ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ ೧೫- ಸಿಂಹಭೂಪಾಲನ ಲಾಸ್ಯರಂಜನ

Posted On: Sunday, January 21st, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೫- ಕನ್ನಡದಲ್ಲಿ ಛಂದೋಬದ್ಧವಾಗಿ ಬರೆಯಲ್ಪಟ್ಟ ಏಕಮೇವ ನೃತ್ಯಲಕ್ಷಣಗ್ರಂಥ ಸಿಂಹಭೂಪಾಲನ ಲಾಸ್ಯರಂಜನ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 13- Panḍarīka Vittala’s (Kannadiga and recognized in Akbar’s court- Delhi) Nartana Nirṇaya and his other music treatises & Rasa Koumudi treatise of Shrikanṭa

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ನರ್ತನ ಕಲೆಗೆ ಸಂಬಂಧಿಸಿದಂತೆ ಸಂಸ್ಕೃತ ಭಾಷೆಯಲ್ಲಿರುವಷ್ಟು ಗ್ರಂಥಗಳು ಉಳಿದ ಭಾಷೆಗಳಲ್ಲಿಲ್ಲ. ಅದರಲ್ಲೂ ನೃತ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆದ ಲಕ್ಷಣಗ್ರಂಥಗಳು ವಿರಳವೇ ಸರಿ. ಜೊತೆಗೆ ನೃತ್ಯಶಾಸ್ತ್ರವನ್ನು ವಿವರಿಸುವ ಗ್ರಂಥಗಳು ಕಾವ್ಯದ ಮಾದರಿಯನ್ನು ಹೋಲುವಂತೆ ಬಂದದ್ದಿಲ್ಲ. ಹೀಗಿರುವಾಗ ಕನ್ನಡಭಾಷೆಯಲ್ಲಿ ಛಂದೋಯುಕ್ತವಾಗಿ ಕಾವ್ಯದಂತೆ ನೃತ್ಯಶಾಸ್ತ್ರ ಲಕ್ಷಣವನ್ನು ವಿಸ್ತಾರವಾಗಿ ವಿವರಿಸುವ ಮೊದಲ ಗ್ರಂಥ ಎಂದರೆ ಅದು ಸಿಂಹಭೂಪಾಲನ ಲಾಸ್ಯರಂಜನವೇ. ಲಾಸ್ಯರಂಜನ – ಈ ಹೆಸರನ್ನು ಗಮನಿಸಿದಾಗ ಸ್ತ್ರೀಯರ ಅಭಿವ್ಯಕ್ತಿಯುಳ್ಳ ಲಾಸ್ಯ ಎಂಬ ವರ್ಗಕ್ಕೆ ಸೇರಿದ ನರ್ತನಕ್ರಮವನ್ನು ಹಿರಿದಾಗಿ ಪ್ರತಿಪಾದಿಸುವ ಗ್ರಂಥ ಇದಾಗಿದೆ ಎಂಬ ನಿರ್ಣಯಕ್ಕೆ ಬರಬಹುದು.

ಸಿಂಹಭೂಪಾಲ- ವೈಯಕ್ತಿಕ ವಿವರಗಳು ಮತ್ತು ಕಾಲ-ದೇಶ

ಸಿಂಹಭೂಪಾಲನನ್ನು ಸಿಂಹಣ ಎಂದೂ ಕರೆಯಲಾಗಿದೆ. ಲಾಸ್ಯರಂಜನ ಗ್ರಂಥಮಧ್ಯದಲ್ಲಿರುವ ಚಂಡಭುಜ ಸಿಂಹ ಧರಣೀಮಂಡಲಪತಿ, ಸಿಂಹಭೂಪತಿ ಮುಂತಾದ ಸಂಬೋಧನೆಗಳಿಂದ ಈತ ಕವಿ ಮಾತ್ರವಲ್ಲ, ರಾಜನೂ ಹೌದು ಎಂಬುದು ದೃಢಪಡುತ್ತದೆ. ಪ್ರತೀ ಪ್ರಕರಣದ ಕೊನೆಯಲ್ಲಿ ವೀರಭದ್ರನೃಪಗರ್ಭವಾರ್ಧಿಚಂದ್ರ ಸಿಂಹಣಭೂಪಾಲ ಎಂದು ಅಂಕಿತವಿದೆ. ಇದರಿಂದ ಈತ ವೀರಭದ್ರ ಎಂಬ ರಾಜನ ಮಗ ಎಂದು ತಿಳಿಯುತ್ತದೆ. ಕೆಲವು ವಿದ್ವಾಂಸರು ಈತನು ವೀರಭದ್ರ ವಿಜಯವೆಂಬ ಕಾವ್ಯವನ್ನು ಬರೆದ ವೀರಭದ್ರ ರಾಜನ ಮಗನು ಹೌದೋ ಅಲ್ಲವೋ ಎಂಬ ಸಂಶಯವನ್ನು ತಾಳಿದ್ದಾರೆ. ಕೆಲವರು ವೀರಭದ್ರನೆಂಬಾತ ಗಜಪತಿ ದೇವನ ಮಗನಾದ ಪ್ರತಾಪರುದ್ರನ ಮಗ ವೀರಭದ್ರನೆಂದೂ, ಆತನು ಕೊಂಡವೀಡಿನಲ್ಲಿ ೧೬ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದನಾದ್ದರಿಂದ ಸಿಂಹಣನು ಆಂಧ್ರ ಮೂಲದವನಾಗಿರಬಹುದು, ಕನ್ನಡದಲ್ಲಿ ಅಭಿರುಚಿಯಿದ್ದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಗ್ರಂಥದ ಹಸ್ತಪ್ರತಿಯನ್ನು ಮಾಡಿಟ್ಟ ಬೊಮ್ಯಣ ಎಂಬುವನ ಕಾಲಾವಧಿ ೧೫೮೩ ಅಂದರೆ ಹದಿನಾರನೇಯ ಶತಮಾನದ ಮಧ್ಯಭಾಗದೊಳಗೆ ಎಂದು ನಿರ್ಣಯಿಸಲಾಗಿದೆ. ಅಂದರೆ ಮೂಲಪ್ರತಿಯನ್ನು ಸುಮಾರು ಹದಿಮೂರನೆಯ ಶತಮಾನದ ಮಧ್ಯಭಾಗದಿಂದ ಹದಿನಾರನೆಯ ಶತಮಾನದ ಒಳಗೆ ಬರೆದದ್ದಿರಬೇಕು ಎಂದು ಊಹಿಸಲಾಗಿದೆ. ಒಟ್ಟಿನಲ್ಲಿ ಗ್ರಂಥಕರ್ತೃವಿನ ದೇಶ-ಕಾಲಗಳ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಗಳು ಈವರೆಗೂ ಬಂದಿಲ್ಲ. ಆದರೆ ಸಂಗೀತರತ್ನಾಕರಕ್ಕಿಂತ ಬಹಳ ಈಚಿನದು ಎಂಬುದು ಮಾತ್ರ ತಿಳಿಯುತ್ತದೆ.

ಗ್ರಂಥರಚನೆಯ ಕ್ರಮ

ಈ ಗ್ರಂಥ ಹಳೆಗನ್ನಡದಲ್ಲಿ ಗದ್ಯ ಮತ್ತು ಕಂದಪದ್ಯ, ವೃತ್ತ ಮೊದಲಾದ ಪದ್ಯ ಭಾಗಗಳನ್ನು ಹೊಂದಿದೆ. ಹಾಗೆಂದೇ ಚಂಪೂ ಗ್ರಂಥವೆಂದೇ ಕರೆಯಬಹುದು. ಆದರೂ ಪದ್ಯಭಾಗವೇ ಹೆಚ್ಚು. ಮಧ್ಯೆ ಕೆಲವು ಸಣ್ಣ ವಚನಗಳನ್ನೂ ಕಾಣಬಹುದು. ಗ್ರಂಥ ಪ್ರಾರಂಭಕ್ಕೆ ಇಷ್ಟದೇವತಾ ಸ್ತುತಿಗಳು ಕಂಡುಬಂದಿಲ್ಲ. ಬದಲಾಗಿ ನೃತ್ಯಲಕ್ಷಣಗಳನ್ನು ಹೇಳುವ ಪ್ರತಿಜ್ಞಾವಾಕ್ಯವಿದೆ. ಕವಿಯೇ ತಿಳಿಸಿರುವಂತೆ ಈ ಗ್ರಂಥದ ರಚನೆಗೆ ಆತನ ಮಡದಿಯ ಇಚ್ಛೆಯೇ ಸ್ಫೂರ್ತಿ! ಹಾಗಾಗಿ ಪ್ರಶ್ನೋತ್ತರ ರೂಪದಲ್ಲಿರುವ ಈ ಗ್ರಂಥದಲ್ಲಿ ಪತಿ-ಪತ್ನಿಯರ ಪರಸ್ಪರ ಸಂಭೋಧನೆಗಳು ಇದ್ದು, ರೂಪಕ-ಉಪಮೆ ಮೊದಲಾದ ಅಲಂಕಾರಗಳು ಇದಕ್ಕೆ ಸೊಗಸನ್ನಿತ್ತಿವೆ.

ಸಿಂಹಣ ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲೂ ಪಂಡಿತನಂತೆ ಕಾಣುತ್ತದೆ. ಲಕ್ಷಣಗಳನ್ನು ಗಮನಿಸಿದಾಗ ಶಾರ್ಙ್ಗಧರನ ಸಂಗೀತರತ್ನಾಕರವನ್ನು ಈ ಗ್ರಂಥ ಹೋಲುತ್ತದೆ. ಸಂಸ್ಕೃತ ಲಕ್ಷಣಗಳನ್ನು ಕನ್ನಡೀಕರಿಸಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬಹುದು. ಒಟ್ಟು ೮ ಪ್ರಕರಣಗಳನ್ನು, ೮೬೪ ಪದ್ಯಗಳನ್ನೂ ಹೊಂದಿರುವ ಈ ಗ್ರಂಥವು ನಾಟ್ಯೋತ್ಪತ್ತಿ, ನಾಟ್ಯದ ಬೆಳವಣಿಗೆ, ತಾಂಡವ-ಲಾಸ್ಯ, ಅಂಗ-ಪ್ರತ್ಯಂಗ-ಉಪಾಂಗ-ಕರಣ-ಅಂಗಹಾರ-ಚಾರಿ-ಕರಣ-ಸ್ಥಾನಕ-ಮಂಡಲ ಮುಂತಾದ ಅಧ್ಯಾಯಗಳನ್ನು ಹೊಂದಿದೆ.[1]

ಸಂಪಾದನೆ ಮತ್ತು ಪ್ರಕಟಣೆ

ಈ ಗ್ರಂಥವನ್ನು ಮೈಸೂರು ಅರಮನೆ ಸರಸ್ವತೀ ಗ್ರಂಥ ಭಂಡಾರದಲ್ಲಿರುವ ಓಲೆಯ ಪ್ರತಿಯಿಂದ ಪಡೆದು ಪ್ರಕಟಿಸಲಾಗಿದೆ. ಓಲೆಯ ಕಟ್ಟಿನಲ್ಲಿ ಒಟ್ಟು ೧೩೨ ಪತ್ರಗಳಿದ್ದು, ಮೊದಲಿನ ೬೪ ಪತ್ರಗಳಲ್ಲಿ ಲಾಸ್ಯರಂಜನವೆಂಬ ಈ ಗ್ರಂಥ ಕಂಡುಬಂದಿದೆ. ಆದರೂ ಮೂಲಪ್ರತಿಯ ಎಷ್ಟೋ ಪದ್ಯಗಳು ಲುಪ್ತವಾಗಿವೆ. ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯವು ಇದನ್ನು ಪುಸ್ತಕರೂಪದಲ್ಲಿ ಮುದ್ರಿಸಿದ್ದು, ಇಂಗ್ಲೀಷ್ ಅನುವಾದ ಕೂಡಾ ಲಭ್ಯವಿದೆ.

ಪರಾಮರ್ಶನ ಗ್ರಂಥಗಳು

ಅಯ್ಯಂಗಾರ್, ರಂಗಸ್ವಾಮಿ ಹೆಚ್, ಆರ್ ಮತ್ತು ಕೃಷ್ಣಜೋಯಿಸ್ ಎಸ್, ಎನ್ (ಸಂ.) (೧೯೬೬). ಸಿಂಹಭೂಪಾಲ ವಿರಚಿತಂ ಲಾಸ್ಯರಂಜನ. ಮೈಸೂರು: ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯ.

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library.

ಹೆಚ್ಚಿನ ಮಾಹಿತಿಗೆ ಓದಿ- ಮನೋರಮಾ ಬಿ. ಎನ್ ಬರೆದ (2022), ’ ಯಕ್ಷಮಾರ್ಗಮುಕುರ.’ https://www.noopurabhramari.com/want-to-subscribe-noopura-bhramari-and-purchase-the-dance-books/

Leave a Reply

*

code