ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 4-ನಂದಿಕೇಶ್ವರನ ಭರತಾರ್ಣವ

Posted On: Sunday, November 5th, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 4- ದೇಶೀ ವೈವಿಧ್ಯಗಳ ಸಂಕಲನವೆನಿಸುವ ನಂದಿಕೇಶ್ವರನ ಅಪೂರ್ವ ನೃತ್ಯಶಾಸ್ತ್ರ ಗ್ರಂಥ- ಭರತಾರ್ಣವ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 4-Nandikeshwara’s Bharatārṇava-An unique Treatise on Regional varieties of dance tradition

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ನಂದಿಕೇಶ್ವರನು ಬರೆದ ಎನ್ನಲಾಗುವ ಗ್ರಂಥಗಳಲ್ಲಿ ಭರತಾರ್ಣವವೂ ಮಹತ್ತ್ವದ ಗ್ರಂಥ. ಅಂದಾಜು ೧೦ರಿಂದ ೧೫ನೇ ಶತಮಾನದ ಒಳಗಿನ ಕಾಲದಲ್ಲಿ ರಚನೆಯಾದ ಕೃತಿ ಎಂದು ಊಹಿಸಬಹುದು. ಆದರೆ ರಚನೆಗೊಂಡ ಪ್ರದೇಶ ಯಾವುದೆನ್ನುವುದು ದೃಢಪಡುವುದಿಲ್ಲ. ಹಾಗಿದ್ದೂ ಇದರ ಲಕ್ಷಣವಿವರಣೆಯ ಕ್ರಮದಿಂದ ಇದರ ರಚನೆ ದಾಕ್ಷಿಣಾತ್ಯ ಪ್ರಾಂತದಲ್ಲಾಗಿದೆ ಎನ್ನುವುದನ್ನು ಮನಗಾಣಬಹುದು.

ಭರತಾರ್ಣವ- ಗ್ರಂಥಕ್ರಮ, ಸಂಪಾದನೆ ಮತ್ತು ಬೆರಕೆಗಳು

ಭರತ ಎಂಬ ವ್ಯಕ್ತಿ ಅಥವಾ ತತ್ತ್ವಕ್ಕೆ ಹೊಂದಿಕೊಂಡ ಆರ್ಣವ ಅಂದರೆ ಸಾಗರಪ್ರಾಯಿಯಾದ ಗ್ರಂಥ ಎಂಬ ಅರ್ಥವುಳ್ಳದ್ದು ಭರತಾರ್ಣವ. ಇದು ಸುಮತಿಬೋಧಕ, ಪಾರ್ವತೀಪ್ರಯುಕ್ತ ಭರತಚಂದ್ರಿಕಾ, ಗುಹೇಶಭರತ ಲಕ್ಷಣ ಮತ್ತು ಕರಣಭೂಷಣ ಮೊದಲಾಗಿ ಇಂದಿಗೆ ಸಂಪೂರ್ಣವಾಗಿ ಕಳೆದುಹೋಗಿರುವ ಗ್ರಂಥಗಳಲ್ಲಿದ್ದ ವಿಚಾರಗಳನ್ನೊಳಗೊಂಡ ಒಂದು ಸಂಕಲನ ಕೃತಿ. ಈ ವಿಚಾರವೂ ಅದೇ ಗ್ರಂಥದಲ್ಲಿ ದೊರಕುವ ಲಕ್ಷಣಶ್ಲೋಕಗಳಿಂದ ದೃಢಪಡುತ್ತದೆ. ವಿದ್ವಾಂಸರಾದ ಮಾನವಲ್ಲಿ ರಾಮಕೃಷ್ಣಕವಿಗಳೂ ಕೂಡಾ ಕರಣಭೂಷಣವೆಂಬ ತಾಂಡವನೃತ್ತವಿಷಯಕವಾದ ಒಂದು ಗ್ರಂಥವಿದೆಯೆಂದು ಹೇಳಿ ಭರತಾರ್ಣವವು ಕ್ರಿ.ಶ ೧೧ನೇ ಶತಮಾನದ ನಂತರದಲ್ಲಿ ಬಂದುದೆಂದೂ ಊಹಿಸುತ್ತಾರೆ.

ಭರತಾರ್ಣವದ ೪೦೦೦ ಶ್ಲೋಕಗಳ ಪೈಕಿ ಕೇವಲ ೧೨೦೦ರಷ್ಟು ಶ್ಲೋಕಗಳು ಮಾತ್ರ ಇಂದಿಗೆ ದೊರಕಿದ್ದು ಬೃಹತ್ ಪ್ರಮಾಣದ ಭಾಗವೊಂದು ಲುಪ್ತವಾಗಿದೆ ಎನ್ನುವುದು ಅದನ್ನು ಸಂಪಾದಿಸಿದ ವಾಸುದೇವಶಾಸ್ತ್ರಿಗಳು ಎಂಬ ವಿದ್ವಾಂಸರಿಂದ ತಿಳಿದುಬರುತ್ತದೆ. ಮೈಸೂರು ಮತ್ತು ಮದ್ರಾಸಿನ ಓರಿಯಂಟಲ್ ರೀಸರ್ಚ್ ಲೈಬ್ರೆರಿ, ಪೂನಾದ ಬರೋಡಾ ಓರಿಯಂಟಲ್ ರೀಸರ್ಚ್ ಲೈಬ್ರೆರಿ ಮತ್ತು ತಂಜಾವೂರು ಸರಸ್ವತಿ ಮಹಲ್ ಲೈಬ್ರೆರಿಯಲ್ಲಿ ಇರುವ ಬೇರೆ ಬೇರೆ ಭರತಾರ್ಣವದ ಹಸ್ತಪ್ರತಿಯಿಂದ ಆಯ್ದು ಒಂದು ಪುಸ್ತಕವಾಗಿಸಿ ಪ್ರಕಟಿಸಲಾಗಿದೆ. ಇನ್ನೊಂದು ತಾಳೆಗರಿ ದೊರೆತದ್ದು ೧೫೦-೨೦೦ ವರುಷಗಳಷ್ಟೇ ಹಿಂದಿನದ್ದೆಂದೂ, ಅದು ಸಂಸ್ಕೃತ ಭಾಷೆಯಲ್ಲಿದ್ದು ತೆಲುಗು ಲಿಪಿ ಹಾಗೂ ವ್ಯಾಖ್ಯಾನವನ್ನು ಹೊಂದಿದೆಯೆಂದು ಕೂಡಾ ತಿಳಿದುಬರುತ್ತದೆ. ಆದ್ದರಿಂದಲೇ ಈ ಗ್ರಂಥದ ರಚನಾಕ್ರಮದಲ್ಲಿ ಒಂದು ನಿಶ್ಚಿತ ಮಾದರಿ ಇಲ್ಲ. ಮತ್ತು ಪರಸ್ಪರ ವಿಷಯಸಂಬಂಧಗಳನ್ನು ಖಚಿತವಾಗಿ ಕಾಣಲಾಗದು; ಬಿಡಿಬಿಡಿಯಾಗಿವೆ. ಪ್ರಾಚೀನ ಸಂಸ್ಕೃತ ಗ್ರಂದ್ಥಗಳ ಆಂಭದಲ್ಲಿ ಕಾಣಸಿಗುವ ನಾಂದೀಶ್ಲೋಕ, ಕಥೆಯ ಎಳೆ, ಸಂವಾದಗಳು ಇಲ್ಲಿಲ್ಲ.

ಜೊತೆಗೆ ಹರಿಪಾಲನ ಸಂಗೀತಸುಧಾಕರ ಎಂಬ ಗ್ರಂಥದ ಶ್ಲೋಕಗಳಿಗೂ ಭರತಾರ್ಣವಕ್ಕೂ ಹೋಲಿಕೆಗಳಿದ್ದು; ಹರಿಪಾಲೀಯ ಸಂಗೀತಸುಧಾಕರ ಗ್ರಂಥವು ಸರಸ್ವತೀಮಹಲ್ ಲೈಬ್ರೆರಿಯ ಭರತಾರ್ಣವದ ಹಸ್ತಪ್ರತಿಯಲ್ಲಿ ಬೆರಕೆಯಾಗಿರುವುದನ್ನು ಗಮನಿಸಬಹುದು. ಭರತಾರ್ಣವದ ಸಂಪಾದಕರಾದ ವಾಸುದೇವಶಾಸ್ತ್ರಿಗಳು ನೀಡಿರುವ ಟಿಪ್ಪಣಿಯಲ್ಲಿ – ಮೂಲ ಭರತಾರ್ಣವವು ಕಳೆದುಹೋಗಿದೆಯೆಂದೂ, ಕೆಲವೊಂದು ಪಾದಭೇದಗಳನ್ನು ಭರತಾರ್ಣವ ಸಂಗ್ರಹ ಹಾಗೂ ಹರಿಪಾಲದೇವನ ಸಂಗೀತ ಸುಧಾಕರದ ನೆರವಿನಿಂದ ಪುನರ್ ಸಂಯೋಜಿಸಲಾಗಿದೆಯೆಂದೂ ತಿಳಿಸಿದ್ದಾರೆ. ಹಾಗೆಯೇ ಈ ಲೇಖನದ ರಚನಾಕಾರರ ಅಧ್ಯಯನದ ವೇಳೆಯೂ ಕೆಲವೊಂದು ಕರಣವಿಚಾರದಲ್ಲಿ ಹರಿಪಾಲೀಯ ಸಂಗೀತ ಸುಧಾಕರದ ವಿಷಯಗಳು ಭರತಾರ್ಣವದ ಶ್ಲೋಕಗಳೊಂದಿಗೆ ಬೆರಕೆಯಾಗಿರುವನ್ನು ಪತ್ತೆ ಹಚ್ಚಲಾಗಿದೆ.[1]. ಒಟ್ಟಿನಲ್ಲಿ ಹಸ್ತಪ್ರತಿಗಳಲ್ಲಿ ಬೇರೆ ಬೇರೆ ಗ್ರಂಥಾಂತರ ಮತ್ತು ಆಧಾರಗಳಿಂದ ಸಂಗ್ರಹಿತ ಗ್ರಂಥ ಭರತಾರ್ಣವ ಎನ್ನುವುದು ಸ್ಪಷ್ಟಪಡುತ್ತದೆ.

ಹಾಗೆಯೇ ಭರತಾರ್ಣವವು ನಂದಿಕೇಶ್ವರನ ಹೆಸರಿನಲ್ಲಿರುವ ಅಭಿನಯದರ್ಪಣವೆಂಬ ಮತ್ತೊಂದು ಪ್ರಸಿದ್ಧ ಗ್ರಂಥಕ್ಕೆ ಮೂಲಕೃತಿ ಎಂಬ ಅಭಿಪ್ರಾಯವಿದೆ. ಆದರೆ ಅದನ್ನು ಪುಷ್ಟೀಕರಿಸುವ ಅಂಶಗಳು ಕಾಣಸಿಗುವುದು ಬಹಳ ಕಡಿಮೆ. ಏಕೆಂದರೆ ರಚನೆಯ ಕ್ರಮಗಳೂ ಭಿನ್ನವಾಗಿವೆ. ಲಕ್ಷಣಗಳಲ್ಲಿ ವ್ಯತ್ಯಾಸ ಬಹಳವಿದೆ. ಹಾಗಾಗಿಯೇ ಇರುವವ ಓರ್ವ ನಂದಿಕೇಶ್ವರನಲ್ಲ; ಬದಲಾಗಿ ನಂದಿಕೇಶ್ವರನೆಂಬ ಬೇರೆ ಬೇರೆ ರಚನಾಕಾರರು ಬೇರೆ ಬೇರೆ ಕಾಲಗಳಲ್ಲಿ ಇದ್ದಿರಬಹುದೆನ್ನುವುದು ಅಧ್ಯಯನದಿಂದ ಮನವರಿಕೆಯಾಗುತ್ತದೆ.[2]

ಅಧ್ಯಾಯಕ್ರಮ ಮತ್ತು ಲಕ್ಷಣ ವಿಚಾರ

ಈ ಗ್ರಂಥವು ಸಂಗ್ರಹಸ್ವರೂಪದಲ್ಲಿರುವ ಕಾರಣಕ್ಕೇ ಏಕಾ‌ಏಕಿ ೨೭ ಅಸಂಯುತ ಹಸ್ತಗಳ ಅಂದರೆ ಒಂದೇ ಕೈಯಲ್ಲಿ ಮಾಡುವ ಹಸ್ತಾಭಿನಯಗಳ ಲಕ್ಷಣ ಮತ್ತು ವಿನಿಯೋಗಗಳನ್ನು ಹೇಳುತ್ತದೆ. ಎರಡನೇ ಅಧ್ಯಾಯ ೧೬ ಸಂಯುತ ಹಸ್ತಗಳನ್ನು ಅಂದರೆ ಎರಡು ಕೈಗಳ ಸಂಯೋಜನೆಯಿಂದ ಮಾಡುವ ಹಸ್ತಾಭಿನಯವನ್ನು ಚರ್ಚಿಸುತ್ತದೆ. ಇದರಲ್ಲಿನ ಅಸಂಯುತ ಹಸ್ತಲಕ್ಷಣಗಳಲ್ಲಿ ಮಂಡಲನೃತ್ಯ, ಪ್ರಾಣನೃತ್ತ, ಮುಖಚಾಲಿ; ಹಾಗೂ ಸಂಯುತ ಹಸ್ತಲಕ್ಷಣಗಳಲ್ಲಿ ಹಸ್ತಚಾರಬಂಧ, ಭೂಚಾರಿನಟನ ಎಂಬ ದೇಶೀನೃತ್ಯಗಳ ಉಲ್ಲೇಖವಿದೆ. ಇವೆಲ್ಲವೂ ಸಾಮಾನ್ಯವಾಗಿ ೧೨ರಿಂದ ೧೬ನೇ ಶತಮಾನದೊಳಗೆ ಪ್ರಯುಕ್ತವಾಗುವ ನೃತ್ಯಬಂಧಗಳಾಗಿರುವುದರಿಂದ ಭರತಾರ್ಣವ ಅರ್ವಾಚೀನ ಎನ್ನುವುದಲ್ಲಿ ಸಂಶಯವಿಲ್ಲ. ಹಾಗೆಯೇ ನೃತ್ತಹಸ್ತಗಳ ವಿನಿಯೋಗದ ವೇಳೆ ಮುಖನಾಟ್ಯ, ಛಲಿಯನೃತ್ಯ, ಭ್ರಮರಿನೃತ್ಯ, ವಿದ್ಯುತ್‌ಭ್ರಮಣ, ಮಹಾಭ್ರಮಣ, ಮಂಡಿ, ಲಲಿತ, ಸಮೋತ್ಸರಿತ ಮಂಡಲ, ಕರ್ತರೀನರ್ತನ, ಕುಂಡಲೀ ನಾಟ್ಯ, ಚಂಡಿಕೆ-ಶಿವರ ಯುಗಳನೃತ್ಯ.. ಹೀಗೆ ಇನ್ನೂ ಹಲವು ಬಗೆಯಾಗಿ ದೇಶೀ ನೃತ್ಯಗಳನ್ನೂ ಹೆಸರಿಸಿದೆಯಾದರೂ ಈ ನೃತ್ಯಗಳ ಕುರಿತಂತೆ ಹೆಚ್ಚಿನ ವಿವರಗಳು ಈ ಗ್ರಂಥಸಂಗ್ರಹದೊಳಗೆ ಮತ್ತೆಲ್ಲಿಯೂ ಕಂಡುಬರುವುದಿಲ್ಲ.

ಹಾಗೆಯೇ ಬೃಹಸ್ಪತಿ ಹೇಳಿದನೆನ್ನಲಾದ ಅಂಗೋಪಾಂಗ ವಿವರಗಳು ಅಂದರೆ ಶಿರೋಭೇದ, ದೃಷ್ಟಿಭೇದ ಮತ್ತು ಪಾದಭೇದಗಳು, ಚಾರಿಗಳು ಅಂದರೆ ಚಲನೆಗಳು, ಸ್ಥಾನಕಗಳು ಅಂದರೆ ನಿಲ್ಲುವ ಭಂಗಿಯ ಕ್ರಮ, ಕಣ್ಣಿನ ಮೂಲಕ ಅಭಿವ್ಯಕ್ತಿಪಡಿಸುವ ರಸದೃಷ್ಟಿ, ಸ್ಥಾಯಿಭಾವ ದೃಷ್ಟಿ, ಸಂಚಾರಿಭಾವದೃಷ್ಟಿ, ಎಂಬ ವಿಭಾಗಗಳನ್ನು ಅನಂತರದ ಅಧ್ಯಾಯಗಳಲ್ಲಿ ಹೇಳಲಾಗಿದೆ. ಏಳನೇ ಅಧ್ಯಾಯದಲ್ಲಿ ತಾಳನಾಮಾಂಗಗಳನ್ನೂ, ೧೧೨ ದೇಶೀ ತಾಳಗಳ ಉಲ್ಲೇಖವನ್ನು ಮಾಡಲಾಗಿದೆ. ೮ನೇ ಅಧ್ಯಾಯವು ಸುಮತಿಯೆಂಬಾತನು ವಿವಿಧ ಚಾರಿ ಅಂದರೆ ಚಲನೆಯನ್ನು ಕಲಿಸಿಕೊಡಲು ನಂದಿಕೇಶ್ವರನೊಂದಿಗೆ ಸಂವಾದ ನಡೆಸುವ ಸನ್ನಿವೇಶದ ಮೂಲಕ ಆರಂಭಗೊಳ್ಳುತ್ತದೆ. ಈ ಸುಮತಿ ಇಂದ್ರ ಎಂಬ ಅಭಿಪ್ರಾಯವಿದೆ. ೯ನೇ ಅಧ್ಯಾಯವು ೯ ಬಗೆಯ ಅಂಗಹಾರ ಅಂದರೆ ಕರಣಗಳೆಂಬ ಆಂಗಿಕಾಭಿನಯವಿಧಾನಗಳ ಒಂದು ಸಂಯೋಜನಾ ಗುಚ್ಛಗಳನ್ನು ಪ್ರಸ್ತಾಪಿಸುತ್ತದೆ ಎಂದು ಹೇಳಿದರೂ ಇಲ್ಲಿನ ಅಂಗಹಾರದ ವ್ಯಾಖ್ಯೆ ನಾಟ್ಯಶಾಸ್ತ್ರಕ್ಕಿಂತ ಬೇರೆಯೇ ಆಗಿದೆ. ಜೊತೆಗೆ ಅಂಗಹಾರದ ಶೈಲಿಗಳನ್ನು ಒಂಭತ್ತು ರಸಗಳಿಗೆ ಅನುಗುಣವಾಗಿ ವಿಭಾಗಿಸಿ ಭಾವಪ್ರಚೋದಕವೆಂದೂ ಹೇಳಲಾಗಿದೆ. ಇವನ್ನು ಬೆಳಗ್ಗಿನ ಕಾರ್ಯಕ್ರಮಗಳಲ್ಲಿ ನರ್ತಿಸುವ ವಾಡಿಕೆ ಎಂದೂ ಹೇಳಲಾಗಿದ್ದು; ಅಭಿನಯದ ತರುವಾಯ ಕೆಲವು ಭಂಗಿಗಳನ್ನು ಶುದ್ಧನೃತ್ತದೊಂದಿಗೆ ಹೊಂದಿಸಲ್ಪಟ್ಟು ಮಾಡುವ ಕ್ರಮವೇ ಇದರ ಹುಟ್ಟಿಗೆ ಕಾರಣವೆನ್ನಲಾಗಿದೆ. ಇವುಗಳೆಲ್ಲಾ ಪಾರ್ವತೀದೇವಿ ಪ್ರಯುಕ್ತ ಗ್ರಂಥದ ಜನ್ಯವೆಂಬುದಾಗಿ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಸಂಗೀತರತ್ನಾಕರದಲ್ಲಿ ಸ್ಪಷ್ಟರೀತಿಯಿಂದ ಕಾಣಸಿಗುವ ಮಾರ್ಗೋತ್ತರ ಕಾಲದ ಅಂಗಭೇದ, ದೇಶೀ ಚಾರಿ ಮತ್ತು ಕರಣಗಳೂ ಕೂಡಾ ಅಲ್ಲಲ್ಲಿ ಎಲ್ಲೆಂದರಲ್ಲಿ ಸೂಕ್ತ ವಿವರಗಳಿಲ್ಲದೆ ಕಂಡುಬರುತ್ತವೆ.

೧೦ನೇ ಅಧ್ಯಾಯಕ್ಕೆ ೧೦ ಬಗೆಯ ನಾನಾರ್ಥ ಹಸ್ತಗಳನ್ನು ಪ್ರಸ್ತಾಪಿಸಲಾಗಿದ್ದು ಇವುಗಳೂ ಅಂಗಹಾರದಂತೆಯೇ ಪಾರ್ವತೀದೇವಿಪ್ರಯುಕ್ತ ಭರತಚಂದ್ರಿಕಾದಿಂದ ಕಲಿಸಲ್ಪಟ್ಟದ್ದು ಎಂಬಲ್ಲಿಗೆ ಈ ಗ್ರಂಥದ ಸಂಗ್ರಹಕಾರ ಮತ್ತೊಂದು ಗ್ರಂಥಕ್ಕೆ ಋಣಿಯಾಗಿದ್ದಾನೆನ್ನಬಹುದು. ೯ರಿಂದ ೧೨ನೇ ಅಧ್ಯಾಯದವರೆಗೂ ೯ ಬಗೆಯಾದ ಶೃಂಗನಾಟ್ಯವೆಂಬ ಒಂದು ವಿಶಿಷ್ಟ ಶೈಲಿಯ ನೃತ್ಯ, ಮತ್ತು ಅದರ ನೃತ್ಯತಂತ್ರಗಳು ಸುಮತಿಯ ಪ್ರಾರ್ಥನೆಗನುಸಾರವಾಗಿ ನಂದಿಕೇಶ್ವರನು ಹೇಳುವ ಕತೆಯ ಮೂಲಕ ಕಂಡುಬರುತ್ತವೆ. ೧೩ನೇ ಅಧ್ಯಾಯದಲ್ಲಿ ಸಪ್ತಲಾಸ್ಯಗಳ ಬಗ್ಗೆ ನಂದಿಕೇಶ್ವರನು ಸುಮತಿಗೆ ಹೇಳುವ ಸನ್ನಿವೇಶವಿದ್ದು; ಮಹರ್ಷಿ ಯಾಜ್ಞವಲ್ಕ್ಯನು ಈ ನೃತ್ಯದಲ್ಲಿ ನಿಷ್ಣಾತನೆಂದು ತಿಳಿಸುತ್ತಾನೆ. ದೇಶೀ ಲಾಸ್ಯಕ್ರಮವನ್ನು ಚಾರ್ಯಾಲಂಕಾರ ನಟನ ಅಥವಾ ಸಪ್ತಲಾಸ್ಯವೆಂದು ಹೆಸರಿಸಲಾಗಿದ್ದು; ವಿವಿಧ ದೇವತೆಗಳು ವಿವಿಧ ನೃತ್ಯಗಳನ್ನು ಸೃಷ್ಟಿಸಿದ ಕಥೆಗಳೆಲ್ಲವೂ ಇವೆ. ಒಟ್ಟಿನಲ್ಲಿ ನಾಟ್ಯಶಾಸ್ತ್ರಕ್ಕಿಂತ ಭಿನ್ನವಾಗಿ ತಾಂಡವ ಮತ್ತು ಲಾಸ್ಯದ ಲಕ್ಷಣ ವರ್ಗೀಕರಣಗಳು ಬಹಳ ಕಂಡುಬರುತ್ತವೆ. ೧೪ನೇ ಅಧ್ಯಾಯದಲ್ಲಿ ತಾಂಡವಕ್ಕೆ ಸಂಬಂಧಿಸಿದ ಗತಿ, ಕರಣ, ಚಾರಿಗಳ ಬಗ್ಗೆ ಉಲ್ಲೇಖಗಳಿವೆ. ಇವೆಲ್ಲ ಅಧ್ಯಾಯಗಳ ಮಧ್ಯೆ ಮಧ್ಯೆ ದೇಶಿಕರಣಗಳ ಉಲ್ಲೇಖವಿದೆಯಾದರೂ ಅದನು ನರ್ತಿಸುವ ಪಾಠ್ಯವನ್ನು ನೀಡಲಾಗಿಲ್ಲ. ಇಂತಹ ಕರಣಗಳು ಪಾಟಾಕ್ಷರಗಳಿಂದ ಕೂಡಿದ್ದು; ನೃತ್ಯೋತ್ಸವಗಳು ಮುಗಿದ ಮೇಲೆ ಅದರಿಂದ ನೃತ್ಯಗಳನ್ನು, ತಾಳ, ಪಾಟಾಕ್ಷರಗಳನ್ನು, ಅದರ ಕ್ರಮ, ಹೆಸರು, ರೂಪ ಚಲನಾಕ್ರಮವನ್ನು ಆಯ್ದುಕೊಂಡು ಬರೆದೆ ಎನ್ನುತ್ತಾನೆ. ಇವುಗಳನ್ನು ಒಟ್ಟಾಗಿ ಕರಣಭೂಷಣವೆಂದು ಕರೆಯಲಾಗಿದ್ದು; ಇದನ್ನು ಮೊದಲಿಗೆ ಬೃಹಸ್ಪತಿಗೆ ಹೇಳಿಕೊಡಲಾಯಿತು ಎಂದೂ ತಿಳಿಸುತ್ತಾನೆ. ಅಂತೂ ಭರತಾರ್ಣವಕ್ಕಿಂತಲೂ ಮೊದಲಿಗೆ ನಂದಿಕೇಶ್ವರನು ಕರಣಭೂಷಣವೆಂಬ ಗ್ರಂಥವನ್ನು ಬರೆದಿದ್ದನೆಂದೂ, ಅದರಿಂದ ಕೆಲವೊಂದು ವಿಚಾರಗಳನ್ನು ಈ ಗ್ರಂಥಕ್ಕೂ ಆರಿಸಲಾಗಿದೆಯೆಂದು ತಿಳಿದುಬರುತ್ತದೆ. ಹಾಗೆಯೇ ಗ್ರಂಥ ಮುಕ್ತಾಯದ ಭಾಗಗಳಲ್ಲಿ ಗುಹೇಶಭರತ ಲಕ್ಷಣ ಸಮಾಪ್ತಂ ಎಂದಿರುವುದನ್ನು ಗಮನಿಸಿದರೆ ಸ್ಕಂದಭರತ ಎಂಬ ಗ್ರಂಥವನ್ನೂ ಪರಾಮರ್ಶಿಸಲಾಗಿದೆ ಎಂಬುದು ಸ್ಪಷ್ಟಪಡುತ್ತದೆ. ಭರತಾರ್ಣವದ ಸಂಪಾದಕರಾದ ವಾಸುದೇವ ಶಾಸ್ತ್ರಿಗಳ ಪ್ರಕಾರ ಭರತ ಸೇನಾಪತಿಯೆಂಬ ತಮಿಳು ಗ್ರಂಥವೂ ಗುಹೇಶಭರತಲಕ್ಷಣಮ್ ಎಂಬಂತೆ ಕಂಡುಬಂದಿದೆ.

ಗ್ರಂಥಾಂತ್ಯದಲ್ಲಿ ಒಂದಷ್ಟು ಅನುಬಂಧದ ವಿಚಾರಗಳನ್ನೂ ನೀಡಲಾಗಿದೆ. ಒಟ್ಟಿನಲ್ಲಿ ಇವೆಲ್ಲ ಲಕ್ಷಣಗಳು, ಕಥೆಗಳೂ ಈ ಗ್ರಂಥವನ್ನು ನಾಟ್ಯಶಾಸ್ತ್ರಕ್ಕಿಂತ ಪ್ರಾಚೀನ ಎಂದು ನಿರೂಪಿಸುವಂತೆ ಕಾಣಿಸುತ್ತದೆಯಾದರೂ; ನಾಟ್ಯಶಾಸ್ತ್ರಕ್ಕಿಂತ ಬಹುದೂರಕ್ಕೆ ಇತ್ತೀಚಿನ ಮಧ್ಯಕಾಲಗಳಲ್ಲಿ ಈ ಗ್ರಂಥ ರಚನೆಯಾಗಿದೆ ಎನ್ನುವುದನ್ನು ಮತ್ತದೇ ಇದರ ಕಥೆ- ಲಕ್ಷಣ ಕ್ರಮಗಳಿಂದ ಅಂದಾಜಿಸಬಹುದು. ಅಂದರೆ ಪುರಾಣಪುರುಷರನ್ನು, ದೇವತೆಗಳನ್ನು ಉಲ್ಲೇಖಿಸಿದರೂ ಇದು ತೀರಾ ಅರ್ವಾಚೀನ ಗ್ರಂಥ ಎಂಬುದು ಸಾಬೀತುಪಡುತ್ತದೆ.

ಅನೇಕ ನೃತ್ಯಶಾಸ್ತ್ರಗ್ರಂಥಗಳಲ್ಲಿ ಭರತಾರ್ಣವ ಪ್ರಸ್ತಾವಿಸುವ ವಿಷಯಗಳು ಯಥಾವತ್ತಾಗಿ ಅಥವಾ ಹೋಲಿಸುವಂತೆ ಕಂಡುಬಂದಿವೆ. ಉದಾಹರಣೆಗೆ ೧೯ನೇ ಶತಮಾನದ್ದೆನ್ನಲಾದ ಭರತಕಲ್ಪಲತಾಮಂಜರಿ, ರಸಿಕಜನಮನೋಲ್ಲಾಸಿನಿ ಸಾರಸಂಗ್ರಹ ಭರತಶಾಸ್ತ್ರಮು ಎಂಬಿವೇ ಮೊದಲಾದ ಅನೇಕ ಸಂಗ್ರಹ ಗ್ರಂಥಗಳಲ್ಲಿ ಭರತಾರ್ಣವದ ಲಕ್ಷಣಶ್ಲೋಕಗಳು ಇವೆ. ಮಹಾಮಹೋಪಾಧ್ಯಾಯ ಡಾ. ರಾ.ಸತ್ಯನಾರಾಯಣ ಭರತಕಲ್ಪಲತಾ ಮಂಜರಿ ಮತ್ತು ರಸಿಕಜನಮನೋಲ್ಲಾಸಿನಿ ಸಾರಸಂಗ್ರಹದಿಂದ ಆಯ್ದು ಭರತಾರ್ಣವದಲ್ಲಿ ಸಂಗ್ರಹಿಸಲಾಗಿದೆ ಎಂದೂ ಅಭಿಪ್ರಾಯಿಸಿರುವುದಿದೆ. ಈ ಮೂರೂ ಗ್ರಂಥಗಳನ್ನು ಪರಿಶೀಲಿಸಿದರೆ ಅವರ ಹೇಳಿಕೆ ಸತ್ಯವೆಂದೇ ಕಾಣುತ್ತದೆ. ಆದರೂ ಭರತೋತ್ತರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಅನೇಕ ಉಪರೂಪಕಗಳ ಸಾಧ್ಯತೆಗಳನ್ನು ಹೊಂದಿದ ಭರತಾರ್ಣವ- ಒಂದು ಶೋಧಕ್ಕೆ ಆಕರವಾಗುವಷ್ಟರ ಮಟ್ಟಿಗೆ ವಿಚಾರಬಾಹುಳ್ಯವನ್ನು ಹೊಂದಿದೆ.

ಗ್ರಂಥಕರ್ತೃ ನಂದಿಕೇಶ್ವರನು ಶಿವನ ವಾಹನನೇ?

ನಂದಿಕೇಶ್ವರನು ಶಿವನ ವಾಹನ, ಗಣಪ್ರಮುಖನೆಂದೇ ಪ್ರಸಿದ್ಧ. ಶಾಸ್ತ್ರಪ್ರಪಂಚದಲ್ಲಿಯೂ ಇದೇ ಹೆಸರಿನ ಲಾಕ್ಷಣಿಕನು ಇದ್ದಾನೆ. ಆತ ನಾಟ್ಯಶಾಸ್ತ್ರಕ್ಕೆ ೧೦ನೇ ಅತಮಾನದ ಹೊತ್ತಿಗೆ ವ್ಯಾಖ್ಯಾನ ಬರೆದ ಅಭಿನವಗುಪ್ತನ ಮೊದಲಿಗೂ ಮತ್ತು ಅನಂತರದಲ್ಲಿಯೂ ಸಿಗುತ್ತಾನೆ. ಆದರೆ ಅಭಿನವಭಾರತೀ ಉಲ್ಲೇಖಗಳಲ್ಲಿರುವ ನಂದಿಕೇಶ್ವರನು ಅಭಿನಯದರ್ಪಣ, ಭರತಾರ್ಣವಗಳ ಕರ್ತೃವಾಗಿರಲಿಕ್ಕಿಲ್ಲವೆನಿಸುತ್ತದೆ. ಹೀಗಿದ್ದೂ ಲಾಕ್ಷಣಿಕ ನಂದಿಕೇಶ್ವರನೇ ಶಿವನ ವಾಹನ ನಂದಿಯೆಂದೂ ಮತ್ತು ಆತನು ಭರತಮುನಿಗಿಂತಲೂ ಹಳಬನೆಂದೂ; ಹೇಳುವುದಿದೆ. ಆದರೆ ಪುರಾಣಪುರುಷರ ಹೆಸರುಗಳನ್ನು ಹೊತ್ತ ವ್ಯಕ್ತಿಗಳು ಸಾಮಾನ್ಯರೂ ಆಗಿರಬಹುದಲ್ಲ! ಇಲ್ಲವೇ ತಾವು ನಂಬುವ ಪರಂಪರೆಯ ಮೂಲಪುರುಷನ ಹೆಸರನ್ನೇ ಮುಂದುವರೆಸಿಕೊಂಡು ಬಂದ ಕುಲಕರ್ತವ್ಯ ಅವರ ಪಾಲಿಗಿದ್ದರಬಹುದು. ಉದಾಹರಣೆಗೆ: ಮತಂಗಭರತಮ್, ಆದಿಭರತ, ಸದಾಶಿವಭರತ, ಅರ್ಜುನಭರತ, ಮೊದಲಾದವು ಭರತ, ಮತಂಗನಾಮಕವೇ ಆದರೂ ಇವು ಅರ್ವಾಚೀನ ಅಂದರೆ ಇತ್ತೀಚೆಗಿನ ಶತಮಾನಗಳಲ್ಲಿ ಬಂದಿರುವ ಗ್ರಂಥಗಳೇ ಆಗಿವೆ. ಹೀಗೆಯೇ ಪೂರ್ವಾಚಾರ್ಯರೆನಿಸಿರುವ ಇನ್ನಿತರ ಲಾಕ್ಷಣಿಕರು ನಾರದ, ಮತಂಗ, ಆಂಜನೇಯ, ಯಾಜ್ಞವಲ್ಕ್ಯ, ಸದಾಶಿವ/ಮಹೇಶ್ವರ, ಪಾರ್ವತೀ, ಅರ್ಜುನ, ಬೃಹಸ್ಪತಿ, ಕೋಹಲರ ಹೆಸರುಗಳೂ ಕೂಡಾ. ಇವರ ಹೆಸರಿನಲ್ಲಿಯೇ ಹಲವು ಗ್ರಂಥಗಳು ಇವೆಯಾದರೂ ಅವೆಲ್ಲವೂ ಒಂದೇ ಕಾಲಘಟ್ಟಕ್ಕೆ ಸೇರಿದ ಗ್ರಂಥಗಳಲ್ಲ. ಇವರ ಹೆಸರುಗಳು ಪೌರಾಣಿಕ ವ್ಯಕ್ತಿಗಳದ್ದೇ ಆದರೂ ಅವರ ವ್ಯಕ್ತಿತ್ವ ಅಲೌಕಿಕದ್ದಲ್ಲ. ಹಾಗೆಂದೇ ಪೂರ್ವಸೂರಿಗಳಾದ ಗ್ರಂಥಕಾರರೆಲ್ಲರೂ ಪುರಾಣಪುರುಷರಲ್ಲ; ಮತ್ತು ಅವರ ಹೆಸರಿನಲ್ಲಿರುವ ಉಲ್ಲೇಖಗಳೆಲ್ಲವೂ ಭರತನಿಗಿಂತಲೂ ಪ್ರಾಚೀನ ಎಂದೆಣಿಸಬೇಕಿಲ್ಲ. ಹೀಗೆ ಹೇಳುವಲ್ಲಿ ಆ ಗ್ರಂಥಗಳನ್ನು ಮೂಲದಲ್ಲೇ ಓದಿ ತಿಳಿದ ಅಧ್ಯಯನ ಈ ಲೇಖನದ ರಚನಾಕಾರರಿಗಿದೆ.[3]

ಹಾಗೆಯೇ ಯಾವುದೇ ಗ್ರಂಥರಚನಕಾರನು ತನ್ನ ಹಿಂದಿನವರ ಅಂದರೆ ಪೂರ್ವಸೂರಿಗಳ ಹೆಸರನ್ನು ತನ್ನ ಗ್ರಂಥ ಲಕ್ಷಣಗಳೊಳಗೆ ಉದ್ಧರಿಸಿಕೊಳ್ಳುವುದರ ಹಿನ್ನೆಲೆಯಲ್ಲಿ ಬಹಳಷ್ಟು ಭಾವನೆಗಳಿರುತ್ತವೆ. ಅಂದರೆ ತಾವು ನಂಬಿಕೊಂಡು ಬಂದ ಪರಂಪರೆಯನ್ನು ಪಾಲಿಸುವ ಋಣ, ತಮ್ಮ ಪ್ರಾಚೀನರ ಬಗೆಗೆ ಪ್ರೀತಿ-ನಿಷ್ಠೆ ಇದ್ದಿರಬಹುದು ಅಥವಾ ಪರಂಪರೆಯಲ್ಲಿ ಕರ್ಣಾಕರ್ಣಿಯಾಗಿ ತಿಳಿದುಬಂದ ಕಥೆಗಳನ್ನು ಅಳವಡಿಸಿಕೊಂಡಿರಲೂಬಹುದು. ಇಲ್ಲವೇ ತಮ್ಮ ಲಕ್ಷಣರಚನೆಯ ಜ್ಞಾನದ ಬಗ್ಗೆ ಓದುಗರಲ್ಲಿ ‘ಇದು ಅಧಿಕೃತ’ ಎಂಬ ಅಭಿಪ್ರಾಯವನ್ನು ಸೃಷ್ಟಿಸುವುದು ಮತ್ತು ಪುರಾಣೋಕ್ತ/ಪ್ರಾಚೀನ ಉಲ್ಲೇಖಗಳನ್ನು ತಂದಷ್ಟೂ ತಾವು ತರ್ಕಾತೀತವಾಗಬಹುದು ಎಂಬ ಭಾವನೆಯೂ ಕೆಲವೊಮ್ಮೆ ಇರುತ್ತದೆ. ಅಂತೆಯೇ ಗ್ರಂಥ ಲಕ್ಷಣಗಳನ್ನು ಬರೆಯುವ ಕಾಲಕ್ಕೆ ಏರ್ಪಟ್ಟಿರಬಹುದಾದ ಚರ್ಚೆ-ಸಂವಾದ-ಗೋಷ್ಠಿಯ ಮುಖ್ಯಾಂಶಗಳನ್ನು, ತರ್ಕಗಳನ್ನು ಸಾಧ್ಯವಾದಷ್ಟೂ ಕಾಲಾತೀತವೆನಿಸಬೇಕು, ಸಾಧಾರಣೀಕರಣಗೊಳಿಸಬೇಕು ಎಂಬ ಆಶಯದಲ್ಲಿಯೂ ಪುರಾಣಪುರುಷರನ್ನು ಉಲ್ಲೇಖಿಸುವುದು ಇದ್ದಂತಿದೆ. ಒಟ್ಟಿನಲ್ಲಿ ಗ್ರಂಥಕರ್ತೃ ಮತ್ತು ಆತನ ಕಾಲವನ್ನು ಗ್ರಂಥದೊಳಗಿನ ಲಕ್ಷಣವಿಚಾರಕ್ಕೆ ಸಾಪೇಕ್ಷವಾಗಿ ಗಣಿಸಿ ಗ್ರಂಥಮೌಲ್ಯ ಮತ್ತು ಕಾಲದ ನಿರ್ಣಯ ಮಾಡಬೇಕು. ಕೇವಲ ಗ್ರಂಥರಚನಾಕಾರನ ಹೆಸರನ್ನಾಗಲೀ-ಕಾಲವನ್ನಾಗಲೀ ಅಥವಾ ಪುರಾಣಪ್ರಸಕ್ತಿಯನ್ನಷ್ಟೇ ಗಣಿಸಿ ಶ್ರೇಷ್ಠತೆಯನ್ನು ತೂಗಲಾಗದು.

ಪರಾಮರ್ಶನ ಕೃತಿಗಳು

Apparao (Ed.) (1997). Nandikeshwara Abhinayadarpana. Hyderabad: Natyamala Publication.

Nagar, R, S and Joshi (Ed.) (2012). Natyashastra of Bharatamuni with the commentary of Abhinavabharati by Abhinavagupta. 1-2-3-4 volumes.  Delhi: Parimal Publication.

Sastri, Vasudeva, K (Ed.) (1998). Bharatarnava-Nadikeshwara Virachita. Tanjavur: Maharaja Serfoji’s Sarasvati Mahal Library.

Sangita Sudhakarah by Haripala deva (Devanagari manuscript 1-204 leaves; A 843 Accession no. Film no Fn 424). Mysore: Oriental Research Institute.  And Govt Oriental Manuscript Library Manuscript, Madras R No. 779 and 3082 procured by Indira Kala Sangeeta Vishwavidyalaya, Kairaghar University, Madhyapradesh, GOML87pp. Vol 2nd. <https://ia902805.us.archive.org/view_archive.php?archive=/11/items/sangitasudhakaraharipala/Sangita%20sudhakara_Haripala.zip&file=SangitaSudhakara-1-IKSV-RBmf102.pdf>

Apparao (Ed.) (1997). Nandikeshwara Abhinayadarpana. Hyderabad: Natyamala Publication.

Sastri, Subbanarasimha (Ed.) (1906).Venkatasundarasani Sankalita Rasika Jana Manollasini Sara sangraha BharataShastramu. Mysore : His holiness Odeyar and Venkataramyya Printing Works.


ಹೆಚ್ಚಿನ ವಿವರಗಳು ಈ ಕೆಳಕಂಡ ಗ್ರಂಥಗಳಲ್ಲಿದೆ.

ಮನೋರಮಾ ಬಿ.ಎನ್. ನಂದಿಕೇಶ್ವರ

ಮನೋರಮಾ ಬಿ.ಎನ್. ಯಕ್ಷಮಾಗಮುಕುರ– ಅಧ್ಯಯನ ಕೃತಿ

  1. https://www.youtube.com/watch?v=n862av5EqDQ&t=300s&ab_channel=NoopuraBhramari
  2. ಓದಿ. ಯಕ್ಷಮಾರ್ಗಮುಕುರ.
  3. ನಂದಿಕೇಶ್ವರ ಅಧ್ಯಯನ ಕೃತಿ. https://www.noopurabhramari.com/want-to-subscribe-noopura-bhramari-and-purchase-the-dance-books/
  4. 2022. ಯಕ್ಷಮಾರ್ಗಮುಕುರ, ಡಾ.ಮನೋರಮಾ ಬಿ.ಎನ್.

Leave a Reply

*

code