ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 17- ಚತುರ ದಾಮೋದರನ ಸಂಗೀತದರ್ಪಣ ಹಾಗೂ ಇನ್ನಿತರ ದರ್ಪಣ ಗ್ರಂಥಗಳು

Posted On: Sunday, February 4th, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೭- ಚತುರ ದಾಮೋದರನ ಸಂಗೀತದರ್ಪಣ ಮತ್ತು ಇನ್ನಿತರ ಸಂಗೀತದರ್ಪಣ ಗ್ರಂಥಗಳ ಸೃಷ್ಟಿಯ ಕಾರ್ಯ-ಕಾರಣ-ಲಕ್ಷಣಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 17- Catura Damodara’s Sangīta Darpaṇa and other Sangīta Darpaṇa treatises and its origin, informatsion

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ದರ್ಪಣ ಎಂದರೆ ಕನ್ನಡಿ ಎಂದರ್ಥ. ಯಾವುದು ಸಂಗೀತಶಾಸ್ತ್ರಕ್ಕೆ ಕನ್ನಡಿಯಂತೆ ಅಂದರೆ ಪ್ರತಿಬಿಂಬದಂತೆ ಕೆಲಸ ಮಾಡುವುದೋ ಅಂಥವನ್ನು ದರ್ಪಣಕೃತಿಗಳು ಎನ್ನಲಾಗುತ್ತದೆ.

ಬಹುತೇಕ ದರ್ಪಣಗ್ರಂಥಗಳ ಕಾಲ ಅರ್ವಾಚೀನ ಎಂದೇ ಅನಿಸುತ್ತದೆ. ಎಷ್ಟೋ ದರ್ಪಣಕೃತಿಗಳನ್ನು ಪರೀಕ್ಷಿಸಿದಾಗ ಅವುಗಳು ಸ್ವತಂತ್ರ ಗ್ರಂಥಗಳೆನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸಂಗ್ರಹ ಅಥವ ಸಂಕಲನಕೃತಿಗಳಂತೆಯೇ ಕಂಡುಬರುತ್ತವೆ. ಇಇಂಥ ಗ್ರಂಥಗಳ ಲಕ್ಷಣವಿವರಗಳು ವಿಜಯನಗರ ಸಾಮ್ರಾಜ್ಯೋತ್ತರ ಕಾಲದ ಕಲೆಯ ರೀತಿನೀತಿಗಳನ್ನೇ ಹೋಲುತ್ತವೆ. ಹೀಗೆ ದರ್ಪಣವೆನ್ನುವ ಹೆಸರಿನಲ್ಲಿ ಅಭಿನಯದರ್ಪಣ, ನಾಟ್ಯದರ್ಪಣ, ಸಂಗೀತದರ್ಪಣ, ಸಾಹಿತ್ಯದರ್ಪಣ, ಅಲಂಕಾರದರ್ಪಣ, ಅಭಿನಯದರ್ಪಣಪ್ರಕಾಶ ಇತ್ಯಾದಿ. ಇದಲ್ಲದೆ ಹರಿವಲ್ಲಭ, ಮಗನಿರಾಮ, ಚಿಂತಾಮಣಿ ಎಂಬವರ ಹೆಸರಲ್ಲೂ ಸಂಗೀತದರ್ಪಣ ಹಸ್ತಪ್ರತಿಗಳಿರುವ ಮಾಹಿತಿ ದೊರಕುತ್ತದೆ. ಹೀಗೆ ಅದೆಷ್ಟೋ ದರ್ಪಣನಾಮಕ ಗ್ರಂಥಹಸ್ತಪ್ರತಿಗಳನ್ನೂ ಭಾರತಾದ್ಯಂತ ಗುರುತಿಸಬಹುದು. ಇವುಗಳ ಹಸ್ತಪ್ರತಿಗಳ ಸಂಖ್ಯೆಯೂ ಬಹಳ. ಇವು ಮಧ್ಯಕಾಲೀನ ಭಾರತದಲ್ಲಿ ಹೆಚ್ಚಿದ್ದ ಮತೀಯ ಧಾಳಿಯ ನಡುವೆಯೂ, ಅಳಿದುಳಿದ ಸಂಸ್ಕೃತಿ ರಕ್ಷಣೆಯ ಕಾಯಕದ ಹೊಣೆ ಹೊತ್ತವು.

ಚತುರ ದಾಮೋದರನ ಸಂಗೀತದರ್ಪಣ

ಕರ್ನಾಟಕ-ಮಹಾರಾಷ್ಟ್ರದ ವ್ಯಾಪ್ತಿಗೆ ಸೇರಿದ ದಾಮೋದರ ಪಂಡಿತ ಅಥವಾ ಚತುರ ದಾಮೋದರನೆಂದೇ ಹೆಸರಾದವ ಇದರ ರಚನಾಕಾರ. ಇವನು ಆಂಧ್ರದ ಗುಂಟೂರು ಜಿಲ್ಲೆಯ ಚೆರುಕೂರಿಯಲ್ಲಿದ್ದ ಲಕ್ಷ್ಮೀಧರನ ಮಗ. ಲಕ್ಷ್ಮೀಧರನು ಜಯದೇವನ ಗೀತಗೋವಿಂದಕ್ಕೆ ಶ್ರುತಿರಂಜಿನಿ ಎಂಬ ವ್ಯಾಖ್ಯಾನ ಬರೆದ ಕವಿ. ದಾಮೋದರನ ತಾತ ಯಜ್ಞೇಶ್ವರ ಸೂರಿ. ಲಕ್ಷ್ಮೀಧರ ವಿಜಯನಗರದ ತಿರುಮಲರಾಯನ ಆಸ್ಥಾನದಲ್ಲಿ ಪಂಡಿತನಾಗಿದ್ದು ಭರತಶಾಸ್ತ್ರ, ಸರಸ್ವತೀವಿಲಾಸ, ರಸಮಂಜರೀ ಎಂಬ ಇನ್ನೂ ಹಲವು ಗ್ರಂಥಗಳನ್ನು ರಚಿಸಿದವ. ಹರಿಭಟ್ಟನೆಂಬುದು ದಾಮೋದರನ ಮತ್ತೊಂದು ಹೆಸರು ಎಂಬುದಾಗಿ ಈ ಗ್ರಂಥದ ಮೊದಲ ಅಧ್ಯಾಯದ ಮೊದಲ ಶ್ಲೋಕದಲ್ಲೇ ಹೇಳಿಕೊಂಡಿದ್ದಾನೆ. ಈತನ ಕಾಲ ೧೬-೧೭ನೇ ಶತಮಾನದ ಮಧ್ಯಭಾಗ.

ಈ ದಾಮೋದರನು ಜಹಾಂಗೀರನ ಆಸ್ಥಾನದಲ್ಲಿ ಇದ್ದನೆಂದೂ ಹೇಳಲಾಗುತ್ತದೆ. ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತಸಂಪ್ರದಾಯಗಳೆರಡರಲ್ಲೂ ಪರಿಶ್ರಮ ಹೊಂದಿದ್ದ ಈತನ ಪಾಂಡಿತ್ಯಕ್ಕೆ ಚತುರ ಎಂಬುದು ಸಂದ ಬಿರುದು ಎನ್ನುವುದು ತಿಳಿಯುತ್ತದೆ. ದಾಮೋದರನ ಸಂಗೀತದರ್ಪಣದ ಪರ್ಷಿಯನ್ ಅನುವಾದವನ್ನು ಕೂಡಾ ೧೬೯೮ರಲ್ಲಿ ಶಾಮ್ಸ್ ಅಲ್ ಅಸ್ವಥ್ ಎಂಬ ಹೆಸರಿನಲ್ಲಿ ಮಾಡಲಾಗಿತ್ತು. ರಾಸ್ ಬರಸ್ ಖಾನ್ ಕಲಾವಂತ್ ಇದರ ಅನುವಾದಕಾರ. ಈ ಕಲಾವಂತ್ ಅಕಬರನ ಸಂಗೀತಸಾಮ್ರಾಟನೆನಿಸಿದ್ದ ತಾನ್ಸೇನ್‌ನ ಮೊಮ್ಮಗ.

ಸಂಗೀತದರ್ಪಣ- ಅಧ್ಯಾಯಗಳು ಮತ್ತು ಲಕ್ಷಣಕ್ರಮ

ಸಂಗೀತದರ್ಪಣವು ಸ್ವರ, ರಾಗ, ಪ್ರಕೀರ್ಣಕ, ವಾದ್ಯ, ಪ್ರಬಂಧ, ತಾಲ ಮತ್ತು ನೃತ್ಯ ಸೇರಿದಂತೆ ಏಳು ಅಧ್ಯಾಯಗಳನ್ನು ಹೊಂದಿದೆ. ಸ್ವರಾಧ್ಯಾಯವು ಧ್ವನಿ, ಗ್ರಾಮಪದ್ಧತಿ ಮೂರ್ಛನಕ್ರಮ, ರಾಗ-ರಾಗಿಣಿ ವ್ಯವಸ್ಥೆಯನ್ನು ಚರ್ಚಿಸಿದರೆ; ರಾಗಾಧ್ಯಾಯದಲ್ಲಿ ರಾಗಗಳ ವರ್ಗೀಕರಣದ ವಿವರಣೆಗಳನ್ನು ನೀಡಲಾಗಿದೆ. ಪ್ರಕೀರ್ಣಕ ಅಧ್ಯಾಯವು ವಾಗ್ಗೇಯಕಾರರ ಗುಣಲಕ್ಷಣಗಳ ಬಗ್ಗೆ ವ್ಯವಹರಿಸುತ್ತದೆ. ವಾದ್ಯಾಧ್ಯಾಯ ವಾದ್ಯವಿವರಗಳನ್ನು, ಪ್ರಬಂಧಾಧ್ಯಾಯವು ಆ ಕಾಲದ ಸಂಗೀತ ಸಂಯೋಜನೆಗಳನ್ನು ವಿವರಿಸುತ್ತದೆ. ತಾಲಾಧ್ಯಾಯ ವಿವಿಧ ಮಾರ್ಗ- ದೇಶೀ ತಾಳಗಳ ವಿವರಣೆಯನ್ನು ಒಳಗೊಂಡಿದೆ. ನೃತ್ಯಾಧ್ಯಾಯವು ಮಾರ್ಗೀ ಮತ್ತು ದೇಶೀ ನೃತ್ಯವಿಧಾನ ಎಂಬ ವಿಭಾಗದಲ್ಲಿ ಪುಷ್ಪಾಂಜಲಿ, ಯತಿನೃತ್ತ, ಶಬ್ದಚಾಲೀ, ನಾನಾವಿಧವಾದ ಉಡುಪ-ನೇರಿಗಳೆಂಬ ಧುವಾಢ ಕ್ರಮಗಳು ಅಥವಾ ಲಾಗನೃತ್ತಗಳು, ಗೀತ ಮತ್ತು ಸ್ವರಮಂಠನೃತ್ಯಗಳು, ಸಾಲಗಸೂಡ ನೃತ್ಯ, ವಿವರ್ತನ ಮತ್ತು ಚಮತ್ಕಾರನೃತ್ತಗಳು, ಧ್ರುವಗೀತಗಳೆಂಬ ತಾಲಾಧರಿತ ನೃತ್ಯ, ಶಬ್ದನೃತ್ತಗಳು, ದೇಶೀಕಟ್ಟರಿ, ಕಲ್ಪನೃತ್ತ, ಝಕ್ಕಡೀ, ವೈಪೋತ, ದ್ರುಪದ, ಪೇರಣೀ, ಗೌಂಡಲೀ, ಬಂಧ ನೃತ್ತ.. ಹಾಗೂ ಇವುಗಳನ್ನಾಚರಿಸಲು ಬೇಕಾಗಿರುವ ವಿವಿಧ ಅಂಗೋಪಾಂಗವಿಧಾನ- ಸ್ಥಾನಕ-ಹಸ್ತ-ಚಾರೀ-ಕರಣಭೇದ- ಭಾವ-ತಾಲ-ಪಾಟಾಕ್ಷರಗಳನ್ನೇ ನೇರವಾಗಿ ಚರ್ಚಿಸುತ್ತದೆ. ಇದರೊಂದಿಗೆ ಸಭೆ-ಸಭಾಸದ- ನಟ ಮೊದಲಾದವರ ಲಕ್ಷಣಗಳನ್ನೂ, ವಿವಿಧ ಗತಿಗಳನ್ನೂ ವಿವರಿಸುತ್ತದೆ.[1]

ಇದರಲ್ಲಿ ಸಂಗೀತರತ್ನಾಕರ- ನೃತ್ತರತ್ನಾವಳಿಗಳಂತೆ ಅಂಗೋಪಾಂಗ ಅಭಿನಯ- ಸ್ಥಾನಕ- ಚಾರಿ-ಕರಣ ಎಂಬ ವರ್ಗಗಳ ಪ್ರತ್ಯೇಕ ಲಕ್ಷಣ ಪದ್ಧತಿ ಇಲ್ಲ. ಬದಲಾಗಿ ಪ್ರಯೋಗವನ್ನೇ ನೇರವಾಗಿ ಗಮನಿಸಿ ಲಕ್ಷಣ ಬರೆಯುತ್ತದೆ. ಹಾಗೆಂದೇ ಸಾಮಾನ್ಯವಾಗಿ ಸಂಗೀತರತ್ನಾಕರವನ್ನು ಆಗಾಗ್ಗೆ ಈ ಗ್ರಂಥ ಉಲ್ಲೇಖಿಸಿದರೂ ಪಂಡರೀಕ ವಿಠಲನ ನರ್ತನನಿರ್ಣಯದ ಲಕ್ಷಣಕ್ರಮವನ್ನೂ ಹಲವು ಕಡೆಗಳಲ್ಲಿ ಹೋಲುತ್ತದೆ ಎಂದು ನಿರ್ಣಯಿಸಬಹುದು. ಅದರಲ್ಲೂ ಲಾಗ- ತಿರಿಪ- ಉರುಪ ಮೊದಲಾದ ಭ್ರಮರಿ ವಿಧಾನಗಳನ್ನು ಚರ್ಚಿಸುವಲ್ಲಿ ನರ್ತನನಿರ್ಣಯದಂತೆಯೇ ಇದು ಬಹುಮುಖ್ಯ ಗ್ರಂಥ. ಚತುರದಾಮೋದರನು ‘ಲಾಗಶಬ್ದೇನ ಕರ್ಣಾಟ ಭಾಷಯಾ ಯತ್ರಚೋತ್ಪ್ಲುತಿಃ’ ಅಂದರೆ ಲಾಗವೆಂಬ ಶಬ್ದದಿಂದಲೇ ಕರ್ನಾಟಭಾಷೆಯಲ್ಲಿ ಉತ್ಪ್ಲುತಿಯನ್ನು ಸೂಚಿಸುತ್ತಾರೆ ಎಂದು ಹೇಳುತ್ತಾನೆ.[2] ಇದನ್ನು ದಾಖಲಿಸುವಂತೆ ಕನ್ನಡದ ಅನೇಕ ಕಾವ್ಯಗಳೂ ಲಾಗ ಪರಿಭಾಷೆಯನ್ನು ಬಳಸಿವೆ. ಈ ಗ್ರಂಥವನ್ನು ವಾಸುದೇವಶಾಸ್ತ್ರಿಗಳು ಸಂಪಾದಿಸಿದ್ದು ತಂಜಾವೂರು ಸರಸ್ವತಿ ಮಹಲ್ ಗ್ರಂಥಾಲಯದಿಂದ ಮುದ್ರಣಗೊಂಡಿದೆ.

 

ಗೌರೀಶ್ವರ ಸಂಕಲಿತ ಸಂಗೀತದರ್ಪಣ

ವರ್ತಮಾನದಲ್ಲಿ ಕಥಕ್ ನೃತ್ಯದ ಹಿರಿಯ ಆಚಾರ್ಯರಾಗಿದ್ದ ಕೀರ್ತಿಶೇಷ ಪಂಡಿತ್ ಬಿರ್ಜು ಮಹಾರಾಜ್ ಅವರ ಮನೆತನದಲ್ಲಿ ಉಳಿದುಬಂದ ಗೌರೀಶ್ವರ ಸಂಕಲಿತ ಸಂಗೀತದರ್ಪಣವೂ ದರ್ಪಣಕೃತಿಗಳ ಸಾಲಿಗೆ ಸೇರುತ್ತದೆ. ಸುಮಾರು ೧೭-೧೮ನೇ ಶತಮಾನದ್ದೆಂದು ಊಹಿಸಬಹುದಾದ ಇದನ್ನು ಬರೆದ/ಸಂಪಾದಿಸಿದ ರಚನಕಾರ ಯಾರೆಂದು ಹಸ್ತಪ್ರತಿಯಿಂದ ತಿಳಿದುಬಂದಿಲ್ಲ. ಆದರೆ ಗ್ರಂಥದ ಅಂತ್ಯಕ್ಕೆ ಬಿರ್ಜು ಮಹಾರಾಜರ ಮನೆತನದಲ್ಲಿದ್ದ ಕಲಾವಿಚಕ್ಷಣರ ತಲೆಮಾರಿನ ಉಲ್ಲೇಖವನ್ನೂ ಮಾಡಲಾಗಿದೆಯಾದ್ದರಿಂದ ಇದೊಂದು ಸಂಪಾದಿತ ಕೃತಿ ಎನ್ನುವುದರಲ್ಲಿ ಅನುಮಾನವಿಲ್ಲ.

೨೦೨೩ರಲ್ಲಿ ಪ್ರಕಟಗೊಂಡ ಈ ಗೌರೀಶ್ವರನ ಸಂಗೀತದರ್ಪಣವು ಚತುರದಾಮೋದರನ ಸಂಗೀತದರ್ಪಣಕ್ಕೆ ಹೊಂದಿಕೆಯಾಗುವುದಿಲ್ಲ. ಆದರೆ ದರ್ಪಣಗ್ರಂಥಗಳಲ್ಲಿ ಕಂಡುಬರುವ ಪೌರಾಣಿಕ ವ್ಯಕ್ತಿಗಳ ನಡುವಿನ ಸಂವಾದ ಇಲ್ಲೂ ಇದೆ. ಈ ಗ್ರಂಥದಲ್ಲಿ ತೋಮರ ಎನ್ನುವ ಐತಿಹಾಸಿಕ ವ್ಯಕ್ತಿಯನ್ನು ಗಂಧರ್ವರಾಜನೆಂದು ಉಲ್ಲೇಖಿಸಿದ್ದು ಆತನನ್ನು ಕೇಂದ್ರವಾಗಿರಿಸಿ ನಾಟ್ಯೋತ್ಪತ್ತಿಯ ಪ್ರಕರಣವನ್ನು ಹೇಳಲಾಗಿದೆ. ವಿಚಿತ್ರವೆಂದರೆ, ಇನ್ಯಾವುದೇ ನಾಟ್ಯಗ್ರಂಥಗಳಲ್ಲಿಯೂ ದೊರಕದ ಕಥೆ ಇಲ್ಲಿದೆ.

 

ಪರಿಸಮಾಪ್ತಿ

ಒಟ್ಟಿನಲ್ಲಿ ಗ್ರಂಥರಚನಾಕಾರರು ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡಲೆಂದೇ ಲಕ್ಷಣಗಳನ್ನು ಬರೆದಿದ್ದಾರೆ ಎನ್ನುವುದಂತೂ ನಿಜ. ಆ ಪೈಕಿ ಸ್ವಂತಿಕೆಯುಳ್ಳ ರಚನೆ ಕೆಲವರದ್ದು; ಇನ್ನೂ ಕೆಲವರು ತಮ್ಮ ಪೂರ್ವಸೂರಿಗಳ ಲಕ್ಷಣಗಳನ್ನು ಮಾತ್ರ ಸಾಕ್ಷ್ಯಕ್ಕೆಂದು ಬಳಸುತ್ತಾರೆ. ಇನ್ನೂ ಕೆಲವರು ಹಳಬರ ಲಕ್ಷಣಗಳನ್ನು ಆಧರಿಸಿ ತಮ್ಮದೊಂದಷ್ಟನ್ನು ಹೊಸತಾಗಿ ಸೇರಿಸುತ್ತಾರೆ. ಮತ್ತೊಂದಷ್ಟು ಮಂದಿ ತಮ್ಮ ಪೂರ್ವಸೂರಿಗಳ ಗ್ರಂಥಲಕ್ಷಣಗಳನ್ನೇ ನಕಲುಪ್ರತಿ ಮಾಡಿಟ್ಟಿದ್ದಾರೆ. ಕೆಲವೊಮ್ಮೆ ಲಕ್ಷಣಗಳನ್ನು ಒಂದಷ್ಟು ಗ್ರಂಥಗಳಿಂದ ಸಂಗ್ರಹಿಸಿ ತಮ್ಮ ಹೆಸರನ್ನೂ ಸೇರಿಸಿ ಹೊಸ ಗ್ರಂಥವೆಂಬಂತೆ ಮಾಡಿದ ಪ್ರಕಲ್ಪಗಳೂ ಇವೆ. ಹಾಗೆಯೇ ಶಾಸ್ತ್ರಲಕ್ಷಣಗಳಲ್ಲೂ ಶೈಥಿಲ್ಯ ಹೇರಳವಾಗಿ ಘಟಿಸಿ ಮೂಲಗ್ರಂಥಗಳು ಮರೆಗೆ ಸರಿದಾಗ ಅವೇ ಹೆಸರಿನಲ್ಲಿ ಹೊಸ ಗ್ರಂಥಗಳು ಕಂಡುಬಂದದ್ದೂ ಇವೆ.

ರಾಜಕೀಯ ಅಭದ್ರತೆಯು ಸಾಂಸ್ಕೃತಿಕ ಸಂಪ್ರದಾಯದ ಶೈಥಿಲ್ಯಕ್ಕೂ ಕಾರಣವಾಗಿರುವುದು ಸತ್ಯ. ಮತೀಯ ಆಕ್ರಮಣಗಳಿಂದ ಗ್ರಂಥನಾಶ, ಸುರಕ್ಷಿತ ಬದುಕನ್ನು ಅರಸಿ ಹೊರಟ ಕಲಾವರ್ಗದವರ ವಲಸೆ-ವೈಪರೀತ್ಯಗಳು, ಲಕ್ಷ್ಯ-ಲಕ್ಷಣಶಾಸ್ತ್ರದಲ್ಲಿ ಕೊಂಡಿಗಳು ಕಳಚಿಕೊಂಡು ಮೌಖಿಕ ಪರಂಪರೆಯೇ ಪ್ರಬಲವಾಗುತ್ತಾ ಸಾಗಿದ್ದು ಈ ಪಲ್ಲಟಕ್ಕೆ ಮುಖ್ಯ ಕಾರಣವೆನ್ನಬಹುದು.

ಹಾಗೆಂದೇ ಅಳಿದುಳಿದ ವಿವರಗಳನ್ನು ದಾಖಲಿಸುವಂತೆ ದರ್ಪಣಗ್ರಂಥಗಳ ರಚನೆ ಬಹುಶಃ ಇದೇ ಕಾಲದಲ್ಲಾಗಿದ್ದಿರಬೇಕು. ಈ ಹಂತದಲ್ಲಿ ಮಾರ್ಗ ಪರಿಭಾಷೆಗಳದೆಷ್ಟೋ ಗುಪ್ತಗಾಮಿನಿಯೇ ಆಗಿ ಅವುಗಳನ್ನೇ ಮರೆಯುವಷ್ಟು ನೂತನ ಪರಿಭಾಷೆಗಳು ಪ್ರಚಲಿತಕ್ಕೆ ಬರುವುದನ್ನು ಗುರುತಿಸಬಹುದು. ಒಟ್ಟಿನಲ್ಲಿ ನಾಮ ಹಲವು; ಮೂಲ ಒಂದೇ ಎನ್ನಬಹುದಾದ ಗ್ರಂಥಗಳನ್ನು ಸಾಕಷ್ಟು ಕಾಣಬಹುದು.

ನಮ್ಮತನವನ್ನು ಭಂಜಿಸುವ-ಭಂಗಿಸುವ ಕಾಲದಲ್ಲಿ ಅಮೂಲ್ಯ ಆಸ್ತಿಗಳೆನಿಸುವಂಥದ್ದನ್ನು ಜೋಪಾನ ಮಾಡಲು ಪ್ರಯತ್ನಿಸುವುದು ಮಾನವನ ಸಹಜ ಗುಣ. ಅಂತೆಯೇ ನಮ್ಮ ಸಾಂಸ್ಕೃತಿಕ ಲಕ್ಷ್ಯ-ಲಕ್ಷಣಕ್ರಮಗಳನ್ನು ಉಳಿಸಿಕೊಳ್ಳುವ ಯತ್ನದಿಂದ ಅನೇಕರು ‘ನಾ ಮುಂದು ತಾ ಮುಂದು’ ಎಂಬಂತೆ ಮುನ್ನುಗ್ಗಿದ್ದು ಕಂಡುಬರುತ್ತದೆ. ಅಂತೆಯೇ ಎಲ್ಲವನ್ನೂ ತಾಳಿಕೊಳ್ಳುವ, ಬಾಳಿಕೊಳ್ಳುವ, ಸತತ ಪರಿಷ್ಕರಣ- ವ್ಯಾಖ್ಯಾನ-ವಿಮರ್ಶೆಗಳಿಗೆ ತೆರೆದುಕೊಳ್ಳುವ, ಆಕ್ರಮಣಗಳ ಅನಂತರವೂ ಎದ್ದು ನಿಲ್ಲಬಲ್ಲ ಸಂಸ್ಕಾರವನ್ನು ನಮ್ಮ ಈ ನೆಲ ನಮಗಿತ್ತಿದೆ.

ಪರಾಮರ್ಶನ ಗ್ರಂಥಗಳು

Apparao (Ed.) (1997). Nandikeshwara Abhinayadarpana. Hyderabad: Natyamala Publication.

Bharadhwaj, Arjun and Sudarshan Muralidhar (2022). Sangita Darpanah as created by Gaurisvara. Delhi: Kalashram.

Ghosh, Manmohan (1957). Nandikeshwara Abhinayadarpana. Culcutta :Mukhyopadhyaya https://ia600302.us.archive.org/22/items/abhinayadarpanam029902mbp/abhinayadarpanam029902mbp.pdf

Raja,Kunjunni and Radha Burnier. (Tr.) (1976). Sangita Ratnakara of Sarangadeva. Vol 4. Chapter 7. Adyar : The adyar Library and Research centre. https://ia601407.us.archive.org/6/items/Mus-SourceTexts/TxtSkt-sangItaratnAkara-Sarngadeva-v4-EngTrn-KRajaandRadhaB-AdyarLibrary-1976-0063.pdf

Raghavan, V (1965). Nritta Ratnavali of Jaya senapati. Madras: Government Oriental Manuscripts Library.

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library. https://archive.org/details/SangitaRatnakaraVolume4-chapter7

Sastri, Vasudeva ( 1952). Sangita Darpana of Damodara TMSSML 1952 0101. madars Governmental oriental series https://archive.org/details/TxtSktSangItaDarpaNaDamodaraTMSSML19520101_201508

 

ಮ. ಶ್ರೀಧರಮೂರ್ತಿ. ೧೯೭೪. ಶ್ರೀ ನಂದಿಕೇಶ್ವರನ ಅಭಿನಯದರ್ಪಣ. ಅಕ್ಷರ ಪ್ರಕಾಶನ.

ಹೆಗಡೆ ಎಂ. ಎ. ೨೦೧೪. ನಂದಿಕೇಶ್ವರನ ಅಭಿನಯ ದರ್ಪಣ ಕನ್ನಡ ಅನುವಾದ ಟಿಪ್ಪಣಿ ಸಹಿತ. ಹೆಗ್ಗೋಡು : ಅಕ್ಷರ ಪ್ರಕಾಶನ.

ಸತ್ಯನಾರಾಯಣ, ರಾ. (೧೯೮೬). ಪುಂಡರೀಕಮಾಲಾ-ಶ್ರೀ ಪಂಡರೀಕ ವಿಠ್ಠಲನ ಸದ್ರಾಗ ಚಂದ್ರೋದಯ, ರಾಗಮಾಲಾ, ರಾಗಮಂಜರೀ, ಮತ್ತು ನರ್ತನನಿರ್ಣಯ. ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ಮನೋರಮಾ ಬಿ.ಎನ್. ಶಾಸ್ತ್ರರಂಗ. ಸಂಚಿಕೆ ೧೭. ಚತುರ ದಾಮೋದರನ ಸಂಗೀತದರ್ಪಣ. www.noopurabhramari.com

 

  1. ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/

Leave a Reply

*

code