ಅಂಕಣಗಳು

Subscribe


 

ಅಸಂಯುತ ಹಸ್ತಗಳು

Posted On: Wednesday, November 5th, 2008
1 Star2 Stars3 Stars4 Stars5 Stars (1 votes, average: 3.00 out of 5)
Loading...

Author: ಮನೋರಮಾ. ಬಿ.ಎನ್

ಅಸಂಯುತ ಹಸ್ತವೆಂದರೆ ಒಂದೇ ಕೈಲಿ ತೋರಿಸುವ ಮುದ್ರೆ ಎಂದರ್ಥ. ಇದರಲ್ಲಿ ಮೊತ್ತ ಮೊದಲನೆಯದಾಗಿ ಹೆಸರಿಸಲಾದ ಹಸ್ತ ಪತಾಕ. ಭರತನ ನಾಟ್ಯಶಾಸ್ತ್ರದಲ್ಲಿ ಮತ್ತು ನಂದಿಕೇಶ್ವರನ ಅಭಿನಯ ದರ್ಪಣದಲ್ಲಿ ಹೇಳಲಾದ ಅಸಂಯುತ ಹಸ್ತಗಳ ಬಳಕೆಯಲ್ಲಿ ವಿಭಿನ್ನತೆಗಳಿವೆ. ಅಭಿನಯ ದರ್ಪಣದಲ್ಲಿ ಹೆಬ್ಬೆರಳು ಮಡಿಚಿದರೆ, ನಾಟ್ಯಶಾಸ್ತ್ರವು ಹೆಬ್ಬೆರಳು ನೇರವಾಗಿರಿಸಲು ಸೂಚಿಸುತ್ತದೆ. ನಾಟ್ಯಶಾಸ್ತ್ರವು ೨೪ ಅಸಂಯುತ ಹಸ್ತಗಳನ್ನು ಪ್ರಸ್ತಾಪಿಸಿದರೆ, ಅಭಿನಯದರ್ಪಣ ೨೮ ಹಸ್ತಗಳನ್ನು ವಿವರಿಸುತ್ತದೆ. ಆದರೆ ಬಹುಪಾಲು ಅಭಿನಯ ದರ್ಪಣದ ಬಳಕೆಯೇ ಹೆಚ್ಚು.

ಪತಾಕ :

ಲಕ್ಷಣ:– ತೋರುಬೆರಳಾದಿಯಾಗಿ ನಾಲ್ಕುಬೆರಳನ್ನು ನೇರವಾಗಿರಿಸಿ ಹೆಬ್ಬೆರಳನ್ನು ಮಡಿಸಿ ಹಿಡಿದರೆ ಆ ಹಸ್ತವು ಪತಾಕವೆನಿಸುತ್ತದೆ. ಇದೊಂದು ಪುರುಷ ಹಸ್ತ.

ಅಭಿನಯದರ್ಪಣದ ವಿನಿಯೋಗ:– ನಾಟ್ಯದ ಆರಂಭಕ್ಕೆ ನಿಲ್ಲುವ ಕ್ರಮ, ಮೋಡಗಳು, ಕಾಡು, ವಸ್ತುಗಳನ್ನು ನಿಷೇಧಿಸುವುದು, ಕುಚಸ್ಥಲ(ಎದೆ), ರಾತ್ರಿ, ನದಿ, ದೇವಸಮೂಹ, ಕುದುರೆ, ಖಂಡನೆ (ತುಂಡರಿಸುವುದು) ವಾಯು (ಗಾಳಿ), ಶಯನ (ಮಲಗುವುದು), ಹೋಗುವುದು, ಪ್ರತಾಪ, ಮನೆ, ಬೆಳದಿಂಗಳು, ಬಿಸಿಲಿನ ತಾಪಕ್ಕೆ ಕಷ್ಟಪಡುವುದು, ಬಾಗಿಲು ಹಾಕುವುದು-ತೆರೆಯುವುದು, ಸಪ್ತವಿಭಕ್ತಿಯ ಅರ್ಥ ಸೂಚಿಸುವುದು, ಅಲೆಗಳು, ಬೀದಿ ಪ್ರವೇಶಿಸುವುದು, ಸಮಭಾವ, ಸುಗಂಧ ದ್ರವ್ಯಗಳನ್ನು ಪೂಸುವುದು, ತನ್ನನ್ನು ಸೂಚಿಸುವುದು, ಶಪಥ ಮಾಡುವುದು, ಮೌನ ಅಥವಾ ಸುಮ್ಮನಿರು ಎಂಬರ್ಥದಲ್ಲಿ, ಆಶೀರ್ವಾದ, ತಾಳೆಗರಿ ತೋರಿಸುವುದು, ಗುರಾಣಿ ಹಿಡಿಯುವುದು, ಪದಾರ್ಥಗಳನ್ನು ಮುಟ್ಟುವುದು, ರಾಜಶ್ರೇಷ್ಟ, ಅಲ್ಲಿ ಅಲ್ಲಿ ಎಂದು ಹೇಳುವುದು, ಸಮುದ್ರ, ಒಳ್ಳೆಯ ಕೆಲಸ (ಸುಕೃತ), ಉದ್ದೇಶಿಸುವುದು, ಮುಂದೆ ಹೋಗುವುದು, ಖಡ್ಗವನ್ನು ಧಾರಣೆ ಮಾಡುವುದು, ತಿಂಗಳು, ವರ್ಷ, ಮಳೆಯದಿನ, ಗುಡಿಸುವುದು.

ಇತರೆ (ನಾಟ್ಯಶಾಸ್ತ್ರ, ಲಾಸ್ಯರಂಜನ, ಸಾರಸಂಗ್ರಹ) ವಿನಿಯೋಗ:– ಜಯಜಯವೆಂಬ ಮಾತು, ಅಡ್ಡಗಟ್ಟುವುದು, ಪರಿಶುದ್ಧ ವಸ್ತು, ದೇವಾಗಾರ, ಪ್ರಾತಃಕಾಲ, ರಾಜ ವಿಜ್ಞಾಪನೆ, ವಾಹನಪ್ರಯಾಣ, ಸಾಗರ, ನದಿ, ದೇವತಾನುಗ್ರಹ, ನೀರು, ಭಯನಿವಾರಣೆ, ಪಾದಸೇವೆ, ಆರತಿ ಎತ್ತುವುದು, ಪಕ್ಷಿಗಳರೆಕ್ಕೆ, ಧ್ವಜ, ನೀರು, ಆಲಿಂಗನ, ಓಡಿ ಹೋಗುವುದು, ಪಟ್ಟದಕತ್ತಿ, ಮರ್ದನ, ಮಾರ್ಜನೆ, ಎತ್ತರ, ನಗಾರಿ ಹೊಡೆ, ಕಲ್ಲು ಮೊದಲಾದ ತೂಕದ ಪದಾರ್ಥಗಳನ್ನು ಧರಿಸುವುದು, ಚೆಂಡು ಮೊದಲಾದವನ್ನು ಮೇಲಕ್ಕೆಸೆಯುವುದು, ಹಾಲು, ಅಹಂಕಾರ, ಉತ್ತರಾಯಣ, ಪ್ರಹಾರ, ಸಂತೋಷ-ಹೆಮ್ಮೆಯನ್ನೂ ಸೂಚಿಸುವುದು, ಯಾವುದೋ ಕೆಳಗೆ ಬೀಳುವುದು, ಯಾವುದನ್ನೋ ಬಿಚ್ಚುವುದು, ಬಚ್ಚಿಡುವುದು. ಕಥಕ್ಕಳಿಯಲ್ಲಿ ಪತಾಕವನ್ನು ತ್ರಿಪತಾಕ ಹಸ್ತ ಎನ್ನುತ್ತಾರೆ.

ಯಕ್ಷಗಾನದಲ್ಲಿ ಕನ್ನಡಿ, ಮಂಚ, ಸೈನಿಕರು, ಸಭೆಯನ್ನು ಸೂಚಿಸುವುದು ಹೀಗೆ ಪತಾಕ ಮತ್ತಷ್ಟು ಅರ್ಥಗಳನ್ನು ಕೊಡುತ್ತದೆ. ಪತಾಕವು ನೃತ್ತಹಸ್ತದ(ನರ್ತನ ಸಂದರ್ಭದಲ್ಲಿ ಬಳಸಲಾಗುವ ಹಸ್ತಗಳು) ಭಾಗವೂ ಆಗಿದೆ. ಇದು ಬೇರೆಬೇರೆ ನಿರೂಪಣೆಗಳು, ವಿವಿಧ ದೇವತಾ ರೂಪ ನಿದರ್ಶನದಲ್ಲೂ ಪ್ರಕಟಗೊಳ್ಳುತ್ತದೆ. ಹಾಗೆಯೇ ಕೆದರಿದ ಗರಿಯನ್ನು, ವಿದಾಯದ ಸಂದರ್ಭಗಳಲ್ಲಿ ಟಾಟಾ ಮಾಡುವುದು, ತರುವುದು, ತೆಗೆದುಕೊಂಡು ಹೋಗುವುದು, ಬಾ ಎಂದು ಹೇಳುವುದು, ಬೇಡ ಎನ್ನಲು, ನಿರ್ಲಕ್ಷ್ಯ ಭಾವನೆಗೆ, ಹೋಗು ಎನ್ನಲು, ಹಿಂದಕ್ಕೆ ತಳ್ಳುವುದು, ಕತ್ತಿಯ ಚಲನೆಯ ಭಾವ, ದೋಣಿಯ ಹುಟ್ಟು ಹಾಕುವಾಗ ನೀರನ್ನು ಸೀಳುವ ಭಾವ ಮುಂತಾಗಿ ಉಪಯೋಗಿಸಲ್ಪಡುತ್ತದೆ.

ಕುಂಚಿತ ಪತಾಕವೆಂದು ಉಪಯೋಗಿಸಲಾಗುವ ಪತಾಕದ ಮತ್ತೊಂದು ಪ್ರಬೇಧದಲ್ಲಿ ಅಂಗೈ ಮಧ್ಯ ಭಾಗವನ್ನು ಕುಗ್ಗಿಸಿ ಎಲ್ಲಾ ಬೆರಳುಗಳನ್ನು ಸ್ವಲ್ಪ ಬಗ್ಗಿಸಲಾಗುತ್ತದೆ. ಇದನ್ನು ಸ್ತ್ರೀ, ಸಖಿ, ಚಿಕ್ಕದಾದದ್ದು, ಬಾ ಎಂದು ಕರೆಯಲು, ತೀಡಲು, ನೀನೇ ಎಂದು ತೋರಿಸಲು, ಸ್ವಲ್ಪ ಎನ್ನಲು, ಇಷ್ಟೇಯೇ ಎಂಬ ಭಾವನೆಗೆ, ಅಲ್ಲೇಲ್ಲೋ ದೂರಕ್ಕೆ ಎಂದು ತೋರಿಸುವಾಗ ಇತ್ಯಾದಿಯಾಗಿ ಬಳಕೆಯಾಗುತ್ತದೆ.

ಈ ಎಲ್ಲಾ ವಿನಿಯೋಗಗಳೂ ಕೈಗಳನ್ನು ವಿವಿಧ ಕಡೆಗೆ ಇಟ್ಟಾಗ ನಿರ್ದಿಷ್ಟಾರ್ಥವಾಗಿ ಅಭಿವ್ಯಕ್ತಗೊಳ್ಳುತ್ತದೆ. ಒಂದೇ ಹಸ್ತವನ್ನು ಬೇರೆ ಬೇರೆ ಸ್ಥಾನಗಳಲ್ಲಿಟ್ಟು ಅದರ ನಿಲುವಿನ ಅಂಶವನ್ನು ವಿವಿಧ ದೃಷ್ಟಿಕೋನಗಳಿಂದ ನೋಡಬಹುದು. ಅದರ ಭಾವನೆಯನ್ನು ಉಪಯೋಗಿಸಿಕೊಳ್ಳುವಾಗ ಅದರ ವ್ಯಾಪ್ತಿಯೂ ವಿಶಾಲವಾಗಿರುತ್ತದೆ.

ಸಂಕರ ಹಸ್ತವಾಗಿ ಪತಾಕ:

ವಿ. ಎಸ್. ಕೌಶಿಕ್‌ರ ಭರತನಾಟ್ಯ ದಿಗ್ಧರ್ಶನ ತಿಳಿಸಿಕೊಡುವಂತೆ ಪತಾಕ ಹಸ್ತವನ್ನು ಚಲಿಸದೆ ಸಮೀಪದಲ್ಲಿ ಹಿಡಿಯುವುದರಿಂದ ಅದು ಎಂದು ತೋರಿಸುವ ಭಾವನೆಯಲ್ಲಿಯೂ, ಜ್ಯೋತಿಶ್ಯಾಸ್ತ್ರ ವಿಚಾರದಲ್ಲಿಯೂ, ಉಚಿತಾರ್ಥದಲ್ಲಿಯೂ ವಿನಿಯೋಗಿಸಬಹುದು.

ಎರಡು ಪತಾಕ ಹಸ್ತಗಳನ್ನು ಸೊಂಟಪ್ರದೇಶದಿಂದ ಎರಡು ತೊಡೆಗಳ ಮಧ್ಯದಲ್ಲಿ ಹಿಡಿದರೆ ಎಲೆಗಳ ವಸ್ತ್ರ ಆಥವಾ ನವಿಲುಗರಿಗಳ ವಸ್ತ್ರಯೆಂಬ ಅರ್ಥದಲ್ಲಿಯೂ ಉಪಯೋಗಿಸಬಹುದು. ಎರಡು ಪತಾಕಹಸ್ತಗಳನ್ನು ಸೊಂಟದಲ್ಲಿ ಅನ್ಯೋನ್ಯಭಿಮುಖವಾಗಿ ಹಿಡಿದರೆ ಯೋಗವಟ್ಟಿಗೆ, ನಾರುಬಟ್ಟೆಯನ್ನು ತೋರಿಸುವ ಅರ್ಥದಲ್ಲಿಯೂ ವಿನಿಯೋಗಿಸಬಹುದು.

ಪತಾಕಹಸ್ತದಲ್ಲಿ ಕಿರುಬೆರಳಿನ ಮೂಲದಲ್ಲಿ ಹೆಬ್ಬೆರಳ ತುದಿಯನ್ನಿಟ್ಟರೆ ಪತಾಕಚತುರ ಹಸ್ತವೆನಿಸುತ್ತದೆ. ಈ ಹಸ್ತವನ್ನು ಮುಖದ ಸಮೀಪದಲ್ಲಿ ಹಿಡಿದರೆ ಬಿಳಿಯಬಣ್ಣವೆಂದೂ, ಸಾರು, ತೊವ್ವೆ ಮುಂತಾದ ವ್ಯಂಜನ ಪದಾರ್ಥವೆಂದೂ ವಿನಿಯೋಗಿಸಬಹುದು. ಪತಾಕ ಹಸ್ತವನ್ನು ಅಡ್ಡಲಾಗಿ ಹಿಡಿದರೆ ಪೀತವರ್ಣ ಎಂಬ ಅರ್ಥದಲ್ಲಿ, ಪತಾಕಹಸ್ತದಿಂದ ತೊಡೆಯ ಪ್ರದೇಶವನ್ನು ತೋರಿಸಿದರೆ ವೈಶ್ಯವರ್ಣವೆಂದೂ, ಭುಜಪ್ರದೇಶವನ್ನು ಪತಾಕದ ಅಗ್ರಭಾಗದಿಂದ ತೋರಿಸಿದರೆ ಕ್ಷತ್ರಿಯ, ಭುಜ, ವಿಜಯ, ಬತ್ತಳಿಕೆ, ಹಿಂಭಾಗದಲ್ಲಿರುವ ಪುರುಷನೆಂದೂ – ಈ ಅರ್ಥಗಳಲ್ಲಿ ವಿನಿಯೋಗಿಸಬಹುದು.

ನಾನಾರ್ಥ ಹಸ್ತವಾಗಿ ಪ್ರತಾಕ:

ಎರಡು ಪತಾಕ ಚತುರ ಹಸ್ತಗಳನ್ನು ಪರಸ್ಪರ ಅಭಿಮುಖವಾಗಿ ಹಿಡಿದರೆ ವಾನಪ್ರಸ್ಥಾಶ್ರಮ, ಪುರೋಭಾಗದಲ್ಲಿ ತಿರುಗಿಸಿದರೆ ದೇವತೆಗಳಿಗೆ ನೀರಾಜನ, ಊರ್ಧ್ವಮುಖಗಳನ್ನಾಗಿ ಮಾಡಿ ತುದಿಗಳನ್ನು ಸೇರಿಸಿದರೆ ಪರ್ಣಶಾಲೆ ಈ ಅರ್ಥಗಳಲ್ಲಿ ವಿನಿಯೋಗವಾಗುತ್ತದೆ.

ಎರಡು ಪತಾಕ ಹಸ್ತಗಳನ್ನು ತೊಡೆಗಳ ಸಮೀಪದಲ್ಲಿ ಹಿಡಿದರೆ ಮದ್ದಳೆ ಎಂದೂ, ಚಾಲಿಸಿದರೆ ಮದ್ದಳೆ ಬಾರಿಸುವುದೆಂದೂ, ಕೆನ್ನೆಗಳ ಹತ್ತಿರ ಹಿಡಿದರೆ ಕೆನ್ನೆಯೆಂದೂ, ಅಲ್ಲಿಯೇ ಚಾಲಿಸಿದರೆ ಕೆನ್ನೆಗೆ ಹೊಡೆಯುವುದೆಂದು ಸೂಚಿಸಲು ವಿನಿಯೋಗಿಸಬಹುದು.

ಪತಾಕಹಸ್ತವನ್ನು ಪುರೋಭಾಗದಲ್ಲಿ ಚಾಚಿದರೆ ಪ್ರಯಾಣ ಅಥವಾ ಜಾಗ ಬಿಡುವುದು ಅಥವಾ ಹೊರಡುವುದು ಎಂಬ ಅರ್ಥವಾಗುವುದು.

ಪತಾಕವನ್ನು ಕೆಳಗಡೆ ಹಿಡಿದರೆ ವರ್ತಮಾನಕಾಲವೆಂದೂ, ಪುರೋಭಾಗದಲ್ಲಿ ಡೋಲಾಕಾರವಾಗಿ ಚಾಲಿಸಿದರೆ ಭವಿಷ್ಯತ್ಕಾಲವೆಂದೂ, ಹಿಂಭಾಗದಲ್ಲಿ ಚಾಚಿ ಹಿಡಿದರೆ ಭೂತಕಾಲವೆಂದೂ ಅರ್ಥವಾಗುತ್ತದೆ.

ಇತರೆ ವಿನಿಯೋಗಗಳು

ವರ್ಷ‌ಋತು:- ಪಾರ್ಶ್ವಗಳಲ್ಲಿ ಪತಾಕಗಳನ್ನು ಹಿಡಿದು ಕಂಪಿಸುವುದು.

ದೈವತ ಸಂಗೀತ ಸ್ವರ :- ಪತಾಕವನ್ನು ಸಕಂಪಿತವಾಗಿ ಶರದಂತೆ ಎಳೆಯುವುದು.

ಚಂದ್ರಭಾಗಾನದಿ:- ಪತಾಕ ಹಸ್ತವನ್ನು ಚಲಿಸುವುದು.

ಸುರ (ಅಮೃತಸಾಗರ) :- ಸಂಕೀರ್ಣ ಮತ್ತು ಪತಾಕ ಹಸ್ತಗಳನ್ನು ಮೇಲಕ್ಕೆ ಎತ್ತಿ ಕೆಳಗಿಳಿಸುವುದು.

ಭೂ, ಭುವರ, ಸ್ವರ್ಗ, ಜನ, ತಪ, ಸತ್ಯ, ಮಹರ- ಇವಿಷ್ಟೂ ಸಪ್ತ ಭೂಮಿಗಳನ್ನು ಪ್ರಕಟಿಸಲು ಪತಾಕ ಹಸ್ತವನ್ನು ಮೇಲಕ್ಕೆ ತಿರುಗಿಸಿ ವಿನಿಯೋಗಿಸುವುದು.

ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಲ, ಪಾತಾಳ ಇವಿಷ್ಟೂ ಪಾತಾಳಲೋಕವನ್ನು ಪ್ರಕಟಿಸಲು ಪತಾಕ ಹಸ್ತವನ್ನು ಕೆಳಗೆ ತಿರುಗಿಸಿ ವಿನಿಯೋಗಿಸುವುದು.

ಕೇತಕೀವೃಕ್ಷ, ದಿಲೀಪ ಚಕ್ರವರ್ತಿ, ಚಂದ್ರ, ಕುಜ, ಕೇತು ಗ್ರಹಗಳನ್ನು ಪ್ರಕಟಿಸುವಾಗ ಪತಾಕಹಸ್ತದ ಬಳಕೆಯಾಗುತ್ತದೆ. ಮೊಸಳೆಯನ್ನು ತೋರಿಸಲು ಪತಾಕ ಹಸ್ತವನ್ನು ಹಿಂಬದಿಯಾಗಿ ಜೋಡಿಸಿ ಹಿಡಿದು, ಮೊಸಳೆಯ ಬಾಯಿಯಂತೆ ತೆಗೆದು, ಮುಚ್ಚುವುದನ್ನು ತೋರಿಸುವಲ್ಲಿ ಬಳಕೆಯಾಗುತ್ತದೆ.

ಪೂರ್ವಾಭದ್ರ ನಕ್ಷತ್ರವನ್ನು ತಿಳಿಸಲು ಸಂಕೀರ್ಣ ಪತಾಕದ ಬಳಕೆಯಾಗುತ್ತದೆ (ಸಂಕೀರ್ಣ ಪತಾಕ ಅಂದರೆ ಪತಾಕದಿಂದ ಮಧ್ಯದ ಬೆರಳನ್ನು ಅಂಗೈಯೊಳಗೆ ತರುವುದು). ನಕ್ಷತ್ರವನ್ನು ತಿಳಿಸಲು ಪತಾಕ ಹಸ್ತವನ್ನು ಹಿಡಿದು ಪದೇ ಪದೇ ಅಲ್ಲಾಡಿಸುವುದರಿಂದ ಸಾಧ್ಯ.

Leave a Reply

*

code