ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 16- ನಂದಿಕೇಶ್ವರನ ಅಭಿನಯದರ್ಪಣ

Posted On: Sunday, January 28th, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೬- ಲೋಕಪ್ರಸಿದ್ಧ ಗ್ರಂಥ ನಂದಿಕೇಶ್ವರನ ಅಭಿನಯದರ್ಪಣ ಮತ್ತು ನಂದಿಕೇಶ್ವರ ಪರಂಪರೆಯಲ್ಲಿ ಬಂದ ಲಕ್ಷಣವಿಚಾರಗಳ ವಿಶೇಷತೆ.ನೃತ್ಯ ಕಲಾವಿದರು ಅವಶ್ಯವಾಗಿ ಕೇಳಬೇಕಾದ ಸಂಚಿಕೆಗಳಲ್ಲೊಂದು.

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 16- Nandikeśwara’s Abhinayadarpaṇa and the insights of Nandikeśwara tradition.A must listen episode for Dancers

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

 

ಲೇಖನ

ಬಹುಮಟ್ಟಿಗೆ ಎಲ್ಲ ನೃತ್ಯಸಂಪ್ರದಾಯಗಳಿಗೂ ಪರಿಚಿತವಾಗಿರುವ, ಅತ್ಯಧಿಕವಾಗಿ ನೃತ್ಯ ಪರೀಕ್ಷೆಗಳ ಸಹಿತ ಭರತನಾಟ್ಯ-ಕೂಚಿಪೂಡಿ ಮೊದಲಾದ ನೃತ್ಯಗಳ ಹಸ್ತಾಭಿನಯಗಳಲ್ಲಿ ಅನುಸರಿಸಲ್ಪಡುವ ಲೋಕಪ್ರಸಿದ್ಧವಾಗಿರುವ ಗ್ರಂಥ ನಂದಿಕೇಶ್ವರನ ಅಭಿನಯದರ್ಪಣ. ಇದು ಹೆಸರೇ ತಿಳಿಸುವಂತೆ ಒಂದು ದರ್ಪಣ ಗ್ರಂಥ. ಇಂಥ ದರ್ಪಣ ಗ್ರಂಥಗಳಿಗೆ ಭಾರತದಲ್ಲಿ ನಿರ್ದಿಷ್ಟ ಪರಂಪರೆಯಿರುವುದೂ ತಿಳಿದುಬರುತ್ತದೆ. ಆ ಪೈಕಿ ನಾಟ್ಯದರ್ಪಣ, ಸಾಹಿತ್ಯ ದರ್ಪಣ, ಸಂಗೀತದರ್ಪಣ, ಅಲಂಕಾರದರ್ಪಣ ಎಂಬ ಎಷ್ಟೋ ಬಗೆಬಗೆಯ ಗ್ರಂಥಗಳಿವೆ, ಮತ್ತು ಹಲವು ಬಗೆಯ ಹಸ್ತಪ್ರತಿಗಳೂ ಇವೆ. ಅದರಲ್ಲೂ ಅಭಿನಯದರ್ಪಣವೆನ್ನುವುದು- ಅಭಿನಯಕ್ಕೆ ಹಿಡಿದ ಕನ್ನಡಿ ಎಂಬ ಅರ್ಥವನ್ನು ಸೂಚಿಸುವ ಗ್ರಂಥ. ದರ್ಪಣಗ್ರಂಥಗಳ ಉದ್ದೇಶವೇ ಅಳಿದುಹೋಗುತ್ತಿದ್ದ ಪರಂಪರೆಯ ಸಂಕಲನ. ದೇಶ ಮತ್ತು ಸಂಸ್ಕೃತಿಯು ಎದುರಿಸುತ್ತಿದ್ದ ಸಾಂಸ್ಕೃತಿಕ ಆಘಾತಗಳ ಸಂದರ್ಭದಲ್ಲಿ ಈ ದರ್ಪಣಗ್ರಂಥಗಳು ಹೆಚ್ಚಾಗಿ ರಚನೆಯಾಗಿವೆ.

ನಂದಿಕೇಶ್ವರ – ವೈಯಕ್ತಿಕ ವಿವರಗಳು, ಕಾಲ, ಪರಂಪರೆ ಮತ್ತು ಗ್ರಂಥಗಳು

ಇದನ್ನು ಬರೆದ ನಂದಿಕೇಶ್ವರನ ಕಾಲ, ದೇಶ, ವ್ಯಕ್ತಿತ್ವದ ಬಗ್ಗೆ ಯಾವುದೇ ಖಚಿತ ಅಧಾರಗಳಿಲ್ಲ. ಭರತ ಮುನಿ ಮತ್ತು ನಂದಿಕೇಶ್ವರರು ಸಮಕಾಲೀನರು ಅಥವಾ ಭರತನಿಗಿಂತ ನಂದಿಕೇಶ್ವರ ಹಿರಿಯ, ತಂಡು ಎಂಬವನೇ ನಂದಿಕೇಶ್ವರ, ಅವನೇ ಭರತನಿಗೆ ಪಾಠ ಮಾಡಿದವ, ಹಾಗಾಗಿ ನಾಟ್ಯಶಾಸ್ತ್ರಕ್ಕಿಂತ ದರ್ಪಣ ಹಳೆಯದು ಎಂಬ ವಿಚಾರಗಳಿವೆ. ಶಿವನ ಗಣಗಳಲ್ಲಿ ಒಬ್ಬನಾದ ನಂದಿಯೇ ನಂದಿಕೇಶ್ವರ; ಈತನೇ ಶಿವನಿಂದ ನಾಟ್ಯ ಕಲಿತು ಭೂಲೋಕದಲ್ಲಿ ಪ್ರಚಾರ ಮಾಡಿದನು ಎನ್ನುವ ನಂಬಿಕೆಗಳಿವೆ.ಅಭಿನಯದರ್ಪಣವನ್ನೇ ಹೋಲುವ ನಾಟ್ಯದರ್ಪಣ ಕೂಡಾ ಅರ್ವಾಚೀನವೆನಿಸುವ ಲಕ್ಷಣಗ್ರಂಥ.[1]

ನಂದಿಕೇಶ್ವರನ ಹೆಸರಿನಲ್ಲೇ ತಾಲ- ಅಭಿನಯ- ಅಭಿನಯ ತಂತ್ರ-ಯೋಗ-ಕಾಮಶಾಸ್ತ್ರ-ಮೀಮಾಂಸ ಶಾಸ್ತ್ರಗಳ ಹಲವು ಗ್ರಂಥಗಳೂ ಬೇರೆ ಬೇರೆ ಕಾಲಗಳಲ್ಲಿ ಕಾಣಸಿಗುತ್ತವೆ. ಇದರಿಂದ ಈ ಎಲ್ಲ ನಂದಿಕೇಶ್ವರರೂ ಒಬ್ಬರೆ ಖಂಡಿತ ಅಲ್ಲ. ಭಿನ್ನ ಭಿನ್ನ ದೇಶ- ಕಾಲಗಳಲ್ಲಿ ಜೀವಿಸಿದ್ದ ಲಾಕ್ಷಣಿಕರು; ಪುರಾಣವ್ಯಕ್ತಿಗಳಲ್ಲ ಎನ್ನುವುದಂತೂ ಸ್ಪಷ್ಟವಾಗಿ ತಿಳಿಯುತ್ತದೆ. ಅದರಲ್ಲೂ ಅಭಿನಯದರ್ಪಣದ ಲಕ್ಷಣಕ್ರಮವನ್ನು ಗಮನಿಸಿದಾಗ ಖಚಿತವಾಗಿಯೂ ಇದೊಂದು ದಾಕ್ಷಿಣಾತ್ಯ ಪ್ರಾಂತವೊಂದರಲ್ಲಿ ರಚನೆಯಾದ ಸಂಗ್ರಹಕೃತಿ, ಅಂದಾಜು ೧೩ರಿಂದ ೧೭ನೇ ಶತಮಾನದ ಒಳಗಿನ ಕಾಲ ಇದರದ್ದು ಎನ್ನುವುದು ಅರಿವಾಗಿದೆ. ಇದೇ ಅಭಿಪ್ರಾಯವನ್ನು ಕೀರ್ತಿಶೇಷರಾದ ಕುಂಜುಣ್ಣೀ ರಾಜಾ, ಡಾ. ರಾ. ಸತ್ಯನಾರಾಯಣ ಮೊದಲಾದ ಅನೇಕ ವಿದ್ವಾಂಸರು ಕೂಡಾ ಸೂಚಿಸಿದ್ದಾರೆ.

ಅಭಿನಯದರ್ಪಣ ಮತ್ತು ಭರತಾರ್ಣವವೆಂಬ ಗ್ರಂಥಗಳು ಗಾಂಧರ್ವವೇದದ ಗ್ರಂಥವೆಂದೇ ಹೆಸರಾದ ನಂದಿಕೇಶ್ವರಸಂಹಿತೆ/ನಂದೀಶಸಂಹಿತೆಯೆಂಬ ಬಹುದೊಡ್ಡ ಗ್ರಂಥದ ಭಾಗವಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ನಂದಿಕೇಶ್ವರಸಂಹಿತೆಯು ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ ಎನ್ನುತ್ತಾರೆ ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣರು. ಆದರೆ ಲುಪ್ತವಾಗಿರುವ ನಂದೀಶಸಂಹಿತೆಯೇ ಒಂದಾನೊಂದು ಕಾಲಕ್ಕೆ ಮತಂಗನ ಬೃಹದ್ದೇಶಿ ಹಾಗೂ ರಘುನಾಥನಾಯಕನ ಗ್ರಂಥಗಳಿಗೆ ಆಧಾರವನ್ನೊದಗಿಸಿದ್ದಿರಬಹುದೆಂದು ಡಾ. ಪಿ.ಎಸ್.ಕೆ.ಅಪ್ಪಾರಾವ್ ಅವರು ತಾವು ಸಂಪಾದಿಸಿದ ಅಭಿನಯದರ್ಪಣದ ವಿಸ್ತೃತ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ. ಆದರೆ ಮತಂಗಾದಿ ಪೂರ್ವಾಚಾರ್ಯರುಗಳಲ್ಲಿ ನಂದಿಕೇಶ್ವರಕೃತವೆನ್ನಲಾದ ನಂದಿಕೇಶ್ವರತಿಲಕಂ, ನಾಟ್ಯಾರ್ಣವ, ಅಭಿನಯದರ್ಪಣ, ಭರತಾರ್ಣವದ ಉಲ್ಲೇಖವೂ ಕಂಡುಬರುವುದಿಲ್ಲ. ಅಷ್ಟೇಕೆ, ಲುಪ್ತವಾಗಿರುವ ನಂದಿಕೇಶ್ವರತಿಲಕಂ, ನಾಟ್ಯಾರ್ಣವ ಗ್ರಂಥಗಳಲ್ಲಿ ಯಾವ ಅಂಶಗಳು ಇದ್ದಿರಬಹುದು ಎಂಬುದನ್ನು ಅಂದಾಜಿಸಲು ನೆರವಾಗುವ ಯಾವುದೇ ವಿಚಾರಗಳೂ ಭರತಾರ್ಣವ, ಅಭಿನಯದರ್ಪಣದಲ್ಲೂ ಇಲ್ಲ. ಅದರಲ್ಲೂ ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನವನ್ನಿತ್ತ ಕಾಶ್ಮೀರದ ಅಭಿನವಗುಪ್ತನು ಉಲ್ಲೇಖಿಸುವ ನಂದಿಕೇಶ್ವರನು ಭರತಾರ್ಣವ, ಅಭಿನಯದರ್ಪಣಗಳ ಕರ್ತೃ ಅಲ್ಲ. ಅಭಿನವಗುಪ್ತನು ಈ ಎರಡೂ ಗ್ರಂಥಗಳನ್ನೂ ಹೇಳುವುದಿಲ್ಲ. ಬದಲಾಗಿ ಅಭಿನವಗುಪ್ತನು ರೇಚಕ, ಅಂಗಹಾರವನ್ನು ನಿರೂಪಿಸುವ ಶ್ಲೋಕವೊಂದನ್ನು ನಂದಿಮತಾನುಸಾರವಾಗಿದೆ ಎಂದು ಉಲ್ಲೇಖಿಸಿ, ನಂದಿಕೇಶ್ವರನ ಮೂಲಗ್ರಂಥವನ್ನು ತಾನು ನೋಡಿಲ್ಲವೆಂದೂ ಚಿತ್ರಪೂರ್ವರಂಗವಿಧಿಯ ಬಗೆಗೆ ನಂದಿಕೇಶ್ವರನ ಮತವನ್ನು ಕೀರ್ತಿಧರಾಚಾರ್ಯನಿಂದ ಸಂಗ್ರಹಿಸಿರುವುದಾಗಿಯೂ ಬರೆಯುತ್ತಾನೆ. ಹಾಗಾಗಿ ನೃತ್ಯಲಾಕ್ಷಣಿಕನೆಂದೇ ನಂದಿಕೇಶ್ವರನನ್ನು ಹುಡುಕಲು ಹೊರಟರೂ ೧೦ನೇ ಶತಮಾನದ ಒಳಗೆ ಒಮ್ಮೆ ಮತ್ತು ೧೦ನೇ ಶತಮಾನದ ಅನಂತರಕ್ಕೆ ಮೂರು ಸಲ ಬೇರೆ ಬೇರೆ ಕಡೆಗಳಲ್ಲಿ ನಂದಿಕೇಶ್ವರನು ಕಂಡುಬರುತ್ತಾನೆ. ಇದರಿಂದ ಈ ಎಲ್ಲ ಗ್ರಂಥಗಳ ನಂದಿಕೇಶ್ವರ ಒಬ್ಬನೇ ಅಲ್ಲ; ಇವರ್ಯಾರೂ ನಂದಿಕೇಶ್ವರನೆಂಬ ಶಿವನ ಗಣ, ವಾಹನರಲ್ಲ. ಐತಿಹಾಸಿಕ ವ್ಯಕ್ತಿಗಳೇ ಹೊರತು ಪುರಾಣ ಪುರುಷರಲ್ಲ. ಮತ್ತು ನಂದಿಕೇಶ್ವರನ ಹೆಸರಿನಲ್ಲಿ ಬೇರೆ ವ್ಯಕ್ತಿಗಳು ಇದ್ದರೆಂದೋ ಇಲ್ಲವೇ ನಂದಿಕೇಶ್ವರ ಎಂಬ ಹೆಸರಿನಲ್ಲಿ ಗ್ರಂಥಗಳನ್ನು ಬರೆಯುತ್ತಿದ್ದವರ ಪರಂಪರೆ ಇತ್ತೆಂದೂ ಗ್ರಹಿಸಬಹುದು.

೧೭ನೇ ಶತಮಾನದಲ್ಲಿ ಲಿಂಗಮಾಗುಂಟ ಮಾತೃಭೂತಯ್ಯ ತೆಲುಗು ಕಾವ್ಯಪ್ರಕಾರದಲ್ಲಿ ಅಭಿನಯದರ್ಪಣ ಎಂಬ ಗ್ರಂಥವನ್ನು ಬರೆದರು. ಅವರು ನಂದಿಕೇಶ್ವರನ ದರ್ಪಣವೇ ಇದಾಗಿದೆ ಎಂದು ನೇರವಾಗಿ ಸೂಚಿಸದಿದ್ದರೂ; ಇದುವೇ ನಂದಿಕೇಶ್ವರನ ಅಭಿನಯದರ್ಪಣವನ್ನು ದೇಶೀಭಾಷೆಯೊಂದಕ್ಕೆ ಮೊದಲು ಭಾಷಾಂತರಿಸಿಕೊಂಡ ಹಸ್ತಪ್ರತಿ ಎನ್ನುವುದು ತಿಳಿಯುತ್ತದೆ.[2]

ಅಭಿನಯದರ್ಪಣ- ಗ್ರಂಥವಿಶೇಷ ಮತ್ತು ಲಕ್ಷಣಗಳು

ವಿಶೇಷವೆಂದರೆ ಸ್ವತಃ ನಂದಿಕೇಶ್ವರನು ಭರತನ ನಾಟ್ಯಶಾಸ್ತ್ರನನ್ನು ಪರಾಮರ್ಶಿಸಿದ್ದಾನೆ. ಭರತನ ಬಗೆಗೆ ಗೌರವದ ಭಾವವುಳ್ಳ ಆತನು ನಾಟ್ಯಶಾಸ್ತ್ರದಲ್ಲಿ ಕಂಡುಬರುವ ನಾಟ್ಯೋತ್ಪತ್ತಿಯ ಕಥೆಯನ್ನು ಸಂಕ್ಷಿಪ್ತವಾಗಿ ಉದ್ಧರಿಸಿ ಫಲಶ್ರುತಿಯನ್ನೂ ಹೇಳಿದ್ದಾನೆ. ಇದರೊಂದಿಗೆ ಸಭಾಲಕ್ಷಣ, ಸಭಾನಾಯಕಲಕ್ಷಣ, ಮಂತ್ರಿಲಕ್ಷಣ, ರಂಗಲಕ್ಷಣ, ಸಭಾ ಲಕ್ಷಣ, ರಂಗಮಂಟಪ ಕ್ರಮ, ನಟ-ನಟಿಯರ ಲಕ್ಷಣಗಳು, ನಾಟ್ಯ, ನೃತ್ತ, ನೃತ್ಯಲಕ್ಷಣಗಳನ್ನು ಗಮನಿಸಿದರೆ ದರ್ಪಣ ಹೇಳುವ ಸಭೆಗಳು ದೇವಸಭೆಗಳಲ್ಲ, ಬದಲಾಗಿ ರಾಜಸಭೆಗಳು ಎಂಬುದಂತೂ ಸ್ಪಷ್ಟ.

ಜೊತೆಗೆ ಅಭಿನಯದರ್ಪಣದಲ್ಲಿ ಕಂಡುಬರುವ ೨೫ ಶ್ಲೋಕಗಳು ಶಾರ್ಙ್ಗದೇವನ ಸಂಗೀತರತ್ನಾಕರದಲ್ಲಿಯೂ ಕಂಡುಬರುತ್ತವೆ. ಆ ಪೈಕಿ ನಂದೀಕೃತ ಶಿವಸ್ತುತಿ- ’ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವ ವಾಙ್ಮಯಂ | ಆಹಾರ್ಯಂ ಚಂದ್ರ ತಾರಾದಿ ತಂ ನುಮಃ ಸಾತ್ತ್ವಿಕಂ ಶಿವಂ’ … ಎಂಬುದೂ ಕೂಡಾ ಒಂದು. ಇದು ಎರಡೂ ಗ್ರಂಥಗಳ ನೃತ್ತಾಧ್ಯಾಯದಲ್ಲೂ ಕಂಡುಬರುವ ನಾಂದೀಶ್ಲೋಕ. ಆದರೆ ಶಾರ್ಙ್ಗದೇವನು ತನ್ನ ಗ್ರಂಥ ಸಂಗೀತ ರತ್ನಾಕರದಲ್ಲಿ ಬಹಳಷ್ಟು ಪೂರ್ವಸೂರಿ ಲಾಕ್ಷಣಿಕರನ್ನು ನೋಡಿ ಗ್ರಂಥ ರಚಿಸಿದೆ ಎನ್ನುತ್ತಾನೆಯೇ ಹೊರತು ಆ ಶ್ಲೋಕಗಳು ನಂದಿಕೇಶ್ವರನದ್ದೇ ಆಗಿವೆ ಎಂದು ಎಲ್ಲಿಯೂ ಹೇಳಿಲ್ಲ. ಹಾಗೆಯೇ ವ್ಯಾಖ್ಯಾನ ಬರೆದ ಸಿಂಹಭೂಪಾಲ, ಕಲ್ಲಿನಾಥರೂ ಅಭಿನಯದರ್ಪಣದ ಶ್ಲೋಕಗಳಿಂದ ಎರವಲು ಪಡೆದಿರಬಹುದಾದ ಯಾವ ಸಾಧ್ಯತೆಗಳನ್ನೂ ಸೂಚಿಸಿಲ್ಲ. ಜೊತೆಗೆ ಅಭಿನಯದರ್ಪಣದ ಬರೆವಣಿಗೆಯ ಶೈಲಿ, ಲಕ್ಷಣವಿಚಾರಗಳು ಅದರ ಕಾಲವನ್ನು ಸಂಗೀತರತ್ನಾಕರದಿಂದಾಚೆಗೇ ಬೆಟ್ಟು ಮಾಡಿಸುತ್ತದೆ.[3]

ಇಂದ್ರನು ಕೈಲಾಸಕ್ಕೆ ಆಗಮಿಸಿ ಸ್ತುತಿಸುತ್ತಾ ನಂದಿಯನ್ನು ಬೇಡಿಕೊಂಬಲ್ಲಿಗೆ ಅಭಿನಯದರ್ಪಣದ ರಚನೆಯ ಕತೆಯೊಂದು ತೆರೆದುಕೊಳ್ಳುತ್ತದೆ. ಇಂದ್ರನಿಗೆ ನಂದಿಯು ಸ್ವಾಗತ ಕೋರಿ ಉಭಯಕುಶಲೋಪರಿ ವಿಚಾರಿಸಿ, ಆಗಮಿಸಿದ ಕಾರಣ ಕೇಳಿದ್ದೇ ತಡ; ಇಂದ್ರನು ನಂದಿಯ ಕೃಪೆಯಿಂದ ತನ್ನ ಒಡೆತನದ ನಾಟ್ಯಶಾಲೆ ಅಲಂಕೃತಗೊಂಡಿದೆ; ಆದರೂ ಮತ್ತಷ್ಟು ಸಹಾಯ ಬೇಕೆಂದು ವಿನಂತಿಸುತ್ತಾನೆ. ಇಂದ್ರನ ಅಪೇಕ್ಷೆ ಏನೆಂದರೆ-ರಾಕ್ಷಸರ ಸಭೆಯಲ್ಲಿರುವ ನಟಶೇಖರನೆಂಬ ನರ್ತಕನನ್ನು ಕ್ರಮವತ್ತಾಗಿ ಅರಿತ ನಾಟ್ಯವಿನೋದಗಳಿಂದ ಜಯಿಸಲು ಭರತಾರ್ಣವಗ್ರಂಥ ಬೇಕೆಂಬುದು. ಅಂದರೆ ನಟಶೇಖರನ ನೃತ್ಯವನ್ನು ಜಯಿಸಬೇಕೆಂದಾದರೆ ಶಾಸ್ತ್ರದ ಹಿನ್ನೆಲೆ ಬೇಕು. ನಟಶೇಖರನೆಂಬಾತನ ವಿದ್ವತ್ತಿಗಿಂತ ಹೆಚ್ಚಿನ ಜ್ಞಾನಸಂಪತ್ತು ಬೇಕು. ಇಂದ್ರನ ಕೋರಿಕೆಯನ್ನು ಮನ್ನಿಸಿ ನಂದಿಯು ಆತನನ್ನು ಸುಮತಿ ಎಂದು ಸಂಬೋಧಿಸಿ ಭರತಾರ್ಣವವನ್ನು ಹೇಳಲು ಉದ್ಯುಕ್ತನಾಗುತ್ತಾನೆ.[4] ಇಲ್ಲಿ ಇಂದ್ರನಿಗೆ ಸುಮತಿ ಎಂಬುದು ಉದ್ದೇಶಪೂರ್ವಕ ಸಂಬೋಧನೆ. ಸುಮತಿ ಎಂದರೆ ಒಳ್ಳೆಯ ಮತಿಯುಳ್ಳವನು ಎಂದರ್ಥ. ಅರ್ಥಾತ್ ಒಳ್ಳೆಯ ಬುದ್ಧಿಯುಳ್ಳವನಿಗೆ ಈ ಶಾಸ್ತ್ರವು ದಕ್ಕುತ್ತದೆ, ಆತನೇ ಶಾಸ್ತ್ರಕ್ರಮವನ್ನು ಅರಿತು ನಡೆಯುತ್ತಾನೆ ಎಂಬ ಧ್ವನಿ. ಜೊತೆಗೆ ಭರತಾರ್ಣವವನ್ನು ಕಲಿಯಲು ಇಂದ್ರನು ಸುಮತಿಯೆಂಬವನನ್ನು ನಂದಿಯ ಬಳಿಗೆ ಕಳಿಸಿದ ಐತಿಹ್ಯವೂ ಜೊತೆಗಿದೆ. ಆದ್ದರಿಂದಲೇ ಸುಮತಿಬೋಧಕ ಎಂಬ ಮತ್ತೊಂದು ಗ್ರಂಥ ಇತ್ತು ಎನ್ನಲಾಗುತ್ತದೆ. ಮುಂದಕ್ಕೆ ಈ ದರ್ಪಣಗ್ರಂಥವು ‘ಪಾತ್ರ’ವೆಂಬ ನರ್ತಕಿ, ನಟೋತ್ತಮನೆಂಬ ನರ್ತಕರು ರಾಜಸಭೆಗಳಲ್ಲಿ ನೃತ್ಯವಾಡುವ ಲಕ್ಷಣಗಳನ್ನೂ ತಿಳಿಸಿದ್ದು; ಲಾಸ್ಯ ಮತ್ತು ತಾಂಡವಗಳು ಏಕಾಹಾರ್ಯವಾಗಿ ಪುರುಷ ಮತ್ತು ಸ್ತ್ರೀಯರಿಗೆಂದೇ ಪ್ರತ್ಯೇಕವಾಗಿ ರಚನೆಗೊಂಡ ಲಕ್ಷಣ ಎದ್ದು ತೋರುತ್ತದೆ.

ನಂದಿಯೇನೋ ಭರತಾರ್ಣವವನ್ನು ತಿಳಿಸಲು ಸಿದ್ಧನಾದ. ಆದರೆ ಇಂದ್ರನಿಗೆ ಅಷ್ಟೊಂದು ದೊಡ್ಡ ಗ್ರಂಥವನ್ನು ಅಧ್ಯಯನ ಮಾಡಲು ವ್ಯವಧಾನವಿರಲಿಲ್ಲ. ಅದಕ್ಕಾಗಿ ಇಂದ್ರ ಭರತಾರ್ಣವವನ್ನು ಸ್ಥೂಲರೂಪದಲ್ಲಿ ಕಲಿಯಲು ಬಯಸುತ್ತಾನೆ. ಇಂದ್ರನ ಕೋರಿಕೆಯನ್ನು ಮನ್ನಿಸಿ ಭರತಾರ್ಣವವನ್ನು ಸಂಕ್ಷಿಪ್ತವಾಗಿ ಹೇಳಲು ಒಪ್ಪುವ ನಂದಿಕೇಶ್ವರನು ಆ ಗ್ರಂಥದ ಸಾರಸಂಗ್ರಹಕ್ಕೆ ದರ್ಪಣವೆಂಬ ಹೆಸರು ಎನ್ನುತ್ತಾನೆ. ಸ್ವತಃ ಗ್ರಂಥಕಾರನೇ ಇದನ್ನು ದರ್ಪಣ ಎನ್ನುತ್ತಾನೆ. ಬಹುಶಃ ಅಭಿನಯದರ್ಪಣವೆಂದು ಆ ಬಳಿಕ ಹೆಸರು ಸೇರಿಕೊಂಡಿರಬೇಕು.

ನಾಟ್ಯಶಾಸ್ತ್ರದ ಮತ್ತು ಸಂಗೀತರತ್ನಾಕರವೇ ಮೊದಲಾದವುಗಳ ಪರಿಭಾಷೆ, ವರ್ಗೀಕರಣದಿಂದ ಕೊಂಚ ಮಟ್ಟಿಗೆ ಭಿನ್ನ ಮಾರ್ಗ ಅಭಿನಯದರ್ಪಣದ್ದು. ಆದರೂ ಕಲಾವಿದರಿಗೆ ದರ್ಪಣವನ್ನು ಅನುಸರಿಸುವುದು ಸುಲಭ ಎಂದು ಕಾಣುವುದು ಇದರ ಸರಳ ನಿರೂಪಣೆಯಿಂದಾಗಿ. ದರ್ಪಣದ ಭಾಷೆ ವ್ಯಾಖ್ಯಾನದ ಅಗತ್ಯವಿಲ್ಲದೆಯೂ ಅರ್ಥ ಮಾಡಿಕೊಳ್ಳುವಷ್ಟು ಸರಳ. ದರ್ಪಣವು ಆಂಗಿಕಾಭಿನಯದ ಪೈಕಿ ಎಷ್ಟೋ ವಿಭಾಗಗಳನ್ನು ಹೇಳುವುದಿಲ್ಲ. ನಾಟ್ಯಶಾಸ್ತ್ರದಲ್ಲಾದರೆ ನೃತ್ತಹಸ್ತಗಳಿಗೆ ನಿರ್ದಿಷ್ಟ ವಿನಿಯೋಗದ ಹಂಗಿಲ್ಲ. ಅವು ಸೌಂದರ್ಯದ ದೃಷ್ಟಿಯಿಂದ ನೃತ್ತಾನುಕೂಲಿ. ಆದರೆ ದರ್ಪಣದಲ್ಲಿ ನೃತ್ತಹಸ್ತಗಳೆಂದು ವರ್ಗೀಕೃತಗೊಂಡಿರುವ ೧೩ ಹಸ್ತಗಳು ಅಸಂಯುತ ಮತ್ತು ಸಂಯುತ ಹಸ್ತಪ್ರಕಾರಗಳಲ್ಲಿರುವ ಹಸ್ತಗಳೇ ಆಗಿವೆ. ದರ್ಪಣವು ಪಾದಭೇದದ ಅಂಗಭಾಗವಾಗಿ ಗತಿಭೇದಗಳನ್ನು ಹೇಳಿದೆ. ಅಂತೆಯೇ ಸ್ಥಾನಕಗಳ ಉಲ್ಲೇಖವೂ ಕೂಡಾ. ಪಾದಭೇಧಗಳ ಅಂಗವೆಂಬುದಕ್ಕಷ್ಟೇ ಅವು ಸೀಮಿತವಾಗಿವೆ. ಇನ್ನು ದರ್ಪಣದಲ್ಲಿರುವ ಮಂಡಲಗಳು ಕೂಡಾ ಪಾದಭೇದಗಳೇ ಆಗಿವೆ. ಅವು ನಾಟ್ಯಶಾಸ್ತ್ರದಂತೆ ಯುದ್ಧಾದಿಗತಿಗಳಲ್ಲಿ ಬಳಸುವ ಕ್ರಮಗಳಂತೆ ಕಾಣುವುದಿಲ್ಲ. ಉತ್ಪ್ಲವನ ಮತ್ತು ಭ್ರಮರೀ ಭೇದಗಳು ಕೂಡ ಮೂಲತಃ ಪಾದಬೇಧಗಳೆಂಬ ಹೆಸರಿನಲ್ಲಿ ವರ್ಗೀಕರಿಸಲ್ಪಟ್ಟಿವೆ. ಚಾರಿಭೇಧಗಳೆಂದು ವರ್ಗೀಕೃತವಾದ ಪಾದಭೇಧಗಳೂ ಕೂಡಾ ನಾಟ್ಯಶಾಸ್ತ್ರದಂತೆ ಭೂಚಾರಿ, ಆಕಾಶಚಾರಿ ಎಂಬ ಸ್ಪಷ್ಟವಾದ ಶಾಖೆಗಳಲ್ಲಿ ಕಂಡುಬರುವುದಿಲ್ಲ. ಆದರೆ ಹಸ್ತಾಭಿನಯದ ವಿಚಾರ ಮಾತ್ರ ವಿಶೇಷವಾಗಿ ಕಂಡುಬರುತ್ತದೆ.[5]

ಗ್ರಂಥ ಸಂಪಾದನೆ, ಅನುವಾದ ಮತ್ತು ಪ್ರಭಾವಗಳು

ಅಭಿನಯದರ್ಪಣವು ನಾಟ್ಯಶಾಸ್ತ್ರಕ್ಕಿಂತಲೂ ಸರಿಮಿಗಿಲೆಂಬಂತೆ ದೇಶ-ವಿದೇಶಗಳಲ್ಲಿ ತೋರಿಕೊಳ್ಳಲು ಕಾರಣವಾದದ್ದು ಆನಂದಕೂಮರಸ್ವಾಮಿ ಮತ್ತು ಗೋಪಾಲಕೃಷ್ಣಯ್ಯ ದುಗ್ಗೀರಾಲರ ಸಾಂಗತ್ಯದಲ್ಲಿ ಹೊರಬಂದ ‘ಮಿರರ್ ಆಫ್ ಗೆಸ್ಚರ್ಸ್’ ಎಂಬ ದರ್ಪಣದ ಆವೃತ್ತಿಯಿಂದ. ಇದು ನೀಡಾಮಂಗಲಂ ಅವರ ಸಂಪಾದನೆಯ ಇಂಗ್ಲೀಷ್ ಆವೃತ್ತಿಯಾಗಿದ್ದು ೧೯೧೭ರಲ್ಲಿ ರೇಖಾಚಿತ್ರಸಹಿತವಾಗಿ ಕುಮರಸ್ವಾಮಿಯವರ ಆಕರ್ಷಕವಾದ ಪ್ರವೇಶಿಕೆ ಮತ್ತು ನೀಡಾಮಂಗಲಂ ಅವರ ಮುನ್ನುಡಿಯೊಂದಿಗೆ ಬೆಳಕು ಕಂಡಿತು. ಪಾಶ್ಚಾತ್ಯ ರಂಗಭೂಮಿಯ ನಟರಿಗೆ ಭಾರತೀಯ ನೃತ್ಯದ ಸಂಕೇತ, ಹಸ್ತದಿ ಅಭಿನಯಗಳನ್ನು ಪರಿಚಯಿಸಿ, ಅದರ ಸ್ಫೂರ್ತಿಯಿಂದ ರಂಗಭೂಮಿಯ ವಾತಾವರಣವನ್ನು ಶ್ರೀಮಂತವಾಗಿಸುವುದು ಅವರ ಉದ್ದೇಶವಾಗಿತ್ತು. ಇದನ್ನು ಅರ್ಥೈಸಿಕೊಳ್ಳಲು ಸುಲಭ ಎಂಬ ಕಾರಣಕ್ಕೋ ಏನೋ ಕ್ರಮೇಣ ಹಲವು ಕಲೆಗಳು ಅಭಿನಯದರ್ಪಣವನ್ನೇ ಆಶ್ರಯಿಸಿದವು. ಅದರಲ್ಲೂ ೨೦ನೇ ಶತಮಾನದಲ್ಲಿ ದೇವದಾಸೀ ನರ್ತಕಿಯರ ಬಾಳಿನೊಂದಿಗೇ ಮುದುಡಿಹೋಗಿದ್ದ ಸದಿರ್ ನೃತ್ಯಕ್ಕೆ ಪುನರುದ್ಧಾರ ಕಲ್ಪಿಸಿ ಭರತನಾಟ್ಯವೆಂದು ನಾಮಕರಣ ಮಾಡುವ ಹೊತ್ತಿಗೆ ರುಕ್ಮಿಣೀ ದೇವಿ ಅರುಂಡೇಲ್ ಅವರಿಗಿದ್ದ ಉದ್ದೇಶವೂ ಶಾಸ್ತ್ರಸರಳತೆಯೇ ಆಗಿತ್ತು. ಭಾರತೀಯ ಅಭಿಜಾತ ನೃತ್ಯಶೈಲಿಯೊಂದಕ್ಕೆ ಬ್ರಿಟಿಷ್ ಸರ್ಕಾರದಿಂದ ಆಗಿದ್ದ ಪ್ರತಿಬಂಧವನ್ನು ನಿವಾರಿಸಿ, ನೃತ್ಯವನ್ನು ಜನಜೀವನಕ್ಕೆ ಪ್ರಕಾಶವಾಗುವಂತೆ ಕಾಣಿಸಲು ಜನರಿಗೆ ಸುಲಭದಲ್ಲಿ ಅರ್ಥವಾಗುವ ಗ್ರಂಥ ಅವಶ್ಯಕವೆಂದು ಬಗೆದರೋ ಏನೋ..! ಒಟ್ಟಿನಲ್ಲಿ ಅಂದಿನಿಂದ ಇಂದಿನವರೆಗೂ ಅಭಿನಯದರ್ಪಣವನ್ನೇ ಭರತನಾಟ್ಯದ ಅನೇಕ ಶಾಸ್ತ್ರಸಂಗತಿಗಳಿಗೆ ಆಧಾರಪ್ರಾಯವಾದ ಲಕ್ಷಣಗ್ರಂಥ ಎಂಬ ಮಟ್ಟಿಗೆ ಆರಾಧಿಸಲಾಗುತ್ತಿದೆ. ಇಂದಿಗೂ ಭರತನಾಟ್ಯದ ಪಠ್ಯ ಮತ್ತು ಪರೀಕ್ಷಾ ಕ್ರಮಗಳು ಅಭಿನಯ ದರ್ಪಣವನ್ನು ಮುಖ್ಯ ಆಧಾರವಾಗಿಟ್ಟುಕೊಂಡಿವೆ.

ಹಾಗೆ ನೋಡಿದರೆ ಭರತನಾಟ್ಯದ ಚತುರ್ವಿಧ ಅಭಿನಯವಿಶೇಷ, ನಾಯಿಕಾ-ನಾಯಕ ಬೇಧ, ರಸವಿಚಾರ ಇತ್ಯಾದಿ ಸುಮಾರು ೭೦% ರಷ್ಟು ವಿಷಯಗಳಿಗೆ ಪ್ರಮಾಣ-ಮೂಲ ನಾಟ್ಯಶಾಸ್ತ್ರವೇ ಆಗಿದೆ. ಇನ್ನುಳಿದಂತೆ ಅಡವಿನ ಲಕ್ಷಣಕ್ಕೆ ತುಳಜಾಜಿಯ ಸಂಗೀತ ಸಾರಾಮೃತ ಗ್ರಂಥವನ್ನು ಪ್ರಾಥಮಿಕವಾಗಿ ಆಶ್ರಯಿಸಿದ್ದು; ತದನಂತರ ನೃತ್ಯಬಂಧಗಳ ರಚನೆಗೆ ಎರಡನೇ ಸರಫೋಜಿ ಮಹಾರಾಜನು ಹೇಳಿದ ‘ನಿರೂಪಣ’ಗಳು ಆಧಾರವೆನ್ನಲಾಗುತ್ತದೆ. ಇದೇ ನಿರೂಪಣಗಳ ಕ್ರಮವನ್ನು ಪರಿಷ್ಕರಿಸಿ ಪೃಥಗರ್ಥಪ್ರಯೋಗ- ಅಂದರೆ ವಿವಿಧ ಬಗೆಯ ವಸ್ತುವುಳ್ಳ ಒಂದು ನೃತ್ಯ‌ಅಭಿನಯ ಕಛೇರಿ ಕ್ರಮವನ್ನು ತಂಜಾವೂರು ಸಹೋದರರಾದ ಚಿನ್ನಯ್ಯ, ಪೊನ್ನಯ್ಯ, ಶಿವಾನಂದ ವಡಿವೇಲು ಪ್ರಸ್ತುತಪಡಿಸಿದರು ಎನ್ನುವುದು ಐತಿಹ್ಯ. ಇಂದಿಗೂ ಭರತನಾಟ್ಯವು ಇದೇ ಸುಧಾರಿತ ಆವೃತ್ತಿಯಾದ ಕಛೇರಿಕ್ರಮವನ್ನು ಅಳವಡಿಸಿಕೊಂಡಿದೆ.

ಸಮಾಪನ

ಒಟ್ಟಿನಲ್ಲಿ ಅಭಿನಯದರ್ಪಣವು ನೃತ್ಯವನ್ನೇ ಪ್ರಧಾನವಾಗಿ ರಚಿಸಿದ ಲಘುಪ್ರಬಂಧ ಎಂಬುದಂತೂ ತಿಳಿಯುತ್ತದೆ. ಸ್ವತಃ ನಂದಿಕೇಶ್ವರನೇ ನೃತ್ಯಮಾತ್ರೋಪಯೋಗ್ಯಾನಿ ಕಥ್ಯಂತೇ ಲಕ್ಷಣೈ ಕ್ರಮಾತ್ ಅಂದರೆ ನೃತ್ಯದ ಪ್ರಯೋಜನಕ್ಕೆಂದೇ ಈ ಗ್ರಂಥಲಕ್ಷಣವನ್ನು ಹೇಳಿದ್ದೇನೆ ಎಂದೇ ಬರೆದಿದ್ದಾನೆ. ಇಲ್ಲೇ ಇದು ನಾಟ್ಯಶಾಸ್ತ್ರದಷ್ಟು ಅಥವಾ ಮಾನಸೋಲ್ಲಾಸ, ಸಂಗೀತರತ್ನಾಕರದಂತೆ ವಿಸ್ತಾರವಾಗಿ ರಂಗಭೂಮಿ ಮತ್ತು ನೃತ್ತ ನೃತ್ಯಪ್ರಪಂಚದ ಬಗ್ಗೆ ವಿಚಾರ ಮಾಡಿಲ್ಲ ಎನ್ನುವುದು ಅರ್ಥವಾಗುತ್ತದೆ. ಹಾಗೆಂದು ಅಭಿನಯ ದರ್ಪಣದ ಪ್ರಯೋಜನ ಕಡಿಮೆ ಆಗುವುದಿಲ್ಲ. ಸಾಕಷ್ಟು ತಿಳಿವಳಿಕೆಯನ್ನು ಇದು ಹೇಳಿಯೇ ಹೇಳುತ್ತದೆ. ಅಷ್ಟಕ್ಕೂ ಹೀಗೆ ಲಘುಪ್ರಬಂಧಗಳ ಮೂಲಕ ಹೇಳುವುದರಿಂದ ಅಭಿನಯದ ಪ್ರಾಥಮಿಕ ಪರಿಚಯವೂ, ನಾಟ್ಯದ ಬಗ್ಗೆ ಅಭಿರುಚಿಯೂ ಹುಟ್ಟುತ್ತದೆ. ಆದರೆ ಇಷ್ಟಕ್ಕೇ ತನ್ನನ್ನು ಸೀಮಿತ ಮಾಡಿಕೊಳ್ಳದೆ ನಾಟ್ಯ ಮತ್ತು ಅಭಿನಯದ ಸಮಗ್ರ-ಸಮಷ್ಟಿರೂಪವನ್ನು ರಸಿಕನಾದವನು ಗ್ರಹಿಸಲು ಸಮರ್ಥನಾಗಬೇಕು. ಅಂತೆಯೇ ಕಲಾವಿದನಾದವನು ಮತ್ತಷ್ಟು ಪ್ರೌಢವಾಗಿ ಶಾಸ್ತ್ರಸಮನ್ವಯವನ್ನು ಮಾಡುವತ್ತ ಗಮನ ಹರಿಸಬೇಕು.

  1.  ಓದಿ- ಡಾ ಮನೋರಮಾ ಬಿ ಎನ್ ರಚಿತ ಯಕ್ಷಮಾರ್ಗಮುಕುರ ಗ್ರಂಥ
  2.  ನಂದಿಕೇಶ್ವರ ಕೃತಿ. ಡಾ ಮನೋರಮಾ ಬಿ ಎನ್ ರಚಿತ.
  3.  ನಂದಿಕೇಶ್ವರ- ಡಾಮನೋರಮಾ ಅವರು ಬರೆದ ಅಧ್ಯಯನ ಕೃತಿ. ೨೦೧೬. https://www.noopurabhramari.com/want-to-subscribe-noopura-bhramari-and-purchase-the-dance-books/
  4.  ಮ. ಶ್ರೀಧರಮೂರ್ತಿಗಳ ಕನ್ನಡ ಅನುವಾದ.
  5.  ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ವಿವರಗಳಿಗೆ https://www.noopurabhramari.com/yakshamargamukura/

ಪರಾಮರ್ಶನ ಗ್ರಂಥಗಳು

Apparao (Ed.) (1997). Nandikeshwara Abhinayadarpana. Hyderabad: Natyamala Publication.

Coomaraswamy, Ananda. (1917) Mirror of Gestures. https://archive.org/details/cu31924012568535

Manmohan Ghosh (1957). Nandikeshwara Abhinayadarpana. Culcutta :Mukhyopadhyaya https://ia800302.us.archive.org/22/items/abhinayadarpanam029902mbp/abhinayadarpanam029902mbp.pdf

Kunjunni Raja and Radha Burnier. (Tr.) (1976). Sangita Ratnakara of Sarangadeva. Vol 4. Chapter 7. Adyar : The adyar Library and Research centre. https://ia601407.us.archive.org/6/items/Mus-SourceTexts/TxtSkt-sangItaratnAkara-Sarngadeva-v4-EngTrn-KRajaandRadhaB-AdyarLibrary-1976-0063.pdf

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library. https://archive.org/details/SangitaRatnakaraVolume4-chapter7

ಮ. ಶ್ರೀಧರಮೂರ್ತಿ. ೧೯೭೪. ಶ್ರೀ ನಂದಿಕೇಶ್ವರನ ಅಭಿನಯದರ್ಪಣ. ಅಕ್ಷರ ಪ್ರಕಾಶನ.

ಹೆಗಡೆ ಎಂ. ಎ. ೨೦೧೪. ನಂದಿಕೇಶ್ವರನ ಅಭಿನಯ ದರ್ಪಣ ಕನ್ನಡ ಅನುವಾದ ಟಿಪ್ಪಣಿ ಸಹಿತ. ಹೆಗ್ಗೋಡು : ಅಕ್ಷರ ಪ್ರಕಾಶನ.

ಮನೋರಮಾ ಬಿ.ಎನ್. ಶಾಸ್ತ್ರರಂಗ. ಸಂಚಿಕೆ ೪. ನಂದಿಕೇಶ್ವರನ ಭರತಾರ್ಣವ. https://www.noopurabhramari.com/shaastraranga-dakshinatya-episode-4-bharatarnava/ 

 

Leave a Reply

*

code