ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ ೧೩-ಪಂಡರೀಕ ವಿಠಲನ ನರ್ತನನಿರ್ಣಯ

Posted On: Sunday, January 7th, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೩- ಕನ್ನಡಿಗನಾಗಿದ್ದು ದೆಹಲಿಯ ಅಕಬರನ ಆಸ್ಥಾನದಲ್ಲಿ ಮಾನ್ಯತೆ ಪಡೆದ ಪಂಡರೀಕ ವಿಠಲನ ನರ್ತನನಿರ್ಣಯ ಮತ್ತು ಆತನ ಇನ್ನಿತರ ಸಂಗೀತ ಗ್ರಂಥಗಳು ಹಾಗೂ ಶ್ರೀಕಂಠನ ರಸಕೌಮುದಿ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 13- Panḍarīka Vittala’s (Kannadiga and recognized in Akbar’s court- Delhi) Nartana Nirṇaya and his other music treatises & Rasa Koumudi treatise of Shrikanṭa

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ನರ್ತನಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ನಿರ್ಣಯಿಸಿಕೊಡುವಂಥದ್ದು ಎಂಬ ಹೆಸರನ್ನೇ ಹೊತ್ತ – ನರ್ತನನಿರ್ಣಯ. ಬರೆದಾತ ಕರ್ನಾಟಕದವನೇ ಆಗಿದ್ದ ಪಂಡರೀಕವಿಠಲ. ಈತನನ್ನು ಪುಂಡರೀಕವಿಠಲ ಎಂದೂ ಹೇಳುವುದಿದೆ. ನರ್ತನನಿರ್ಣಯ ರಚನೆಯಾದ ಕಾಲ ಸುಮಾರು ೧೫೬೫-೧೫೭೫ನೇ ಇಸವಿಯ ಒಳಗೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಶ್ರೀ ಪಂಡರೀಕ ವಿಠ್ಠಲನು ಸದ್ರಾಗ ಚಂದ್ರೋದಯ, ರಾಗಮಾಲಾ, ರಾಗಮಂಜರೀ, ದೂತೀಕರ್ಮಪ್ರಕಾಶ ಮತ್ತು ಶೀಘ್ರಬೋಧಿನೀನಾಮಮಾಲಾ ಎಂಬ ಗ್ರಂಥಗಳನ್ನೂ ಬರೆದಿದ್ದಾನೆ. ಆದರೆ ನರ್ತನವೇ ಮುಖ್ಯವಸ್ತುವಾದ ಗ್ರಂಥ ನರ್ತನನಿರ್ಣಯ.

ಪಂಡರೀಕ ವಿಠ್ಠಲ- ವೈಯಕ್ತಿಕ ವಿವರಗಳು

ಪಂಡರೀಕ ವಿಠ್ಠಲ ಕರ್ನಾಟಕಸಂಗೀತದ ನವೋದಯ ಕಾಲದಲ್ಲಿ ಮುಂಚೂಣಿಯಲ್ಲಿದ್ದ ಶಾಸ್ತ್ರಕಾರ, ಬಹುಮುಖ ಪ್ರತಿಭಾವಂತ, ಕಲಾವಿದ. ಪಂಡರೀಕನ ಕಾಲದಲ್ಲಿ ಸ್ವರ, ತಾಳ, ರಾಗ, ದೇವರನಾಮವೇ ಮೊದಲಾದ ವಿವಿಧ ಪ್ರಬಂಧಗಳೆಂಬ ರಚನೆಗಳು ಕಲಾಪ್ರಪಂಚದಲ್ಲಿ ನೂತನ ಆಯಾಮವನ್ನು ಸೃಷ್ಟಿಸುತ್ತಿದ್ದವು. ಹಿಂದೂಸ್ಥಾನೀ ಎಂಬ ಸಂಗೀತಪ್ರಕಾರದಲ್ಲೂ ರಾಗ-ರಾಗಿಣೀ ವರ್ಗೀಕರಣ, ರಾಗಮೇಲಗಳು, ತಾಲಗಳು, ಖ್ಯಾಲ್, ದ್ರುಪದ್ಗಳು ನವೀನ ಸಂಪ್ರದಾಯಕ್ಕೆ ಭಾಷ್ಯ ಬರೆದಿದ್ದವು. ಪರ್ಶಿಯನ್ ಸಂಗೀತಕ್ಕೆ ಸಂಬಂಧಿಸಿದಂತೆ ಅನೇಕ ವಿದ್ವಾಂಸರು ಭಾರತಕ್ಕೆ ಬಂದು ಹೋಗುತ್ತಿದ್ದರು. ಗಜಲ್, ತಬಲ, ಸಿತಾರ್ ಭಾರತೀಯ ಸಂಗೀತವನ್ನು ಪ್ರವೇಶಿಸಿದ್ದವು.

ವಿಜಯನಗರದ ಕರ್ನಾಟ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ತನ್ನ ಆಳ್ವಿಕೆ ಮುಗಿಸಿ ಅಚ್ಯುತರಾಯನು ಚುಕ್ಕಾಣಿ ಹಿಡಿದಿದ್ದ. ಆ ಸಂದರ್ಭದಲ್ಲಿ ಅಚ್ಯುತರಾಯನಿಂದ ಜಹಗೀರನ್ನು ಪಡೆದು ಸಾವಂತರಾಯ ಎಂಬಾತನು ಮಾಗಡಿ ಪ್ರಾಂತ್ಯವನ್ನು ಆಳುತ್ತಿದ್ದ. ಅಲ್ಲಿ ವಾಸಿಸುತ್ತಿದ್ದ ಜಮದಗ್ನಿ ಗೋತ್ರ ಬ್ರಾಹ್ಮಣನಾಗಿದ್ದ ಮತ್ತು ಭಾಗವತ ಶಿರೋಮಣಿ ಎನಿಸಿಕೊಂಡಿದ್ದ ವಿಠ್ಠಲರ್ಯ (ವಿಠ್ಠಲಯ್ಯ) ಮತ್ತು ದೇಮಕರ ಮಗನೇ ಪಂಡರೀಕ. ಕುಲದೈವ ವಿಠಲರಾಯಸ್ವಾಮಿಯ ಹೆಸರನ್ನೇ ಹೊತ್ತು ಪಂಡರೀಕ ವಿಠಲ ಕರ್ನಾಟಕದ ಶಿವಗಂಗಾ ಬೆಟ್ಟದ ಬಳಿ ಇರುವ ಸಾತನೂರು ಗ್ರಾಮದಲ್ಲಿ ಜನಿಸಿದ್ದ. ಪುರಂದರದಾಸರು ಮತ್ತು ಸ್ವರಮೇಳಕಲಾನಿಧಿಯನ್ನು ಬರೆದ ರಾಮಾಮಾತ್ಯರ ಸಮಕಾಲೀನಾಗಿದ್ದ ಪಂಡರೀಕನ ಕಾಲದಲ್ಲೇ ಉತ್ತರಭಾರತದಲ್ಲಿ ಸೂರದಾಸ್, ಕಬೀರದಾಸ್, ತುಕಾರಾಮರಿದ್ದರು.

ತನ್ನ ಕುಲ-ಗೋತ್ರ ಪ್ರವರಗಳನ್ನು ಮಾತ್ರ ಪಂಡರೀಕನು ಗ್ರಂಥಗಳಲ್ಲಿ ಹೇಳಿದ್ದಾನೆಯೇ ಹೊರತು ಸಂಗೀತ-ನೃತ್ಯ ಶಾಸ್ತ್ರಗಳನ್ನು ಎಲ್ಲಿ, ಯಾರಿಂದ ಕಲಿತನೆಂದು ಸೂಚಿಸಿಲ್ಲ. ಆದರೆ ಸಾತನೂರಿನ ಸುತ್ತಮುತ್ತಲಿನ ಪರಿಸರಗಳಾದ ಕುಣಿಗಲ್, ಮಾಗಡಿ, ಮೈಸೂರು ಪ್ರಾಚೀನ ಕಾಲದಿಂದಲೂ ಸಂಗೀತ-ನೃತ್ಯಕ್ಕೆ ಆಶ್ರಯವಾಗಿದ್ದುದರಿಂದ ಈತನಿಗೆ ಎಲ್ಲಾ ಶಾಸ್ತ್ರಗಳ ಪರಿಚಯ ಸುಲಭಸಾಧ್ಯವಾಗಿದ್ದಿರಬಹುದು. ಮಾಗಡಿ ಪಟ್ಟಣಕ್ಕೆ ಸನಿಹದ ಈ ಸಾತನೂರು ಅಂದಿನ ಕಾಲಕ್ಕೇ ತಂಬೂರಿಯ ತಯಾರಿಕೆಗೆ ಪ್ರಸಿದ್ಧವಾಗಿ ಸಂಗೀತಪೀಠವಾಗಿತ್ತೆನ್ನುವುದೂ ತಿಳಿದುಬರುತ್ತದೆ.

ಗ್ರಂಥಗಳ ರಚನೆ ಮತ್ತು ವಿವರಗಳು

ಪ್ರಾಯಪ್ರಬುದ್ಧನಾದ ಬಳಿಕ ತನ್ನ ತಾಯ್ನಾಡಿನಿಂದ ಪಂಢರಾಪುರದ ವಿಠಲನನ್ನು ಕಾಣಬೇಕೆಂದು ಯಾತ್ರೆ ಹೊರಡುತ್ತಾನೆ ಪಂಡರೀಕ. ತನ್ಮಧ್ಯೆ ಅಕಬರನ ಸಾಮಂತ ರಾಜರಾದ ಬುರ್ಹಾನ್ ಖಾನ್ ಮತ್ತು ಮಾಧವಸಿಂಹ ಅವರ ಭೇಟಿಯಾಯಿತು. ಈತನ ವಿದ್ವತ್ತನ್ನು ಮನಗಂಡು ಅವರು ತಮ್ಮ ಆಸ್ಥಾನದಲ್ಲಿ ಆಶ್ರಯಕೊಟ್ಟರು ಮತ್ತು ವಿಜಯನಗರದ ಕರ್ನಾಟ ಸಾಮ್ರಾಜ್ಯದ ಕಲಾಶ್ರೀಮಂತಿಕೆಯಿಂದ ದಾಕ್ಷಿಣಾತ್ಯ ಮತ್ತು ಉತ್ತರ-ಪೂರ್ವ- ಪಶ್ಚಿಮ ಭಾರತಗಳ ಸಾಕಷ್ಟು ಕಲೆಗಳ ಪರಿಚಯ ಆತನಿಗಿದ್ದದ್ದನ್ನು ಮನಗಂಡು ಈತನು ಕಲಿತ ವಿದ್ಯೆ-ಪ್ರಯೋಗಗಳನ್ನು ಸಮನ್ವಯಗೊಳಿಸಿ ಗ್ರಂಥ ರಚಿಸಿ ಸಂಗೀತ ಪ್ರಪಂಚಕ್ಕೆ ಉಪಕರಿಸಬೇಕೆಂದು ಕೇಳಿಕೊಂಡರು. ಅವರ ಆಶ್ರಯದಲ್ಲಿ ನಾಸಿಕ್ ಬಳಿಯ ಖಾಂಡೇಶ್ ಜಿಲ್ಲೆಯ ಆನಂದವಲ್ಲಿಯಲ್ಲಿ ಪಂಡರೀಕ ನೆಲೆಸಿದ. ಇವರುಗಳ ಆಸ್ಥಾನದಲ್ಲಿ ೧೫೬೦-೧೫೭೦ರ ಅವಧಿಯಲ್ಲಿ ಸದ್ರಾಗಚಂದ್ರೋದಯ ಮತ್ತು ರಾಗಮಂಜರಿ ಎಂಬ ಗ್ರಂಥಗಳನ್ನು ಬರೆದ. ಇವುಗಳಲ್ಲಿ ಸದ್ರಾಗಚಂದ್ರೋದಯವೆಂಬುದು ಕರ್ಣಾಟಕ ಸಂಗೀತದ ರಾಗಪ್ರಪಂಚವನ್ನು ಸ್ವರ, ಸ್ವರಮೇಲ, ಆಲಪ್ತಿಯೆಂಬ ಮೂರು ಭಾಗಗಳಲ್ಲಿ ಹಿಡಿದಿಟ್ಟಿರುವ ಒಟ್ಟು ೨೭೮ ಶ್ಲೋಕಗಳ ಗ್ರಂಥ. ರಾಗಮಂಜರೀ ೧೫೪ ಶ್ಲೋಕಗಳನ್ನು ಹೊಂದಿರುವ ಹಿಂದೂಸ್ಥಾನೀ ರಾಗಗಳ ಗ್ರಂಥ. ೨೧೨ ಶ್ಲೋಕಗಳ ರಾಗಮಾಲಾ ಹಿಂದೂಸ್ಥಾನೀ ಸಂಗೀತ ಪ್ರಪಂಚವನ್ನು ವಿವರಿಸುವ ಕೃತಿ. ಇವುಗಳಲ್ಲಿ, ಪಂಡರೀಕನು ರಾಗಗಳ ದಕ್ಷಿಣ ಮತ್ತು ಉತ್ತರ ವ್ಯವಸ್ಥೆಗಳೆರಡನ್ನೂ ವ್ಯವಹರಿಸುತ್ತಾನೆ. ಅಂದರೆ ಈತ ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತವೆಂಬ ಎರಡೂ ಕವಲುಗಳನ್ನು ಆಳವಾಗಿ ಅರಿತಿದ್ದನೆಂಬುದು ತಿಳಿಯುತ್ತದೆ.

ರಾಗಮಾಲಾವು ನರ್ತನನಿರ್ಣಯದಿಂದ ಉಲ್ಲೇಖಗೊಂಡಿರುವುದರಿಂದ ಇದನ್ನು ಪ್ರತ್ಯೇಕ ಗ್ರಂಥ ಎನ್ನಲಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಉಳಿದ ಗ್ರಂಥಗಳ ಪೈಕಿ ದೂತಿಕರ್ಮವೆಂಬ ಗ್ರಂಥ ದೂತಿ, ನಾಯಕ-ನಾಯಿಕಾ ಭಾವಗಳನ್ನು ವಿವರಿಸಿದ್ದರೆ,[1] ಶೀಘ್ರಭೋಧಿನೀ ನಾಮಮಾಲಾ ಎಂಬುದು ಕೋಶ ಗ್ರಂಥ. ವ್ಯಾಕರಣದ ಛಂದೋಗತಿ, ವೃತ್ತ, ಗಣ, ಅಲಂಕಾರಗಳನ್ನು ಬಳಸಿ ಎಲ್ಲಾ ಗ್ರಂಥಗಳನ್ನು ರಚಿಸಲಾಗಿದೆ.

ಪಂಡರೀಕ ವಿಠಲ ಅನಂತರದಲ್ಲಿ ಅಕ್ಬರ್ ಸುಲ್ತಾನನ ಆಸ್ಥಾನದಲ್ಲಿ ನೆಲೆಸಿ ಗೌರವ ಪಡೆದ. ರಾಗಮಾಲಾ ಮತ್ತು ನರ್ತನನಿರ್ಣಯ ಎಂಬ ಗ್ರಂಥಗಳನ್ನು ಆತ ಬರೆದದ್ದು ಅಕಬರನ ಆಸ್ಥಾನದಲ್ಲಿದ್ದಾಗಲೇ. ಅಲ್ಲಿ ಪಂಡರೀಕನಿಗೆ ಪರ್ಷಿಯನ್ ಆಧಾರಿತ ನೃತ್ಯಗಳು ಮತ್ತು ಸಂಗೀತದ ವಿವಿಧ ಪ್ರಸ್ತುತಿಗಳನ್ನು ವೀಕ್ಷಿಸುವ ಮತ್ತು ಚರ್ಚಿಸುವ ಅವಕಾಶವಿದ್ದಿತ್ತು. ಜೊತೆಗೆ ರಾಜಾ ಮಾನ್ ಸಿಂಗ್, ರಾಜಾ ಮಾಧವ್ ಸಿಂಗ್ ಅವರ ಸಂವಾದಗಳು, ಉತ್ತರ, ಪೂರ್ವ ಮತ್ತು ದಕ್ಷಿಣ ಭಾರತದ ಕಲಾಸಂಪ್ರದಾಯಗಳು ಆತನ ಲಕ್ಷಣ ಬರೆವಣಿಗೆಯಲ್ಲಿ ಅಪಾರ ಕೊಡುಗೆಯನ್ನಿತ್ತಿವೆ. ಪಂಡರೀಕನಿಗೆ ಅಕಬರೀಯ ಕಾಲಿದಾಸ ಎಂಬ ಬಿರುದನ್ನು ಅಕಬರನು ಕೊಟ್ಟು ಗೌರವಿಸಿದನೆಂದು ಕರ್ನಾಟಕದ ಪ್ರಮುಖ ವಿದ್ವಾಂಸರಾದ ಎಸ್. ಶ್ರೀಕಂಠಶಾಸ್ತ್ರಿಗಳು ಹೇಳುತ್ತಾರೆ.

ಹಾಗೆಂದೇ ಸದ್ರಾಗಚಂದ್ರೋದಯದಲ್ಲಿ ಬುರಹಾನಖಾನನ ಗುಣಗಾನ ಮಾಡುತ್ತಾನೆ. ಮಾಧವಸಿಂಹನನ್ನು ಕೊಂಡಾಡಿಯೇ ರಾಗಮಂಜರೀ ಗ್ರಂಥಾರಂಭ ಮಾಡುತ್ತಾನೆ. ನಟನಾರಾಯಣ, ಕಪಿಲ ಮುನಿಗಳನ್ನು ವಂದಿಸಿ ರಾಗಮಾಲಾ ಗ್ರಂಥದ ಆರಂಭವಾಗುತ್ತದೆ. ಕೃಷ್ಣವಂದನೆ ನರ್ತನನಿರ್ಣಯದ ಮಂಗಲಾಚರಣದಲ್ಲಿದೆ. ಜೊತೆಗೆ ‘ಅಕ್ಬರ-ನೃಪರುಚ್ಯರ್ಥಮ್ ಭೂಲೋಕೇ ಸರಲ ಸಂಗೀತಕಂ ಕೃತಮಿದಂ ’ ಎಂದೂ ಗ್ರಂಥದ ಅಂತ್ಯಕ್ಕೆ ಬರೆದುಕೊಂಡಿದ್ದಾನೆ. ನರ್ತನನಿರ್ಣಯ ಗ್ರಂಥವು ದೆಹಲಿ- ಆಗ್ರಾ ಪ್ರದೇಶದ ಸುತ್ತಮುತ್ತವೇ ರಚನೆಯಾಗಿದೆಯೆಂದು ಊಹಿಸಲಾಗಿದೆ.

ನರ್ತನನಿರ್ಣಯ- ಅಧ್ಯಾಯಗಳು ಮತ್ತು ಲಕ್ಷಣ ವಿಶೇಷತೆಗಳು

ನರ್ತನನಿರ್ಣಯದ ಎಷ್ಟೋ ಅಂಶಗಳು ಪ್ರಾಥಮಿಕವಾಗಿ ಭರತ, ಶಾರ್ಙ್ಗದೇವ ಮತ್ತು ಕಲ್ಲಿನಾಥರ ವ್ಯಾಖ್ಯಾನಗಳನ್ನು ಆಧರಿಸಿದೆ. ಹಾಗಿದ್ದೂ ಪ್ರಾದೇಶಿಕ ನೃತ್ಯ ಪ್ರಕಾರಗಳ ಕುರಿತು ಸ್ವಂತವಾಗಿ ಲಕ್ಷಣಗಳನ್ನು ಬರೆದ ವಿಚಕ್ಷಣ ವಿದ್ವಾಂಸನೀತ. ಅದಾಗಲೇ ಇದ್ದಂತಹ ನೃತ್ಯ ಪ್ರಕಾರಗಳನ್ನು ಬದ್ಧ (ರಚನಾತ್ಮಕ) ಮತ್ತು ಅನಿಬದ್ಧ (ರಚನಾತ್ಮಕವಲ್ಲದ) ಎಂಬ ಎರಡು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸುತ್ತಾನೆ.

ನರ್ತನ-ನಿರ್ಣಯವು ಪ್ರಧಾನವಾಗಿ ನಾಲ್ಕು ಪ್ರಕರಣ ಅಂದರೆ ಅಧ್ಯಾಯಗಳನ್ನು ಹೊಂದಿದೆ, ೧೮೭೦ ಶ್ಲೋಕಗಳು ಇದರಲ್ಲಿವೆ. ತಾಳಧಾರಿ, ಮಾರ್ದಂಗಿಕ ಮತ್ತು ಗಾಯಕ ಮೊದಲಿನ ಮೂರು ಅಧ್ಯಾಯಗಳು. ಇವನ್ನು ಒಂದು ಮತ್ತೊಂದನ್ನು ಅವಲಂಬಿಸಿಕೊಂಡಂತೆ ಸೋಪಾನಪ್ರಾಯವಾಗಿ ವಿವರಿಸಲಾಗಿದೆ. ಇವುಗಳ ಬಲದಿಂದ ಕಾಣಸಿಗುವ ನರ್ತನ ಕೊನೆಯ ಅಧ್ಯಾಯ- ನರ್ತಕ ಪ್ರಕರಣವೆಂದು ಹೆಸರು.

ನರ್ತಕ ಪ್ರಕರಣ

ಉಳಿದ ಅಧ್ಯಾಯಗಳಿಗೆ ಹೋಲಿಸಿದರೆ ಅತೀ ದೊಡ್ಡ ಅಧ್ಯಾಯ. ಒಟ್ಟು ೯೧೬ ಶ್ಲೋಕಗಳಿವೆ. ಇದು ಆಹಾರ್ಯ, ಸಾತ್ತ್ವಿಕಾಭಿನಯಗಳನ್ನು ಸೂಚಿಸಿದೆಯಾದರೂ ಆಂಗಿಕಾಭಿನಯವನ್ನೇ ಪ್ರಧಾನವಾಗಿ ವ್ಯವಹರಿಸಿದೆ. ಅಂಗೋಪಾಂಗಾಭಿನಯ ಭೇದಗಳು, ಸ್ಥಾನಕ, ಚಾರೀ, ಹಸ್ತ, ಕೆಲವೊಂದು ಕರಣಗಳು; ಜೊತೆಗೆ ನರ್ತಕ, ನರ್ತಕಿ, ವಾದ್ಯಗಾರರು, ಪ್ರೇಕ್ಷಕರು ಮೊದಲಾದವರ ಅರ್ಹತೆಗಳು ಮತ್ತು ದೋಷಗಳು, ಪುಷ್ಪಾಂಜಲಿ, ಲಾಸ್ಯಾಂಗಗಳು, ಧುವಾಢ, ತಿರಿಪ- ಉರುಪ -ಲಾಗ ಮೊದಲಾದ ಭ್ರಮಣವನ್ನು ಮಾಡುವ ನೃತ್ತಗಳು, ದಂಡರಾಸಕ, ದರುನೃತ್ಯ, ಶಬ್ದ, ಸ್ವರಾಭಿನಯ, ಸ್ವರಮಂಠ, ಚಿಂದು, ದ್ರುಪದ್ ಅಂದರೆ ಧ್ರುವಪದ, ಜಕ್ಕಡಿ ಮೊದಲಾದ ಹಲವು ನೃತ್ಯಬಂಧಗಳನ್ನೂ ವಿವರಿಸಿದೆ. ಇವೆಲ್ಲವನ್ನೂ ಇಂದು ಪ್ರಚಲಿತದಲ್ಲಿರುವ ಕೆಲವು ನೃತ್ಯ ಪ್ರಕಾರಗಳು ಅದರಲ್ಲೂ – ವಿಶೇಷವಾಗಿ ಕಥಕ್, ಗೋಟಿಪುವಾ, ಮತ್ತು ಓಡಿಸ್ಸಿ ನೃತ್ಯಗಳ ಸಹಿತ ಇನ್ನೂ ಕೆಲವು ನೃತ್ಯಪ್ರಕಾರಗಳಿಗೆ ಆಕರವೆಂಬಂತೆಯೂ ಪರಿಗಣಿಸಲಾಗುತ್ತದೆ. ಹಾಗಿದ್ದೂ ಗ್ರಂಥವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಬಹಳ ಅಂಶಗಳು ಲುಪ್ತವಾಗಿ ಕೆಲವೊಂದು ಅಂಗಭಾಗಗಳು ಮಾತ್ರ ಉಳಿದುಕೊಂಡಿವೆ ಎಂದು ಅನಿಸುತ್ತದೆ.[2]

ಪ್ರೇರಣೆಗಳು

ಪಂಡರೀಕನಿಂದ ಸ್ಫೂರ್ತಿಗೊಂಡಂತೆ ತೋರುವ ಲಾಕ್ಷಣಿಕರಲ್ಲಿ ಶ್ರೀಕಂಠ, ಭಾವಭಟ್ಟ, ವೇದಸೂರಿ, ಚತುರ ದಾಮೋದರ, ತುಲಜೇಂದ್ರರು ಪ್ರಧಾನವಾಗಿದ್ದು; ತಮ್ಮ ಗ್ರಂಥಗಳಲ್ಲೂ ಪಂಡರೀಕನದ್ದೇ ರೀತಿಯ ಲಕ್ಷಣಗಳನ್ನು ಉಲ್ಲೇಖಿಸುತ್ತಾರೆ.[3]

ಆ ಪೈಕಿ ಪಂಡರೀಕವಿಠಲನ ಸಂಗೀತಶಿಷ್ಯ ಶ್ರೀಕಂಠನೂ ದೂರದ ಗುಜರಾತಿನಲ್ಲಿ ನೆಲೆ ಕಂಡವ. ಮಂಗಳನೆಂಬ ಬ್ರಾಹ್ಮಣಪುತ್ರನಾದ ಈತ ಬಹುಶಃ ಗುರುವಿನೊಂದಿಗೇ ಯಾತ್ರೆ ಹೊರಟಿದ್ದಿರಬೇಕು. ದ್ವಾರಕೆ ಬಳಿಯ ನವನಗರದ ಜಾಮನಗರವನ್ನು ಆಳುತ್ತಿದ್ದ ಶತ್ರುಶಲ್ಯನ ಆಶ್ರಯ ಪಡೆದು ನಾಟ್ಯ, ರಸ, ಷೋಡಶ ಶೃಂಗಾರ, ಋತುವರ್ಣನ, ರಾಜನೀತಿಗಳನ್ನು ಒಳಗೊಂಡ ರಸಕೌಮುದಿಯೆಂಬ ಗ್ರಂಥ ರಚಿಸಿದ. ಈ ಗ್ರಂಥದಲ್ಲಿ ಪಂಡರೀಕವಿಠಲನ ಅದೆಷ್ಟೋ ಸಂಗೀತಲಕ್ಷಣಗಳ ಪ್ರಭಾವವನ್ನು ಕಾಣಬಹುದು. ಈತ ೧೫೭೫-೧೫೮೩ನೇ ಇಸವಿಯ ಮಧ್ಯದಲ್ಲಿ ರಸಕೌಮುದಿಯನ್ನು ರಚಿಸಿದ ಎಂದು ತಿಳಿದುಬರುತ್ತದೆ.

ಸಂಪಾದನೆ ಮತ್ತು ಪ್ರಕಟಣೆ

ಕಲ್ಕತ್ತ, ಮೈಸೂರು, ಬರೋಡಾ, ತಂಜಾವೂರುಗಳಲ್ಲಿದ್ದ ಪಂಡರೀಕನ ಗ್ರಂಥಗಳ ಮೂಲಪ್ರತಿಗಳನ್ನು ಸಂಪಾದಿಸಿ, ಕನ್ನಡದಲ್ಲಿ ವಿಮರ್ಶಾತ್ಮಕ ಪೀಠಿಕೆ, ಅನುವಾದ, ವ್ಯಾಖ್ಯಾನ, ಅನುಬಂಧ ಬರೆದವರು ನಮ್ಮವರೇ ಆದ ಕೀರ್ತಿಶೇಷ ವಿದ್ವಾಂಸ, ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣರು. ಪುರಂದರದಾಸರನ್ನು ಕರ್ಣಾಟಕ ಸಂಗೀತ ಪಿತಾಮಹ ಎಂದರೆ, ಪಂಡರೀಕನನ್ನು ಕರ್ಣಾಟಕ ಸಂಗೀತ-ನೃತ್ಯ ಲಕ್ಷಣಗಳ ಪಿತಾಮಹನೆನ್ನಲು ಅಡ್ಡಿಯಿಲ್ಲ ಎನ್ನುತ್ತಾರೆ ಡಾ. ರಾ. ಸತ್ಯನಾರಾಯಣರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ೧೯೮೬ರಲ್ಲಿ ಪುಂಡರೀಕನ ನಾಲ್ಕು ಗ್ರಂಥಗಳನ್ನು ಪುಂಡರೀಕಮಾಲಾ ಎಂಬುದಾಗಿ ಸಮಗ್ರ ಗ್ರಂಥವಾಗಿಸಿ ಪ್ರಕಟಿಸಿಕೊಟ್ಟಿದೆ. ಅಂತೆಯೇ ಡಾ. ರಾ. ಸತ್ಯನಾರಾಯಣರು ಮಾಡಿದ ಆಂಗ್ಲ ಅನುವಾದವನ್ನು ಐಜಿಎನ್ ಸಿ ಎ ಸಂಸ್ಥೆಯು ೩ ಸಂಪುಟಗಳಲ್ಲಿ ಪ್ರಕಟಿಸಿದೆ.[4]

ಸಮಾರೋಪ

ಒಟ್ಟಿನಲ್ಲಿ ೧೬ನೇ ಶತಮಾನದ ಬಹುಮುಖ್ಯ ಶಾಸ್ತ್ರಗ್ರಂಥವಾಗಿ ವರ್ತಮಾನದವರೆಗೂ ಅನೇಕಾನೇಕ ಲಕ್ಷಣಸಂಪತ್ತಿಯನ್ನು ನೀಡುತ್ತಲೇ ಬಂದಿರುವ ಗ್ರಂಥ ನರ್ತನನಿರ್ಣಯ. ಸಂಗೀತ-ನೃತ್ಯಗಳನ್ನು ಉತ್ತರಭಾರತದಲ್ಲೂ ಪ್ರಚಾರ ಮಾಡಿ ಮಹಾವಿದ್ವಾಂಸನೆನಿಸಿಕೊಂಡ ಈತನು ಕನ್ನಡಿಗನೆನ್ನಲು ಬಹಳಷ್ಟು ಹೆಮ್ಮೆ.

ಪರಾಮರ್ಶನ ಗ್ರಂಥಗಳು

ಸತ್ಯನಾರಾಯಣ, ರಾ. (೧೯೮೬). ಪುಂಡರೀಕಮಾಲಾ-ಶ್ರೀ ಪಂಡರೀಕ ವಿಠ್ಠಲನ ಸದ್ರಾಗ ಚಂದ್ರೋದಯ, ರಾಗಮಾಲಾ, ರಾಗಮಂಜರೀ, ಮತ್ತು ನರ್ತನನಿರ್ಣಯ. ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

Jani, A, N (Ed.) (1959). Rasakaumudi – A work on Indian Music by Srikantha. Baroda: Oriental Institute.

Nartananirnaya book English translation published by IGNCA. 1996. https://ignca.gov.in/13738-2/

  1. https://www.youtube.com/watch?v=YshC1G8zXAo&t=9s&ab_channel=NoopuraBhramari
  2. https://www.noopurabhramari.com/dutikarma-prakasha-a-practical-recosntruction-of-dutis-in-nrutya/
  3. ಹೆಚ್ಚಿನ ಮಾಹಿತಿಗೆ ಓದಿ- ಮನೋರಮಾ ಬಿ. ಎನ್ ಬರೆದ (2022), ’ ಯಕ್ಷಮಾರ್ಗಮುಕುರ.’ https://www.noopurabhramari.com/want-to-subscribe-noopura-bhramari-and-purchase-the-dance-books/
  4. For more information – Read the book – Yaksha Marga mukura Authored by Dr Manorama B N
  5. The Nartananirnaya is the seventeenth, eighteenth and nineteenth volumes in the Kalamulasastra series of the Indira Gandhi National Centre for the Arts.

Leave a Reply

*

code