ಅಂಕಣಗಳು

Subscribe


 

ಪ್ರಮದೆಯ ಪ್ರೇರಣೆಯ ಪಥ-ಯಕ್ಷಗಾನ ತಾಳಮದ್ದಳೆ…

Posted On: Thursday, August 27th, 2015
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕಿ

ಕಳೆದ ೬ ತಿಂಗಳಿನಿಂದ ನೂಪುರ ಭ್ರಮರಿಯ ಸಂಚಿಕೆಗಳನ್ನು ಅನಿವಾರ್ಯ ಕಾರಣಗಳಿಂದ ತಮ್ಮ ಕೈಗೀಯಲಾಗದ್ದಕ್ಕೆ ಪ್ರಥಮತಃ ಕ್ಷಮೆ ಕೋರುತ್ತಿದ್ದೇನೆ. ಹಾಗೆ ನೋಡಿದರೆ ಈ ವರುಷ ಆಯೋಜನೆ ಮತ್ತು ಪುಟವಿನ್ಯಾಸದಲ್ಲಿ ಆದ ತೊಂದರೆಗಳಿಂದ ವಾರ್ಷಿಕ ಸಂಚಿಕೆಯನ್ನೂ ಹೊರತರಲಾಗದ್ದಕ್ಕೆ ಖಂಡಿತಾ ಬೇಸರವಿದೆ. ಆದರೆ ಗುಣಮಟ್ಟದ ಬರೆಹಗಳ ವಿನಾ ನಾಮಮಾತ್ರಕ್ಕೆ ವಿಶೇಷಸಂಚಿಕೆಯನ್ನು ಹೊರತರುವುದರಲ್ಲಿ ನೂಪುರ ಭ್ರಮರಿಯ ಸಂಪಾದಕ ವರ್ಗಕ್ಕೆ ಮೊದಲಿನಿಂದಲೂ ಆಸಕ್ತಿಯಿಲ್ಲ. ತಡವಾದರೂ ಅವಸರಿಸುವ ಗೋಜಿಗೆ ಹೋಗುವವರಲ್ಲದ ಕಾರಣ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಅಥವಾ ಆರ್ಥಿಕ/ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಜಾಯಮಾನದ್ದಲ್ಲ ಪತ್ರಿಕೆಯದು. ಅದರಲ್ಲೂ ಸಂಶೋಧನಾ ಲೇಖನಗಳಾದರಂತೂ ವಿಶೇಷ ತಜ್ಞವರ್ಗದ ತೀರ್ಮಾನ, ಸಲಹೆಸೂಚನೆ ಪಡೆಯದೇ ಪ್ರಕಟಿಸಲು ಮನ ಮಾಡುವವರಲ್ಲ. ಕಾರಣ, ವರುಷಗಳು ಕಳೆದರೂ ಪತ್ರಿಕೆಯನ್ನು ಜತನದಿಂದ ಕಾಪಿಟ್ಟು ಓದಿ, ಮನನ ಮಾಡಿಕೊಳ್ಳುವಂತೆಯೋ ಅಥವಾ ಅಧ್ಯಯನಕ್ಕೆ ಸಂಗ್ರಹಯೋಗ್ಯವಾಗಿಯೋ ಮೂಡಿಬರಬೇಕೆಂಬುದು ನಮ್ಮಯ ಅಭಿಮತ. ಹಾಗಾಗಿ ಎಷ್ಟೋ ಲೇಖನಗಳು ಕಳೆದ ಕೆಲವು ತಿಂಗಳಿನಿಂದ ಪುನರ್‌ವಿಮರ್ಶೆಗೆ ಒಳಪಡುತ್ತಲೇ ಇವೆ. ಕಾಪಿ-ಪೇಸ್ಟ್ ಸಂಸ್ಕೃತಿಯರಲ್ಲದ ಕಾರಣ ಇನ್ನೊಂದು ಮೂಲದಿಂದ ಒದಗುವ ಕನ್ನಡ-ಇಂಗ್ಲೀಷ್ ಲೇಖನಗಳನ್ನು ಭಟ್ಟಿಯಿಳಿಸುವುದು ನಮ್ಮಿಂದಾಗದ ಕೆಲಸ. ಒಟ್ಟಿನಲ್ಲಿ ಪತ್ರಿಕೆ ಪುಟ್ಟ ಗಾತ್ರದ್ದಾದರೂ ಸರಿಯೇ, ಬರೆಯುವ ಪ್ರತೀ ಅಕ್ಷರಕ್ಕೂ ಜವಾಬ್ದಾರರಾಗಿರಬೇಕು ಎಂಬ ಹಪಹಪಿಕೆಯೇ ನಮ್ಮ ಕಾಳಜಿ. ಆದ್ದರಿಂದಲೇ ಹತ್ತನೇ ವರುಷಕ್ಕೆ ಕಾಲಿಡುವ ಸಂದರ್ಭದಲ್ಲಿ ದಶಮಾನೋತ್ಸವದ ವಿಶೇಷ ಸಂಚಿಕೆಯನ್ನು ಈ ವರುಷದ ಕೊರತೆಯಲ್ಲಿ ಒದಗಿದ ಸಂಚಿಕೆಗಳ ಅಕ್ಷರಬಡ್ಡಿ ಸಮೇತ ನಿಮ್ಮ ಕೈಗಿಡಲಿದ್ದೇವೆ.

ನಿಮ್ಮ ಅವಗಾಹನೆಗೆ ಬಂದಂತೆ ಸಂಪಾದಕ ಮಂಡಳಿಯ ಬಹುತೇಕ ಕೆಲಸಗಳು ಬಹಳಷ್ಟು ಸಲ ಏಕವ್ಯಕ್ತಿಪ್ರಯತ್ನವೇ ಆಗುವ ಸಂದರ್ಭದಲ್ಲಿ ಕೆಲವೊಮ್ಮೆ ಅನಿವಾರ್ಯ ಪ್ರಸಂಗಗಳು, ಆರ್ಥಿಕ ಸಂಕಷ್ಟಗಳು ಎದುರಾದಾಗ ಕೊಂಚ ತಡವಾಗುವುದೋ ಅಥವಾ ಎರಡು ಮೂರು ಸಂಚಿಕೆಗಳು ಒಟ್ಟಾಗಿ ತಲುಪುವುದೋ ಆಗಿಯೇ ಆಗುತ್ತದೆ. ಅದೂ ಕೂಡಾ ಮೊದಲ ೭ ವರುಷಗಳಲ್ಲಿ ಒಂದೂ ಸಂಚಿಕೆಯನ್ನು ತಪ್ಪದೇ ಪ್ರಕಟಿಸಿ ಕಳೆದ ವರುಷದಿಂದಷ್ಟೇ ಇಂಥಾ ಅನಿವಾರ್ಯ ಸಂದರ್ಭಗಳನ್ನು ಎದುರಿಸುತ್ತಿದ್ದೇ ಎಂದಾದರೆ ಪತ್ರಿಕೆಯ ಬದ್ಧತೆ, ನಿಷ್ಠೆ ನಿಮಗೆ ಖಂಡಿತಾ ಅರ್ಥವಾಗಿರುತ್ತದೆ. ಹಾಗಾಗಿ ಓದುಗರಾದ ತಾವು ತಾಳ್ಮೆಯಿಂದ ಸಾವರಿಸಿಕೊಳ್ಳುತ್ತಿದ್ದೀರಿ ಎಂಬ ವಿಶ್ವಾಸದಲ್ಲಿ ಮುನ್ನಡೆಯುತ್ತಿದ್ದೇವೆ. ಅಷ್ಟಕ್ಕೂ ನಮ್ಮ-ನಿಮ್ಮಯ ಬಂಧ ಕೇವಲ ಚಂದಾದಾರಿಕೆಯಲ್ಲಷ್ಟೇ ಉಳಿದಿಲ್ಲ. ಬದಲಾಗಿ ಅಕ್ಷರಬಾಂಧವ್ಯವಾಗಿ ರೂಪುಗೊಂಡು ೯ ವರುಷಗಳೇ ಕಳೆಯಿತಲ್ಲ ! ಅದಕ್ಕೆಂದೇ ಕಾತರರಾಗಿ ನೂಪುರ ಭ್ರಮರಿಯನ್ನು ಓದಲು ಹಾತೊರೆಯುವ ನಿಮ್ಮ ಮನದ ಮಾತು ನಮ್ಮ ಅಂಗಳದಲ್ಲಿ ಸದಾ ಕೇಳಿಸುತ್ತದೆ. ಈ ಪ್ರೀತಿಗೆ ನಾವು ಎಂದೆಂದಿಗೂ ಋಣಿಗಳು. ಹಾಗಾಗಿ ಈ ಸಲ ಕಳೆದ ೩ ಸಂಚಿಕೆಗಳನ್ನು ಒಟ್ಟಾಗಿಸಿ ನಿಮ್ಮ ಕೈಯಲಿಡುತ್ತಿದೇವೆ. ಬಹುಷಃ ಮುಂದಿನ ೨ ಸಂಚಿಕೆಗಳೂ ಇದೇ ರೂಪದಲ್ಲಿಯೇ ನಿಮಗೆ ಒದಗಬಹುದು. ಬೇಸರಿಸದೆ ಸಹಕರಿಸಿ, ಅಕ್ಷರಪಯಣಕ್ಕೆ ಕೈಜೋಡಿಸಿ ಹಾರೈಸಬೇಕಾಗಿ ವಿನಂತಿ.

 

ಈ ಒಂದುವರುಷದ ಅವಧಿಯೊಳಗೆ ನಮ್ಮಯ ಓದುಗಮಿತ್ರರ ಪೈಕಿ ಹೆಸರಾಂತ ಚಲನಚಿತ್ರ ನಟ, ಭರತನಾಟ್ಯ ಕಲಾವಿದ ಡಾ.ಶ್ರೀಧರ್ ಅವರಿಗೆ ಹಂಪಿ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿ ಸಂದಿದೆ. ಅಂತೆಯೇ ವಿದ್ಯಾ ಅವರಿಗೆ ಜೈನ್ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿ, ನಮ್ಮ ಮಾರ್ಗದರ್ಶಕರಾದ ಶತಾವಧಾನಿ ಡಾ.ಆರ್. ಗಣೇಶರಿಗೆ ದೇರಾಜೆ ಶತಮಾನೋತ್ಸವ ಪುರಸ್ಕಾರ, ಸನ್ಮಿತ್ರ ಡಾ. ಸುಧೀರ್ ಕುಮಾರ್ ಅವರಿಗೆ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಲಭ್ಯವಾಗಿದೆ. ಅಂತೆಯೇ ಡಾ.ಶೋಭಾ ಶಶಿಕುಮಾರ್, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕೊಳಲು ವಿದ್ವಾನ್ ವೇಣುಗೋಪಾಲ್‌ರನ್ನೂ ಒಳಗೊಂಡಂತೆ ಹಲವು ಆತ್ಮೀಯರಿಗೆ ಪ್ರಶಸ್ತಿ-ಪುರಸ್ಕಾರ-ಬಿರುದುಗಳು ಪ್ರಾಪ್ತವಾಗಿವೆ. ಅವರೆಲ್ಲರ ಭವಿತವ್ಯ ಮತ್ತಷ್ಟು ಪ್ರಕಾಶಿಸಲಿ ಎಂಬ ಹಾರೈಕೆಯೊಂದಿಗೆ ಪ್ರಾಂಜಲವಾದ ಅಭಿನಂದನೆಗಳನ್ನು ಪತ್ರಿಕೆ ಮತ್ತು ಬಳಗ ಸಲ್ಲಿಸುತ್ತದೆ.

 

ಮಹಿಳೆಯರ ಯಕ್ಷಗಾನ ತಾಳಮದ್ದಳೆ ಕೂಟವೆಂಬ ಸಬಲೀಕರಣದ ಹೊಸಪರಿಕಲ್ಪನೆ

ಮಾತು ಮತ್ತು ಮಹಿಳೆ- ಒಂದಕ್ಕೊಂದು ಬಿಟ್ಟಿರದ ಅನುಬಂಧ. ಪುರುಷರಿಗೆ ಹೋಲಿಸಿದರೆ ಸ್ತ್ರೀಯೇ ಹೆಚ್ಚು ಮಾತುಗಾರಳು ಎಂಬ ಮನೋಭಾವನೆ ದೇಶ, ಕಾಲದ ಪರಿಧಿಯನ್ನೂ ಮೀರಿ ಬೆಳೆದು ಅಸಡ್ಡೆಯಾದದ್ದೂ ಹೊಸತಲ್ಲ. ಎರಡು ಜಡೆ ಸೇರಿ ಮಾತಾಡಲು ಹೊರಟರೆಂದರೆ ಮನೆಮಠವೇ ಹಾರಿಹೋದರೂ ಗೊತ್ತಾಗುವುದಿಲ್ಲ ಎಂದು ಹಾಸ್ಯಮಾಡುವವರಿಗೇನೂ ಕಡಿಮೆಯಿಲ್ಲ. ಹೀಗಿರುವಾಗ ಮಾತೇ ಬಂಡವಾಳ ಆಗಿರುವ ಯಕ್ಷಗಾನತಾಳಮದ್ದಳೆ ಕೂಟಗಳಲ್ಲಿ ಮಹಿಳೆಯರ ಪಾಲುದಾರಿಕೆ ಮಹೋದಯರಿಗೆ ಹೋಲಿಸಿದರೆ ಕಡಿಮೆಯೇ?  ಅಷ್ಟೇ ಅಲ್ಲ, ಗಂಡಸರಂತೆ ಮಾತಾಡಲು ಹೆಂಗಸರಿಗೆ ಬರುವುದಿಲ್ಲ. ಹೆಂಗಸರ ಮಾತಿನಲ್ಲಿ ಸ್ವಾರಸ್ಯವಿಲ್ಲ ಎಂಬ ಉಡಾಫೆಯೂ ಸಾಕಷ್ಟು ಜನರ ಮನಸ್ಸಿನಲ್ಲಿತ್ತೇ?

ಗಂಡುಕಲೆಯೆನಿಸಿಕೊಂಡಿರುವ ಯಕ್ಷಗಾನ ಇತ್ತೀಚಿನ ದಶಕಗಳಲ್ಲಿ ಮಹಿಳೆಯರ ಅಗ್ರಪಂಕ್ತಿಯ ಕಲೆಯಾಗಿಯೂ ಬೆಳೆದಿರುವುದು ಎಲ್ಲರಿಗೂ ತಿಳಿದಿರುವುದೇ ! ಹೀಗೆ ಯಕ್ಷಗಾನ ಆಟಗಳಲ್ಲಿ ಸೀಮೋಲ್ಲಂಘನಗೈದವರು ಹಲವರಾದರೆ, ಸಾಗರೋಲ್ಲಂಘನ ಗೈದು ಹೆಸರು ಮಾಡಿದ ಮಹಿಳೆಯರೂ ನಮ್ಮ ನಡುವೆ ಇದ್ದಾರೆ. ಅಷ್ಟೇ ಏಕೆ, ಪುರುಷರ ತಂಡಕ್ಕೇ ಸಾರಥಿಯಾಗಿ ನಿರ್ದೇಶಕಿಯಾಗಿ ಮುನ್ನಡೆಸಿದವರೂ, ಭಾಗವತರಾಗಿ ಭೇಷ್ ಎನ್ನಿಸಿಕೊಂಡು ಭಾರತ ಮತ್ತು ಪರದೇಶಗಳಲ್ಲಿ ನಮ್ಮ ನಾಡಿನ-ಪುರಾಣ-ಕಲೆಯ ಕೀರ್ತಿ ಹರಡಿ ಬಂದವರಿದ್ದಾರೆ. ಹಿಂದಿ-ಇಂಗ್ಲೀಷ್-ಸಂಸ್ಕೃತ ಭಾಷೆಗಳಲ್ಲಿ ಯಕ್ಷಗಾನ ಆಟಗಳನ್ನು ಆಡಿಸಿ ಜನಮನ ಗೆದ್ದವರಿದ್ದಾರೆ. ಸವಾಲೆನಿಸುವ ಭಾಗವತಿಕೆ, ಚೆಂಡೆ ಮದ್ದಳೆಯಲ್ಲಿಯೂ ಉತ್ತಮ ಪ್ರವೇಶ ಪಡೆಯುತ್ತಿದ್ದಾರೆ. ಮೊದಲ ವೇಷಗಾರ್ತಿ ಅಕ್ಕಣ್ಣಿಯಮ್ಮನಿಂದ ಮುಂದುವರಿದ ಪರಂಪರೆಯು ಮೂಕಾಂಬಿಕಾ ವಾರಂಬಳ್ಳಿ, ಲೀಲಾವತಿ ಬೈಪಡಿತ್ತಾಯ, ವಿದ್ಯಾಕೋಳ್ಯೂರುರಂತಹ ಮಹಿಳೆಯರಿಂದ ಬೇರೆ ಬೇರೆ ಹಂತಗಳಲ್ಲಿ ಪ್ರೇರೇಪಣೆ, ಅವಕಾಶ ಪಡೆಯುತ್ತಲೇ ಬಂದಿದೆ.

 

ಮಹಿಳೆಯರ ಪಾಲಿಗೆ ಹುಳಿದ್ರಾಕ್ಷಿಯೇ ಈ ತಾಳಮದ್ದಳೆ ?

೧೯೭೫ರ ನಂತರವೆಂದು ಭಾವಿಸಿದರೂ ಮಹಿಳೆಯರು ಯಕ್ಷಗಾನಕ್ಕೆ ಬಂದು ೪೦ ದಶಕಗಳು ಕಳೆಯುತ್ತಾ ಬಂದವು. ಈ ಹಂತದಲ್ಲಿ ಮಹಿಳಾಮಂಡಲ ಯುವತಿ ಮಂಡಲಗಳ ಪಾತ್ರ ಶ್ಲಾಘನೀಯ. ಇನ್ನು ತಾಳಮದ್ದಲೆಗೆ ವನಿತೆಯರ ಪ್ರವೇಶವಾದದ್ದು ೧೯೯೦ರ ಅನಂತರ. ಮೊದಮೊದಲಿಗೆ ಉತ್ತರಕನ್ನಡ, ಸಾಗರದ ಕಡೆಯಿಂದಲೇ ಪ್ರಯತ್ನಗಳು ಪ್ರಾರಂಭವಾಗಿ ಕಳೆದ ಹತ್ತು ವರುಷಗಳಲ್ಲಿ ದಕ್ಷಿಣಕನ್ನಡ, ಬೆಂಗಳೂರು ಎಂದೆಲ್ಲಾ ಮಹಿಳಾಕೂಟಗಳು ಇತ್ತೀಚೆಗೆ ಚಾಲ್ತಿಗೆ ಬಂದಿವೆ. ಆಕಾಶವಾಣಿ, ದೂರದರ್ಶನ ಎಂದೆಲ್ಲಾ ಪ್ರದರ್ಶನ ನೀಡಿದ್ದಾರಾದರೂ ತಾಳಮದ್ದಳೆಗಿಂತ ಯಕ್ಷಗಾನ‌ಆಟದೆಡೆಗೇ ಒಲವೇ ಹೆಚ್ಚು.

ಹಾಗೆ ನೋಡಿದರೆ ಯಕ್ಷಗಾನ ಬಯಲಾಟ(ಆಟ)ಕ್ಕೆ ಪ್ರವೇಶಕ್ಕಿಂತಲೂ ಸುಲಭವಾಗಿ ತಾಳಮದ್ದಳೆ ಕೂಟಗಳಿಗೆ ಪ್ರವೇಶ ಮಹಿಳೆಯರಿಗಿತ್ತು. ಆದರೆ ಮಹಿಳೆಯರು ತೊಡಗಿಸಿಕೊಂಡದ್ದು ಕಡಿಮೆಯೇ. ಇದಕ್ಕೆ ಕಾರಣ, ತಾಳಮದ್ದಳೆ ಕೂಟದಲ್ಲಿರುವ ಏಕೈಕ ಅವಕಾಶ ಮತ್ತು ಅನಿವಾರ್ಯ ಅಗತ್ಯ – ಮಾತು ! ಅಂದರೆ ನಾಟ್ಯದ ಭಾಷೆಯಲ್ಲಿ ಹೇಳುವುದಾದರೆ ವಾಚಿಕಾಭಿನಯ ಅಂದರೆ ಪ್ರಬುದ್ಧ ವಾಕ್‌ಸರಣಿ. ಅರರೆ.., ಇದೀಗಷ್ಟೇ ಮಾತು ಮಹಿಳೆಗೆ ಅವಿನಾಭಾವ ಸಂಬಂಧ ಎಂದಿದ್ದರಲ್ಲ.. ಕ್ಷಣಾರ್ಧದಲ್ಲಿ ಮಾತು ಬದಲಾಯಿತೇಕೆ ಎಂದು ಪ್ರಶ್ನಿಸುತ್ತಿದ್ದೀರಾ..? ಅದಕ್ಕೂ ಕಾರಣವಿದೆ. ತಾಳಮದ್ದಳೆಯ ಮಾತು ಬರೀ ಮಾತಲ್ಲ; ಹರಟೆಯಲ್ಲ; ಬದಲಾಗಿ ಪುರಾಣಾದಿ ಕಥೆಗಳ ಆಳವಾದ ಜ್ಞಾನ, ಪಾತ್ರವನ್ನು ಒಳಹೊಕ್ಕು ನೋಡುವ ಪ್ರತಿಭೆ, ಪಾತ್ರಗಳನ್ನು ಪ್ರತಿಸೃಷ್ಟಿಸುವಂತೆ, ಸಮರ್ಥಿಸುವಂತೆ ಮಾಡುವ ಜಾಣತನ..ಹೀಗೆ ಎಲ್ಲ ಹದವಾದ ಮಾತುಗಾರಿಕೆಯ ಆಯಾಮವೂ ಬೇಕು. ಇದರೊಂದಿಗೆ ಅರ್ಥಧಾರಿಗಳಲ್ಲಿ (ಇಲ್ಲಿ ಕಲಾವಿದರನ್ನು ಅರ್ಥಧಾರಿಗಳೆಂದು ಸಂಬೋಧಿಸಲಾಗುತ್ತದೆ) ಪಾತ್ರ ತನ್ಮಯತೆಯೊಂದಿಗೆ ಪ್ರತ್ಯುತ್ಪನ್ನಮತಿ (ಆಗಿಂದಾಗ್ಗೆ ಸವಾಲು-ಜವಾಬುಗಳನ್ನು ಕ್ಷಿಪ್ರವಾಗಿ ಆಶುವಾಗಿ ಹೇಳಬಲ್ಲ ಸಾಮರ್ಥ್ಯ), ಭಾಷೆ, ನಿರೂಪಣಾ ಶೈಲಿ, ಗತ್ತು-ಗಡಸುತನ, ಸ್ವಭಾವಭೇಧ, ಧ್ವನಿ ವ್ಯತ್ಯಾಸ, ಅಧ್ಯಯನಶೀಲತೆಯೂ ಬೇಕು.

ಮಹಿಳೆಯರು ಎಂಬ ಕಾರಣಕ್ಕೆ ವಿಶೇಷ ಮೀಸಲಾತಿಯಾಗಲೀ, ವಿನಾಯಿತಿಯಾಗಲೀ ಇಲ್ಲಿಲ್ಲ. ‘ಗೃಹಿಣಿಯರು ಬಂದು ಅರ್ಥ ಹೇಳುವುದೇ ದೊಡ್ಡದು’ ಎಂಬ ಭಾವನೆಯೇ ಇರುವ ದೊಡ್ಡ ವಿನಾಯ್ತಿ  ಇದ್ದಿರಬಹುದು! ಆದರೆ ಪುರುಷ ಕಲಾವಿದರಿಗೆ ಸಮನಾಗಿ ಅಧ್ಯಯನ, ಬೆಳವಣಿಗೆಯಿದ್ದರೆ ಮಹಿಳೆಯರ ಪಾಲುದಾರಿಕೆಗೆ ಬೆಲೆ ಬರುತ್ತದೆ ಎನ್ನುವುದು ಕಲಾಕ್ಷೇತ್ರದ ವಾಸ್ತವಸತ್ಯ. ಎದುರಿಗೆ ಸಿಕ್ಕಿದವನನ್ನು ಮಾತಿನಲ್ಲಿ ಮಣಿಸುವ ಛಲ; ಬಾಯ್ಮಾತಿನ ಹರಿತಕ್ಕೇ ಎದುರಾಳಿ ಪಾತ್ರದವನ್ನು ಚಿತ್ತು ಮಾಡುವ ಸ್ಪರ್ಧೆಯಲ್ಲದ ಸ್ಪರ್ಧೆಯೇ ತಾಳಮದ್ದಳೆಯ ಮೂಲಬಂಡವಾಳ. ಒಮ್ಮೊಮ್ಮೆ ಜಿದ್ದಿಗೆ ಹೊರಳಿಕೊಳ್ಳುವ ಸಂಭವಗಳೂ ಈ ಮಾತಿನ ಹೋರಾಟದಲ್ಲಿ ಇಲ್ಲದೇನಲ್ಲ.

ಹೀಗಿರುವಾಗ ಸ್ವಭಾವತಃ ’ಸೌಮ್ಯ’ವೆಂದು ಪರಿಗಣಿಸಲಾದ ಮಹಿಳೆಯರಿಂದ ಇದು ಸಾಧ್ಯವೇ? – ಎಂದು ಅನ್ನಿಸುವುದು ಸಹಜ. ಮನೆಯೊಳಗೆ ಮಾತನಾಡಿ ಗಂಡಸರನ್ನು ಜಯಿಸಿದಷ್ಟು ರಂಗದಲ್ಲಿ ಎದುರುಬದುರು ಕುಳಿತು ಅರ್ಥ( ಪಾತ್ರದ ಮಾತು) ಹೇಳಿ ಅದರಲ್ಲೇ ಪ್ರಸಿದ್ಧಿಯಾಗುವುದು ಸುಲಭವಲ್ಲ ಎಂದು ತಾತ್ಸಾರ ಮಾಡುವುದೂ ಇದ್ದೀತು. ಈ ಮಾತಿಗೆ ಅನುಕೂಲಿಸುವಂತೆ ಪುರುಷಕಲಾವಿದರಿಗೆ ಹೋಲಿಸಿದರೆ ಮಹಿಳೆಯರ ಭಾಗವಹಿಸುವಿಕೆ ವ್ಯಾಪಕವೂ ಆಗಿಲ್ಲ ಎನ್ನುವುದು ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಆದರೆ ಅದುವೇ ಸಾರ್ವಕಾಲಿಕ ವಾಸ್ತವವೇ?

ಈಗೀಗ ತಾಳಮದ್ದಳೆ ಕ್ಷೇತ್ರದಲ್ಲೂ ಮಹಿಳೆಯರು ಮಾತಿನ ಮಲ್ಲಿಯರಾಗುತ್ತಿದ್ದಾರೆ !!! ವಾಗ್ದೇವಿಯಾದ ಸರಸ್ವತಿಯೇ ಹೆಣ್ಣಾದ ಮೇಲೆ ವಾಕ್ ವಿದ್ವತ್ತಿನ ತಾಳಮದ್ದಳೆಯಲ್ಲಿ ಮಹಿಳೆ ಮಿಂಚಲಾರಳೇನು?

ಅಂದಿನ ಮಾತು…

ಈಗ್ಗೆ ನಾಲ್ಕು ದಶಕಗಳ ಹಿಂದೆ ಯಕ್ಷಗಾನವೆಂದರೆ ಗೌರವಸ್ಥ ಕುಟುಂಬದವರು ಮೂಗು ಮುರಿಯುತ್ತಿದ್ದರು. ಮನೆಯ ಹೆಣ್ಣುಮಕ್ಕಳಂತೂ ಯಕ್ಷಗಾನದ ವೇಷಗಳನ್ನೂ ಕಣ್ಣಿನಲ್ಲಿ ಕಾಣಬಾರದೆಂಬ ನಿರ್ಬಂಧ ಹೊಂದಿದ್ದ ಕಾಲಗಳವು. ಫಲವಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರಧಾರಿಗಳಾಗಿ ಸ್ತ್ರೀಯರು ಭಾಗವಹಿಸುವುದು ಒತ್ತಟ್ಟಿಗಿರಲಿ, ನೋಡುವುದಕ್ಕೂ ಅವಕಾಶವಿಲ್ಲದ ಪರಿಸ್ಥಿತಿಯಿತ್ತು. ಜೊತೆಗೆ ಯಕ್ಷಗಾನದ ಅಹೋರಾತ್ರಿಯ ಪ್ರದರ್ಶನಗಳು, ಹಳ್ಳಿಗಾಡಿನ ಅಭದ್ರ ವಾತಾವರಣ ಹೆಂಗಸರಿಗೆ ಅನುಕೂಲಿಸುವಂತಿರಲಿಲ್ಲ. ಇಂತಹ ಹಲವು ಸಾಮಾಜಿಕ ಕಾರಣಗಳಿಂದಾಗಿ ಮಹಿಳಾಪಾತ್ರಗಳೂ ಕೂಡಾ ಪುರುಷಪಾತ್ರಗಳಿಗೆ ಸಮನಾಗಿ ವೇಷಭೂಷಣದಲ್ಲಾಗಲೀ, ಪಾತ್ರಾಭಿವ್ಯಕ್ತಿಯಲ್ಲಾಗಲೀ, ಹಿಮ್ಮೆಳದಲ್ಲಾಗಲೀ ಪ್ರಾತಿನಿಧ್ಯ ಪಡೆಯಲೇ ಇಲ್ಲ. ಮಹಿಳಾಪಾತ್ರಗಳನ್ನೂ ಪುರುಷರೇ ಮಾಡುವಂತಹ ಸಂಪ್ರದಾಯವು ಏರುಗತಿಯನ್ನು ಪಡೆದದ್ದು ಇಂತಹ ಸನ್ನಿವೇಶಗಳಿಂದಲೇ ! ಇಂದಿಗೂ ಹಿಮ್ಮೇಳ, ಮುಮ್ಮೇಳಗಳಲ್ಲಿ ಇರುವ ಶೇ ೯೦%ರಷ್ಟು ಕಲಾವಿದರು ಪುರುಷರೇ ಎಂದರೆ ಅದು ಅತಿಶಯವಲ್ಲ.

ಹಾಗೆಂದು ಇದು ಪುರುಷ ಕಲಾವಿದರ ವೈಯಕ್ತಿಕ ಭಾವನೆಗಳು, ಪಟ್ಟಭದ್ರಹಿತಾಸಕ್ತಿಗಳ ಫಲ ಎಂದು ಭಾವಿಸಬೇಕಿಲ್ಲ. ಒಂದರ್ಥದಲ್ಲಿ ಮಹಿಳೆಯರನ್ನು ಗಂಡುಕಲೆಯೆನಿಸಿದ ಯಕ್ಷಗಾನಕ್ಕೆ ತಂದು ಸುಧಾರಣೆಯ ಹಾದಿ ಹಾಕಿಕೊಟ್ಟ ಪ್ರಮುಖರಲ್ಲಿ ಪುರುಷರೇ ಹೆಚ್ಚು !! ಅದರಲ್ಲೂ ಇಂದಿನ ಮಹಿಳಾ ತಂಡಗಳ ಬಹುತೇಕ ನಿರ್ವಹಣೆ ಪುರುಷರದ್ದೇ ಎಂದರೆ ನೀವು ನಂಬಲೇಬೇಕು ! ತಾಳಮದ್ದಳೆ ಕೂಟದ ಅನುಭವಿಗಳ ಪೈಕಿ ಹೆಚ್ಚುಮಂದಿ ಪುರುಷರೇ ಆಗಿರುವುದು ಈ ಗುಟ್ಟಲ್ಲದ ಗುಟ್ಟಿಗೆ ಕಾರಣ.

ತಾಳಮದ್ದಳೆಕೂಟ ಕಷ್ಟವೇ?

ತಾಳಮದ್ದಳೆ ಸಾಮಾನ್ಯವಾಗಿ ೨-೩ ಘಂಟೆಯ ಅವಧಿಯದಾಗಿರುವುದು ಸಹಜ. ಕೆಲವೊಮ್ಮೆ ರಾತ್ರಿಯಿಂದ ಬೆಳಗಿನ ತನಕ ನಡೆದ ಪ್ರಸಂಗಗಳೂ ಇವೆ. ಇದಕ್ಕೆ ಸರ್ವಸಜ್ಜಿತ ರಂಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದದಾಗಿ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸಂಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನಡೆಯುತ್ತದೆ. ಬೇಕಾಗಿರುವುದು ಒಂದು ಸಾಮಾನ್ಯ ವೇದಿಕೆ ಮತ್ತು ಆಸಕ್ತಿಯಿಂದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಎಲ್ಲರೀತಿಯಿಂದಲೂ ಖರ್ಚು ಬಹಳ ಕಡಿಮೆ.

ಆರಂಭದಲ್ಲಿ ಕೇವಲ ಯಕ್ಷಗಾನದ ವೇಷಗಳನ್ನು ಮಾಡುತ್ತಿದ್ದ ನಾನು ನಿಧಾನವಾಗಿ ತಾಳಮದ್ದಳೆಯೆಡೆಗೂ ಹೊರಳಿಕೊಂಡೆ. ಉತ್ಸಾಹ ತುಂಬಬಲ್ಲ ಶಕ್ತಿ ತಾಳಮದ್ದಳೆಗಿದೆ. ಕರ್ಣ, ಭೀಷ್ಮ, ಶಲ್ಯ, ಕೃಷ್ಣ, ಅರ್ಜುನ ಮುಂತಾದ ಪಾತ್ರಗಳು ಸಂತೋಷ ನೀಡಿವೆ. ತಾಳಗಳಿಗೆ ಕುಣಿಯಲು ಬಂದರೆ, ಪದ್ಯಗಳಿಗೆ ಅರ್ಥ ಹೇಳಲು ತಿಳಿದರೆ ಯಕ್ಷಗಾನ ಕಲಾವಿದನಾಗಲಾರ. ಪಾತ್ರಪ್ರಜ್ಞೆಯೊಂದಿಗೆ ಆ ಪಾತ್ರವನ್ನು ಪ್ರಸ್ತುತಪಡಿಸುವ ಸಾಮರ್ಥ್ಯವಿದ್ದರೆ ಮಾತ್ರ ಆತ ಕಲಾವಿದನಾಗುತ್ತಾನೆ ಎಂಬುದು ನಾನು ನಂಬಿದ ಸಿದ್ಧಾಂತ. ಹೀಗೆ ಬಣ್ಣ, ವೇಷ, ನೃತ್ಯ, ಮುಖವರ್ಣಿಕೆ ಇದಾವುದೂ ಇಲ್ಲದೇ, ಕೇವಲ ಪದ್ಯ ಹಾಗೂ ಅರ್ಥಗಾರಿಕೆ, ಮಾತಿನ ಚಮತ್ಕಾರದಿಂದ ರಸದೌತಣ ನೀಡುವ ತಾಳಮದ್ದಲೆಯ ವಿಶಿಷ್ಟತೆಗೆ ಬೆರಗಾಗಿದ್ದೇನೆ. ಹೆಸರಾಂತ ಪುರುಷ ತಾಳಮದ್ದಳೆ ಅರ್ಥಧಾರಿಗಳೆದುರಿಗೆ ಅರ್ಥ ಹೇಳುವಾಗ ಅವರೂ ಕೂಡಾ ಧೈರ್ಯ ತುಂಬಿ ನನ್ನಿಂದ ಪಾತ್ರ ಮಾಡಿಸಿದ್ದಾರೆ. ಉತ್ತರಕನ್ನಡದ ಗೀತಾ ಹೆಗಡೆ ತಮ್ಮ ಬರಹದಲ್ಲಿ ಮಾತನಾಡುತ್ತಾ…

 

ಭರವಸೆಯ ಹೊಂಗಿರಣ

ಕಾಲದಿಂದ ಕಾಲಕ್ಕೆ ಕೊಂಚವಾದರೂ ಸುಧಾರಣೆ ಬೇಡವೇ? ನಿಧಾನವಾಗಿ ಇತ್ತೀಚಿನ ಎರಡು ದಶಕಗಳಲ್ಲಿ ಮಹಿಳಾ ಪಾತ್ರಗಳನ್ನೂ, ಪಾತ್ರಧಾರಿಗಳನ್ನೂ, ಮಹಿಳೆಯರದ್ದೇ ಆದ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಯಕ್ಷಗಾನ ಪರಿಸರ, ಕಲಾವಿದರು ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ವಿವರವಾಗಿ ಹೇಳುವುದಾದರೆ ಬರಬರುತ್ತಾ ಯಕ್ಷಗಾನವೆಂಬುದು ಸಾಂಪ್ರದಾಯಿಕ ಮನೆಗಳ ಪರಿಸರಕ್ಕೂ ಆಪ್ತವಾಗತೊಡಗಿತು. ಅದರಲ್ಲೂ ಮೊದಲೆಲ್ಲಾ ಮಳೆಗಾಲದ ವಿರಾಮ ಕಾಲದಲ್ಲಿ ಯಕ್ಷಗಾನ ಬಯಲಾಟಗಳು ಇರುತ್ತಿರಲಿಲ್ಲವಾಗಿ, ಜೀವನೋಪಾಯಕ್ಕೆ ಕಲಾವಿದರು ತಾಳಮದ್ದಳೆ ಕೂಟಗಳನ್ನು ಕೈಗೊಳ್ಳುತ್ತಿದ್ದರು. ಕೆಲವು ಆರ್ಥಿಕವಾಗಿ ಅನುಕೂಲವಿದ್ದ ಮನೆಗಳಲ್ಲಿ ತಾಳಮದ್ದಲೆ ಕೂಟಗಳು ಹೆಚ್ಚಾಗಿ ನಡೆಯುತ್ತಿದ್ದದ್ದೂ ಇದೆ. ಆಗ ಮನೆಯ ಹೆಣ್ಣುಮಕ್ಕಳು ಕಲಾವಿದರಿಗೆ ಊಟೋಪಚಾರ ನೀಡುವುದರೊಂದಿಗೆ ಶ್ರೋತೃಗಳಾಗುವ ಅವಕಾಶವೂ ಒದಗುತ್ತಿತ್ತು. ಇದರಿಂದಾಗಿ ಪ್ರಸಂಗ(ಕಥೆ) ಅರ್ಥಗಾರಿಕೆಯ ಪರಿಚಯವಾಗುತ್ತಿತ್ತು. ಜೊತೆಗೆ ತಮಗಿರುವ ಮಿತಿಗಳಿಂದಾಗಿ ಮನೆಯೊಳಗಿನ ಬಿಡುವಿನ ಕಾಲದಲ್ಲಿ ಪ್ರಸಂಗ-ಸನ್ನಿವೇಶ-ಮಾತುಗಾರಿಕೆಯನ್ನು ನೆನಪಿಸಿಕೊಳ್ಳುತ್ತಿದ್ದರು.

ಹೀಗಾಗಿ ತನ್ನ ತಾಯಿಗೆ ಯಕ್ಷಗಾನದ ಪ್ರಸಂಗ ಮತ್ತು ಪದ್ಯಗಳು ಕಂಠಪಾಠವಾಗುತ್ತಿತ್ತು ಎಂದು ಯಕ್ಷಗಾನದ ಸ್ತ್ರೀಪಾತ್ರಗಳ ಬಗ್ಗೆ ಅಧ್ಯಯನ ಮಾಡಿದ ಕಲಾವಿದೆ ಡಾ. ನಾಗವೇಣಿ ಮಂಚಿಯವರು ನೆನಪಿಸಿಕೊಳ್ಳುತ್ತಾರೆ. ಅಂತೆಯೇ ಮೂರು ದಶಕಗಳ ಹಿಂದೆಯೇ ಪಡ್ಪುಸುಬ್ರಾಯಭಟ್ಟರ ಮನೆಯ ರುಕ್ಮಿಣಿ ಎಂಬ ಮಹಿಳೆಗೆ ರಾಮಾಯಣ-ಮಹಾಭಾರತದ ಕಥೆಗಳ ಅರಿವಿದ್ದು; ಇವರು ಕೂಟಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಅರ್ಥ ಹೇಳುತ್ತಿದ್ದರಂತೆ. ತವರು ಮನೆಯಲ್ಲಿ ಯಕ್ಷಗಾನದ ವಾತಾವರಣವಿದ್ದದ್ದಷ್ಟೇ ಅಲ್ಲದೆ, ಹಲವು ವ್ಯಾಜ್ಯಗಳಿಗೆ ಪಂಚಾಯಿತಿದಾರರೂ ರುಕ್ಮಿಣೀ ಅವರೇ ಆಗಿದ್ದರಿಂದ ಪುರುಷರೊಂದಿಗೆ ಕುಳಿತು ಅರ್ಥ ಹೇಳುವಲ್ಲಿ ಅವರಿಗೆ ಸುಲಭವಾಗಿದ್ದಿರಬಹುದು – ಎನ್ನುತ್ತಾರೆ ಸ್ವತಃ ಅರ್ಥಧಾರಿಯೂ, ಸಂಘಟಕಿಯೂ ಆಗಿರುವ ಡಾ. ನಾಗವೇಣಿ ಮಂಚಿ. ಹೀಗಾಗಿ ಈ ದಶಕಕ್ಕಾಗುವಾಗ ಅದರಲ್ಲೂ ಕಳೆದ ಐದಾರು ವರುಷಗಳಲ್ಲಿ ಯಕ್ಷಗಾನದ ಮತ್ತೊಂದು ಭಾಗವಾದ ತಾಳಮದ್ದಳೆ ಕ್ಷೇತ್ರದಲ್ಲೂ ವನಿತೆಯರು ವಿಜೃಂಭಿಸಲು ಅಡಿಯಿಡುತ್ತಿದ್ದಾರೆ.

ಕಳೆದ ವರುಷ ಆಳ್ವಾಸ್ ಸಂಸ್ಥೆಯು ವಿಶ್ವ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ಸಂದರ್ಭದಲ್ಲಿ ಒಂದು ವಿಶೇಷವೆನಿಸುವ ಸ್ಪರ್ಧೆ ಏರ್ಪಡಿಸಿತ್ತು. ಅದುವೇ ಮಹಿಳೆಯರಿಗೆ ಮೀಸಲಾದ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ. ಇದು ತಾಳಮದ್ದಳೆ ಪಂಥದಲ್ಲಿ ಹೊಸ ಬೆಳಕು ಮೂಡಿಸಿದ್ದಷ್ಟೇ ಅಲ್ಲದೆ, ಯಕ್ಷಗಾನ ಪ್ರಪಂಚವಿಡೀ ಒಮ್ಮೆ ಕಣ್ಣರಳಿಸಿ ನೋಡುವಂತಾಗಿತ್ತು. ಕಾರಣ- ಮಹಿಳಾ ಅರ್ಥಧಾರಿಗಳ ಸಾಮರ್ಥ್ಯ, ಗುಣಮಟ್ಟ, ಸಂಖ್ಯಾಬಲ. ತಲಾ ೫ ಮಂದಿಯಂತೆ ಬರೋಬ್ಬರಿ ೧೪ ತಂಡಗಳಲ್ಲಿ ೭೪ ಮಹಿಳಾ ಅರ್ಥಧಾರಿಗಳು ಭಾಗವಹಿಸಿದ್ದರು. ಇವರ ಪೈಕಿ ೨೫ಕ್ಕೂ ಹೆಚ್ಚು ಅರ್ಥಧಾರಿಗಳು ಶೇ.೬೦ಕ್ಕಿಂತ ಹೆಚ್ಚು ಅಂಕಪಡೆದು ಹತ್ತಕ್ಕೂ ಹೆಚ್ಚುಮಂದಿ ಪುರುಷರಿಗೆ ಸರಿಸಮಾನರಾಗಿ ಪಾತ್ರ ನಿರ್ವಹಿಸಲು ಶಕ್ತರಾಗಿದ್ದಾರೆ ಎಂದಿತ್ತು ತೀರ್ಪುಗಾರರ ತಂಡ. ಅದರ ತರುವಾಯವೂ ಕರ್ನಾಟಕ-ಕೇರಳದ ಗಡಿಯಲ್ಲಿ ನಡೆದ ಮತ್ತೊಂದು ಮಹಿಳಾ ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯಲ್ಲಿ ‘ಮಹಿಳಾಮಣಿಗಳು’ ಮಾತಿನಬಲವನ್ನು ರಂಗದಲ್ಲಿ ಸಾಕ್ಷಾತ್ಕರಿಸಿದ್ದರು.

ಅಂತೆಯೇ “ಅಗ್ನಿಸೇವಾ ಟ್ರಸ್ಟ್” ಆಶ್ರಯದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸ್ತ್ರೀಯರ ತಾಳಮದ್ದಳೆ ಸಪ್ತಾಹವು ೨೦೦೯ರ ಜುಲ ೭ರಿಂದ ಸತತ ಏಳುದಿನಗಳ ಕಾಲ ನಡೆದಿದೆ. ಈ ದಾಖಲೆ ಸೃಷ್ಟಿ ಮಾಡಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ ’ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಯಕ್ಷಬಳಗ’ದ ಸ್ತ್ರೀರತ್ನಗಳೇ ! ಈ iಹಿಳಾಬಳಗವು ತನ್ನ ತಾಲೀಮನ್ನು ಪ್ರಾರಂಭಿಸಿದ ಎರಡು ವರ್ಷದಲ್ಲೇ ಉತ್ತುಂಗದತ್ತ ದಾಪುಗಾಲು ಹಾಕಿದ್ದು ಮತ್ತೊಂದು ವಿಶೇಷ. ಹೀಗೆ ನಡೆದ ಸಪ್ತಾಹದಲ್ಲಿ ಆಯೋಜನೆಗೊಂಡ ಎಲ್ಲಕಡೆಯೂ ವಾರದ ದಿನಗಳಾದರೂ ಬಿಡುವು ಮಾಡಿಕೊಂಡು ಹಾಜರಿರುತ್ತಿದ್ದ ಪ್ರೇಕ್ಷಕರು ಕಡಿಮೆಯೆಂದರೂ ೬೦-೭೦ ಮಂದಿ. ಉಲ್ಲೇಖಿಸಬೇಕಾದ ಸಂಗತಿಯೆಂದರೆ ಈ ಸಪ್ತಾಹದ ರೂವಾರಿ ವಿ.ಆರ್ ಹೆಗಡೆಯವರ ಮತ್ತು ಅವರ ಸಹಮಿತ್ರರು ಪುರುಷ ಬಾಂಧವರೇ !

ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಮಂಡಳಿ ದಶಮಾನೋತ್ಸವದ ದಿನಗಳನ್ನು ಕಾಣುತ್ತಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಕೂಟದ ಸಂಘ. ಈ ಮಂಡಳಿಯ ಮೂಲಕ ಮಹಿಳೆಯರ ತಂಡ ರೂಪುಗೊಳ್ಳುವಲ್ಲಿ ಕಾರಣರಾದ ಪ್ರಥಮ ರೂವಾರಿ ಹಿರಿಯ ಕಲಾವಿದ ಬರೆಪ್ಪಾಡಿ ಅನಂತಕೃಷ್ಣ ಭಟ್. ಈಗ ಸುಮಾರು ಇಪ್ಪತ್ತೊಂದು ಮಂದಿಯನ್ನೊಳಗೊಂಡಿರುವ ಈ ತಂಡವು ನಾಡಿನಾದ್ಯಂತ ಎಂಭತ್ತಕ್ಕೂ ಮಿಕ್ಕಿ ತಾಳಮದ್ದಳೆಗಳನ್ನು ಪ್ರಸ್ತುತಪಡಿಸಿದ್ದು ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಇದರ ಸಂಚಾಲಕರಾದ ಭಾಸ್ಕರ ಬಾರ್ಯರು ಈ ಕುರಿತಾಗಿ ತಮ್ಮ ಅನುಭವವನ್ನು ಹೀಗೆ ಬಿಚ್ಚಿಡುತ್ತಾರೆ. ಮಹಿಳೆಯರಿಗೆ ತಾಳಮದ್ದಳೆ ಕೂಟದಲ್ಲಿ ಮೊದಲಿನಿಂದಲೂ ಅವಕಾಶಗಳು ಅಷ್ಟಾಗಿ ಬೆಳೆದುಬಂದಿಲ್ಲ. ಇದಕ್ಕೆ ಅವರ ಸುತ್ತಮುತ್ತಲಿನ ವಾತಾವರಣವೂ, ಮನೆಯ ಪರಿಸರಗಳೂ ಕಾರಣವಾಗುತ್ತವೆ. ಅಂತೆಯೇ ರಾಜಕೀಯ, ಒಳಜಗಳಗಳು ಯಾವುದೇ ಕ್ಷೇತ್ರದಲ್ಲಿಯೂ ಇರುವಂತೆ ಇಲ್ಲಿಯೂ ಸರ್ವೇಸಾಮಾನ್ಯ. ಆದರೆ ಈಗಿನ ದಿನಗಳಲ್ಲಿ ಮಹಿಳೆಯರು ಅರ್ಥ ಹೇಳುತ್ತಾರೆ ಎಂಬ ಸಲುವಾಗಿಯೇ ಕುತೂಹಲಕ್ಕೆ, ಆಕರ್ಷಣೆಗೆ ಮಾತ್ರ ಪ್ರದರ್ಶನಗಳನ್ನು ಏರ್ಪಾಡು ಮಾಡುತ್ತಾರೆ ಅಥವಾ ನೋಡಲು ಬರುತ್ತಾರೆ. ಮಾತ್ರವಲ್ಲ, ತಾಳಮದ್ದಳೆಗೆ ಅರ್ಥ ಹೇಳುವ ಮಹಿಳೆಯರು ಎಂಬ ಹಿರಿಮೆಯ ಗೌರವವೂ ಅವರ ಪಾಲಿಗೊದಗುತ್ತಿದೆ. ಹಾಗೆ ನೋಡಿದರೆ ಮನೆಯ ವಾತಾವರಣವೇ ಮಹಿಳೆಯರ ಎಲ್ಲಾ ಬೆಳವಣಿಗೆ ಅಥವಾ ಕುಂಠಿತಕ್ಕೆ ಮೂಲಕಾರಣ. ಆದರೆ ಹೆಸರಾಂತ ಅರ್ಥಧಾರಿಯಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ೮೦-೯೦ರ ದಶಕಗಳಲ್ಲಿ ಅಂಬೆ ಪಾತ್ರಕ್ಕೆ ಅರ್ಥ ಹೇಳಿದವರನ್ನು ಕಂಡಿದ್ದೇನೆ. ಆದರೆ ಆ ಪರಂಪರೆ ಅಷ್ಟಾಗಿ ಮುಂದುವರೆದಿಲ್ಲ. ಆದರೆ ನಮ್ಮಲ್ಲಿ ಒಂದು ಪ್ರದರ್ಶನದಲ್ಲಿ ಒಬ್ಬರು ಕಲಾವಿದೆ ಗೈರುಹಾಜರಾದರೆ ಇನ್ನೊಬ್ಬರು ಆ ಪಾತ್ರಕ್ಕೆ ಸಿದ್ಧರಾಗುವಷ್ಟು ಪಕ್ವತೆಯೂ ಅವರಿಗಿದೆ.

 

ಎಲ್ಲವೂ ಸರಿಯಿದೆಯೇ? ಅಡೆತಡೆಗಳು ಏನೇನು?

ಹಾಗಂತ ಮಹಿಳೆಯರ ಪಾಲುದಾರಿಕೆಯಿರುವ ತಾಳಮದ್ದಳೆಗಳ ಸಂಘಗಳಲ್ಲಿ ಎಲ್ಲವೂ ಸರಿಯಿದೆಯೆಂದಲ್ಲ. ಮೊದಲನೆಯದಾಗಿ ಮಹಿಳಾತಂಡಗಳನ್ನು ಪುರುಷ ತಂಡಗಳಿಗೆ ಹೋಲಿಸಿ ನೋಡುವುದೇ ಮಹಿಳಾ ಕೂಟಗಳನ್ನು ಹಿಂದಕ್ಕೆಳೆಸುತ್ತಲಿದೆ. ಸಂಸ್ಕೃತಾದಿ ಭಾಷಾಜ್ಞಾನದ ಕೊರತೆ, ಪುರಾಣಗಳ ತಿಳಿವಳಿಕೆ ಮತ್ತು ಪ್ರತ್ಯುತ್ಪನ್ನಮತಿತ್ತ್ವದ ಕೊರತೆ, ರಂಗಪ್ರಜ್ಞೆಗೆ ಬೇಕಾದ ಆರಂಭಿಕ ಅಭ್ಯಾಸ ಅಥವಾ ಕೂಟದ ಅವಕಾಶಗಳು ಸಿಗದೇ ಹೋಗುವುದು, ಸೀಮಿತ ಅರ್ಥಗಾರಿಕೆ ಅಥವಾ ಪಾತ್ರಗಳನ್ನೇ ಓಲೈಸುವುದು, ಹಾಸ್ಯ ಸನ್ನಿವೇಶವನ್ನು ಸರಿತೂಗಿಸಿಕೊಂಡು ಹೋಗುವಲ್ಲಿ ಎದುರಾಗುವ ತೊಡಕು, ವಿದ್ಯಾಭ್ಯಾಸದ ಕೊರತೆಯಿಂದಾಗಿ ಆತ್ಮವಿಶ್ವಾಸವಿಲ್ಲದಿರುವುದು, ಹಿಂಜರಿಕೆಗಳು ಮುಖ್ಯ ಕಾರಣಗಳು.

ಮಹಿಳೆಯರು ಇದ್ದಾರೆ ಎಂಬ ಕಾರಣಕ್ಕೆ ಅಥ ಕೇಳಲು ಬರುವವರೇ ಹೆಚ್ಚು. ಕಲಾವಿದೆಯಾಗಿ ಪ್ರಕಾಶಕ್ಕೆ ಬರದೇ ಹೋದರೂ ಯಕ್ಷಗಾನ ಆಟ-ಕೂಟಗಳಲ್ಲಿ ಭಾಗವಹಿಸುವುದರಿಂದ ಮುಂದಿನ ಪೀಳಿಗೆಗೆ ಪುರಾಣದ ಅರಿವು ಸರಿಯಾದ ರೀತಿಯಲ್ಲಿ ಹಸ್ತಾಂತರ ಆಗುತ್ತದೆ, ಆಸಕ್ತಿ ಹುಟ್ಟಿಸುತ್ತದೆ. ಆದರೆ ಈವರೆಗೆ ತಾಳಮದ್ದಳೆಯ ಮೇಲ್ಪಂಕ್ತಿಯುಳ್ಳ ಪುರುಷಕಲಾವಿದರಿಗೆ ಸರಿಸಮನಾಗಿ, ಸ್ಪರ್ಧಾತ್ಮಕವಾಗಿ, ವೃತ್ತಿಪರವಾಗಿ ಎಂಬಂತೆ ಕಲಾವಿದೆಯರು, ಮಹಿಳಾಕೂಟಗಳು ಗುರುತಿಸಿಕೊಂಡಿಲ್ಲ. ಕಾರಣ, ತಾಳಮದ್ದಲೆಯಲ್ಲಿ ಪ್ರೌಢಭಾಷೆಯ ಆಶುಸಾಹಿತ್ಯವೇ ಪ್ರಧಾನ. ಆದರೆ ಸ್ತ್ರೀಯರಿಗೆ ಅಧ್ಯಯನಕ್ಕೆ ಅವಕಾಶಗಳು ಹೆಚ್ಚು ಸಿಗದೇ ಇರುವುದರಿಂದ ಸಿದ್ಧಪಠ್ಯವೇ ಹೆಚ್ಚು. ಅದೂ ಅವರವರ ತಂಡಗಳಲ್ಲಿ ಪೂರ್ವನಿಯೋಜಿತ ಕೂಟಗಳಲ್ಲೇ ಮಹಿಳೆಯರು ಮತನಾಡುತ್ತಾರೆ. ಪ್ರಸಂಗ ಹೊಂದಿಕೊಂಡು ಮಹಿಳೆಯರೇ ತಮ್ಮೊಳಗೆ ಕಲಾವಿದೆಯರ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಸೃಷ್ಠಿಶೀಲ ಕಲಾವಿದರು ಒಂದು ತಾಳಮದ್ದಳೆಯಿಂದ ಮತ್ತೊಂದು ಪ್ರದರ್ಶನಕ್ಕೆ ಅರ್ಥ ಬದಲಾಯಿಸುವವರೂ ಇದ್ದಾರಾದರೂ; ಆಶುವಾಗಿ ಮಾತನಾಡುವ ರೀತಿ ಮಹಿಳೆಯರೆಲ್ಲರಲ್ಲಿ ಕರಗತವಾಗಿಲ್ಲ. ಹಾಗೆಂದು ಮಹಿಳೆಯರಲ್ಲಿ ಈ ಸಾಮರ್ಥ್ಯವಿಲ್ಲವೆಂದಲ್ಲ; ಬೆಳೆಸಿಕೊಂಡರೆ ಉತ್ತಮ. ಆದರೆ ಆದರೆ ವೃತ್ತಿಪರರಲ್ಲಿ ಸಂವಾದ, ವಾದ ವಿವಾದದಲ್ಲಿ ಕಥಾ‌ಆಶಯಕ್ಕೆ ಭಂಗ ಬರುವ ಸಾಧ್ಯತೆಗಳು ಮಹಿಳಾ ಯಕ್ಷಗಾನಕೂಟದಲ್ಲಿ ಅಷ್ಟಾಗಿ ಇಲ್ಲ. ಏನಿಲ್ಲದಿದ್ದರೂ ಕಥಾನಿರೂಪಣೆ ಆಗುವುದಂತೂ ಖಂಡಿತಾ ಎನ್ನುತ್ತಾರೆ ಹೆಸರಾಂತ ಅರ್ಥದಾರಿ ಉಜಿರೆ ಅಶೋಕ್ ಭಟ್.

ಕೌಟುಂಬಿಕ ಸವಾಲುಗಳ ಮಧ್ಯೆ ಕೊರತೆಗಳನ್ನು ನಿವಾರಿಸಿ ಸರಿತೂಗಿಸಿಕೊಳ್ಳಬೇಕೆಂಬ ಆಶಯ ಮಹಿಳೆಗೆ ಇರುವುದಾದರೂ ಅದಕ್ಕೆ ಅನುಕೂಲಗಳು ದೊರಕುವುದೂ ಕೊಂಚ ಕಠಿಣವೇ ಸರಿ ! ಹಾಗಂತಲೇ ಬಹುದಶಕಗಳಿಂದಲೇ ಚಾಲ್ತಿಯಲ್ಲಿರುವ ಪುರುಷರ ತಾಳಮದ್ದಳೆ ಕೂಟದ ವಿದ್ವತ್ತನ್ನು ಆಧರಿಸಿ ಈಗತಾನೇ ಅಡಿಯಿಡುತ್ತಿರುವ ಮಹಿಳೆಯರ ತಾಳಮದ್ದಳೆಗಳನ್ನು ಅಳೆಯುವುದು ಸರಿಯಲ್ಲ ಎಂದು ಅನಿಸುವುದೇನೋ ಸಹಜ. ಆದರೆ ಕಲಾಭಿಮುಖವಾಗಿ, ರಸಪೋಷಕವಾಗಿ ನೋಡಿದಾಗ ತಾರ್ತಿಕವಾಗಿ, ಭಾವನಾತ್ಮಕವಾಗಿ ರಂಗದಲ್ಲಿ ಮಾತನಾಡುವ ಪ್ರತಿಭೆಯಿದ್ದವರಷ್ಟೇ ಸಲ್ಲುತ್ತಾರೆ-ಸಲ್ಲಬೇಕು ಎಂಬ ವಾದಕ್ಕೂ ಪುಷ್ಠಿ ನೀಡಬೇಕಾಗುತ್ತದೆ. ಮಹಿಳೆಯರು ಎಂಬ ಕಾರಣಕ್ಕೆ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡುವ ಕಲಾಕ್ಷೇತ್ರವು ಎಂದಿಗೂ ಮೀಸಲಾತಿ ನೀಡಲಾರದು ಎಂಬುದು ವಾಸ್ತವ ಮತ್ತು ಸತ್ಯ.

ಒಟ್ಟಿನಲ್ಲಿ ಯಕ್ಷಗಾನ ಆಟದಷ್ಟು ಅಲ್ಲವಾದರೂ, ಇಲ್ಲಿ ಕೂಡಾ ಪರಿಶ್ರಮ ಅವಶ್ಯ. ಆದರೆ ಯಕ್ಷಗಾನಪ್ರದರ್ಶನಗಳಲ್ಲಾದರೆ ಆಂಗಿಕ, ವಾಚಿಕ, ಆಹಾರ್ಯ, ಸಾತ್ತ್ವಿಕ ಅಭಿನಯಗಳ ಸಮ್ಮಿಲನವಿದೆ. ವಾಚಿಕಕ್ಕೆ ಹೋಲಿಸಿದರೆ ಆಂಗಿಕ ಅಭಿವ್ಯಕ್ತಿಗೆ ಅನುಕೂಲ ಮತ್ತು ಶಿಕ್ಷಣ ಹೆಚ್ಚಿನ ಮಟ್ಟದಲ್ಲಿ ಲಭ್ಯವಿದೆ. ಹಾಗಾಗಿಯೇ ಮನೆಯ ನಾಲ್ಕುಗೋಡೆಗಳ ನಡುವೆ ಬೆಳೆದ ಮಹಿಳೆಯರು ಕಾಲಾಂತರದಲ್ಲಿ ಹೊರಜಗತ್ತಿಗೆ ಪ್ರವೇಶಿಸಿ ಬಹುದೊಡ್ಡ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಧನೆ ಮಾಡಿದರಾದರೂ ತಾಳಮದ್ದಳೆ ಕೂಟದಂತಹ ಕ್ಷೇತ್ರಗಳಲ್ಲಿ ಮುಂಚೂಣಿಯ ಮಾತುಗಾರ್ತಿಯಾಗಿ ಬಹಳ ದಶಕಗಳಿಂದಲೇ ಕಂಡುಬರಲಿಲ್ಲ. ಇದಕ್ಕೆ ಪೂರಕವಾಗಿ ಮಹಿಳಾ ಕಲಾವಿದರು ಸ್ವಂತವಾಗಿ ಯಕ್ಷಗಾನದ ಅರ್ಥವನ್ನು ರೂಢಿಸಿಕೊಳ್ಳುವುದು ಕಡಿಮೆ ಎಂದೇ ಹೇಳಬಹುದು ಎನ್ನುತ್ತಾರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕಲಾವಿದೆ, ದಕ್ಷಿಣಕನ್ನಡದ ಅಡ್ಯನಡ್ಕದಲ್ಲಿ ೧೯೮೮ರ ದಶಕದಲ್ಲೇ ಮಹಿಳಾ ಯಕ್ಷಗಾನ ಕಲಾಸಂಘ ಸ್ಥಾಪಿಸಿದ ಸಂಘಟಕಿ ಟಿ.ಕೆ.ರತ್ನಾಭಟ್.

ಇನ್ನು ಬಹುಪಾಲು ಮಹಿಳಾ ತಾಳಮದ್ದಳೆ ಅರ್ಥಧಾರಿಗಳಿಗೆ ಸಂಭಾವನೆಯೆಂಬುದೇ ಮರೀಚಿಕೆ. ಕಾರಣ ‘ಮಹಿಳೆಯರಿಗೆ ಅವಕಾಶ’ ಎಂಬ ಅನುಕಂಪದ ಆಧಾರವೇ ಆರ್ಥಿಕ ಸಾಧ್ಯತೆಗಳನ್ನು ಮುಚ್ಚಿಹಾಕಿದೆ. ಜೊತೆಗೆ ಮಹಿಳೆಯರು ಯಕ್ಷಗಾನದ ಆಟ-ಕೂಟಗಳಲ್ಲಿ ಭಾಗವಹಿಸುವುದನ್ನು ಖಂಡತುಂಡವಾಗಿ ವಿರೋದಿಸುವವರು ಇಂದಿಗೂ ಇದ್ದಾರೆ. ಅಂತೆಯೇ ಪುರುಷಪಾರಮ್ಯದ ಸೋಂಕು ಬೇಡವೆಂದು ಯಕ್ಷಗಾನ/ತಾಳಮದ್ದಳೆಗಳನ್ನು ಕೈಬಿಟ್ಟ/ಬಿಡಿಸಿದ ಉದಾಹರಣೆಗಳೂ, ಸವಾಲಾಗಿ ಸ್ವೀಕರಿಸಿ ಹೊಸದಾಗಿ ತಂಡ ಕಟ್ಟಿದ ನಿದರ್ಶನಗಳೂ ಉಂಟು. ಸ್ತ್ರೀಯರ ಸೂಕ್ಷ್ಮ ಸಂವೇದನೆ, ಜೀವನದಲ್ಲಿ ನಮಗಿರುವ ಕೊಂಚ ಅವಕಾಶ ಮತ್ತು ಸಮಯದಲ್ಲಿ ಮಿಂಚಬೇಕಾದ ಅನಿವಾರ್ಯತೆಗಳನ್ನು ಅರ್ಥಮಾಡಿಕೊಳ್ಳದೆ ತಾರತಮ್ಯ ಮಾಡಿದ್ದರಿಂದ ಸ್ತ್ರೀಯರದ್ದೇ ಆದ ತಂಡ ಕಟ್ಟಿಕೊಂಡೆವು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಕಲಾವಿದೆ.

 

ಮಹಿಳೆಯರ ಅಭಿವ್ಯಕ್ತಿಗೆ ತಾಳಮದ್ದಳೆ ಅನುಕೂಲವೇ?

ಯಕ್ಷಗಾನದ ಆಟ-ಕೂಟಗಳಲ್ಲಿ ಮಹಿಳೆಯರು ಅರ್ಥಗಾರಿಕೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದ್ದು ಮಹಿಳಾ ಯಕ್ಷಗಾನದ ಉಳಿವಿಗೆ ಇದು ಅನಿವಾರ್ಯ ಎಂಬ ಕಾಳಜಿಯಷ್ಟೇ ಇಲ್ಲಿನ ಉಪಯೋಗವಲ್ಲ. ಹಾಗೆಂದು ಒಂದೊಮ್ಮೆ ಆಟ(ಯಕ್ಷಗಾನ ಪ್ರದರ್ಶನ)ಕ್ಕೆ ಸಲ್ಲದವರು ತಾಳಮದ್ದಳೆ ಕೂಟಕ್ಕೂ ಸಂದು ಯಶಸ್ವಿಯಾದ ಉದಾಹರಣೆಗಳು ಹಲವುಂಟು ! ಒಂದರ್ಥದಲ್ಲಿ ಹೇಳುವುದಾದರೆ ಇಂದಿಗೆ ಪಾತ್ರಧಾರಿಗಳಿಗಿಂತಲೂ ಹೆಚ್ಚಿನ ಗೌರವ ಅರ್ಥಧಾರಿಗಳಿಗೇ ಇದೆಯೆಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ಯಕ್ಷಗಾನ ತಾಳಮದ್ದಳೆ ಕೂಟಗಳಿಗೆ ಗೃಹಿಣಿಯರು, ಇಲ್ಲವೇ ಶಿಕ್ಷಕಿಯರು ಅಥವಾ ಬ್ಯಾಂಕ್ ಉದ್ಯೋಗಿಗಳಾದ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚು ಎಂಬುದು ಅನುಭವಿಗಳ ಅನಿಸಿಕೆ. ಆರ್ಥಿಕವಾಗಿ ಆಶ್ರಯ ಬೇರೆಡೆ ಇದ್ದಾಗ ಹವ್ಯಾಸಕ್ಕೆಂದು ಕೂಟಗಳಿಗೆ ಬರುವವರು ಅಥವಾ ಇಂತವರೇ ಮೇಲ್ವಿಚಾರಕರಾಗಿ ಗುರುತಿಸಿಕೊಳ್ಳುತ್ತಾರೆಂದು ಬಿಟ್ಟರೆ ತಾಳಮದ್ದಳೆ ಕಲಾವಿದರಾಗಿ ಪೂರ್ಣಪ್ರಮಾಣದಲ್ಲಿ ಚಾಲ್ತಿಯಲ್ಲಿರುವವರು ಇಲ್ಲವೇ ಇಲ್ಲವೆಂಬಷ್ಟು ವಿರಳ.

ಹಾಗೆ ನೋಡಿದರೆ ಹೆಣ್ಮಕ್ಕಳ ಸುರಕ್ಷತೆ ಮತ್ತು ಅನುಕೂಲದ ಪ್ರಶ್ನೆಗೆ ಯಕ್ಷಗಾನ ಬಯಲಾಟಕ್ಕಿಂತಲೂ ಸೂಕ್ತವೆನಿಸುವಂತಹದ್ದು ತಾಳಮದ್ದಳೆಯೇ! ಅಹೋರಾತ್ರಿಯೋ, ಅರ್ಧರಾತ್ರಿಯೋ ನಿದ್ದೆಗೆಡಬೇಕಾದುದಿಲ್ಲ. ಸಂಸಾರದ ಜವಾಬ್ದಾರಿಯಲ್ಲಿ ರಾತ್ರೆ ತಿರುಗಾಟದ ತೊಂದರೆಗಳಿಲ್ಲ. ಜೊತೆಗೆ ಯಕ್ಷಗಾನ ಆಟಗಳಲ್ಲಿ ಮಹಿಳೆಯರಿಗೆ ಎದುರಾಗಬಹುದಾದಂತಹ ಮುಜುಗರದ ಸನ್ನಿವೇಶಗಳು ಇಲ್ಲಿಲ್ಲ. ಬಣ್ಣಗಾರಿಕೆ, ಮುಖವರ್ಣಿಕೆ, ವೇಷ ಕಟ್ಟುವ ತೊಂದರೆ, ಪೂರ್ವ ತಯಾರಿಯ ತೊಂದರೆಗಳು ತಾಳಮದ್ದಳೆಗಳಿಗೆ ಅಷ್ಟಾಗಿ ಕಾಡುವುದಿಲ್ಲ. ದೇವಸ್ಥಾನ ಅಥವಾ ದೈವಕೈಂಕರ್ಯದ ಪ್ರವೇಶಕ್ಕೆ ತಡೆಯುಂಟುಮಾಡುವ ಮುಟ್ಟಿನ ತೊಂದರೆಗಳ ಮಡಿಮೈಲಿಗೆಗಳ ಗೋಜೂ ಇದಕ್ಕೆ ಇಲ್ಲ. ಯಕ್ಷಗಾನದ ಆಟಕ್ಕೆ ಬೇಕಾದ ನಿರೀಕ್ಷಿತ ತರಬೇತಿಯ ಅಗತ್ಯವೂ ಇಲ್ಲ. ವೇಷ ಹಾಕಿ ನರ್ತಿಸಿ ಪಾತ್ರ ಮಾಡುವ ಸವಾಲುಗಳಿಲ್ಲವಾದ್ದರಿಂದ ತರ್ಕಬದ್ಧವಾದ ಮಾತಿನಲ್ಲಿ ಗಟ್ಟಿಯಿರುವ ಮಹಿಳೆಯರು ಸುಲಭವಾಗಿ ತೊಡಗಿಸಿಕೊಳ್ಳಬಹುದು. ಆದರೆ ತಕ್ಕಮಟ್ಟಿನ ವಿದ್ಯಾಭ್ಯಾಸ, ಪುರಾಣಾದಿ ವಿಷಯಗಳ ಜ್ಞಾನ, ಅರ್ಥವಿಸ್ತಾರ ಮಾಡುವ ಕೌಶಲ, ಶ್ರುತಿಯರಿತು ಪಾತ್ರಭಾವಕ್ಕೆ ಹೊಂದುವಂತೆ ಮಾತನಾಡುವುದು ನಿರೀಕ್ಷಿತ.

 

ಪ್ರಮದೆಯ ಪ್ರೇರಣೆಯ ಪಥ- ತಾಳಮದ್ದಳೆ…

ಏನೇ ಇರಲಿ, ಯಕ್ಷಗಾನ ಸುಸಂಸ್ಕೃತವಾದ ಬೌದ್ಧಿಕ ಕಸರತ್ತಿಗೆ ಸಾಧನವಾದ ಕ್ಷೇತ್ರ. ಪುರುಷ ಪಾತ್ರಧಾರಿಗಳೆದುರಿಗೂ ಸರಿಸಮಾನವಾಗಿ ನಿಂತು ವಾದಿಸುವ ಗರಿಮೆ ಕೆಲವರಿಗೆ ಮೆಚ್ಚುಗೆಯಾಗಬಹುದು. ಇನ್ನೂ ಕೆಲವು ಸ್ತ್ರೀಯರಿಗೆ ತಮ್ಮ ಇಷ್ಟಾನಿಷ್ಟಗಳನ್ನು ಅರಿತು ಹೆಚ್ಚಿನ ಕೌಶಲ್ಯವನ್ನು ಹೊಂದುವಲ್ಲಿ ಕಾರಣವಾಗಬಹುದು. ಆ ಮೂಲಕ ನಾಲ್ಕಾರು ಮಂದಿ ಇಷ್ಟಪಟ್ಟು ನೋಡಿ, ಗುರುತಿಸುವ ನೆಲೆಯಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮಹಿಳೆಯರ ಕೋನಗಳಿಂದ ಪಾತ್ರಗಳನ್ನು ವಿಮರ್ಶಿಸುತ್ತಾ ಹೊಸ ವ್ಯಾಖ್ಯಾನ ನೀಡಬಹುದು; ಕ್ರಮೇಣ ತಮ್ಮದೇ ಸ್ವಂತವ್ಯಕ್ತಿತ್ವಕ್ಕೆ ಮುನ್ನುಡಿ ಬರೆಯಬಹುದು; ಮತ್ತೂ ಒಂದು ಮೆಟ್ಟಿಲು ಮುಂದೆ ಹೋಗಿ ಯೋಚಿಸುವುದಿದ್ದಲ್ಲಿ ಕಲಾಭಿಮುಖವಾಗಿ ಸಾಗಿ ಸಾಧನೆ ಮಾಡುತ್ತಾ ಕೆಲವೇ ಮಂದಿಯ ಹೆಜ್ಜೆಗುರುತು ಕಾಣುವ ತಾಳಮದ್ದಳೆ ಕೂಟವೆಂಬ ಕ್ಷೇತ್ರದಲ್ಲಿ ಮಹಿಳಾ ಬಲವನ್ನು ಹೆಚ್ಚಿಸುವುದರೊಂದಿಗೆ ಕಲೆಗೆ, ಸಾಧನೆಗೆ ಪ್ರೇರಣೆಯಾಗಬಹುದು.

ಒಟ್ಟಿನಲ್ಲಿ ತಾಳಮದ್ದಳೆಯ ಕುರಿತು ಮಹಿಳೆಯರಲ್ಲೂ ವಿಮರ್ಶೆಗಳು ನಡೆಯುತ್ತಿವೆ. ಸಾಂಪ್ರದಾಯಿಕ ಹಳ್ಳಿಯ ಕುಟುಂಬಗಳ ವಿವಾಹಿತ ಸ್ತ್ರೀಯರು ಸಮಾಜದ ಕಟ್ಟಳೆಗಳನ್ನು ದಾಟಿ ಮಾತುಗಾರಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ನಾನೂ ಅರ್ಥಧಾರಿಯಾಗಬೇಕು’ ಎಂಬ ತುಡಿತ ಅಡುಗೆ ಮನೆಯಲ್ಲಿ ಮೊಳಕೆಯೊಡೆಯುತ್ತಿದೆ. ಮೊದಲೆಲ್ಲಾ ಎರಡು ಗಂಟೆಗಳಿಗೆ ಸೀಮಿತವಾಗುತ್ತಿದ್ದ ಪ್ರದರ್ಶನವು ಮೂರೂ-ಮೂರುವರೆ ತನಕ ಲಂಬಿಸುವ ತಾಕತ್ತು ಮಹಿಳಾ ಅರ್ಥಧಾರಿಗಳಿಗಿದೆ. ಇದರೊಂದಿಗೆ ಸ್ತ್ರೀಯರೂ ಭಾಗವತರಾಗಿ ಮಿಂಚುತ್ತಿದ್ದಾರೆ. ಈ ನೆಲೆಯಲ್ಲಿ ಭಾಗವತರಾಗಿ, ಅರ್ಥಧಾರಿಗಳಾಗಿ ತಮ್ಮ ಸಹಜ ಕೋಮಲ ಸ್ವರವನ್ನು ಹಿಗ್ಗಾ-ಮುಗ್ಗಾ ದುಡಿಸಿಕೊಳ್ಳುವ ಮಹಿಳೆಯರ ಕೌಶಲ್ಯ ಅನನ್ಯ.

ಅಷ್ಟೇ ಅಲ್ಲ, ಚೆಂಡೆ-ಮದ್ದಳೆಯ ಸದ್ದು ಹರಟೆಯೆನ್ನುವ ಹಲವರೂ ಕೂಡಾ, ಆಕರ್ಷಣೆಗೋ, ಕುತೂಹಲಕ್ಕೋ ಮಹಿಳೆಯರ ತಾಳಮದ್ದಳೆಯಲ್ವಾ, ಒಮ್ಮೆ ಕೇಳೋಣ’ ಎಂದು ಹೇಳದೆ ಉಳಿದಿಲ್ಲ. ಅದರಲ್ಲೂ ಮಹಿಳೆಯರು ಕೂಟಗಳಿಗಾಗಿ ನಡೆಸುವ ತಯಾರಿಯಿಂದ ಭಾರತೀಯ ಪುರಾಣ ಸಾಹಿತ್ಯಜ್ಞಾನದೊಂದಿಗೆ ಸಮಾಜದಲ್ಲಿ ವಿಶೇಷ ಗೌರವ ದೊರಕುತ್ತದೆ ಎಂಬುದು ಈಗಾಗಲೇ ಹಲವು ಮಹಿಳೆಯರು ಕಂಡುಕೊಂಡ ಸತ್ಯ. ಸುಸಂಸ್ಕೃತ ಮಾತುಗಾರಿಕೆ, ಪಾತ್ರಕ್ಕೆ ಹೊಂದಿಕೊಂಡು ಮಾತನಾಡುವ ಜಾಣ್ಮೆ, ಆಶುವಾಗಿ ಮಂಡಿಸುವ ತಾಕತ್ತು ಮಹಿಳೆಯರಿಗೆ ಸಮಾಜದಲ್ಲಿ ಬೌದ್ಧಿಕವಾದ ಗೌರವವನ್ನಷ್ಟೇ ಅಲ್ಲ, ನೈತಿಕವಾಗಿ ಆತ್ಮವಿಶ್ವಾಸವನ್ನೂ, ಸಂದರ್ಭವನ್ನು ಎದುರಿಸುವ ಗಟ್ಟಿತನ-ಧೈರ್ಯಗಳನ್ನೂ ಹೆಚ್ಚಿಸುತ್ತದೆ. ಮತ್ತೊಂದೆಡೆ ಗೃಹಕಾರ್ಯಗಳ ಒತ್ತಡದಿಂದ ಬಿಡುವೂ ದೊರೆಯುತ್ತದೆ.

ಈಗೀಗ ಬಹುತೇಕ ಎಲ್ಲಾ ಕಲಾವಿದೆಯರಲ್ಲಿ ಪ್ರಸಂಗ ಪುಸ್ತಕಗಳು, ಆಕರ ಗ್ರಂಥಗಳು, ಪೌರಾಣಿಕ ಪುಸ್ತಕಗಳು, ವೈಚಾರಿಕ ಪುಸ್ತಕಗಳ ಸಂಗ್ರಹದ ಆಸಕ್ತಿ ಎದ್ದು ಕಾಣುತ್ತಿದೆ. ಓದುವ ಪ್ರವೃತ್ತಿ ಆರಂಭವಾಗಿದೆ. ತಾಯಿ ಓದುತ್ತಿದ್ದಾಗ, ಮಕ್ಕಳು ಓದದೇ ಇರುತ್ತಾರೆಯೇ? ‘ತಾಯಿಯಂತೆ ಮಗು, ನೂಲಿನಂತೆ ಎಳೆ’ ಎಂಬ ಗಾದೆಯಂತೆ ಮನೆಯ ಮಕ್ಕಳ ಅರಿವಿನ ಕಿಡಿ ಹೊತ್ತಿಸುತ್ತದೆ; ತಾಯಿಯಾದವಳು ಯಕ್ಷಗಾನ ಆರ್ಥವನ್ನು ಹೇಳಿದಾಗ ಮಗುವಿನೊಳಗೆ ಅವ್ಯಕ್ತವಾಗಿ ಈ ಯಕ್ಷಗುಂಗಿನ ಬೀಜ ಮೊಳಕೆಯೊಡೆಯುತ್ತದೆ. ಕ್ರಮೇಣ ತಾಯಿಯ ಪೋಷಣೆಯಂತೆ ಮನೆಯ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯ ಚಿಗುರು ಕೊನರುತ್ತದೆ. ಅಷ್ಟಾದರೂ ಬೇಕಾದಷ್ಟಾಯಿತು.. ಹಾಗಿದ್ದಾಗ ಮಾತಿನ ಮಲ್ಲಿಯರಾಗುತ್ತಿದ್ದಾರೆ ಮಹಿಳೆಯರು ಎಂಬುದು ಕೊಂಕು ಮಾತಾಗಲಿಕ್ಕಿಲ್ಲ, ಅಲ್ಲವೆ?

 

ಪ್ರೀತಿಯಿಂದ

ಸಂಪಾದಕರು

Leave a Reply

*

code