ಅಂಕಣಗಳು

Subscribe


 

ಕಲಾಸಂಸ್ಕಾರವಿಲ್ಲದ ನೃತ್ಯ ರಂಗಪ್ರವೇಶ : ಕಹಿ ಅನುಭವ

Posted On: Saturday, February 27th, 2016
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

ಸಾಮಾನ್ಯವಾಗಿ ಯಾವುದೇ ನೃತ್ಯರಂಗಪ್ರವೇಶಕ್ಕಾದರೂ ಕಾಲಿಡುವುದೇ ವಿರಳ. ಕಾರಣ, ಅಲ್ಲಿನ ದೊಡ್ಡಸ್ತಿಕೆ, ಮೇಲರಿಮೆಗಾಗಿ ತೊಳಲಾಟ, ಸಂಬಂಧಿಕರದೇ ಪಿಸುಪಿಸು-ಗುಸುಗುಸು, ಹೊಗಳುವ-ಹೊಗಳಿಸಿಕೊಳ್ಳುವ ತೆವಲುಗಳಿಂದ ದೂರ ಉಳಿಯುವುದೇ ಕ್ಷೇಮವೆನಿಸುತ್ತದೆ. ಎಷ್ಟೋ ರಂಗಪ್ರವೇಶದ ಆಹ್ವಾನಗಳನ್ನು ಅದರ ಆಯೋಜಿಸುವ ಶೈಲಿಯನ್ನು ಅಂದಾಜಿಸಿಯೇ ನಯವಾಗಿ ತಿರಸ್ಕರಿಸಿದ್ದಿದೆ. ಜೊತೆಗೆ ರಂಗಪ್ರವೇಶದ ನೆಲೆ-ಬೆಲೆಗಳ ಕುರಿತು ಪತ್ರಿಕೆಯಲ್ಲಿಯೇ ಕಟುವಾಗಿ ಬರೆದು ಅದರ ಅಸ್ತಿತ್ವದ ಗುಣಕ್ಕೆ ಪ್ರಶ್ನೆ ಹಾಕಿದ್ದಿದೆ. ಬಹುಷಃ ಈವರೆಗೆ ನಿಜವಾಗಿಯೂ ರಸೈಕಗುಣದಿಂದ ಕಲಾನಂದ ನೀಡುವ ರಂಗಾರೋಹಣಗಳು ಒದಗಿಬಂದಿರುವುದು ಒಂದೆರಡಿರಬಹುದಷ್ಟೇ! ಇವೆಲ್ಲಾ ಗೊತ್ತಿದ್ದೂ ಮತ್ತೆ ಮತ್ತೆ ಪಿಗ್ಗಿ ಬೀಳುವುದಕ್ಕೆ ಏನನ್ನಬೇಕು? ಮುಗ್ಧತೆಯೋ, ಮರೆವೋ ಅಥವಾ ಅನುಭವದ ಮರೆಯಲ್ಲಿ ಮೋಸ ಹೋಗುವ ಖಯಾಲಿಯೋ?

ಇತ್ತೀಚೆಗೆ ಒಂದು ನೃತ್ಯರಂಗಪ್ರವೇಶ ಕಾರ್ಯಕ್ರಮಕ್ಕೆ ರಂಗಪ್ರವೇಶಗೈಯುವ ವಿದ್ಯಾರ್ಥಿಯ ನೃತ್ಯಶಿಕ್ಷಕರೊಬ್ಬರ ಸ್ನೇಹಕ್ಕೆ ಕಟ್ಟುಬಿದ್ದು ಕರಾವಳಿಯ ಸಾಂಸ್ಕೃತಿಕ ರಾಜಧಾನಿಯಾದ ಉಡುಪಿಗೆ ಸ್ವಂತ ಕಾರಿನಲ್ಲೇ (ಸುಮಾರು ನೂರೈವತ್ತು +ನೂರೈವತ್ತು ಕಿಲೋಮೀಟರ್ ವರೆಗೆ) ಪಯಣಿಸಿದೆ. (ರಂಗಪ್ರವೇಶ ಮಾಡಿದ, ಮಾಡಿಸಿದವರ ಹೆಸರುಗಳನ್ನು ಇಲ್ಲಿ ತರುವುದು ಶೋಭೆಯಲ್ಲ ಎಂಬ ಕಾರಣಕ್ಕೆ ಪ್ರಸ್ತಾಪಿಸಿಲ್ಲ.) ಕಲಾಸಾಂಗತ್ಯದಲ್ಲಿ ನನ್ನೊಂದಿಗೆ ಸದಾ ಜೊತೆಗಿರುವ ಇಬ್ಬರು ಒಡನಾಡಿಗಳೂ ಇದ್ದರು. ಎಳೆಕಂದನ ಸಹಿತ. ಆದರೆ ಆ ರಂಗಪ್ರವೇಶ ನೃತ್ಯದ ಆಯಾಮಕ್ಕಿರಲಿ, ಮಾನವೀಯ ನೆಲೆಗಟ್ಟಿಗೂ ದೂರವಾದದ್ದು ಎಂಬುದು ಅರಿಯುವ ಹೊತ್ತಿಗೆ ಹೊತ್ತು ಮೀರಿಹೋಗಿತ್ತು, ಜೊತೆಗಿದ್ದವರಿಗೆ ಕನಿಷ್ಟಮಟ್ಟದ ಗೌರವವಿರಲಿ, ಮುಖ್ಯ ಅತಿಥಿಯಾಗಿ ಹೋದವಳಿಗೇ ಕವಡೆ ಕಿಮ್ಮತ್ತಿನ ಬೆಲೆಯೂ ಇಲ್ಲ. ಅತಿಥಿ ದೇವೋಭವ ಎಂದೆಣಿಸಿ ಸತ್ಕಾರ ಮಾಡಬೇಕೆಂಬ ಅಪೇಕ್ಷೆಯಿಲ್ಲ, ಆದರೆ ನಮ್ಮ ಸ್ನೇಹಾಚಾರಕ್ಕ್ಕೂ ಯಾವುದೇ ಬೆಲೆಯಿಲ್ಲ ಎಂದು ಅರಿವಾಗುವ ಹೊತ್ತಿಗೆ ಕಣ್ಣು ಹನಿಗೂಡಿತ್ತು, ಮನಸ್ಸು ಬೆಂದಿತ್ತು. ಔದಾರ್ಯದ ನಮಸ್ಕಾರ.. ! ಉಹುಂ.., ಒಣ‌ಅಡಂಬರದ ಮುಗುಳ್ನಗೆಯೂ, ಬಾಯುಪಚಾರದ ಭಾಗ್ಯವೂ ಆತಿಥೇಯರಿಂದ ದೊರಕಲಿಲ್ಲ. ಬದಲಾಗಿ, ಅತಿಥಿಯಾಗಿರುವುದೇ ನಮ್ಮ ಸೌಭಾಗ್ಯ;. ವೇದಿಕೆಯಲ್ಲಿ ಒಂದು ಫಲಕವನ್ನಿತ್ತರೆ ಅದೇ ನಮಗೆ ಮನ್ನಣೆ ಎಂಬಲ್ಲಿಯ ವರೆಗೆ ಅರೆಮನಸಿನ ಧೋರಣೆ. ವೇದಿಕೆಯಿಂದ ನಾಲ್ಕು ಒಳ್ಳೆಯ ಮಾತನಾಡಿ ಇಳಿಯುವುದೇ ತಡ, ನೀವ್ಯಾರೋ, ನಾವ್ಯಾರೋ ಎಂಬಲ್ಲಿಯವರೆಗೆ ತಾತ್ಸಾರ. ಎಲ್ಲದೂ ಒತ್ತಟ್ಟಿಗಿರಲಿ, ಒಳಗೊಳಗೆ ಅವಮಾನಪಟ್ಟಿದ್ದಷ್ಟೇ ಅಲ್ಲದೆ, ಪಡಬಾರದ ಪಾಡನ್ನೂ ಅನುಭವಿಸಬೇಕಾಗಿ ಬಂದದ್ದನ್ನು ತಿಳಿಸಿಹೇಳಿದರೂ ಅದನ್ನು ಗಮನಿಸಿ ಔದಾರ್ಯದಿಂದ ಕರೆ ಮಾಡುವುದೋ ಅಥವಾ ಸಂದೇಶವನ್ನೊಂದು ಬಿಸುಟುವ ಕನಿಷ್ಟಪಕ್ಷದ ಸೌಜನ್ಯವೂ ಒದಗದೇ ಹೋದುದು ಬಹುದೊಡ್ಡ ವಿಪರ್ಯಾಸ. ಮನಸ್ಸಿಗೆ ಖೇದ ನೀಡಿದ್ದಕ್ಕೆ ಒಂದು ಕಳಕಳಿ, ಸಂವೇದನೆಯೂ ಇಲ್ಲದೆ ಹೋಯಿತಲ್ಲ.., ಎಂಬುದನ್ನು ನೆನಪಿಸಿಕೊಂಡಾಗಲೆಲ್ಲ ಇಂಥವರೆಲ್ಲ ಯಾವ ಬಗೆಯ ಕಲಾವಿದರು, ಇವರಲ್ಲಿ ಕಲೆ ಇನ್ನೂ ಉಳಿದಿದೆಯೇ, ಉಳಿದಿದ್ದರೆ ಹೀಗಿರಲು ಬಿಡುತ್ತಿತ್ತೇ ಎಂದು ಕಾಣದೇ ಬಿಡಲಿಲ್ಲ. ಇನ್ನೊಬ್ಬರ ಸಮಯದೆಡೆಗೆ ಗೌರವವೂ ಇಲ್ಲದೇ ಹೋದರೆ ಮತ್ತಾವ ಮೌಲ್ಯಗಳು ತಿಳಿಯಲು ಸಾಧ್ಯ? ಬಹುಷಃ ಆ ಬೇಗೆಯೇ ಈ ಬರೆವಣಿಗೆಗೆ ಮುಖ್ಯ ಧಾತುವಾಗಿದ್ದಿರಬೇಕು.

ಏನ ಕಲಿತರೇನು ಫಲ, ಸಂಸ್ಕಾರವಿಲ್ಲದಿರೆ ? ತಿಳಿದೂ ತಿಳಿದೂ ಮಾಡುವ ಇಂತಹ ಬೇಜವಾಬ್ದಾರಿ ನಡವಳಿಕೆಗಳಿಂದ ಕಲೆಯಲ್ಲಿ ಸಾಧಿಸುವುದಾದರೂ ಏನು? ಕಾರ್ಯಕ್ರಮದ ಹೆಸರಿನಲ್ಲಿ ನಡೆದ ಜಾಹೀರಾತು, ಅದ್ಧೂರಿಯ ಬ್ಯಾನರ್, ಗುರುಸನ್ಮಾನ, ವಿಮರ್ಶೆಗಳು ಯಾವ ಪುರುಷಾರ್ಥಕ್ಕೆ – ಸಹೃದಯತೆಗೇ ಬೆಂಕಿಬಿದ್ದಾಗ…? ಇನ್ನು ಕರೆಸಿಕೊಂಡ ಅತಿಥಿಗಳಿಗೆ ಆದರವಿಲ್ಲದಿದ್ದ ಮೇಲೆ ರಸದೃಷ್ಟಿ ಇದ್ದೀತೇ? -ಬಹುಷಃ ಇದಾವುದನ್ನೂ ಅರೆಕ್ಷಣವಾದರೂ ಯೋಚಿಸಿದ್ದರೆ ಸಾತ್ತ್ವಿಕದ ಮಾತು ಬಿಡಿ, ನೃತ್ಯದ ಆಂಗಿಕ, ಅಷ್ಟೇಕೆ ಹೆಜ್ಜೆಗಾರಿಕೆಯೂ ಶುದ್ಧವಾಗಿಲ್ಲದೆ, ಬಾಲಪಾಠಕ್ಕೂ ಸಲ್ಲದ ಒಂದು ಅಸಂಬದ್ಧ, ಅಪರಿಪೂರ್ಣ ರಂಗಪ್ರವೇಶ ಮಾಡಲು ಮನಸ್ಸು ಬರಲಿಕ್ಕಿಲ್ಲ. ನಂತರ ನೋಡಿದರೆ, ಆ ರೀತಿಯ ಅನುಭವ ಈಗಾಗಲೇ ಬಹಳ ಮಂದಿ ಅತಿಥಿಗಣ್ಯರಿಗೆ ಆಗಿದೆಯಂತೆ. ಒಬ್ಬರನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಮುಗಿಯಿತು, ಅಲ್ಲಿಂದಾಚೆಗೆ ಯಾವ ಕಳಕಳಿಯೂ ಇಲ್ಲ ! ಒಟ್ಟಿನಲ್ಲಿ ಪ್ರಯೋಜನವೇ ಸಂಬಂಧಗಳ ಮುಖ್ಯ ಉದ್ದೇಶ ಎಂಬ ಸತ್ಯಕ್ಕಿಂತಲೂ ಹೆಚ್ಚಾಗಿ ಬಳಸಿ ಬಿಸಾಡುವುದೂ ಕೂಡಾ ಕಲಾಸಂಬಂಧಗಳ ಚಾಳಿಯಾಗಿದೆಯೇ ಎಂಬುದು ಕಾಣದೇ ಹೋಗಲಿಲ್ಲ.

ಬಹುಷಃ ಪಾಠ ಕಲಿಯಲೆಂದೇ ನಮಗೂ ವಿಧಿ ಬರೆದದ್ದಿರಬೇಕು ! ಆಗುವುದೆಲ್ಲ ಒಳ್ಳೆಯದಕ್ಕೇ ಎಂದು ಪ್ರಾಜ್ಞರು ಸುಮ್ಮನೇ ಹೇಳುತ್ತಾರೇನು? ಒಟ್ಟಿನಲ್ಲಿ ರಂಗಪ್ರವೇಶಗಳ ಕುರಿತು ಬೆಳೆದ ಉಪೇಕ್ಷೆಯು, ಎಲ್ಲಿಯವರೆಗೆ ಮನಸ್ಸನ್ನು ಕಟುವಾಗಿಸಿದೆಯೆಂದರೆ ಇನ್ನಾವ ಕಾರ್ಯಕ್ರಮವನ್ನೂ ನಿಸ್ಪೃಹರಾಗಿ ಒಪ್ಪಿಕೊಳ್ಳುವ ಮುಂಚೆ ಸಾಕಷ್ಟು ಎಚ್ಚರಿಕೆ ವಹಿಸಬೇಕು, ಯಾವುದರ ಅಪೇಕ್ಷೆ-ನಿರೀಕ್ಷೆಯಿಲ್ಲದೆ ಹೋಗುವುದೂ ಕೂಡಾ ನಮಗೆ ನಾವೇ ಮಾಡಿಕೊಳ್ಳುವ ವಂಚನೆ ಎಂಬ ಬೋಧ ಒದಗಿತು. ಅಂತಹ ಪಾಠ ಕೊಟ್ಟಿದ್ದಕ್ಕೆ ಆ ಕಾರ್ಯಕ್ರಮಕ್ಕೆ ಋಣಿಯಾಗಬೇಕೋ ಅಥವಾ ಮೋಸಹೋಗಿದ್ದಕ್ಕೆ ನಮ್ಮನ್ನು ನಾವೇ ಹಳಿದುಕೊಳ್ಳಬೇಕೋ.., ಇಂದಿನವರೆಗೂ ಗೊಂದಲವೇ !

ಈ ಸಂದರ್ಭ ಒದಗಿದಾಗಲೇ ಯಕ್ಷಗಾನದ ಗುರುಗಳೊಬ್ಬರು ಹೇಳುವ ಒಂದು ಮಾತು ಮತ್ತಷ್ಟು ಸ್ಪಷ್ಟವಾಯಿತು. ‘ಯಾವುದೇ ವಿಷಯವಿರಲಿ ಮೂರು ನೆಲೆಯಲ್ಲಿ ಚಿಂತಿಸಿದರೆ ಆತ್ಮಭರ್ತ್ಸನೆಯಿಂದ ಪಾರಾಗಬಹುದು. ಮೊದಲನೆಯದು ಯಾವುದೇ ಕೆಲಸದಲ್ಲಿ ಆನಂದ ದೊರಕುತ್ತದೆಯೇ? – ಸರಿ, ಹಾಗಿದ್ದರೆ ಆ ದಿವ್ಯವಾದ ಆನಂದದ ಸಲುವಾಗಿ ಏನನ್ನಾದರೂ ತ್ಯಾಗ ಮಾಡಿ, ಅದರಲ್ಲಿ ಎಂದಿಗೂ ಹಳಿಯುವ ಸನ್ನಿವೇಶಗಳೊದಗಲಿಕ್ಕಿಲ್ಲ. ಇದಿಲ್ಲವಾದರೆ ಎರಡನೆಯ ಮೆಟ್ಟಿಲು- ಒಪ್ಪಿಕೊಂಡ ಕೆಲಸದಲ್ಲಿ ಏನಾದರೂ ಗುಣಾತ್ಮಕವಾದ ಪ್ರಯೋಜನವಿದೆಯೇ? ನಮ್ಮ ಬೌದ್ಧಿಕ, ಮಾನಸಿಕ, ವೈಯಕ್ತಿಕ ವಿಕಸನಕ್ಕೆ ಕಾರಣವಾಗಬಲ್ಲುದೇ ಎಂಬುದರ ವಿವೇಚನೆ. ಅದೂ ಇಲ್ಲವಾದರೆ ಕೊನೇಪಕ್ಷ ಆರ್ಥಿಕವಾಗಿ ಕೊಂಚ ಉಪಯೋಗಕ್ಕಾದರೂ ಒದಗುವಂತಿರಬೇಕು. ಇವುಗಳಲ್ಲಿ ಒಂದೂ ದಕ್ಕದೇ ಹೋದರೆ ಮೂರು ಬಿಟ್ಟವನ ಸ್ಥಿತಿಯೇ ಆ ಕಾರ್ಯದಲ್ಲಿ ತೊಡಗಿಕೊಂಡವನಿಗೆ !ನಷ್ಟ, ಕಷ್ಟ, ಭ್ರಷ್ಟ ! ’

ಕಲೆಯ ಮುಖ್ಯ ಗುರಿಯೇ ಆನಂದ, ಆತ್ಮೋದ್ಧಾರ. ಅದಿರುವುದು ಅಹಂಕಾರಕ್ಕೋ, ಪ್ರತಿಷ್ಠೆಗೋ, ತೋರಿಕೆಗೋ ಅಲ್ಲ, ಆನಂದೋಪಾಸನೆಯಿದ್ದ ಕೆಲಸವಷ್ಟೇ ನೆಮ್ಮದಿಗೆ ಆಧಾರವೆಂಬುದು ಕಲೋಪಾಸನೆಯ ಬೇರೆ ಬೇರೆ ಮಜಲುಗಳಲ್ಲಿ ಕ್ರಮಿಸಿದಾಗಲೂ ಮತ್ತೆ ಮತ್ತೆ ನಿಚ್ಚಳವಾಗತೊಡಗಿದೆ. ಯಾವ್ಯಾವುದೋ ಒಣಜಂಭಗಳಲ್ಲಿ, ನಾಟಕೀಯ ವಿನಯಗಳಲ್ಲಿ ಕಲೆ ಖಂಡಿತಾ ಉಳಿಯುವುದಿಲ್ಲ; ಕಲೆ ಬೇರೆಯಲ್ಲ, ಜೀವನದ ಪರಮಾರ್ಥ ಬೇರೆಯಲ್ಲ ಎನ್ನುವುದು ಅರಿತರೆ ಸಾಕು… ಜೀವನದಲ್ಲಿ ಕಲೆ ಹೇಗಿರಬೇಕು ಎಂಬುದು ತನ್ನಿಂತಾನೇ ಬುದ್ಧಿಗೆ ಪ್ರಕಾಶವಾಗುತ್ತದೆ. ಅಂತಹ ಕಲಾಸಂಸ್ಕಾರ ಕಲಾವಿದರೆನಿಸಿಕೊಂಡವರಲ್ಲಿ ಮೊಳೆತು ಸತ್ವಯುತವಾದ ವ್ಯಕ್ತಿತ್ವಕ್ಕೆ ನಾಂದಿಯಾದರೆ ಅದೇ ಕಲೆಗೆ ದೊಡ್ಡ ಕಾಣಿಕೆ. ಅಂತಹ ಪ್ರಜ್ಞೆ ನಿತ್ಯ ನಮ್ಮೆಲ್ಲರಲ್ಲೂ ಅರಳುತ್ತಾ ‘ಎನಗಿಂತ ಕಿರಿಯರಿಲ್ಲ’ ಎಂಬ ಅಲೆಯನ್ನು ಎಬ್ಬಿಸುತ್ತಿರಲಿ, ಬುದ್ದಿ ತಿಳಿಯಾಗಿ ಕಹಿನೋವುಗಳು ಮತ್ತೊಮ್ಮೆ ಯಾರಿಗೂ ಯಾರಿಂದಲೂ ಮರುಕಳಿಸದಿರಲಿ ಎಂಬುದೇ ನಮ್ಮ ಆಶಯ.

ಈ ಸಲ ನೂಪುರ ಭ್ರಮರಿ ಹತ್ತನೇ ಸಂವತ್ಸರಕ್ಕೆ ಕಾಲಿಟ್ಟಿರುವ ಸಂಭ್ರಮದಲ್ಲಿದ್ದಾಳೆ. ಹಾಗಂತಲೇ ಒಂಭತ್ತರ ಕೊನೆಯ ಹೆಜ್ಜೆಯನ್ನೂ, ಹತ್ತರ ಹೊಸ ಹೆಜ್ಜೆಗಳನ್ನೂ ಸೇರಿಸಿ ಸಂಚಿಕೆಗಳನ್ನು ಒಟ್ಟುಗೂಡಿಕೊಂಡು ಈ ವಿಶೇಷ ವರ್ಣಮಯ ಸಂಚಿಕೆಯ ಅರಿವೆ ತೊಟ್ಟು ನಿಂತಿದ್ದಾಳೆ. ವರ್ಣಮಯ ಎಂದಿದ್ದು ಕೇವಲ ಬಣ್ಣಗಳ ಬಳಕೆಯಿಂದ ದೃಷ್ಟಿಯಿಂದಷ್ಟೇ ಅಲ್ಲ, ವಿಚಾರ, ಹೂರಣದ ನೆಲೆಯಿಂದ. ಆಗಲೇ ವರ್ಣ ಕಣ್ಣಿಗೆ ತಂಪಾಗಿ, ಕಂಪಾಗಿ, ಇಂಪಾಗಿ ತನ್ನಿರವನ್ನು ವರುಷವರುಷಕ್ಕೂ ಹಬ್ಬಿಸಲು ಸಾಧ್ಯ. ಸಾಧ್ಯವಾದಷ್ಟೂ ಬರೆವಣಿಗೆಯ ಪ್ರತೀ ಹದದಲ್ಲೂ ನೂತನವಾದುದನ್ನು ನೀಡುವ, ಶೋಧದ ನಿಜವಾದ ಆಶಯವನ್ನು ಸಾಕಾರ ಮಾಡುವ ಹಂಬಲ. ಅಕ್ಷರ ಅಕ್ಷರಕ್ಕೂ ಜವಾಬ್ದಾರಳಾಗಿ, ಭವಿಷ್ಯದಲ್ಲಿಯೂ ಪರಿಶೀಲನೆ-ದಾಖಲೀಕರಣ- ಬೋಧಪ್ರದವಾಗಿರಬೇಕೆಂಬ ಛಾತಿ. ಅದರಲ್ಲೂ ಶೋಧದ ನೆಲೆಯಲ್ಲೇ ತನ್ನನ್ನು ತಾನು ಮೊದಲಿನಿಂದಲೂ ಬಂದಿರುವ ಭ್ರಮರಿ ಈ ಸಲವೂ ಅದೇ ಅನ್ವೇಷಣದಲ್ಲಿ ಹೊಸ ಅಂಕಣಗಳು, ವಿಚಾರ ಮಂಥನಗಳು, ನುಡಿನಮನ ಅಂಜಲಿಯ ನೆನಪುಗಳು, ವಿಮರ್ಶೆ, ಕಾವ್ಯ ಎಂಬುದಷ್ಟೇ ಅಲ್ಲದೆ; ಲೇಖನಸಮುಚ್ಛಯಗಳಲ್ಲಿ ಗುರುತರವಾದುದನ್ನಷ್ಟೇ ಆರಿಸಿ ಮೂರು ವಿಭಿನ್ನ ನೆಲೆಯ (ಪ್ರಾಯೋಗಿಕ, ತಾತ್ತ್ವಿಕ, ದಾಖಲೀಕರಣ) ಸಂಶೋಧನಾ ಲೇಖನಗಳನ್ನು ಕಂಡುಕೊಂಡಿದ್ದಾಳೆ. ಅದಕ್ಕೆಲ್ಲದಕ್ಕೂ ಕಳಶವಿಟ್ಟಂತೆ ಶತಾವಧಾನಿ ಡಾ. ರಾ. ಗಣೇಶರ ದಿಗ್ಧರ್ಶನಸ್ವರೂಪವಾದ ಆಶಯ ಲೇಖನ ಕಲಾಜಗತ್ತಿಗೆ ಸಾಕಷ್ಟು ಅರಿವಿನ ಬುತ್ತಿಯನ್ನು ಹಂಚುವುದಂತೂ ದಿಟ. ಅವರ ಲೇಖನ ಯಾವ ಸಂಶೋಧನಾ ಗ್ರಂಥಕ್ಕಿಂತಲೂ ಮಿಗಿಲೆಂಬಂತೆ ವಿಸ್ತಾರವಾಗಿ ಕಲಾಪರಿವಾರದ ಸಿದ್ಧಾಂತಗಳನ್ನೇ ಹೊಸೆದಿದೆ, ಚೈತನ್ಯದಾಯಿಯಾದ ಇಂಥ ಮೌಲಿಕ ಬರೆವಣಿಗೆಗಳನ್ನು ಪ್ರಕಟಿಸುವುದೇ ಜೀವಮಾನದ ದೊಡ್ಡ ಧನ್ಯತೆ. ಇಂತಹ ವಿದ್ವತ್‌ಪೂರ್ಣ ಲೇಖನಗಳನ್ನು ನೂಪುರ ಭ್ರಮರಿ ತನ್ನ ಒಡಲಲ್ಲಿರಿಸಿಕೊಂಡು ಈ ದಶಮಸಂಭ್ರಮವನ್ನು ಇಷ್ಟು ಗುರುತರವಾಗಿ ಕಾಣಲು ಕಾರಣರಾದ ಎಲ್ಲ ಮಹನೀಯರಿಗೆ ಆಭಾರಿಗಳಾಗಿದ್ದೇವೆ. ಈ ಯಾತ್ರೆ ನಿರಂತರವಾಗಲಿ ಎಂಬ ಆಶೀರ್ವಾದ ನಮ್ಮೊಂದಿಗಿದ್ದರೆ ಸಾಕು.

ಕೊಂಚ ಬಿಡುವಿನಲ್ಲಿ ಮತ್ತೊಮ್ಮೆ ಸಂಧಿಸೋಣ. ದಶಮಾನೋತ್ಸವ ಸಂಭ್ರಮ ಪ್ರತೀಕವಾದ ವಿನೂತನ, ವಿಶಿಷ್ಟವಾದ ಯತ್ನದೊಂದಿಗೆ…ಅಲ್ಲಿಯವರೆಗೂ ತಿಂಗಳುಗಳ ವಿರಾಮವು ನಮ್ಮ ನಡುವಿನ ಬಾಂಧವ್ಯದಲ್ಲಿರುವ ತಹತಹಿಕೆಯನ್ನು ಬೆಚ್ಚಗಾಗಿಸುತ್ತಿರಲಿ. ನಿಮ್ಮ ಆರ್ಥಿಕ-ಮಾನಸಿಕ-ನೈತಿಕ ಬೆಂಬಲ, ಸಹಕಾರ, ಪ್ರೋತ್ಸಾಹ ನಿಮ್ಮ ಈ ಪತ್ರಿಕೆಯನ್ನು ಅನವರತ ಪೊರೆಯಲಿ.

ಪ್ರೀತಿಯಿಂದ

ಸಂಪಾದಕರು

Leave a Reply

*

code