ಅಂಕಣಗಳು

Subscribe


 

ನಾಟ್ಯಶಾಸ್ತ್ರಕಥನಮಾಲಿಕೆ-ಮೂವತ್ತಮೂರನೇ ಅಧ್ಯಾಯ-ಅವನದ್ಧ ವಾದ್ಯನಿರ್ಮಾಣ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

ಕಾವ್ಯ/ಸಾಹಿತ್ಯ-ಸಂಯೋಜನೆ : ಡಾ. ಮನೋರಮಾ ಬಿ.ಎನ್

ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)

 

ಭರತಮುನಿ- ಸಮಗ್ರವಿಶ್ವಕಾವ್ಯಮೀಮಾಂಸೆಗೆ ಚೂಡಾಮಣಿಯಂತಿರುವ ನಾಟ್ಯಶಾಸ್ತ್ರದ ರಚನಕಾರ. ಅಲಂಕಾರಶಾಸ್ತ್ರದ ಐತಿಹಾಸಿಕ ವಿಕಾಸಕ್ಕೆ ತಾಯಿಬೇರಾದ ಪುಣ್ಯಪುರುಷ. ಸೌಂದಂiiಮೀಮಾಂಸೆಗಳಿಗೆ ಆರ್ಷಮೂಲದ ಜೀವಸ್ರೋತಸ್ಸು. ಭಾರತೀಯ ಸೌಂದರ್ಯಶಾಸ್ತ್ರಸೌಧದ ಸ್ವರ್ಣಶಿಖರದಂತಿರುವ ರಸತತ್ತ್ವವನ್ನು ಧಾರೆಯೆರೆದ ಕಾರಣಪುರುಷ. ನಾಟ್ಯಮಂಡಪದ ಆದ್ಯ ಪ್ರವರ್ತಕ. ಭಾರತದೇಶವಷ್ಟೇ ಅಲ್ಲ, ಅಖಂಡ ಭೂಮಂಡಲದ ಸಾಂಸ್ಕೃತಿಕ, ಸಾಹಿತ್ಯಜೀವಿಗಳ ಪಿತಾಮಹ. ಬೇರೆ ಬೇರೆ ಕಾಲ, ದೇಶಕ್ಕೆ ತಕ್ಕಂತೆ ಸಾರ್ವಕಾಲಿಕವಾಗಿ ಕಲೆಯ ವಿಶಿಷ್ಟ ಮಾದರಿಗಳನ್ನು, ಸಾಧ್ಯತೆಗಳನ್ನು ಕಟ್ಟಿಕೊಟ್ಟ ಭರತರ್ಷಿ ಯತಾರ್ಥದಲ್ಲಿಯೂ ಕಲಾಸರಸ್ವತಿಯ ರಾಯಭಾರಿ. ಆತನ ವ್ಯಕ್ತಿತ್ವ, ಸೂತ್ರ, ಕರ್ತೃತ್ವ ಎಲ್ಲವೂ ಬಗೆದದ್ದು ತಾರೆ ಉಳಿದದ್ದು ಆಕಾಶ ಎಂಬ ಮಾತಿಗೆ ಅನ್ವರ್ಥ.

ಆದ್ದರಿಂದಲೇ ಭರತಮುನಿಯಿಂದ ಬರೆಯಲ್ಪಟ್ಟ ನಾಟ್ಯಶಾಸ್ತ್ರ ಭರತಸೂತ್ರವೆಂಬುದಾಗಿಯೂ ಪ್ರಚಲಿತ. ಕಲಾವಿಶ್ವಕೋಶ, ಸಂಸ್ಕೃತಿಸರ್ವಸ್ವಸಂಗ್ರಹವಾಗಿ, ಎಲ್ಲ ಕಾಲಕ್ಕೂ ಸಲ್ಲುವ ತತ್ವ-ಪ್ರಯೋಗನಿಧಿಯಾಗಿ, ಸಮಗ್ರ ದರ್ಶನಸಿದ್ಧಾಂತದ ಪ್ರತಿರೂಪವಾಗಿ ನಾಟ್ಯಶಾಸ್ತ್ರವು ಸರ್ವಕಾಲಕ್ಕೂ ಆದರಣೀಯ. ಭಾರತೀಯ ಸಂಸ್ಕೃತಿಯ ಸಮಗ್ರತೆಗೆ ಸಂಬಂಧಿಸಿದಂತೆ ನಾಟ್ಯಶಾಸ್ತ್ರದ ಮೌಲ್ಯ ಮಹೋನ್ನತವಾದದ್ದು. ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಮೊದಲಾದವನ್ನು ಕುರಿತು ಹೇಳದೇ ಉಳಿದ ವಿಷಯವೆಂಬುದು ಯಾವುದೂ ಅದರಲ್ಲಿಲ್ಲ. ನಾಟ್ಯಪ್ರಪಂಚವಷ್ಟೇ ಅಲ್ಲ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರದ ಪ್ರಥಮ ಕುಸುಮಗಳು ಕುಡಿಯೊಡೆದದ್ದು ಭರತನ ಬೊಗಸೆಯಲ್ಲಿ. ಹಾಗಾಗಿ ಕಾವ್ಯಲಕ್ಷಣಕಾರರಿಗೆಲ್ಲಾ ಭರತನೇ ಪ್ರಥಮಗುರುವಾಗಿ ವಂದ್ಯನಾಗಿದ್ದಾನೆ.

ಪ್ರಸ್ತುತ ಈ ನಾಟ್ಯಶಾಸ್ತ್ರಕಥನಮಾಲಿಕೆಯು ೩೬ ಅಧ್ಯಾಯದ ಪರ್ಯಂತ ಹಬ್ಬಿರುವ ನಾಟ್ಯಶಾಸ್ತ್ರದೊಳಗೆ ಬರುವಂತಹ ಭಾರತೀಯ ಸಂಸ್ಕೃತಿಯ, ನಾಟ್ಯಕಲೆಯ ಕುರಿತಾದ ಆಕರ್ಷಕ ಕಥೆಗಳನ್ನು ಪ್ರತೀ ಸಂಚಿಕೆಗೆ ನಿಮ್ಮ ಮುಂದೆ ಅನಾವರಣಗೊಳಿಸುತ್ತಾ ಸಾಗಲಿದೆ. ಅದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ನಡೆದ ನಾಟ್ಯಚಿಂತನ ಕಾರ್ಯಾಗಾರದ ಸಮಯದಲ್ಲಿ ಬರೆಯಲಾದ ನಾಟ್ಯಶಾಸ್ತ್ರಕಥೆಗಳ ಕಾವ್ಯಮಾಲಿಕೆ ಮತ್ತು ಕಥೆಯ ಅಧ್ಯಾಯದ ಸಂಕ್ಷಿಪ್ತ ವಿವರವನ್ನು ಮಹಾಮುನಿ ಭರತ ಎಂಬ ಕೃತಿಯಿಂದ ಆಯ್ದು ಪ್ರಕಟಿಸಲಾಗುತ್ತದೆ. ಇದು ಆಸಕ್ತ ಕಲಾವಿದರಿಗೆ, ನೃತ್ಯಸಂಯೋಜನೆಯ ಪ್ರತಿಭೆಯನ್ನಿಟ್ಟುಕೊಂಡು ಸಾಹಿತ್ಯಕ್ಕಾಗಿ ಅರಸುತ್ತಿರುವ ಗುರು-ಶಿಕ್ಷಕರಿಗೆ, ವಿದ್ಯಾರ್ಥಿಮಿತ್ರರಿಗೆ, ಚಿಣ್ಣರ ಕುತೂಹಲದ ಕಥಾಪ್ರಪಂಚಕ್ಕೆ, ಕಲಾಪ್ರೇಮಿಗಳಾದ ಸಹೃದಯ ಓದುಗರಿಗೆ ಒಳ್ಳೆಯ ರಸಾಹಾರವನ್ನು ಕೊಡಲಿದೆ ಎಂಬುದು ನಮ್ಮ ಅಭೀಪ್ಸೆ. ನಮ್ಮ ಆಶಯಕ್ಕೆ ತಾವೂ ಇಂಬುಕೊಡುತ್ತೀರಲ್ವಾ? -ಸಂ.

ನಾಲ್ಕನೇ ಅಧ್ಯಾಯದದ ಅಂತ್ಯಕ್ಕೆ ಅಭಿನಗುಪ್ತನೆಂಬ ಲಾಕ್ಷಣಿಕನು ಹೆಸರಿಸುವ ದಕ್ಷಯಜ್ಞ ಸಂಹಾರ ಮತ್ತು ಶಿವನ ಆ ಕಾಲದ ಪ್ರಲಯಸದೃಶವಾದ ತಾಂಡವನೃತ್ಯದ ಉಲ್ಲೇಖವಿದ್ದರೂ ಅದು ಮೂಲತಃ ಭರತನೇ ಹೇಳಿದ ಪ್ರಸಕ್ತಿಯೆಂದೆನ್ನಲು ಬರುವುದಿಲ್ಲ; ಪ್ರಕ್ಷಿಪ್ತವಷ್ಟೇ ಎನ್ನಬಹುದಾದ್ದರಿಂದ ಆ ಕತೆಯನ್ನು ಲಂಬಿಸಿ ಪ್ರಸ್ತುತ ೩೩ನೇ ಅಧ್ಯಾಯದ ಪುಷ್ಕರಾದಿ ವಾದ್ಯೋತ್ಪತ್ತಿಗಳ ಕಥಾಸನ್ನಿವೇಶಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತಿದೆ.

ಈ ಅಧ್ಯಾಯದಲ್ಲಿ ನೃತ್ಯ-ಸಂಗೀತ ಸಂದರ್ಭಕ್ಕೆ, ವಾಚಿಕಾಭಿನಯಕ್ಕೆ ಅಗತ್ಯವೆನಿಸುವ ಮೃದಂಗಾದಿ ಅವನದ್ಧ ವಾದ್ಯೋತ್ಪತ್ತಿಯ ಹಿನ್ನೆಲೆಯನ್ನು ಭರತನು ವಿವರಿಸುತ್ತಾ ಸ್ವಾತಿಯೆಂಬ ಗಂಧರ್ವನಿಂದ ವಾದ್ಯಶೋಧದ ಕಥೆಯನ್ನು ಇಲ್ಲಿ ಉಲ್ಲೇಖಿಸುತ್ತಾನೆ. ನಾಟ್ಯಕಾರ್ಯದಲ್ಲಿ ವಾದ್ಯವಾದನಕ್ಕೆ ನಿಯುಕ್ತಿಗೊಂಡು ಸಹಕರಿಸಿದ ಸ್ವಾತಿ ಎಂಬ ಗಂಧರ್ವನು ಹೇಗೆ ಅವನದ್ಧ ವಾದ್ಯಾದಿಗಳನ್ನು ರೂಪಿಸಿದ, ಅವನಿಗೆ ದೊರೆತ ಪ್ರಕೃತಿಯ ಪ್ರೇರಣೆ ಏನು ಎಂಬುದು ಈ ಕಥಾವಸ್ತುವಿನ ಸಾರಾಂಶ.

ದೇವಪೂಜೋಪಚಾರಕ್ಕೆ ನೀರು, ಹೂವುಗಳನ್ನು ತರಲೆಂದು ಒಮ್ಮೆ ಮಳೆಗಾಲದಲ್ಲಿ ಸರೋವರದ ಬಳಿಗೆ ತೆರಳುವ ಸ್ವಾತಿಯು ಮಳೆನೀರು ಬೇರೆ ಬೇರೆ ಹೂವಿನ ಪತ್ರದಂಚುಗಳಲ್ಲಿ ಬಿದ್ದು ಉಂಟುಮಾಡಿದ ಸೂಕ್ಷ್ಮಸದ್ದುಗಳನ್ನೇ ಕೇಳಿಸ್ಕೊಂಡು ಪ್ರಭಾವಿತನಾಗಿ ಮನೆಗೆ ಬಂದು ವೈವಿಧ್ಯಮಯ ವಾದ್ಯಗಳನ್ನು ನಿರ್ಮಾಣ ಮಾಡಿದ ಎನ್ನುತ್ತದೆ ನಾಟ್ಯಶಾಸ್ತ್ರ. ಅದರೊಂದಿಗೆ ವಿವಿಧ ವಾದ್ಯಪ್ರಕಾರಗಳು, ಅವುಗಳ ಲಯ-ಅಕ್ಷರಗಳು, ವಾದ್ಯಬಳಕೆಯ ಸಂದರ್ಭ, ನಿಯಮ, ವಾದ್ಯವಿಧಾನ, ವಾದ್ಯಪ್ರಹಾರ ಸಂಯೋಗ, ಸಂಯುಕ್ತವಾದನ, ಪಾತ್ರ-ಧ್ರುವಾ-ಪೂರ್ವರಂಗ-ನೃತ್ತಗಳನ್ನವಲಂಬಿಸಿ ವಾದನಕ್ರಮಪ್ರಕಾರಗಳು, ಪುರುಷ-ಸ್ತ್ರೀ ಪಾತ್ರಗಳಿಗಾಗಿ ವಾದನಕ್ರಮ ಮತ್ತು ಅಕ್ಷರ, ಅಂತರವಾದ್ಯಗಳು, ಮುಕ್ತಾಯವಿಧಿ, ಗಾಯಕ ವಾದಕರ ಸ್ಥಾನ ಮತ್ತು ಗುಣದೋಷಗಳು, ವಾದ್ಯಪ್ರತಿಷ್ಠಾಪನೆ-ವೈಶಿಷ್ಟ್ಯ, ಯತಿ-ಜಾತಿಸಾಮ್ಯಗಳು, ವಾದ್ಯ ತಯಾರಿಸುವ ಕ್ರಮವನ್ನೂ ವಿವರಿಸಲಾಗಿದೆ. ಒಟ್ಟಿನಲ್ಲಿ ಪ್ರಕೃತಿಯೊಂದಿಗಿನ ಸೂಕ್ಷ್ಮಸಂಬಂಧ, ಏಕಾಗ್ರತೆಯ ದೃಷ್ಟಿ ಹಲವು ಕಲಾಪರಿವೇಶಕ್ಕೆ ಅಗತ್ಯವಾದ ಸಂದರ್ಭಗಳನ್ನು ಕಟ್ಟಿಕೊಡುತ್ತದೆ ಎಂಬುದನ್ನು ಈ ಕಥಾನೀತಿಯಿಂದ ಅರ್ಥ ಮಾಡಿಕೊಳ್ಳಬಹುದು.

ಈ ಅಧ್ಯಾಯವನ್ನು ಗಮನಿಸಿದರೆ ಭರತಕಾಲಕ್ಕೂ ಮೃದಂಗ-ದರ್ದುರ-ಪಣವಗಳೆಂಬ ಪುಷ್ಕರವಾದ್ಯಗಳು ಮತ್ತು ಮುರಜ-ಝಲ್ಲರೀ-ಪಣವ-ಆಲಿಂಗ್ಯ-ಊರ್ಧ್ವಕ-ಅಂಕಿಕಗಳೆಂಬ ಚರ್ಮದಿಂದ ತಯಾರಿಸಿದ ಅವನದ್ಧವಾದ್ಯಗಳು, ಜಂಭಾ-ಡಿಂಡಿಮ-ದುಂದುಭಿ-ಭೇರಿ-ಪಟಹಗಳೆಂಬ ಭಾರೀ ಪಾತ್ರ-ಗಾತ್ರದ ಸದ್ದು ಮಾಡುವ ವಾದ್ಯಗಳೂ ಕೂಡಾ ನಾಟ್ಯಸಂದರ್ಭಕ್ಕೆ ಅವಶ್ಯವಾಗಿ ಬಳಕೆಯಾಗುತ್ತಿತ್ತು ಎಂಬುದನ್ನು ಕಂಡುಕೊಳ್ಳಬಹುದು. ಈ ವಾದ್ಯವಿಧಗಳ ಪೈಕಿ ಮೃದಂಗವು ಇಂದಿಗೂ ಪಾರಂಪರಿಕದೇಶೀನಾಟ್ಯ-ನೃತ್ಯಾದಿ ಸಂದರ್ಭಗಳಲ್ಲಿ ಬಹುವ್ಯಾಪಕವಾಗಿ ಬಳಕೆಯಲ್ಲಿರುವುದನ್ನು ಕಾಣಬಹುದಾಗಿದ್ದು; ಮೃದಂಗದೊಂದಿಗಿನ ನೃತ್ಯಸನ್ನಿವೇಶದ ಅಗತ್ಯ, ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.

 

(ಚತುರಶ್ರ ಅಥವಾ ಖಂಡ) ಪೂಜಾವಧಾನಕ್ಕೆ ಜಲ-ಪುಷ್ಪ ತರಲೆಂದು

ಸಲಿಲಸಂಚಯದೆಡೆಗೆ ಸ್ವಾತಿ ತೆರಳಿದನು

ವರ್ಷಕಾಲದ ಚೆಂದ ಧಾರೆಯಾಗಲು ಅಂದ

ಅವನಿ ಅರಳಲು ಮಿಂದು ಸೂಸಿ ಸೌಗಂಧ

(ಆಲಾಪನೆ/ಶಬ್ದನಿರ್ಮಾಣ)

 

ಪತ್ರದಂಚಿನ ಮೇಲೆ ಬಿದ್ದ ಹನಿಗಳ ಹಾಡು

(ಲಯದಲ್ಲಿ ದುಂದುಂ ದುಂದುಂ ಗುಂಗುಂಗುಂಗುಂ ಶಬ್ದ ಹೇಳುವುದು)

ನಾದಮಯ ವಾದ್ಯಸಮ ಮಧುರ ಗಂಭೀರ

 

ಪಣವದರ್ದುರಪಟಹಮೃದಂಗ ಆಲಿಂಗ್ಯ

ಮುರಜಝಲ್ಲರೀ ಸಹಿತ ಅವನದ್ಧದಿ ವಂದ್ಯ (ನುಡಿಸಾಣಿಕೆಯ ಜತಿ/ಗತಿ)

 

ಈ ನಿಸರ್ಗದ ನಡೆಗೆ ಜೊತೆಸೇರಿದರೆ ಬದುಕು

ನಟನದ್ವಿವೇಕವದು ತೋರುವುದು ಬೆಳಕು

 

(ಮುಂದಿನ ಮಾಲಿಕೆಯಲ್ಲಿ ವೃತ್ತಿವಿಕಲ್ಪ…ನಿರೀಕ್ಷಿಸಿ)

Leave a Reply

*

code