ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 11- ಬಂಡಾರು ಲಕ್ಷ್ಮೀನಾರಾಯಣಾಚಾರ್ಯನ ಸಂಗೀತ ಸೂರ್ಯೋದಯ

Posted On: Sunday, December 24th, 2023
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 11- ಉಭಯಕಾರ ವಿದ್ವಾಂಸ – ಭರತಾಚಾರ್ಯ ಬಂಡಾರು ಲಕ್ಷ್ಮೀನಾರಾಯಣಾಚಾರ್ಯನ ಸಂಗೀತ ಸೂರ್ಯೋದಯ ಮತ್ತು ಮುಂಡುಂಭಿ ಲಕ್ಷ್ಮಣ ಭಾಸ್ಕರನ ಹೆಸರಿನಲ್ಲಿರುವ ಮತಂಗ ಭರತಮ್. ಈ ಸಂಚಿಕೆಯಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನು ಆಧರಿಸಿ ಬರೆದ ಲಕ್ಷಣಗಳ ವಿಚಾರವಿದೆ.

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 11- Banḍaru Lakshmīnārāyaṇa’s Sangīta Sūryōdaya and Muḍumbi Lakshma Bhaskara’s Matanga Bharatm. This episode also emphasizes the specialty Lakśhaṇas in mentioning the King Shri Krishṇadevarāya’s contribution in these treatises.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ಬಂಡಾರು ಶ್ರೀಲಕ್ಷ್ಮೀನಾರಾಯಣ ಅಥವಾ ಲಕ್ಷ್ಮಣ ಬರೆದ ಸಂಗೀತಶಾಸ್ತ್ರ ಗ್ರಂಥ ಸಂಗೀತಸೂರ್ಯೋದಯ. ಸಂಗೀತವೆಂಬ ಶಾಖೆಗೆ ಸೂರ್ಯೋದಯಸಮಾನವಾದದ್ದು ಎಂಬ ಅರ್ಥವನ್ನು ಇದು ಹೊಂದಿದೆ. ಈ ಗ್ರಂಥರಚನೆಯ ಕಾಲ ವಿಜಯನಗರ ಕರ್ನಾಟ ಸಾಮ್ರಾಜ್ಯ. ಅದರಲ್ಲೂ ಕೃಷ್ಣದೇವರಾಯನ ಆಡಳಿತ ಕಾಲ.

ಗ್ರಂಥರಚನೆಗೆ ಪ್ರೇರಣೆ

ಎಷ್ಟೋ ಮಂದಿ ತಮ್ಮ ಆಶ್ರಯದಾತಾರರ ಹೆಸರಿನಲ್ಲಿ ಗ್ರಂಥಗಳನ್ನು ಬರೆದವರಿದ್ದಾರೆ. ಇನ್ನೂ ಕೆಲವರು ರಾಜನ ಪ್ರೀತ್ಯರ್ಥವಾಗಿ ಅಥವಾ ಋಣಸಂದಾಯಕ್ಕೆಂದು ಹೊಸ ಲಕ್ಷಣಗಳನ್ನು ಆಯಾ ರಾಜರುಗಳ ಹೆಸರಲ್ಲೇ ಟಂಕಿಸಿದವರಿದ್ದಾರೆ. ಕಾರಣ, ಗ್ರಂಥರಚನೆ ಮತ್ತು ಸಾಂಸ್ಕೃತಿಕ ಚೈತನ್ಯವೃದ್ಧಿಗೆಂದೇ ಭಾರತದ ರಾಜಪ್ರಭುತ್ವಗಳು ಕೆಲಸ ಮಾಡಿವೆ. ಅವರ ಆಶ್ರಯದಲ್ಲಿ ಆಸ್ಥಾನ, ದೇವಾಲಯ, ಸಾಮಾಜಿಕ ಉತ್ಸವವೇ ಮೊದಲಾದ ಸ್ಥಳಗಳಲ್ಲಿ ಕಲೆ- ವಿದ್ಯೆಗಳ ಪ್ರಸಾರ, ಬೋಧನೆ, ಪ್ರದರ್ಶನಗಳು ಅನೂಚಾನವಾಗಿ ನಡೆಯುತ್ತಿತ್ತು. ಕಲಾವಿದರಿಗೆಂದೇ ಅನೇಕ ದತ್ತಿ ದಾನಗಳನ್ನು ರಾಜರುಗಳು ಮಾಡಿರುವುದನ್ನು ಗ್ರಂಥರಾಶಿಗಳಷ್ಟೇ ಅಲ್ಲ ದೇವಾಲಯಶಿಲ್ಪಗಳು, ಶಾಸನಗಳೂ ವಿಧವಿಧವಾಗಿ ಸ್ಮರಿಸಿಕೊಂಡಿವೆ.

ಗುಪ್ತ, ಮೌರ್ಯ, ಚೋಳ, ಚಾಳುಕ್ಯ, ಪಲ್ಲವ, ಹೊಯ್ಸಳ, ರಾಷ್ಟ್ರಕೂಟ, ವಿಜಯನಗರ ಮೊದಲಾದ ಹೆಸರಾಂತ ಸಾಮ್ರಾಜ್ಯಗಳಿಂದ ಮೊದಲ್ಗೊಂಡು ಸಾಮಂತರಾಜರವರೆಗೂ ಸಂಸ್ಕೃತಿ-ಕಲೆಗಳ ಪ್ರಸಾರ ಅನನ್ಯವೂ, ಅದ್ಭುತವೂ ಎನಿಸುವಂತೆ ಇತ್ತು. ಭಾರತೀಯ ಇತಿಹಾಸದ ಯಾವುದೇ ಕಾಲಘಟ್ಟಗಳಲ್ಲೂ ದೇಶ-ಪ್ರಭುತ್ವಗಳ ಭೇದವಿಲ್ಲದೆ, ವಿದ್ಯಾರ್ಜನೆಗೈದ ಕವಿ-ಪಂಡಿತ-ಕಲಾವಿದರಿಗೆ ಆದ್ಯತೆ ಅಪಾರವಾಗಿ ಇತ್ತು. ಎಲ್ಲ ಭಾರತೀಯ ಮನಸ್ಸಿನ ಸಾಮ್ರಾಜ್ಯಗಳೂ ತಮಗಿದ್ದ ಯುದ್ಧ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆ-ಸವಾಲುಗಳ ನಡುವೆಯೂ ಕಲೆ-ಸಂಸ್ಕೃತಿ-ಸಾಹಿತ್ಯದ ಮಟ್ಟಿಗೆ ಸುವರ್ಣಯುಗದಂತೆಯೇ ನಡೆದುಕೊಂಡಿವೆ. ಸ್ವತಃ ಲಕ್ಷ್ಮೀನಾರಾಯಣನ ತಂದೆ ವಿಟ್ಠಲನು ಸಂಗೀತರತ್ನಾಕರಕ್ಕೆ ತೆಲುಗಿನಲ್ಲಿ ವ್ಯಾಖ್ಯಾನ ಬರೆದಿದ್ದನೆಂದೂ, ಸಾಕಷ್ಟು ಉತ್ತಮ ಮೊತ್ತದ ಬಂಗಾರವನ್ನು ಬೇರೆ ಪ್ರಾಂತ್ಯದ ರಾಲರಿಂದ ಬಹುಮಾನವಾಗಿ ಪಡೆದಿದ್ದನೆಂದೂ ತಿಳಿದುಬರುತ್ತದೆ.[1]

ಹೀಗಿರುವಾಗ ತನ್ನ ಆಶ್ರಯದಾತರನ್ನು ಹೊಗಳಿ ಅವರ ಹೆಸರಿನಲ್ಲಿ ಲಕ್ಷಣಗಳನ್ನು ವಿಶೇಷವಾಗಿ ಸೇರಿಸುವುದು ಖಂಡಿತ ಅತಿಶಯವಲ್ಲ. ಬದಲಾಗಿ ಆಗಬೇಕಾದದ್ದು. ಅಂಥ ಲಾಕ್ಷಣಿಕರಲ್ಲಿ ಲಕ್ಷ್ಮೀನಾರಾಯಣನೂ ಸೇರಿದ್ದಾನೆ. ಈತ ತನ್ನ ದೊರೆ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಲಾಕ್ಷಣಿಕನಾಗಿ, ನಾಟ್ಯಾಚಾರ್ಯನಾಗಿ ಅಭಿನವಭರತ ಎಂಬ ಅಭಿಧಾನಕ್ಕೆ ಪಾತ್ರನಾಗಿದ್ದ. ಲಕ್ಷ್ಯ-ಲಕ್ಷಣಗಳೆರಡರಲ್ಲೂ ಸಮಾನ ಪ್ರತಿಭಾ ವ್ಯುತ್ಪತ್ತಿಯಿದ್ದ ವಿದ್ವಾಂಸನಾಗಿದ್ದ. ಈತ ಶ್ರೀಕೃಷ್ಣದೇವರಾಯನ ಹೆಸರನ್ನು ಗ್ರಂಥದ ನಾಂದಿಯಲ್ಲಿ ಕೊಂಡಾಡಿದ್ದಾನೆ.ಜೊತೆಗೆ ಶ್ರೀಕೃಷ್ಣದೇವರಾಯನ ಸ್ಮರಣೆಯಾಗುವಂಥ ಕೆಲವು ಲಕ್ಷಣಗಳೂ ಇವೆ. ಆ ಕಾಲದ ಆಸುಪಾಸಿನಲ್ಲಿ ಬಂದಿರುವ ಸಂಗೀತಶಾಸ್ತ್ರಗ್ರಂಥಗಳಿಗೆ ಹೋಲಿಸಿದರೆ ಈತ ಬಹಳ ಪ್ರೌಢವಾದ ಸಂಸ್ಕೃತದಲ್ಲಿ ಲಕ್ಷಣಗಳನ್ನು ರಚಿಸಿದ್ದಾನೆ.[2]

ಸಂಗೀತ ಸೂರ್ಯೋದಯ – ಅಧ್ಯಾಯಕ್ರಮ ಮತ್ತು ಲಕ್ಷಣ ವಿಶೇಷತೆಗಳು

ಸಂಗೀತ ಸೂರ್ಯೋದಯದಲ್ಲಿ ಒಟ್ಟು ಐದು ಅಧ್ಯಾಯಗಳಿವೆ. ವಿಜಯನಗರ ಕರ್ನಾಟ ಸಾಮ್ರಾಜ್ಯದ ವರ್ಣನೆ, ವಿಠಲ ಸ್ತುತಿ, ರಾಮಾನುಜ ವಂದನೆ, ಶ್ರೀಕೃಷ್ಣರಾಯನ ವಿಜಯಯಾತ್ರೆ ಮೊದಲಾದವುಗಳನ್ನೂ ಗ್ರಂಥಾರಂಭಕ್ಕೆ ಗುರುತಿಸಬಹುದು. ವಿಶೇಷ ಎಂದರೆ ಬೇರೆ ಸಂಗೀತ ಶಾಸ್ತ್ರಗ್ರಂಥಗಳ ಮಧ್ಯಭಾಗದಲ್ಲಿ ಕಂಡುಬರುವ ತಾಲಾಧ್ಯಾಯವು ಇಲ್ಲಿ ಆರಂಭಿಕ ಅಧ್ಯಾಯವಾಗಿದೆ. ನೂರಿಪ್ಪತ್ತೊಂದು ದೇಶೀತಾಲಗಳ ಸಹಿತ ಅನೇಕ ತಾಲವಿವರಗಳು ಬಹಳ ಸ್ಫುಟವಾಗಿ ಇಲ್ಲಿದೆ.

ಅದಾಗಿ ನೃತ್ತಾಧ್ಯಾಯ. ಭರತನ ಲಕ್ಷಣಗಳಿಂದ ಮೊದಲ್ಗೊಂಡು ಸಂಗೀತರತ್ನಾಕರ ಮೊದಲಾದ ಗ್ರಂಥಗಳಲ್ಲಿರುವ ಅನೇಕಾನೇಕ ಲಕ್ಷಣಗಳನ್ನು ಇಲ್ಲಿಯೂ ಕಾಣಬಹುದು. ಹಸ್ತ, ಸ್ಥಾನಕ, ಚಾರಿ, ಕರಣ, ಅಂಗಹಾರ ಮೊದಲಾದ ಎಲ್ಲದರಲ್ಲೂ ಮಾರ್ಗ ಅಂದರೆ ಭರತನಿಂದ ಬರೆದದ್ದು ಮತ್ತು ಮಾರ್ಗೋತ್ತರ ಕಾಲದ ಅನೇಕ ಲಕ್ಷಣಗಳನ್ನು ಇಲ್ಲಿ ಗಮನಿಸಬಹುದು.

ಅದಾಗಿ ಸ್ವರಾಧ್ಯಾಯ, ಬಳಿಕ ಜಾತ್ಯಾಧ್ಯಾಯ ಅಂದರೆ ಈ ಜಾತಿಯು-ರಾಗವೆಂದು ಅರ್ಥ. ನಾಟ್ಯಶಾಸ್ತ್ರಕಾಲದಲ್ಲಿ ಇಂದಿನ ರಾಗಗಳಿಗೆ ಅಂದು ಜಾತಿ ಎನ್ನಲಾಗುತ್ತಿದ್ದರು ಎನ್ನುವುದು ತಿಳಿಯುತ್ತದೆ. ರಾಮಾಯಣದಲ್ಲೂ ಕುಶ ಲವರು ರಾಮಾಯಣವನ್ನು ಹಾಡಿದ್ದು ಜಾತಿಯಿಂದ. ಇರಲಿ., ಸಂಗೀತಸೂರ್ಯೋದಯದ ವಿಚಾರಕ್ಕೆ ಬಂದರೆ ಜಾತ್ಯಾಧ್ಯಾಯದ ಬಳಿಕ ವಿವಿಧ ರೀತಿಯ ಗೇಯ ಪ್ರಬಂಧ ಅಂದರೆ ಗೀತರಚನೆಗೆ ಪಾಲಿಸಬೇಕಾದ ಲಕ್ಷಣಗಳ ಅಧ್ಯಾಯವಿದೆ. ಗಜಲ್, ಕೌಲ್ ಮೊದಲಾಗಿ ತುರುಷ್ಕರ ಅನೇಕ ಪ್ರಬಂಧಗಳನ್ನು ಲಕ್ಷ್ಮೀನಾರಾಯಣನು ಉಲ್ಲೇಖಿಸುತ್ತಾನೆ.

ಪಾಠಾಂತರ ಗ್ರಂಥ – ಲಕ್ಷ್ಮಣ ಭರತಮ್ ಅಥವಾ ಮತಂಗ ಭರತಮ್

ಇದೇ ಗ್ರಂಥದ ಅಚ್ಚುಪ್ರತಿಯೆಂದೇ ತೋರುವ ಆದರೆ ಹೆಸರಿನಲ್ಲಷ್ಟೇ ಬೇರೆಯೆಂದು ಅನಿಸುವ ಹಸ್ತಪ್ರತಿಯೊಂದಿದೆ. ಅದು ಮುಡುಂಬಿ ಲಕ್ಷ್ಮಣಭಾಸ್ಕರನ ಲಕ್ಷ್ಮಣಭರತಮ್ ಅಥವಾ ಮತಂಗಭರತಮ್ ಎಂಬ ಗ್ರಂಥ. ಹೆಸರು ಮತಂಗ ಭರತವೆಂದು ಇದ್ದರೂ ಮತಂಗ ಬರೆದ ಗ್ರಂಥವಲ್ಲ ಇದು. ಬದಲಾಗಿ ವಿಜಯನಗರ ಸಾಮ್ರಾಜ್ಯಕಾಲದ ಆಸುಪಾಸಿನಲ್ಲಿಯೇ ಬರೆಯಲ್ಪಟ್ಟದ್ದು ; ಮೇಲಾಗಿ ಮತಂಗ ಭರತ ಅಥವಾ ಲಕ್ಷ್ಮಣ ಭರತವೆಂಬ ಹೆಸರಿನ ಗ್ರಂಥವು ಬಹಳಷ್ಟು ವಿಷಯಗಳಲ್ಲಿ ಸಂಗೀತಸೂರ್ಯೋದಯವನ್ನೇ ಯಥಾವತ್ತು ಹೋಲುವುದರಿಂದ ಈ ಮತಂಗ ಭರತ ಲಕ್ಷ್ಮೀನಾರಾಯಣನ ಸಂಗೀತ ಸೂರ್ಯೋದಯ ಎನ್ನುವುದಕ್ಕೆ ಗ್ರಂಥದ ಒಳಗಿಂದಲೇ ಹಲವು ಸಾಕ್ಷಿಗಳು ಸಿಗುತ್ತವೆ. ಲಕ್ಷ್ಮೀನಾರಾಯಣನಿಗೆ ಲಕ್ಷ್ಮಣಾರ್ಯ ಎಂಬ ಹೆಸರೂ ಇತ್ತು. ಈ ವಿಚಾರವೂ ಸ್ವತಃ ಇದೇ ಗ್ರಂಥದಿಂದ ತಿಳಿಯುತ್ತದೆ.

ಸಂಗೀತ ಸೂರ್ಯೋದಯದ ವಿಶೇಷತೆಯಲ್ಲೊಂದಾದ ಶ್ರೀಕೃಷ್ಣದೇವರಾಯನನ್ನು ಪ್ರಶಂಸಿಸಿ ಲಕ್ಷಣಗಳನ್ನು ಸೇರಿಸಿದ ವಿಚಾರಗಳು ಮತಂಗಭರತದಲ್ಲಿಯೂ ಕಂಡುಬಂದಿದೆ. ಆ ಪೈಕಿ ಸಂಗೀತ ಸೂರ್ಯೋದಯದ ವೈಶಿಷ್ಟ್ಯಗಳಲ್ಲಿ ಒಂದಾದ ಕೃಷ್ಣದೇವರಾಯನ ಹೆಸರಿನಲ್ಲಿರುವ ಕೆಲವು ತಾಲ, ಕರಣ ವಿಚಾರಗಳೂ ಮತಂಗ ಭರತದಲ್ಲಿ ಯಥಾಲಿಪೀಕರಿಸಲ್ಪಟ್ಟಿವೆ. ಆ ಪೈಕಿ ಗಂಗಾವತರಣ ಕರಣದ ಬಳಿಕ ಕೃಷ್ಣಾವತರಣವೆಂಬ ಕರಣ ಪ್ರಮುಖವಾದದ್ದು. ಏನಿದರ ವಿಶೇಷ ಅಂದರೆ- ನಾಟ್ಯಶಾಸ್ತ್ರದಲ್ಲಿ ಗಂಗಾವತರಣವು ನೂರೆಂಟನೆಯ ಅಂದರೆ ಕೊನೆಯ ಕರಣ. ಆದರೆ ಸಂಗೀತ ಸೂರ್ಯೋದಯ ಮತ್ತು ಮತಂಗ ಭರತದಲ್ಲಿ ಮಾತ್ರ ಕಂಡುಬರುವ ಕೊನೆಯ ಕರಣ ಕೃಷ್ಣಾವತರಣ. ಇದು ಕಾಲುಗಳನ್ನು ಆಕಾಶಮುಖವಾಗಿ ಪ್ರಸಾರಿಸುವ ಲಕ್ಷಣವುಳ್ಳ ಶಕಟಾಸ್ಯ ಎಂಬ ಚಾರೀ ಸಹಿತವಾದ ಕರಣ. ವಿಚಿತ್ರ ಅಂದರೆ, ಗಂಗಾವತರಣಕ್ಕೆ ನಿಕಟವಾಗಿಯೇ ಕೃಷ್ಣಾವತರಣ ಕರಣವಿದೆ. ಒಟ್ಟಿನಲ್ಲಿ ಭರತ ಮತ್ತು ಭರತೋತ್ತರ ನಾಟ್ಯ-ನೃತ್ತ-ನೃತ್ಯಗಳ ಬಗ್ಗೆ ವಿಜಯನಗರ ಕರ್ನಾಟ ಸಾಮ್ರಾಜ್ಯದ ಲಕ್ಷಣಕಾರನಿಂದ ಬರೆಯೆಲ್ಪಟ್ಟ ಕೊಡುಗೆ ಈ ಗ್ರಂಥ.

ಆಧಾರಗ್ರಂಥಗಳು

Tripati, Kamat Prasada  (Ed.) (1986). Sangita Suryodaya- Shri lakshminarayana Virachita (Hindi) Khairaghada: Indira Kala Sangeeta Vishwavidyalaya.

Nagar, R, S and Joshi (Ed.) (2012). Natyashastra of Bharatamuni with the commentary of Abhinavabharati by Abhinavagupta. 1-2-3-4 volumes.  Delhi: Parimal Publication.

Matanga Bharatamu/ Lakshmana Bharatamu/Natya Lakshanamu (Telugu manuscript). TMSSML Tanjore B11546/D 10668 and B11526/D 10667 . Tanjore: Maharaja Serfoji Saraswati Mahal Library.

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library.

Leave a Reply

*

code