ಅಂಕಣಗಳು

Subscribe


 

ವರ್ಣ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್


– ವೈಷ್ಣವಿ . ಎನ್

ಯಾವುದೇ ನೃತ್ಯ ಪ್ರಕಾರದ ವಿವಿಧ ನೃತ್ಯ ಬಂಧಗಳ ಸಮಗ್ರ ನೋಟ, ವಿಮರ್ಶೆಯನ್ನು ಒದಗಿಸುವುದು ನರ್ತನ ಸುರಭಿಯ ಉದ್ದೇಶ. ಆ ಮೂಲಕ ನಾವು ರಂಗದ ಮೇಲೆ ಕಾಣುವ ನೃತ್ಯ ಸೌಂದರ್ಯದ ವಿವಿಧ ಮಜಲುಗಳ ಪುಟ್ಟ ಅಧ್ಯಯನದ ರೂಪ ನಿಮ್ಮೆದುರಿಗೆ..ಇದು ಸಂವಾದಗಳಿಗೆ ವೇದಿಕೆಯೂ ಆಗಬೇಕು. ಈಗಾಗಲೇ ಭರತನಾಟ್ಯ ಸಂಪ್ರದಾಯದ ಅಲರಿಪು, ಜತಿಸ್ವರ, ಶಬ್ದದ ಸಾದ್ಯಂತ ಚರ್ಚೆಗಳು ನಿಮ್ಮೆದುರಿಗೆ ಅನಾವರಣಗೊಂಡಿವೆ. ಇದೀಗ ಸುದೀರ್ಘವಾಗಿ ವರ್ಣದ ವರ್ಣಮಯ ಚಿತ್ತಾರ…

ಭರತನಾಟ್ಯದ ನಾಲ್ಕನೆಯ ಅಂಗವೇ ವರ್ಣ. ಕರ್ಣಾಟಕ ಸಂಗೀತ ಸಂಪ್ರದಾಯದಲ್ಲಿ ಮತ್ತು ನೃತ್ಯ ಕ್ಷೇತ್ರದಲ್ಲಿ ಪ್ರಬುದ್ಧತೆಯ, ವಿದ್ವತ್ತಿನ ಸೂಚಕವಾದ, ಕಠಿಣವೂ, ಪರಿಣಾಮಕಾರಿಯೂ ಆದ ವರ್ಣ ಅತೀ ಶ್ರೇಷ್ಠ ವರ್ಗ ಎಂಬ ಖ್ಯಾತಿಯದ್ದು. ವರ್ಣವೆಂಬುದು ಭಾವ ರಾಗ ತಾಳಗಳ ಅತ್ಯುತ್ತಮ ಪಾಕ. ಸಾಹಿತ್ಯಕ್ಕೆ ಅಭಿನಯಿಸುತ್ತಾ, ಹಸ್ತಮುದ್ರೆಗಳನ್ನು ಪ್ರದರ್ಶಿಸುತ್ತಾ, ಭಾವಗಳನ್ನು ಕಣ್ಣುಗಳಿಂದಲೂ, ಗತಿ-ನಡೆಗಳನ್ನು ಪಾದಗಳಿಂದ ಏಕಕಾಲಕ್ಕೆ ತೋರಿಸುವ ವಿಶಿಷ್ಟ ಕ್ರಿಯೆ ವರ್ಣವೊಂದರಲ್ಲೇ ಕಂಡುಬರುತ್ತದೆ.

ವರ್ಣವು ಕರ್ಣಾಟಕ ಸಂಗೀತ ಮತ್ತು ಭರತ ನೃತ್ಯದಲ್ಲಿ ಕಲ್ಪನಾ ವಿಲಾಸದ ಅತ್ಯಂತ ಸ್ವಾರಸ್ಯ, ಸಂಕೀರ್ಣ ಸಂಯೋಜನೆ. ಸಂಗೀತಗಾರ ತನ್ನ ಹಾಡುಗಾರಿಕೆಗೆ ತಕ್ಕ ಮನೋಧರ್ಮವನ್ನು ತಂದು ರಾಗಭಾವ ಲಹರಿಗಳಲ್ಲಿ ಸಂಗೀತದ ಭವ್ಯ ಸೌಧವನ್ನು ಕಟ್ಟಿದರೆ, ಕಲಾವಿದೆಯು ಅದಕ್ಕನುಗುಣವಾಗಿ ಸಂಚಾರೀ ಭಾವಗಳ ಮೂಲಕ ವಿಜೃಂಭಿಸುತ್ತಾಳೆ. ಈ ಮೂಲಕ ರಂಗವು ಸಂಪೂರ್ಣತೆಯ ವಿರಾಟ್ ಸ್ವರೂಪದಿಂದ ಶೋಭಿಸುತ್ತದೆ. ಹಾಗಾಗಿ ವಿದ್ವಾಂಸರು ನೃತ್ಯ ಪ್ರದರ್ಶನದಲ್ಲಿ ಹಿರಿಯ ಮಟ್ಟದ ವರ್ಣವನ್ನು ಕಾಣಲು ತವಕಪಡುತ್ತಾರೆ.

ಇದುವರೆಗೆ ನೃತ್ಯ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಅಲರಿಪು, ಜತಿಸ್ವರ, ಶಬ್ದ- ಇವುಗಳಲ್ಲಿ ಯಾವ-ಯಾವ ಅಂಶಗಳನ್ನು ಒಂದಾದ ಮೇಲೊಂದರಂತೆ ಸೇರಿಸಿ ಶಾಸ್ತ್ರ ಸಂಪತ್ತನ್ನು ಹೆಚ್ಚಿಸುತ್ತಾ ಬಂದಿದ್ದಾರೋ ಅವುಗಳನ್ನು ಇದರಲ್ಲಿ ಉಳಿಸಿ, ಹೊಸ ಅಭಿಪ್ರಾಯವನ್ನು ಸೇರಿಸುವುದು ಒಂದು ಕೌಶಲ್ಯ. ಈ ದೃಷ್ಟಿಯಿಂದ ವರ್ಣವು ಯೋಗಶಾಸ್ತ್ರದ ‘ಪ್ರತ್ಯಾಹಾರ‌ಎಂಬ ೫ನೆಯ ಅಂಗವನ್ನು ಆಧಾರವಾಗಿಟ್ಟುಕೊಂಡಿದೆಯೆಂಬುದು ವಿಮರ್ಶಕರ ಅಭಿಪ್ರಾಯ.

ವರ್ಣಗಳಲ್ಲಿ ತಾನವರ್ಣ, ಪದವರ್ಣ, ಚೌಕವರ್ಣ, ಸ್ವರಜತಿ ವರ್ಣ, ಅವುಧಾನ ವರ್ಣ ಎಂಬ ಬಗೆಗಳಿವೆ.

ಸಂಗೀತದಲ್ಲಿ ಕಾಣಲಾಗುವುದೇ ತಾನವರ್ಣ. ತಾನವರ್ಣಗಳು ವಿಳಂಬ ಕಾಲದಲ್ಲಿದ್ದು ಅಕ್ಷರ ಕಾಲವು ನೀಳವಾಗಿರುತ್ತದೆ. ತಾನವರ್ಣಗಳಲ್ಲಿ ಪಲ್ಲವಿ, ಅನುಪಲ್ಲವಿ ಮತ್ತು ಎತ್ತುಗಡೆ ಸ್ವರಗಳಲ್ಲಿ ಮಾತ್ರ ಸಾಹಿತ್ಯ ಪ್ರವೇಶವಾಗಿ ಉಳಿದ ಭಾಗಗಳಲ್ಲಿ ಸ್ವರಗಳೇ ಪ್ರಧಾನವಾಗಿರುತ್ತದೆ. ಪಲ್ಲವಿ, ಅನುಪಲ್ಲವಿಯಲ್ಲಿಯೂ ಸಾಹಿತ್ಯಭಾಗವು ಕೀರ್ತನೆಗಳಂತೆ ಒಟ್ಟಿಗಿರದೆ ಸಾಹಿತ್ಯಾಕ್ಷರವು ಬಿಡಿಬಿಡಿಯಾಗಿ ದೂರ ದೂರವಾಗಿರುತ್ತದೆ. ಭಕ್ತಿಪೂರ್ವಕ ಶೃಂಗಾರವಿದ್ದು, ವಿದ್ಯಾರ್ಥಿಗಳು ಅಕಾರ, ಇಕಾರ, ಓಕಾರದ ಮೂಲಕ ಸ್ವರ ಸ್ಥಾನವನ್ನು ನಿಗದಿ ಮಾಡಿ, ಸ್ವರ ಜ್ಞಾನವನ್ನು ಸಂಪಾದಿಸಿಕೊಳ್ಳಲು ಅರ್ಹತೆ ಪಡೆಯಬೇಕೆಂಬ ಪೂರ್ವಾಲೋಚನೆಯಿಂದ ಸಿದ್ಧಪಡಿಸಿದ್ದು ತಾನವರ್ಣ. ಇದರಿಂದ ವಿದ್ಯಾರ್ಥಿಗಳಿಗೆ ಮನೋಧರ್ಮದಂತೆ ಕಲ್ಪನಾಸ್ವರಗಳನ್ನು ಹಾಡುವ ಸಾಮರ್ಥ್ಯವು ಹಂತಹಂತವಾಗಿ ದೊರಕುತ್ತದೆ. ಇಂದಿಗೂ ಸಂಗೀತ ಕಚೇರಿಯ ಪ್ರಾರಂಭ ತಾನವರ್ಣದಿಂದಲೇ ಮೊದಲ್ಗೊಳ್ಳುವುದು ಪದ್ಧತಿ.

ಪದವರ್ಣಗಳಲ್ಲಿ ಸಾಹಿತ್ಯವು ಸ್ವರಗಳಷ್ಟೇ ಮುಖ್ಯ. ಚಿಟ್ಟೆಸ್ವರಗಳಿಗೂ ಸಾಹಿತ್ಯವಿರುತ್ತದೆ. ತಾನವರ್ಣಗಳು ನೃತ್ಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ಅಷ್ಟಾಗಿ ಒದಗಿಸುವುದಿಲ್ಲವಾದ್ದರಿಂದ, ಭಾವಾಭಿನಯಕ್ಕೆ ಸರಿಹೊಂದುವ ಸಾಹಿತ್ಯವನ್ನು ರಚಿಸಿ ಪದವರ್ಣಗಳ ರೂಢಿಯನ್ನು ತಂದಿದ್ದಾರೆ. ಆದರೂ ವರ್ಣ ಎಂಬ ನೃತ್ಯಭಾಗಕ್ಕೆ ಸಂಗೀತ ಸಂಪ್ರದಾಯದ ತಾನವರ್ಣವೇ ಆಧಾರವೆಂಬುದು ಸ್ಪಷ್ಟ. ಇಂದಿಗೂ ಸರಸಿಜನಾಭ, ಚಲಮೇಲ ವರ್ಣಗಳು ಸಾಮಾನ್ಯವಾಗಿ ನೃತ್ಯದಲ್ಲಿ ಬಳಸಲ್ಪಡುವ ತಾನವರ್ಣಗಳು. ತಾನವರ್ಣ ಮಾಡಲು ಹೆಚ್ಚಿನ ಶಕ್ತಿಯೂ, ತಾಳ್ಮೆಯೂ ಬೇಕು. ವಿಳಂಬಗತಿಯ ಅನುಸರಣೆ(ಮಾರ್ಗಕಾಲವೆನ್ನುತ್ತಾರೆ), ಶೃಂಗಾರ ಪದಗಳ ಗತಿ, ಲಕ್ಷಣವಿರುವುದರಿಂದ ನೃತ್ಯಕ್ಕೆ ಅನುಗುಣವಾಗಿ ಪದವರ್ಣವೆನ್ನುವುದನ್ನು ರಚಿಸಲಾಗಿದೆ.

ಸಂಗೀತದಲ್ಲಿ ಸ್ವರಜತಿ ಎನ್ನುವ ರಚನೆಗಳಿದ್ದು ಇದರಲ್ಲಿ ಪಲ್ಲವಿಯ ನಂತರ ಸ್ವರಜೋಡಣೆಗೆ ಅನುಗುಣವಾಗಿ ಸಾಹಿತ್ಯವಿರುತ್ತದೆ. ಆದರೆ ನೃತ್ಯಕ್ಕೆ ಬಳಸುವ ಸ್ವರಜತಿಗಳು ಸಂಪೂರ್ಣವಾಗಿ ಪದವರ್ಣದ ರೂಪದಲ್ಲಿರುತ್ತದೆ. ಸ್ವರಜತಿ ವರ್ಣಗಳು ಪದವರ್ಣದ ಲಕ್ಷಣಗಳನ್ನೇ ಹೊಂದಿದ್ದು, ಚಿಟ್ಟೆಸ್ವರದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಉದಾ: ಸಾಮಿನಿ ರಮ್ಮಾನವೇ, ಏ ಮಂದಯಾನರಾ, ನೇಟಿಕಿ ದಯ, ಸ್ವಾಮಿ ಮೇಲ್, ಸರಸಿಜಾಕ್ಷಿರೋ. ಇಂತಹ ವರ್ಣಗಳು ಸಾಮಾನ್ಯವಾಗಿ ಶೃಂಗಾರ, ಭಕ್ತಿಭಾವಗಳನ್ನು ವರ್ಣಿಸುತ್ತವೆ.

ವರ್ಣ ಎಂಬ ಶಬ್ದ ಹುಟ್ಟಿದ ರೀತಿಯನ್ನು ತಿಳಿದುಕೊಳ್ಳುವುದಾದಲ್ಲಿ ಸಂಸ್ಕೃತದಲ್ಲಿ ದೀರ್ಘವಾದ ವ್ಯಾಖ್ಯಾನವಿದೆ. ಅದರ ಪ್ರಕಾರ

ವರ್ಣಃ ಎಂದರೆ- ಚಿನ್ನ, ಕಥೆ, ಆನೆಯ ಮೇಲೆ ಹಾಕುವ ಚಿತ್ರಕಂಬಳಿ, ಸ್ತೋತ್ರ, ಸಮುದಾಯ, ಕಾಂತಿ, ಕೀರ್ತಿ.

ವರ್ಣಂ ಎಂದರೆ- ಕ್ಷತ್ರಿಯ ಮೊದಲಾದ ಜಾತಿ, ಗಾನ, ಬ್ರಹ್ಮ, ಬಿಳುಪು, ಕೆಂಪು, ಕಪ್ಪು ಮುಂತಾದ ಬಣ್ಣ, ಅಕ್ಷರ, ಶ್ಲಾಘನೆ.

ಹಾಗಾಗಿ ಕೀರ್ತಿ, ಅಕ್ಷರ, ಗಾನ, ಸ್ತೋತ್ರ ಎಂಬುದನ್ನು ಗಮನದಲ್ಲಿರಿಸಿದರೆ ಈ ಪ್ರಕಾರದ ನೃತ್ಯಕ್ಕೆ ವರ್ಣ ಎಂಬ ಹೆಸರು ಅನ್ವರ್ಥ ಎಂಬುದು ವಿಮರ್ಶಕರ ಅನಿಸಿಕೆ.

ಸಾದಿರ್ ಪದ್ಧತಿ (ಇಂದಿನ ಭರತನಾಟ್ಯ) ಯಲ್ಲಿ ವರ್ಣಕ್ಕೆ ಉತ್ತಮ ಚಾರಿತ್ರಿಕ ಹಿನ್ನಲೆಯಿದೆ. ಸಾದಿರ್ ಮೂಲರೂಪವು (ಅಲರಿಪುವಿನಿಂದ ತಿಲ್ಲಾನದವರೆಗೆ) ಮುಂಚೆಯೇ ಇತ್ತಾದರೂ, ಅದಕ್ಕೆ ಅಲಂಕಾರ ಕೊಟ್ಟು ಆದರಣೀಯವಾಗಿಸಿದ್ದು ತಂಜಾವೂರು ಸಹೋದರರು.

ವರ್ಣದ ಹುಟ್ಟಿನ ಬಗೆಗೆ ಹೇಳುವುದಾದಲ್ಲಿ ವಿದ್ವಾಂಸರು ಇನ್ನೊಂದು ತರ್ಕವನ್ನು ಮುಂದಿಡುತ್ತಾರೆ. ವೆಂಕಟಮುಖಿ ೭೨ನೇ ಮೇಳಕರ್ತ ರಾಗವು ಸಂಪ್ರದಾಯಕ್ಕೆ ಬಂದ ಮೇಲೆ, ವಿದ್ವಾಂಸರು ಹೊಸ-ಹೊಸ ರಾಗಗಳನ್ನು ಬಳಕೆಗೆ ತಂದರು. ರಾಗಗಳ ಸಂಪೂರ್ಣ ಸ್ವರೂಪಕ್ಕೆ ವೀಣೆಯು ಮುಖ್ಯ. ವೀಣೆಗೆ ಹೊಂದಿಕೊಂಡು ವರ್ಣವನ್ನು ರಚಿಸಲಾಯಿತು. ಭರತನು ನಾಟ್ಯಶಾಸ್ತ್ರದಲ್ಲಿ ತಂತಿವಾದ್ಯದ ಕುರಿತಾಗಿ ಹೇಳುವಾಗ ವರ್ಣ ಮತ್ತು ಅಲಂಕಾರಗಳೆಂಬ ಹೆಸರನ್ನು ಬಳಸಿದ್ದಾನೆ. ಅಂದಿನಿಂದ ವರ್ಣವು ವೀಣೆ ಹೇಳಿದ ಕೃತಿಯಾಗಿ ಪ್ರಚಲಿತವಾಯಿತು. ಈ ಸಂದರ್ಭ ಸುಮಾರು ೧೮ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂತೆನ್ನಲಾಗಿದೆ.

ವರ್ಣ ಪ್ರೇಕ್ಷಕರ ಮತ್ತು ವಿಮರ್ಶಕರ ದೃಷ್ಟಿಯಲ್ಲಿ ದೊಡ್ಡದೆನಿಸುವಷ್ಟರಲ್ಲೇ ಇದರ ಅಂತಃಸ್ಸತ್ವ ಹುದುಗಿಲ್ಲ. ಬದಲಾಗಿ, ವಿನ್ಯಾಸಗಳನ್ನು ಪ್ರದರ್ಶಿಸಬೇಕಾದ ಶರೀರ, ಭಾವಾಭಿನಯವನ್ನು ಪ್ರದರ್ಶಿಸಬೇಕಾದ ಮನಸ್ಸನ್ನು ಸಮಪ್ರಮಾಣದಲ್ಲಿ ಕಾರ್ಯೋನ್ಮುಖವಾಗುವಂತೆ ನಿಯೋಜಿಸುವುದು ವರ್ಣದ ವೈಶಿಷ್ಟ್ಯ.

ವಿ. ಎಸ್. ಕೌಶಿಕ್ ಅವರು ವರ್ಣದ ವೈಶಿಷ್ಟ್ಯಗಳನ್ನು ೪ ಭಾಗವಾಗಿ ವಿಂಗಡಿಸುತ್ತಾರೆ.

೧. ಜತಿಗಳಲ್ಲಿ ಉಪನಿಷತ್ ವಾಕ್ಯದ ಶಬ್ದೋಚ್ಚಾರಣೆ ಮತ್ತು ಉಪಾಸನಾ ರೀತಿ

೨. ಆಸಕ್ತಿಯ ಪರಿಚಯ

೩. ಕೈಶಿಕಿ ಎಂಬ ನಾಟ್ಯದ ವೃತ್ತಿಯ ಪ್ರಾರಂಭ

೪. ನಾಟ್ಯ ಕ್ರಮ

ಸಂಪ್ರದಾಯದಲ್ಲಿ ಜತಿಗಳ ಉಚ್ಚಾರಣೆಗೆ ಬಳಸುವ ಶಬ್ದಗಳು- ತಜ್ಜಂ ಮತ್ತು ತದನಂ. ಒಂದು ವರ್ಣ ಮುಗಿಯುವ ವೇಳೆಗೆ ತ್ರಿಕಾಲಗಳಲ್ಲಿ ಜತಿಗಳಲ್ಲಿ ತಜ್ಜಂ-ತಜ್ಜಂ ಎಂಬ ಶಬ್ದವು ಕನಿಷ್ಟಪಕ್ಷ ೧೪ ಬಾರಿಯಾದರೂ ಬಳಸಲ್ಪಡುತ್ತದೆ. ಈ ಶಬ್ದಗಳು ಉಪನಿಷತ್ತಿನಿಂದ ಹುಟ್ಟಿದವು.

ಸರ್ವಂ ಖಲ್ವಿದಂ ಬ್ರಹ್ಮ

ತಜ್ಜಲಾನತಿ ಶಾಂತ ಉಪಾಸೀತ

-ಛಾಂದೋಗ್ಯ, ೩.೧೪,೧

ಈ ಮಂತ್ರಕ್ಕೆ ಭಾಷ್ಯಕಾರರು ಹೀಗೆನ್ನುತ್ತಾರೆ

ಬ್ರಹ್ಮಣೋ ಜಾತಂ ತೇಜೋ ಬನ್ನಾದಿಕ್ರಮೇಣ ಸರ್ವಂ |

ಅತಃ ತಜ್ಜಂ ||

ತಥಾ ತೇನೈವ ಜನನಕ್ರಮೇಣ ಪ್ರತಿಲೋಮತಯಾ ತಸ್ಮಿನ್ನೇವಬ್ರಹ್ಮಣೀ ಲಿಯತೇ ತದಾತ್ಮತಯಾ ಶಿಷ್ಯತ ಇತಿ ತಲ್ಲಮ್||

ತಥಾ ತಸ್ಮಿನ್ನೇವ ಸ್ಥಿತಿಕಾಲೇ ಅತಿ ಪ್ರಾಣಿಚೇಷ್ಟತ ಇತಿ ತದನಂ ||

ಅಂದರೆ ಬ್ರಹ್ಮನಿಂದಲೇ ತೇಜಸ್ಸು, ನೀರು, ಅನ್ನ-ಮೊದಲಾದುವು ಹುಟ್ಟಿದೆ. ಆದುದರಿಂದ ಅದು ತಜ್ಜಂ;

ಹೀಗೆಯೇ ಪ್ರತಿಲೋಮ (ಹಿಂದುಮುಂದಾದ) ಕ್ರಮದಿಂದ ಬ್ರಹ್ಮದಲ್ಲಿಯೇ ಲಯವಾಗಿ ಅದರ ರೂಪದಲ್ಲಿ ಉಳಿದುಕೊಳ್ಳುವುದರಿಂದ ಅದು ತಲ್ಲಂ.

ಇದೇ ರೀತಿ ಸ್ಥಿತಿಕಾಲದಲ್ಲಿ ಎಲ್ಲವೂ ಬ್ರಹ್ಮದಲ್ಲಿಯೇ ಪ್ರಾಣಕ್ರಿಯೆಯನ್ನು ಮಾಡಿಕೊಂಡಿರುತ್ತದೆಯಾದ್ದರಿಂದ ಅದು ತದನಂ.

ತತ್, ತದ್ಧನ, ತಜ್ಜಂ, ದೃಕ್, ಡಿಂಡಿಂ ಮುಂತಾದ ಶಬ್ದೋಚ್ಚಾರಣೆಯನ್ನು ಜತಿ, ಶೊಲ್ಕಟ್ಟು, ಅಥವಾ ಪಾಠಾಕ್ಷರಗಳಲ್ಲಿ ಕರೆಯುವುದು ರೂಢಿ.

ಇಂತವಕ್ಕೆ ಉಪನಿಷತ್ತು, ವೇದಾಭ್ಯಾಸದಲ್ಲಿನ ಘನಗಳ ಸ್ಫೂರ್ತಿಯಷ್ಟೇ ಅಲ್ಲದೆ ಕೆಲವು ಮಂತ್ರಗಳ ಬೀಜಾಕ್ಷರಗಳ ಪ್ರೇರಣೆಯೂ ಇದೆ. ಉದಾ..

ಜತಿ:

ತಡಿಕು ಡೀಂಗು ತಕ ಡಿಂಗು ತಕ್ಕ ತಕ

ಡೀಂ ಡೀಂ ಗುಗುತ, ಡೀಂ ಗುಗುತ, ಗುಗುತ…

ಧ್ಯಾನ ಮಂತ್ರ:

ಭೋಖಂಡಂ ವಾರಣಾಂಡಂ ಪರಘರವಿರಟಂ ಡಂಪಡಂಪೋರುಡಂಪಂ

ಡಿಂಡಿಂಡಿಂಡಿಂ ಡಿಡಿಂಬಂ ದಹಮಪಿದಹಮೈರ್ಝಂಪಝಂಪೈಶ್ಚಝಂಪೈಃ

ತುಲ್ಯಾಸ್ತುಲ್ಯಾಸ್ತುತುಲ್ಯಾ ಧುಮಧುಮಧುಮಕೈಃ ಕುಂಕುಮಾಂಕೈಃ ಕುಮಾಂಕೈಃ

ರೇತತ್ತೇ ಪೂರ್ಣಯುಕ್ತಂ ಅಹರಹಕರಹಃಪಾತುಮಾಂ ನಾರಸಿಂಹಂ ||

ಪ್ರಾಚೀನರು ನೃತ್ಯಶಿಕ್ಷಣದಲ್ಲಿ ಕಂಡುಕೊಂಡಿರುವ ೨ ವಿಧವಾದ ತಂತ್ರೋಪಾಯಗಳನ್ನು ಗಮನಿಸಿದರೆ ವರ್ಣದಲ್ಲಿ ನಡುನಡುವೆ ಪಾಠಾಕ್ಷರಗಳನ್ನು ಸೇರಿಸಿರುವ ಅವಶ್ಯಕತೆಯನ್ನು ಕಂಡುಕೊಳ್ಳಬಹುದು:

೧. ನೃತ್ಯವು ಇಂದ್ರಿಯಗೋಚರವಾದರೂ ಶಾಸ್ತ್ರದ ಮುಖ್ಯ ವಿಷಯ ಇಂದ್ರಿಯಾತೀತ. ಹಾಗಾಗಿ ಇಂತಹ ಉಪನಿಷತ್ತಿನ ಶಬ್ದಗಳು ಪದೇಪದೇ ಕಿವಿಗೆ ಬೀಳುತ್ತಿದ್ದರೆ ಅದು ಮುಂದೆ ಮನನ, ಅಭ್ಯಾಸಕ್ಕೆ ಸಹಕಾರಿ.

೨. ನೃತ್ಯದಲ್ಲಿ ಒಂದು ಶಕ್ತಿಯು ಪ್ರೇಕ್ಷಕರ ಮನಸ್ಸನ್ನು ಉದ್ವೇಗಾವಸ್ಥೆಗೆ ಕೊಂಡೊಯ್ದರೆ, ಮತ್ತೊಂದು ಶಕ್ತಿ ಮನಸ್ಸನ್ನು ಸಮಾಧಾನದಲ್ಲಿರಿಸಿ ಏಕಾಗ್ರತೆಯತ್ತ ಕೊಂಡೊಯ್ಯುತ್ತದೆ. ವರ್ಣದ ಜತಿಗಳ ರಭಸದ ಉಚ್ಚಾರಣೆ ಮತ್ತು ಅಭಿನಯದ ಮಾರ್ದವತೆಯು ಈ ಎರಡೂ ಸುಖಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಮಾಡುತ್ತದೆ.

ವರ್ಣದಲ್ಲಿ ನಾವು ಪ್ರಮುಖವಾಗಿ ೨ ಆಸಕ್ತಿಗಳನ್ನು ಕಾಣುತ್ತೇವೆ.

೧. ಸಖ್ಯಾಸಕ್ತಿ- ಸ್ನೇಹಭಾವ, ಅವರ್ಣನೀಯ ಪ್ರೇಮ, ಏಕವಚನ ಪ್ರಯೋಗ

೨. ಕಾಂತಾಸಕ್ತಿ- ಶೃಂಗಾರರಸ, ರತಿಸುಖದ ಆನಂದ, ನಾಯಕಿಯು ತಾನು ಆರಾಧಿಸುವ ದೇವನನ್ನೇ ಪತಿಯೆಂದು ಭಾವಿಸಿ ಅಂತರಂಗದ ಉಪಾಸನೆ ಮಾಡುವಿಕೆ.

ಉಳಿದಂತೆ ಕೆಲವು ವರ್ಣಗಳಲ್ಲಿ ವಿರಹಾಸಕ್ತಿ, ರೂಪಾಸಕ್ತಿ, ಪರಮ ವಿರಹಾಸಕ್ತಿ, ಆತ್ಮವೇದನಾಸಕ್ತಿ, ಪೂಜಾಸಕ್ತಿ, ತನ್ಮಯಾಸಕ್ತಿ, ವಾತ್ಸಲ್ಯಾಸಕ್ತಿ, ದಾಸ್ಯಾಸಕ್ತಿ, ಗುಣಮಾಹಾತ್ಮ್ಯಾಸಕ್ತಿಗಳು ಕಂಡುಬರುವುದಾದರೂ ಅವು ಗೌಣ.

ನೃತ್ಯದಲ್ಲಿ ಕಂಡುಬರುವ ೩ ಮುಖ್ಯ ವೃತ್ತಿಗಳ ಪೈಕಿ ಕೈಶಿಕೀ ವೃತ್ತಿ ಎಂಬುದು ವರ್ಣದ ಮೂಲಕ ಪ್ರಾರಂಭಗೊಳ್ಳುತ್ತದೆ ಎನ್ನಲಾಗಿದೆ. ಕೈಶಿಕೀ ವೃತ್ತಿಯಲ್ಲಿ ಪ್ರೇಮವೆಂಬ ಲಲಿತ ಭಾವ ಆಂಗಿಕಾಭಿನಯದಲ್ಲಿ ಪ್ರಕಟಗೊಳ್ಳುತ್ತದೆ. ಲಾಸ್ಯ, ಸೌಂದರ್ಯ, ಮನಸೂರೆಗೊಳ್ಳುವ ಸಂಗೀತ ನೃತ್ಯ, ಉಡುಪು ಇದರ ಮುಖ್ಯವಸ್ತು. ಈ ವೃತ್ತಿ ಕಲಿಯಲು ಜನ್ಮ ಸಂಸ್ಕಾರ, ನೈಪುಣ್ಯ, ಆಸ್ತಿಕ ಬುದ್ಧಿ, ಶ್ರದ್ಧೆ ಅತ್ಯವಶ್ಯಕ.

ವರ್ಣಗಳಲ್ಲಿ ಪೂರ್ವಾಂಗ ಮತ್ತು ಉತ್ತರಾಂಗ ಎಂಬ ೨ ವಿಭಾಗಗಳಿವೆ. ಪಲ್ಲವಿ, ಅನುಪಲ್ಲವಿ, ಮತ್ತು ಚಿಟ್ಟೆಸ್ವರಗಳು ಪೂರ್ವಾಂಗ ಭಾಗಗಳು. ಚರಣ ಮತ್ತು ಮುಕ್ತಾಯ ಸ್ವರಗಳು ಉತ್ತರಾಂಗ ಭಾಗಗಳು.

ವರ್ಣದ ನೃತ್ಯ ಸಂಯೋಜನೆ ಹೀಗಿರುತ್ತದೆ:

ಪೂರ್ವಾರ್ಧ

೧. ವರ್ಣದ ಪಲ್ಲವಿಯ ಮೊದಲನೆಯ ಭಾಗವನ್ನು ಹಾಡಿ ಅದು ಯಾವ ತಾಳದಲ್ಲಿದೆಯೋ ಆ ತಾಳದಲ್ಲಿ ಜತಿಯನ್ನು ಹೇಳುವುದು. ಜತಿ ಎಂಬುದು ಅಡವುಗಳ ಸರಮಾಲೆ. ಅಡವು ನಿರ್ದಿಷ್ಟ ರೀತಿಯ ಭಂಗಿ, ಹಸ್ತ-ಪಾದ-ಮುಖ (ಒಟ್ಟಾರೆಯಾಗಿ ಆಂಗಿಕ ವಿನ್ಯಾಸ) ದ ನೃತ್ತ ಚಲನೆ. ಮೊದಲ ಜತಿಯು ತ್ರಿಕಾಲಗಳಿಂದ ಕೂಡಿದ್ದು ಆಂಗಿಕ ವಿನ್ಯಾಸವನ್ನೂ, ನಂತರ ಸಾಹಿತ್ಯ ಭಾಗವನ್ನು ವಿವರವಾಗಿ ಅಭಿನಯಿಸುವುದು.

೨. ಪಲ್ಲವಿಯ ೨ನೆಯ ಭಾಗವನ್ನು ಹಾಡಿ ಪುನಃ ಒಂದು ಜತಿಗೆ ಅಡವು, ಆಂಗಿಕ

ವಿನ್ಯಾಸ ನಡೆಸಿ, ನಂತರ ಸಾಹಿತ್ಯ ಭಾಗವನ್ನು ಅಭಿನಯಿಸುವುದು. ಅದರಂತೆ

ಅನುಪಲ್ಲವಿಯನ್ನು ಪ್ರಾರಂಭಿಸಿ ಪುನಃ ಒಂದು ಜತಿ; ಅಡವು, ಅಂಗಿಕ ವಿನ್ಯಾಸ;

ಸಾಹಿತ್ಯಕ್ಕೆ ಅಭಿನಯ. ಪಲ್ಲವಿಗೂ ಅನುಪಲ್ಲವಿಗೂ ಮಧ್ಯೆ ಜತಿಗಳು, ಸಾಹಿತ್ಯ

ಸಾಮಾನ್ಯವಾಗಿ ಇರುತ್ತವೆ.

೫. ಚಿಟ್ಟೆಸ್ವರದ ಭಾಗಕ್ಕೆ ಅಡವು ಮತ್ತು ಅಂಗವಿನ್ಯಾಸ; ಸಾಹಿತ್ಯಕ್ಕೆ ಅಭಿನಯ

ಉತ್ತರಾರ್ಧ:

೧. ಚರಣದಲ್ಲಿನ ಸಾಹಿತ್ಯಕ್ಕೆ ಅಭಿನಯ

೨. ಮುಕ್ತಾಯ ಸ್ವರಗಳಿಗೆ ತಕ್ಕ ಅಂಗವಿನ್ಯಾಸ

೩. ಸ್ವರಗಳಿಗೆ ತಕ್ಕಂತೆ ರಚಿಸಿರುವ ಸಾಹಿತ್ಯಕ್ಕೆ ಅಭಿನಯ

ಆದರೆ ಪ್ರಾಚೀನ ಪದ್ಧತಿಯ ವರ್ಣಗಳು ಈಗಿನ ಸಂಯೋಜನೆಗಿಂತಲೂ ವಿಭಿನ್ನವಾಗಿತ್ತು ಎನ್ನಲಾಗಿದೆ. ಆ ಅಭಿಪ್ರಾಯಗಳು ಈಗಿನವರಿಗೆ ದೊರಕಿಲ್ಲ. ಕಲಾವಿದೆಯ ಶಿಸ್ತು, ಸಂಯಮ, ಪ್ರಬುದ್ಧತೆಯ ಪರೀಕ್ಷೆ ಮಾಡುವ ವರ್ಣವನ್ನು ಸುಂದರವಾಗಿ ನರ್ತಿಸಿದಲ್ಲಿ ಮಾತ್ರ ಕಣ್ಣಿಗೆ ಹಬ್ಬ. ಇಲ್ಲವಾದರೆ ಹಲವು ಪ್ರೇಕ್ಷಕರನ್ನುವ ಹಾಗೆ ‘ಬೋರ್.

ವರ್ಣಗಳನ್ನು ರಚಿಸಿದವರಲ್ಲಿ ಪ್ರಮುಖರಾದವರು; ಉತ್ತರ ಅರ್ಕಾಟು ಜಿಲ್ಲೆಯ ಕಾರ್ವೇಟಿ ನಗರದಲ್ಲಿದ್ದ ಸಾರಂಗಪಾಣಿ, ಗೋವಿಂದಸಾಮಯ್ಯ, ಕೂನಸಾಮಯ್ಯ. ಗೋವಿಂದಸಾಮಯ್ಯನ ನವರಾಗಮಾಲಿಕೆ, ಮೋಹನ, ಭೈರವಿ, ಕೇದಾರಗೌಳ ವರ್ಣಗಳು ೩ ಗಂಟೆಯ ಅವಧಿಯುಳ್ಳವಾಗಿದ್ದವು. ಮೇಲತ್ತೂರಿನ ಚೌಕ ವೀರಭದ್ರಯ್ಯ ಬರೆದ ಸ್ವರಜತಿ ವರ್ಣ ಮತ್ತು ಹುಸೇನಿ ರಾಗದ ವರ್ಣಗಳು ಅನೇಕ ವಿದ್ವಾಂಸರಿಗೆ ಪ್ರೇರಣೆ ಕೊಟ್ಟಿತು. ೧೮ನೆಯ ಶತಮಾನದ ಪಚ್ಚಿಮಿರಿಯಮ್ ಆದಿಯಪ್ಪ ತಮ್ಮ ವಿರಿಬೋಣಿ, ಏಮಂದಯಾನರ ವರ್ಣಗಳಿಂದ ಖ್ಯಾತರಾದರೆ, ಅವರ ಶಿಷ್ಯ ರಾಮಸ್ವಾಮಿ ದೀಕ್ಷಿತ ೧೦೮ ರಾಗಗಳ ರಾಗಮಾಲಿಕೆ ಮತ್ತು ಐದಾರು ಚೌಕವರ್ಣಗಳನ್ನು ರಚಿಸಿದ್ದರು. ಉಳಿದಂತೆ ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೈ, ದಂಡಾಯುಧಪಾಣಿ ಪಿಳ್ಳೈ, ಮೈಸೂರು ಸದಾಶಿವರಾವ್ ಖ್ಯಾತವೆಸುವ ವರ್ಣಗಳ ಕರ್ತೃಗಳು. ಇತ್ತೀಚೆಗೆ ಡಾ| ಬಾಲಮುರಳಿಕೃಷ್ಣ, ಲಾಲ್‌ಗುಡಿ ಜಯರಾಂ, ಮಧುರೈ ಕೃಷ್ಣ ಅವರನ್ನೂ ಸೇರಿಸಿದಂತೆ ಕನ್ನಡದಲ್ಲೂ ರಚನೆಗಳು ಕಂಡುಬಂದಿವೆ.

ಸಾಧಾರಣವಾಗಿ ಸ್ವರ-ಸಾಹಿತ್ಯಕ್ಕೆ ತಟ್ಟುಮೆಟ್ಟು ಅಡವುಗಳನ್ನು ಹಾಕಿ ಅಭಿನಯ ಮಾಡುತ್ತಾರೆ. ಆದರೆ ಕೆಲವು ವಿದ್ವಾಂಸರ ಪ್ರಕಾರ ಈ ಅಭಿಪ್ರಾಯ ಸರಿಯಲ್ಲವೆಂಬ ವಾದವಿದೆ. ಆದರೆ ಅಭಿನಯದ ರೀತಿಯು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಬಲ್ಲದು. ಅಂತೆಯೇ ವರ್ಣದ ಸವೇಶಗಳೂ ವಿಭಿನ್ನವಾಗಿರುತ್ತದೆ.

ಹಿಂದಿನ ಕಾಲದಲ್ಲಿ ವರ್ಣಗಳನ್ನು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾಡುತ್ತಿದ್ದರು. ಆದರೆ ಈಗ ಅರ್ಧ ಗಂಟೆಗಿಂತ ಹೆಚ್ಚು ಕಾಲ ಮಾಡುವವರು ಕಡಿಮೆ. ವಿವಿಧ ನಾಯಕಿ-ನಾಯಕ ಭಾವಗಳನ್ನು ತಿಳಿದು, ಅವುಗಳ ಸಂಚಾರೀ ಭಾವಗಳನ್ನು ಆಳವಾಗಿ ಅಭ್ಯಸಿಸಿದವರು, ಸಂಗೀತ-ನೃತ್ಯ-ಸಾಹಿತ್ಯಗಳಲ್ಲಿ ಪರಿಶ್ರಮವುಳ್ಳವರು ವರ್ಣಗಳನ್ನು ಗಮನಾರ್ಹವಾಗಿ ಅಭಿನಯಿಸಬಲ್ಲರು.

ನೃತ್ಯಕ್ಕೆ ಆಯ್ದುಕೊಳ್ಳುವ ವರ್ಣದಲ್ಲಿ ನಾಯಿಕಾ-ನಾಯಕಾ ಭಾವವಿರಬೇಕಾದದ್ದು ಕಡ್ಡಾಯ. ಅಭಿನಯಕ್ಕೆ ಹೇರಳವಾದ ಅವಕಾಶವಿರಬೇಕು. ವರ್ಣದ ನರ್ತನಕ್ಕೆ ಭಕ್ತಿರಸ ಅಷ್ಟು ಔಚಿತ್ಯವಲ್ಲ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಜೊತೆಗೆ ಗಂಡು ಹುಡುಗರು ಇದರ ಕಲಿಕೆ, ತಿಳಿವಳಿಕೆಯಿಂದ ಹೊರತಲ್ಲವಾದರೂ, ಪ್ರದರ್ಶನದಲ್ಲಿ ಶೃಂಗಾರಪೂರ್ಣವಾದ ವರ್ಣಗಳು ಅವರಿಗೆ ಅಷ್ಟಾಗಿ ಹೊಂದಲಾರವು ಎನ್ನುತ್ತಾರೆ.

ವರ್ಣಗಳ ಅಭಿನಯದಲ್ಲಿ ಗಾಂಭೀರ್ಯ, ಪಾರಮಾರ್ಥಿಕ ದೃಷ್ಟಿಯನ್ನು ಬಿಂಬಿಸಬೇಕಾಗುತ್ತದೆ. ಇದನ್ನು ಅಭಿನಯಿಸಲು ಯೋಗ್ಯ ವಯಸ್ಸು, ಅನುಭವ ಮತ್ತು ಕಲ್ಪನಾ ಸಾಮರ್ಥ್ಯದ ಅವಶ್ಯಕತೆಯಿದೆ. ಹಾಗಾಗಿ ಚಿಕ್ಕಮಕ್ಕಳು ಇದನ್ನು ಅಭಿನಯಿಸಲು ಹೊರಟರೆ ಅಪರಿಪೂರ್ಣ ಅಥವಾ ಕೇವಲ ಗಿಣಿಪಾಠವೆನಿಸಿಕೊಳ್ಳುತ್ತದೆಯಷ್ಟೇ!

ನರ್ತಕಿಯ ಪ್ರೌಢಿಮೆ, ಅಭಿನಯದ ತಿಳಿವಳಿಕೆ, ಅತಿಶ್ರಮ ತಾಳುವ ಸ್ಥೈರ್ಯವನ್ನು, ಗುರುಗಳ ಪಾಠಮಾಡಬಲ್ಲ ಸಾಮರ್ಥ್ಯ ತಿಳಿಯಪಡಿಸುವ ವರ್ಣವನ್ನು ನರ್ತಿಸಲು ಶಿಕ್ಷಣ, ಗ್ರಹಣ ಶಕ್ತಿ, ಸ್ಮರಣಶಕ್ತಿ, ಮತ್ತು ನೈಪುಣ್ಯವಿರಬೇಕು. ಹಾಗಾದಲ್ಲಿ ಮಾತ್ರ ಪ್ರೇಕ್ಷಕರು ಆಸಕ್ತಿಯನ್ನು ಕೊನೆಯ ತನಕ ಉಳಿಸಿಕೊಂಡಾರು.

Leave a Reply

*

code