ಅಂಕಣಗಳು

Subscribe


 

ನೃತ್ಯದಲ್ಲಿ ಕಲ್ಪನೆ ಮತ್ತು ವಾಸ್ತವವಾದ

Posted On: Monday, October 20th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


-ಮನೂ ’ಬನ’

ಪ್ರೇರಣೆ : ’ಮಂಥನ’ ಕಾರ್ಯಕ್ರಮ

ಕಲ್ಪನೆ ಮತ್ತು ವಾಸ್ತವವಾದ ಎಂಬೀ ಎರಡು ಶಬ್ದಗಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅದರದ್ದೇ ಆದ ವ್ಯಾಖ್ಯೆಗಳಿವೆ. ಯಾವುದು ಇದೆಯೋ, ಯಾವುದು ಇತ್ತು ಎನ್ನಲಾಗಿತ್ತೋ, ಯಾವುದು ಇರಬಹುದೋ, ಯಾವುದು ಇರಬೇಕು ಅಂತ ಅಂದುಕೊಳ್ಳುತ್ತೇವೆಯೋ..; ಹೀಗೆ ಇದ್ದ ಹಾಗೆ, ಇರುವ ಹಾಗೆ, ಇದೆ ಎಂದು ಹೇಳುವ ಹಾಗೆ, ಹೇಗೆ ಇರತಕ್ಕದ್ದೋ ಹಾಗೆ,..ಒಂದನ್ನೊಂದು ಅನುಕರಿಸುವುದೇ ವಾಸ್ತವ ಎನ್ನುತ್ತಾನೆ ಅರಿಸ್ಟಾಟಲ್. ಅಷ್ಟಕ್ಕೂ ವಾಸ್ತವದ ಪರಿಕಲ್ಪನೆ ಆಧುನಿಕ ಕಾಲದಲ್ಲಿ ಗಟ್ಟಿಗೊಂಡದ್ದು ಪಶ್ಚಿಮದ ಕೈಗಾರಿಕಾ ಕ್ರಾಂತಿಯ ನಂತರ. ಎಲ್ಲವೂ ಕೂಡಾ ವಿಜ್ಞಾನದ ರೀತಿಯಲ್ಲಿಯೇ ಪರಿಶೀಲನೆಗೊಳಪಡಿಸಿ ಪ್ರಯೋಗಕ್ಕೆ ಒಳಪಟ್ಟು ಸತ್ಯವೆಂದು ಸಾಬೀತಾಗಬೇಕು. ಹಾಗಾಗಿ ವಾಸ್ತವವಾದ ಎಂದರೆ ಇಂದ್ರಿಯಾತೀತ, ಅಂತರ್ದೃಷ್ಟಿ ಕಾಣ್ಕೆಗಳು ವಾಸ್ತವ ಅಲ್ಲ ಎಂಬ ಚಿಂತನೆ ಹುಟ್ಟಿಕೊಂಡದ್ದು!

ಹಾಗಾದರೆ ನೃತ್ಯದಲ್ಲಿ ನಾವು ಬಿಂಬಿಸುವ ಅಷ್ಟೂ ಘಟನೆಗಳು ಕಾಲ್ಪನಿಕವೇ? ಕಲ್ಪನೆಯೇ? ವಾಸ್ತವ ಎಂಬುದಿದ್ದರೆ ಅದು ಯಾವುದು? ನೃತ್ಯ ವಾಸ್ತವವನ್ನು ತೋರಿಸುವ ಮಾಧ್ಯಮವಾಗಬಾರದೇ? ಪುರಾಣದ ಘಟನೆಗಳನ್ನು ಅನುಕರಿಸಿ ತೋರಿಸುವ ರೀತಿ ನಮ್ಮ ವಸ್ತುಸ್ಥಿತಿಯನ್ನು ಮರೆಸುವ ಪ್ರಯತ್ನವೇ? ಹಾಗಾದರೆ ವಸ್ತುಸ್ಥಿತಿಯನ್ನು ಹೇಳುವ ಪ್ರಯತ್ನ ಹೇಗೆ ಸಾಕಾರವಾದೀತು? ಪ್ರೇಕ್ಷಕ ಯಾವುದನ್ನು ಇಷ್ಟಪಡುತ್ತಾನೆ- ಕಲ್ಪನೆಯನ್ನೋ, ವಾಸ್ತವವನ್ನೋ ಅಥವಾ ಕಲ್ಪನೆಯೊಳಗಿನ ವಾಸ್ತವವನ್ನೋ? ಅಷ್ಟಕ್ಕೂ ಕಲೆ ಎಂಬುದು ವಿಜ್ಞಾನ ಅಲ್ಲ ಅನ್ನುತ್ತೀರಾ? ಯೋಚಿಸೋಣ…

ಭರತನ ನಾಟ್ಯಶಾಸ್ತ್ರದಲ್ಲಿ ಅನುಕಾರ್ಯರು ಮತ್ತು ಅನುಕರ್ತರು ಎಂಬೆರಡು ಪರಿಕಲ್ಪನೆಯಿದೆ. ಅನುಕಾರ್ಯರು ಎಂದರೆ ಪುರಾಣದಲ್ಲಿ ಬರುವ ಪಾತ್ರಗಳು. ಉದಾ: ರಾಮ, ಕೃಷ್ಣ, ದುರ್ಯೋಧನ ಇತ್ಯಾದಿ…, ಅನುಕರ್ತರು ಎಂದರೆ ಆ ಪಾತ್ರಗಳನ್ನು ನಟಿಸಿ ತೋರಿಸುವವರು, ಅಂದರೆ ಕಲಾವಿದರು. ಆ ಮೂಲಕ ಆಯಾಯ ಕಾಲದಲ್ಲಿ ಆದ ಮತ್ತು ಆಗುತ್ತಿರುವ ವಸ್ಥುಸ್ಥಿತಿಯನ್ನು ಕಲಾವಿದ ಅನುಕರಿಸಿ ತೋರಿಸುತ್ತಾನೆ. ಆಗ ಅಲ್ಲಿ ಉತ್ಪನ್ನವಾಗುವ ರಸ, ಸ್ಫುರಿಸುವ ಭಾವ, ಕಲಾವಿದನಿಗೆ ಮತ್ತು ವೀಕ್ಷಕನಿಗೆ ಹುಟ್ಟುವ ಸೃಷ್ಟಿಶೀಲತೆ, ಚಿಂತನೆ, ಹೊಸತಿನ ಪರಿಭಾಷೆ ಎಲ್ಲವೂ ವಾಸ್ತವವನ್ನು ಸಮೀಪಿಸುತ್ತದೆ. ಅದರ ಮೂಲಕ ವೀಕ್ಷಕ ಮತ್ತು ಕಲಾವಿದ ತಮ್ಮನ್ನು ತಾವು ಪರಾಮರ್ಶೆ ಮಾಡಿಕೊಳ್ಳುವ, ಮತ್ತಷ್ಟು ವಾಸ್ತವದ ಕಡೆಗೆ ದೃಷ್ಟಿ ಹರಿಸುವ, ಅದರಲ್ಲೇ ಮುಳುಗಿಹೋಗುವ ಪರಿ ಆ ನೃತ್ಯ ಸಮಯದ ವಾಸ್ತವ ಎನಿಸಿಕೊಳ್ಳುತ್ತದೆ. ಜೊತೆಗೇ ನೃತ್ಯವೂ ಬದುಕಿನ ವಸ್ತುಗಳನ್ನು ಚಿತ್ರಿಸುತ್ತ ಸಾಗುತ್ತವೆ. ಹೀಗೆ ಕಲ್ಪನೆಯೋ ಅಥವಾ ದಾಖಲಾದ ಇತಿಹಾಸವೋ ಅನುಕರ್ತರ ಮೂಲಕ ಪ್ರೇಕ್ಷಕನು ತನಗೆ ಕಂಡ ಮತ್ತು ಕಾಣುವ ವಸ್ತುಸ್ಥಿತಿಯನ್ನು ಸಮೀಪಿಸುತ್ತಾನೆ ಎನ್ನುವುದು ಸುಸ್ಪಷ್ಟ. ಇಲ್ಲಿ ವಾಸ್ತವವೇ ಆನಂದ. ಮತ್ತು ಕಲೆಯೊಂದರ ಮೂಲ ಗುರಿಯೂ ಕೂಡಾ ಅದೇ ಹೌದು. ಈ ಮೂಲಕ ಇಂದ್ರಿಯಗ್ರಾಹ್ಯವಾದದ್ದಷ್ಟೇ ವಾಸ್ತವ ಅಲ್ಲ ಎಂಬುದನ್ನು ಸಾಬೀತುಪಡಿಸುವುದಿದ್ದರೆ ಅದು ಕಲೆ.

ಸಂಸ್ಕೃತಿ ಬೆಳೆದು ಬಂದ ಹಾಗೆ ಈ ವಾಸ್ತವ ಮತ್ತು ಕಲ್ಪನೆಯ ಪರಿಕಲ್ಪನೆಯೂ ಬದಲಾಗುತ್ತಲಿದೆ. ಅದರಲ್ಲೂ ನೃತ್ಯದಲ್ಲಿ ಮಾಂತ್ರಿಕ ವಾಸ್ತವವಾದದ ಪ್ರಭಾವವೇ ಹೆಚ್ಚು. ಚಂದಮಾಮದ ಕಥೆಗಳಂತಿರುವ ಕಥೆಗಳಿಗೆ ನೃತ್ಯ ಮತ್ತು ಅದರ ಅಭಿನಯವು ಜೀವ ನೀಡುತ್ತದೆ. ಅಷ್ಟಕ್ಕೂ ಕಲ್ಪನೆಯ ಸಾಂಗತ್ಯದಲ್ಲಿ ವಾಸ್ತವವನ್ನು ಮುಟ್ಟಲು ಸಾಧ್ಯ ಎಂಬುದನ್ನು ಕಲಾ ಜಗತ್ತು ತೋರಿಸಿಕೊಟ್ಟಿದೆ ! ಕಲ್ಪನೆಯ ಮೂಸೆಯಲ್ಲಿಯೂ ವಾಸ್ತವದ ದರ್ಶನ ಸಾಧ್ಯ. ಅಂತೆಯೇ ವಾಸ್ತವವ ದರ್ಶನದಲ್ಲಿಯೂ ಮತ್ತೊಂದಷ್ಟು ಕಲ್ಪನೆಗಳನ್ನು ಹೆಣೆಯಲು ಸಾಧ್ಯ. ಇಂದ್ರಿಯಗ್ರಹಿಕೆಯಾಗಿ ಕಲ್ಪನೆ ದಕ್ಕುವುದಾದಲ್ಲಿ ಅದು ಕಲೆಯಲ್ಲಿಯೇ ಸರಿ ! ಅಂತೆಯೇ ಇಂದ್ರಿಯಗ್ರಾಹ್ಯವಾಗದೇ ವಾಸ್ತವವನ್ನು ಮುಟ್ಟುವುದಿದ್ದರೂ ಅದು ಕಲೆಯಲ್ಲಿಯೇ?

ಆ ಮೂಲಕ ನಮ್ಮನ್ನು ನಾವು ದರ್ಶಿಸಿಕೊಳ್ಳುವ ರೀತಿ ಅಸಾಧಾರಣ. ಅಷ್ಟಕ್ಕೂ ಹಲವು ಬಾರಿ ಇಂತಹ ಕಲ್ಪನೆ ಮತ್ತು ವಾಸ್ತವವನ್ನು ಒಂದು ಮಾಡಿಕೊಂಡು ನೀಡಿದ ಜಾನಪದ ನೃತ್ಯ-ಸಂಗೀತಗಳು ಕಲೆಯ ಅಸಾಧ್ಯ ಸಾಧ್ಯತೆಗಳನ್ನು ಪರಿಚಯಿಸಿವೆ. ಆದರೆ ಇವೆರಡರ ಬಾಂಧವ್ಯ, ಸ್ವಾರಸ್ಯ ನಿರೂಪಿಸುವಿಕೆ ಈಗೀಗ ವಿರಳವಾಗುತ್ತಿದೆ.

ಪ್ರತಿಯೋರ್ವರ ವಾಸ್ತವಗಳೂ ವಿಭಿನ್ನ. ನೋಡುವ ಬಗೆಯಲ್ಲಿ ಅವರವರಿಗೆ ಅನ್ನಿಸಿದ ವಾಸ್ತವ ಬದಲಾಗುತ್ತಿರುತ್ತದೆ. ಹಾಗಾಗಿ ವಾಸ್ತವ ಎಂಬುದಕ್ಕೆ ಚೌಕಟ್ಟಿಲ್ಲ. ಕೆಲವೊಮ್ಮೆ ನಾವು ರೂಢಿಸಿಕೊಂಡು ಬಂದ ಸತ್ಯಗಳೇ ವಾಸ್ತವ ಆಗಿರುವುದು ಬಹುಪಾಲು ಮಟ್ಟಿಗೆ ನಿಜ. ಯಕ್ಷಗಾನ ಮತ್ತು ತಾಳಮದ್ದಳೆಯಲ್ಲೂ ಕಲಾವಿದರು ಪ್ರತೀ ಪಾತ್ರಕ್ಕೂ ಪ್ರತಿದಿನವೂ ಹೊಸಹೊಸ ವ್ಯಾಖ್ಯಾನ ಕೊಡುತ್ತಲೇ ಸತ್ಯದ ಪರಿಕಲ್ಪನೆಯನ್ನು ತಮ್ಮ ತಮ್ಮ ನಿಲುವುಗಳಿಂದ ನೋಡಿಕೊಳ್ಳುತ್ತಾ ಸೃಷ್ಟಿಶೀಲತೆಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತಾರೆ. ಹಾಗಾಗಿ ಅದೊಂದು ನಿರಂತರ ಬದಲಾಗುವಿಕೆ ! ವಾಸ್ತವ ವ್ಯಕ್ತಿನಿಷ್ಟವಾದದ್ದೂ ! ಮಾತ್ರವಲ್ಲ, ಪ್ರಾಮಾಣಿಕವಾಗಿ ಬದುಕಿನ ವಿವಿಧ ಮುಖಗಳನ್ನು ಅದರ ಸಮಗ್ರತೆಯೊಂದಿಗೆ, ಸಂಕೀರ್ಣತೆಯೊಂದಿಗೆ ಹಿಡಿದಿಡುವ ಜೀವನ ದೃಷ್ಟಿ.

ಅಷ್ಟಕ್ಕೂ ವಾಸ್ತವ ಎಂದಾಕ್ಷಣ ಇದ್ದನ್ನು ಇದ್ದ ಹಾಗೆ, ಸಂಪೂರ್ಣ ಎಲ್ಲಾ ವಿವರಗಳನ್ನು ಹೇಳುವ ಅಗತ್ಯವಿದೆಯೇ? ಇಲ್ಲ. ಎಲ್ಲವನ್ನೂ ವಾಚ್ಯವಾಗಿಸುವುದರಲ್ಲಿ ಆನಂದದ ಅನುಭೂತಿ ದಕ್ಕಲು ಸಾಧ್ಯವೇ? ಎಲ್ಲವನ್ನೂ ವಾಚ್ಯವಾಗಿಸಿದರೆ ಪ್ರೇಕ್ಷಕನ ಸಾಮರ್ಥ್ಯವನ್ನು ನಿಂದಿಸಿದ ಹಾಗೆ ಆಗುವುದಿಲ್ಲವೇ? ಹಾಗಾಗಿಯೇ ಕಲಾವಿದನು, ವಾಸ್ತವದ ಚಿತ್ರಣವನ್ನು ತುಂಬಿಸಿಕೊಳ್ಳಲಿಕ್ಕೆ ಪ್ರೇಕ್ಷಕನಿಗೆ ಅವಕಾಶ ಮಾಡಿಕೊಡಬೇಕು. ಜೊತೆಗೆ ಸಮರ್ಥ ಪ್ರೇಕ್ಷಕನಷ್ಟೇ ಕಲಾವಿದ ಹೇಳದೇ ಬಿಟ್ಟದ್ದನ್ನು ತುಂಬಿಸಿಕೊಳ್ಳಲಿಕ್ಕೆ ಶಕ್ತನಾಗಿರುತ್ತಾನೆ. ಆದರೆ ಎಲ್ಲಾ ನೃತ್ಯ ಪ್ರದರ್ಶನಗಳಲ್ಲಿ ಇಂತಹ ಛಾಯೆ ಇರುತ್ತದೆ ಎಂದು ಹೇಳಲಾಗದು. ಇಂದಿನ ಬಹುತೇಕ ನೃತ್ಯ ಪ್ರದರ್ಶನಗಳಲ್ಲಿ ಅನುಭವಿಸಿ ಮಾಡುವ ಪ್ರತಿಭೆ ಮರೆಯಾಗುತ್ತಿರುವುದರಿಂದ ಮತ್ತು ಗಿಣಿಪಾಠ ಒಪ್ಪಿಸುವ ಪರಿಪಾಠವೇ ಚಾಲ್ತಿಯಲ್ಲಿರುವುದರಿಂದ ಸೃಷ್ಟಿಶೀಲತೆಯ ಚಲನೆ, ಅದರೊಳಗಿನ ವಾಸ್ತವಗಳು ಸ್ವತಃ ಕಲಾವಿದನಿಗೆ ಅರಿವಾಗುವುದಿಲ್ಲ. ಆ ಮೂಲಕ ರಂಗದಲ್ಲಿ ತಾನು ಏನನ್ನು ಸಂವಹಿಸಬೇಕು ಎಂಬ ಪ್ರಜ್ಞೆ ಇಲ್ಲದೇ ಪ್ರೇಕ್ಷಕನಿಗೂ ಅಂತಹ ವಾಸ್ತವದ ಆನಂದ ಅರಿವು ಆಗುವುದಿಲ್ಲ. ನಮ್ಮ ನಮ್ಮ ಸತ್ಯಗಳನ್ನು ಕಂಡುಕೊಳ್ಳುವಲ್ಲಿ, ನಮ್ಮಲ್ಲಿ ಸುಪ್ತವಾಗಿ ಅಡಗಿರುವುದನ್ನು ನೆನಪು ಮಾಡಿಕೊಳ್ಳುವಲ್ಲಿನ ವಾಸ್ತವ ಇಲ್ಲಿ ಮರೆಯಾಗುತ್ತದೆ.

ತಾನು ಬದುಕುವ ಜೀವನದ ಕುರಿತು ಪ್ರೇಕ್ಷಕನಿಗೆ ಇನ್ನೊಂದು ಸಲ ನೋಡಿಕೊಳ್ಳಬೇಕು ಅಂತಾದಲ್ಲಿ ಅದು ವಾಸ್ತವ ಮತ್ತು ಅಂತಹ ಪ್ರದರ್ಶನಗಳೊಳಗೆ ಕಲಾವಿದ ಮಾತ್ರವಲ್ಲದೆ ಪ್ರೇಕ್ಷಕನೂ ಮುಳುಗಿ ಏಳುತ್ತಾನೆ. ನಮ್ಮಲ್ಲಿ ಯಾವುದು ಬೆಳೆಯುತ್ತಾ ಹೋಗುವುದೋ ಅದು ವಾಸ್ತವ. ಅಂತಹ ಸೃಷ್ಟಿಶೀಲತೆ ಕಲೆಯಲ್ಲಿ ನಿರಂತರ ಇದ್ದಾಗಲೇ ಜೀವನವನ್ನು ಮತ್ತೊಮ್ಮೆ, ಮಗದೊಮ್ಮೆ ನಾವು ನೋಡಿಕೊಂಡೇವು. ಆದ್ದರಿಂದ ವಾಸ್ತವವು ನೆನಪಾಗಿ ಬೆಳೆಯತಕ್ಕ ಸಂಗತಿ ; ಮತ್ತು ಆ ನೆನಪನ್ನು ಕಲಾವಿದನು ಮತ್ತೆ ಜನತೆಯು ನೋಡುವಂತೆ ಮುಂದಿಟ್ಟರೆ ಅದು ವಾಸ್ತವ. ಆದ್ದರಿಂದ ವಾಸ್ತವದಲ್ಲಿ ಅಡಗಿರುವ ಅರಿವನ್ನು, ಕಲ್ಪನೆಯಲ್ಲಿ ಅಡಗಿರುವ ಆನಂದವನ್ನು ಕೊಡಲು ಶಕ್ತನಾದರೆ ಕಲಾವಿದ ಪರಿಪೂರ್ಣನೆನಿಸಿಕೊಂಡಾನು.

1 Response to ನೃತ್ಯದಲ್ಲಿ ಕಲ್ಪನೆ ಮತ್ತು ವಾಸ್ತವವಾದ

  1. Dr.Udaya shankar

    Both the web site and the printed magazine have become very attractive ..The contents and presentation of pure academic things in the most palatable manner… Congrats to entire bhramari team …

    Few suggestions:

    1.The cover page illustration and the back page photographs can be related with the main article of the issue..For example,the photograph on the cover is related with the antapura geethe of DVG…So, there can be a few words of explanation of the photograph in the first page or in the main article.

    2. Instead of the word ANNOUNCEMENTS you can highlight the content of that announcement in the print edition pg 5, 16, 21

    3. MANJIRA, NARTANA SURABHI, DARPANA were most interesting write ups in the magazine.
    I liked all of them very much

    Best wishes

    Udaya Shankar

Leave a Reply

*

code