತ್ತು ತಲೆಯನ್ನು ಕೆಳಗಿಟ್ಟು ತಿರುಗುವ ಐದು ಬಗೆಯ ಶಿರೋಭ್ರಮರಿಗಳನ್ನೂ ಒಟ್ಟಾಗಿಸಿ ೩೬ ಉತ್ಪ್ಲುತಿಕರಣಗಳಾಗಿ ಸಂಗೀತರತ್ನಾಕರ ಲಕ್ಷಣ ಬರೆದಿದೆ. ಅಂದರೆ ಮಾನಸೋಲ್ಲಾಸದ ಹದಿನೆಂಟು ಉತ್ಪ್ಲುತಿ ಕರಣಗಳೇ ಸಂಗೀತರತ್ನಾಕರದ ಹೊತ್ತಿಗೆ ೩೬ ಎಂದು ವರ್ಗೀಕರಣವಾಗುತ್ತವೆ. ಹೀಗೆ ಮಾನಸೋಲ್ಲಾಸಕ್ಕಿಂತ ಹೆಚ್ಚಾದ ಸಂಖ್ಯೆಯಲ್ಲಿ ಉತ್ಪ್ಲುತಿಕರಣಪ್ರಪಂಚವನ್ನು ಭ್ರಮರಿಗಳ ಸಹಿತ ಸಂಗೀತರತ್ನಾಕರ ಹಿಗ್ಗಿಸಿಕೊಡುತ್ತದೆ[2]. ಸಂಗೀತರತ್ನಾಕರದಿಂದ ಅನಂತರದಲ್ಲಿ ಬಂದಂಥ ಬಹುತೇಕ ಗ್ರಂಥಗಳೂ ಭ್ರಮರಿಗಳನ್ನು ಉತ್ಪ್ಲುತಿಕರಣದ ಸಾಲಿನಲ್ಲೇ ವಿವರಿಸಿವೆ. ಈ ಹಿನ್ನೆಲೆಯಿಂದ ನೋಡಿದಾಗ ಆತ ತನ್ನನ್ನು ಕರಣಾಧಿಪ ಎಂದು ಕರೆದುಕೊಂಡಿದ್ದು ಕೇವಲ ಕರಣಿಕ ಉದ್ಯೋಗಕ್ಕಷ್ಟೇ ಅಲ್ಲ; ಕರಣಪ್ರಕರಣಗಳ ಲಕ್ಷಣದಲ್ಲಿ ವಿಶೇಷ ವಿಭಾಗಗಳನ್ನು ಮಾಡಿದ ಕೀರ್ತಿಯೂ ಆತನದ್ದೇ ಎಂಬ ಮಟ್ಟಿಗೆ ಆ ಕರಣಾಧಿಪ ವಿಶೇಷಣ ಅನ್ವರ್ಥನಾಮಕವಾಗಿದೆ ಎಂದುಕೊಳ್ಳಬಹುದು.

ಗ್ರಂಥವ್ಯಾಖ್ಯಾನಗಳು ಮತ್ತು ಪ್ರಕಟಣೆಗಳು

ಸಂಗೀತರತ್ನಾಕರಕ್ಕೆ ಪ್ರಧಾನವಾಗಿ ಎರಡು ವ್ಯಾಖ್ಯಾನಗಳನ್ನು ಕಾಣಬಹುದು. ಆಂಧ್ರದ ರಾಜಾಚಲದ ವೇಲಮವಂಶದ ರಾಜ ಸಿಂಹಭೂಪಾಲ ಬರೆದ ವ್ಯಾಖ್ಯಾನ ಸಂಗೀತ ಸುಧಾಕರ – ಅಂದಾಜು ೧೩೩೦ನೇ ಇಸವಿಯದ್ದು. ಮತ್ತೊಂದು ವಿಜಯನಗರ ಕರ್ನಾಟ ಅರಸರ ಪೈಕಿ ಸಂಗಮ ವಂಶದ ಇಮ್ಮಡಿ ಮಲ್ಲಿಕಾರ್ಜುನ ಪ್ರೌಢದೇವರಾಯನ ಆಸ್ಥಾನಿಕನಾಗಿದ್ದ ಅಭಿನವಭರತಚಾರ್ಯನೆಂದೇ ಕೀರ್ತಿಸಿಕೊಂಡ ಕಲ್ಲಪ್ಪ ಅಥವಾ ಚತುರ ಕಲ್ಲಿನಾಥನ ವ್ಯಾಖ್ಯಾನ ಸಂಗೀತಕಲಾನಿಧಿ; ಅಂದಾಜು ೧೪೩೦-೧೪೬೦ನೇ ಇಸವಿಯದ್ದು. ಮತ್ತೊಂದು ವ್ಯಾಖ್ಯಾನ ತೆಲುಗು ಭಾಷೆಯಲ್ಲಿದ್ದು ವಿಜಯನಗರ ಕರ್ನಾಟ ಸಾಮ್ರಾಜ್ಯದ ಬಂಡಾರು ವಿಟ್ಠಲಾಮಾತ್ಯನ ಹೆಸರಿನಲ್ಲಿದೆ. ಅಪ್ರಕಟಿತರೂಪದಲ್ಲಿರುವ ಇದು ೧೫೦೦ನೇ ಇಸವಿಯ ಆಸುಪಾಸಿನಲ್ಲಿ ಬರೆಯಲ್ಪಟ್ಟದ್ದು ಎನ್ನುವುದು ತಿಳ್ಯುತ್ತೆ. ಇದಲ್ಲದೆ ಕೌಸ್ತುಭ ಮತ್ತು ಸಂಗೀತರತ್ನಾಕರ ಚಂದ್ರಿಕಾ ಎಂಬ ವ್ಯಾಖ್ಯಾನಗಳಿವೆ ಎನ್ನಲಾಗುತ್ತದೆಯಾದರೂ ಅವು ದೊರೆತಿಲ್ಲ. ಗಂಗಾರಾಮ ಎನ್ನುವವರ ಸಂಗೀತಸೇತು ಎಂಬ ಹಿಂದಿ ಭಾಷೆಯ ವ್ಯಾಖ್ಯಾನ ೧೮೧೩ರಿಂದ ೧೮೫೪ರ ನಡುವೆ ಬರೆಯಲ್ಪಟ್ಟಿದೆ. ಸಂಗೀತರತ್ನಾಕರದ ತಮಿಳು ಅನುವಾದವೂ ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿದ್ದು ಈ ಕೃತಿ ಭರತಸಿದ್ಧಾಂತವೆಂದೂ ಹೆಸರಾಗಿದೆ; ೧೬-೧೮ನೇ ಶತಮಾನದ ಒಳಗೆ ಬರೆಯಲ್ಪಟದ್ದೆಂದೂ ತಿಳಿದುಬರುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲೂ ಸಂಗೀತರತ್ನಾಕರಕ್ಕೆ ಹಿಂದಿ, ಇಂಗ್ಲೀಷ್, ಕನ್ನಡ ವ್ಯಾಖ್ಯಾನಸಹಿತವಾದ ಅನೇಕ ಗ್ರಂಥಗಳು ಬಂದಿವೆ. ಈ ಗ್ರಂಥವನ್ನು ಓದುತ್ತಾ ಹೋದಂತೆಲ್ಲ ಇದೊಂದನ್ನು ಓದಿದರೂ ಸಾಕು, ಉಳಿದ ಎಷ್ಟೋ ಗ್ರಂಥಗಳನ್ನು ಪಕ್ಕಕ್ಕಿಡಬಹುದು, ಅಷ್ಟೊಂದು ವಿದ್ವತ್ಪೂರ್ಣವೆನ್ನುವುದು ಅರಿವಾಗುತ್ತದೆ. ಒಟ್ಟಿನಲ್ಲಿ ಸರ್ವದೇಶ- ಸರ್ವಕಾಲಗಳಿಗೂ ಮಾನ್ಯವಾದ ಪ್ರವರ್ತಕವಾದ ಸಂಗೀತ ಶಾಸ್ತ್ರವಿಚಾರಕ್ಕೆ ಶಿಖರಪ್ರಾಯಿಯಾದ ಗ್ರಂಥವಿದು.

ಆಧಾರಗ್ರಂಥಗಳು

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library.

Chaudharai, Subhadra (2009). Sharngadeva kruta Sangita Ratnakara. Saraswati Vyakhya aur Anuvada sahit -Chaturtha Kanda (Hindi). New Delhi: Radha Publication.

ರಾ. ಸತ್ಯನಾರಾಯಣ (Ed).(1968). ಶ್ರೀ ಶಾರ್ಙ್ಗದೇವ ವಿರಚಿತ ಸಂಗೀತರತ್ನಾಕರ.ನಿಃಶಂಕ ಹೃದಯವೆಂಬ ಕನ್ನಡ ವ್ಯಾಖ್ಯಾನ ಸಮೇತ. ಸಂಪುಟ 1. ಮೈಸೂರು : ಪ್ರಸಾರಾಂಗ.

  1. https://www.youtube.com/watch?v=D5PejDWsWXY&t=611s&ab_channel=NoopuraBhramari
  2. ಓದಿ ಇದೇ ಲೇಖಕರ ಕೃತಿ- ನಂದಿಕೇಶ್ವರ. https://www.noopurabhramari.com/want-to-subscribe-noopura-bhramari-and-purchase-the-dance-books/
  3. ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ವಿವರಗಳಿಗೆ https://www.noopurabhramari.com/yakshamargamukura/

Leave a Reply

*

code