ಅಂಕಣಗಳು

Subscribe


 

ಜಾನಪದ ನೃತ್ಯ-ರಂಗಭೂಮಿಯ ಅನನ್ಯತೆ ಮತ್ತು ಚಲನಶೀಲತೆ : ಒಂದು ಚಿಂತನೆ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


ಪರಂಪರೆಯನ್ನು ನಿಮ್ಮ ಹಿಂದೆ ಬಿಡಿ. ಅದರ ಪರಿಮಳವನ್ನು ಉಳಿಸಿಹೋಗಿ ಎಂಬ ಮಾತು ಕಲೆಯೊಂದು ಆಯಾಯ ಕಾಲದ ಅಗತ್ಯಗಳನ್ನು ಪೂರೈಸುವ ಕುರಿತು ಸಾದ್ಯಂತವಾಗಿ ವಿವರಿಸುತ್ತದೆ. ಶಾಸ್ತ್ರೀಯ ನರ್ತನ ಕಲೆಗಳು ಈ ಸಂಗತಿಗಳ ನಿರೂಪಣೆಯಲ್ಲಿ ಹಿಂದೇಟು ಹಾಕುವ ಬಗ್ಗೆ ಆಪಾದನೆಗಳಿದ್ದರೂ, ಜಾನಪದೀಯ ಶೈಲಿಗಳು ಮಾತ್ರ ಕಾಲಕಾಲಕ್ಕೂ ಇಂತಹ ಅಗತ್ಯಗಳನ್ನು ಪೂರೈಸುತ್ತಾ ಜನಮನಕ್ಕೆ ಹೆಚ್ಚು ಸಮೀಪವೆನಿಸುತ್ತಿವೆ. ಈ ಹಿನ್ನಲೆಯಲ್ಲಿ ವಿವಿಧ ಜಾನಪದ ಸಂಸ್ಕೃತಿಗಳನ್ನು ಇದುವರೆಗೆ ತಮ್ಮ ಮುಂದಿಟ್ಟಿರುವ ಅಂಕಣಗಾರ್ತಿ ಈ ಬಾರಿ ಜಾನಪದದ ವಸ್ತು ಮತ್ತು ಪ್ರಸ್ತುತತೆ, ಸಮಕಾಲೀನ ರಂಗಭೂಮಿಯ ಮೂಲಕ ಜಾನಪದದ ವಿಸ್ತರಣಾರೂಪ, ಬದಲಾವಣೆಗಳ ಅಗತ್ಯತೆಗಳ ಕುರಿತು ತಮ್ಮ ಅಭಿಪ್ರಾಯವನ್ನು ಹೀಗೆ ಮುಂದಿಡುತ್ತಿದ್ದ್ದಾರೆ…

– ಶ್ರೀಲಕ್ಷ್ಮಿ ಎಂ. ಭಟ್

…ನನಗನ್ನಿಸೋ ಹಾಗೆ, ಇವತ್ತಿನ ಎಲ್ಲಾ ಮಾಧ್ಯಮಗಳು ಹಾಗೂ ರಂಗಭೂಮಿ ಇವುಗಳ ಉದ್ದೇಶ ಸಂವಹನ. ಮನರಂಜನೆ ಕೂಡಾ ಅದರ ಇನ್ನೊಂದು ಮುಖ್ಯ ಆಯಾಮ. ಈ ಕ್ರಿಯೆಯನ್ನೇ ಶತಮಾನಗಳಿಂದಲೂ ತನ್ನ ನೆಲೆಯಲ್ಲಿ ಅತ್ಯಂತ ಸುಲಭಸಾಧ್ಯವಾಗಿಸಿಕೊಂಡಿರುವುದು ಜಾನಪದ. ಹೇಗೆಂದರೆ,

೧. ಜಾನಪದ ಮಾಧ್ಯಮಗಳು (ಗಾಯನ ಮತ್ತು ಇತರೆ ಪ್ರದರ್ಶಕ ಕಲೆಗಳು) ಆಯಾ ಪ್ರದೇಶಾಧಾರಿತವಾದಂತವು. ಹೀಗಾಗಿ ಅಲ್ಲಿನ ಜನರೊಡನೆ ತಕ್ಷಣದಲ್ಲಿ ನಿಕಟಸಂಪರ್ಕ, ಸಂಬಂಧ ಸ್ಥಾಪಿಸಿಕೊಳ್ಳುತ್ತವೆ. ಆಪ್ತತೆ ಸಾಧ್ಯವಾಗುತ್ತದೆ.

೨. ಯಾರದೇ ಯಾಜಮಾನ್ಯಕ್ಕೂ ಒಳಪಡದೆ ಅನಾಮಿಕವಾಗಿದ್ದರಿಂದ, ಯಾವುದೇ ಕಾಲ, ದೇಶ, ಸಂದರ್ಭ, ವಾತಾವರಣ, ಜನಾಂಗಗಳಿಗೂ ಅವನ್ನು ಹೊಂದಿಸಬಹುದಾದ ಅನುಕೂಲತೆ ಅವಕ್ಕಿದೆ.

೩. ಅವುಗಳ ಭಾಷೆ, ಪದಗುಚ್ಚ, ಪ್ರತಿಮೆಗಳು ಜನಸಾಮಾನ್ಯರು ಬಳಸುವಂತಹುದೇ ಆಗಿದೆ. ಈ ಎಲ್ಲಾ ಕಲೆಗಳು ಸಂದರ್ಭಜನ್ಯವಾದವು. ಜನಾಂಗದ ಅವಶ್ಯಕತೆಯೊಂದನ್ನು ಪೂರೈಸಲೆಂದೇ ಹುಟ್ಟಿಕೊಂಡಂಥವು. ಆದ್ದರಿಂದ ಅತ್ಯಂತ ಹೆಚ್ಚಿನ ಸ್ವೀಕೃತಿ ಅವಕ್ಕಿದೆ. ಅಂದಂದಿನ ಸಮಾಜ, ಸಮುದಾಯ, ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ರೂಪುಗೊಂಡ ಯಾವುದೇ ಪ್ರದರ್ಶನಕಲೆಗೆ ಅತ್ಯಂತ ಹೆಚ್ಚಿನ ಪ್ರಸ್ತುತತೆ, ಹಾಗೂ ಸ್ವೀಕೃತಿ ತಾನಾಗಿಯೇ ಒದಗುತ್ತದೆ.

೪. ಅವು ಸಮಾಜದ ಯಾವುದೇ ವರ್ಗವನ್ನು ದೂರೀಕರಿಸುವುದಿಲ್ಲ. ಎಲ್ಲರಿಗೂ ಇದು ನಮ್ಮಿಂದಲೂ ಸಾಧ್ಯ ಎಂಬ ಭಾವನೆ ಮೂಡಿಸಬಲ್ಲ ಸಹಜ ಧಾಟಿ, ಸ್ವರೂಪ ಹಾಗೂ ತಂತ್ರಗಳನ್ನು ಅಳವಡಿಸಿಕೊಂಡಿದೆ. ವೈವಿಧ್ಯಮಯ ಲೋಕದೃಷ್ಟಿಗಳ ಅಭಿವ್ಯಕ್ತಿಗೆ, ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡುವ ತನ್ನ ವಿಕೇಂದ್ರೀಕೃತ ಸ್ವರೂಪದಿಂದಾಗಿ ಬಹುಮುಖಿ ಅಸ್ತಿತ್ವಗಳಿಗೆ (ಠಿಟuಡಿಚಿಟiಣಥಿ) ಅವಕಾಶ ಒದಗಿಸಿದೆ. ಎಗ್ಯಾಲಿಟೇರಿಯನ್ (ಇgಚಿಟiಣಚಿಡಿiಚಿಟಿ- ಸಮಾನತೆ) ದೃಷ್ಟಿಕೋನವನ್ನು ಆಧರಿಸಿರುವ ಜಾನಪದ ಪ್ರತಿಭಟನೆಯ ಸಾಧನವಾಗಿ, ಪ್ರತಿರೋಧದ ಸಂಕೇತವಾಗಿ ಕೂಡಾ ಬಳಸಲ್ಪಟ್ಟಿದೆ.

ಹೀಗೆ ಆದರ್ಶ ಸಂವಹನಕ್ಕೆ ಬೇಕಾದ ಎಲ್ಲಾ ಅಂಶಗಳನ್ನೂ ಒಳಗೊಂಡು ಸಂವಹನದ ಅನಂತ ಸಾಧ್ಯತೆಗಳನ್ನು ಜಾನಪದ ನಮ್ಮೆದುರು ತೆರೆದಿರಿಸಿದೆ. ಈ ಅಂಶವನ್ನು ಮನಗಂಡ ಸಮಕಾಲೀನ ರಂಗಭೂಮಿ ಜಾನಪದವನ್ನು ತನ್ನ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದರಲ್ಲಿ ಹಿಂಜರಿದಿಲ್ಲ. ಜಾನಪದದ ಉಳಿವು- ಬೆಳವಣಿಗೆಗಳ ಕುರಿತಾದ ಆತಂಕಗಳಿಗೆ ಉತ್ತರವನ್ನು ಈ ದಿಸೆಯಲ್ಲಿಯೇ ಕಂಡುಕೊಳ್ಳಬಹುದೆನಿಸುತ್ತದೆ.

ಜಂಬೋ ಸರ್ಕಸ್‌ನಲ್ಲಿ ಬಳಸಲ್ಪಡುವ ಸ್ಯಾಟಿನ್ ಸಾರಿ ಕ್ಲೈಂಬಿಂಗ್ ಕಲೆ ಟಿಮ್ ಸಪ್ಪ್‌ಲ್‌ರ ಇತ್ತೀಚಿನ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ನಲ್ಲಿ ಅದ್ಭುತ ರಂಗಕೌಶಲವಾಗಿ ಅರಳಿದ್ದು ಹೌದಾದರೂ, ಆಶ್ಚರ್ಯ ಹುಟ್ಟಿಸುವಂತಹದ್ದೇನಲ್ಲ. ಭಾರತೀಯ ರಂಗಭೂಮಿಯ ದಂತಕಥೆಯೆನಿಸಿದ ರತನ್ ಥಿಯಾಮ್‌ರಂತಹ ಪ್ರತಿಭಾನ್ವಿತ ನಿರ್ದೇಶಕರು ಡೊಳ್ಳು ಕುಣಿತವನ್ನು ತಮ್ಮದೇ ಆದ ಶೈಲಿಯಲ್ಲಿ ರಂಗದ ಮೇಲೆ ಅತ್ಯಂತ ಯಶಸ್ವಿಯಾಗಿ ಬಳಸಿಕೊಳ್ಳುತ್ತಾರೆ (ಋತುಸಂಹಾರ ನಾಟಕ). ಈ ಎರಡೂ ಉದಾಹರಣೆಗಳು ಆಯಾ ನಾಟಕದ ಅತ್ಯುತ್ಕೃಷ್ಟ ದೃಶ್ಯಗಳಾಗಿ ವಿಜೃಂಭಿಸಿದವು. ಇಂತಹ ಆಕರಗಳು (ಲಂಬಾಣಿಗಳ ಉಡುಗೆಯಿಂದ ತೊಡಗಿ ನಂದಿಕುಣಿತ, ಮಲ್ಲಗಂಬ…ಇತ್ಯಾದಿ..) ಜಾನಪದದ ಎಲ್ಲಾ ಕ್ಷೇತ್ರಗಳಲ್ಲೂ ಹೇರಳವಾಗಿ ಸಿಗುತ್ತವೆ.

ತನ್ನ ಮೂಲಸ್ವರೂಪವನ್ನು ಕಳೆದುಕೊಳ್ಳದೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳಿಗೆ ತನ್ನನ್ನು ಒಗ್ಗಿಸಿಕೊಂಡು ಹೋಗುವ ಯಾವುದೇ ಕಲೆ, ಸಂಪ್ರದಾಯ ಹೆಚ್ಚು ಕಾಲ ಉಳಿಯುತ್ತದೆ.

ಜಾನಪದ ರಂಗಭೂಮಿ ಗೆಲ್ಲುವುದು ಮುಖ್ಯವಾಗಿ ಬಹುಸಂಖ್ಯೆಯ ಕಲಾವಿದರು, ವೇಶಭೂಷಣ, ಮುಖವಾಡಗಳು, ಬಣ್ಣ, ಎತ್ತರದ ಧ್ವನಿ, ಸಂಯೋಜನೆ- ಇವುಗಳು ಕಟ್ಟಿಕೊಡುವ ದೃಶ್ಯ ವೈಭವ ಹಾಗೂ ಚುರುಕಾದ ಯೋಜಿತ ಆಂಗಿಕ ಚಲನೆಗಳಿಂದಾಗಿ. ಜಾನಪದದ ಈ ಅಂಶ ಸಮಕಾಲೀನ ರಂಗಭೂಮಿಯ ವೈಚಾರಿಕತೆ ಹಾಗೂ ವಾಚಿಕಾಭಿನಯದೊಡನೆ ಬೆರೆತಾಗ ನೋಡುಗರ ಕಣ್ಣು, ಬುದ್ಧಿ ಎರಡಕ್ಕೂ ಹಬ್ಬ !

ಸಮುದಾಯಗಳ ಆಚರಣೆ ಜೀವನ ವಿಧಾನ, ಹಾಗೂ ಅಗತ್ಯಗಳ ರೂಪಕವೆನಿಸಿರುವ ಜಾನಪದವು ಏಕರೂಪಿ ಸಂಸ್ಕೃತಿಯ (moಟಿoಛಿuಟಣuಡಿe) ದಾಳಿಗೆ ಹಾಗೂ ಸಾಂಸ್ಕೃತಿಕ ಅನನ್ಯತೆಯ ಹುಡುಕಾಟಕ್ಕೆ ಪ್ರತ್ಯುತ್ತರವಾಗಿ ಅತ್ಯಂತ ಚಲನಶೀಲವಾಗಿ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಾ ತನ್ನೆಲ್ಲಾ ವೈವಿಧ್ಯತೆಗಳೊಂದಿಗೆ ಮತ್ತೆ ತಲೆಯೆತ್ತಬೇಕಾಗಿದೆ.

Leave a Reply

*

code