ಅಂಕಣಗಳು

Subscribe


 

ಕಲಾರಂಗದ ಕಥನದ ಕೃತಿ : ಯಕ್ಷೋಪಾಸನೆ

Posted On: Monday, December 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಯಕ್ಷೋಪಾಸನೆ- ಸೂರಿಕುಮೇರಿ ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ

ನಿರೂಪಣೆ : ಡಾ ! ಎಂ. ಪ್ರಭಾಕರ ಶಿಶಿಲ

ಪ್ರಕಾಶನ : ಡಾ | ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ

ಮುದ್ರಣ : ಮಂಜುಶ್ರೀ ಪ್ರಿಂಟರ್ಸ್, ಉಜಿರೆ

ಬೆಲೆ : ೨೦೦ ರೂಗಳು

ಆತ್ಮವೃತ್ತಾಂತಗಳು ಯಾವುದೇ ವ್ಯಕ್ತಿಯ ಸಮಗ್ರ ಸಾಹಿತ್ಯ, ಶೋಧನೆ, ಕೃಷಿಯನ್ನು ನಿರೂಪಿಸುವಂತದ್ದು. ಆದರೆ ಇತ್ತೀಚೆಗೆ ಕಲಾವಿದರ ಕೃತಿಗಳು, ಕಥನಗಳು ಅಪರೂಪವಾಗುತ್ತಿರುವ ವೇಳೆ, ಇತ್ತೀಚೆಗಷ್ಟೇ ಅನಾವರಣಗೊಂಡ ಯಕ್ಷೋಪಾಸನೆ ರಂಗದ, ಕಲಾವಿದನ ಸಾಧ್ಯತೆಗಳನ್ನು, ಇತಿಮಿತಿಗಳನ್ನು ಆದ್ಯಂತವಾಗಿ ವಿವರಿಸುತ್ತದೆ. ತೆಂಕುತಿಟ್ಟಿನ ಮೇರು ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ಟರ ಆತ್ಮಕಥನ ಈ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ. ಹಾಗಾಗಿ ಓದುಗರು ಓದಲೇಬೇಕಾದ ಪುಸ್ತಕಗಳ ಪೈಕಿ ಯಕ್ಷೋಪಾಸನೆಯೂ ಒಂದು. ಮಾತ್ರವಲ್ಲ ; ಕಲಾರಂಗದಲ್ಲಿನ ಓದಿಗಾಗಿ, ಕಲೆಯೊಂದರ ಅನುಭವಕ್ಕಾಗಿ ಇದು ಒಳ್ಳೆಯ ಕೊಡುಗೆ. ಈ ನಿಟ್ಟಿನಲ್ಲಿ ಯಕ್ಷಗಾನದ ಒಳನೋಟಗಳನ್ನು ಕಟ್ಟಿಕೊಡುವುದರೊಂದಿಗೆ, ಕಲಾವಿದನ ಅಂತರಂಗದ ಅಭಿವ್ಯಕ್ತಿಗೆ ಗೌರವವನ್ನಿತ್ತಿದ್ದಾರೆ ಪ್ರಕಾಶಕರು. ಡಾ| ಎಂ. ಪ್ರಭಾಕರ ಜೋಷಿ ಅವರ ಬೆನ್ನುಡಿ, ಟಿ. ಶ್ಯಾಮ ಭಟ್ಟರ ಬೆನ್ನುಡಿಯೊಂದಿಗೆ ಮೇರು ಕಲಾವಿದರೊಬ್ಬರ ಅಂತರಂಗ, ಕಷ್ಟ-ನಷ್ಟಗಳು, ಹಿರಿಮೆ-ಗರಿಮೆಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ ಡಾ| ಬಿ. ಪ್ರಭಾಕರ ಶಿಶಿಲ ಅವರು. ಜೊತೆಗೆ ಸೊಗಸಾದ ಛಾಯಾಚಿತ್ರಗಳು. ಹೃದಯ ಸಂವಾದ, ಒಂದಷ್ಟು ಪೂರಕ ಮಾಹಿತಿಗಳು… ಪುಸ್ತಕ ಪರಿಚಯ ಇಲ್ಲಿದೆ.. ನೀವೊಮ್ಮೆ ಓದುವುದಷ್ಟೇ ಬಾಕಿ ಉಳಿದಿದೆ.

ಒಂದಷ್ಟು ಹೆಸರಿಸಲೇ ಬೇಕಾದ ಆಯ್ದ ತುಣುಕುಗಳು ನಿಮ್ಮ ಓದಿಗೆ..,

ಪಾತ್ರ ಯಾವುದೇ ಇರಲಿ ತಕರಾರಿಲ್ಲದೇ ಕಲಾವಿದ ಒಪ್ಪಿಕೊಂಡರೆ ಬೆಳೆಯುತ್ತಾನೆ ಮತ್ತು ಪ್ರಯೋಗ ಯಶಸ್ವಿಯಾಗುತ್ತದೆ. ನಮ್ಮನ್ನು ನಾವು ಒಂದೆರಡು ಪಾತ್ರಗಳಿಗೆ ಮಾತ್ರ ಮಿತಿಗೊಳಿಸಿಕೊಂಡರೆ ಕಲಾ ಮಾಧ್ಯಮ ಸೊರಗುತ್ತದೆ. ಇಡೀ ತಂಡವಾಗಿ ದುಡಿದರೆ ಎಂತಹ ಪ್ರಸಂಗವನ್ನಾದರೂ ಯಶಸ್ವಿಗೊಳಿಸಬಹುದು. ( ಪುಟ ೧೩೩)

ಕ್ಷಣಿಕ ಜನಪ್ರಿಯತೆಗೆ ವೇಷಧಾರಿಗಳು ಮಾರುಹೋದರೆ ಕಲಾವಿದ ರೂಪುಗೊಳ್ಳಲು ಸಾಧ್ಯವಿಲ್ಲ.

ಕಲಾ ಪ್ರಕಾರವೊಂದು ಶಿಥಿಲವಾಗುವುದು ಕಲಾ ಇತಿಹಾಸದಲ್ಲಿ ತೀರಾ ಸಮಾನ್ಯವಾದ ಸಂಗತಿ.

ಪೌರಾಣಿಕ ಪಾತ್ರಗಳ ಒಳಹೊಕ್ಕು ಚಿಕಿತ್ಸಕ ದೃಷ್ಟಿಕೋನದಿಂದ ಪಾತ್ರಾಭಿವ್ಯಕ್ತಿ ಮಾಡುವವರ ಅಗತ್ಯವಿದೆ. ( ಪುಟ ೧೩೫)

ರಂಗದ ಕಡೆಗೆ ಪ್ರತಿಯೊಬ್ಬನೂ ಲಕ್ಷ್ಯವಿಟ್ಟಿರಬೇಕು. ಸಭಾಸದರ ಬಗ್ಗೆ ಯಾವತ್ತೂ ಅಲಕ್ಷ್ಯ ಸಲ್ಲದು. ರಂಗಸ್ಥಳದಲ್ಲಿ ಹೇಳುವ ನೈತಿಕ, ಧಾರ್ಮಿಕ ವಿಚಾರಗಳನ್ನು ಸಾಧ್ಯವಾದಷ್ಟು ಜೀವನದಲ್ಲಿಯೂ ಅಳವಡಿಸಲು ಪ್ರಯತ್ನಿಸಬೇಕು. (ಪುಟ ೧೪೬ )

ಒಂದು ಕಲೆ ಇನ್ನೊಂದರಿಂದ ಪ್ರಭಾವಿತವಾಗಿ ಬೆಳವಣಿಗೆ ಹೋಂದುವುದು ತೀರಾ ಸಹಜವಾದ ವಿದ್ಯಮಾನ. ಯಾವುದರ ಮೂಲ ಯಾವುದು? ಎಂಬ ಜಿಜ್ಞಾಸೆ ಬೀಜ-ವೃಕ್ಷ ನ್ಯಾಯದಷ್ಟೇ ಜಟಿಲವಾದುದು. ( ಪುಟ ೧೬೩)

ಕಲೆಗೆ ಒಂದು ಸಾಮಾಜಿಕ ಬದ್ಧತೆಯಿರಬೇಕು. ಆಗ ಮಾತ್ರ ಕಲೆಗೆ ಬೆಲೆ ಬರುತ್ತದೆ. ( ಪುಟ ೧೬೭)

ರಂಗದಲ್ಲಿ ಸಕ್ರಿಯನಾಗಿರುವ ವೇಷಧಾರಿಗೆ ಅಭಿಮಾನಿಗಳು, ಆತ್ಮೀಯರು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ರಂಗದಿಂದ ನಿರ್ಗಮಿಸಿದ ಬಳಿಕ ಏನು ಎಂಬ ಪ್ರಶ್ನೆ ಕಾಡುವಂತಾಗಬಾರದು. ( ಪುಟ ೧೩೬)

ಹಿರಿಯರಲ್ಲಿ ಕಲಾಸಕ್ತಿಯ ಸಂಸ್ಕಾರವಿದ್ದರೆ ಕಿರಿಯರಲ್ಲಿ ಬಾರದಿರಲು ಸಾಧ್ಯವೇ? ಹೆತ್ತವರು ಎಳವೆಯಲ್ಲೇ ಮಕ್ಕಳಲ್ಲಿ ಯಕ್ಷಗಾನ, ಸುಗಮಸಂಗೀತ, ಭರತನಾಟ್ಯ ಮತ್ತು ಯೋಗಾಸನಗಳ ಆಸಕ್ತಿ ಕುದುರಿಸಬೇಕು. ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಕಲೆ ಮತ್ತು ಸಾಹಿತ್ಯ ಆರಾಧಕರೂ , ವಿಮರ್ಶಕರೂ ಆಗಬೇಕು.

ವಾಸ್ತವವಾಗಿ ಕಲೆಗೆ ಜಾತಿ-ಧರ್ಮಗಳ ಹಂಗಿಲ್ಲ.

ನಿಜವಾದ ಧರ್ಮಗುರು ಕಲಾ ಪ್ರಕಾರಕ್ಕೂ ಜಾತಿ-ಧರ್ಮಗಳಿಗೂ ಸಂಬಂಧ ಕಲ್ಪಿಸಲಾರ. ಕಲಾವಿದರು ಮತ್ತು ಸಾಹಿತಿಗಳು ಜಾತ್ಯಾತೀತರು. ಸಾಗರಕ್ಕೇಕೆ ಷಟ್ಪದಿಯ ಬಂಧ?- ( ಪುಟ ೧೩೭)

ರಸಾಸ್ವಾದನೆಯಿಲ್ಲದೆ ಭಕ್ತಿಗೆ ಮಾತ್ರ ಮಹತ್ವ ಸಿಕ್ಕಾಗ ಕಲೆ ಸೊರಗುತ್ತದೆ. ( ಪುಟ ೧೭೦)

ಕಲೆಯೊಂದನ್ನು ಧಾರ್ಮಿಕ ಕ್ರಿಯೆಯನ್ನಾಗಿಸಿ ಪರಿವರ್ತಿಸುವ ಪ್ರದರ್ಶನಗಳಿಂದ ಕಲೆಗಾಗಲೀ, ಕಲಾವಿದರಿಗಾಗಲೀ ಚಿಕ್ಕಾಸು ಪ್ರಯೋಜನವಿರಲು ಸಾಧ್ಯವಿಲ್ಲ. (ಪುಟ ೧೭೧)

ಕಲಾ ಪ್ರಕಾರಕ್ಕೆ ಹೇಗೆ ಜಾತಿ-ಧರ್ಮಗಳ ಹಂಗಿಲ್ಲವೋ ಹಾಗೆ ಭಾಷೆಯ ಹಂಗೂ ಇಲ್ಲ. ( ಪುಟ ೧೩೯)

ಎಲ್ಲಾ ಕಲೆಗಳಲ್ಲೂ ಪ್ರಾಂತೀಯ ವ್ಯತ್ಯಾಸವಿದ್ದೇ ಇರುತ್ತದೆ. (ಪುಟ ೧೪೦)

ಮನುಷ್ಯರಿರುವಷ್ಟೂ ಬುದ್ಧಿ ಮನಸ್ಸುಗಳೂ ಇರುತ್ತವೆ. ಆಕೃತಿಬೇಧಗಳೂ ಇರುತ್ತವೆ.

ಕಲೆ ಕಲೆಗಾಗಿ ಅಲ್ಲ. ಪ್ರೇಕ್ಷಕರಿಗಾಗಿ ಅಥವಾ ಶ್ರೋತೃಗಳಿಗಾಗಿ. ಎಲ್ಲಾ ಕಲಾ ಪ್ರಾಕಾರಗಳಲ್ಲೂ ಸಂಪ್ರದಾಯಗಳಲ್ಲೂ ನಮಗೆ ಪ್ರತ್ಯಕ್ಷವಾಗಿ ಈ ವಿಚಾರಗಳನ್ನು ಕಾಣಲು ಸಾಧ್ಯ. (ಪುಟ ೧೪೫)

ಕಲೆ ಮತ್ತು ಸಾಹಿತ್ಯದ ಉದ್ದೇಶ ಜನರನ್ನು ಒಂದುಗೂಡಿಸುವುದು.

ಜಾತಿ ಮತ್ತು ವರ್ಣಗಳನ್ನು ಸಮರ್ಥಿಸುವವರು ಕಲಾವಿದರಾಗಲು ಸಾಧ್ಯವಿಲ್ಲ.

ಹೊಟ್ಟೆಕಿಚ್ಚು, ನಕಾರಾತ್ಮಕ ಚಿಂತನೆ, ಕಾಲೆಳೆಯುವ ಪ್ರವೃತ್ತಿಯವರು ಸಾಧಕರಾಗಲು ಸಾಧ್ಯವಿಲ್ಲ.

ಯಾವುದೇ ಕಲೆ ಕಲೆಯಾಗಿ ಪ್ರತಿಗಾಮಿಯಾಗಿರಲು ಸಾಧ್ಯವಿಲ್ಲ. ಆ ಕಲೆಯ ಮೂಲಕ ನೀವು ಸಾರುವ ಮೌಲ್ಯ ಪ್ರತಿಗಾಮಿಯಾಗಿರಲೂಬಹುದು.

ಕಲಾವಿದರು ಪ್ರತಿಗಾಮಿಗಳಾದರೆ ಕಲೆಯ ದುರ್ಬಳಕೆಯಾಗುತ್ತದೆ. ಅದು ಕಲಾವಿದರ ದೋಷವೇ ಹೊರತು ಕಲೆಯ ದೋಷವಲ್ಲ. ( ಪುಟ ೧೩೮)

ಯಾವುದೇ ಒಂದು ಕಲೆಗೆ ಅದರದೇ ಆದ ಇತಿಮಿತಿಗಳಿವೆ. ಕಲೆಯೊಂದು ಕ್ರಾಂತಿಯ ಸಾಧನವಾಗಬೇಕೆಂದು ಬಯಸುವ ಅಗತ್ಯವಿಲ್ಲವೆಂದು ನನಗನ್ನಿಸುತ್ತದೆ. ಪ್ರತಿಗಾಮಿ ಮೌಲ್ಯಗಳ ಪ್ರತಿಪಾದನೆಗೆ ದುರ್ಬಳಕೆಯಾಗದಿದ್ದರೆ ಸಾಕು.

ಕಲೆ ನಿಂತ ನೀರಲ್ಲ. ನಿರಂತರ ಹರಿಯುತ್ತಿರುವ ಪ್ರವಾಹ. ಹಳೆಯ ನೀರು ಹೋಗಿ ಹೊಸ ನೀರು ಬಾರದೆ ಇದ್ದರೆ ಅದು ಪ್ರವಾಹವಾಗದು.

ಮೂಲಭೂತ ಮೌಲ್ಯವನ್ನು ಉಳಿಸಿಕೊಂಡು, ಸಮಕಾಲೀನ ಪ್ರಜ್ಞೆಯನ್ನು ತಿಳಿದು ಕಲಾವಿದ ನಟಿಸಿದಾಗ ಸುಂದರವಾದ ರೂಪಕಗಳನ್ನು ಶ್ರೋತೃಗಳಿಗೆ, ಪ್ರೇಕ್ಷಕರಿಗೆ ನೀಡಬಹುದು. ಸಮಕಾಲೀನವಾದ ನಾನಾ ರೀತಿಯ ಬಳಕೆಗಳನ್ನು ನಾವಿಂದು ಪ್ರತ್ಯಕ್ಷವಾಗಿ ಕಾಣುತ್ತಿರುವಾಗ ಜೀವನದ ಒಂದು ಅವಿಭಾಜ್ಯ ಅಂಗವಾದ ಕಲೆಯಲ್ಲಿ ಬೇಡವೆನ್ನುವುದು ಸಾಧುವಲ್ಲ. ಆದರೆ ಎಷ್ಟು ಪರಿವರ್ತನೆಯಾದರೂ ಮೂಲಭೂತ ಸಿದ್ಧಾಂತಗಳು ಬದಲಾಗುವುದಿಲ್ಲ. ನಾನಾ ರೀತಿಯ ವ್ಯಂಜನಗಳು, ಪಾಕಗಳು ಸಿದ್ಧವಾಗಿದ್ದರೂ ಮನುಷ್ಯ ಹೊಟ್ಟೆಯಳತೆ ಮೀರಿ ಉಣ್ಣಲಾರ. ನಾನಾ ಬಣ್ಣ, ಬೆಲೆಯ ಬಟ್ಟೆಗಳ ರಾಶಿ ಇದ್ದರೂ ಮೈಯ ಅಳತೆ ಮೀರಿ ಧರಿಸಲಾರ. ಇದನ್ನರಿತು ಬದಲಾದರೆ ಚೆನ್ನ. ( ಪುಟ ೧೪೩)

ಸ್ವಯಂ ಪ್ರಜ್ಞೆಯೇ ಇಲ್ಲದವನಿಗೆ, ಸಮಕಾಲೀನ, ಅರ್ವಾಚೀನ, ಪ್ರಾಚೀನ ಎಂಬ ಭ್ರಮೆ ಯಾಕೆ? ಕಲಾವಿದನೂ, ಪ್ರೇಕ್ಷಕನೂ ಪರಸ್ಪರ ರಸಾನುಭೂತಿಯನ್ನು ಹೊಂದಿರಬೇಕಾದರೆ ; ನಟನ ಸಾಮರ್ಥ್ಯ, ಬೌದ್ಧಿಕ ಸತ್ವ, ಮಾನಸಿಕ ಸ್ಪಂದನ, ಅನುಭವ ಜನ್ಯವಾದ ವಿಶೇಷ ಸಮಯ ಪ್ರಜ್ಞೆ ಎಲ್ಲವೂ ಅನಿವಾರ್ಯ.

ಯಾವ ಕಲಾವಿದನಿಗಾದರೂ ಎಲ್ಲಾ ರೀರ್ತಿಯ ಪ್ರೇಕ್ಷಕ ವರ್ಗದವರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಪುರಾಣಗಳನ್ನೋದಿ ಶಾಸ್ತ್ರಗಳನ್ನು ತಿಳಿದು, ಭಾಷಾ ಪ್ರಭುತ್ವವನ್ನು ಸಂಪಾದಿಸಿ, ಇದೇ ಸರಿ ಎಂದು ಹೇಳಬಲ್ಲವರು ವಿರಳ. ಪ್ರಾಯಶಃ ಅಂತಹ ವಿದ್ವಾಂಸ ಬಂದರೆ ಆಟ ನೋಡಿ ಏನೂ ಹೇಳುವುದಿಲ್ಲ. ಹೇಳಿದರೆ ಕೇಳಿ ತಿಳಿಯಬೇಕೆಂಬ ಮನೋಭಾವ ಕಲಾವಿದರಿಗೂ ಇರುವುದಿಲ್ಲ. ಈ ದೃಷ್ಠಿಯಿಂದ ಸಮಕಾಲೀನ ಪ್ರಜ್ಞೆ ಅನಿವಾರ್ಯ. ಮೊದಲಿದ್ದಂತೆಯೇ ಇರಲಿ, ಅಷ್ಟೇ ಸಾಕು ಎಂಬವರಿಗೆ ಸಮಕಾಲೀನ ಪ್ರಜ್ಞೆ ಅನಿವಾರ್ಯವಲ್ಲ. ಇದಕ್ಕೆ ಕಾರಣರು ಮೊದಲು ಪ್ರೇಕ್ಷಕರು. ಆ ಮೇಲೆ ಕಲಾವಿದರು. ಹೊಣೆಯರಿತ ಪ್ರೇಕ್ಷಕನಿದ್ದರೆ ಕಲಾವಿದ ಎಚ್ಚರಿಕೆಯಿಂದಿರುತ್ತಾನೆ. ಕಲಾವಿದನು ಸರಿಯಾಗಿದ್ದರೆ ನೋಟಕರು ರಸಾಸ್ವಾದನೆಯನ್ನು ಮಾಡುತ್ತಾರೆ.

ಸಮಕಾಲೀನ ಪ್ರಜ್ಞೆ ಎಂದರೇನು? ಕಲೆಯ ಜನಪ್ರಿಯತೆಯನ್ನಳೆಯುವ ಮಾನದಂಡ ಯಾವುದು? ಪ್ರೀತಿಗೂ ಪ್ರಿಯತೆಗೂ ಇರುವ ಅಂತರವನ್ನಳೆಯುವುದೆಂತು? ಯಶಸ್ವಿಯಾಗಿದೆಯೇ ಇಲವೇ ತಿಳಿಯುವ ಬಗೆ ಹೇಗೆ? ಪರಂಪರೆಗೆ ಧಕ್ಕೆಯಾಗಬೇಕಾದರೆ ಯಾವುದು ಪರಂಪರೆ? ಈ ಅನಿಸಿಕೆಗಳು ಯಾರಿಂದ?

ಸಮಕಾಲೀನ ಪ್ರಜ್ಞೆಯೆನ್ನುವುದಕ್ಕೆ ಸದ್ಯದ ಸ್ಥಿತಿಯೆಂದಷ್ಟೇ ಅರ್ಥ ಕಲ್ಪಿಸಿಕೊಳ್ಳುವುದು ಸೂಕ್ತ. ( ಪುಟ ೧೪೪)

ಮೂಲ ಚೌಕಟ್ಟನ್ನು ಉಳಿಸಿಕೊಂಡು ಬದಲಾವಣೆಗಳನ್ನು ಸ್ವಾಗತಿಸಬೇಕಾದುದು ಕಾಲಧರ್ಮ. (೧೬೯)

ಜೀವನದಲ್ಲಿ ಅಪಮಾನದ ಪ್ರಸಂಗಗಳಿದ್ದರೇನೇ ಸಾಧನೆಗಳನ್ನು ಮಾಡಲು ಸಾಧ್ಯವಾಗುವುದು. ಅಪಮಾನಂ ತಪೋವೃದ್ಧಿಃ ಸನ್ಮಾನಂತು ತಪಃ ಕ್ಷಯ. (ಪುಟ ೧೭೩)

ಬದುಕಿದ್ದೂ ರಂಗದಲ್ಲಿ ಕಾಣಿಸಿಕೊಳ್ಳಲಾಗದ ಅದೆಷ್ಟು ಕಲಾವಿದರು ನಮ್ಮ ನಡುವೆ ಭೂತಕಾಲವನ್ನು ನೆನಪಿಸಿಕೊಂಡು, ಘೋರ ವಾಸ್ತವದ ಭವಿಷ್ಯವನ್ನು ಎದುರು ನೋಡುತ್ತಿಲ್ಲ? ರಂಗದ ಚಕ್ರವರ್ತಿಗಳ ಜೀವಿತದ ಕೊನೆಯ ಘಟ್ಟದಲ್ಲಿ ನೋವುಗಳೇ ಏಕೆ ತುಂಬುತ್ತವೆ? ಏಕೆ? ಏಕೆ? ಏಕೆ?

ಇಂತಹ ಹಲವು ಚಿಂತನೆಗಳಿಗೆ ನಮ್ಮನ್ನು ಮುಖಾಮುಖಿಯಾಗಿಸುವ ಕಲಾವಿದನ ಆರಾಧನೆಯೇ ಯಕ್ಷೋಪಾಸನೆ.

Leave a Reply

*

code