ಅಂಕಣಗಳು

Subscribe


 

‘ನೃತ್ಯಸಂಶೋಧನ ಸಮ್ಮೇಳನ-ಅದ್ಭುತ ಕಾರ್ಯ’

Posted On: Saturday, April 27th, 2013
1 Star2 Stars3 Stars4 Stars5 Stars (No Ratings Yet)
Loading...

Author: ವಿದುಷಿ ಭಾನುಮತಿ, ಡಾ. ಮಾಲಿನಿ ರವಿಶಂಕರ್, ವಿದುಷಿ ಬಿ.ಕೆ.ವಸಂತಲಕ್ಷ್ಮಿ, ಶ್ರೀ ಗೋವಿಂದ ಕಾರಜೋಳ ಮತ್ತು ಶ್ರೀ ಎಚ್. ಎನ್ ಸುರೇಶ್

ನೃತ್ಯದ ಬಗೆಗಿನ ಅಧ್ಯಯನ-ಸಂಶೋಧನೆ-ಪ್ರಕಟಣೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ನೂಪುರ ಭ್ರಮರಿ (ರಿ.) ಬೆಂಗಳೂರಿನ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಕಳೆದ ವರುಷ ಫೆಬ್ರವರಿ 20ರಂದು, ನೃತ್ಯ ಸಂಶೋಧನೆಯನ್ನು ಕುರಿತ ರಾಷ್ಟ್ರಮಟ್ಟದ ಸಮ್ಮೇಳನವನ್ನು ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಏರ್ಪಡಿಸಿತ್ತು. ಸಮ್ಮೇಳನವನ್ನು ವಿಧಾನಪರಿಷತ್ ಸದಸ್ಯರೂ, ಹಿರಿಯಮುತ್ಸದ್ದಿಗಳೂ ಆದ ಪ್ರೊ.ಪಿ.ವಿ.ಕೃಷ್ಣಭಟ್ ಉದ್ಘಾಟಿಸಿದರೆ ; ಇತಿಹಾಸತಜ್ಞ ಡಾ.ಎಚ್.ಎಸ್.ಗೋಪಾಲರಾವ್ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕದ ಹಿರಿಯ ಸಂಶೋಧಕರೂ, ವಿದ್ವಾಂಸರೂ ಆದ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ವಹಿಸಿದ್ದರು. ನಂತರದಲ್ಲಿ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್ ಅವರ ಆಶಯಭಾಷಣವನ್ನು ಅವರ ಅನುಪಸ್ಥಿತಿಯಲ್ಲಿ ಬಿತ್ತರಿಸಲಾಯಿತು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಮೂಡಿಬಂದ ಸಮ್ಮೇಳನದ ಸಂಜೆಯ ಸಮಾರೋಪ ಸಮಾರಂಭದಲ್ಲಿ ಲೋಕಸಭಾ ಸದಸ್ಯರಾದ ಅನಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಗೋವಿಂದ ಎಂ.ಕಾರಜೋಳ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿ ಕಲೆಯ ಕುರಿತು ಅನೇಕ ಚಿಂತನಾರ್ಹ ವಿಷಯಗಳನ್ನು ತಿಳಿಸಿ ನೂಪುರ ಭ್ರಮರಿ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿ ಸಹಕಾರದ ಭರವಸೆಗಳನ್ನು, ಯಥೋಚಿತ ಮಾರ್ಗದರ್ಶನವನ್ನೂ ನೀಡಿದರು. ಹಿರಿಯ ನೃತ್ಯಗುರುಗಳಾದ ಬಿ.ಕೆ.ವಸಂತಲಕ್ಷ್ಮಿ, ಭಾನುಮತಿ ಮತ್ತು ಡಾ. ಮಾಲಿನಿ ರವಿಶಂಕರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಅನೇಕ ವಿಶೇಷಗಳು ಘಟಿಸಿದ್ದವು. 2012ರಲ್ಲಿ ನೂಪುರ ಭ್ರಮರಿಯು ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಂಘಟಿಸಿದ್ದ ಸಂಶೋಧನ ವಿಚಾರಸಂಕಿರಣದ ಪ್ರಬಂಧ-ವಿಚಾರಸರಣಿಗಳನ್ನು ‘ನೂಪುರಾಗಮ’ ಎಂಬ ನಿಯತಕಾಲಿಕೆಯ ಮೂಲಕ ಅನಾವರಣಗೊಳಿಸಲಾಗಿತ್ತು. ‘ಮಹಾನಟ’ನ ಮುಖಪುಟ ಹೊತ್ತುಬಂದ ಕರ್ನಾಟಕದ ನೃತ್ಯ ಕಲಾವಿದರ ಸಂಶೋಧನ ಸಂಗ್ರಹ ಸಮೀಕ್ಷೆಯುಳ್ಳ ನೂಪುರಭ್ರಮರಿ ವಿಶೇಷ ಸಂಚಿಕೆ ಮತ್ತು ನೂಪುರ ಭ್ರಮರಿಯ ಪರಿಷ್ಕೃತಗೊಂಡ ಅಂತರ್ಜಾಲ ತಾಣವೂ ಲೋಕಾರ್ಪಣಗೊಂಡಿತು. ಪ್ರಬಂಧಮಂಡನ ಸರಣಿಗಳಲ್ಲಿ 10 ಮುಖ್ಯ ಸಂಶೋಧನ ಪ್ರಬಂಧಗಳು ಮಂಡನೆಗೊಂಡು ಸಂವಾದಕ್ಕೆಣೆಯಾದವು.

ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್ ಅವರಿಗೆ ‘ನೂಪುರ ಕಲಾ ಕಲಹಂಸ’ ಎಂಬ ಬಿರುದಿನೊಂದಿಗೆ ನೀಡಲಾಯಿತು. ಬೆಂಗಳೂರಿನ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಗೆ ‘ವಿಮರ್ಶಾ ವಾಙ್ಮಯಿ’ ಎಂಬ ಬಿರುದನ್ನಿತ್ತು ವರ್ಷದ ಶ್ರೇಷ್ಠ ವಿಮರ್ಶಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅದರೊಂದಿಗೆ ರಾಜ್ಯಮಟ್ಟದ ನೃತ್ಯ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ‘ಸುಂದರೀ ಸಂಜೆ’ ಎಂಬ ಅಪೂರ್ವ ಕಲಾಕಾರ್ಯಕ್ರಮದಲ್ಲಿ ನಾಟ್ಯಶಾಸ್ತ್ರವನ್ನಾಧರಿಸಿದ ‘ಚಿತ್ರ ಪೂರ್ವರಂಗ’ ವೆಂಬ ನೃತ್ಯಪ್ರಸ್ತುತಿ ಮತ್ತು ಶತಾವಧಾನಿ ಡಾ. ಆರ್. ಗಣೇಶರ ಸಾಹಿತ್ಯಾಧಾರಿತ ‘ನವರಸಕೃಷ್ಣ’ ಎಂಬ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು.

ಇವೆಲ್ಲದನ್ನು ಮತ್ತೆ ನೆನಪಿಸುವಂತೆ ಸಮ್ಮೇಳನದಲ್ಲಿ ವಿದ್ವಾಂಸರಿಂದ ಮೂಡಿಬಂದ ವಿಚಾರಸರಣಿಗಳನ್ನು ನೂಪುರಭ್ರಮರಿಯ ಈ ಸಂಶೋಧನ ನಿಯತಕಾಲಿಕೆಯಲ್ಲಿ ಪ್ರಕಾಶಗೊಳಿಸಲಾಗಿದೆ. ಈ ಒಟ್ಟು ಸಂಶೋಧನ ಕಾರ್ಯಕ್ರಮದ ಫಲಶ್ರುತಿಗೆ ದುಡಿದ ಎಲ್ಲರಿಗೂ ಅಭಿನಂದನಪುರಸ್ಸರವಾದ ಪ್ರಣಾಮಗಳನ್ನು ಸಲ್ಲಿಸುತ್ತಾ; ಹತ್ತು ಪ್ರಬಂಧಗಳ ಪೈಕಿ ಅಧ್ಯಯನ ಪೂರ್ಣಗೊಂಡ ಎರಡು ಪ್ರಬಂಧಗಳನ್ನು ಪ್ರಾತಿನಿಧಿಕವಾಗಿ ಪ್ರಕಟಿಸಲಾಗಿದೆ. ನಮ್ಮ ಈ ಪ್ರಯತ್ನ ನಿಮ್ಮಿಂದ ಸದುಪಯೋಗವಾಗಲೆಂದೇ ನಮ್ಮ ಆಶಯ. -ಸಂ.

ಸಮ್ಮೇಳನದಲ್ಲಿ ಬಹಳ ವಿಷಯಗಳನ್ನು ಕಲಿತುಕೊಳ್ಳವುದಕ್ಕಾಯಿತು. ಸಂಶೋಧನೆಯ ಆಳಕ್ಕೆ ಹೋಗಿ ಅದನ್ನು ಪ್ರಾಯೋಗಿಕವಾಗಿ ಅನ್ವಯವಾಗುವಂತೆ ಮಾಡುವಲ್ಲಿ ಅಧ್ಯಯನದ ಸಾರ್ಥಕತೆಯಿದೆ. ಇಂತಹ ಪ್ರಯತ್ನಗಳು ಆಗಾಗ್ಗೆ ಮೂಡಿಬರುತ್ತಿರಬೇಕು. ಇನ್ನೂ ಹೆಚ್ಚಿನ ವಿಷಯಗಳು ಸಂಶೋಧನೆಗೆ ಮತ್ತು ಪುನರ್ ನವೀಕರಣಕ್ಕೆ ಒಳಪಡಬೇಕಾಗಿದೆ. ಆ ಮೂಲಕ ಕಲೆ ನಿಂತ ನೀರಾಗದೆ ಉತ್ತಮ ಮಟ್ಟದಲ್ಲಿ ಅದನ್ನು ನೋಡಲು ಅವಕಾಶ ದೊರೆತು ನೃತ್ಯಕ್ಕೆ ಪುನರ್ಜೀವನ ದೊರೆಯುತ್ತದೆ.

– ವಿದುಷಿ ಭಾನುಮತಿ, ಹಿರಿಯ ನೃತ್ಯಗುರುಗಳು, ಬೆಂಗಳೂರು
(ನೃತ್ಯ ಸಂಶೋಧನ ಸಮ್ಮೇಳನದ ಪ್ರಬಂಧ ಮಂಡನೆಯ ನೋಟಕರು)

ಸಮ್ಮೇಳನದ ಒಟ್ಟು ಸ್ವರೂಪ ಕಂಡಾಗ ಇಂತಹ ಒಂದು ಅವಕಾಶ ಹತ್ತು ಹದಿನೈದು ವರ್ಷಗಳ ಹಿಂದೆ ಸಿಗಬಾರದಿತ್ತೇ ಎಂದೆನಿಸಿದ್ದು ಹೌದು. ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಇಂತಹ ಆವರಣ, ವೇದಿಕೆಗಳಿಂದಾಗಿ ಇತಿಮಿತಿಗಳನ್ನು ಅರಿತು ಗುರುತಿಸಿಕೊಳ್ಳಲು ಅವಕಾಶವಾಗುತ್ತದೆ; ಅಧ್ಯಯನ ಹೆಚ್ಚಾಗುತ್ತದೆ. ಆದರೆ ಅಧ್ಯಯನ ಕೇವಲ ಗ್ರಾಂಥಿಕವಾಗಿ ಸೀಮಿತವಾಗದೆ ಅಂತಿಮವಾಗಿ ಸಂಶೋಧನೆಯಿಂದ ದೊರಕುವ ಅಂಶಗಳು ನೃತ್ಯದ ರಂಗಕ್ಕೆ ಕಾಲಿಡಬೇಕು.

ಸಂಶೋಧನವಿಷಯವನ್ನು ರಂಗದ ಮೇಲೆ ತೋರಿಸಬೇಕು ಎನ್ನುವುದೇ ನೃತ್ಯಸಂಶೋಧನಕಾರರ ಉದ್ದೇಶ ಮತ್ತು ಕನಸು. ಕಾರಣ, ಗ್ರಂಥರೂಪದಲ್ಲಿದ್ದರೆ ಅದು ಮುಟ್ಟುವುದು ಐವತ್ತು ಜನರಿಗಿರಬಹುದು. ಆದರೆ ಅದೇ ಸಂಶೋಧನೆ ರಂಗದಲ್ಲಿ ಸಾಫಲ್ಯ ಪಡೆದರೆ ಅದರ ಮೌಲ್ಯ ಹೆಚ್ಚು. ಇದು ಮುನ್ನಡೆಯಬೇಕಾದರೆ ನೂಪುರ ಭ್ರಮರಿ ಮಾಡುತ್ತಿರುವಂತ ಕೆಲಸಗಳು ಪ್ರತಿ ವರುಷವೂ ನಡೆದು ನೃತ್ಯದ ಸಂಶೋಧನೆ, ಅಧ್ಯಯನ ಪುನರುಜ್ಜೀವನಗೊಳ್ಳಬೇಕು, ಆಗ ನಮ್ಮನ್ನು ನಾವು ಕಂಡುಕೊಳ್ಳಲು ಅವಕಾಶ ಲಭ್ಯವಾಗುತ್ತದೆ. ನೃತ್ಯವನ್ನು ಮಾಡಿ ಕೈಬಿಡುವ ಬದಲು ವಿದ್ಯಾರ್ಥಿಗಳು ಆಳವಾದ ಅರಿವಿನತ್ತ ತೊಡಗಿಸಿಕೊಳ್ಳಲು ಅನುವು ಆಗುತ್ತದೆ.

– ಡಾ. ಮಾಲಿನಿ ರವಿಶಂಕರ್, ನೃತ್ಯಸಂಶೋಧಕರು, ಬೆಂಗಳೂರು

ನಮ್ಮ ಕಾಲಕ್ಕೆ ಸಂಶೋಧನೆ ಎನ್ನುವುದು ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಅದರಿಂದ ಏನು ಪ್ರಯೋಜನ ಎನ್ನುವುದು ಆಗ ಎಲ್ಲರ ಪ್ರಶ್ನೆ. ಆದರೆ ವಿಶ್ವವಿದ್ಯಾನಿಲಯದ ಮೆಟ್ಟಿಲು ಹತ್ತಿದ ನಂತರ ಅದರ ಬೆಲೆ ತಿಳಿಯಿತು. ಸಂಶೋಧನೆಯೆನ್ನುವುದು ಪ್ರಯೋಗದಲ್ಲಿ ಹೊರಬಂದಾಗ ಅದರ ಫಲ ಹೆಚ್ಚು ಮತ್ತು ಜನರಿಗೆ ಬೇಗ ಮುಟ್ಟುತ್ತದೆ; ಅರ್ಥವೂ ಆಗುತ್ತದೆ. ಸಂಶೋಧನೆಯೆನ್ನುವುದನ್ನು ಎಲ್ಲರೂ ಮಾಡಲಿಕ್ಕಾಗದೇ ಇರಬಹುದು. ಆದರೆ ಇಂತಹ ಸಮ್ಮೇಳನಗಳ ಪ್ರಯೋಜನವನ್ನು ಗುರು/ಶಿಕ್ಷಕರು ಪಡೆದುಕೊಂಡರೆ ಕಲೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುವುದರೊಂದಿಗೆ ಪಾಠ ಮಾಡುವ ಕ್ರಮದಲ್ಲಿ ಸುಧಾರಣೆಗಳನ್ನು ತಂದುಕೊಳ್ಳಬಹುದು.

 -ವಿದುಷಿ ಬಿ.ಕೆ.ವಸಂತಲಕ್ಷ್ಮಿ, ಹಿರಿಯನೃತ್ಯಗುರುಗಳು, ಬೆಂಗಳೂರು

(ನೃತ್ಯ ಸಂಶೋಧನ ಸಮ್ಮೇಳನದ ಪ್ರಬಂಧ ಮಂಡನೆಯ ನೋಟಕರು)

‘ನೃತ್ಯ ಮತ್ತು ಸಂಗೀತಭಾಷೆಗೆ ಭೌಗೋಳಿಕ ಮಿತಿಯಿಲ್ಲ. ಕಾರ್ಯವ್ಯಾಪ್ತಿ ವಿಸ್ತಾರವಾಗಿದೆ. ನೂಪುರ ಭ್ರಮರಿಯು ಮಹಾವಿದ್ಯಾಲಯದಂತೆ ಕೆಲಸ ಮಾಡುತ್ತಿರುವುದು ಸಂತೋಷಕರ ಸಂಗತಿ. ಸಂಗೀತ-ನೃತ್ಯ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಹಕಾರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾಧಕರಿಗೆ, ಸಂಸ್ಕೃತಿಯ ವಾರಿಸುದಾರರದ ಕಲಾವಿದರಿಗೆ ಸರ್ಕಾರ ಅನೇಕ ಕಾರ್ಯಕ್ರಮ ಘೋಷಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಪರಿಚಯಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ, ಮಾಡಬೇಕು.’

– ಶ್ರೀ ಗೋವಿಂದ ಕಾರಜೋಳ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು (ನಿಕಟಪೂರ್ವ), ಬೆಂಗಳೂರು
(ನೃತ್ಯ ಸಂಶೋಧನ ಸಮ್ಮೇಳನದ ಸಮಾರೋಪ ಸಂಜೆಯ ಅಭ್ಯಾಗತರು)

‘ನೃತ್ಯಸಂಶೋಧನ ಸಮ್ಮೇಳನ-ಅದ್ಭುತ ಕಾರ್ಯ. ರಾಷ್ಟ್ರೀಯ ವiಟ್ಟದಲ್ಲಿ ನೃತ್ಯಸಂಶೋಧನೆಯ ಸಮ್ಮೇಳನ ಮಾಡುವುದು ಸುಲಭದ ಕೆಲಸವಲ್ಲ. ಸಂಶೋಧನೆಯ ಸಮ್ಮೇಳನಕ್ಕೆ ಹೆಚ್ಚಿನ ಜನರು ಬರುವುದಿಲ್ಲ. ಕಾರಣ, ಮನರಂಜನೆಯ ಅಂಶಗಳು ಸಹಜವಾಗಿ ಕಡಿಮೆ ಇರುತ್ತವೆ. ಆದರೆ ಇಂತಹ ಕಾರ್ಯಕ್ರಮಗಳಲ್ಲಿ ಬರುವ ಜನರ ಬಗ್ಗೆ ಜಾಸ್ತಿ ಯೋಚನೆ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಏಕೆಂದರೆ, ಬಂದಿರುವ ಎಲ್ಲಾ ಸಹೃದಯರೆಲ್ಲರೂ ಆಸಕ್ತರೇ ಆಗಿದ್ದು ಸೂಕ್ತವಾಗಿ ವಿಷಯಗ್ರಹಣ ಮಾಡುವವರೇ ಆಗಿರುವುದು ಸಂತಸದ ಸಂಗತಿ.’

– ಶ್ರೀ ಎಚ್.ಎನ್.ಸುರೇಶ್, ನಿರ್ದೇಶಕರು, ಭಾರತೀಯ ವಿದ್ಯಾಭವನ, ಬೆಂಗಳೂರು
(ನೃತ್ಯ ಸಂಶೋಧನ ಸಮ್ಮೇಳನದ ಸಮಾರೋಪ ಸಂಜೆಯ ಅಧ್ಯಕ್ಷರು)

Leave a Reply

*

code