ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 20- ಕೆಳದಿ ಬಸವಭೂಪಾಲನ ಶಿವತತ್ತ್ವರತ್ನಾಕರ

Posted On: Sunday, February 25th, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೨೦- ಕರ್ನಾಟಕದ ಮತ್ತೊಂದು ವಿಶ್ವಕೋಶ ಗ್ರಂಥ ಕೆಳದಿಯ ಬಸವಭೂಪಾಲನ ಶಿವತತ್ತ್ವರತ್ನಾಕರ

 

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 20- An Encyclopedic treatise Śivatatwaratnākara authored by of King of Keladi Basava Bhoopāla

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

Authored by ಡಾ.ಮನೋರಮಾ ಬಿ.ಎನ್.

ಚಾಲುಕ್ಯವಂಶೀಯ ಸೋಮೇಶ್ವರ ವಿರಚಿತ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸವೆಂಬ ಗ್ರಂಥವನ್ನು ಬಿಟ್ಟರೆ ಸಂಸ್ಕೃತದಲ್ಲಿ ವಿಶ್ವಕೋಶವೆಂದು ಪ್ರಸಿದ್ಧವಾದುದು ಶಿವತತ್ತ್ವರತ್ನಾಕರ ಒಂದೇ. ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ಥಚಿಂತಾಮಣಿ, ಮನಸ್ಸಿಗೆ ಉಲ್ಲಾಸ ಕೊಡುವ ವಿವಿಧ ವಿದ್ಯಾ ವಿನೋದ ವಿಚಾರಗಳ ವಿಶ್ವಕೋಶವಾದರೆ; ಶಿವತತ್ತ್ವರತ್ನಾಕರ ವಿದ್ಯಾ ವಿನೋದಗಳೊಂದಿಗೆ ಭಾರತೀಯ ಧರ್ಮ, ಆಧ್ಯಾತ್ಮಿಕ ವಿಚಾರಗಳನ್ನೂ ಒಳಗೊಂಡ ವಿಶ್ವಕೋಶ. ಇದನ್ನು ರಚಿಸಿದವ ನಮ್ಮ ಕರ್ನಾಟಕದವನೇ. ಕೆಳದಿಸಂಸ್ಥಾನದ ಅರಸ ಬಸವ ಭೂಪಾಲ. ಈ ಗ್ರಂಥದ ರಚನೆ ಬಸವಭೂಪಾಲನು ಅರಸನಾಗಿದ್ದ ೧೬೯೪ರಿಂದ ೧೭೧೪ನೇ ಇಸವಿಯ ಆಸುಪಾಸಿನಲ್ಲಿ ಆಗಿತ್ತೆಂದು ವಿದ್ವಾಂಸರು ನಿರ್ಣಯಿಸಿದ್ದಾರೆ.

ಬಸವ ಭೂಪಾಲ

ಕೆಳದಿಯ ನಾಯಕವಂಶವು ಮಧ್ಯಕಾಲೀನ ಕರ್ನಾಟಕದಲ್ಲಿ ಪ್ರಮುಖ ಆಡಳಿತ ರಾಜವಂಶವಾಗಿತ್ತು. ಅವರು ವಿಜಯನಗರ ಕರ್ನಾಟ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ನಡೆಸಿದವರು. ವಿಜಯನಗರದ ಉದಾತ್ತ ಸಂಪ್ರದಾಯಗಳನ್ನು, ವಿವಿಧ ಕಲೆ ಮತ್ತು ಸಂಸ್ಕೃತಿಗಳನ್ನು ಪೋಷಿಸುವಲ್ಲಿ ಮುಂಚೂಣಿಯಲ್ಲಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ಒಂದಷ್ಟು ಕಾಲ ಸಮರ್ಥವಾಗಿ ಸ್ವತಂತ್ರಸಂಸ್ಥಾನವಾಗಿ ಆಳಿದರಾದರೂ ಸಾಮಾನ್ಯ ಶಕ ೧೭೬೩ರಲ್ಲಿ, ಹೈದರ್ ಅಲಿ ವಿರುದ್ಧ ಸೋಲೊಪ್ಪಿ, ಕ್ರಮೇಣ ಅವರು ಮೈಸೂರು ಸಾಮ್ರಾಜ್ಯದೊಂದಿಗೆ ಲೀನವಾದರು. ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಬರೆದ ಸೌಗಂಧಿಕಾ ಪರಿಣಯ ಎಂಬ ಕೃತಿಗೆ ಆಕರ ಬಸವಭೂಪಾಲನ ಶಿವತತ್ತ್ವರತ್ನಾಕರವೇ ಆಗಿತ್ತೆನ್ನುವುದೂ ತಿಳಿದುಬರುತ್ತದೆ. ಬಸವಭೂಪಾಲ ಸೂಕ್ತಿ ಸುಧಾಕರ ಮತ್ತು ಸುಭಾಷಿತ ಸುರದ್ರುಮ ಎಂಬ ಮತ್ತೆರಡು ಕೃತಿಗಳನ್ನೂ ಬರೆದಿದ್ದನು. ಆದರೆ ಲೋಕವಿಖ್ಯಾತವಾದದ್ದು ಶಿವತತ್ತ್ವ ರತ್ನಾಕರ.

ಶಿವತತ್ತ್ವರತ್ನಾಕರ- ಗ್ರಂಥವಿಶೇಷ, ಅಧ್ಯಾಯ ಕ್ರಮ

ಶಿವತತ್ತ್ವರತ್ನಾಕರ – ಹೆಸರನ್ನು ಗಮನಿಸಿ ಇದು ಅಧ್ಯಾತ್ಮ ತತ್ತ್ವಗಳ ನಿರೂಪಣೆ, ಶಿವಾಗಮಗಳನ್ನೇ ಹೇಳಿದೆಯೆಂದು ತಿಳಿದರೆ ತಪ್ಪಾದೀತು. ಏಕೆಂದರೆ ಲೋಕದ ಸಮಸ್ತ ಭೋಗ- ಉಪಭೋಗ- ವಿದ್ಯೆ- ವ್ಯವಹಾರಗಳ ಬಗ್ಗೆಯೂ ಇದು ಗಮನ ಹರಿಸುತ್ತದೆ. ಆ ನಿಟ್ಟಿನಿಂದ ಶಿವ ಎಂದರೆ ಸುಂದರವಾದ ತತ್ತ್ವಗಳನ್ನುಳ್ಳ ಸಾಗರಪ್ರಾಯಿಯಾದ ಗ್ರಂಥ ಎಂಬ ವಿವರಣೆಯನ್ನು ಈ ಗ್ರಂಥದ ಹೆಸರಿಗೆ ಕೊಡುವುದೇ ಸೂಕ್ತ.

ಶಿವತತ್ತ್ವ ರತ್ನಾಕರವನ್ನು ಸಂಸ್ಕೃತಭಾಷೆಯಲ್ಲಿ ಸಂಭಾಷಣೆಯ ರೂಪದಲ್ಲಿ ಬರೆಯಲಾಗಿದೆ. ರಾಜನ ಮಗನಾದ ಸೋಮಶೇಖರನು ಪ್ರಶ್ನೆಗಳನ್ನು ಕೇಳುತ್ತಾನೆ ಮತ್ತು ಉತ್ತರಗಳನ್ನು ಬಸವಭೂಪಾಲ ಹೇಳುತ್ತಾನೆ. ಈ ಸಂಭಾಷಣಾ ಕ್ರಮವು ಓದುಗರ ಆಸಕ್ತಿ-ಕುತೂಹಲವನ್ನು ಹೆಚ್ಚಿಸುತ್ತದೆ. ಇದರಲ್ಲಿ ಕೆಳದಿ ರಾಜವಂಶದ ಇತಿಹಾಸ, ಭೂಪಾಲರ ಪರಾಕ್ರಮ ವೃತ್ತಾಂತಗಳೂ ಅಲ್ಲಲ್ಲಿ ಕಂಡುಬರುತ್ತವೆ.

ಈ ಮಹಾನ್ ಕೃತಿಯು ಕಲ್ಲೋಲ ಎಂಬ ಒಂಬತ್ತು ಅಧ್ಯಾಯಗಳನ್ನು ಒಳಗೊಂಡಿದೆ ಮತ್ತು ಇವುಗಳಲ್ಲಿ ಪ್ರತಿಯೊಂದೂ ಅಧ್ಯಾಯಗಳು ತರಂಗಗಳೆಂದು ಕರೆಯಲ್ಪಡುವ ನೂರೆಂಟು ಉಪವಿಭಾಗಗಳನ್ನು ಒಳಗೊಂಡಿದೆ. ಪ್ರಥಮ ಕಲ್ಲೋಲವು ಶಿವಲಿಂಗ ಪ್ರಾರ್ಥನಾ ಎಂಬ ನಾಂದಿಸ್ತುತಿಯೊಂದಿಗೆ ಆರಂಭಗೊಳ್ಳುತ್ತದೆ. ಜೊತೆಗೆ ಶಿವಪರಿವಾರ ದೇವತೆಗಳ ಸ್ತುತಿ ಮತ್ತು ಶಾರದಾ ಸ್ತುತಿಯೂ ಇವೆ.

ವೇದಾದಿ ಅಷ್ಟಾದಶ ಮಹಾವಿದ್ಯೆಗಳು, ಪುರಾಣ –ಉಪಪುರಾಣ, ಉಪವೇದ, ವೇದದ ಷಡಂಗಗಳು, ಆಗಮಾದಿಗಳ ಕುರಿತ ವಿಷಯವಿಶ್ಲೇಷಣೆ ಕಂಡುಬರುತ್ತದೆ. ಜೊತೆಗೆ ರಾಜನೀತಿ, ದಂಡನೀತಿ, ರಾಜಲಕ್ಷಣ, ಯುದ್ಧ, ಪಟ್ಟಾಭಿಷೇಕ, ಯಾನವೇ ಮೊದಲಾದ ರಾಜನ ವಿಶೇಷ ಕಾಲದ ವಿಧಿಗಳು, ಚತುರೋಪಾಯಗಳು, ಆಯುಧಸಾಧನಕ್ರಮಗಳು, ತತ್ತ್ವಶಾಸ್ತ್ರ, ಸೃಷ್ಟಿರಹಸ್ಯ, ಬ್ರಹ್ಮಾಂಡವಿಚಾರ, ಯುಗ-ಕಲ್ಪ, ಇಂದ್ರಾದಿ ದೇವತೆಗಳ ವೃತ್ತಾಂತ, ವಿವಿಧ ಲೋಕಗಳು ಮತ್ತು ನಕ್ಷತ್ರ-ಗ್ರಹಗತಿ-ದೇವತಾತತ್ತ್ವ ವರ್ಣನೆಗಳು, ಕಲಿಧರ್ಮವಿವರuಗಳನ್ನು ಒಳಗೊಂಡಿದೆ. ಅದಾಗಿ ಚತುರ್ವರ್ಣ, ಆಶ್ರಮಧರ್ಮ, ಕರ್ಮಬಂಧಗಳು, ಪ್ರಾಯಶ್ಚಿತ್ತ ವಿಧಿಗಳು, ಜ್ಯೋತಿಷ್ಯ, ಖಗೋಳಶಾಸ್ತ್ರ, ಸ್ವಪ್ನಫಲಗಳು, ಯೋಗಫಲಗಳು, ಮುಹೂರ್ತನಿರ್ಣಯವಿವರಗಳು, ನೀತಿಶಾಸ್ತ್ರ, ತತ್ತ್ವದರ್ಶನಗಳು, ಹಠಯೋಗ ಮತ್ತು ರಾಜಯೋಗಶಾಸ್ತ್ರ ಮೊದಲಾದ ಶಾಸ್ತ್ರವಿಚಾರಗಳನ್ನು ಹೇಳುತ್ತದೆ. ಹಾಗೆಯೇ ವಿವಿಧ ವರ್ಗದ ಸ್ತ್ರೀಪುರುಷಲಕ್ಷಣಗಳು, ನಿಧಿಶೋಧ, ಕೃಷಿ-ಬೆಳೆಗಳು, ಮಳೆ, ಮೋಡಗಳು, ನದಿ-ಪರ್ವತಗಳು, ಜಲಭೂಮಿ ಪರೀಕ್ಷೆ, ಇತಿಹಾಸ, ಭೌಗೋಳಿಕತೆ, ದೇಶಭಾಷಾ ಲಿಪಿಜ್ಞಾನ, ದೇವತಾಪ್ರತಿಷ್ಠಾಕಾಲ, ಗೃಹ-ರಂಗಮಂಟಪ-ಪುರಭವನ ಇತ್ಯಾದಿಗಳ ನಿರ್ಮಾಣ, ಮೂರ್ತಿನಿರೂಪಣ, ಉದ್ಯಾನವನ ಪಾಲನೆ, ಬೇಟೆ, ವರ್ತಕರ ವ್ಯಾಪಾರ, ತರುಚಿಕಿತ್ಸಾ, ದೋಹದ ವರ್ಣನ, ವಿಶೇಷ ಆಚರಣೆಗಳು. ಮುಂತಾದ ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಎಲ್ಲಾ ಕ್ಷೇತ್ರಗಳನ್ನೂ ಹೇಳಿದೆ. ಪರಕಾಯ ಪ್ರವೇಶ, ಪಾದುಕಾ ಸಿದ್ಧಿ, ವಾಕ್ಸಿದ್ಧಿ, ಅಂಜನ, ಮಂತ್ರ, ವೈದ್ಯಕೀಯ ಆದಾನ ನಿದಾನ ತ್ರಿಗುಣ ಆಧಾರಿತ ಚಿಕಿತ್ಸೆಗಳು, ಮೃತಸಂಜೀವಿನಿ ವಿದ್ಯೆ, ವಿಷವೈದ್ಯಕೀಯ ಮೊದಲಾದವುಗಳ ಸಿದ್ಧಿಗಳನ್ನೂ ಗುರುತಿಸಬಹುದು.

ಚಾಲುಕ್ಯ ಅರಸ ಮೂರನೇ ಸೋಮೇಶ್ವರನ ಗ್ರಂಥ ಮಾನಸೋಲ್ಲಾಸದಲ್ಲಿ ಕಂಡುಬರುವಂತೆ ಇಲ್ಲಿಯೂ ರಾಜರ ಸ್ನಾನ- ಲೇಪನ-ಪಾದುಕಾ-ಗಂಧಯುಕ್ತಿ-ವಸ್ತ್ರ-ಮಾಲೆ- ಭೂಷಣ-ರತ್ನ-ಭೋಜನ-ಶಯನ-ಅನ್ನಪಾನೀಯ-ಭಕ್ಷ್ಯಲೇಹ್ಯಾದಿಗಳು- ತಾಂಬೂಲಕರ್ಪೂರಾದಿ ಸೇವನೆ-ಪುತ್ರೋಪಭೋಗ- ರಾಜಸಭೆಗಳಲ್ಲಿ ನಾಟಕ, ಗಾಯನ, ಕವಿತ್ವ, ಕಾವ್ಯಾಲಂಕಾರ, ಆನೆ-ಕುದುರೆ-ರಥಗಳ ಕೌಶಲ್ಯ, ಮಲ್ಲವಿನೋದ-ಪಶುಪಾಲನೆ, ಪ್ರಾಣಿ -ಪಕ್ಷಿಗಳ ಕಾದಾಟದ ಸ್ಪರ್ಧೆಗಳು, ಅಶ್ವಶಾಸ್ತ್ರ ಮೊದಲಾದ ವಿವಿಧ ರಾಜೋಪಭೋಗಗಳ ವಿವರ ಸಪ್ತಮ ಕಲ್ಲೋಲದಿಂದ ಆರಂಭಗೊಳ್ಳುತ್ತದೆ. ಅಂತೆಯೇ ಚಿತ್ರಲೇಖನ, ಶಿಲ್ಪಕಲೆ, ವಾಸ್ತುಶಿಲ್ಪ, ಶಕುನ, ಸಾಮುದ್ರಿಕ, ಕಾಮಶಾಸ್ತ್ರ, ನಾಯಿಕಾ-ನಾಯಕ ವಿಚಾರ, ಸಂಗೀತ, ನೃತ್ಯ, ಇಂದ್ರಜಾಲ, ವಿವಿಧ ಕ್ರೀಡೆಗಳ ವಿಚಾರಗಳಿವೆ. ವಿವಿಧ ಯಂತ್ರಗಳು, ಲೋಹದ ಕೆಲಸ, ಕಲ್ಲಿನ ಕೆಲಸ, ಮಣ್ಣಿನ ಕೆಲಸ, ಮರದ ಕೆಲಸ, ಬೆತ್ತದ ಕೆಲಸ, ಚರ್ಮದ ಕೆಲಸ, ಬಟ್ಟೆಯ ಕೆಲಸ, ಅಡಿಗೆಯ ಕೆಲಸ -ಅಂದರೆ ಪಾಕಶಾಸ್ತ್ರ ಅಥವಾ ಸೂಪಶಾಸ್ತ್ರವೇ ಮೊದಲಾದ ಎಲ್ಲ ಪ್ರಸಿದ್ಧವಾದ ಅರವತ್ತನಾಲ್ಕು ಕಲೆಗಳನ್ನೂ ದಾಖಲಿಸಿದೆ.

ನೃತ್ಯ ಮತ್ತು ನಾಟ್ಯಸಂಬಂಧೀ ವಿವರಗಳು ಆರನೇ ಕಲ್ಲೋಲದ ತೃತೀಯ- ಚತುರ್ಥ-ಪಂಚ- ಷಷ್ಠ ತರಂಗಗಳಲ್ಲಿ ಪ್ರಧಾನವಾಗಿದ್ದು ನಾಟ್ಯೋತ್ಪತ್ತಿ, ನೃತ್ತಪ್ರಶಂಸಾ, ನರ್ತಕ- ನರ್ತಕೀ ಲಕ್ಷಣಗಳು, ಮಾರ್ಗನೃತ್ತಕ್ರಮ, ನಾಟ್ಯವಿಧಿ, ಶಿರ-ದೃಷ್ಟಿ-ಹಸ್ತ-ಬಾಹು- ವಕ್ಷ- ಪಾರ್ಶ್ವ- ಊರು-ಪಾದ ಎಂಬ ಕೆಲವು ಅಂಗೋಪಾಂಗ ಅಭಿನಯಗಳನ್ನು, ಸ್ಥಾನಕ- ಚಾರಿಗಳನ್ನು ಲಕ್ಷಣಸಹಿತವಾಗಿ ದಾಖಲಿಸಿದೆ. ಬಳಿಕ ಒಂಭತ್ತನೇ ತರಂಗದ ವರೆಗೂ ಗೀತಕ್ಕೆ ಸಂಬಂಧಿಸಿದ ನಾದ, ಗಮಕ, ರಾಗ, ಗ್ರಾಮ, ಮೂರ್ಛನ, ತಾನ, ತಾಲ, ಪ್ರಸ್ತಾರ ಮತ್ತು ವಿವಿಧ ವಾದ್ಯಗಳಿಗೆ ಸಂಬಂಧಿಸಿದ ವಿಚಾರಗಳೂ ಇವೆ. ಅಂತೆಯೇ ಸಪ್ತಮ ಕಲ್ಲೋಲದ ಆರನೇ ತರಂಗದಲ್ಲಿ ದಶರೂಪಕಗಳು, ನಾಟಕಗಳ ಕಥಾವಸ್ತು ಅಂದರೆ ಇತಿವೃತ್ತಗಳ ಸಂಧಿ-ಸಂಧ್ಯಂಗಗಳ ವಿವರಗಳೂ ಇವೆ.

ಸಮಾರೋಪ

ಇವೆಲ್ಲದಕ್ಕೂ ನಾಟ್ಯಶಾಸ್ತ್ರ, ಮಾನಸೋಲ್ಲಾಸ, ಸಂಗೀತರತ್ನಾಕರ, ದಂಡನೀತಿ, ಅರ್ಥಶಾಸ್ತ್ರ, ಧರ್ಮಶಾಸ್ತ್ರ ಮೊದಲಾದ ಹಲವು ಶಾಸ್ತ್ರ ಗ್ರಂಥ ಲಕ್ಷಣಗಳನ್ನೇ ಆಶ್ರಯಿಸಲಾಗಿದೆ.

ಅದ್ವಿತೀಯವೆನಿಸುವ ಈ ಗ್ರಂಥವು ವಿಶ್ವ ಸಾಹಿತ್ಯಕ್ಕೆ ಕರ್ನಾಟಕದ ಅನುಪಮ ಕಾಣಿಕೆ.

 

ಪರಾಮರ್ಶನ ಗ್ರಂಥಗಳು

ಶ್ರೀ ಸೋಮೇಶ್ವರ ಭೂಪತಿ ವಿರಚಿತ ಮಾನಸೋಲ್ಲಾಸ, ಪ್ರಧಾನ ಸಂಪಾಕದರು – ಪ್ರೊ ಮಲ್ಲೇಪುರಂ ವೆಂಕಟೇಶ. 2015. ಕರ್ನಾಟಕ ಸಂಸ್ಕೃತವಿಶ್ವವಿದ್ಯಾನಿಲಯ ಮತ್ತು ದರೇಸ ಪಬ್ಲಿಕೇಶನ್ ನ ಪ್ರಕಟಣೆ.

Shiva Tattva Ratnakara By Basavaraja 1927 Jangamwadi Math Collection. https://archive.org/details/qpMJ_shiva-tattva-ratnakara-by-basavaraja-1927-jangamwadi-math-collection

Siva Tattva Ratnakara Vol I Mysore Oriental Research Institute. https://archive.org/details/WajU_siva-tattva-ratnakara-vol-i-mysore-oriental-research-institute

Sivatattvaratnakara of Keladi Basavabhupala, vol.1, edited by S Narayanaswamy Sastri https://www.dropbox.com/s/4u6chn6zu996ou3/TxtSkt-Siva-tattva-ratnAkara-of-Keladi-Basavabhupala-v1-0179.pdf?e=1&dl=0

 

Leave a Reply

*

code